ಕರ್ನಾಟಕದ ಭಾಷಾ ಚಳವಳಿಗಳು ಭಾಷೆಯೊಂದನ್ನೇ ಮುಖ್ಯವಾಗಿಸಿಕೊಂಡು ಹೋರಾಟ ಮಾಡುತ್ತ ಬಂದಿದ್ದರಿಂದ ಜನ ಚಳವಳಿಯ ವಿಷಯಗಳಿಗೂ ಭಾಷಾ ಚಳವಳಿಯ ವಿಷಯಗಳಿಗೂ ಅಂತರ್ ಸಂಬಂಧವೊಂದು ಏರ್ಪಡಲಿಲ್ಲ. ಕನ್ನಡಪರ ಚಿಂತನಾವಲಯ ಮತ್ತು ಹೋರಾಟದ ನಡುವೆ ಅಗತ್ಯ ಪ್ರಮಾಣದ ಬೆಸುಗೆ ಸಾಧ್ಯವಾಗದ್ದು ಕರ್ನಾಟಕದ ಇನ್ನೊಂದು ವೈರುಧ್ಯ.
ಕರ್ನಾಟಕದ ಭಾಷಾ ಸಮಸ್ಯೆ ಕುರಿತು ಮಾತನಾಡುವಾಗ ಅನೇಕ ವಿದ್ವಾಂಸರು ಮತ್ತು ಹೋರಾಟಗಾರರು ಬೇರೆ ರಾಜ್ಯಗಳಲ್ಲಿ ಭಾಷಾ ಸಮಸ್ಯೆಯೇ ಇಲ್ಲವೆನ್ನುವಂತೆ ಮಾಹಿತಿ ಕೊಡುವ ಪರಿಪಾಠವಿದೆ. ವಿಶೇಷವಾಗಿ ತಮಿಳುನಾಡನ್ನು ಪ್ರಸ್ತಾಪಿಸಿ ಅಲ್ಲಿ ಎಲ್ಲವೂ ತಮಿಳುಮಯವಾಗಿದೆಯೆಂದೂ ಕರ್ನಾಟಕದಲ್ಲಿ ಮಾತ್ರ ನಮ್ಮ ರಾಜ್ಯದ ಭಾಷೆಗೆ ದುಸ್ಥಿತಿ ಒದಗಿದೆಯೆಂದೂ ಇದಕ್ಕೆ ಕನ್ನಡಿಗರ ಔದಾರ್ಯವೇ ಕಾರಣವೆಂದೂ ಪ್ರತಿಪಾದಿಸಲಾಗುತ್ತಿದೆ. ಕೇರಳ, ಆಂಧ್ರಗಳಲ್ಲಿ ಆಯಾ ರಾಜ್ಯಭಾಷೆಗೆ ಕನ್ನಡಕ್ಕೆ ಇಲ್ಲಿ ಒದಗಿದಂತಹ ಸಂಕಷ್ಟ ಇಲ್ಲವೆಂದು ಭಾವಿಸಲಾಗಿದೆ. ಇದು ಬಹುಜನಾಭಿಪ್ರಾಯವೆಂಬಂತೆ ಬಿಂಬಿತವಾಗುತ್ತಿದೆ. ಆದರೆ, ಈ ಪ್ರತಿಪಾದನೆಯ ಸತ್ಯಾಸತ್ಯಗಳನ್ನು ಪರಾಮರ್ಶಿಸುವ ವ್ಯವಧಾನ ಅನೇಕರಲ್ಲಿಲ್ಲ. ವ್ಯವಧಾನದ ಸ್ಥಾನವನ್ನು ವ್ಯಸನ ಆಕ್ರಮಿಸಿಕೊಂಡಂತೆ ಕಾಣುತ್ತಿದೆ. `ಅಯ್ಯೋ ನಮ್ಮ ಕನ್ನಡಕ್ಕೆ ಮಾತ್ರ ಇಂಥ ದುಸ್ಥಿತಿ’ ಎಂಬ ವ್ಯಸನದಲ್ಲಿ ವ್ಯವಧಾನ ಮತ್ತು ಚಿಂತನದ ನೆಲೆಗಳು ಹಿಂದಿನ ಸಾಲಲ್ಲಿ ಕೂತು ಪಿಳಿಪಿಳಿ ಕಣ್ಣುಬಿಡುತ್ತವೆ. ಒಂದು ವೇಳೆ ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಅಧಿಕೃತ ಭಾಷೆಗೆ ಯಾವ ಬಿಕ್ಕಟ್ಟೂ ಇಲ್ಲವೆನ್ನುವುದಾದರೆ, ಅದಕ್ಕೆ ಇರಬಹುದಾದ ಚಾರಿತ್ರಿಕ ಕಾರಣಗಳನ್ನು ಹುಡುಕುವ ವ್ಯವಧಾನವಾದರೂ ಬೇಕಲ್ಲವೆ?
ಯಾವುದೇ ಒಂದು ರಾಜ್ಯಭಾಷೆ ಅಥವಾ ಮಾತೃಭಾಷೆಯ ಉಳಿವನ್ನು ನಾಲ್ಕು ನೆಲೆಗಳ ಮೂಲಕ ನೋಡಬಹುದು ಎಂದು ನಾನು ಭಾವಿಸುತ್ತೇನೆ.
1. ಭಾಷೆಯ ದೈನಂದಿನ ಬಳಕೆ
2. ಶಿಕ್ಷಣದಲ್ಲಿ ಭಾಷೆಯ ಸ್ಥಾನಮಾನ
3. ಆಡಳಿತದಲ್ಲಿ ಭಾಷೆಯ ಬಳಕೆ
4. ಉದ್ಯೋಗಕ್ಕೆ ಭಾಷೆಯ ಮಾನದಂಡ.
ತಮಿಳುನಾಡು, ಕೇರಳ ಮುಂತಾದ ಕೆಲವು ರಾಜ್ಯಗಳಲ್ಲಿ ಆಯಾ ರಾಜ್ಯಭಾಷೆಯ ದೈನಂದಿನ ಬಳಕೆ ನಿಜಕ್ಕೂ ವ್ಯಾಪಕವಾಗಿದೆ. ಜಾತಿ, ಮತ, ಧರ್ಮಗಳನ್ನು ಮೀರಿ ಬಹುಪಾಲು ಜನರು ಆಯಾ ರಾಜ್ಯಭಾಷೆಯಲ್ಲೇ ಮಾತನಾಡುವುದನ್ನು ಕಾಣುತ್ತೇವೆ. ಆಂಧ್ರದಲ್ಲಿ ತೆಲುಗು ಬಹುಪಾಲು ವ್ಯಾಪಕವಾಗಿದ್ದರೂ ಉರ್ದುವಿನ ಬಳಕೆಯೂ ಸಾಕಷ್ಟಿದೆ. ಕರ್ನಾಟಕದಲ್ಲಿ ದಿನನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿದೆಯೆಂಬ `ವ್ಯಸನ’ವನ್ನು ಬೆಂಗಳೂರಿಗೆ ಹೆಚ್ಚು ಅನ್ವಯಿಸಬಹುದಾಗಿದೆ. ವಿವಿಧ ರಾಜ್ಯಗಳಿಂದ ಬಂದ ವಲಸಿಗರು ಬೆಂಗಳೂರಿನಲ್ಲಿ ನೆಲೆಯೂರಿ `ಕಾಸ್ಮೊಪಾಲಿಟನ್ ಸಿಟಿ’ ಎಂಬ ಅಭಿದಾನಕ್ಕೆ ಅರ್ಹವಾಗಿಸಿಬಿಟ್ಟಿದ್ದಾರೆ. ಆದರೆ, ಗ್ರಾಮೀಣ ಕರ್ನಾಟಕದವರು ಕನ್ನಡದಲ್ಲೇ ದೈನಂದಿನ ವ್ಯವಹಾರ ನಡೆಸುತ್ತಿದ್ದಾರೆ. ಆದರೆ, ಕನ್ನಡ ಪರಿಸರವು ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ ಎನ್ನುವುದೂ ನಿಜ. ದಕ್ಷಿಣ ಭಾರತದ ಬೇರೆ ರಾಜ್ಯಗಳಲ್ಲಿ ಇಂತಹ ಸನ್ನಿವೇಶವಿಲ್ಲವೆನ್ನುವುದೂ ನಿಜ. ಇದಕ್ಕೆ ಕಾರಣಗಳೇನು? ಆಯಾ ರಾಜ್ಯಗಳ ಭಾಷಾ ಚಳವಳಿಗಳು ರೂಪುಗೊಂಡ ಸ್ವರೂಪದಲ್ಲಿ ಕಾರಣಗಳನ್ನು ಕಾಣಬಹುದು.
