ವಾಹನ ಖರೀದಿ ಭರ್ಜರಿ

– ಲಾಕ್ ಓಪನ್ ಬಳಿಕ ಭಾರಿ ಚೇತರಿಕೆ ಕಂಡ ಆಟೊಮೊಬೈಲ್ ಉದ್ಯಮ
– ಕಾರು, ದ್ವಿಚಕ್ರ ವಾಹನ ಖರೀದಿಗೆ ಎಲ್ಲೆಡೆ ಉತ್ಸಾಹ | ನೋಂದಣಿ ಹೆಚ್ಚಳ

– ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು. 
ಲಾಕ್‌ಡೌನ್‌ ಸಡಿಲಿಕೆ ಬಳಿಕ ಆಟೊಮೊಬೈಲ್ ಮಾರುಕಟ್ಟೆ ಭಾರಿ ಚೇತರಿಕೆ ಕಂಡಿದೆ. ರಾಜ್ಯಾದ್ಯಂತ ಹೊಸ ವಾಹನಗಳ ಖರೀದಿಯ ಉತ್ಸಾಹ ಕಾಣಿಸುತ್ತಿರುವುದು ಉದ್ಯಮ ವಲಯದಲ್ಲಿ ಆಶಾವಾದ ಮೂಡಿಸಿದೆ.
ಆರ್ಥಿಕ ಸಂಕಷ್ಟ , ಸಂಬಳ ಕಡಿತ, ಉದ್ಯೋಗ ನಷ್ಟ ಮೊದಲಾದ ಕಾರಣದಿಂದ ಜನರು ವಾಹನ ಖರೀದಿಗೆ ಹಿಂದೇಟು ಹಾಕಬಹುದು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಆದರೆ, ಆದರೆ, ಮೇ 18ರಿಂದ ಹಂತ ಹಂತವಾಗಿ ಲಾಕ್ ಓಪನ್ ಆಗುತ್ತಿದ್ದಂತೆಯೇ ಇದಕ್ಕಿಂತ ಭಿನ್ನವಾದ ಚಿತ್ರಣ ಕಂಡುಬರುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಆರ್‌ಟಿಓ ಕಚೇರಿಗಳಲ್ಲಿ ಪ್ರತಿ ದಿನ ಒಂದೂವರೆ ಸಾವಿರ ವಾಹನಗಳ ನೋಂದಣಿ ನಡೆಯುತ್ತಿದೆ.
ಲಾಕ್‌ಡೌನ್‌ ಜಾರಿಗೆ ಬಂದ ಬಳಿಕ ವಾಹನಗಳ ನೋಂದಣಿ ಸ್ಥಗಿತಗೊಂಡಿತ್ತು. ಏಪ್ರಿಲ್‌ನಲ್ಲಿ 17,141 ಬಿಎಸ್ 4 ವಾಹನಗಳ ನೋಂದಣಿ ಮಾಡಿದ್ದು ಬಿಟ್ಟರೆ ಎರಡು ತಿಂಗಳು ಹೊಸ ವಾಹನಗಳ ನೋಂದಣಿ ಆಗಿರಲಿಲ್ಲ.
ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ ಜನರು ಹೊಸ ವಾಹನಗಳ ಖರೀದಿಗೆ ಮುಂದಾಗುವುಲ್ಲ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಆದರೆ ಹೊಸ ಬೈಕ್/ ಕಾರು ಖರೀದಿಸಬೇಕೆಂದು ಹಣ ಹೊಂದಿಸಿಕೊಂಡಿದ್ದವರು ಹಾಗೂ ಬ್ಯಾಂಕ್‌ನಲ್ಲಿ ಸಾಲ ಮಂಜೂರಾತಿ ಮಾಡಿಸಿಕೊಂಡಿದ್ದವರು ಈಗ ಶೋರೂಮ್‌ನಿಂದ ವಾಹನ ಖರೀದಿಸಿ ಮನೆಗೆ ತರುತ್ತಿದ್ದಾರೆ.

