ಚೀನಾಗೆ ಮರೆಯಲಾಗದ ಪಾಠ – ವಿಸ್ತರಣಾಕಾಂಕ್ಷಿ ಚೀನಾವನ್ನು ನಂಬಲಾಗದು

ಇತರ ಸಣ್ಣ ದೇಶಗಳನ್ನು ಸಾಲ ನೀಡಿ ವಶೀಕರಿಸಿಕೊಂಡಂತೆ ಭಾರತವನ್ನು ವಸಾಹತು ಮಾಡಿಕೊಳ್ಳಲು ಸಾಧ್ಯವಾಗದು ಎಂದು ಅರಿತಿರುವ ಚೀನಾ, ಗಡಿ ತಂಟೆಗಳ ಮೂಲಕ ಭಾರತವನ್ನು ಆಗಾಗ ಬೆದರಿಸಲು ಹಾಗೂ ವಶದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಕಳೆದ ತಿಂಗಳು ಲೇಹ್‌ ಸಮೀಪದ ಗಲ್ವಾನ್‌ ಕಣಿವೆಯಲ್ಲಿ ನಡೆದದ್ದು ಚೀನಾದ ಇಂತದೇ ಒಂದು ಪ್ರಯತ್ನ. ಚೀನಾ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಯೋಧರನ್ನು ಕಳೆದುಕೊಂಡ ಭಾರತ, ಅದಕ್ಕೆ ತಕ್ಕನಾದ ಪ್ರತಿಕ್ರಿಯೆಯನ್ನು ತೋರಿತು. ಉಲ್ಬಣಿಸಿದ ಸನ್ನಿವೇಶವನ್ನು ಸರಿಪಡಿಸಲು ಉಭಯ ಕಡೆಗಳ ಕಮಾಂಡರ್‌ ಮಟ್ಟದ ಹಾಗೂ ರಾಜತಾಂತ್ರಿಕ ಪ್ರತಿನಿಧಿಗಳ ಮಟ್ಟದ ಮಾತುಕತೆಗಳು ನಡೆದು, ಚೀನಾ ಸೇನೆ ತಾನಿದ್ದಲ್ಲಿಂದ 1.5 ಕಿಲೋಮೀಟರ್‌ ಹಿಂದೆ ಸರಿಯಲು ಒಪ್ಪಿದೆ. ಇದು ಚೀನಾದ ಭೂದಾಹ, ವಿಸ್ತರಣಾಕಾಂಕ್ಷೆಗಳಿಗೆ ಭಾರತ ಕಲಿಸಿದ ಸರಿಯಾದ ಪಾಠವಾಗಿದೆ.
ಇದರ ಹಿನ್ನೆಲೆಯಲ್ಲಿ ಹಲವಾರು ಅಂಶಗಳು ಕೆಲಸ ಮಾಡಿವೆ. ಭಾರತ ತನ್ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎಂಬುದು ಚೀನಾದ ವೇದನೆ. ಅಮೆರಿಕ- ಫ್ರಾನ್ಸ್‌- ರಷ್ಯಗಳ ಜೊತೆಗೆ ರಕ್ಷಣಾ ಒಪ್ಪಂದಗಳು, ದಕ್ಷಿಣ ಚೀನಾ ಸಮುದ್ರದಲ್ಲಿ ಪೆಸಿಫಿಕ್‌ ದೇಶಗಳ ಜೊತೆಗಿನ ಒಕ್ಕೂಟ ಹಾಗೂ ಮಿಲಿಟರಿ ಸಹಯೋಗ, ವಾಣಿಜ್ಯ ವ್ಯವಹಾರದಲ್ಲಿ ಅಮೆರಿಕ- ಯುರೋಪ್‌ ಒಕ್ಕೂಟಗಳ ಜೊತೆಗೆ ಹೆಚ್ಚಿದ ಒಡನಾಟ, ಪ್ರಧಾನಿ ಮೋದಿಯವರ ‘ಆ್ಯಕ್ಟ್ ಈಸ್ಟ್‌’ ಪಾಲಿಸಿಯ ಮೂಲಕ ಆಗ್ನೇಯ ಈಷ್ಯಾದ ಸಣ್ಣಪುಟ್ಟ ದೇಶಗಳೊಂದಿಗೆ ಭಾರತದ ಆಪ್ತತೆ, ಚೀನಾದ ಮಹತ್ವಾಕಾಂಕ್ಷೆಯ ಆರ್‌ಒಬಿ ಯೋಜನೆಗೆ ಭಾರತದ ಅಡ್ಡಗಾಲು- ಇವೆಲ್ಲವೂ ಚೀನಾವನ್ನು ಕೆಣಕಿವೆ. ಆದರೆ ಭಾರತ ಚೀನಾವನ್ನು ಕೆಣಕುವ ಉದ್ದೇಶದಿಂದಲ್ಲ; ತನ್ನ ಭದ್ರತೆ, ಸಾರ್ವಭೌಮತೆಗಳನ್ನು ಕಾಪಾಡಿಕೊಳ್ಳಲು ಇದೆಲ್ಲವನ್ನು ನಡೆಸಿದೆ.