ತಮಿಳುನಾಡಿನಲ್ಲಿ ಪೆರಿಯಾರ್ ಅವರ ನೇತೃತ್ವದಲ್ಲಿ ನಡೆದ ದ್ರಾವಿಡ ಸಂಸ್ಕøತಿ ಚಳವಳಿಯು ಸಹಜವಾಗಿಯೇ ತಮಿಳು ಭಾಷಾಭಿಮಾನವನ್ನು ಒಳಗೊಂಡಿತ್ತು. ದ್ರಾವಿಡರ ಭಾಷಾಭಿಮಾನವನ್ನು ಸಾಮಾಜಿಕ, ಸಾಂಸ್ಕøತಿಕ ಹಾಗೂ ಭಾಷಿಕ ನೆಲೆಯಲ್ಲಿ ರೂಪಿಸಹೊರಟ ಈ ಚಳವಳಿಯು ಈ ಭಾಷೆಯನ್ನು ಪ್ರತ್ಯೇಕಗೊಳಿಸಲಿಲ್ಲ. ಹೀಗಾಗಿ ಜನ ಚಳವಳಿ ಮತ್ತು ಭಾಷಾ ಚಳವಳಿ ಎಂಬ ಪ್ರತ್ಯೇಕತೆ ಉಂಟಾಗಲಿಲ್ಲ. ಇದರ ಪರಿಣಾಮವಾಗಿ ತಮಿಳು ಬಳಕೆಯೆನ್ನುವುದು ಕೇವಲ ಭಾಷಿಕ ಪರಿಕಲ್ಪನೆಯಾಗದೆ ಸಾಮಾಜಿಕ ಮತ್ತು ಸಾಂಸ್ಕøತಿಕ ಸ್ವಾಭಿಮಾನದ ಪರಿಕಲ್ಪನೆಯಾಗಿ ರೂಪುಗೊಂಡು ಪರಿಣಾಮ ಬೀರಿತು. ಕೇರಳದಲ್ಲಿ ನಡೆದ ಎಡಪಂಥೀಯ ಜನ ಚಳವಳಿಗಳು ಭಾಷಿಕ ವಿಷಯವನ್ನು ಸದ್ದಿಲ್ಲದೆ ಸಮ್ಮಿಲನಗೊಳಿಸಿಕೊಂಡಿದ್ದವು. ಪ್ರತ್ಯೇಕ ಚಳವಳಿಯ ಅಗತ್ಯ ಬೀಳದಂತೆ ಜನ ಚಳವಳಿಯನ್ನು ನಡೆಸಿದ್ದು ವಿಶೇಷವಾಗಿತ್ತು. ಆಂಧ್ರಪ್ರದೇಶದಲ್ಲಿ ತೆಲಂಗಾಣ ಹೋರಾಟವು ತೆಲುಗನ್ನೇ ಸಂವಹನ ಸಾಧನವನ್ನಾಗಿ ಮಾಡಿಕೊಂಡಿತ್ತು. ನಿಜಾಮರ ಆಳ್ವಿಕೆಯಿಂದಾಗಿ ಉರ್ದು ಬಳಕೆಯೂ ಕೆಲವೆಡೆ ವ್ಯಾಪಕವಾಗಿತ್ತು. ಒಟ್ಟಾರೆ ಭಾಷೆಗಳು ಜನ ಚಳವಳಿಯ ಭಾಗವಾಗಿ ಬೆಳೆಯುತ್ತ ಬಂದ ಚಾರಿತ್ರಿಕತೆಯನ್ನು ಇಲ್ಲಿ ಗಮನಿಸಬೇಕು. ಹೀಗಾಗಿ ರಾಜ್ಯಭಾಷೆಯ ದೈನಂದಿನ ಬಳಕೆಯು ತನಗೆ ತಾನೇ ಗಟ್ಟಿಯಾಯಿತು.
ಸಾಧ್ಯವಾಗದ ಬೆಸುಗೆ
ಆದರೆ ಕರ್ನಾಟಕದಲ್ಲಿ ಭಾಷಾ ಚಳವಳಿ ಮತ್ತು ಜನ ಚಳವಳಿಗಳು ಪ್ರತ್ಯೇಕವಾಗಿ ನಡೆಯುತ್ತ ಬಂದಿವೆ. ಜನ ಚಳವಳಿಗೆ ಜನಭಾಷೆಯ ಬಗ್ಗೆ ಆದರಾಭಿಮಾನಗಳಿದ್ದರೂ ಕರ್ನಾಟಕದ ಸಂದರ್ಭದಲ್ಲಿ ಸಹಜವಾಗಿಯೇ ಅದು ಆದ್ಯತೆಯ ವಿಷಯವಾಗಲಿಲ್ಲ. ರೈತ ಚಳವಳಿ, ದಲಿತ ಚಳವಳಿಗಳು ಕನ್ನಡವನ್ನೇ ಸಂವಹನದ ಸಾಧನ ಮಾಡಿಕೊಂಡರೆ, ಕಾರ್ಮಿಕ ಚಳವಳಿಯೂ ಕಾರ್ಮಿಕ ಸಮುದಾಯದವರ ಭಾಷೆಗಳನ್ನು ಒಟ್ಟಾಗಿ ಬಳಸತೊಡಗಿತು. ಕಾರ್ಮಿಕರಲ್ಲಿ ಕನ್ನಡಿಗರಲ್ಲದೆ ಮಲಯಾಳಿಗಳು, ತಮಿಳರೂ ಇದ್ದದ್ದು ಇದಕ್ಕೆ ಒಂದು ಕಾರಣವಾಗಿತ್ತು. ಇನ್ನು ಕರ್ನಾಟಕದ ಭಾಷಾ ಚಳವಳಿಗಳು ಭಾಷೆಯೊಂದನ್ನೇ ಮುಖ್ಯವಾಹಿನಿಯಾಗಿಸಿಕೊಂಡು ಹೋರಾಟ ಮಾಡುತ್ತ ಬಂದಿದ್ದರಿಂದ ಜನ ಚಳವಳಿಯ ವಿಷಯಗಳಿಗೂ ಭಾಷಾ ಚಳವಳಿಯ ವಿಷಯಗಳಿಗೂ ಅಂತರ್ ಸಂಬಂಧವೊಂದು ಏರ್ಪಡಲಾಗಲಿಲ್ಲ. ಇದಕ್ಕೆ ಕರ್ನಾಟಕ ಜನ ಚಳವಳಿ ಮತ್ತು ಭಾಷಾ ಚಳವಳಿ- ಎರಡರ ಸ್ವರೂಪಗಳೂ ಕಾರಣವಾಗಿವೆ.
ಕರ್ನಾಟಕದ ಇನ್ನೊಂದು ವೈರುಧ್ಯವೆಂದರೆ- ಕನ್ನಡಪರ ಚಿಂತನಾವಲಯ ಮತ್ತು ಹೋರಾಟದ ನಡುವೆ ಅಗತ್ಯ ಪ್ರಮಾಣದ ಬೆಸುಗೆ ಸಾಧ್ಯವಾಗಲಿಲ್ಲ. ಎರಡೂ ವಲಯಗಳು ಪ್ರತ್ಯೇಕವೆಂಬಂತೆಯೇ ನಡೆದುಕೊಂಡು ಬಂದಿವೆ. ಬೆರಳೆಣಿಕೆಯ ಚಿಂತಕರು, ಹೋರಾಟಗಾರರ ಜತೆ ಸಂಬಂಧವಿಟ್ಟುಕೊಂಡಿದ್ದಾರೆ. ಬಹುಪಾಲು ಚಿಂತಕರು ಹೋರಾಟ ವಲಯದ ಹೊರಗೇ ಇದ್ದಾರೆ. ಹೋರಾಟಗಾರರೂ ಅಷ್ಟೇ, ಕೆಲವು ಸಭೆ ಸಮಾರಂಭಗಳಿಗೆ ಆಹ್ವಾನಿಸುವುದನ್ನು ಬಿಟ್ಟರೆ ತಮ್ಮ ಹೋರಾಟದ ರೂಪುರೇಷೆಗಳ ನಿರ್ಧಾರದಲ್ಲಿ ಚಿಂತಕರನ್ನು ತೊಡಗಿಸಿಕೊಂಡದ್ದು ಇಲ್ಲ ಎನ್ನುವಷ್ಟು ಕಡಿಮೆ. ಈ ಸನ್ನಿವೇಶದ ಫಲವಾಗಿ ಕನ್ನಡ ಹೋರಾಟಕ್ಕೆ ಬೇಕಾದ ತಾತ್ತ್ವಿಕತೆಯೊಂದು ಸರಿಯಾಗಿ ರೂಪುಗೊಂಡಿಲ್ಲ. ಎಲ್ಲರೂ ಒಂದೆಡೆ ಕಲೆತು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ನಿರ್ವಹಿಸಲು ಸಾಧ್ಯವಾಗಿಲ್ಲ.
