ನಾಡು ಕಟ್ಟಲು ಬೇಕು ಹೊಸ ಮಾದರಿ! ಮರು ನಿರ್ಮಾಣದ ಮಹತ್ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು

– ಎನ್‌.ರವಿಶಂಕರ್‌. 

ಕೊರೊನಾ ಸಂಕಷ್ಟವನ್ನು ಎದುರಿಸುವ ನಮ್ಮ ತಂತ್ರಗಾರಿಕೆಯಲ್ಲಿ ಕೊನೆಗೆ ‘ಹೊಂದಾಣಿಕೆ’ಯೇ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿ, ನಾವು ಆತ್ಮನಿರ್ಭರರಾಗಿ ಬದುಕಲು ಕಲಿಯಬೇಕು ಎನ್ನುವ ಪಾಠ ಪ್ರಮುಖವಾಯ್ತು. ಕಳೆದ ಅಂಕಣದಲ್ಲಿ, ದೇಶಗಳು ಆತ್ಮನಿರ್ಭರರಾಗುವುದು ಮತ್ತು ಉದಾರನೀತಿ ಅನುಸರಿಸುವುದು ಪರಸ್ಪರ ವಿರೋಧಿ ಧೋರಣೆಗಳಾಗಿರಬೇಕಾಗಿಲ್ಲ ಎನ್ನುವ ಬಗ್ಗೆ ಬರೆದಿದ್ದೆ. ಅದು ಅಂತಾರಾಷ್ಟ್ರೀಯ ವಿಚಾರವಾಯ್ತು. ಅದಕ್ಕೂ ಮುನ್ನ ನಾವು ಪರಿಹರಿಸಿಕೊಳ್ಳಬೇಕಾದ್ದು ದೇಶದೊಳಗಿನ ಮತ್ತು ರಾಜ್ಯದೊಳಗಿನ ಸಂಕಷ್ಟಗಳನ್ನು. ಅದೃಷ್ಟವಶಾತ್‌, ಈ ಸಂಕಷ್ಟ ಸಮಯವನ್ನು ಸಂಕ್ರಮಣ ಕಾಲ ಎಂದು ನೋಡುವ ಸಕಾರಾತ್ಮಕ ಮನಃಸ್ಥಿತಿಯುಳ್ಳವರು (ವಿಜಯ ಕರ್ನಾಟಕ ಪತ್ರಿಕೆಯವರೂ ಸೇರಿದಂತೆ), ‘ಕರುನಾಡ ಕಟ್ಟೋಣ ಬನ್ನಿ’ ಎಂದು ಕರೆ ಕೊಡುತ್ತಿದ್ದಾರೆ. ಈ ಕರೆಯನ್ನು ಕೇಳಿದಾಗ, ಎರಡು ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ. ಒಂದು, ನಾಡು ಕಟ್ಟುವುದು ಎಂದರೇನು? ಎರಡು, ಕಟ್ಟುವವರು ಯಾರು?
ನಾಡು ಕಟ್ಟುವುದು ಎಂದರೇನು?
