ಇವೆಲ್ಲವೂ ಕೋವಿಡ್‌ ಸಾವುಗಳಲ್ಲ – ಕೊರೊನಾ ಸೋಂಕಿನ ಬಗ್ಗೆ ಅತಿಯಾದ ಭಯ ಸಲ್ಲ

ಕೊರೊನಾ ಸೋಂಕು ಪತ್ತೆ ಹಾಗೂ ಸಾವಿನ ಪ್ರಕರಣಗಳಲ್ಲಿ ಕಳೆದ ಹದಿನೈದು ದಿನಗಳಿಂದ ಪ್ರತಿದಿನವೂ ಒಂದೊಂದು ಹೊಸ ದಾಖಲೆ ಸೃಷ್ಟಿಯಾಗುತ್ತಲೇ ಇದೆ. ಬುಧವಾರ ರಾಜ್ಯದಲ್ಲಿ ಒಟ್ಟಾರೆ 87 ಸಾವು ಹಾಗೂ ರಾಜಧಾನಿಯಲ್ಲೇ 60 ಮಂದಿ ಸತ್ತಿರುವುದು ವರದಿಯಾಗಿದೆ. ಈ ಸಾವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇವರಲ್ಲಿ ಎಲ್ಲರೂ ಒಂದಲ್ಲ ಒಂದು ಕೋಮೋರ್ಬಿಡಿಟೀಸ್‌ ಅಥವಾ ಪೂರ್ವಕಾಯಿಲೆಗಳಿಂದ ನರಳುತ್ತಿದ್ದುದು ಖಚಿತವಾಗಿದೆ. ಹೆಚ್ಚಿನ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದವರಿಗೆ ಕೊರೊನಾ ಸೋಂಕಿನ ಪರಿಣಾಮ ಈ ಕಾಯಿಲೆಗಳು ಉಲ್ಬಣಾವಸ್ಥೆಗೇರಿ ಮೃತಪಟ್ಟಿದ್ದಾರೆ. ಅಂದರೆ, ನಾವು ‘ಕೊರೊನಾ ಸಾವು’ ಎಂದು ಹೇಳುತ್ತಿರುವುದೆಲ್ಲ ನಿಜಕ್ಕೂ ಕೊರೊನಾ ಸಾವುಗಳೇನಲ್ಲ. ಬರಿಯ ಕೋವಿಡ್‌ನಿಂದಾಗಿಯೇ ಸತ್ತವರು ಯಾರೂ ಇಲ್ಲ. ಸಾವಿಗೆ ಕಾರಣವಾದುದು ಪೂರ್ವಕಾಯಿಲೆಗಳು. ಇದನ್ನು ನೋಡಿದಾಗ, ನಾವು ಕೋವಿಡ್‌ ಪ್ರಕರಣಗಳ ಮರಣಗಳನ್ನು ವ್ಯಾಖ್ಯಾನಿಸಬೇಕಾದ ರೀತಿಯೇ ಬೇರೆ ಇದೆ ಅನಿಸುತ್ತದೆ.
ಇತ್ತೀಚೆಗೆ ಕರ್ನಾಟಕದಲ್ಲಿಯೇ 90 ವರ್ಷಕ್ಕೂ ಮೇಲ್ಪಟ್ಟ ಹಲವರು ಕೋವಿಡ್‌ ಸೋಂಕಿತರಾಗಿ, ಸೂಕ್ತ ಚಿಕಿತ್ಸೆ ಪಡೆದ ಬಳಿಕ ಗುಣಮುಖರಾಗಿ ಮನೆಗೆ ಮರಳಿದ್ದು ವರದಿಯಾಗಿತ್ತು. ಕೋವಿಡ್‌ ಸೋಂಕಿತರಲ್ಲಿ ಸಾವಿರಾರು ಮಂದಿಗೆ ಅದು ಬಂದು ಹೋದದ್ದು ಕೂಡ ಗೊತ್ತಾಗುವುದಿಲ್ಲ. ಸೋಂಕಿತರೆಂದು ಪಾಸಿಟಿವ್‌ ವರದಿ ಬಂದ ಸಾವಿರಾರು ಮಂದಿಗೆ ಅದರ ಯಾವ ಲಕ್ಷಣಗಳೂ ಇರುವುದಿಲ್ಲ. ಸುಮಾರು ಶೇ.80ರಷ್ಟು ಮಂದಿ ಅಸಿಮ್ಟಮ್ಯಾಟಿಕ್‌(ಲಕ್ಷಣಗಳಿಲ್ಲದ ಸೋಂಕಿತರು) ಆಗಿರುತ್ತಾರೆ. ಕೋವಿಡ್‌ ಪ್ರಕರಣಗಳಲ್ಲಿ ಮರಣ ಪ್ರಮಾಣ ಶೇ.2ಕ್ಕೂ ಕಡಿಮೆ. ಜಾಗತಿಕವಾಗಿ ನ್ಯುಮೋನಿಯಾ, ಎಚ್‌1ಎನ್‌1, ಡೆಂಗೆ ಜ್ವರಗಳಿಂದ ಇದಕ್ಕೂ ಹೆಚ್ಚಿನ ಪ್ರಮಾಣದ ಜನ ಸಾಯುತ್ತಾರೆ.
ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ನಮ್ಮ ಮುಂದಿನ ಉಪಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಕೋವಿಡ್‌ ಸೋಂಕು ಹಬ್ಬುವುದನ್ನು ತಡೆಯಲು ಲಾಕ್‌ಡೌನ್‌ ಒಂದೇ ಶಾಶ್ವತ ಪರಿಹಾರವಾಗಲು ಸಾಧ್ಯವಿಲ್ಲ. ಲಾಕ್‌ಡೌನ್‌ ಜತೆಗೆ ಬಿಗಿಯಾದ ಆರೋಗ್ಯಸೇವೆ ಹೊಂದಿದ್ದ ಚೀನಾ ಈ ಸೋಂಕನ್ನು ಜಯಿಸಿದೆ. ನಮ್ಮಲ್ಲಿ ಸೋಂಕಿಗಿಂತಲೂ ಅದರ ಭೀತಿಯೇ ಹೆಚ್ಚಿನ ಹಾನಿಯನ್ನು ಮಾಡುತ್ತಿದೆ. ಕೋವಿಡ್‌ನ ಘೋರತೆ ಕಿವಿಯಿಂದ ಕಿವಿಗೆ ಹರಡುತ್ತಿರುವಾಗ ತನ್ನ ಘೋರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರಲ್ಲಿ ಮಾಧ್ಯಮಗಳ ಪಾತ್ರವೂ ಇರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಕೋವಿಡ್‌ ಬಂದಿದೆ, ಹಬ್ಬುತ್ತಿದೆ ಹಾಗೂ ಲಸಿಕೆ ದೊರೆಯುವವರೆಗೂ ಮುಂದೆಯೂ ನಾವು ಅದರೊಂದಿಗೇ ಬಾಳಬೇಕಿದೆ. ಆದರೆ ಈ ಸೋಂಕಿನಿಂದ ಅತ್ಯಧಿಕ ಹಾನಿಗೀಡಾಗುವವರು ಯಾರೆಂದು ನಮಗೆ ತಿಳಿದಿದೆ. ಅವರನ್ನು ರಕ್ಷಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು.
ಸದ್ಯ ಕೋವಿಡ್‌ ಸೋಂಕಿನೊಂದಿಗೆ ಅಂಟಿಸಲ್ಪಟ್ಟಿರುವ ಭಯಾನಕತೆಯಿಂದಾಗಿಯೇ ನಮಗೆ ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಎದುರಿಸಲು ಆಗುತ್ತಿಲ್ಲ. ಕೋವಿಡ್‌ ಸೋಂಕು ತಮಗೆ ಇದೆಯೆಂಬುದು ಗೊತ್ತಾದಾಗ ಭಯದಿಂದ ಹೃದಯಾಘಾತವಾದವರು, ಆತ್ಮಹತ್ಯೆ ಮಾಡಿಕೊಂಡವರು ಇದ್ದರು ಎಂಬುದೇ ಮುಂದಿನ ತಲೆಮಾರಿಗೆ ವಿನೋದದ ಸಂಗತಿಯಾಗಿ ಕೇಳಿಸಬಹುದು. ವೈದ್ಯರು ಚಿಕಿತ್ಸೆಗೆ ಹಿಂಜರಿಯುತ್ತಿರುವುದು, ಉಸಿರಾಟದ ಗಂಭೀರ ತೊಂದರೆಯಿಂದ ಆಸ್ಪತ್ರೆಗೆ ಬಂದವರಿಗೆ ಚಿಕಿತ್ಸೆ ಸಿಗದಂತಾಗುತ್ತಿರುವುದು, ಸೋಂಕಿತರನ್ನು ಅಸ್ಪೃಶ್ಯರೆಂಬಂತೆ ನಡೆಸಿಕೊಳ್ಳುವುದು, ಖಾಸಗಿ ಆಸ್ಪತ್ರೆಗಳು ಹಾಸಿಗೆ ಇಲ್ಲವೆನ್ನುತ್ತಿರುವುದು, ಸರಕಾರದ ಅತಿಯಾದ ಅವಲಂಬನೆ, ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಅಂಜಿಕೆ ಇವೆಲ್ಲವೂ ಕೋವಿಡ್‌ ಇತರ ಜ್ವರಗಳಂತೆಯೇ ಒಂದು ಸಹಜ ಕಾಯಿಲೆ ಎಂಬುದು ಅರ್ಥವಾದ ಕೂಡಲೇ ಮಾಯವಾಗುತ್ತವೆ. ನೂರಾರು, ಸಾವಿರಾರು ರೋಗಕಾರಕ ವೈರಸ್‌ಗಳಿಗೆ ಮನುಷ್ಯನ ದೇಹ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿದೆ. ಹಾಗೇ ಕೋವಿಡ್‌ ವೈರಸ್‌ಗೂ ನಾವು ಸಮುದಾಯದಲ್ಲಿ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳಬೇಕಿದೆ. ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ವಹಿಸುವುದರೊಂದಿಗೆ ನಾವು ದೈನಂದಿನ ಚಟುವಟಿಕೆಗಳ ಯಥಾಸ್ಥಿತಿಗೆ ಮರಳಬೇಕು. ಹಾಗಾಬೇಕಿದ್ದರೆ ನಾವು ಪೂರ್ವಕಾಯಿಲೆ ಇರುವವರನ್ನೂ ಹಿರಿಯ ನಾಗರಿಕರನ್ನೂ ಜಾಗರೂಕತೆಯಿಂದ ನೋಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡು ಮುನ್ನಡೆಯಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top