ಜನ ಚಳವಳಿಗಳು ಮತ್ತು ಭಾಷಾ ಚಳವಳಿಯ ನಡುವೆ, ಭಾಷಾ ಚಳವಳಿ ಮತ್ತು ಭಾಷಾ ಚಿಂತಕರ ನಡುವೆ ಕಂದಕವೇರ್ಪಟ್ಟಿರುವುದು ಕರ್ನಾಟಕದ ಒಂದು ವಿಶಿಷ್ಟ ಸನ್ನಿವೇಶವಾಗಿದೆ. ಇಂತಹ ಸನ್ನಿವೇಶವೂ ಹೊರರಾಜ್ಯಗಳಲ್ಲಿ ಇಲ್ಲ. ಇದ್ದರೂ ಅದರ ಪ್ರಮಾಣ ಇಲ್ಲ ಎನ್ನುವಷ್ಟು ಕಡಿಮೆ. ಈ ಚಾರಿತ್ರಿಕ ಬೆಳವಣಿಗೆಗಳು ಭಾಷಾ ಬಳಕೆಯಲ್ಲಿ ಉಂಟುಮಾಡಿರುವ ಪರಿಣಾಮದ ಫಲವಾಗಿ ಒಂದೊಂದು ರಾಜ್ಯದ ಸನ್ನಿವೇಶದಲ್ಲೂ ವ್ಯತ್ಯಾಸ ಕಾಣಿಸುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕದಲ್ಲಿ ವಲಸಿಗರು ಹೆಚ್ಚಾಗಿ ಬಂದು ನೆಲೆಸಿರುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಕರ್ನಾಟಕದ ಸುರಕ್ಷಿತ ಸನ್ನಿವೇಶದ ಫಲವಾಗಿ ಬಂದ ವಲಸಿಗರ ಸಂಖ್ಯೆ ಹೆಚ್ಚಾಗಿರುವುದಕ್ಕೆ ಕನ್ನಡಿಗರ `ಔದಾರ್ಯ’ ಕಾರಣವೋ ನಮ್ಮ ಸಮಕಾಲೀನ ಸಂದರ್ಭ ಕಾರಣವೋ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಮುಂಬೈನಂತಹ ನಗರಗಳಿಗೆ ಕನ್ನಡಿಗರೂ ಬಹುಸಂಖ್ಯೆಯಲ್ಲಿ ವಲಸೆಹೋಗಿ ನೆಲೆಸಿದ್ದಾರೆ. ಇದಕ್ಕೆ ಮರಾಠಿಗರ ಔದಾರ್ಯ ಕಾರಣವೋ ಕನ್ನಡಿಗರ ಬದುಕಿನ ಶೋಧ ಮತ್ತು ಸಮಕಾಲೀನ ಆರ್ಥಿಕ ಸಂದರ್ಭ ಕಾರಣವೋ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಇದು ಎಲ್ಲ ರಾಜ್ಯದ ಜನರೂ ಉತ್ತರಿಸಿಕೊಳ್ಳಬೇಕಾದ ಪ್ರಶ್ನೆ.
ಬೇರೆ ಕೆಲವು ರಾಜ್ಯಗಳಲ್ಲಿ ಕನ್ನಡ ಸಾಹಿತ್ಯದ ಸ್ನಾತಕೋತ್ತರ ವಿಭಾಗಗಳು ಸ್ಥಾಪನೆಗೊಂಡಿರುವ ಅಂಶವನ್ನೂ ಇಲ್ಲಿ ಪ್ರಸ್ತಾಪಿಸುವುದು ಅಗತ್ಯ. ತಮಿಳುನಾಡಿನ ಮದ್ರಾಸ್ ವಿಶ್ವವಿದ್ಯಾಲಯ ಮತ್ತು ಮಧುರೆಯಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗವಿದೆ. ಅಂತೆಯೇ ಮಹಾರಾಷ್ಟ್ರದ ಮುಂಬೈ ವಿಶ್ವವಿದ್ಯಾಲಯ ಮತ್ತು ಅಕ್ಕಲಕೋಟೆ ಹಾಗೂ ಆಂಧ್ರಪ್ರದೇಶದ ಉಸ್ಮಾನಿಯ ಮತ್ತು ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲೂ ಕನ್ನಡ ಸ್ನಾತಕೋತ್ತರ ವಿಭಾಗಗಳಿವೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ತೆಲುಗಿನ ಒಂದು ವಿಭಾಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿದೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮರಾಠಿ ಸ್ನಾತಕೋತ್ತರ ವಿಭಾಗವಿದೆ. ಇಂತಹ ವಿರಳ ಉದಾಹರಣೆಗಳ ಮೂಲಕ ಚಾರಿತ್ರಿಕ ಅನಿವಾರ್ಯದ ನಿಜದ ನೆಲೆಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಇದು ಕರ್ನಾಟಕದ ಸಮಸ್ಯೆ ಮಾತ್ರವೇ?
ಶಿಕ್ಷಣ ಮತ್ತು ಆಡಳಿತದಲ್ಲಿ ಭಾಷೆಯ ಸ್ಥಾನ ಕುರಿತಂತೆ ಕರ್ನಾಟಕ ಬೇರೆ ರಾಜ್ಯಗಳಿಗಿಂತ ಕೆಟ್ಟಸ್ಥಿತಿಯಲ್ಲಿದೆಯೆಂದು ಬಿಂಬಿಸಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಆಂಗ್ಲಭಾಷಾ ಮಾಧ್ಯಮದ ಹಾವಳಿ ಜಾಸ್ತಿಯಾಗಿದ್ದು, ಉಳಿದ ರಾಜ್ಯಗಳಲ್ಲಿ ರಾಜ್ಯಭಾಷೆಯೇ ಮೇಲುಗೈ ಸಾಧಿಸಿದೆಯೆಂಬ ಭಾವನೆಯನ್ನು ಬಿತ್ತಲಾಗುತ್ತಿದೆ. ಆದರೆ ಪ್ರಮಾಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಇರಬಹುದಾದರೂ ಆಂಗ್ಲಮಾಧ್ಯಮವೇ ಎಲ್ಲ ರಾಜ್ಯಗಳ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ನಮ್ಮ ರಾಜ್ಯದಲ್ಲಿ ಕಂಠಪಾಠದಂತೆ ಹೊಗಳುತ್ತಿರುವ ತಮಿಳುನಾಡಿನ ಶಿಕ್ಷಣದಲ್ಲೂ ಆಂಗ್ಲಭಾಷೆ ಮತ್ತು ಮಾಧ್ಯಮ ವ್ಯಾಪಕವಾಗಿದೆ. ತಮಿಳಿಗರು ಸಾಮಾನ್ಯವಾಗಿ ತಮಿಳನ್ನೇ ದೈನಂದಿನ ವ್ಯವಹಾರದಲ್ಲಿ ಬಳಸುತ್ತಿರುವುದು ಇಂಥ ಕಂಠಪಾಠಕ್ಕೆ ಕಾರಣವಾಗಿರಬಹುದು.
ತಮಿಳುನಾಡಿನಲ್ಲಿ ತಮಿಳು ಭಾಷಾ ಬಳಕೆಯು ದಟ್ಟವಾಗಿರುವುದಕ್ಕೆ ವರ್ಗ ಸ್ವರೂಪವೂ ಒಂದು ಕಾರಣವಾಗಿದೆ ಎಂಬುದು ನನ್ನ ತಿಳಿವಳಿಕೆ. ತಮಿಳುನಾಡಿನಲ್ಲಿ ಕೆಳವರ್ಗದ ಜನಸಮೂಹ ಅಧಿಕವಾಗಿದ್ದು, ಅವರೆಲ್ಲರೂ ಅನಿವಾರ್ಯವಾಗಿ ತಮಿಳನ್ನೇ ಬಳಸುತ್ತ ಬಂದಿದ್ದಾರೆ. ದ್ರಾವಿಡ ಸಂಸ್ಕøತಿ ಚಳವಳಿಯ ಫಲವಾಗಿ ಉಗ್ರಾಭಿಮಾನವನ್ನೂ ರೂಢಿಸಿಕೊಂಡಿದ್ದಾರೆ. ಆದರೆ ಶಿಕ್ಷಣ ಮತ್ತು ಆಡಳಿತ ಕ್ಷೇತ್ರಗಳ ಸಮಕಾಲೀನ ಸತ್ಯ ಬೇರೆಯೇ ಇದೆ.