ಯದ್ಭಾವಂ ತದ್ಭವತಿ. ಎಲ್ಲರಿಗೂ ಅವರವರಿಗೆ ಹೊಳೆದದ್ದೇ ಅರ್ಥ. ಆದರೆ, ನಾಡು ಕಟ್ಟುವ ವಿಷಯದಲ್ಲಿ ನಾವು common denominator ಕಂಡುಕೊಳ್ಳಬೇಕಾಗಿರುವುದರಿಂದ, ಇದನ್ನು ಸರ್ವರ ಸಮಗ್ರ ಏಳಿಗೆ ಎಂದು ಅಥೈರ್‍ಸಬಹುದೇನೋ. ಈ ಸಂಕಷ್ಟ ಕಾಲದಲ್ಲಿ ಇಂತಹ ಏಳಿಗೆ ಆಗಬೇಕಾದರೆ, ನಾವು ಹಿಂದೆ ಅನುಸರಿಸಿದ ಕ್ರಮವನ್ನೇ ಈಗಲೂ ಅನುಕರಿಸಿದರೆ ಸಾಲದು. ಅದಕ್ಕೆ ಬೇಕಿರುವುದು Paradigm Shift ಅಂದರೆ, ಸ್ಥಾಪಿತ ಮಾದರಿಗಳನ್ನು ಪ್ರಶ್ನಿಸಿ ಹೊಸ ಮಾದರಿಗಳನ್ನು ರೂಪಿಸಿಕೊಳ್ಳಬೇಕಾದ ಮುಕ್ತ ಮನಃಸ್ಥಿತಿ. ಕೊರೊನಾ ಇಂಥದ್ದೊಂದು ಪ್ಯಾರಡೈಮ್‌ ಷಿಫ್ಟ್‌ಗೆ ದಾರಿ ಮಾಡಿಕೊಟ್ಟಿದೆ. ತಜ್ಞರ ಪ್ರಕಾರ, ಯಾವಾಗ ಪ್ಯಾರಡೈಮ್‌ ಷಿಫ್ಟ್‌ ಆಗುತ್ತದೆಯೋ ಆಗೆಲ್ಲ ನಮ್ಮ ಲೆಕ್ಕಾಚಾರಗಳು ಸೊನ್ನೆಯಿಂದ ಆರಂಭಗೊಳ್ಳುತ್ತವೆ. ಇಲ್ಲಿಯವರೆಗೂ ಇದ್ದ ಮಾದರಿಗಳು ಗೌಣವಾಗಿಬಿಡುವುದರಿಂದ, ಅವುಗಳ ಬಳಕೆ ಹೊಸ ಕ್ರಮದಲ್ಲಿ ಹಿಂದಿನ ಉತ್ಪತ್ತಿಯನ್ನು ನೀಡದಿರುವುದರಿಂದ, ನಾವು ಹೊಸ ಮಾದರಿಯ ಲೆಕ್ಕವನ್ನು ತಾತ್ವಿಕವಾಗಿ ಸೊನ್ನೆಯಿಂದಲೇ ಆರಂಭಿಸಬೇಕಾದ್ದು ಅನಿವಾರ್ಯ. ಕೊರೊನಾ ಕಾಲದಲ್ಲಿ ಜಗತ್ತಿಗೆ Reset Button ಒತ್ತಲಾಗಿದೆ ಎಂದು ಹಲವರು ವ್ಯಾಖ್ಯಾನ ಮಾಡಿರುವುದರ ಒಟ್ಟಾರ್ಥವನ್ನೂ ನಾವು ಈ ಶೂನ್ಯಮೂಲಕ್ಕೆ ತಾಳೆ ಹಾಕಬಹುದು. ಅರ್ಥಾತ್‌, ನಾಡು ಕಟ್ಟುವುದು ಎಂದಾಗ, ಥಿಯರಿಯಲ್ಲಾದರೂ, ಈವರೆಗೂ ಕಟ್ಟಲಾಗಿರುವ ಕ್ರಮ/ ಮಾದರಿಗಳನ್ನು ಕುರುಡಾಗಿ ಅನುಸರಿಸದೆ, ವಿಷಯವನ್ನು ಆಮೂಲಾಗ್ರವಾಗಿ ನೋಡುವುದು. ಮೊದಲಿನಿಂದ ಮಾಡುವುದು. ಮರುನಿರ್ಮಾಣ.
ಅಯ್ಯೋ ಸ್ವಾಮಿ. ಇದು ಅತಿಯಾಯ್ತು! ಈಗಿರುವುದನ್ನು ಏನು ಮಾಡುವುದು? ಅದನ್ನೆಲ್ಲವನ್ನೂ ಬಿಸಾಡಿಬಿಡಬೇಕೆ? ಇಲ್ಲಿಯವರೆಗಿನ ಪ್ರಯತ್ನವೆಲ್ಲವನ್ನೂ ವ್ಯರ್ಥ ಎಂದು ಪರಿಗಣಿಸಬೇಕೆ? ಖಂಡಿತ ಇಲ್ಲ, ಬದಲಿಗೆ, ಈಗಿರುವುದನ್ನು ಸೊನ್ನೆಯ ಕೆಳಗಿನ ಲೆಕ್ಕಕ್ಕೆ ತೆಗೆದುಕೊಳ್ಳುವುದು! ಅಂದರೆ, ನವನಿರ್ಮಾಣಕ್ಕೆ ಬೇಕಾದ ತಳಹದಿ, ಈಗಿರುವ ನಾಡು. ಹೆಚ್ಚೇನನ್ನೂ ಕೆಡಹಬೇಕಿಲ್ಲ. ಆದರೆ, ಹೊಸದನ್ನು ಕಟ್ಟುವಾಗ ಹಳೆಯ ಮಾದರಿಗಳ ಪೂರ್ವಾಗ್ರಹವೂ ಇರಬೇಕಾಗಿಲ್ಲ. ಹಾಗಾದಾಗ, ಈಗಿರುವುದು base ಆಗುತ್ತದೆ. ಅದನ್ನು ನಮ್ಮ ಬಳಿ ಇರುವ ಸಂಪನ್ಮೂಲ ಎಂದಿಟ್ಟುಕೊಳ್ಳಬಹುದು. ಈಗಿರುವ ಸಂಪನ್ಮೂಲವನ್ನು ಬಳಸಿ ನಮ್ಮ ಕನಸಿನ ನಾಡನ್ನು ಸೃಷ್ಟಿಸಿಕೊಳ್ಳುವ ಕೆಲಸ ಆರಂಭಿಸಬಹುದು.
ನಾಡು ಕಟ್ಟುವವರು ಯಾರು?
ಥಿಯರಿ ಸುಲಭ. ಇದನ್ನು ಕಾರ್ಯರೂಪಕ್ಕೆ ತರುವುದು ಹೇಗೆ? ಒಂದೆರಡು ಉದಾಹರಣೆಗಳನ್ನು ನೋಡೋಣ.
ಉದ್ಯಮ- ರಾಜ್ಯವಾಗಲಿ, ದೇಶವಾಗಲಿ ಸ್ವಾತಂತ್ರ್ಯಾನಂತರದ ಭಾರತದಲ್ಲಿ ನಮ್ಮ ಗಮನವೆಲ್ಲ ಇದ್ದದ್ದು ಬೃಹತ್‌ ಕೈಗಾರಿಕೆಗಳು ಮತ್ತು ಅತಿದೊಡ್ಡ ಉದ್ಯಮಗಳ ಬಗ್ಗೆ. ದೊಡ್ಡ ಪ್ರಮಾಣದ ಅವಶ್ಯಕತೆಗಳನ್ನು ಕಡಿಮೆ ಬೆಲೆಯಲ್ಲಿ ಒಟ್ಟಿಗೇ ಪೂರೈಸಲು Mass Production ಅವಶ್ಯಕವಿದ್ದುದರಿಂದ, ಬೃಹತ್‌ ಉದ್ಯಮ/ ಕೈಗಾರಿಕೆಗಳ ಮೇಲಿನ ಫೋಕಸ್‌, ಆ ಕಾಲಕ್ಕೆ ಸರಿಯಾದ ನಿಲುವೇ ಆಗಿತ್ತು. ಜೊತೆಗೆ, ಏನನ್ನಾದರೂ ತಯಾರಿಸಲು ಬೇಕಾದ wherewithal/ಹಣ, ಜ್ಞಾನ, ಸಂಪನ್ಮೂಲ ಇತ್ಯಾದಿ ಸಾಧನಾನುಕೂಲಗಳು ಕೆಲವೇ ಜನರ ಬಳಿ ಇದ್ದುದರಿಂದ, ಅಂಥವರನ್ನು ಕೇಂದ್ರವಾಗಿಟ್ಟುಕೊಂಡು ನಾಡು ಕಟ್ಟುವ ಕೆಲಸ ನಡೆಯಿತು.
