ಕೃಷಿ ಭೂಮಿ ಮುಕ್ತ ಖರೀದಿ

– 1961ರ ಕರ್ನಾಟಕ ಭೂಸುಧಾರಣೆ ಕಾಯಿದೆಗೆ ರಾಜ್ಯ ಸರಕಾರದ ತಿದ್ದುಪಡಿ
– ಇನ್ನು ಯಾರು ಬೇಕಾದರೂ, ಕೃಷಿಕರಲ್ಲದಿದ್ದರೂ ಕೃಷಿ ಜಮೀನು ಖರೀದಿಸಬಹುದು.

ವಿಕ ಸುದ್ದಿಲೋಕ, ಬೆಂಗಳೂರು.
ಕೃಷಿಯೇತರ ಆದಾಯ ಹೊಂದಿದವರು ಕೃಷಿ ಭೂಮಿ ಖರೀದಿಸಲು ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರೊಂದಿಗೆ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಲು ರಹದಾರಿ ಸಿಕ್ಕಿದೆ.
ಕರ್ನಾಟಕ ಭೂಸುಧಾರಣೆ ಕಾಯಿದೆ 1961ರ ಕಲಂ 79ಎ ಮತ್ತು 79ಬಿಗೆ ತಿದ್ದುಪಡಿ ತರಲು ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತ ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಲಿದೆ. ರಾಜ್ಯಪಾಲರಿಂದ ಅಂಕಿತ ಬಿದ್ದ ಬಳಿಕ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಲು ಸಾಧ್ಯ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮುಂದೆ ಅಪಾಯ ಉಂಟಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ, ಇದರಿಂದ ‘ಕೃಷಿಗೆ ಉತ್ತೇಜನ’ ಸಿಗಲಿದೆ ಎನ್ನುವುದು ಸರಕಾರದ ವಾದ.
‘‘ಭೂಸುಧಾರಣೆ ಕಾಯಿದೆಗೆ ತಿದ್ದುಪಡಿ ತರುವುದರಿಂದ ಕೃಷಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಗೆ ಸಹಾಯಕವಾಗಲಿದೆ. ಬಹಳ ಜನರಿಗೆ ಕೃಷಿ ಭೂಮಿ ಖರೀದಿಸಲು ಎದುರಾಗುತ್ತಿದ್ದ ಅಡ್ಡಿಯನ್ನು ನಿವಾರಿಸಲಾಗುತ್ತಿದೆ. ಆಂಧ್ರ, ತಮಿಳುನಾಡುಗಳಲ್ಲಿ ಇಂತಹ ಕಾಯಿದೆ ಇಲ್ಲ. ಹಾಗಾಗಿ ಭೂಸುಧಾರಣೆ ಕಾಯಿದೆ 1961ರ ಕಲಂ 79 ಮತ್ತು 79ಬಿಗೆ ತಿದ್ದುಪಡಿ ತರಲಾಗುತ್ತಿದೆ. ಈ ಸಂಬಂಧ ಹೈಕೋರ್ಟ್ ಆದೇಶವೂ ಇದೆ,’’ ಎಂದು ಸಭೆ ಬಳಿಕ ಕಂದಾಯ ಸಚಿವ ಆರ್. ಅಶೋಕ್, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ತಿದ್ದುಪಡಿ ಪರಿಣಾಮವೇನು?
ಕೃಷಿಯೇತರ ಆದಾಯ ಉಳ್ಳವರು ಕೃಷಿ ಭೂಮಿ ಖರೀದಿಸಲು ಈಗ ನಿರ್ಬಂಧವಿದೆ. 25 ಲಕ್ಷ ರೂ.ವರೆಗೆ ಕೃಷಿಯೇತರ ಆದಾಯ ಹೊಂದಿದವರು ಕೃಷಿ ಭೂಮಿ ಕೊಂಡುಕೊಳ್ಳಬಹುದು. ಕಾಯಿದೆ ತಿದ್ದುಪಡಿ ಬಳಿಕ ಈ ನಿರ್ಬಂಧ ತೆರವುಗೊಳ್ಳಲಿದೆ. ಆ ಬಳಿಕ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು. ಅದಕ್ಕೆ ವಾರ್ಷಿಕ ಆದಾಯ ಮಿತಿ ಷರತ್ತು ಅನ್ವಯಿಸದು. ಇದರಿಂದ ಉದ್ಯಮಿಗಳು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿರುವವರಿಗೆ ಕೃಷಿ ಜಮೀನು ಖರೀದಿ ಸುಲಭವಾಗಲಿದೆ.

