ಅಮ್ಮನಿಂದ ಮಗನಿಗೆ ಹಸ್ತಾಂತರ, ನಂತರ…?

ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ದಿನಗಳು ಸಮೀಪಿಸುತ್ತಿವೆ. ಅವರ ಉತ್ತರಾಧಿಕಾರಿಯಾಗಿ ರಾಹುಲ್ ಗಾಂಧಿ ನೇಮಕ ಆಗುವುದೂ ನಿಚ್ಚಳವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇವೆರಡೂ ಘಟನೆಗಳು ಜರುಗಲು ಹೆಚ್ಚು ಕಾಲ ಹಿಡಿಯುವುದಿಲ್ಲ. ಸೋನಿಯಾ ನಿರ್ಗಮನ ಮತ್ತು ರಾಹುಲ್ ಆಗಮನ ಕ್ಷಣಗಳಿಗೆ ಬೆಂಗಳೂರಲ್ಲಿ ನಡೆಯುವ ಎಐಸಿಸಿ ಅಧಿವೇಶನವೇ ವೇದಿಕೆಯಾಗಲಿದೆ ಎಂಬುದು ಮತ್ತೊಂದು ವಿಶೇಷ.

ಇದು ಕಾಕತಾಳೀಯವೋ ಏನೋ ಗೊತ್ತಿಲ್ಲ, ಸೋನಿಯಾ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲೂ ಕಾಂಗ್ರೆಸ್ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿತ್ತು. ಈಗ ಅವರು ನಿರ್ಗಮಿಸುವ ವೇಳೆಯೂ ಪಕ್ಷ ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದೆ.

ಆ ಕ್ಷಣಗಳನ್ನೊಮ್ಮೆ ಕಣ್ಣಮುಂದೆ ತಂದುಕೊಳ್ಳಬೇಕು. ಡಿಸೆಂಬರ್ 29, 1997. ಹಿರಿಯ ನಾಯಕ ಸೀತಾರಾಮ ಕೇಸರಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿದ್ದರು. ಆಗ ದೆಹಲಿಯ 10, ಜನಪಥದಿಂದ 10 ಸಾಲುಗಳ ಪತ್ರ ಕೇಸರಿ ಕೈ ಸೇರಿತು. ಪತ್ರವನ್ನು ಓದುತ್ತಿದ್ದಂತೆ ಕೇಸರಿ ಮುಖಚಹರೆಯೇ ಬದಲಾಯಿತು. ಕುಸಿದು ಹೋದರು. ‘ಸಬ್ ಕುಚ್ ಖತಂ, ವೋ ಆ ರಹೀ ಹೈ’ ಎಂದು ಕೇಸರಿ ಉದ್ಗಾರ ತೆಗೆದಿದ್ದರು.

ಇಟಲಿ ಸಂಜಾತೆ, ಇಂದಿರಾ ಸೊಸೆ ಸೋನಿಯಾ 1998ರ ಲೋಕಸಭಾ ಚುನಾವಣೆಯ ಪ್ರಚಾರದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆಂದು ಆಗ ಸೋನಿಯಾ ರಾಜಕೀಯ ಕಾರ್ಯದರ್ಶಿಯಾಗಿದ್ದ ದಿ.ರಾಜೀವ ಗಾಂಧಿ ಆಪ್ತ ವಿನ್ಸೆಂಟ್ ಜಾರ್ಜ್ ಲಿಖಿತ ಸಂದೇಶ ರವಾನಿಸಿದ್ದರು!