ಈಗ, ಶಿಕ್ಷ ಣ ಮತ್ತು ಕೌಶಲಗಳು ಹೆಚ್ಚು ಜನರಲ್ಲಿ ಲಭ್ಯವಿವೆ. ಅದಕ್ಕೆ ಪೂರಕವಾಗಿ ಬಂಡವಾಳ ಹೊಂದಿಸಿಕೊಳ್ಳುವ ಸಾಧನಗಳೂ ಹೆಚ್ಚಿವೆ. ಒಟ್ಟಿನಲ್ಲಿ wherewithalನ ಕೊರತೆ ಹಿಂದಿನಷ್ಟಿಲ್ಲ. ಹೀಗಾಗಿ ಜನರ ಆತ್ಮವಿಶ್ವಾಸ ಹೆಚ್ಚಿದೆ. ಹಾಗೆಯೇ, ಜನರ ಅವಶ್ಯಕತೆಗಳಲ್ಲಿಯೂ ಒಬ್ಬಗೆಯಿಲ್ಲ. ‘ಬೇಕು’ಗಳೂ ಹೆಚ್ಚಾಗಿವೆ. ಆದ್ದರಿಂದ, ಈಗ ಬೇಕಿರುವುದು ಬಂಡವಾಳ ಕೇಂದ್ರಿತ ಬೃಹತ್‌ ಉದ್ಯಮಗಳಲ್ಲ. ಬದಲಿಗೆ, ಅನೇಕ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು/ ಕೈಗಾರಿಕೆಗಳು. ಇವುಗಳನ್ನು ಸೃಷ್ಟಿಸಲು ಸರಕಾರದಿಂದ ಉತ್ತೇಜನ ದೊರೆಯುತ್ತದೆ ಎಂದು ಗೊತ್ತಾದರೆ, ಅನೇಕರು ಅಂತಹ ನವೋದ್ಯಮಗಳನ್ನು ಮತ್ತು ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಮುಂದೆ ಬರುತ್ತಾರೆ.
ಆದರೆ, ಈ ಹೊಸ ಬಗೆಯ ಉದ್ದಿಮೆ ಸೃಷ್ಟಿಗೆ ಬೇಕಾಗಿರುವ ಪೂರಕ ಪ್ರಕ್ರಿಯೆ ಮತ್ತು ಮನಃಸ್ಥಿತಿ- ಇವೆರಡಕ್ಕೂ ಬೇಕು Paradigm Shift. ಏಕೆಂದರೆ, ಒಂದೆರಡು ಇಲಾಖೆಗಳು (ಕೈಗಾರಿಕೆ, ವಾಣಿಜ್ಯ) ಮತ್ತು ಒಂದಿಬ್ಬರು ಮಂತ್ರಿಗಳ ಹತೋಟಿಯಲ್ಲಿ ನಡೆಯುತ್ತಿದ್ದ ಕೈಗಾರಿಕೆ ಮತ್ತು ಔದ್ಯಮಿಕ ವ್ಯವಹಾರಕ್ಕೂ, ಮೇಲೆ ವರ್ಣಿಸಿದ ವಿಕೇಂದ್ರೀಕೃತ ಮಾದರಿಗೂ ಅಗಾಧವಾದ ವ್ಯತ್ಯಾಸವಿದೆ. ಹಳೆಯದನ್ನು ನಿರ್ವಹಿಸಲು ಕಟ್ಟುನಿಟ್ಟಾದ ಕಾನೂನು- ನಿಯಮಾವಳಿಗಳು ಸಾಕಿದ್ದವು. ಮಾತ್ರವಲ್ಲ ಅವು ತೀರಾ ಸಾಮಾನ್ಯ ರೂಪದಲ್ಲಿದ್ದರೂ, ಬಹುತೇಕ ಉದ್ಯಮ ಹಾಗೂ ಕೈಗಾರಿಕೆಗಳಿಗೆ ಅನ್ವಯವಾಗಿಬಿಡುತ್ತಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಹಾಗಿರುವಂತಿಲ್ಲ. ನವೋದ್ಯಮಗಳ ವ್ಯಾಪ್ತಿ ತೀರಾ ನಿರ್ದಿಷ್ಟವಾಗಿರುವುದರಿಂದ, ಹೆಚ್ಚಿನ ಸಂದರ್ಭಗಳಲ್ಲಿ ಸಾಮಾನ್ಯ ನಿಯಮಗಳು ಅನ್ವಯವಾಗುವುದಿಲ್ಲ. ಎಷ್ಟೋ ನವೋದ್ಯಮಗಳು ಈವರೆಗೂ ಕಂಡರಿಯದ ಹೊಸ ಉದ್ಯಮವರ್ಗಗಳನ್ನೇ (business category) ಸೃಷ್ಟಿಸುತ್ತವೆ. ಒಂದೊಂದನ್ನು ಗ್ರಹಿಸಲೂ ಉನ್ನತಮಟ್ಟದ ಪರಿಣತಿ ಮತ್ತು ತಜ್ಞಾಭಿಪ್ರಾಯ ಬೇಕಾಗುತ್ತದೆ. ಹೀಗಿರುವಾಗ, ಒಂದೆರಡು ಇಲಾಖೆಗಳ ಕೈಯಲ್ಲಿ ಹತೋಟಿ ಉಳಿದುಬಿಟ್ಟರೆ, ನೀತಿರೂಪಣೆಯ ಗತಿ ಕುಂಠಿತವಾಗುತ್ತದೆ.