ಕುಟುಂಬಕ್ಕೆ 108 ಎಕರೆ ಮಿತಿ
ಕೃಷಿಯೇತರ ಆದಾಯ ಹೊಂದಿದವರು ಮಳೆ ಆಶ್ರಯದ ಭೂಮಿಯಲ್ಲಿ ಗರಿಷ್ಠ 108 ಎಕರೆ ಖರೀದಿಸಬಹುದು, ನೀರಾವರಿ ಇಲ್ಲವೇ ತೋಟಗಾರಿಕೆ ಭೂಮಿಯಾಗಿದ್ದರೆ ಗರಿಷ್ಠ 54 ಎಕರೆ ಖರೀದಿಸಬಹುದು ಎಂಬ ಷರತ್ತು ವಿಧಿಸಲಾಗುತ್ತಿದೆ. ಐವರು ಸದಸ್ಯರು ಇರುವುದನ್ನು ಒಂದು ಕುಟುಂಬವೆಂದು ಪರಿಗಣಿಸಲಾಗುತ್ತಿದೆ.
ಯಾರಿಗೆ ಲಾಭ?
ಉದ್ಯಮಿಗಳು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರು, ಕೋಟ್ಯಂತರ ರೂ. ಆದಾಯ ಹೊಂದಿದವರಿಗೆ ಲಾಭ. ಕೃಷಿ ಹೆಸರಲ್ಲಿ ಜಮೀನು ಖರೀದಿಸಿ ಬಳಿಕ ಪರಿವರ್ತನೆ ಮಾಡುವ ಸಾಧ್ಯತೆ.

ಯಾಕೆ ಲಾಭ?
ಈ ಮೊದಲು 25 ಲಕ್ಷ ರೂ. ವರೆಗೆ ಕೃಷಿಯೇತರ ಆದಾಯ ಹೊಂದಿದವರು ಮಾತ್ರ ಕೃಷಿ ಭೂಮಿ ಖರೀದಿಸಬಹುದಿತ್ತು. ಈ ನಿರ್ಬಂಧ ತೆರವಾಗುವುದರಿಂದ ಹಣವುಳ್ಳವರಿಗೆ ಜಮೀನು ಖರೀದಿಸುವುದು ಸುಲಭ.

ಯಾರಿಗೆ ನಷ್ಟ?
ಸಣ್ಣ ಮತ್ತು ಅತಿ ಸಣ್ಣ ರೈತರು

ಯಾಕೆ ನಷ್ಟ?
ಕೃಷಿಕರಲ್ಲಿ ಶೇ.80ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಹವಾಮಾನ ವೈಪರೀತ್ಯ, ಬೆಳೆ ಹಾನಿ ಮತ್ತಿತರ ಕಾರಣದಿಂದ ಈ ರೈತರು ಸಂಕಷ್ಟದಲ್ಲಿದ್ದಾರೆ. ಒಮ್ಮೆಲೇ ಕೈತುಂಬ ಹಣ ಸಿಗುವ ಆಸೆಯಿಂದ ಈ ರೈತರು ಭೂಮಿ ಮಾರಾಟ ಮಾಡುವ ಸಾಧ್ಯತೆ ಹೆಚ್ಚು. ಈ ರೈತರು ಒಮ್ಮೆ ಭೂಮಿ ಕಳೆದುಕೊಂಡರೆ ಮತ್ತೆ ಜಮೀನು ಕೊಂಡುಕೊಳ್ಳುವುದು ಕಷ್ಟಸಾಧ್ಯ.

ಭೂಸುಧಾರಣೆ ಕಾಯಿದೆ ತಿದ್ದುಪಡಿ ಸಂಬಂಧ ವಿಧಾನಮಂಡಲ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆಸಿದ ಬಳಿಕವೇ ವಿಧೇಯಕ ಪಾಸು ಮಾಡಲಾಗುವುದು. ಈ ಸಂಬಂಧ ಆತುರದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ.
– ಮಾಧುಸ್ವಾಮಿ, ಕಾನೂನು ಸಚಿವ

ಈಗಲೂ ಕೃಷಿಕರದಲ್ಲದವರು ಕೃಷಿ ಭೂಮಿ ಖರೀದಿಸಲು ಆಸಕ್ತಿ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಯಿದೆಯನ್ನು ಸರಳೀಕರಣಗೊಳಿಸಲಾಗುತ್ತಿದೆ.
-ಆರ್. ಅಶೋಕ್, ಕಂದಾಯ ಸಚಿವ

ಭೂ ಸುಧಾರಣೆ ಕಾಯಿದೆ 1961ರ ಸೆಕ್ಷ ನ್ 79ಎ ಮತ್ತು 79ಬಿ ರದ್ದು ಸ್ವಾಗತಾರ್ಹ. ಇದೊಂದು ಐತಿಹಾಸಿಕ ನಿರ್ಣಯ. ಕಳೆದ 45 ವರ್ಷಗಳಿಂದ ಈ ಕಾನೂನು ತೊಡಕಾಗಿತ್ತು. ಇದನ್ನು ರದ್ದುಪಡಿಸುವ ಮೂಲಕ ರಾಜ್ಯ ಸರಕಾರ ಅತ್ಯುತ್ತಮ ಕ್ರಮ ಕೈಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ.
-ಕೆ.ಸಿ.ಕೊಂಡಯ್ಯ, ವಿಧಾನ ಪರಿಷತ್ ಸದಸ್ಯ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top