ಶ್ರೀಮಂತ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ರೈತರನ್ನು ಸುಲಿಗೆ ಮಾಡುವುದನ್ನು ತಡೆಯಲೆಂದು ಎಪಿಎಂಸಿ ಕಾಯಿದೆ ರೂಪಿಸಿ ಜಾರಿಗೆ ತರಲಾಗಿತ್ತು. ಈಗ ಆ ಎಪಿಎಂಸಿ ಕಾಯಿದೆಯಲ್ಲಿ ದಿಢೀರ್ ತಿದ್ದುಪಡಿ ಮಾಡಲು ಸರಕಾರ ಮುಂದಾಗಿದೆ. ತಿದ್ದುಪಡಿ ಕಾಯಿದೆ ಸಂಬಂಧ ಸುಗ್ರೀವಾಜ್ಞೆ ಪ್ರಸ್ತಾಪವನ್ನು ಕೇಂದ್ರ ಸರಕಾರದ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಇದಕ್ಕೆ ಮುನ್ನ ತಿದ್ದುಪಡಿ ಸಂಬಂಧಿಸಿ ವಿಧಾನಮಂಡಲದಲ್ಲಿ ಚರ್ಚೆಯಾಗಬೇಕಿತ್ತು; ಸಂಪುಟ ಸಭೆಯಲ್ಲಿ ಅನುಮೋದನೆ ಆಗಬೇಕಿತ್ತು. ಎರಡೂ ಆಗಿಲ್ಲ. ಇಷ್ಟೊಂದು ತರಾತುರಿಯಲ್ಲಿ ಲಾಕ್‌ಡೌನ್ ನಡುವೆಯೇ, ಎಪಿಎಂಸಿ ಕಾಯಿದೆ ಬದಲಾಯಿಸುವ ತರಾತುರಿ ಏನಿದೆ? ಇದು ಹೆಚ್ಚಿನ ಅನುಮಾನಕ್ಕೆ ಕಾರಣವಾಗಿದೆ.
ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಹೊರಟಿರುವ ಸನ್ನಿವೇಶವೂ ಅದಕ್ಕೆ ಪೂರಕವಾಗಿಲ್ಲ. ಲಾಕ್‌ಡೌನ್ ಪರಿಣಾಮ ಕೃಷಿ ಕ್ಷೇತ್ರದ ಚಟುವಟಿಕೆಗಳು ನಿಸ್ತೇಜವಾಗಿದ್ದು, ಬೆಳೆಗೆ ತಕ್ಕ ಬೆಲೆ ಸಿಗದೆ, ಮಾರಾಟವಾಗದೆ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಆಡಳಿತ ಯಂತ್ರ ಕೊರೊನಾ ವಿರುದ್ಧದ ಸಮರದಲ್ಲಿ ಮಗ್ನರಾಗಿರುವಾಗ, ರೈತ ಸಮುದಾಯದ ಗಮನಕ್ಕೆ ಬರದಂತೆ ಅವಸರದಲ್ಲಿ ತಿದ್ದುಪಡಿ ಮುಗಿಸುವ ಚಿಂತನೆ ಇರುವಂತೆ ಕಾಣಿಸುತ್ತಿದೆ. ಯಾವುದೇ ವಿಧೇಯಕ ತಿದ್ದುಪಡಿಗೆ ವಿಧಾನಮಂಡಲದಲ್ಲಿ ಚರ್ಚೆಯಾಗಿ ಅಂಗೀಕಾರ ಆಗಬೇಕು. ಅಧಿವೇಶನ ಇಲ್ಲದ ಸಂದರ್ಭದಲ್ಲಿ ತುರ್ತು ಸನ್ನಿವೇಶವಿದ್ದರೆ ಸುಗ್ರೀವಾಜ್ಞೆ ಹೊರಡಿಸಬಹುದು. ಆದರೆ, ಅಂಥ ತುರ್ತೇನೂ ಈಗ ಇಲ್ಲ. ಇದ್ದರೆ ಅದು ರೈತರ ಉತ್ಪನ್ನಗಳ ಖರೀದಿ ಮತ್ತು ಪೂರೈಕೆ ಸರಪಳಿ ಸುಗಮವಾಗಿರುವಂತೆ ನೋಡಿಕೊಳ್ಳುವುದು ಮಾತ್ರ. 2017ರಲ್ಲಿ ಕೇಂದ್ರ ತಂದಿರುವ ಮಾದರಿ ಕಾಯಿದೆಯನ್ನು ಜಾರಿ ಮಾಡುವ ತುರ್ತು ಸರಕಾರಕ್ಕೆ ಇದ್ದಂತೆ ಕಾಣುತ್ತದೆ. ಆದರೂ ಈ ಒತ್ತಡ ಹಾಗೂ ತರಾತುರಿ ಹಲವು ಗುಮಾನಿ ಮೂಡಿಸುತ್ತದೆ.