ಆಡಳಿತ ಭಾಷೆಯ ವಿಷಯಕ್ಕೆ ಬಂದರೆ, ತಮಿಳುನಾಡಿನಲ್ಲಿ ಕರ್ನಾಟಕದಂತೆಯೇ ಜಿಲ್ಲೆ, ತಾಲೂಕು ಮಟ್ಟದಲ್ಲಿ ತಮಿಳು ಸಂಪೂರ್ಣ ಆಡಳಿತ ಭಾಷೆಯಾಗಿ ಬಳಕೆಯಲ್ಲಿದೆ. ಆದರೆ ಸಚಿವಾಲಯದಲ್ಲಿ ಈಗಲೂ ಆಂಗ್ಲಭಾಷೆಯ ಬಳಕೆ ಹೇರಳವಾಗಿದೆ. ಸಚಿವಾಲಯದ ಭಾಷಾ ಬಳಕೆಯಲ್ಲಿ ಜಯಲಲಿತಾ ಮತ್ತು ಕರುಣಾನಿಧಿಯವರ ಆಡಳಿತಾವಧಿಗೆ ಅನುಗುಣವಾಗಿ ವ್ಯತ್ಯಾಸಗೊಳ್ಳುವುದೂ ಉಂಟು. ಜಯಲಲಿತಾ ಅವರಿದ್ದಾಗ ಆಂಗ್ಲಭಾಷೆ , ಕರುಣಾನಿಧಿಯವರಿದ್ದಾಗ ತಮಿಳು ಭಾಷೆ ಆದ್ಯತೆ ಪಡೆಯುತ್ತದೆ. ಆದರೆ ಇದು ಪ್ರಮಾಣದಲ್ಲಾಗುವ ವ್ಯತ್ಯಾಸವೇ ಹೊರತು ಆಂಗ್ಲಭಾಷೆ ಸಂಪೂರ್ಣ ನಿಷಿದ್ಧವಾಗಿಲ್ಲ ಮತ್ತು ಪ್ರಾಮುಖ್ಯವನ್ನೂ ಕಳೆದುಕೊಂಡಿಲ್ಲ. ಈ ಪರಿಸ್ಥಿತಿಗೆ ತಮಿಳುನಾಡಿಗರು ಹಿಂದಿ ವಿರೋಧಿಯಾಗಿರುವಂತೆ ಆಂಗ್ಲ ಭಾಷೆಯ ವಿರೋಧಿಗಳಲ್ಲದಿರುವುದೂ ಒಂದು ಕಾರಣವೆನ್ನಬಹುದು. ಆರಂಭದಲ್ಲಿ ಹಿಂದಿ ಬಳಕೆಯ ಪರವಾಗಿದ್ದ ರಾಜಾಜಿಯವರೇ ಆನಂತರ ಹಿಂದಿ ಬಳಕೆಗೆ ವಿರೋಧಿಯಾದ ಉದಾಹರಣೆಯನ್ನೂ ಇಲ್ಲಿ ನೆನೆಯಬಹುದು. ಹಿಂದಿ ವಿರೋಧವೂ ತಮಿಳುಪರ ಉಗ್ರಾಭಿಮಾನವಾಗುವುದರ ಜೊತೆಗೆ ಆಂಗ್ಲಭಾಷಾ ಪ್ರೀತಿಯಾಗಿಯೂ ಪರಿಣಮಿಸಿದ್ದು, ತಮಿಳರ ವಿಶೇಷ. ಹಿಂದಿನ ಕನ್ನಡ ಕಾವಲು ಸಮಿತಿಯ ಒಂದು ಪುಸ್ತಕದಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಪಾಟೀಲ ಪುಟ್ಟಪ್ಪನವರು ಕೊಟ್ಟಿರುವ ಮಾಹಿತಿಯ ಪ್ರಕಾರ 1989ರಲ್ಲಿ ತಮಿಳುನಾಡಿನ ಸಚಿವಾಲಯದಲ್ಲಿ ಶೇ.70ರಷ್ಟು ಆಂಗ್ಲಭಾಷೆ ಬಳಕೆಯಾಗುತ್ತಿತ್ತು ( ಅದೇ ಸಂದರ್ಭದಲ್ಲಿ ಕರ್ನಾಟಕ ಸಚಿವಾಲಯದಲ್ಲಿ ಕನ್ನಡದ ಬಳಕೆ ಹೆಚ್ಚಾಗಿತ್ತು). ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಸಂಗ್ರಹಿಸಿದ ಮಾಹಿತಿಯಂತೆ ಆಗ-ಅಂದರೆ 2002ರ ಸುಮಾರಿನಲ್ಲಿ ತಮಿಳುನಾಡು ಸಚಿವಾಲಯ ಶೇ.40ರಷ್ಟು ಆಂಗ್ಲಭಾಷೆಯನ್ನು ಬಳಸುತ್ತಿತ್ತು. ನಮ್ಮ ಸಚಿವಾಲಯದಲ್ಲಿ ಆಂಗ್ಲ ಭಾಷೆ ಬಳಕೆ ಸಾಕಷ್ಟು ಕಡಿಮೆಯಾಗಿತ್ತು. ಆದರೂ ತಮಿಳು ಪ್ರಕಟಿಸುವ ಮೌಖಿಕ ಉಗ್ರಾಭಿಮಾನದಿಂದ ತಮಿಳುನಾಡಿನಲ್ಲಿ ಆಂಗ್ಲಭಾಷೆಯ ಅಂತ್ಯಕ್ರಿಯೆಯಾಗಿದೆ ಎಂದು ಭಾವಿಸುವವರೂ ನಮ್ಮಲ್ಲಿದ್ದಾರೆ!
ಕೇರಳದ ಪರಿಸ್ಥಿತಿ
ಕೇರಳದಲ್ಲಿಯೂ ನೂರಕ್ಕೆ ನೂರು ಮಲೆಯಾಳಿ ಭಾಷೆ ಬಳಕೆಯಾಗುತ್ತಿಲ್ಲ. ಸುಮಾರು ಆರು ವರ್ಷಗಳ ಹಿಂದೆ ಕೇರಳ ಸರ್ಕಾರವು ಒಂದು ಸುತ್ತೋಲೆ ಹೊರಡಿಸಿ, ಶಿಕ್ಷಣ ಮತ್ತು ಸಹಕಾರ ಇಲಾಖೆಗಳಲ್ಲಿ ಪೂರ್ಣ ಮಲಯಾಳಂನಲ್ಲಿ ಆಡಳಿತ ನಡೆಸಬೇಕು ಎಂದು ಸೂಚಿಸಿತ್ತು. ಇದರರ್ಥ ಸ್ಪಷ್ಟ. ಅಲ್ಲಿಯೂ ಆಡಳಿತದಲ್ಲಿ ಆಂಗ್ಲಭಾಷೆಯ ಬಳಕೆ ಸಂಪೂರ್ಣ ನಿಂತಿಲ್ಲ. ಜೊತೆಗೆ ಆಡಳಿತ ಮತ್ತು ಶಿಕ್ಷಣದ ದೃಷ್ಟಿಯಿಂದ ಕಾಸರಗೋಡನ್ನು ಕನ್ನಡ ಭಾಷಿಕ ಅಲ್ಪಸಂಖ್ಯಾತರ ಪ್ರದೇಶ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಕನ್ನಡಿಗರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಕನ್ನಡವನ್ನು ಬಲ್ಲ ಅಧಿಕಾರಿಗಳನ್ನು ಹಾಕಬೇಕೆಂದು 1959ರಲ್ಲೇ ಆದೇಶಿಸಲಾಗಿದೆ(ಆದೇಶ ಸಂಖ್ಯೆ ಎಂ.ಎಸ್ 572.