ಯೂರೋಪಿನ ದೇಶಗಳೆಲ್ಲ ಭಾಷೆಯ ಆಧಾರದ ಮೇಲೆಯೇ ರಚಿತವಾಗಿವೆ. ಆ ದೇಶಗಳಲ್ಲಿ ಹೀಗೆ ಪರಭಾಷಾ ಮಾಧ್ಯಮದ ಶಾಲೆಗಳು ತಲೆಯೆತ್ತಿ ದೇಶಭಾಷೆಗಳನ್ನು ನುಂಗುವ ಸನ್ನಿವೇಶವುಂಟಾದರೆ ಅಲ್ಲಿಯ ನ್ಯಾಯಾಲಯಗಳು ಹೇಗೆ ಸ್ಪಂದಿಸಬಹುದು? ಪೋಷಕರ ಇಚ್ಛಾಸ್ವಾತಂತ್ರೃದ ಅಡಿಯಲ್ಲಿ ದೇಶಭಾಷೆಗಳ ಭವಿಷ್ಯ ಏನಾಗಬಹುದು? ಇಂಥ ಪ್ರಶ್ನೆಗಳನ್ನು ನಮ್ಮ ಸಮಾಜವೂ ನ್ಯಾಯಾಲಯಗಳೂ ಎದುರಿಸಬೇಕಾಗುತ್ತದೆಯಲ್ಲವೆ?
ನ್ಯಾಯಾಲಯವು ತೀರ್ಮಾನಿಸಬೇಕಾಗಿದ್ದುದು ಶಿಕ್ಷಣದ ಮೂಲಭೂತತತ್ತ್ವವನ್ನು. ಈ ತತ್ತ್ವವನ್ನು ಪ್ರಪಂಚದ ಖ್ಯಾತ ಶಿಕ್ಷಣವೇತ್ತರು, ಸರ್ಕಾರವೇ ನೇಮಿಸಿದ ಆಯೋಗಗಳು ಹಾಗೂ ಗಾಂಧೀಜಿಯಂಥ ಪ್ರಯೋಗಶೀಲರು ಚರ್ಚಿಸಿ ಮಾತೃಭಾಷೆಯೇ ಕಲಿಕೆಗೆ ಸಮರ್ಥ ಸಾಧನವೆಂದು ತೀರ್ಮಾನಿಸಿರುವುದರಿಂದ ನ್ಯಾಯಾಲಯವು ಈ ತೀರ್ಮಾನವನ್ನು ಒಪ್ಪಿಕೊಳ್ಳುವುದೆಂಬ ನಿರೀಕ್ಷೆಯಿತ್ತು. ಅಥವಾ ವಿಷಯತಜ್ಞರ ಬೇರೊಂದು ಸಮಿತಿಯನ್ನು ರಚಿಸಿ ಅದರ ಅಭಿಪ್ರಾಯವನ್ನು ಕೇಳಬಹುದೆಂಬ ಆಶಯವೂ ಇತ್ತು. ತಾಂತ್ರಿಕ ವಿಷಯಗಳು ತಮ್ಮ ಮುಂದೆ ಬಂದಾಗ ನ್ಯಾಯಾಲಯಗಳು ಹೀಗೆ ಮಾಡಿದ ಉದಾಹರಣೆಗಳು ಇವೆ. ಆದರೆ ಶಿಕ್ಷಣದಂಥ ವ್ಯಕ್ತಿತ್ವವನ್ನು ರಾಷ್ಟ್ರದ ಅಭಿವೃದ್ಧಿಯನ್ನು ರೂಪಿಸುವ ವಿಷಯದಲ್ಲಿ ಅದು ಶಿಕ್ಷಣದ ಮತ್ತು ನ್ಯಾಯದಾನದ ಆಶಯಗಳನ್ನು ತಂದೆತಾಯಿಯರ ಹಕ್ಕಿನೊಳಕ್ಕೆ ಸೇರಿಸಿರುವುದು ಅರ್ಥಮಾಡಿಕೊಳ್ಳಲು ಕಷ್ಟಕರವಾಗಿದೆ.
ಪ್ರೌಢಶಾಲೆ ಪೂರ್ತಿಯಾಗಿ, ಎಂದರೆ ಹಿಂದಿನ ಹನ್ನೊಂದು ವರ್ಷದ ಶಿಕ್ಷಣಾವಧಿ ಅಥವಾ ಈಗಿನ ಹತ್ತು ವರ್ಷದ ಶಿಕ್ಷಣಾವಧಿ, ಕನ್ನಡವೇ ಶಿಕ್ಷಣದ ಮಾಧ್ಯಮವಾಗಿರಬೇಕೆಂಬ ಆರಂಭದ ನಿಲುವನ್ನು ಕನ್ನಡಪರದವರು ಇಂಗ್ಲಿಷ್ ಮಾಧ್ಯಮಪರದವರೊಡನೆ ಹೋರಾಡಿ ಹೋರಾಡಿ ಬಳಲಿ ಈಗ ತಮ್ಮ ಬೇಡಿಕೆಯನ್ನು ಪ್ರಾಥಮಿಕ, ಎಂದರೆ ನಾಲ್ಕು ವರ್ಷದ ಶಿಕ್ಷಣಾವಧಿಗೆ ಇಳಿಸಿಕೊಂಡಿರುವಂತೆ ತೋರುತ್ತದೆ. ಈ ಅವಧಿಯ ಪುಟ್ಟಮಕ್ಕಳು ಕಲಿಯುವ ಅ ಆ ಇ ಈ, ಬಸವ, ಕಮಲ, ಆಟ, ಊಟ, ಮನೆ ಕಡೆಗೆ ಓಟ ಎಂಬ ಭಾಷಾಜ್ಞಾನವು ಮುಂದೆ ಆಂಗ್ಲಮಾಧ್ಯಮಕ್ಕೆ ಹೋದ ನಂತರ ಎಷ್ಟು ದಿನ ನೆನಪಿನಲ್ಲಿ ಉಳಿದೀತು? ಹಿಂದೆ ಇದ್ದ ನಾಲ್ಕು ವರ್ಷದ ಪ್ರಾಥಮಿಕ, ಇನ್ನು ನಾಲ್ಕು ವರ್ಷದ ಮಾಧ್ಯಮಿಕ, ಅನಂತರದ ಮೂರು ವರ್ಷದ ಪ್ರೌಢಶಾಲೆಯ ಯೋಜನೆಯು ಮಕ್ಕಳ ವಯಸ್ಸು, ಬುದ್ಧಿಯ ಬೆಳವಣಿಗೆ ಮತ್ತು ವಿಷಯದ ಕ್ರಮಿಕ ಪ್ರೌಢತೆಗಳ ಸೃಷ್ಟಿಯಿಂದ ವೈಜ್ಞಾನಿಕವಾಗಿತ್ತು. ನನಗೆ ಅನ್ನಿಸುವುದೆಂದರೆ: ಪ್ರಾಥಮಿಕ ಹಂತದ ನಾಲ್ಕು ವರ್ಷಗಳಲ್ಲಿ ಮಕ್ಕಳ ದಿನನಿತ್ಯದ ವಸ್ತು, ವ್ಯಕ್ತಿಗಳು, ಸಂಬಂಧಗಳು, ಸರಳವಾದ ಗಣಿತ, ಅವರ ಮನಸ್ಸನ್ನು ಮುದಗೊಳಿಸುವ ಪದ್ಯಗಳು, ಕಲ್ಪನಾಶಕ್ತಿಯನ್ನು ಬೆಳೆಸುವ ಹಾಗೂ ನೈತಿಕಪ್ರಜ್ಞೆಯನ್ನು ಚಿಗುರಿಸುವ ಸರಳವಾದ ಕಥೆಗಳನ್ನು ಮಾತೃಭಾಷೆಯಲ್ಲಿ (ಎಂದರೆ ಮಗುವಿನ ಸಾಮಾಜಿಕ-ರಾಜ್ಯಭಾಷೆಯಲ್ಲಿ) ಕಲಿಸಬೇಕು. ಇದರಿಂದ ತಾನು ವಾಸಿಸುವ ರಾಜ್ಯಕ್ಕೆ ಸೇರಿದವನು(ಳು) ಎಂಬ ಭಾವನೆಯೂ ಮಗುವಿನಲ್ಲಿ ಬೆಳೆಯುತ್ತದೆ. ಮಾಧ್ಯಮಿಕ ಹಂತದಲ್ಲಿ ತುಸು ಹೆಚ್ಚು ಪ್ರೌಢವಾದ ವಿಷಯಗಳನ್ನು ಉದಾ: ಚರಿತ್ರೆ, ಭೂವಿವರಣೆ, ಗಣಿತ, ನೀತಿನಿಯಮಗಳು, ತುಸು ಪ್ರೌಢವಾದ ಗದ್ಯಪದ್ಯಗಳನ್ನು ಕಲಿಸಬೇಕು. ಮಾಧ್ಯಮಿಕ ಹಂತದ ಮೊದಲ ವರ್ಷದಿಂದ ಎಂದರೆ ಐದನೆಯ ವರ್ಷದಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕು. ಸಮರ್ಥವಾದ ಇಂಗ್ಲಿಷ್ ಉಪಾಧ್ಯಾಯರು ಸರಿಯಾದ ಕ್ರಮದಲ್ಲಿ ಕಲಿಸಿದರೆ ಮಾಧ್ಯಮಿಕ ಶಾಲೆ ಮುಗಿಯುವುದರಲ್ಲಿ, ಎಂದರೆ ಎಂಟನೆ ವರ್ಷದ ಅಂತ್ಯದ ವೇಳೆಗೆ ಮಕ್ಕಳು ಸರಳವಾದ ಇಂಗ್ಲಿಷಿನಲ್ಲಿ ಮಾತನಾಡಲು, ಸರಳವಾದ ಇಂಗ್ಲಿಷಿನಲ್ಲಿ ತಂದೆತಾಯಿಯರಿಗೋ ಸೋದರಸೋದರಿಯರಿಗೋ ಸ್ನೇಹಿತರಿಗೋ ಪತ್ರವನ್ನು ಬರೆಯುವಂತಾಗಬೇಕು. ಉಪಾಧ್ಯಾಯರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗಿರುವ ವಾಕ್ಯರಚನೆ ಮತ್ತು ಕಾಗುಣಿತಗಳ ವ್ಯತ್ಯಾಸವನ್ನು ಕಲಿಸಬೇಕು. ರಾಮನು ರಾವಣನನ್ನು ಕೊಂದನು ಎಂಬಲ್ಲಿ ಕರ್ತೃ, ಕರ್ಮ, ಕ್ರಿಯಾಪದಗಳ ಕ್ರಮಿಕೆಗೂ Rama killed Ravana ಎಂಬಲ್ಲಿ ಬರುವ ಕ್ರಮಿಕೆಗೂ ಇರುವ ವ್ಯತ್ಯಾಸ ಮೊದಲಾದವನ್ನು ಕಲಿಸಬೇಕು. ಮುಖ್ಯವಾಗಿ ಯಾವ ವಿಷಯವನ್ನಾಗಲೀ ಬೋಧಿಸುವ ಉಪಾಧ್ಯಾಯನಿಗೆ ಇರಬೇಕಾದ ರಸವಂತಿಕೆಯು ಇಂಗ್ಲಿಷ್ ಬೋಧಕನಿಗೂ ಇದ್ದರೆ ವಿದ್ಯಾರ್ಥಿಗಳು ಸುಲಭವಾಗಿ, ಉತ್ಸಾಹದಿಂದ ಕಲಿತು ಪರಸ್ಪರ ಆ ಭಾಷೆಯಲ್ಲೂ ಮಾತನಾಡುತ್ತಾರೆ. ಅಂತೆಯೇ ಮಾತನಾಡಲು ಪ್ರೋತ್ಸಾಹಿಸಲೂ ಬೇಕು. ಕನ್ನಡವನ್ನೇ ಕಲಿಯದೆ ಐದನೆಯ ವರ್ಷದಿಂದಲೇ ಆಂಗ್ಲಮಾಧ್ಯಮ ಶಾಲೆಗೆ ಹೋಗುವ ಮಕ್ಕಳು ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕಂಡರೆ ನಮಗೆ ಆತಂಕವಾಗುವುದು ಸಮರ್ಥನೀಯ. ಆದರೆ ಕನ್ನಡ ಮಾಧ್ಯಮದ ಮಕ್ಕಳು ಇಂಗ್ಲಿಷ್ ಸಂಭಾಷಣೆಯನ್ನು ಅಭ್ಯಾಸ ಮಾಡಿಕೊಂಡರೆ ಭಯಪಡಬೇಕಿಲ್ಲ.
