ಶ್ರೀಕಾಂತ್ ಹುಣಸವಾಡಿ ಬೆಂಗಳೂರು.
ಕೊರೊನಾ ನಮ್ಮ ಜೀವನಶೈಲಿಯನ್ನೇ ಬದಲಿಸಿದೆ. ಶ್ರೀಮಂತರು, ಬಡವರೆನ್ನದೆ ಪ್ರತಿಯೊಬ್ಬರೂ ಹೊಸ ಆಹಾರ ಪದ್ಧತಿ, ದಿನಚರಿಗೆ ಒಗ್ಗಿಕೊಂಡಿದ್ದಾರೆ. ಕೊರೊನಾವನ್ನು ಎದುರಿಸುವ ನಿಟ್ಟಿನಲ್ಲಿ ಹೆಚ್ಚಿನವರು ನಾನಾ ತಂತ್ರಗಳನ್ನು ಅಳವಡಿಸಿಕೊಂಡಿದ್ದು, ಇದರಲ್ಲಿ ಆಯುರ್ವೇದ ಔಷಧ, ಕಷಾಯಗಳ ಬಳಕೆ, ಉತ್ತಮ ಆಹಾರ ಸೇವನೆ ಪ್ರಮುಖವಾಗಿದೆ. ಇದರ ಜತೆಗೆ ದೈಹಿಕ ದೃಢತೆಗಾಗಿ ಯೋಗ-ವ್ಯಾಯಾಮ, ಮಾನಸಿಕ ದೃಢತೆಗಾಗಿ ಧ್ಯಾನ, ದೇವರ ಪೂಜೆ, ಮಂತ್ರ ಪಠಣ, ಹೋಮಹವನಗಳು ಕೂಡಾ ಹೆಚ್ಚಾಗಿವೆ. ರಾಜ್ಯದ ನಾನಾ ಕಡೆ ನಡೆಯುತ್ತಿರುವ ಹಲವು ಪ್ರಯೋಗಗಳ ನೋಟ ಇಲ್ಲಿದೆ.
ಮನೆಯಲ್ಲಿ ಬಳಸುವ ಸಂಬಾರ ಪದಾರ್ಥಗಳಲ್ಲಿ ಅಪೂರ್ವ ರೋಗ ನಿರೋಧಕ ಶಕ್ತಿ ಇದೆ ಎನ್ನುವುದು ಹಿಂದಿನಿಂದಲೂ ಗೊತ್ತಿರುವ ಸತ್ಯ. ಆದರೆ, ಅದರ ಅತ್ಯಂತ ವ್ಯಾಪಕ ಬಳಕೆಗೆ ಕಾರಣವಾಗಿದ್ದು ಮಾತ್ರ ಕೊರೊನಾ!
ಅರಿಸಿನ, ಅಶ್ವಗಂಧ, ಕಾಳುಮೆಣಸು, ಲವಂಗ, ಜೀರಿಗೆ, ಧನಿಯಾ, ದಾಲ್ಚಿನ್ನಿ, ಹಿಪ್ಪಲಿ, ಏಲಕ್ಕಿ, ಬಜೆ ಮತ್ತಿತರ ವಸ್ತುಗಳನ್ನು ಜನರು ಯಥೇಚ್ಛವಾಗಿ ಬಳಸಲು ಆರಂಭಿಸಿದ್ದಾರೆ. ನೆಲ್ಲಿ, ಅಮೃತಬಳ್ಳಿ, ಶುಂಠಿ, ತುಳಸಿ, ನಿಂಬೆಹಣ್ಣಿನ ಬಳಕೆಯಂತೂ ಗಣನೀಯವಾಗಿ ಹೆಚ್ಚಿದೆ. ಹಿಂದೆ ಕಷಾಯ ಎಂದರೆ ಮೂಗು ಮುರಿಯುತ್ತಿದ್ದವರು ಈಗ ದಿನದ ಮೂರೂ ಹೊತ್ತು ಅದನ್ನೇ ಸೇವಿಸುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬಗೆಯ ಬಗೆಯ ಕಷಾಯಗಳು, ತಿಂಡಿ ತಿನಿಸುಗಳ ‘ಪ್ರಯೋಗ’ಗಳು ದಿನವೂ ನಡೆಯುತ್ತಿದ್ದು, ಮನೆ ಎನ್ನುವುದು ವೈದ್ಯಶಾಲೆಯಾಗಿ ಬದಲಾಗಿದೆ. ಜೊತೆಗೆ ವೈರಾಣು ಎದುರಿಸಲು ಚವನ್ಪ್ರಾಶ್, ಚೂರ್ಣ, ಲೇಹಗಳನ್ನು ಒಂದೋ ಮನೆಯಲ್ಲಿ ತಯಾರಿಸುವುದು ಇಲ್ಲವೇ ಖರೀದಿಸುವ ಪ್ರಕ್ರಿಯೆಯೂ ಜೋರಾಗಿದೆ. ಜತೆಗೆ ಸರಕಾರ ಹಾಗೂ ಹಲವು ಸಂಘಟನೆಗಳು ಆಯುರ್ವೇದ ಕಿಟ್‌ಗಳನ್ನು ಉಚಿತವಾಗಿ ಹಂಚುತ್ತಿವೆ.