ಜೂನ್ 1959). ಜತೆಗೆ ಕನ್ನಡದಲ್ಲಿ ಸರ್ಕಾರದ ಆದೇಶಗಳನ್ನು ಕೊಡುವ ಅವಕಾಶವೂ ಇದೆ. ಹೀಗೆ ದ್ವಿಭಾಷಿಕ ಆಡಳಿತವನ್ನು ಅಳವಡಿಸಿಕೊಂಡು ಮಾದರಿಯಾಗಿದ್ದ ಕಾಸರಗೋಡಿನ ಆಡಳಿತದಲ್ಲಿ ಇತ್ತೀಚೆಗೆ ಕನ್ನಡಕ್ಕೆ ಹಿನ್ನಡೆಯಾಗಿದೆಯೆಂದು ಹೇಳಲಾಗುತ್ತಿದ್ದರೂ ಭಾಷಿಕ ಅಲ್ಪಸಂಖ್ಯಾತರ ಪ್ರದೇಶವೆಂಬ ಲಿಖಿತಾದೇಶ ಹೀಗೇ ಇರುವುದರಿಂದ ಕನ್ನಡಿಗರ ಹಕ್ಕು ಇನ್ನೂ ಜೀವಂತವಾಗಿದೆ. ಕರ್ನಾಟಕದಲ್ಲಿ ಒಂದಿಂಚು ಪ್ರದೇಶವೂ ಅಧಿಕೃತವಾಗಿ ಭಾಷಾ ಅಲ್ಪಸಂಖ್ಯಾತರ ಪ್ರದೇಶವೆಂದು ಘೋಷಿತವಾಗಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಬೆಳಗಾವಿಯಲ್ಲಿ ಮರಾಠಿಗರ `ಪ್ರಾಬಲ್ಯ’ ಪ್ರಕಟವಾಗುತ್ತಿದ್ದರೂ ಕರ್ನಾಟಕದ ಯಾವುದೇ ಸರ್ಕಾರವು ಸಂವಿಧಾನಾತ್ಮಕವಾದ ಕೆಲವು ಸೌಲಭ್ಯಗಳನ್ನು ಒದಗಿಸಿದೆಯೇ ಹೊರತು ಭಾಷಿಕ ಅಲ್ಪಸಂಖ್ಯಾತರ ಪ್ರದೇಶವೆಂದು ಘೋಷಿಸಿಲ್ಲ. ಕನ್ನಡಿಗರು ಅದಕ್ಕೆ ಅವಕಾಶ ಕೊಟ್ಟಿಲ್ಲ. ಇದು ಅಭಿಮಾನಾತ್ಮಕ ಸಂಗತಿಯಾಗಿದೆ. ಆದರೂ ಸಂವಿಧಾನದ 350 ಎ ಮತ್ತು 350 ಬಿ ಪರಿಚ್ಛೇದಗಳು ಎಲ್ಲ ರಾಜ್ಯಗಳಲ್ಲಿರುವ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸುವ ಅಧಿಕೃತ ನಿರ್ದೇಶನವನ್ನು ನೀಡುತ್ತವೆ. ಇದಕ್ಕನುಗುಣವಾಗಿ ಕರ್ನಾಟಕದಲ್ಲಿ ಮರಾಠಿ, ತಮಿಳು, ಉರ್ದು, ಮಲೆಯಾಳಿ ಶಾಲೆಗಳಿವೆ. ಸಂವಿಧಾನಾತ್ಮಕ ಸೂಚನೆಗೆ ಅನುಗುಣವಾಗಿ ಅಲ್ಪಸಂಖ್ಯಾತರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಅವರ ಭಾಷೆಯಲ್ಲೇ ಸರ್ಕಾರದ ಆದೇಶಗಳನ್ನು ಬೇಡಿಕೆಗನುಗುಣವಾಗಿ ಪೂರೈಸಬೇಕಾಗುತ್ತದೆ. ಈಗ ಕರ್ನಾಟಕದಲ್ಲಿ ಉರ್ದು ಮಾಧ್ಯಮದ 4154, ಮರಾಠಿಯ 484, ತಮಿಳಿನ 182, ಮಲೆಯಾಳಂನ 4 ಶಾಲೆಗಳಿವೆ. ಕಾಸರಗೋಡು ಭಾಗದಲ್ಲಿ 192 ಕನ್ನಡ ಶಾಲೆಗಳಿವೆ. ಮುಂಬೈ ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ನೂರಾರು ಕನ್ನಡ ಶಾಲೆಗಳಿವೆ. ತಮಿಳುನಾಡಿನ ಧರ್ಮಪುರಿಯಲ್ಲಿ ಬೇಡಿಕೆಗನುಣವಾಗಿ ಕನ್ನಡದಲ್ಲಿ ಆದೇಶ ಪಡೆಯಲು ಅವಕಾಶವಿದೆ. ಮಹಾರಾಷ್ಟ್ರ ಸರ್ಕಾರವು ಇತ್ತೀಚಿನ ಹತ್ತು ವರ್ಷಗಳಲ್ಲಿ 1709 ಅಧಿನಿಯಮ ಹಾಗೂ 609 ಆದೇಶಗಳನ್ನು ಕನ್ನಡದಲ್ಲಿ ಪ್ರಕಟಿಸಿದೆ. 1065 ಅಧಿನಿಯಮ 1400 ಸುತ್ತೋಲೆಗಳನ್ನು ಹಿಂದಿಯಲ್ಲಿ ಪ್ರಕಟಿಸಿದೆ. 2650 ಸುತ್ತೋಲೆಗಳು ಉರ್ದು ಭಾಷೆಯಲ್ಲಿ ಬಂದಿವೆ. ಈ ಸಂಖ್ಯೆಗೆ ಹೋಲಿಸಿದರೆ ಕರ್ನಾಟಕದಲ್ಲಿ ಬೇರೆ ಭಾಷೆಯ ಆದೇಶ/ಸುತ್ತೋಲೆಗಳು ಬಂದಿರುವುದು ತೀರಾ ಕಡಿಮೆ. ಉದಾಹರಣೆಗೆ ಹೇಳುವುದಾದರೆ 1999ರಲ್ಲಿ 28, 2000ರಲ್ಲಿ 11, 2001ರಲ್ಲಿ 10, 2002ರಲ್ಲಿ 2 ಮತ್ತು 2003ರಲ್ಲಿ 3 ಆದೇಶಗಳು ಉರ್ದು ಭಾಷೆಯಲ್ಲಿ ಬಂದಿವೆ. 2002 ಮತ್ತು 2003ರಲ್ಲಿ ಯಾವುದೇ ಆದೇಶವೂ ಮರಾಠಿಯಲ್ಲಿ ಬಂದಿಲ್ಲ. ಇದಿಷ್ಟು ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಇದ್ದ ಸಂಖ್ಯೆ. ಇತ್ತೀಚಿನದನ್ನು ನಾನು ಸಂಗ್ರಹಿಸಿಲ್ಲ. ಆದರೆ ಪ್ರಮಾಣವಾರು ವ್ಯತ್ಯಾಸವನ್ನು ಗಮನಿಸಿದರೆ ಕನ್ನಡ ಬಳಕೆಯ ಪ್ರಗತಿ ಅರ್ಥವಾಗುತ್ತದೆ.