ಪ್ರೌಢಶಾಲೆಯಲ್ಲಿ ವಿಜ್ಞಾನ, ರೇಖಾಗಣಿತ, ಬೀಜಗಣಿತಗಳನ್ನು ಬೋಧಿಸುವಾಗ ಮೊದಲು ಕನ್ನಡದಲ್ಲಿ ವಿವರಿಸಿ ತಿಳಿಯಪಡಿಸಿ ತಾಂತ್ರಿಕ ಶಬ್ದಗಳ ಅರ್ಥವನ್ನು ಬಿಡಿಸಿ ಹೇಳಿ ಮನದಟ್ಟು ಮಾಡಿಸಿದ ನಂತರ ಇಂಗ್ಲಿಷ್ ಪರ್ಯಾಯಶಬ್ದಗಳನ್ನೂ ಹೇಳಿ ಇಂಗ್ಲಿಷಿನಲ್ಲಿಯೂ ಅದೇ ವಿಷಯವನ್ನು ಸಂಕ್ಷಿಪ್ತವಾಗಿ ಹೇಳಿ, ಆ ಭಾಷೆಯಲ್ಲಿಯೂ ವಿಷಯದ ಪರಿಚಯ ಮಾಡಿದರೆ ಮುಂದೆ ಕಾಲೇಜಿಗೆ ಹೋದಾಗ ಇದ್ದಕ್ಕಿದ್ದಂತೆಯೇ ಇಂಗ್ಲಿಷ್ ಮಾಧ್ಯಮದ ಪ್ರವಚನದಿಂದ ಕಂಗೆಡುವ ಪ್ರಮೇಯವುಂಟಾಗುವುದಿಲ್ಲ. ವಿಜ್ಞಾನದ ವಿಷಯಗಳನ್ನು ಬೋಧಿಸುವಾಗ ಆಮ್ಲ+ಜನಕ ಎಂಬುದನ್ನು ಇಂಗ್ಲಿಷಿನಲ್ಲಿ oxy+gen ಎಂದು ಹೇಳುತ್ತಾರೆ. oxy ಎಂಬುದಕ್ಕೆ ಆಮ್ಲ ಎಂಬ ಅರ್ಥವು ವೈಜ್ಞಾನಿಕ ಭಾಷೆಯಲ್ಲಿ ಸ್ಥಿರವಾಗಿ ನಿಂತಿದೆ. oxy ಎಂದರೆ ಆಮ್ಲ, ಜಛ್ಞಿ ಎನ್ನುವುದು ನಮ್ಮ ಜನಕ, ಸೃಷ್ಟಿಕರ್ತ, ತಂದೆ ಎಂಬ ಅರ್ಥವನ್ನೇ ಕೊಡುತ್ತದೆ. genಎಂಬುದರಿಂದ generator ಎಂಬ ಶಬ್ದವನ್ನು ವಿಜ್ಞಾನಿಗಳು ಬಳಸಿದರು. ಹಾಗೆಯೇ ಜಲ+ಜನಕ, ಇಂಗ್ಲಿಷಿನಲ್ಲಿ hydro=ಜಲ,hydro+gen, hydrogen bomb, hydroelectric, ಹೀಗೆ ಬಿಡಿಸಿ ಹೇಳುವಾಗ ವಿದ್ಯುತ್ತನ್ನು ಉತ್ಪತ್ತಿ ಮಾಡುವ ವಿವಿಧ ವಿಧಾನಗಳನ್ನೂ ಹೇಳಿದರೆ ವಿದ್ಯಾರ್ಥಿಗಳ ಜ್ಞಾನವು ವಿಸ್ತರಿಸುತ್ತದೆ. Triangle=ತ್ರಿಕೋಣ, ಇವುಗಳಿಗಿರುವ ಭಾಷಾಸಾಮ್ಯ. ಹೀಗೆ ತುಸು ಭಾಷಾಶಾಸ್ತ್ರವನ್ನೂ ಬಳಸಿದರೆ ಕನ್ನಡವೂ ಚೆನ್ನಾಗಿ ಬರುತ್ತದೆ, ಇಂಗ್ಲಿಷೂ ಅರ್ಥವಾಗುತ್ತದೆ. ಕನ್ನಡವನ್ನು ಕಲಿಸುವುದೆಂದರೆ ಕಥೆ ಕವನ ಮೂಲಕ ಮಾತ್ರವಲ್ಲ; ವಿಜ್ಞಾನ, ಗಣಿತ ಮೊದಲಾದ ಶಾಸ್ತ್ರಗಳ ಮೂಲಕ ಕಲಿತಾಗಲೇ ಕನ್ನಡಜ್ಞಾನವು ಮನಸ್ಸು ಬುದ್ಧಿಗಳಲ್ಲಿ ಬೇರೂರಿ ಅನಂತರ ವಿದ್ಯಾರ್ಥಿಯು ತಾನೇ ಬೆಳೆಸಿಕೊಳ್ಳುವ ಶಕ್ತಿಯನ್ನು ಪಡೆಯುತ್ತಾನೆ.