ಸೀತಾರಾಮ ಕೇಸರಿ ಮಾತ್ರವಲ್ಲ, ಬಹುತೇಕ ಕಾಂಗ್ರೆಸ್ ನಾಯಕರಿಗೂ ಅದು ಅಚ್ಚರಿಯ ಸಮಾಚಾರವೇ ಆಗಿತ್ತು. ಕಾರಣ- ರಾಜೀವ್ ಅಕಾಲಿಕ ಮರಣದ ನಂತರ ಏಳು ವರ್ಷಗಳ ಕಾಲ ತೆರೆಮರೆಯಲ್ಲಿದ್ದ ಸೋನಿಯಾ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಾರೆಂದು ಬಹಳಷ್ಟು ಕಾಂಗ್ರೆಸ್ಸಿಗರು ನಿರೀಕ್ಷೆ ಮಾಡಿರಲಿಲ್ಲ. ಸೀತಾರಾಮ ಕೇಸರಿ ಅಷ್ಟೊಂದು ಸಮರ್ಥರಲ್ಲವಾದ್ದರಿಂದ ಹೆಚ್ಚೆಂದರೆ ಬೇರೊಬ್ಬರು ಅಧ್ಯಕ್ಷರಾಗಿ ನೇಮಕ ಆಗುತ್ತಾರೆಂದೇ ಅನೇಕರು ಭಾವಿಸಿದ್ದರು; ತನಗೇ ಅಧ್ಯಕ್ಷಗಿರಿ ಒಲಿಯಬಹುದೆಂಬ ನಿರೀಕ್ಷೆಯಲ್ಲೂ ಹಲವು ನಾಯಕರಿದ್ದರು. ಆದರೆ ಆದದ್ದೇ ಬೇರೆ.

ಅಗ್ನಿಪರೀಕ್ಷೆಯ ಕಾಲ: ಸೋನಿಯಾ ಅಗಮನಕ್ಕೂ ಪೂರ್ವದಲ್ಲಿ ಕಾಂಗ್ರೆಸ್ ಇಳಿಜಾರಿನ ಹಾದಿಯಲ್ಲಿ ಕಾಲಿಟ್ಟಾಗಿತ್ತು. ಪಿವಿ ನರಸಿಂಹ ರಾವ್ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಮುನ್ನಡೆಸಿ ಪಕ್ಷಕ್ಕೆ ಒಂದಿಷ್ಟು ಶಕ್ತಿ ತುಂಬುವ ಕೆಲಸ ಮಾಡಿದ್ದರು. ಆದರೆ ಅಧಿಕಾರದಲ್ಲಿದ್ದಾಗ ಸೋನಿಯಾರನ್ನು ಸಂಪೂರ್ಣವಾಗಿ ಅಲಕ್ಷ್ಯ ಮಾಡಿದ್ದೇ ಪಿವಿಎನ್​ಗೆ ಮುಳುವಾಗಿ ಪರಿಣಮಿಸಿತು. ಅದೇ ಕಾರಣಕ್ಕೋಸ್ಕರ ಸೋನಿಯಾ ತನ್ನ ಆಗಮನಕ್ಕೆ ಪೀಠಿಕೆಯಾಗಿ ಕಾಂಗ್ರೆಸ್ ಪಕ್ಷವನ್ನು ನರಸಿಂಹ ರಾವ್ ಹಿಡಿತದಿಂದ ತಪ್ಪಿಸಿ ಸೀತಾರಾಮ ಕೇಸರಿ ಕೈಗಿಟ್ಟಿದ್ದರು. ಸೋನಿಯಾ ಮತ್ತು ಅವರ ಕುಟುಂಬಕ್ಕೆ ನರಸಿಂಹ ರಾವ್ ಮೇಲೆ ಯಾವ ತೆರನಾದ ಆಕ್ರೋಶ ಇತ್ತೆಂಬುದು ರಾವ್ ನಿಧನದ ಸಂದರ್ಭದಲ್ಲಿ ಬೆಳಕಿಗೆ ಬಂತು. ಸೋನಿಯಾ ಆದಿಯಾಗಿ ಬಹುತೇಕ ಕಾಂಗ್ರೆಸ್ ನಾಯಕರು ರಾವ್ ಅಂತಿಮ ದರ್ಶನಕ್ಕೂ ಹೋಗಿರಲಿಲ್ಲ. ಕೊನೆಗೆ ಶವಸಂಸ್ಕಾರವೂ ಸರಿಯಾಗಿ ನಡೆಯಲಿಲ್ಲ. ರಾವ್ ಪಾರ್ಥಿವ ಶರೀರದ ಭಾಗಗಳು ಕಾಗೆ, ನಾಯಿ, ನರಿಗಳಿಗೆ ಆಹಾರವಾಗಬೇಕಾಯಿತು. ಅದು ಬೇರೆ ಸಂದರ್ಭದಲ್ಲಿ ವಿಸ್ತ್ರತವಾಗಿ ಚರ್ಚೆ ಮಾಡಬೇಕಿರುವ ವಿಚಾರ, ಇರಲಿ…