ಮಾಡಬೇಕಾದ್ದೇನು? ಎಲ್ಲ ಇಲಾಖೆಗಳಿಗೆ ಮತ್ತು ಮಂತ್ರಾಲಯಗಳಿಗೆ, ಅವುಗಳಿಗೆ ಸಂಬಂಧಪಟ್ಟ ಕಿರು ಉದ್ಯಮಗಳನ್ನು ಸೃಷ್ಟಿಸುವ ಸ್ವಾತಂತ್ರ್ಯ ನೀಡುವುದು. ಅದಕ್ಕೆ ಪೂರಕವಾದ ನೀತಿ ಮತ್ತು ಕಾರ್ಯಯೋಜನೆ ರೂಪಿಸುವುದು. ಈಗ ಮಾಡಿರುವಂತೆ ನಿಯಮಾವಳಿಗಳನ್ನು ಸಡಿಲಿಸಿ ಶೀಘ್ರಗತಿಯಲ್ಲಿ ಉದ್ಯಮ ಸ್ಥಾಪನೆಯಾಗುವಂತೆ ಮಾಡಿದರಷ್ಟೇ ಸಾಲದು (ಕೇವಲ ವೇಗದಿಂದಾಗುವ ಅಪಾಯಗಳನ್ನು ಮತ್ತೊಮ್ಮೆ ಚರ್ಚಿಸೋಣ). ಬೇಕಿರುವುದು ಇಲಾಖಾ- ಕೇಂದ್ರಿತ, ಪರಿಣತಿ- ಬೆಂಬಲಿತ ವ್ಯವಸ್ಥೆ. ಆದರೆ, ಹಾಗೆ ಮಾಡಲು ದೂರದೃಷ್ಟಿಯೊಂದೇ ಸಾಲದು. ಸದರಿ ಇಲಾಖೆ ಮತ್ತು ಮಂತ್ರಾಲಯಗಳನ್ನು ಈಗಿರುವ ನಿಯಂತ್ರಣಾ ಕೇಂದ್ರಗಳಿಂದ empowerment centres ಸಬಲೀಕರಣ ಕೇಂದ್ರಗಳಾಗಿಸುವ ಸಮಗ್ರ ಮಾರ್ಪಾಟಿನ ಅಗತ್ಯವಿದೆ. ಈ Paradigm Shift ಸಾಧ್ಯವಾಗಬೇಕಾದರೆ, ಅದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ತಕ್ಷ ಣವೇ ನೇಮಿಸಿಕೊಳ್ಳುವುದರಿಂದ ಹಿಡಿದು, ಆಯಾ ಇಲಾಖೆಗಳಲ್ಲಿ ಔದ್ಯಮಿಕ ಸೃಷ್ಟಿಗೆ ಅಗತ್ಯವಾದ ಬಜೆಟ್‌ ಸ್ಥಾಪಿಸುವವರೆಗೆ ಆಮೂಲಾಗ್ರ ಬದಲಾವಣೆಯಾಗಬೇಕು.