ಪ್ರೌಢಶಾಲೆ ಮುಗಿಯುವ ತನಕ ವಿದ್ಯಾರ್ಥಿಯು ಕಡ್ಡಾಯವಾಗಿ ಕನ್ನಡದಲ್ಲಿಯೇ ಉತ್ತರ ಬರೆಯಬೇಕು. ಪದವಿಪೂರ್ವ ಕಾಲೇಜಿನಲ್ಲಿ ಬೋಧನೆಯನ್ನು ಮೊದಲು ಕನ್ನಡದಲ್ಲಿ ಅನಂತರ ಇಂಗ್ಲಿಷಿನಲ್ಲಿ ಸಮಸಮವಾಗಿ ಮಾಡಬೇಕು. ಪರೀಕ್ಷೆಯಲ್ಲಿ ಬರೆಯುವ ಉತ್ತರದ ಭಾಷೆಯನ್ನು ವಿದ್ಯಾರ್ಥಿಯ ಆಯ್ಕೆಗೆ ಬಿಡಬೇಕು. ಅವನು ಕೆಲವು ಪ್ರಶ್ನೆಗಳನ್ನು ಉತ್ತರಿಸಬೇಕಾದರೆ ತನಗಿಷ್ಟ ಬಂದಷ್ಟು ಸಂಖ್ಯೆಯ ಉತ್ತರಗಳನ್ನು ತನಗಿಷ್ಟ ಬಂದ ಭಾಷೆಯಲ್ಲಿ, ಉಳಿದವನ್ನು ಇನ್ನೊಂದು ಭಾಷೆಯಲ್ಲಿ ಬರೆಯಬಹುದು. ಪರೀಕ್ಷಕನು ಭಾಷೆಯನ್ನು ಗಮನಿಸದೆ ಉತ್ತರದ ವಿಷಯದ ನಿಷ್ಕøಷ್ಟತೆ ಮತ್ತು ಸ್ಪಷ್ಟತೆಯನ್ನು ಗಮನಿಸಿ ಅಂಕಗಳನ್ನು ಕೊಡಬೇಕು.
ಪದವಿ ಹಂತದ ಬೋಧನೆ ಮತ್ತು ಪರೀಕ್ಷೆಗಳನ್ನು ಇದೇ ರೀತಿ ಮಾಡಬೇಕು. ಅಷ್ಟರಲ್ಲಿ ವಿದ್ಯಾರ್ಥಿಯು ಇಂಗ್ಲಿಷ್ ಭಾಷೆಯಲ್ಲಿರುವ ಪರಾಮರ್ಶಗ್ರಂಥಗಳನ್ನು ಸ್ವತಂತ್ರವಾಗಿ ಓದಿ ಗ್ರಹಿಸಬಲ್ಲವನಾಗಿರುತ್ತಾನೆ. ವಿಜ್ಞಾನದಲ್ಲಿ ಮೇಲುಮೇಲಕ್ಕೆ ಹೋದಂತೆ ವಿವರಣಾತ್ಮಕ ಭಾಷೆಯು ಕಡಿಮೆಯಾಗಿ ಪ್ರಪಂಚದ ಎಲ್ಲ ಭಾಷೆಗಳಿಗೂ ಸಮಾನವಾದ ಸಾಂಕೇತಿಕ ಭಾಷೆಯೇ ಪ್ರಧಾನವಾಗಿರುತ್ತದೆ. ಇಂಗ್ಲಿಷರು ನಮ್ಮ ದೇಶವನ್ನು ಇನ್ನೂರು ವರ್ಷಕ್ಕೂ ಮಿಕ್ಕು ಆಳಿ ಆಧುನಿಕ ವಿದ್ಯಾಭ್ಯಾಸವನ್ನು ತಮ್ಮ ಭಾಷೆಯಲ್ಲಿ ಸ್ಥಾಪಿಸಿದ್ದರಿಂದ ಮತ್ತು ವಿಜ್ಞಾನ ಹಾಗೂ ಇತರ ಸಂಶೋಧನೆಗಳು ಅಥವಾ ಅವುಗಳ ಅನುವಾದಗಳು ಇಂಗ್ಲಿಷಿನಲ್ಲಿ ಸಮೃದ್ಧವಾಗಿ ದೊರೆಯುವುದರಿಂದ, ಅದೇ ಇಂಗ್ಲಿಷರು ಭಾರತವನ್ನಾಳಿದ ಐತಿಹಾಸಿಕ ಕಾರಣದಿಂದ ನಮ್ಮ ದೇಶದಲ್ಲಿ ಇಂಗ್ಲಿಷು ಗ್ರಂಥಾಲಯದ ಭಾಷೆಯಾಗಿರುವುದು ಅನಿವಾರ್ಯ ಮಾತ್ರವಲ್ಲ, ಈ ಮಿತಿಯಲ್ಲಿ ಈ ಹಂತದಲ್ಲಿ ಬಳಸಿದರೆ ನಮ್ಮ ಮತ್ತು ನಮ್ಮ ಭಾಷೆಯ ಏಳಿಗೆಗೆ ಒಳ್ಳೆಯದೇ.
ಶಿಕ್ಷಣ ಮಾಧ್ಯಮ ಯೋಜನೆಯನ್ನು ಇಷ್ಟು ವಿವರವಾಗಿ ಹೇಳಿದ ಕಾರಣವೆಂದರೆ ಆಂಗ್ಲ ಮಾಧ್ಯಮವಾದಿಗಳು ಇಂಗ್ಲಿಷನ್ನು ಶಿಕ್ಷಣಮಾಧ್ಯಮವಾಗಿ ಒಪ್ಪಿಕೊಂಡರೆ ಕನ್ನಡವನ್ನು ನೂರು ಅಂಕಗಳ ಒಂದು ವಿಷಯವಾಗಿ ಬೋಧಿಸುವ ರಿಯಾಯಿತಿಯನ್ನು ತೋರಿಸುವ ತಂತ್ರ ಹೂಡಿದ್ದಾರೆ. ನ್ಯಾಯಾಲಯಗಳೂ ಈ ರಿಯಾಯಿತಿಯನ್ನು ನ್ಯಾಯಸಮ್ಮತವೆಂದು ಭಾವಿಸುವಂತಿದೆ. ಒಂದು ಸಾವಿರ ಅಂಕಗಳಲ್ಲಿ ಒಂಭೈನೂರನ್ನು ಇಂಗ್ಲಿಷ್ ಮಾಧ್ಯಮದ ವಿಷಯಗಳಿಗೆ ವಿನಿಯೋಗಿಸಿ ವಿಜ್ಞಾನ, ಗಣಿತ, ತಂತ್ರಜ್ಞಾನ, ಸಮಾಜಶಾಸ್ತ್ರ ಮತ್ತು ಇತಿಹಾಸ ಮೊದಲಾದ ಯಾವ ವಿಷಯದ ತೂಕವೂ ಇಲ್ಲದೆ ಬರೀ ಭಾಷೆಯಾಗಿ ನೂರು ಹಗುರ ಅಂಕಗಳ ಕನ್ನಡವನ್ನು ಯಾವ ವಿದ್ಯಾರ್ಥಿಯೂ
ಗಂಭೀರವಾಗಿ ಪರಿಗಣಿಸುವುದಿಲ್ಲ; ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಇದನ್ನು ಒಪ್ಪಿಕೊಳ್ಳುವುದು ಕನ್ನಡದ ಘಟಶ್ರಾದ್ಧಕ್ಕೆ ಒಪ್ಪಿಗೆ ಕೊಟ್ಟಂತೆಯೇ.