ಸೋನಿಯಾ ಚುಕ್ಕಾಣಿ ಹಿಡಿಯುವ ವೇಳೆ ಲೋಕಸಭೆಯಲ್ಲಿ ಆ ಪಕ್ಷದ 141 ಮಂದಿ ಸಂಸದರಿದ್ದರು. ಈಗ ರಾಹುಲ್ ಪಟ್ಟಾಭಿಷೇಕಕ್ಕೆ ಅಣಿಯಾಗುತ್ತಿರುವ ಸನ್ನಿವೇಶದಲ್ಲಿ ಸಂಸದ ಬಲ 40ಕ್ಕೆ ಕುಸಿದಿದೆ. ರಾಜ್ಯಸಭೆಯಲ್ಲೂ ಕಾಂಗ್ರೆಸ್ ಬಲ ಕನಿಷ್ಠ ಸಂಖ್ಯೆಗೆ ಕುಸಿದಿದೆ. ಒಂದು ವೇಳೆ ಸೋನಿಯಾ ನೇತೃತ್ವ ವಹಿಸಿಕೊಳ್ಳದಿದ್ದರೆ ಆ ಪಕ್ಷ ನಾಮಾವಶೇಷವಾಗಿ ಹದಿನೈದು ವರ್ಷ ಕಳೆದುಹೋಗಿರುತ್ತಿತ್ತು. ಹೀಗಾಗಿ ಹತ್ತೊಂಭತ್ತು ವರ್ಷಗಳ ಕಾಲ ಪಕ್ಷದ ಅಸ್ತಿತ್ವ ಕಾಯ್ದುಕೊಂಡ ಶ್ರೇಯಸ್ಸು ಸೋನಿಯಾಗೆ ಸಲ್ಲಬೇಕಾಗುತ್ತದೆ.

ಸೋನಿಯಾ ಸಾಧನೆ ಕಡಿಮೆ ಏನಲ್ಲ!: 2004ರಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಧಿಕಾರಕ್ಕೆ ತಂದದ್ದು ಸೋನಿಯಾರ ಮಹತ್ತರ ಸಾಧನೆ ಎಂದು ನಿಶ್ಚಿತವಾಗಿ ಹೇಳಬಹುದು. ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ‘ಇಂಡಿಯಾ ಶೈನಿಂಗ್’ ಪ್ರಚಾರದ ಅಬ್ಬರದ ನಡುವೆಯೂ ಸದ್ದಿಲ್ಲದೆ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ 167 ಸ್ಥಾನಗಳಲ್ಲಿ ಗೆಲ್ಲುವ ಹಾಗೆ ಮಾಡಿ, ಯುಪಿಎ ಸರ್ಕಾರವನ್ನು ಸ್ಥಾಪನೆ ಮಾಡುವಲ್ಲಿ ಸೋನಿಯಾ ಯಶಸ್ವಿಯಾದರು.