12 ದಿನದಲ್ಲಿ 36 ಸಾವಿರ ವಾಹನಗಳ ನೋಂದಣಿ
ಲಾಕ್‌ಡೌನ್‌ಗಿಂತ ಮೊದಲು ಪ್ರತಿ ತಿಂಗಳು ರಾಜ್ಯಾದ್ಯಂತ 2 ಲಕ್ಷ ವಾಹನಗಳು ನೋಂದಣಿಯಾಗುತ್ತಿದ್ದವು. ಇದರಲ್ಲಿ ಶೇ.70 ರಷ್ಟು ದ್ವಿಚಕ್ರ ವಾಹನ, ಶೇ. 20ರಷ್ಟು ಕಾರುಗಳು ಹಾಗೂ ಶೇ.10 ರಷ್ಟು ಇತರೆ ವಾಹನಗಳ ನೋಂದಣಿಯಾಗುತ್ತಿತ್ತು. ಮೇ 18 ಬಳಿಕ ವಾಹನಗಳ ನೋಂದಣಿ ಪುನಾರಂಭಗೊಂಡಿದ್ದು, 12 ದಿನಗಳಲ್ಲಿ ರಾಜ್ಯಾದ್ಯಂತ 36,884 ವಾಹನಗಳ ನೋಂದಣಿ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಜೂನ್‌ನಲ್ಲಿ ನೋಂದಣಿ ಹೆಚ್ಚಳ
ಜೂನ್ 1ರಿಂದ ನೋಂದಣಿ ಪ್ರಮಾಣ ಏರಿಕೆಯಾಗುತ್ತಿದೆ. ಮೇನಲ್ಲಿ ಸರಾಸರಿ ದಿನಕ್ಕೆ 1100 ವಾಹನಗಳು ನೋಂದಣಿಯಾಗಿವೆ. ಜೂನ್‌ನಲ್ಲಿ ಕೇವಲ 5 ದಿನದಲ್ಲೇ 7913 ವಾಹನಗಳು ನೋಂದಣಿಯಾಗಿವೆ. ಅಂದರೆ ದಿನಕ್ಕೆ ಸರಾಸರಿ 1600 ವಾಹನಗಳು ನೋಂದಣಿ ಮಾಡಲಾಗುತ್ತಿದೆ. ಜೂ.8ರ ಬಳಿಕ ಮಾಲ್ ಹಾಗೂ ಹೋಟೆಲ್ ಸೇರಿದಂತೆ ಇತರೆ ಚಟುವಟಿಕೆಗಳು ಆರಂಭಗೊಳ್ಳಲಿವೆ. ನಂತರ ವಾಹನಗಳ ನೋಂದಣಿ ಹೆಚ್ಚುವ ನಿರೀಕ್ಷೆ ಇದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದರು.

ಲಾಕ್‌ಡೌನ್‌ ಬಳಿಕ ವಾಹನಗಳ ನೋಂದಣಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿತ್ತು. ಮೇ 18ರ ಬಳಿಕ ವಾಹನ ಮಾರಾಟ, ನೋಂದಣಿಯಲ್ಲಿ ಚೇತರಿಕೆ ಕಂಡುಬರುತ್ತಿದೆ.
-ಶಿವರಾಜ್ ಪಾಟೀಲ್ ಹೆಚ್ಚುವರಿ ಆಯುಕ್ತ, ಸಾರಿಗೆ ಇಲಾಖೆ

600 ಕಾರು ಬುಕ್!
ಕಲ್ಯಾಣಿ ಮೋಟಾರ್ಸ್‌ನ 10 ಶಾಖೆಗಳು ಬೆಂಗಳೂರಿನಲ್ಲಿ ಇವೆ. ಲಾಕ್‌ಡೌನ್‌ ಸಡಿಲಿಕೆಯಾದ ಮೇ 4 ರಿಂದ ಜೂ.6 ವರೆಗೆ ಒಟ್ಟು 600 ಹೊಸ ಮಾರುತಿ ಕಾರುಗಳ ಬುಕ್ಕಿಂಗ್ ಮಾಡಲಾಗಿದ್ದು, 500 ಡೆಲಿವರಿ ಆಗಿವೆ. ಮಾಮೂಲಿ ದಿನಗಳಿಗೆ ಹೋಲಿಸಿದರೆ ಶೇ.60ರಷ್ಟು ವಹಿವಾಟು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
– ಎಸ್.ಎನ್.ಶೆಟ್ಟಿ ಉಪಾಧ್ಯಕ್ಷರು, ಕಲ್ಯಾಣಿ ಮೋಟಾರ್ಸ್

ಬಸ್‌ನಲ್ಲಿ ಜನರ ಮಧ್ಯೆ ಓಡಾಡುವುದು ಸದ್ಯಕ್ಕೆ ಅಪಾಯ ಎಂಬ ಕಾರಣದಿಂದ ಮೇ ತಿಂಗಳಾಂತ್ಯಕ್ಕೆ ಸ್ಕೂಟರ್ ಖರೀದಿಸಿದೆ.
-ತ್ಯಾಗರಾಜ್, ಬೆಂಗಳೂರಿನ ಕೆಜಿಐಡಿ ಕಚೇರಿ ಉದ್ಯೋಗಿ

ವಾಹನ ಖರೀದಿಗೆ ಕಾರಣ
– ಮನೆಯಿಂದ ಹೊರ ಹೋಗಲು ಸ್ವಂತ ವಾಹನವೇ ಒಳ್ಳೆಯದೆಂಬ ಅಭಿಪ್ರಾಯ
– ಯಾರ ಸಂಪರ್ಕ ಇಲ್ಲದೇ ಮನೆ ಹಾಗೂ ಕಚೇರಿ ನಡುವೆ ಸುರಕ್ಷಿತವಾಗಿ ಓಡಾಡಲು ಅನುಕೂಲ
– ಕೆಲವರು ಮೊದಲೇ ವಾಹನ ಖರೀದಿಗೆ ಪ್ಲ್ಯಾನ್ ಮಾಡಿದ್ದು ಈಗ ಜಾರಿಗೆ ಬಂದಿದೆ.

ನೋಂದಣಿ ಯಾವಾಗ ಎಷ್ಟು?
– ಲಾಕ್‌ಡೌನ್‌ಗೂ ಮೊದಲು ಪ್ರತಿ ದಿನ 7500 ವಾಹನ
– ಸಡಿಲಗೊಂಡ ಮೇ 18ರ ಬಳಿಕ ದಿನಕ್ಕೆ 1100 ವಾಹನ
– ಜೂನ್ ತಿಂಗಳಿನಲ್ಲಿ ದಿನಕ್ಕೆ 1600 ವಾಹನ

ತಿಂಗಳಲ್ಲಿ ಎಷ್ಟು?
ಫೆಬ್ರವರಿ 2020: 2 ಲಕ್ಷ,

ಮಾ. 24ರವರೆಗೆ: 1.54 ಲಕ್ಷ,

ಮೇ 2020: 36,884,

ಜೂನ್ 5ರವರೆಗೆ: 7,913

ದೇಶಾದ್ಯಂತ ಚೇತರಿಕೆ
ದೇಶದೆಲ್ಲೆಡೆಯೂ ವಾಹನ ಖರೀದಿ ಚೇತರಿಸಿಕೊಂಡಿದೆ. ಜೂನ್ 1ರಿಂದ ಮೊದಲ ಎರಡು ದಿನಗಳಲ್ಲಿ ವಾಹನಗಳ ನೋಂದಣಿ ಏರುಗತಿಯಲ್ಲಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top