ಹಿಂದೆಲ್ಲ ಪ್ರೌಢಶಾಲಾ ಹಂತದವರೆಗೂ ಕನ್ನಡವೇ ಶಿಕ್ಷಣಮಾಧ್ಯಮವಾಗಿದ್ದು ಅದಕ್ಕೆ ಬೇಕಾದ ಪಠ್ಯಪುಸ್ತಕಗಳೆಲ್ಲ ಕನ್ನಡದಲ್ಲಿಯೇ ಲಭ್ಯವಾಗಿದ್ದವು. ಅವಕಾಶವನ್ನೊದಗಿಸಿದರೆ ದೇಶಭಾಷೆಗಳು ಈ ಸವಾಲನ್ನು ಹೇಗೆ ಯಶಸ್ವಿಯಾಗಿ ಎದುರಿಸಬಲ್ಲವು ಎಂಬುದಕ್ಕೆ ಅವು ಸಾಕ್ಷಿಯಾಗಿದ್ದವು. ಮಾತೃಭಾಷಾ ಮಾಧ್ಯಮದಲ್ಲಿ ಕಲಿತವರು ಹೇಗೆ ವಿಜ್ಞಾನದಲ್ಲಿ ಅಸಾಮಾನ್ಯ ಸಾಧನೆ ಮಾಡಬಲ್ಲರು ಎಂಬುದಕ್ಕೆ ಭಾರತರತ್ನ ಸಿ. ಎನ್. ಆರ್. ರಾವ್, ಬಾಹ್ಯಾಕಾಶ ವಿಜ್ಞಾನಿ ಯು. ಆರ್. ರಾವ್ ಇವರುಗಳು ಎದ್ದುಕಾಣುವ ಉದಾಹರಣೆಗಳು. ಇಂಥ ಹಲವಾರು ಪ್ರತಿಭೆಗಳು ನಮ್ಮೊಡನಿದ್ದಾರೆ.
ಬರೀ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಇಂಗ್ಲಿಷ್ ಮಾಧ್ಯಮದಲ್ಲೇ ಬೋಧಿಸುವ ಅನೇಕ ಉಪಾಧ್ಯಾಯರು, ಅಧ್ಯಾಪಕರು ಮತ್ತು ಪ್ರಾಧ್ಯಾಪಕರುಗಳಿಗೆ ಗಿಳಿಪಾಠದ ರೀತಿ ಒಪ್ಪಿಸುವುದನ್ನು ಬಿಟ್ಟು ವಿದ್ಯಾರ್ಥಿಗಳಿಗೆ ಬೇರೆ ರೀತಿ ವಿವರಿಸುವುದು ಬರುವುದಿಲ್ಲ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ಹಿಂದೆ 5-6 ವರ್ಷಗಳ ಕಾಲ ನಡೆಸಿದ ವಿಜ್ಞಾನ ಲೇಖಕರ ತರಬೇತಿ ಶಿಬಿರಗಳಲ್ಲಿ ಈ ಸಂಗತಿಯು ಗೊತ್ತಾಯಿತು.
ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಮತ್ತು ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯಗಳು ಕನ್ನಡದಲ್ಲಿ ಜ್ಞಾನ-ವಿಜ್ಞಾನಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಯಶಸ್ವಿಯಾಗಿ ಹೊರತಂದಿವೆ. ರಾಬರ್ಟಿಸ್ ಮತ್ತು ಇತರರು ಬರೆದ `ಸೆಲ್‍ಬಯಾಲಜಿ’, ಫೇಯ್ನ್‍ಮನ್ ಅವರ ಭೌತಶಾಸ್ತ್ರ ಉಪನ್ಯಾಸ ಸಂಪುಟಗಳ ಉತ್ತಮ ಅನುವಾದ ಸಿದ್ಧವಾಗಿವೆ. ಆದರೆ ಅವಿನ್ನೂ ಹೊರಬಂದಿಲ್ಲ; ಕಾರಣ ತಿಳಿಯುತ್ತಿಲ್ಲ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ ವಿಲ್ ಡ್ಯೂರಂಟರ ನಾಗರಿಕತೆಯ ಇತಿಹಾಸದ ಸಂಪುಟಗಳು ಹಾಗೂ ಜೆ. ಡಿ. ಬರ್ನಾಲ್ ಅವರ `ಇತಿಹಾಸದಲ್ಲಿ ವಿಜ್ಞಾನ’ ಸಂಪುಟಗಳು ಕನ್ನಡವು ವಿಜ್ಞಾನಭಾಷೆಯಾಗಿ ಎಷ್ಟು ಸಮರ್ಥವಾಗಿದೆ ಎಂಬುದಕ್ಕೆ ಪ್ರಮಾಣವನ್ನು ಒದಗಿಸುತ್ತವೆ.