ಒಟ್ಟಿನಲ್ಲಿ, ಈಗ ಉದ್ಯೋಗ-ಸೃಷ್ಟಿ ಮಾಡಲು ಹೆಣಗಾಡುತ್ತಿರುವ ಇಲಾಖೆಗಳು ಉದ್ಯಮ-ಸೃಷ್ಟಿ ಮಾಡುವ ಗುಂಬಗಳಾಗಿ ಪರಿವರ್ತನೆಗೊಂಡರೆ, ಹೊಸ ನಾಡು ಕಟ್ಟುವ ಕೆಲಸ ಸುಲಭವಾಗುತ್ತದೆ. ಆಗ, ಕಟ್ಟುವ ಆ ಕೆಲಸವನ್ನು ಆಯಾ ಕ್ಷೇತ್ರಗಳಲ್ಲಿ- ಕಲಿತ, ನುರಿತ, ನಿಷ್ಣಾತ, ಸ್ವಾವಲಂಬಿ- ನವೋದ್ಯಮಿಗಳೇ ಮಾಡುತ್ತಾರೆ! ಆದರೆ, ಅದಕ್ಕೆ ಬೇಕಿರುವುದು ಹಳೆಯ ಕ್ರಮವನ್ನು ಬದಿಗೊತ್ತಿ ಹೊಸದನ್ನು ಆಲಂಗಿಸುವ ಮನೋವೃತ್ತಿ. ವ್ಯಕ್ತಿಗಳಲ್ಲಿ ಇಂತಹ ಮನೋವೃತ್ತಿಯನ್ನು ಬಿತ್ತುವುದಕ್ಕಿಂತ ವ್ಯವಸ್ಥೆಯಲ್ಲಿ ಬಿತ್ತುವುದು ಇನ್ನೂ ಕಷ್ಟದ ಕೆಲಸ.
ಆದರೆ, ಅದನ್ನು ಮಾಡದೆ ವಿಧಿಯಿಲ್ಲ. ಈ ದೇಶವನ್ನು ಕಟ್ಟುವ ಶಕ್ತಿ ಇರುವುದು micro entrepreneursಗೆ ಮಾತ್ರ! ಏಕೆಂದರೆ, ಉದ್ಯೋಗ ಸೃಷ್ಟಿ ಸರಕಾರದಿಂದ ದೊಡ್ಡ ಪ್ರಮಾಣದ ಹಣವನ್ನು ಬೇಡುತ್ತದೆ. ಅಂತಹ ವ್ಯವಸ್ಥೆಯನ್ನು ನಿರ್ವಹಿಸುವ ಮತ್ತು ಹತೋಟಿಯಲ್ಲಿಡುವ ವ್ಯವಸ್ಥೆಯನ್ನೂ ಬೇಡುತ್ತದೆ. ಅವೆರಡೂ ನಮ್ಮ ನಾಡಿಗೆ ಬೇಕಾದ ಪ್ರಮಾಣದಲ್ಲಿ ಸರಕಾರಗಳ ಬಳಿ ಇಲ್ಲ ಎನ್ನುವುದು ಗೊತ್ತಿರುವ ವಿಷಯವೇ. ವಾರ್ಷಿಕ ಬಜೆಟ್‌ಗಳಲ್ಲಿ ದೊಡ್ಡ ಅಂಕಿಸಂಖ್ಯೆಗಳು ಕಂಡರೂ, ದಿನನಿತ್ಯದ ವಹಿವಾಟುಗಳಲ್ಲಿ ಬರಿಗೈ ಸರಕಾರಗಳೇ ಕಾಣಸಿಗುವುದು ಈ ಕಾರಣಕ್ಕಾಗಿಯೇ. ನಮ್ಮ ದೇಶದ ಜನಸಂಖ್ಯೆಗೆ ಅನುಗುಣವಾಗಿ ಪ್ರಗತಿ ಕಾಣಬೇಕಾದರೆ, demographic dividend/ ಜನಸಂಖ್ಯೆಯಿಂದ ಪ್ರಾಪ್ತಿಯಾಗುವ ಲಾಭ ಪಡೆಯಬೇಕಾದರೆ, ಜನರಿಗೂ ಉದ್ಯಮಗಳಿಗೂ ಇರುವ ಅನುಪಾತ ಕಡಿಮೆಯಾಗಬೇಕು. ಅಂದರೆ, ಉದ್ಯಮಗಳ ಸಂಖ್ಯೆಯಲ್ಲಿ ಗಣನೀಯವಾದ ಹೆಚ್ಚಳವಾಗಬೇಕು. ಅದು, ದೊಡ್ಡ ಅಥವ ಮಧ್ಯಮ ಪ್ರಮಾಣದ ಉದ್ಯಮಗಳ ಸೃಷ್ಟಿಯಿಂದ ಸಾದ್ಯವಿಲ್ಲ. ಬೇಕಿರುವುದು ಸಣ್ಣ ಮತ್ತು ಅತಿಸಣ್ಣ ಉದ್ಯಮಗಳು.