ಸೋನಿಯಾ ನೇತೃತ್ವ ವಹಿಸಿಕೊಳ್ಳಲು ಹೊರಟಾಗ ಹೊರಗಿನಿಂದ ಅಲ್ಲ, ಕಾಂಗ್ರೆಸ್ ಒಳಗಿನಿಂದಲೇ ಬಲವಾದ ಅಪಸ್ವರ ಕೇಳಿಬಂದಿತ್ತು. ಶರದ್ ಪವಾರ್, ಪೂಣೋ ಸಂಗ್ಮಾ, ತಾರಿಕ್ ಅನ್ವರ್ ಸೋನಿಯಾರ ವಿದೇಶಿ ಮೂಲವನ್ನು ಪ್ರಶ್ನೆ ಮಾಡಿದ್ದರು. ಈ ವಿಚಾರವನ್ನು ವಿಪಕ್ಷಗಳೂ ಎತ್ತಿದ್ದವು. ತನ್ನ ವಿದೇಶಿ ಮೂಲದ ವಿವಾದ ಮತ್ತಷ್ಟು ದೊಡ್ಡದಾಗುವುದು ಬೇಡ ಎಂದು ಬಯಸಿದ ಸೋನಿಯಾ ಮತ್ತೊಂದು ಅಚ್ಚರಿಯ ನಿರ್ಧಾರ ತೆಗೆದುಕೊಂಡರು; ಮನಮೋಹನ ಸಿಂಗ್​ರನ್ನು ಪ್ರಧಾನಿ ಮಾಡಿದರು. ಆ ನಿರ್ಧಾರದ ವಿಷಯದಲ್ಲಿ ಅತೃಪ್ತಿ ಹೊಂದಿದವರಲ್ಲಿ ಪ್ರಣಬ್ ಮುಖರ್ಜಿ ಕೂಡ ಒಬ್ಬರಾಗಿದ್ದರು. ಇಲ್ಲಿ ಇನ್ನೂ ಒಂದು ಅಭಿಪ್ರಾಯವಿದೆ. ಅದೇನೆಂದರೆ ಮನಮೋಹನರನ್ನು ಪ್ರಧಾನಿ ಹುದ್ದೆಗೆ ತರುವ ಮೂಲಕ ಸೋನಿಯಾ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದರು ಎಂಬುದು. ಏಕೆಂದರೆ ಸ್ವಂತಿಕೆ, ಸ್ವಾಭಿಮಾನ ಹೊಂದಿದ್ದ ಪ್ರಣಬ್​ರನ್ನು ಪ್ರಧಾನಿ ಮಾಡಿದ್ದರೆ ಯುಪಿಎ ಸರ್ಕಾರ ಬಹಳ ದಿನ ಬಾಳುತ್ತಿರಲಿಲ್ಲ. ಮಿತ್ರಪಕ್ಷಗಳನ್ನು ಸಂಭಾಳಿಸಲೂ ಅವರಿಂದ ಸಾಧ್ಯವಾಗುತ್ತಿರಲಿಲ್ಲ ಎಂಬುದು ಆ ಭಾವನೆಗೆ ಕಾರಣ. ಅಷ್ಟು ಮಾತ್ರವಲ್ಲ, ಮನಮೋಹನರನ್ನು ಪ್ರಧಾನಿ ಮಾಡಿದ ಕ್ರಮ ಸರಿಯಾಗಿಯೇ ಇತ್ತೆಂಬುದು 2008ರಲ್ಲಿ ಮತ್ತೊಮ್ಮೆ ನಿರೂಪಿತವಾಯಿತು. ಆ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ 206 ಸ್ಥಾನ ಗಳಿಸುವಲ್ಲಿ ಸಫಲವಾಯಿತು.

ಸೋನಿಯಾ ಎಡವಿದ್ದೆಲ್ಲಿ?: 2014 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣ ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ, ರಾಹುಲ್ ಜೊತೆಗೆ ಸೋನಿಯಾ ಕೂಡ ಕಾರಣ ಎಂಬುದು ಸೂಕ್ತ ಅಭಿಪ್ರಾಯವಾಗುತ್ತದೆ. ಈ ಮಾತಿಗೆ ಸಮರ್ಥನೆಯಿದೆ.

1. ಯುಪಿಎ ಎರಡನೇ ಅವಧಿಯ ಹೊತ್ತಿಗೆ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಪ್ರಾದೇಶಿಕ ಹಿತಾಸಕ್ತಿ ಮೇಲೆ ಕಣ್ಣಿಟ್ಟವರು ಮತ್ತು ಕಡುಭ್ರಷ್ಟರೇ ತುಂಬಿಕೊಂಡುಬಿಟ್ಟಿದ್ದರು. ಮನಮೋಹನ ಸಿಂಗ್ ಸೋನಿಯಾರಿಂದ ಬರುವ ಆದೇಶಕ್ಕೆ ಕಾಯುವ ಕೈಗೊಂಬೆ ಎಂದು ನಿರೂಪಿತರಾಗಿದ್ದರು. ಮುಂದೆ ರಾಹುಲ್​ಗೋಸ್ಕರ ಮನಮೋಹನ್ ಕುರ್ಚಿ ಕಾಯುವ ಕೆಲಸ ಮಾಡುತ್ತಿದ್ದಾರೆಂದು ಆಡಿಕೊಳ್ಳುವಂತಾಗಿತ್ತು.