ಎಪಿಎಂಸಿ ಕಾಯಿದೆಯೇನೂ ನೂರಕ್ಕೆ ನೂರು ಲೋಪರಹಿತವಾಗಿಲ್ಲ. ಅಲ್ಲೂ ರೈತರಿಗೆ ನಷ್ಟ ಉಂಟುಮಾಡಬಲ್ಲ ಕೆಲವು ಅಂಶಗಳಿವೆ. ಅವುಗಳನ್ನು ಗುರುತಿಸಿ ಸರಿಪಡಿಸಲು ಕಾಯಿದೆ ತಿದ್ದುಪಡಿ ಆಗಬೇಕು. ಆದರೆ ಅದಕ್ಕೂ ಮೊದಲು ರಾಜ್ಯಾದ್ಯಂತ ರೈತ ಸಮುದಾಯದ ಮಧ್ಯೆ ಅದು ಚರ್ಚೆ ಆಗಬೇಕು. ತಿದ್ದುಪಡಿಗಳು ತಮ್ಮ ಹಿತಕ್ಕೆ ಪೂರಕವಾಗಿವೆ ಎಂಬ ವಿಶ್ವಾಸ ರೈತರಲ್ಲಿ ಮೂಡಬೇಕು. ಎಪಿಎಂಸಿ ವ್ಯವಸ್ಥೆ ಜಡವಾಗುತ್ತಿದೆ ಎಂಬ ಕಳವಳ ಇದ್ದರೆ, ಅದನ್ನು ಚುರುಕಾಗಿಸಲು ಸ್ಪರ್ಧಾತ್ಮಕ ವ್ಯವಸ್ಥೆಯನ್ನು ಸೃಷ್ಟಿಸಬಹುದು. ಇದರಿಂದ ರೈತರಿಗೆ ಒಳಿತು. ಎಪಿಎಂಸಿ ಸಾರ್ವಜನಿಕ ವ್ಯವಸ್ಥೆ ಆಗಿರುವುದರಿಂದ ಸಾಮಾನ್ಯ ರೈತ ಕೂಡ ಅಲ್ಲಿ ತನಗೆ ಅನ್ಯಾಯವಾದರೆ ಪ್ರಶ್ನಿಸುವ ವ್ಯವಸ್ಥೆಯಿದೆ. ಆದರೆ ಎಪಿಎಂಸಿ ಕುಸಿದು, ಅದರ ಜಾಗದಲ್ಲಿ ಖಾಸಗಿ ಕಂಪನಿಗಳ ಆಟ ಆರಂಭವಾದರೆ ರೈತನಿಗೆ ಈ ಪ್ರಶ್ನಿಸುವ ಬಲ ಕೂಡ ಉಳಿಯುವುದಿಲ್ಲ.
ಈಗಿನ ತಿದ್ದುಪಡಿಯ ಪ್ರಸ್ತಾಪದ ಬಗ್ಗೆ ರೈತರಿಗೂ ಸೇರಿದಂತೆ ಯಾರಿಗೂ ಸರಿಯಾದ ಮಾಹಿತಿಯಿಲ್ಲ. ಇದರ ಬಗ್ಗೆ ಅರಿವು ಮೂಡಿಸಬೇಕಾದ ಆಡಳಿತ ಪಕ್ಷದ ಶಾಸಕರು, ಸಚಿವರು, ಸಂಸದರು ಮೌನವಾಗಿದ್ದಾರೆ. ಇದು ಅನುಮಾನ ಮೂಡಿಸುವ ಮೌನ. ಸಂಕಷ್ಟದ ಸಂದರ್ಭದಲ್ಲಿ ಬೆಂಬಲ ಬೆಲೆ ನೀಡುವ ಬಗ್ಗೆ ಈ ತಿದ್ದುಪಡಿ ಏನು ಹೇಳುತ್ತದೆ, ಮಧ್ಯವರ್ತಿಗಳ/ಖಾಸಗಿ ಕಂಪನಿಗಳ ಪಾಲು ಎಷ್ಟಿರಬಹುದು, ಎಪಿಎಂಸಿ ವರ್ತಕರಿಂದ ಸರಕಾರಕ್ಕೆ ಸಲ್ಲುತ್ತಿದ್ದ ತೆರಿಗೆ ಆದಾಯದಲ್ಲಿ ಏನು ವ್ಯತ್ಯಾಸವಾಗಲಿದೆ, ವರ್ತಕರಿಂದ ಮೋಸವಾದರೆ ಯಾವ ವೇದಿಕೆಯ ಮೂಲಕ ರೈತ ನ್ಯಾಯ ಕೇಳಬೇಕು ಮುತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ರಾಜ್ಯದಲ್ಲಿರುವ ಹಾಲಿ ಕಾಯಿದೆಗಿಂತ ಹೊಸ ಕಾಯಿದೆ ಹೇಗೆ ಶಕ್ತ ಅಥವಾ ಭಿನ್ನ ಎಂಬುದನ್ನಾದರೂ ತಿಳಿಸಬೇಕು. ರೈತಪರ ಹೋರಾಟದಿಂದಲೇ ಗುರುತಿಸಿಕೊಂಡ ಮುಖ್ಯಮಂತ್ರಿಗಳು ಅಧಿಕಾರದಲ್ಲಿರುವಾಗ ರೈತರಿಗೆ ಅನ್ಯಾಯವಾಗುವ ಕಾಯಿದೆ ಹೇರದಿರಲಿ ಎಂಬುದು ಎಲ್ಲರ ಕಾಳಜಿ. ಅಂಥ ಹೇರುವಿಕೆ ಸರಕಾರಕ್ಕೆ ತಿರುಮಂತ್ರವೇ ಆಗಬಹುದು.