ಭಾರತದಲ್ಲಿ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳ (ಎಂಎಸ್‌ಎಂಇ)ಗಳ ಬಗ್ಗೆ ಆಖ್ಯಾನವಂತೂ ಹೆಚ್ಚುತ್ತಿದೆ. ಆದರೆ, ಅಷ್ಟು ಸಾಲದು. ಏಕೆಂದರೆ, ನಾವು ಎಂಎಸ್‌ಎಂಇಗಳನ್ನು ಬದುಕಿಸುತ್ತೇವೆ ಎಂಬಲ್ಲಿಗೆ ಅನೇಕ ಆಖ್ಯಾನಗಳು ಮತ್ತು ಅವುಗಳಿಂದ ಹರಿದುಬರುವ ಯೋಜನೆಗಳು ಸೀಮಿತವಾಗಿವೆ. ಬೆಳೆಯುವ ನವೋದ್ಯಮಗಳಿಗೆ ಕೃಪೆಗಿಂತಲೂ ಬೇಕಿರುವುದು ಆರೈಕೆ. ಎರಡಕ್ಕೂ ಅಗಾಧವಾದ ವ್ಯತ್ಯಾಸವಿದೆ. ಬದುಕಿಸಿದಂಥವು ಪ್ರತಿಕೂಲ ವಾತಾವರಣವನ್ನು ತಡೆಯಲಾರವು. ಆರೈಕೆಗೆ ಪೋಷಿಸುವ, ಬೇರು ಗಟ್ಟಿಮಾಡುವ ಗುಣವಿದೆ. ಎಂಎಸ್‌ಎಂಇಗಳಿಗೆ ಸಾಲ ಕೊಟ್ಟು ನೇವರಿಸಿದರಷ್ಟೇ ಸಾಲದು. ಬೆಂಬಲ ನೀಡಿ ಬೆಳೆಸುತ್ತಲೇ, ಅವುಗಳನ್ನು ಉತ್ತರದಾಯಿಗಳಾಗಿಸುವ ಸುಭದ್ರ ವ್ಯವಸ್ಥೆ ಕಲ್ಪಿಸಬೇಕು. ಹಣಬಲವೊಂದರಿಂದಲೇ ಅದು ಸಾಧ್ಯವಿಲ್ಲ. ಇಲಾಖಾಕೇಂದ್ರಿತ ವ್ಯವಸ್ಥೆಯಲ್ಲಿ, ಪರಿಣತರನ್ನು ಒಳಗೊಂಡು, ನವೋದ್ಯಮಕರ್ತರಿಗೆ ಬೇಕಾದ Intellectual Capital ನೀಡುವ ದಕ್ಷ ವೇದಿಕೆ ಸಿದ್ಧಗೊಳ್ಳಬೇಕು. ಅದಕ್ಕಾಗಿ ನವಮಾದರಿ ಸೃಷ್ಟಿಯಾಗಬೇಕು. ಪ್ಯಾರಡೈಮ್‌ ಷಿಫ್ಟ್‌, ಘೋಷವಾಕ್ಯವಾಗಬೇಕು.