2. ಯುಪಿಎ ಭಾಗ-ಎರಡರಲ್ಲಿ ದಯಾನಿಧಿ ಮಾರನ್, ಎ.ರಾಜಾ ಮತ್ತು ಸುರೇಶ್ ಕಲ್ಮಾಡಿ ಅಂಥವರೇ ಮೇಲುಗೈ ಸಾಧಿಸಿದ್ದರು. ಮನಮೋಹನ ಸಿಂಗ್ ಅಸಹಾಯಕರಾಗಿದ್ದರು, ಸೋನಿಯಾ ನೋಡಿಯೂ ಮೌನ ವಹಿಸುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ.

3. ಭ್ರಷ್ಟಾಚಾರದ ಆರೋಪಗಳ ಜೊತೆಗೆ ಅಣ್ವಸ್ತ್ರ ಪ್ರಸರಣ ನಿಷೇಧದಂತಹ ತಪ್ಪು ನಿರ್ಧಾರದ ಪರ ಭಾರತ ಸರ್ಕಾರ ಮತ ಚಲಾಯಿಸಿದ್ದು ವ್ಯಾಪಕ ಟೀಕೆಗೆ ಕಾರಣವಾಯಿತು.

4. 2008ರಲ್ಲಿ ಯುಪಿಎ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ತಕ್ಷಣ ರಾಹುಲ್ ಕಾಂಗ್ರೆಸ್​ನ ಭವಿಷ್ಯದ ವಾರಸುದಾರ ಎಂದು ಬಿಂಬಿಸಲು ಸೋನಿಯಾ ಉತ್ಸುಕತೆ ತೋರಿದರು. ಪಕ್ಷದ ಉಪಾಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಿದರು. ಆದರೆ ದೇಶದ ಜನರಿಗೆ ರಾಹುಲ್ ಬಗ್ಗೆ ಅಂಥ ಆಸಕ್ತಿ ಮತ್ತು ಆಕರ್ಷಣೆ ಎರಡೂ ಇರಲಿಲ್ಲ. ಅದು ನರೇಂದ್ರ ಮೋದಿ ಮತ್ತು ಕೇಜ್ರಿವಾಲ್ ಅಂಥವರ ಹಾದಿಯನ್ನು ಸುಗಮಗೊಳಿಸಿತು.

5. ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿ ಸಾಮರ್ಥ್ಯವನ್ನು ತಪ್ಪಾಗಿ ಲೆಕ್ಕಹಾಕಿತು. ಎಲ್.ಕೆ. ಆಡ್ವಾಣಿ ಅವರಂಥ ಹಿರಿಯರ ವಿರೋಧದಿಂದ ಮೋದಿ ಸೋಲನುಭವಿಸುತ್ತಾರೆಂದು ಕಾಂಗ್ರೆಸ್ ನಾಯಕತ್ವ ಭಾವಿಸಿತು. ಕಾಂಗ್ರೆಸ್ ಬದಲು ಗಾಂಧಿ ಮನೆತನದ ವಿರುದ್ಧ ಸಮರ ಸಾರಿದ ಮೋದಿ ಜನಮನ್ನಣೆ ಗಳಿಸಿ ಅಧಿಕಾರ ಹಿಡಿದರು.

ಕಾಂಗ್ರೆಸ್ ಪಕ್ಷದ ದುರ್ದೈವಕ್ಕೆ ತೆಲಂಗಾಣ ಹೊಸ ರಾಜ್ಯ ರಚನೆ, ರೈತರ ಸಾಲಮನ್ನಾ, ಬಡವರ ಉದ್ಧಾರ ಇವ್ಯಾವ ಘೊಷಣೆಗಳೂ ಪ್ರಾಯೋಗಿಕವಾಗಿ ನೆರವಿಗೆ ಬರಲಿಲ್ಲ. ಕೊನೇ ಪಕ್ಷ ಅಲ್ಪಸಂಖ್ಯಾತರು, ಬುಡಕಟ್ಟು ಪಂಗಡದವರು, ಹಿಂದುಳಿದ ವರ್ಗಗಳು ಪಕ್ಷವನ್ನು ಕೈ ಹಿಡಿದರೆ ಸಾಕು, ಹಾಲಿ ಬಲವನ್ನು ಕಾಯ್ದುಕೊಳ್ಳಲು ಅಡ್ಡಿ ಇಲ್ಲ ಎಂಬ ಸೋನಿಯಾ ನಿರೀಕ್ಷೆ ಕೂಡ ಹುಸಿ ಆಯಿತು. ಭಾರತದ ಮತದಾರ ಪ್ರಾಂತ, ಜಾತಿ, ಭಾಷೆ ಇವೆಲ್ಲವನ್ನೂ ಮೀರಿದ ಹೊಸ ಲೆಕ್ಕಾಚಾರದಲ್ಲಿ ತೊಡಗಿದ್ದು ಸೋನಿಯಾ ಆದಿಯಾಗಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸೆಕ್ಯುಲರ್ ನಾಯಕರ ಅರಿವಿಗೆ ಬರಲೇ ಇಲ್ಲ.