ಇಂಗ್ಲಿಷ್ ಮಾಧ್ಯಮದ ತರಗತಿಗಳಿಗೆ ಕರ್ನಾಟಕ ಸರ್ಕಾರ ಸುಲಭವಾಗಿ ಮಾನ್ಯತೆ ನೀಡದೆ ಹೋದಾಗ ಕನ್ನಡ ಮಾಧ್ಯಮದ ಶಾಲೆಗೆ ಅನುಮತಿ ಪಡೆದುಕೊಂಡು ಕದ್ದು ಮುಚ್ಚಿ ಇಂಗ್ಲಿಷ್ ಮಾಧ್ಯಮದ ತರಗತಿಗಳನ್ನು ನಡೆಸಿಕೊಂಡು ಬರುವ ರಾಜಕಾರಣಿಗಳ ಮತ್ತು ಅಧಿಕಾರಿಗಳ ಪ್ರಚ್ಛನ್ನ ಅನುಮತಿಯೊಂದಿಗೆ ಅವ್ಯವಹಾರವೂ ಶುರುವಾಯಿತು. ಇದನ್ನು ಮೀರಿನಿಲ್ಲಲು ರಾಜ್ಯದ `ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‍ಓಸಿ) ಆಧಾರದ ಮೇಲೆ ICSE ಮತ್ತು CBSE ಪಠ್ಯಕ್ರಮ ಆಧಾರಿತವಾದ ಶಾಲೆಗಳು ನಗರ ಪಟ್ಟಣ (ಮತ್ತು ಇತ್ತೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿಯೂ) ಆರಂಭಗೊಂಡಿದ್ದು ಇಂಗ್ಲಿಷ್ ಮಾಧ್ಯಮ ಶಾಲೆಗಳು ಸುಲಭ ಧಂಧೆಯ ಕೇಂದ್ರಗಳೇ ಆಗಿವೆ.
ಅಲ್ಪಸಂಖ್ಯಾತರ ಹೆಸರಿನಲ್ಲಿ ಆರಂಭಗೊಂಡ ಶಾಲೆಗಳು ಕೂಡ ಅಲ್ಪಸಂಖ್ಯಾತರಿಗೆ ಮೀಸಲಾಗಿರದೆ ಸಾರ್ವಜನಿಕ ಪ್ರವೇಶದ ಮೂಲಕ ಸಾರ್ವತ್ರಿಕ ಶೋಷಣೆಯ ಮಾಧ್ಯಮಗಳಾಗಿ ಪರಿಣಮಿಸಿವೆ. ಇದೂ ಕೊಳಕು ರಾಜಕೀಯದ ಲಾಭಕೋರತನದ ನಿದರ್ಶನಗಳೇ ಆಗಿವೆ.
1970ರ ದಶಕದಲ್ಲಿ ಕೇಂದ್ರ ಸರ್ಕಾರವು `ಪ್ರಾದೇಶಿಕ ಭಾಷೆಗಳಲ್ಲಿ ಪಠ್ಯಪುಸ್ತಕಗಳ ಪ್ರಕಟಣಾ ಯೋಜನೆ’ಯನ್ನು ಜಾರಿಗೆ ತಂದು ಪ್ರತಿಯೊಂದು ಭಾಷೆಗೂ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ನೀಡಿತು. ಆ ಯೋಜನೆಯ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯವು ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಹಂತಗಳಿಗೆ ಉಪಯುಕ್ತವಾಗುವಂತೆ ನೂರಾರು ಪುಸ್ತಕಗಳನ್ನು ಹೊರತಂದಿತು. ವಿಜ್ಞಾನ ಲೇಖಕರ ತರಬೇತಿ ಶಿಬಿರಗಳನ್ನು ನಡೆಸಿತು; ಕನ್ನಡದ ಮೌಲಿಕ ಪುಸ್ತಕಗಳಿಗೆ- ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಷಯಗಳೂ ಸೇರಿದಂತೆ ಬಹುಮಾನ ಯೋಜನೆಯನ್ನೂ ಜಾರಿಗೆ ತಂದಿತು. ಆದರೆ ಹತ್ತು ವರ್ಷಗಳ ಬಳಿಕ ಈ ಯೋಜನೆಯನ್ನು ರಾಜ್ಯ ಸರ್ಕಾರವು ಮುಂದುವರಿಸಬೇಕಾಗಿತ್ತು. ಕೇಂದ್ರ ಸರ್ಕಾರದ ಅನುದಾನದ ಅವಧಿ ಮುಗಿದ ನಂತರ ರಾಜ್ಯ ಸರ್ಕಾರವು ಆಸ್ಥೆ ವಹಿಸದೆ ಇಡೀ ಯೋಜನೆಯು ನಿಂತುಹೋಯಿತು.
ಇದಕ್ಕೂ ಮೊದಲು ಕುವೆಂಪು ಮತ್ತು ದೇಜಗೌ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯವು ಸ್ವತಂತ್ರವಾಗಿಯೇ ಈ ಕಾರ್ಯಕ್ರಮವನ್ನು ಆರಂಭಿಸಿ ಕೆಲವು ಪುಸ್ತಕಗಳನ್ನು ಹೊರತಂದಿತ್ತು. ಸ್ನಾತಕೋತ್ತರ ಹಂತದಲ್ಲಿಯೂ ಕೆಲವು ವಿಷಯಗಳಲ್ಲಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿತ್ತು. ಈಗಲೂ ಅರ್ಥಶಾಸ್ತ್ರ, ಇತಿಹಾಸ, ಸಮಾಜವಿಜ್ಞಾನ ವಿಷಯಗಳಲ್ಲಿ ಕನ್ನಡ ಮಾಧ್ಯಮದ ತರಗತಿಗಳು ನಡೆಯುತ್ತಿವೆ. ಇಂಗ್ಲಿಷಿನಲ್ಲಿ ಬೋಧನೆ ನಡೆದರೂ ಕನ್ನಡದಲ್ಲಿ ಉತ್ತರಿಸುವ ಸ್ವಾತಂತ್ರೃವನ್ನು ನೀಡಲಾಗಿದೆ.
ಕೇಂದ್ರ ಸರ್ಕಾರವು ಬೋಧನೆ ಮತ್ತು ಬರಹಕ್ಕೆ ಬೇಕಾದ ಪಾರಿಭಾಷಿಕ ಪದಗಳನ್ನು ಒದಗಿಸುವ ಸಲುವಾಗಿ ತಾಂತ್ರಿಕ ಮತ್ತು ಪಾರಿಭಾಷಿಕ ಪದಾವಳಿ ಆಯೋಗವನ್ನು ಸ್ಥಾಪಿಸಿದ್ದು ಕಳೆದ ಸುಮಾರು 45 ವರ್ಷಗಳ ಅವಧಿಯಲ್ಲಿ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಕೋಶಗಳನ್ನೇ ಹೊರತಂದಿದೆ. ಈಗಲೂ ಅವನ್ನು ಸಕಾಲವಾಗಿಸಲು (Update) ಅದು ಕಾರ್ಯಶೀಲವಾಗಿದೆ. ಇದಕ್ಕೆ ನೂರಾರು ಕೋಟಿ ರೂಪಾಯಿಗಳ ವೆಚ್ಚ ಆಗಿದೆ.