ಪ್ರಸ್ತುತ ಗಡಿಭಾಗದಿಂದ ಚೀನಾ ಹಿಂದೆಗೆಯಲೂ ಕೆಲವು ಬೆಳವಣಿಗೆಗಳು ಕಾರಣವಾಗಿವೆ. ರಾಜತಾಂತ್ರಿಕ ಮಟ್ಟದ ಮಾತುಕತೆಗಳ ಮೂಲಕ ತಗಾದೆ ಇತ್ಯರ್ಥ, ಗಡಿ ಸಮಸ್ಯೆಗಳನ್ನು ಮಾತುಕತೆಗಳ ಮೂಲಕವೇ ಪರಿಹರಿಸಲು ನಿರ್ಧಾರವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾನಾ ದೇಶಗಳು ಚೀನಾದ ಮೇಲೆ ಒತ್ತಡ ಹೇರಿದುದು, ಭಾರತ ಕೂಡ ಸೈನ್ಯಬಲವನ್ನು ಗಡಿಯಲ್ಲಿ ಜಮಾಯಿಸುವುದು ಹಾಗೂ ರಣರಂಗಕ್ಕೆ ಪ್ರಧಾನಿ ಭೇಟಿಯ ಮೂಲಕ ಚೀನಾದ ತೋಳ್ಬಲಕ್ಕೆ ತಾನು ಜಗ್ಗವುದಿಲ್ಲ ಎಂಬ ದಿಟ್ಟ ಸಂದೇಶ ರವಾನಿಸಿದ್ದು, ಚೀನಾ ಮೂಲದ 59 ಆ್ಯಪ್‌ಗಳನ್ನು ನಿರ್ಬಂಧಿಸುವುದರ ಮೂಲಕ ವಾಣಿಜ್ಯ ಸಮರಕ್ಕೆ ತಾನು ಸಿದ್ಧ ಎಂದು ಸಾರಿದ್ದು, ರೈಲ್ವೆ- ರಸ್ತೆ ಕಾಮಗಾರಿಗಳಲ್ಲಿ ಚೀನಾದ ಹೂಡಿಕೆಗಳನ್ನು ರದ್ದುಗೊಳಿಸಿದ್ದು, ಭಾರತದ ಸಹಾಯಕ್ಕೆ ಬಂದ ಅಮೆರಿಕದ ಮಿಲಿಟರಿ ಬಲದ ಪ್ರದರ್ಶನ- ಇವೆಲ್ಲವೂ ನಾನಾ ಸ್ತರದಲ್ಲಿ ಚೀನಾಕ್ಕೆ ಸರಿಯಾದ ಪ್ರತಿಯೇಟು ನೀಡಿದವು. ಈ ಸಮಗ್ರ ಹೋರಾಟದ ಫಲವೇ ಚೀನಾದ ಹಿಂದಗೆತ.
ಆದರೆ ಇದು ತಾತ್ಕಾಲಿಕ ಅಷ್ಟೇ. ಸ್ವಲ್ಪ ಕಾಲದ ಬಳಿಕ ಮತ್ತೆ ಚೀನಾ ತಗಾದೆ ತೆಗೆಯದೇ ಇರಲಾರದು. ಸ್ವಭಾವತಃ ಅದೊಂದು ವಂಚಕ, ವಿಸ್ತರಣಾಕಾಂಕ್ಷಿ ದೇಶ. ಅದರ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಾಗಲೂ ಮನಸ್ಸಿನೊಳಗೇ ಮಿಲಿಟರಿ ಕಾರ್ಯಾಚರಣೆಯ ಯೋಜನೆಗಳನ್ನೇ ಹೆಣೆಯುತ್ತಿರುತ್ತಾರೆ ಎಂಬುದು ಅಂದಿನ ಚೌ ಎನ್‌ ಲಾಯ್‌ ಮತ್ತು ಇಂದಿಕ ಕ್ಸಿ ಜಿನ್‌ಪಿಂಗ್‌ ಭೇಟಿಗಳಿಂದ ಶ್ರುತಪಟ್ಟಿದೆ. ನಮ್ಮ ರಕ್ಷಣಾಮಂತ್ರಿ ಆಗಿದ್ದ ಜಾರ್ಜ್‌ ಫರ್ನಾಂಡಿಸ್‌ ಅವರು ‘ಚೀನಾ ಒಂದಿಷ್ಟೂ ನಂಬಿಕೆಗೆ ಅರ್ಹವಲ್ಲದ ದೇಶ, ನಮ್ಮ ನಂಬರ್‌ ವನ್‌ ಶತ್ರು’ ಎಂದಿದ್ದರು. ನಮಗೆ ಸೇರಬೇಕಿದ್ದ ಅಕ್ಸಾಯ್‌ ಚಿನ್‌ ಪ್ರಾಂತ್ಯವನ್ನು ಅದು ಆಕ್ರಮಿಸಿಕೊಂಡಿದೆ. ನಮ್ಮ ಶತ್ರು ಪಾಕಿಸ್ತಾನದ ಕೈಗೆ ಕೈ ಬೆಸೆದಿದೆ. ಹೀಗಾಗಿ ಚೀನದ ಬಗ್ಗೆ ಒಂದು ಎಚ್ಚರಿಕೆ ನಮ್ಮಲ್ಲಿ ಸದಾ ಇದ್ದೇ ಇರಬೇಕು. ತಂತ್ರಜ್ಞಾನ ಹಾಗೂ ನಿತ್ಯಬಳಕೆಯ ಸಾಮಗ್ರಿಗಳಲ್ಲಿ ಚೀನಾದ ಅವಲಂಬನೆ ಬಿಟ್ಟು ಆತ್ಮನಿರ್ಭರ ಕಾರ್ಯಕ್ರಮಗಳ ಮೂಲಕ ಸ್ವಾವಲಂಬನೆ ಸಾಧಿಸುವುದರ ಮೂಲಕ ಚೀನಾವನ್ನು ಇನ್ನೊಂದು ಸುತ್ತು ಮಣಿಸಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top