ರಾಹುಲ್ ಸವಾಲು ಮತ್ತೂ ದೊಡ್ಡದು: ರಾಹುಲ್​ಗೆ ಹೋಲಿಸಿದರೆ ಸೋನಿಯಾ ಚಾಣಾಕ್ಷ ಮತ್ತು ಸಮರ್ಥ ನಾಯಕಿ ಎಂಬುದರಲ್ಲಿ ಎರಡು ಮಾತಿಲ್ಲ. ಸೋನಿಯಾರೇ ಸೋತಿರುವಾಗ ರಾಹುಲ್ ಗೆಲ್ಲಬಲ್ಲರೇ ಎಂಬುದು ಪ್ರಶ್ನೆ.

ಈಗಾಗಲೇ ಬಹುತೇಕ ಪ್ರದೇಶ ಕಾಂಗ್ರೆಸ್ ಘಟಕಗಳು ರಾಹುಲ್ ನಾಯಕತ್ವವನ್ನು ಅನುಮೋದಿಸಿವೆ. ಸೋನಿಯಾ ಕೂಡ ಮಗನಿಗೆ ಅಧಿಕಾರ ಹಸ್ತಾಂತರಿಸಲು ಪೂರ್ಣ ಮನಸ್ಸು ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ, 132 ವರ್ಷ ಹಳೆಯ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ನೆಹರು ಗಾಂಧಿ ಮನೆತನದ ನಾಲ್ಕನೇ ತಲೆಮಾರಿನ ಐದನೆಯವರಾಗುತ್ತಾರೆ ರಾಹುಲ್. ಈ ಸಂದರ್ಭದಲ್ಲಿ ರಾಹುಲ್ ಪಾಲಿಗೆ ಎನ್​ಡಿಎ ಸರ್ಕಾರದ ನೋಟು ರದ್ದತಿ, ಜಿಎಸ್​ಟಿ ಜಾರಿ ಪರಿಣಾಮ ಜಿಡಿಪಿ ಕುಸಿತ ಕಂಡಿದೆ ಎಂಬುದೊಂದೇ ಮೋದಿ ಆಡಳಿತವನ್ನು ಟೀಕಿಸಲು ಸಿಕ್ಕಿರುವ ಅಸ್ತ್ರ. ಆರ್ಥಿಕತೆಯ ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿರುವುದನ್ನು ನೋಡಿದರೆ ರಾಹುಲ್​ಗೆ ಆ ಒಂದು ಅಸ್ತ್ರವೂ ಪ್ರಯೋಜನಕ್ಕೆ ಬರುತ್ತದೋ ಇಲ್ಲವೋ! ಕಾಂಗ್ರೆಸ್​ನಲ್ಲಿ ರಾಹುಲ್ ತನ್ನದೇ ಆದ ಒಂದು ಗುಂಪನ್ನು ಸೃಷ್ಟಿಸಿಕೊಂಡಿದ್ದಾರೆ. ಅದು ರಾಜಕೀಯ ಅನನುಭವಿಗಳ ಗುಂಪೆಂದರೆ ತಪ್ಪಲ್ಲ. ರಾಜಕೀಯ ಅನುಭವ ಇರುವ ಹಿರಿಯ ನಾಯಕರು ಸೋನಿಯಾ ಜೊತೆಗಿದ್ದಷ್ಟು ಹಿತಾನುಭವವನ್ನು ರಾಹುಲ್ ಜೊತೆಗೆ ಕಾಣುತ್ತಿಲ್ಲ.