ಜ್ಞಾನ ಆಯೋಗದ (Knowledge Commission) ಅಂಗವಾಗಿ ಸ್ಥಾಪಿಸಲಾದ ರಾಷ್ಟ್ರೀಯ ಅನುವಾದ mission (National Translation Mission)ನಾಡಿನ 22 ಭಾಷೆಗಳಲ್ಲಿ ಜ್ಞಾನ-ಪಠ್ಯಪುಸ್ತಕಗಳನ್ನು (Knowledge Texts) ಹೊರತರುವ ಕಾರ್ಯವನ್ನು ಕೈಗೊಂಡಿದೆ. ಕಳೆದ ಏಳು ವರ್ಷಗಳಿಂದ ಇದು ಕಾರ್ಯನಿರತವಾಗಿದ್ದು ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ಪುಸ್ತಕಗಳನ್ನು ಹೊರತಂದಿದೆ.
ಇದರ ಅಂಗವಾಗಿ ಭಾಷಾಂತರ ಕಾರ್ಯದ ತರಬೇತಿ ಶಿಬಿರಗಳನ್ನು ಏರ್ಪಡಿಸಿ ನಾಡಿನಾದ್ಯಂತ ತರುಣ ಪ್ರತಿಭೆಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ನಡೆಸುತ್ತ ಬಂದಿದೆ. ಪಾರಿಭಾಷಿಕ ಪದಕೋಶಗಳ ಪ್ರಾಂತೀಕರಣ ಕಾರ್ಯಕ್ರಮವೂ ನಡೆಯುತ್ತಿದೆ.
1967-68ರ ಸುಮಾರಿನಲ್ಲಿ ನಾನು ವಿಶ್ವವಿದ್ಯಾಲಯ ಅನುದಾನ ಆಯೋಗವು ದಿಲ್ಲಿಯಲ್ಲಿ ಏರ್ಪಡಿಸಿದ ತಾಂತ್ರಿಕ ಶಬ್ದ ಆಯೋಗದ ಸಭೆಯಲ್ಲಿ ಹಾಜರಿದ್ದೆ. ಭಾರತದ ಎಲ್ಲ ಭಾಷೆಗಳಲ್ಲಿಯೂ ವಿಜ್ಞಾನ ತಂತ್ರಜ್ಞಾನ ಸಮಾಜವಿಜ್ಞಾನ ತತ್ತ್ವಶಾಸ್ತ್ರ ಮೊದಲಾದ ವಿಷಯಗಳಲ್ಲಿ ಬಳಕೆಯಲ್ಲಿರುವ ತಾಂತ್ರಿಕ ಶಬ್ದಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿರುವ ಸಮಾನಶಬ್ದಗಳನ್ನು ಗುರುತಿಸುವುದು ಹಾಗೂ ಎಲ್ಲ ಭಾಷಿಕರಿಗೂ ಒಪ್ಪಿಗೆಯಾಗುವ ಸಮಾನ ತಾಂತ್ರಿಕ ಶಬ್ದಗಳನ್ನು ಸೃಷ್ಟಿಸುವುದು ಆ ಸಭೆಯ ಉದ್ದೇಶವಾಗಿತ್ತು. ಶೇಕಡಾ ಎಂಭತ್ತರಷ್ಟು ಶಬ್ದಗಳು ತಮ್ಮ ಭಾಷಾ ಜಾಯಮಾನದ ಕಿಂಚಿತ್ ವ್ಯತ್ಯಾಸದೊಡನೆ ಎಲ್ಲ ಭಾಷೆಗಳಿಗೂ ಸಮಾನವಾಗಿದ್ದವು. ಎಲ್ಲವೂ ಸಂಸ್ಕೃತಜನ್ಯ ಶಬ್ದಗಳು. ಉಳಿದ ಶಬ್ದಗಳನ್ನು ಪರಿಣತರು ಸೃಷ್ಟಿಸಿ ಮುಂದಿನ ಸಭೆಯ ಮುಂದಿಡುವುದೆಂದು ತೀರ್ಮಾನವಾಯಿತು. ಇದಕ್ಕೆ ವಿರೋಧ ಬಂದದ್ದು ಡಿ.ಎಂ.ಕೆ., ಎ.ಐ.ಡಿ.ಎಂ.ಕೆ. ತತ್ತ್ವದ ತಮಿಳು ಪ್ರತಿನಿಧಿಯಿಂದ ಮಾತ್ರ. ಸಭೆಯ ಮುಖ್ಯ ಉದ್ದೇಶವಿದ್ದದ್ದು ಭಾರತದ ಎಲ್ಲ ಭಾಷೆಗಳಲ್ಲೂ ಸಮಾನ ತಾಂತ್ರಿಕ ಶಬ್ದಗಳು ಸೃಷ್ಟಿಯಾಗಿ ಬಳಕೆಗೆ ಬಂದರೆ ಒಂದು ಭಾಷೆಯಲ್ಲಿ ರಚಿತವಾದ ವೈಜ್ಞಾನಿಕ ತಾಂತ್ರಿಕ ಗ್ರಂಥಗಳನ್ನು ಉಳಿದ ಭಾಷಿಕರು ಸುಲಭವಾಗಿ ಓದಿ ಅರ್ಥಮಾಡಿಕೊಳ್ಳಬಹುದು. ವಿಜ್ಞಾನದ ಪ್ರಬುದ್ಧ ಮಟ್ಟದಲ್ಲಿ ಭಾಷೆಯು ಸಾಂಕೇತಿಕವಾಗುತ್ತದೆ; ವರ್ಣನಾತ್ಮಕತೆಯು ಕನಿಷ್ಠ ಪ್ರಮಾಣಕ್ಕೆ ಇಳಿಯುತ್ತದೆ. ಇವುಗಳನ್ನು ತನ್ನದೇ ಭಾಷೆಯಲ್ಲಿ ಸಮಾನ ಲಿಪಿಯಲ್ಲಿ ಬರೆದರೆ ಸಾಕು. ಈ ಮೂಲಕ ಬೌದ್ಧಿಕವಾಗಿ ರಾಷ್ಟ್ರೀಯ ಏಕತೆಯುಂಟಾಗುತ್ತದೆ. ಇಂಗ್ಲಿಷಿನ ಅವಲಂಬನೆಯು ಕಡಿಮೆಯಾಗುತ್ತದೆ, ಅಥವಾ ತಪ್ಪುತ್ತದೆ. ಇದು ಸ್ವದೇಶೀಕರಣದಲ್ಲಿ ಬಹುಮುಖ್ಯವಾದ ಹೆಜ್ಜೆ ಎಂದು ನನಗೆ ಅನ್ನಿಸುತ್ತದೆ. ಇತ್ತೀಚೆಗೆ ಸ್ಯಾಮ್ ಪಿತ್ರೋಡ ಅವರುKnowledge Commission ಎಂಬುದನ್ನು ಸ್ಥಾಪಿಸಿದರು. ಅನಂತರ Tecnical Terminology Commissionಎಂಬ ಆಯೋಗವನ್ನು ಕೇಂದ್ರ ಸರ್ಕಾರವು ಆರಂಭಿಸಿತು. ಭಾರತೀಯ ಭಾಷೆಗಳನ್ನು ಬೆಳೆಸಲು ಸರ್ಕಾರಗಳು ಮತ್ತು ಪರಿಣತರು ಒಂದು ದಿಕ್ಕಿನಲ್ಲಿ ಪ್ರಯತ್ನಿಸುತ್ತಿರುವಾಗ ಶಿಕ್ಷಣ ಮಾಧ್ಯಮದ ವಿಷಯದಲ್ಲಿ ನ್ಯಾಯಾಲಯದ ತೀರ್ಪು ವಿರುದ್ಧ ದಿಕ್ಕಿನಿಂದ ಹಾಯ್ದಿದೆ. ನಮ್ಮ ಭಾಷೆಯ ಪರವಾಗಿರುವ ವಕೀಲರು ಈ ಎಲ್ಲ ಅಂಶಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿಯೂ, ಸೋತರೆ? – ಎಂಬ ವಿವರ ನನಗೆ ಗೊತ್ತಿಲ್ಲ.
ಇದಕ್ಕಾಗಿಯೂ (NTM ಕಾರ್ಯ ಚಟುವಟಿಕೆಗಳಲ್ಲಿ) ಕೇಂದ್ರ ಸರ್ಕಾರವು ನೂರಾರು ಕೋಟಿ ರೂಪಾಯಿಗಳನ್ನು ಖರ್ಚುಮಾಡಿದೆ; ಮಾಡುತ್ತ ಇದೆ. ಇದರ ಕೇಂದ್ರ ಕಚೇರಿ CIIL ಆಶ್ರಯದಲ್ಲಿ ಮೈಸೂರಿನಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ.
ಶಾಸ್ತ್ರೀಯ ಭಾಷೆಯ ಸ್ಥಾನಮಾನ ಕನ್ನಡಕ್ಕೂ ದೊರೆತ ಮೇಲೆ ಅದರ ಅಂಗವಾಗಿಯೂ ಈ ಬಗೆಯ ಕಾರ್ಯಗಳು ನಡೆಯಬೇಕಾಗಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ ನೀಡಿದ ಅನುದಾನವು ವಾಪಸ್ ಹೋಗಿದ್ದು ಈಗ ಅದನ್ನು ಸಚೇತನಗೊಳಿಸುವ ಕಾರ್ಯ ಆರಂಭವಾಗಿದೆ.
ಎಷ್ಟೇ ಸಣ್ಣದಿರಲಿ, ದೊಡ್ಡದಿರಲಿ, ಯೂರೋಪಿನ ದೇಶಗಳೆಲ್ಲ ಭಾಷೆಯ ಆಧಾರದ ಮೇಲೆಯೇ ರಚಿತವಾಗಿವೆ. ಆ ದೇಶಗಳಲ್ಲಿ ಹೀಗೆ ಪರಭಾಷಾ ಮಾಧ್ಯಮದ ಶಾಲೆಗಳು ತಲೆಯೆತ್ತಿ ದೇಶಭಾಷೆಗಳನ್ನು ನುಂಗುವ ಸನ್ನಿವೇಶವುಂಟಾದರೆ ಅಲ್ಲಿಯ ನ್ಯಾಯಾಲಯಗಳು ಹೇಗೆ ಸ್ಪಂದಿಸಬಹುದು? ಪೋಷಕರ ಇಚ್ಛಾಸ್ವಾತಂತ್ರೃದ ಅಡಿಯಲ್ಲಿ ದೇಶಭಾಷೆಗಳ ಭವಿಷ್ಯ ಏನಾಗಬಹುದು? ಇಂಥ ಪ್ರಶ್ನೆಗಳನ್ನು ನಮ್ಮ ಸಮಾಜವೂ ನ್ಯಾಯಾಲಯಗಳೂ ಎದುರಿಸಬೇಕಾಗುತ್ತದೆಯಲ್ಲವೆ?
ನ್ಯಾಯಾಲಯದ ತೀರ್ಪನ್ನು ತಿದ್ದಲು ಸಂಸತ್ತಿನಲ್ಲಿ ಮಸೂದೆಯನ್ನು ತಂದು ಪಾಸು ಮಾಡಿಸುವುದೊಂದೇ ಮಾರ್ಗ. ಕರ್ನಾಟಕ ಸರ್ಕಾರವು ಈ ಅಗತ್ಯವನ್ನು ಎಷ್ಟರ ಮಟ್ಟಿಗೆ ಪೂರೈಸುತ್ತದೆ? ತನ್ನ ಪಕ್ಷದ ವರಿಷ್ಠರನ್ನು ಯಾವ ಮಟ್ಟಕ್ಕೆ ಒಪ್ಪಿಸಬಲ್ಲದು? ಇತರ ಪಕ್ಷಗಳ, ಅದರಲ್ಲೂ ಆಳುವ ಪಕ್ಷದ ಸಮ್ಮತಿಯನ್ನು ದೊರಕಿಸಬಲ್ಲದು? – ಎಂಬುದು ಮುಖ್ಯ ಪ್ರಶ್ನೆ.