ಇನ್ನೊಂದು ವಿಶೇಷ ಅಂಶವನ್ನೂ ಇಲ್ಲಿ ಹೇಳಬೇಕು. ಅವಿಭಜಿತ ಆಂಧ್ರಪ್ರದೇಶದ 13 ಜಿಲ್ಲೆಗಳಲ್ಲಿ ಉರ್ದುವನ್ನು ಅಧಿಕೃತವಾಗಿ ಎರಡನೇ ಆಡಳಿತ ಭಾಷೆ ಎಂದು ಘೋಷಿಸಿ ಜಾರಿಮಾಡಲಾಗಿತ್ತು. ಭಾಷಾಪ್ರೇಮಕ್ಕೆ ಹೆಸರಾದ ಪಶ್ಚಿಮ ಬಂಗಾಳದ ಕಾಲಂಪೊಂಗ್, ಕುರ್ಸಿಯೋಂಗ್ ಮತ್ತು ಡಾರ್ಜಲಿಂಗ್ ಜಿಲ್ಲೆಗಳಲ್ಲಿ ನೇಪಾಳಿ ಭಾಷೆಯು ಎರಡನೇ ಅಧಿಕೃತ ಆಡಳಿತ ಭಾಷೆಯಾಗಿದೆ. ಜೊತೆಗೆ ಪಶ್ಚಿಮ ಬಂಗಾಳ ಸರ್ಕಾರವು ತುಂಬಾ ಹಿಂದೆಯೇ ನೇಪಾಳಿ ಮತ್ತು ಉರ್ದು ಭಾಷೆಯ ಪ್ರತ್ಯೇಕ ಸೆಲ್‍ಗಳನ್ನು ಸ್ಥಾಪಿಸಿದೆ. ಮತ್ತೂ ವಿಶೇಷದ ಸಂಗತಿಯೆಂದರೆ 80ರ ದಶಕದಲ್ಲಿ ತಮಿಳುನಾಡು ಸರ್ಕಾರವು ಆಂಗ್ಲಭಾಷೆಯನ್ನು ಎರಡನೇ ಆಡಳಿತ ಭಾಷೆ ಎಂದು ಘೋಷಿಸಿತ್ತು. ಬಿಹಾರದಲ್ಲಿ ಬಿಹಾರಿ ಭಾಷೆಯನ್ನು ಹಿಂದಕ್ಕೆ ತಳ್ಳಿ ಹಿಂದಿಯು ಆಡಳಿತ ಭಾಷೆಯಾಗಿದೆ. ಅಲ್ಲಿ ಉರ್ದು ಎರಡನೇ ಆಡಳಿತ ಭಾಷೆಯಾಗಿದೆ. ಉತ್ತರ ಪ್ರದೇಶದಲ್ಲೂ ಅಷ್ಟೆ. ಹಿಂದಿಯು ಅಧಿಕೃತ ಆಡಳಿತ ಭಾಷೆ, ಉರ್ದು ಎರಡನೇ ಆಡಳಿತ ಭಾಷೆಯಾಗಿದೆ. ಈ ಎಲ್ಲ ವಾಸ್ತವ ಸಂಗತಿಗಳನ್ನು ಗಮನಿಸಿದಾಗ ಕರ್ನಾಟಕದಲ್ಲಿ ಕನ್ನಡಕ್ಕೆ ನಿಜವಾದ ಆದ್ಯತೆ ಮತ್ತು ಪ್ರಾಮುಖ್ಯ ಇರುವುದು ಅರ್ಥವಾಗುತ್ತದೆ. ಈ ಪ್ರಾಮುಖ್ಯವು ಪರಿಪೂರ್ಣವಲ್ಲವಾದರೂ ಬೇರೆ ರಾಜ್ಯಗಳಲ್ಲಿ `ಪರಿಪೂರ್ಣ ಅನುಷ್ಠಾನ’ವೆಂಬ ಅರೆಜ್ಞಾನವು ಈ ವಾಸ್ತವ ಸಂಗತಿಗಳಿಂದ ಬಯಲುಗೊಳ್ಳುತ್ತದೆ. ವಸ್ತುಸ್ಥಿತಿಯ ಅರಿವಿಲ್ಲದೆ ಅಬ್ಬರಿಸುವ ಪ್ರವೃತ್ತಿಯನ್ನು ಇನ್ನಾದರೂ ಬಿಡಬೇಕಾಗುತ್ತದೆ. ಸಾಮಾನ್ಯ ಕನ್ನಡಿಗರನ್ನು ಹಾದಿ ತಪ್ಪಿಸುವ ಅರೆಜ್ಞಾನಕ್ಕೆ ಅಂತ್ಯಹಾಡಬೇಕಾಗುತ್ತದೆ. ಇಂತಹ ಅಂತ್ಯದ ಹಾಡು ಕನ್ನಡವನ್ನು ಕಟ್ಟುವ ಆರಂಭದ ಹಾಡಾಗಬೇಕಾಗುತ್ತದೆ.
ಮಾತೃಭಾಷಾ ಶಿಕ್ಷಣ
ಈಗ ಶಿಕ್ಷಣದಲ್ಲಿ ವಿಶೇಷವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಭಾಷೆಯ ಸ್ಥಾನಮಾನವನ್ನು ಗಮನಿಸೋಣ. ಈ ವಿಷಯದಲ್ಲಿ ಕರ್ನಾಟಕ ಮಾತ್ರವೇ ಸಂಕಷ್ಟ ಅನುಭವಿಸುತ್ತಿದೆಯೆಂದೂ ಕರ್ನಾಟಕದ ಸರ್ಕಾರಗಳಲ್ಲಿ ಇಚ್ಛಾಶಕ್ತಿಯ ಕೊರತೆಯಿದೆಯೆಂದೂ ಮಾತನಾಡುವವರ ದನಿ ದೊಡ್ಡದಾಗಿದೆ. ವಾಸ್ತವವೆಂದರೆ ಉಳಿದಂತೆ ಏನೇ ಇರಲಿ, ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಅಥವಾ ಮಾತೃಭಾಷೆಯ ಮಾಧ್ಯಮ ಕುರಿತಂತೆ ಕರ್ನಾಟಕದ ಎಲ್ಲ ಸರ್ಕಾರಗಳೂ ಆಯಾ ಸಂದರ್ಭನುಸಾರ ಸೂಕ್ತ ಆದೇಶಗಳನ್ನು ಹೊರಡಿಸಿವೆ, ಕಾನೂನು ಹೋರಾಟ ಮಾಡುತ್ತ ಬಂದಿವೆ. ಹಾಗೆ ನೋಡಿದರೆ, ನ್ಯಾಯಾಲಯಗಳೇ ಪ್ರಾಥಮಿಕ ಶಿಕ್ಷಣದಲ್ಲಿ ರಾಜ್ಯಭಾಷೆ ಅಥವಾ ಮಾತೃಭಾಷೆ ಮಾಧ್ಯಮದ ಅನುಷ್ಠಾನಕ್ಕೆ ವಿರುದ್ಧವಾಗಿವೆ. ಕನ್ನಡವೊಂದನ್ನೇ ಪ್ರಥಮ ಭಾಷೆಯನ್ನಾಗಿಸಿದ ಗೋಕಾಕ್ ವರದಿಯನ್ವಯ ಸರ್ಕಾರವು ಹೊರಡಿಸಿದ ಆದೇಶವನ್ನು ಉಚ್ಚ ನ್ಯಾಯಾಲಯವು ಸಂವಿಧಾನ 14, 29(1), ಮತ್ತು 39(1)ನೇ ಪರಿಚ್ಛೇದಗಳಿಗೆ ವಿರುದ್ಧವೆಂದು ಪರಿಗಣಿಸಿ ರದ್ದುಮಾಡಿದಾಗ ಸರ್ಕಾರವು 19-6-1989ರಂದು ಹೊಸ ಆದೇಶ ಹೊರಡಿಸಿತು. ಅಲ್ಪಸಂಖ್ಯಾತರ ಭಾಷೆಗಳಿಗೂ ಅವಕಾಶ ಮಾಡಿಕೊಟ್ಟಿತು. ಕನ್ನಡ ಅಥವಾ ಮಾತೃಭಾಷಾ ಮಾಧ್ಯಮವನ್ನು ಕಿರಿಯ ಪ್ರಾಥಮಿಕ ತರಗತಿಗಳಿಗೆ ಕಡ್ಡಾಯ ಮಾಡಿತು. ಇದನ್ನು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನವರೆಗೆ ಹೋದರು. 1993ರಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರದ 19-6-1989ರ ಆದೇಶವನ್ನು ಎತ್ತಿಹಿಡಿಯಿತು. ರಾಜ್ಯಭಾಷೆ ಅಥವಾ ಮಾತೃಭಾಷಾ ಮಾಧ್ಯಮದ ಪರವಾಗಿ ತೀರ್ಪು ನೀಡಿತು. ಆನಂತರ ಕರ್ನಾಟಕ ಸರ್ಕಾರವು 29-4-1994ರಲ್ಲಿ ಹೊಸ ಆದೇಶ ಹೊರಡಿಸಿ ರಾಜ್ಯಭಾಷೆ ಕನ್ನಡ ಅಥವಾ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸಿತು. ಸಿಬಿಎಸ್‍ಇ, ಪಿಸಿಎಸ್‍ಇ ಶಾಲೆಗಳಿಗೆ ಸರ್ಕಾರದ ನಿರಾಕ್ಷೇಪಣಾ ಪತ್ರ ಬೇಕೇಬೇಕೆಂದು ತಿಳಿಸಿತು. ಈ ಆದೇಶವನ್ನು ಪ್ರಶ್ನಿಸಲಾಯಿತು. 1999ರಲ್ಲಿ ಸುಪ್ರೀಂ ಕೋರ್ಟ್ ಮತ್ತೆ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿಯಿತು. ಖಾಸಗಿ ಸಂಸ್ಥೆಗಳ ಕಾನೂನು ಹೋರಾಟ ನಿಲ್ಲಲಿಲ್ಲ. 3/7/2008 ರಂದು ರಾಜ್ಯದ ಉಚ್ಚ ನ್ಯಾಯಾಲಯವು ಸರ್ಕಾರದ 1994ರ ಆದೇಶವನ್ನು ರದ್ದುಗೊಳಿಸಿ `ಕನ್ನಡ ಅಥವಾ ಮಾತೃಭಾಷಾ ಮಾಧ್ಯಮವನ್ನು ಸರ್ಕಾರಿ ಅಥವಾ ಸರ್ಕಾರದ ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯಿಸಬಹುದು. ಅನುದಾನರಹಿತ ಖಾಸಗಿ ಶಾಲೆಗಳಿಗೆ ಕಡ್ಡಾಯ ಮಾಡುವಂತಿಲ್ಲ’ ಎಂದು ತೀರ್ಪು ನೀಡಿತು. ಈ ತೀರ್ಪನ್ನು ಸರ್ಕಾರವು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತು. ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವು 6/5/2014 ರಂದು ತೀರ್ಪು ನೀಡಿ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು. ಕನ್ನಡ ಅಥವಾ ಮಾತೃಭಾಷಾ ಮಾಧ್ಯಮವನ್ನು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಡ್ಡಾಯಗೊಳಿಸಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ರದ್ದುಗೊಳಿಸಿತು. ಈಗ ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನೂ ಸುಪ್ರೀಂ ಕೋರ್ಟು ವಜಾಗೊಳಿಸಿದೆ.