ಬೆಳಗಾವಿ ಜಿಲ್ಲೆಯಲ್ಲಿ ಆಯುಷ್ ಇಲಾಖೆ ಸಹಯೋಗದಲ್ಲಿ ವಿವಿಧ ಹೋಮಿಯೋಪತಿ ವೈದ್ಯಕೀಯ ಕಾಲೇಜುಗಳು ಆರ್ಸೆನಿಕ್ ಆಲ್ಬಂ 30 ಮಾತ್ರೆಗಳನ್ನು ಉಚಿತವಾಗಿ ವಿತರಿಸುತ್ತಿವೆ. ಇಮ್ಯುನೊಕೇರ್’ ಎನ್ನುವ ಆಯುರ್ವೇದ ಔಷಧ ಬಗ್ಗೆ ಪ್ರಚಾರ ಜೋರಾಗಿದೆ. ಬೆಳಗಿನ ವಾಯು ವಿಹಾರಿಗಳು ಗಿಡಮೂಲಿಕೆಗಳ ಜ್ಯೂಸ್ ಕುಡಿಯುವ ಪ್ರವೃತ್ತಿ ಹೆಚ್ಚಾಗಿದೆ.
ಗದಗ ಜಿಲ್ಲೆಯಲ್ಲಿ ಆಯುಷ್ ಇಲಾಖೆಯಿಂದ ಜನರು, ಕೊರೊನಾ ವಾರಿಯರ್‌ಗಳಿಗೆ ಕಷಾಯ ಪುಡಿ, ಹೋಮಿಯೋಪತಿ ಮಾತ್ರೆಗಳು ಹಾಗೂ ಚವನ್ ಪ್ರಾಶ ವಿತರಣೆ
ಹಾವೇರಿ ಚಿಕ್ಕಿ
ಸೋಂಕಿತರಿಗೆ ಮತ್ತು ವಾರಿಯರ್‌ಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಲ್ಗಾ ಜತೆಗೆ ಕಾಡು ನೆಲ್ಲಿಕಾಯಿ (ಬೆಟ್ಟದ ನೆಲ್ಲಿಕಾಯಿ) ಚಿಕ್ಕಿ ವಿತರಿಸಲಾಗಿದೆ.
ಧಾರವಾಡ ಬಿ.ಡಿ. ಜತ್ತಿ ಹೋಮಿಯೋಪತಿ ಆಸ್ಪತ್ರೆ ವತಿಯಿಂದ ಧನ್ವಂತರಿ ಔಷಧಿ ಭಂಡಾರ ಪ್ರಾಯೋಜಕತ್ವದಲ್ಲಿ ಹೋಮಿಯೊ ಕಿಟ್ ವಿತರಿಸಲಾಗಿದೆ.
ಉ.ಕನ್ನಡದಲ್ಲಿ ಪಾನೀಯ: ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕೊರೊನಾ ವಾರಿಯರ್ಸ್‌ಗೆ ಒಟ್ಟು 2 ಸಾವಿರಕ್ಕೂ ಹೆಚ್ಚು ಪೌಷ್ಟಿಕ ಪಾನೀಯ ವಿತರಣೆ
ಮೈಸೂರಿನಲ್ಲಿ ಆಯುಷ್ ಕಿಟ್ ಜತೆಗೆ ಆರೋಗ್ಯ ರಕ್ಷಣೆ ಮತ್ತು ಆಯುರ್ವೇದ ಔಷಧಗಳಿಂದಾಗುವ ಪ್ರಯೋಜನಗಳ ಬಗ್ಗೆ ಕರಪತ್ರ ಜಾಗೃತಿ
ಮಂಡ್ಯ, ಚಾಮರಾಜನಗರ ಸೇರಿದಂತೆ ಬಹುತೇಕ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ರೋಗ ನಿರೋಧಕ ಶಕ್ತಿ ವರ್ಧಕ ಮಾತ್ರೆಗೆ ಬೇಡಿಕೆ
ವಿಜಯಪುರದ ಕೆ.ಸಿ. ನಗರದ ಹೋಮಿಯೋಪಥಿ ವೈದ್ಯ ಡಾ. ಸಂಗಮೇಶ ತಳೇವಾಡ ಪಾಟೀಲರು ಆರ್ಸೆನಿಕ್ ಅಲ್ಬಂ-30 ಮಾತ್ರೆಗಳನ್ನು ಉಚಿತವಾಗಿ ನೀಡಿ ಆಪ್ತ ವೈದ್ಯರಾಗಿದ್ದಾರೆ.
ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಆಯುಷ್ ಕ್ವಾಥ ಚೂರ್ಣ, ಶಂಶಮನಿ ವಟಿ ಮತ್ತು ಆರ್ಸೆನಿಕ್ ಆಲ್ಬಂ ಎನ್ನುವ ಮೂರು ಉತ್ಪನ್ನಗಳನ್ನು ಒಳಗೊಂಡ 85 ಸಾವಿರ ಕಿಟ್‌ಗಳನ್ನು ಜು.29ರಿಂದ ವಿತರಿಸಲು ನಿರ್ಧರಿಸಿದ್ದಾರೆ.
ಹಾಸನದಲ್ಲಿ ಲೈಫ್ ಲೈನ್ ಫೀಡ್ಸ್ ಇಂಡಿಯಾದಿಂದ ಲಕ್ಷಕ್ಕೂ ಹೆಚ್ಚು ಆಯುರ್ವೇದ ಮಾತ್ರೆಯ ಡಬ್ಬಿ ಉಚಿತ ವಿತರಣೆ
ಕಲಬುರಗಿಯ ಸೇಡಂನಲ್ಲಿ ಜುವೆಲ್ಲರಿ ಮಾಲೀಕ ಶ್ರೀನಿವಾಸ ಕಾಸೋಜು ಮತ್ತು ಪತ್ನಿ ಜಯಶ್ರೀ ಅವರು 200ಕ್ಕೂ ಅಧಿಕ ಆರೋಗ್ಯ, ಪೊಲೀಸ್ ಮತ್ತು ಪೌರ ಸಿಬ್ಬಂದಿಗೆ ಉಚಿತ ಕಷಾಯ ಹಂಚುತ್ತಿದ್ದಾರೆ.
ಕಷಾಯ ಪೌಡರ್‌ಗೆ ಮೊದಲೆಲ್ಲಾ ಹೆಚ್ಚಿನ ಬೇಡಿಕೆ ಇರಲಿಲ್ಲ, ಈಗಂತೂ ಕಷಾಯ ಪುಡಿ, ಮಸಾಲೆ ಪದಾರ್ಥಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ.
-ರಾಮನಾಥ್ ಮಂಗಳೂರು ಸ್ಟೋರ್ ಮಾಲೀಕರು
ವಾತಾವರಣ ಶುದ್ಧಿಗೆ ಅಗ್ನಿಹೋತ್ರ
ವಾತಾವರಣ ಶುದ್ಧಿಗೆ ಸಹಾಯಕವಾಗುವ ಪಾರಂಪರಿಕ ಮಹತ್ವದ ಅಗ್ನಿಹೋತ್ರದ ಆಚರಣೆ ಈಗ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ಅನೇಕ ಕಡೆಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಶಿರಸಿ ನಗರದ 150ಕ್ಕೂ ಅಧಿಕ ಮನೆಗಳಲ್ಲಿ ಅಗ್ನಿಹೋತ್ರ ಹೋಮ ನಡೆದಿದೆ.
ಚಿಕ್ಕಮಗಳೂರಿನ ಕೊಪ್ಪದ ಗೌರಿಗದ್ದೆ ದತ್ತಾಶ್ರಮದ ವಿನಯ್ ಗುರೂಜಿ ಆಶ್ರಮ ಮತ್ತು ಭಕ್ತರ ಮನೆಗಳಲ್ಲಿ ಅಗ್ನಿಹೋತ್ರ ನಡೆಯುತ್ತಿದೆ.
ಧಾರವಾಡದ ಕಾಮನಕಟ್ಟಿ ಕುಂಬಾರ ಓಣಿಯ ದತ್ತ ಮಂದಿರದಲ್ಲಿ ಶ್ರೀ ಉಮಾಕಾಂತ್ ಗುರೂಜಿಯವರ ನೇತೃತ್ವದಲ್ಲಿ ಪ್ರತಿವಾರ ಶ್ರೀ ದತ್ತಾತ್ರೇಯ ದೇವರಿಗೆ ಅಭಿಷೇಕ ಮತ್ತು ಹೋಮ.
ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ವತಿಯಿಂದ ಮೂರ್ನಾಡು ಗಾಂಧಿನಗರದ ಶ್ರೀಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಧನ್ವಂತರಿ ಯಾಗ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗೋಪಿನಾಥಂ, ಹರದನಹಳ್ಳಿ ಗ್ರಾಮಗಳಲ್ಲಿ ಮಾರಿ ದೇವತೆಗೆ ವಿಶೇಷ ಪೂಜೆ
ಹಾಸನದ ವೇದ ಭಾರತೀ ಹಾಗೂ ಪತಂಜಲಿ ಪರಿವಾರವು ಕಳೆದ 136 ದಿನಗಳಿಂದ ಮನೆ ಮನೆಯಲ್ಲಿ ಅಗ್ನಿಹೋತ್ರ ನಡೆಸಿ ಎಫ್‌ಬಿ ಮೂಲಕ ಲೈವ್ ಮಾಡುತ್ತಿದೆ.
ಪೌಷ್ಟಿಕ ಆಹಾರಕ್ಕೆ ಆದ್ಯತೆ
ಹೆಚ್ಚಿನ ಮನೆಗಳಲ್ಲಿ ಸ್ವಾದಿಷ್ಟಕ್ಕಿಂತಲೂ ಪೌಷ್ಟಿಕ ಆಹಾರಕ್ಕೆ ಮೊರೆ ಹೋಗಿದ್ದಾರೆ. ಮೊಳಕೆ ಬರಿಸಿದ ಬೇಳೆ ಕಾಳುಗಳ ಬಳಕೆ ಹೆಚ್ಚಾಗಿದೆ. ಮನೆಯಿಂದ ಹೊರಗೆ ತಿನ್ನುವ ಪರಿಪಾಠ ಕಡಿಮೆಯಾಗಿದೆ. ಮಸಾಲೆ ಪದಾರ್ಥಗಳಲ್ಲಿ ಔಷಧ ಗುಣ ಇದೆ ಎಂಬುದು ಗೊತ್ತಿದ್ದರೂ ಜನರು ಅಷ್ಟೊಂದು ಹೆಚ್ಚಾಗಿ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಇದೀಗ ಅದರಲ್ಲಿನ ಆರೋಗ್ಯ, ವೈಜ್ಞಾನಿಕ ಮೌಲ್ಯ ಮುನ್ನೆಲೆಗೆ ಬಂದಿರುವುದರಿಂದ ಜನರು ಹೆಚ್ಚಾಗಿ ಸಾಂಪ್ರದಾಯಿಕ ಪದಾರ್ಥಗಳ ಮೊರೆ ಹೋಗುತ್ತಿದ್ದಾರೆ ಎನ್ನುತ್ತಾರೆ ಆಹಾರ ತಜ್ಞ ಕೆ.ಸಿ. ರಘು. ಸಿಟ್ರಸ್ ಅಂಶ ಇರುವ ಹಣ್ಣುಗಳ ಬಳಕೆ ಹೆಚ್ಚಿದೆ. ತರಕಾರಿ ಬಳಕೆ ವೃದ್ಧಿಸಿದೆ.
ಮನಃಶಾಂತಿಗೆ ಧ್ಯಾನ
ಕೊರೊನಾವನ್ನು ಎದುರಿಸಲು ಧ್ಯಾನ ಅತ್ಯುತ್ತಮ ಎಂಬ ವಾದದ ಹಿನ್ನೆಲೆಯಲ್ಲಿ ಹೆಚ್ಚಿನವರು ತಮಗೆ ತಿಳಿದ ಧ್ಯಾನ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಅದರ ಕುರಿತ ಹುಡುಕಾಟ ಹೆಚ್ಚಿದೆ.
ಕೊರೊನಾ ಗೆಲ್ಲುವ ಯೋಗ
ಆರೋಗ್ಯ ಮತ್ತು ಮಾನಸಿಕ ಶಕ್ತಿ ವರ್ಧನೆಗಾಗಿ ಯೋಗ ಮತ್ತು ಪ್ರಾಣಾಯಾಮಕ್ಕೆ ಹೆಚ್ಚು ಹೆಚ್ಚು ಜನರು ಮೊರೆ ಹೋಗುತ್ತಿದ್ದಾರೆ. ವ್ಯಾಯಾಮ, ವಾಕಿಂಗ್, ಸೂರ್ಯ ನಮಸ್ಕಾರವನ್ನು ಹೆಚ್ಚಿನವರು ನೆಚ್ಚಿಕೊಂಡಿದ್ದಾರೆ. ನೇರ ಕ್ಲಾಸಿಗೆ ಹೋಗುತ್ತಿದ್ದವರು ಆನ್‌ಲೈನ್ ಕ್ಲಾಸ್‌ನಲ್ಲಿ ಭಾಗಿಯಾಗುತ್ತಿದ್ದಾರೆ.
ಮೈಸೂರಿನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸಂಶೋಧನ ಕೇಂದ್ರ ವತಿಯಿಂದ ಹಾಗೂ ಖಾಸಗಿಯಾಗಿ ಮೈಸೂರು ಯೋಗ ಒಕ್ಕೂಟ, ವೇದವ್ಯಾಸ ಯೋಗ ಫೌಂಡೇಷನ್ ಸೇರಿದಂತೆ ನಾನಾ ಯೋಗ ಸಂಘ ಸಂಸ್ಥೆಗಳು ಆನ್‌ಲೈನ್ ಯೋಗ ತರಬೇತಿ ನೀಡುತ್ತಿವೆ.
ಧಾರವಾಡದ ಪರಮೇಶ್ ಸುಪರ್ಣಸಾ ಅವರು ಕಲಿಸಿ ಕೊಟ್ಟ ಮುದ್ರಾ ಯೋಗದ ಲಾಭವನ್ನು ಸಾವಿರಾರು ಜನರು ಪಡೆದಿದ್ದಾರೆ.
ದೇವರ ಭಜನೆ ಜನಪ್ರಿಯ
ದೇವರ ಭಜನೆ, ಪೂಜೆಗಳ ಮೂಲಕ ಜನರು ಮಾನಸಿಕ ಶಕ್ತಿ ವೃದ್ಧಿಸಿಕೊಳ್ಳುತ್ತಿದ್ದಾರೆ. ಹೆಸರಾಂತ ಗಾಯಕಿಯರ ಆನ್‌ಲೈನ್ ಕಾರ್ಯಕ್ರಮ ಜನಪ್ರಿಯವಾಗಿದೆ. ಧಾರವಾಡದ ವೇದಭಾರತಿಯ ಅಧ್ಯಕ್ಷ ಅಶೋಕ್ ಕುಮಾರ್ ನಾಡಿಗ್ರಿಂದ ನಿತ್ಯವೂ ಮಂಕುತಿಮ್ಮನ ಕಗ್ಗದ ವ್ಯಾಖ್ಯಾನ ನಡೆಯುತ್ತಿದೆ.
ಪಾಸಿಟಿವ್ ವಿಷಯಕ್ಕೆ ಹುಡುಕಾಟ
ಕೊರೊನಾ ಎದುರಿಸಲು ಪಾಸಿಟಿವ್ ಯೋಚನೆ ತುಂಬ ಅಗತ್ಯ. ಈ ನಿಟ್ಟಿನಲ್ಲಿ ಹೆಚ್ಚಿನವರು ಧನಾತ್ಮಕ ವಿಚಾರಗಳಿರುವ ವಿಡಿಯೊ ಮತ್ತು ಪುಸ್ತಕದ ಓದಿಗೆ ಮೊರೆ ಹೋಗಿದ್ದಾರೆ. ಗುರೂಜಿಗಳು, ಸ್ವಾಮೀಜಿಗಳು ಮಾತ್ರವಲ್ಲ ವೈದ್ಯರ ಮಾತುಗಳಿಗೆ ತುಂಬ ಬೇಡಿಕೆ ಇದೆ.
ಸಂಭ್ರಮಕ್ಕೆ ನೂರು ದಾರಿ
ಮನೋಲ್ಲಾಸಕ್ಕಾಗಿ ನೃತ್ಯ ಮತ್ತು ಸಂಗೀತದ ಬಳಕೆ ಕೊರೊನಾ ಕಾಲದಲ್ಲಿ ಹೆಚ್ಚಾಗುತ್ತಿದೆ. ಸಂಗೀತ ಕೇಳುವುದು, ಸ್ವಯಂ ಹಾಡುವ ಸಂಭ್ರಮ ಹೆಚ್ಚುತ್ತಿದೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲೂ ಸೋಂಕಿತರು ಹಾಡು, ನೃತ್ಯಗಳ ಮೂಲಕ ಖುಷಿಪಡುತ್ತಿದ್ದಾರೆ.