ಸಾಲು ಸಾಲು ಚುನಾವಣೆ: ಈ ದೀಪಾವಳಿ ಸಂಭ್ರಮ ಮುಗಿಯುತ್ತಿದ್ದಂತೆ ಹಿಮಾಚಲದಿಂದ ಆರಂಭವಾಗಿ ಗುಜರಾತ್, ಒಡಿಶಾ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ತಾನ ಸೇರಿ ಒಟ್ಟು 11 ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆ ಎಲ್ಲದರಲ್ಲೂ ಗೆಲ್ಲುವುದು ರಾಹುಲ್​ಗೆ ಎದುರಾಗುವ ಮೊದಲ ಸವಾಲು. ಅದು ಮುಗಿಯುವ ಹೊತ್ತಿಗೆ ಮುಂದಿನ ಲೋಕಸಭಾ ಚುನಾವಣೆಯ ಕಾವು ಆರಂಭವಾಗುತ್ತದೆ. ಹೀಗಾಗಿ ಈ ರಾಜ್ಯಗಳ ಪೈಕಿ ಅರ್ಧದಷ್ಟಾದರೂ ಗೆದ್ದುಕೊಂಡರೆ ರಾಹುಲ್ ರಾಜಕೀಯವಾಗಿ ಪ್ರಸ್ತುತರಾಗುತ್ತಾರೆ. ಇಲ್ಲ ಅಂದರೆ ಇಲ್ಲ.

ಮೋದಿ ಎದುರಿಸುವ ಬಗೆ ಹೇಗೆ?: ಪ್ರಧಾನಿ ಮೋದಿ ಜಾತಿ, ಪ್ರದೇಶ, ಪಕ್ಷ, ಸಂಘಟನೆಯನ್ನೂ ಮೀರಿ ಬೆಳೆದಿದ್ದಾರೆ. ಮೋದಿ ನಾಮಬಲವೇ ವೋಟುಗಳನ್ನು ತರುತ್ತದೆ ಎಂಬುದು ಕಳೆದ ಲೋಕಸಭಾ ಚುನಾವಣೆ ಮತ್ತು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಿರೂಪಿತವಾಗಿದೆ. ನೋಟು ರದ್ದತಿ, ಜಿಎಸ್​ಟಿ ಜಾರಿ ಕುರಿತ ಅಪಸ್ವರವೂ ಮೋದಿ ಪ್ರತಿಷ್ಠೆಯನ್ನು ಮುಕ್ಕಾಗಿಸಲು ಸಫಲವಾದಂತಿಲ್ಲ. ಹೀಗಿರುವಾಗ ಸೋನಿಯಾ ಅನುಪಸ್ಥಿತಿಯಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸಲು ರಾಹುಲ್ ಪವಾಡವನ್ನೇ ಮಾಡಬೇಕಾದೀತು!

ಕೊನೇ ಮಾತು: ವಿದೇಶಗಳಲ್ಲಿ ರಾಹುಲ್ ಮತ್ತು ಮೋದಿ ನಡುವೆ ಇರುವ ವ್ಯತ್ಯಾಸವನ್ನು ಹೀಗೆ ಹೇಳುತ್ತಾರಂತೆ-ದೇವಾಲಯಗಳ ಮೂಲಕವೇ ಜೀವನ ಆರಂಭಿಸಿದ ಮೋದಿ ಈಗ ಆಧುನಿಕ ಸ್ಟಾರ್ಟಪ್​ಗಳ ಯುಗದಲ್ಲಿ ಬಿಜಿ ಆಗಿದ್ದಾರೆ; ಪಾಶ್ಚಾತ್ಯ ನಡೆನುಡಿಗಳಿಂದ ಜೀವನ ಶುರುಮಾಡಿದ ರಾಹುಲ್ ಈಗ ದೇವಾಲಯಗಳ ದರ್ಶನ ಮಾಡುವುದರಲ್ಲಿ ಮುಳುಗಿದ್ದಾರೆ ಅಂತ!

ಹೌದಲ್ಲವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top