ಉದ್ಯಮದ ಬಗ್ಗೆ ಹೇಳಿದ್ದು ಉದಾಹರಣೆಗೆ ಮಾತ್ರ. ಇದೇ ತರಹದ ಆಮೂಲಾಗ್ರ ಬದಲಾವಣೆಗಳು ಶಿಕ್ಷ ಣ, ಆರೋಗ್ಯ, ಕೃಷಿ ಮೊದಲಾದ ಇಲಾಖೆಗಳಲ್ಲಿಯೂ ಬೇಕು. ಉದಾಹರಣೆಗೆ, ಶಿಕ್ಷ ಣದ ವಿಷಯಕ್ಕೆ ಬಂದರೆ, ಈ ವರ್ಷ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ ಎನ್ನುವ ಪ್ರಶ್ನೆ ಎದ್ದಿರುವ ಹೊತ್ತಿನಲ್ಲಿಯೇ, Paradigm Shift ಆಗಿರುವುದರಿಂದ ಮೂಲಭೂತ ಬದಲಾವಣೆಗಳನ್ನು ತರುವ ಅವಕಾಶವೂ ಒದಗಿಬಂದಿದೆ. ಬೋಧನೆ ಆಧಾರಿತ Instruction Based ಕಲಿಕಾಕ್ರಮದಿಂದ ಅನುಭವಕೇಂದ್ರಿತ Experiential ಕಲಿಕೆಯ ಕಡೆಗೆ ಪಯಣಿಸಲು ಇದೇ ಸಕಾಲ. ಏಕೆಂದರೆ ಅದಕ್ಕೆ ಬೇಕಾದ ಸೌಲಭ್ಯಗಳು ಮತ್ತು ಸಲಕರಣಗಳನ್ನು ಕಟ್ಟಕಡೆಯ ವಿದ್ಯಾರ್ಥಿಯವರೆಗೆ ವಿಸ್ತರಿಸಲು ಡಿಜಿಟಲ್‌ ವೇದಿಕೆಗಳು ಲಭ್ಯವಿವೆ. ಅವನ್ನು ಕೊನೆಯವರೆಗೆ ತಲುಪಿಸುವ ಜವಾಬ್ದಾರಿಯನ್ನು ಸರಕಾರ ವಹಿಸಬೇಕಿದೆ.
ಕಟ್ಟುವುದು ಬಹಳಷ್ಟಿದೆ. ಕೆಲವೇ ಕೆಲವನ್ನು ಕೆಡಹಿ, ಆದರೆ ಬಹಳಷ್ಟನ್ನು ಉಳಿಸಿಕೊಂಡು ಹೊಸದನ್ನು ನಿರ್ಮಿಸಬೇಕಿದೆ. ಕರುನಾಡು ಕಟ್ಟುವ ವಿಷಯ ಬಂದಾಗ ಗೋಪಾಲಕೃಷ್ಣ ಅಡಿಗರ ‘ಕಟ್ಟುವೆವು ನಾವು’ ಪದ್ಯ ನೆನಪಾಗಲೇಬೇಕು. ‘ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು’ ಎಂದು ಆರಂಭವಾಗುವ ಪದ್ಯದ ಕೊನೆಯ ಸಾಲುಗಳನ್ನು ಗಮನಿಸಿ:
ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಸುಖದ, ಸಮದುಃಖದ, ಸಮಬಗೆಯ
ಸಾಮರಸ್ಯದ ಸಾಮಗಾನ ಲಹರಿಯ ಮೇಲೆ
ತೇಲಿ ಬರಲಿದೆ ನೋಡು ನಮ್ಮ ನಾಡು
ಅಂದು ಅವರು ಭಾವನಾತ್ಮಕವಾಗಿ ಹೇಳಿದ ಸಾಲುಗಳನ್ನು ಇಂದು ನಾವು ಆರ್ಥಿಕ ಸಾಧ್ಯತೆಯಾಗಿ ಬದಲಿಸಬಹುದಾಗಿದೆ. ‘ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ’ ಎನ್ನುವುದು Shared Economyಯ ಮೂಲಾಶಯ. ಈ ಹೊತ್ತು, ಲಕ್ಷಾಂತರ ಮಂದಿ micro entrepreneurಗಳು ಸೃಷ್ಟಿಸುವ, ಸ್ವಾವಲಂಬಿಯೂ ಪರಸ್ಪರ- ಸಹಕಾರಿಯೂ ಆದ ನವೀನ ಆರ್ಥಿಕ ವ್ಯವಸ್ಥೆಯಿಂದ ಮಾತ್ರವೇ ‘ಸಮಬಗೆಯ ಸಾಮರಸ್ಯದ ಸಾಮಗಾನ ಲಹರಿ’ಯ ಸಾಕಾರ ಸಾಧ್ಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top