ಇನ್ನೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕು. ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕದ ಜತೆಗೆ ಆಂಧ್ರ ಮತ್ತು ತಮಿಳುನಾಡು ಸರ್ಕಾರದ ಮೇಲ್ಮನವಿಗಳೂ ವಿಚಾರಣೆಗೆ ಇದ್ದವು. ಆಗ ಆಂಧ್ರದಲ್ಲಿ ತೆಲಂಗಾಣದ ವಿವಾದ ತಾರಕಕ್ಕೆ ಏರಿದ್ದರಿಂದ ಅಲ್ಲಿನ ಸರ್ಕಾರವು ಈ ಮೇಲ್ಮನವಿ ವಿಚಾರದಲ್ಲಿ ಆಸಕ್ತಿ ವಹಿಸಲಿಲ್ಲ. ತಮಿಳುನಾಡು ಸರ್ಕಾರ ತಮಿಳು ಅಥವಾ ಮಾತೃಭಾಷಾ ಮಾಧ್ಯಮದ ಪರವಾದ ತನ್ನ ವಾದವನ್ನು ಮಂಡಿಸಲು ಮುಂದಾಗಲಿಲ್ಲ. ಬದಲಾಗಿ ತನ್ನ ಮೇಲ್ಮನವಿಯನ್ನೇ ವಾಪಸ್ ಪಡೆಯಿತು! ತಮಿಳುನಾಡಿನ ಶಿಕ್ಷಣವೆಲ್ಲವೂ ತಮಿಳುಮಯ ಎಂದು ಬಿಂಬಿಸುವವರು ಈ ಅಂಶವನ್ನು ಗಮನಿಸಬೇಕು. ಕಡೆಗೆ ಸುಪ್ರೀಂ ಕೋರ್ಟ್‍ನಲ್ಲಿ ವಾದ ಮಂಡಿಸಿದ್ದು ಕರ್ನಾಟಕ ಸರ್ಕಾರ ಮಾತ್ರ.
ತಮಿಳುನಾಡಿನಲ್ಲೂ ಕರ್ನಾಟಕದಂತೆಯೇ ಆಂಗ್ಲ ಮಾಧ್ಯಮ ಶಾಲೆಗಳ ಹಿಡಿತ ಈಗ ಹೆಚ್ಚಾಗಿದೆ. ಅಷ್ಟೇಕೆ, ಕರ್ನಾಟಕದಲ್ಲಿ ಮೊದಲನೇ ತರಗತಿಯಿಂದ ಆಂಗ್ಲ ಭಾಷೆಯನ್ನು ಒಂದು ವಿಷಯವಾಗಿ (ಮಾಧ್ಯಮವಾಗಿ ಅಲ್ಲ) ಕಲಿಸಬೇಕೆಂಬ ಕೂಗು ಏಳುವುದಕ್ಕೆ ದಶಕಗಳ ಮುಂಚೆಯೇ ತಮಿಳುನಾಡಿನಲ್ಲಿ ಸರ್ಕಾರಿ ನಿಯಂತ್ರಿತ ಬೋರ್ಡ್ ಸ್ಕೂಲುಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಭಾಷೆಯನ್ನು ಒಂದು ವಿಷಯವಾಗಿ ಕಲಿಸುತ್ತ ಬರಲಾಗಿದೆ. ನಗರ ಮತ್ತು ಪಟ್ಟಣಗಳಲ್ಲಿ ಹೆಚ್ಚಾಗಿರುವ ಬೋರ್ಡ್ ಸ್ಕೂಲ್‍ಗಳಿಗೆ ಆಯಾ ಪ್ರದೇಶದ ಶೇ.80ರಷ್ಟು ವಿದ್ಯಾರ್ಥಿಗಳು ಸೇರುತ್ತಾರೆ. ಈಗ ಆಂಗ್ಲ ಭಾಷೆಯ ಕಲಿಕೆಯನ್ನು ಎಲ್ಲ ಶಾಲೆಗಳಿಗೂ ವಿಸ್ತರಿಸಲಾಗಿದೆ. ತಮಿಳು ನಾಡಿನ ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಸಂಸ್ಥೆಗಳು ತಮಿಳು ಅಥವಾ ಮಾತೃಭಾಷಾ ಮಾಧ್ಯಮದ ಅನುಷ್ಠಾನವನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿ ಕರ್ನಾಟಕ ಸಂಸ್ಥೆಗಳಂತೆಯೇ ಗೆಲುವು ಸಾಧಿಸಿವೆ. ಈಗ ಅಲ್ಲಿಯೂ ಕರ್ನಾಟಕದ ಸನ್ನಿವೇಶವೇ ಇದೆ.
ಕೇರಳವೂ ಇದಕ್ಕೆ ಹೊರತಾಗಿಲ್ಲ. ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಶೇ.90ರಷ್ಟು ಆಂಗ್ಲ ಮಾಧ್ಯಮ ಶಾಲೆಗಳಿವೆ. ಸರ್ಕಾರಿ ಶಾಲೆಗಳಲ್ಲಿ ಮಲೆಯಾಳಿ ಮಾಧ್ಯಮವಿದೆ. 5ನೇ ತರಗತಿಯಿಂದ ಆಂಗ್ಲ ಮಾಧ್ಯಮಕ್ಕೆ ಅವಕಾಶವಿದೆ. ಮಲಯಾಳಿ ಮಾಧ್ಯಮದ ಶಾಲೆಗಳಲ್ಲಿ ಒಂದು ವಿಷಯವಾಗಿ ಆಂಗ್ಲ ಭಾಷೆಯನ್ನು ಕಲಿಸಬಹುದಾಗಿದೆ (ಯಾವ ತರಗತಿಯಿಂದ ಎಂಬುದು ನನಗೆ ಖಚಿತವಾಗಿಲ್ಲ. ನಾನು ವಿಚಾರಿಸಿದಾಗ ಕೆಲವರು 3ರಿಂದ ಎಂದರು. ಇನ್ನೂ ಕೆಲವರು 5ರಿಂದ ಎಂದರು). ಆಂಗ್ಲ ಭಾಷಾ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಮಲಯಾಳಿಯನ್ನು ಒಂದು ವಿಷಯವಾಗಿ ಕಲಿಸಲಾಗುತ್ತಿದೆ. ಆದರೆ, ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಕಲಿಕೆ ಕಡ್ಡಾಯವಲ್ಲ. ಸಿಬಿಎಸ್‍ಇ ಶಾಲೆಗಳಲ್ಲಿ 2000ದಿಂದ ಒಂದು ವಿಷಯವಾಗಿ ಮಲಯಾಳಿ ಭಾಷೆಯನ್ನು ಕಲಿಸಬೇಕೆಂದು ಕಡ್ಡಾಯ ಮಾಡಲಾಗಿದೆ. ಆಂಧ್ರಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ತೆಲುಗು ಮಾಧ್ಯಮದಲ್ಲಿರುವಂತೆ ಉರ್ದು ಮಾಧ್ಯಮದಲ್ಲೂ ಸಾಕಷ್ಟಿವೆ. ಉರ್ದು ಶಾಲೆಗಳಲ್ಲಿ 5ರಿಂದ 10ನೇ ತರಗತಿಯವರೆಗೆ ತೆಲುಗನ್ನು ಒಂದು ವಿಷಯವಾಗಿ ಕಲಿಸಲಾಗುತ್ತದೆ. ಸಿಬಿಎಸ್‍ಇ ಪಠ್ಯ ಕ್ರಮದಲ್ಲೂ ತೆಲುಗನ್ನು ಒಂದು ವಿಷಯವಾಗಿ ಅಳವಡಿಸಲಾಗಿದೆ. ನಮ್ಮ ರಾಜ್ಯದಂತೆಯೇ ಆಂಧ್ರದಲ್ಲೂ (ತೆಲಂಗಾಣದಲ್ಲೂ) ಆಂಗ್ಲ ಮಾಧ್ಯಮ ಶಾಲೆಗಳಿಗೆ ತಡೆಯೊಡ್ಡಲು ಸಾಧ್ಯವಾಗಿಲ್ಲ. ಆದರೆ 3ನೇ ತರಗತಿಯಿಂದ ತೆಲುಗನ್ನು ಒಂದು ವಿಷಯವನ್ನಾಗಿ ಕಲಿಯುವ ಅವಕಾಶವನ್ನು ಒದಗಿಸಲಾಗಿದೆ. ಅಶೋಕ ಮಿತ್ರಾ ಆಯೋಗದ ಶಿಫಾರಸಿನಂತೆ ಪಶ್ಚಿಮ ಬಂಗಾಳದ ಬಂಗಾಳಿ ಭಾಷಾ ಮಾಧ್ಯಮ ಶಾಲೆಗಳಲ್ಲಿ 3ನೇ ತರಗತಿಯಿಂದ ಆಂಗ್ಲಭಾಷೆಯ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ. ಹರಿಯಾಣದಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲಭಾಷೆ ಕಲಿಸಲಾಗುತ್ತಿದೆ. ಅಸ್ಸಾಂ ಮುಂತಾದ ಆ ಭಾಗದ ರಾಜ್ಯಗಳಲ್ಲಿ 2ನೇ ತರಗತಿಯಿಂದ ಆಂಗ್ಲ ಭಾಷೆಯನ್ನು ಕಲಿಸುತ್ತಿರುವುದಾಗಿ ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲಿ ಒಂದು ವಿಶಿಷ್ಟ ಪ್ರಯೋಗವೇ ನಡೆಯಿತು. ಕೆಲವು ವರ್ಷಗಳ ಹಿಂದೆ ಮರಾಠಿ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಸರ್ಕಾರವೇ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಿತು. ಇದರ ಫಲವಾಗಿ ಮರಾಠಿ ಮಾಧ್ಯಮಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಯಿತು. ಆಗ ಸರ್ಕಾರವು 13 ಜನರ ಒಂದು ಸಮಿತಿಯನ್ನು ನೇಮಿಸಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಸೂಕ್ತ ಸಲಹೆ ನೀಡಲು ಕೇಳಿಕೊಂಡಿತು. ಈ ಸಮಿತಿಯ ಶಿಫಾರಸಿನಂತೆ 1999ರಿಂದ ಮರಾಠಿ ಮಾಧ್ಯಮದ ಒಂದನೇ ತರಗತಿಯಿಂದಲೇ ಒಂದು ವಿಷಯವಾಗಿ ಆಂಗ್ಲ ಭಾಷೆಯ ಕಲಿಕೆಯನ್ನು ಆರಂಭಿಸಲಾಯಿತು. ಆಗ ಮರಾಠಿ ಮಾಧ್ಯಮ ಶಾಲೆಗಳಿಗೆ ಸೇರುವವರ ಸಂಖ್ಯೆ ಹೆಚ್ಚಾಯಿತು. ಇದೇ ಸಮಿತಿಯು ಪ್ರಾಥಮಿಕಪೂರ್ವ ತರಗತಿಗಳನ್ನು (ಎಲ್‍ಕೆಜಿ ಮತ್ತು ಯುಕೆಜಿ) ಪ್ರಾಥಮಿಕ ಶಾಲೆಯ ಭಾಗವಾಗಿಯೇ ಅಳವಡಿಸಬೇಕೆಂದೂ ಪ್ರತ್ಯೇಕತೆ ಬೇಡವೆಂದೂ ಶಿಫಾರಸು ಮಾಡಿದ್ದನ್ನು ಅಲ್ಲಿಯ ಸರ್ಕಾರ ಒಪ್ಪಿಕೊಂಡಿದೆ. ಜೊತೆಗೆ ಪ್ರಾಥಮಿಕಪೂರ್ವ ತರಗತಿಗಳಿಗಾಗಿಯೇ ಮರಾಠಿಯಲ್ಲಿ 6 ಜನಪ್ರಿಯ ಮಕ್ಕಳ ಸಾಹಿತ್ಯ ರಚನೆಯ ಯೋಜನೆಯನ್ನು ರೂಪಿಸಿದೆ. ಮರಾಠಿ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲಭಾಷೆ ಜೊತೆಗೆ ಮೂರನೇ ತರಗತಿಯಿಂದ ಹಿಂದಿಯನ್ನು ಕಲಿಸುತ್ತಾರೆ. ಇತರೆ ಮಾಧ್ಯಮದ ಶಾಲೆಗಳಲ್ಲೂ ಇದೇ ಮಾದರಿಯಿದೆ. ಮೂರನೇ ತರಗತಿಯಿಂದ ಹಿಂದಿಯ ಜೊತೆಗೆ ಮರಾಠಿ ಕಲಿಕೆಯೂ ಇರುತ್ತದೆ. ಮಹಾರಾಷ್ಟ್ರದ ಉರ್ದು, ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳು ಈ ಪಠ್ಯಕ್ರಮವನ್ನು ಅನುಸರಿಸುತ್ತಿವೆ. ಹಿಂದಿ ಮತ್ತು ಮರಾಠಿಯನ್ನು ಕಲಿಸುತ್ತಿವೆ. ಸಿಬಿಎಸ್‍ಇ ಪಠ್ಯಕ್ರಮದಲ್ಲಿ ಮರಾಠಿ ಅಳವಡಿಸಿರುವುದು ಒಂದು ವಿಶೇಷ ಅಂಶ. ಈ ಕೆಲವು ನಿದರ್ಶನಗಳ ಮೂಲಕ ನಾವು ತಿಳಿಯಬೇಕಾದ ಅಂಶಗಳು ಹೀಗಿವೆ:
1. ಯಾವುದೇ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ರಾಜ್ಯಭಾಷೆ ಅಥವಾ ಮಾತೃಭಾಷಾ ಮಾಧ್ಯಮದವರನ್ನು ಸಂಪೂರ್ಣವಾಗಿ ಕಡ್ಡಾಯ ಮಾಡಲು ಸಾಧ್ಯವಾಗಿಲ್ಲ. ಆಂಗ್ಲಮಾಧ್ಯಮ ಶಾಲೆಗಳನ್ನು ತಡೆಯಲು ನ್ಯಾಯಾಲಯಗಳ ತೀರ್ಪುಗಳು ಅವಕಾಶ ಕಲ್ಪಿಸಿಲ್ಲ.
2 ಭಾಷಾಪಠ್ಯಗಳನ್ನು ಅಳವಡಿಸುವಲ್ಲಿ ಒಂದೊಂದು ರಾಜ್ಯವು ಮಾದರಿಯನ್ನು ಅಳವಡಿಸಿಕೊಂಡಿದ್ದು, ಏಕರೂಪತೆಯಿಲ್ಲ.
3 ಭಾಷಾ ಅಲ್ಪಸಂಖ್ಯಾತರ ಅಗತ್ಯಕ್ಕನುಗುಣವಾಗಿ ಸಂವಿಧಾನಾತ್ಮಕ ಅವಕಾಶಗಳನ್ನು ಎಲ್ಲ ರಾಜ್ಯಗಳೂ ಕಲ್ಪಿಸಿವೆ.
4 ಪ್ರಾಥಮಿಕ ಶಿಕ್ಷಣದಲ್ಲಿ ಬೋಧನಾ ಮಾಧ್ಯಮ ಮತ್ತು ಪಠ್ಯಕ್ರಮದಲ್ಲಿ ಏಕರೂಪತೆ ಇಲ್ಲ.
ಪರಿಹಾರದ ಎರಡು ದಾರಿ
ಸುಪ್ರೀಂ ಕೋರ್ಟ್ ಕೊಟ್ಟಿರುವ 6-5-2೦14ರ ತೀರ್ಪು ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ. ಈ ಸಂದರ್ಭದಲ್ಲಿ ನಾನು ಬೇರೆ ರಾಜ್ಯದ ಗೆಳೆಯರನ್ನು ಸಂಪರ್ಕಿಸಿದಾಗ ಕರ್ನಾಟಕದಷ್ಟು ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಈಗ ನಮ್ಮ ಮುಂದಿರುವ ಮಾರ್ಗವೇನು? ಕರ್ನಾಟಕದಲ್ಲಿ ಕನ್ನಡ ಉಳಿಸಿ ಬೆಳೆಸಲು ಬಹುಮುಖಿ ಮಾರ್ಗಗಳಿವೆ. ಆದರೆ ಪ್ರಾಥಮಿಕ ಶಿಕ್ಷಣದಲ್ಲಿ ರಾಜ್ಯಭಾಷೆ ಅಥವಾ ಮಾತೃಭಾಷೆಯ ಮಾಧ್ಯಮವನ್ನು ಸಾರ್ವತ್ರೀಕರಣಗೊಳಿಸಲು ಆಗಬೇಕಾದ್ದು ಎರಡರಲ್ಲಿ ಒಂದು ಕೆಲಸ.
ಒಂದು- ಸಂವಿಧಾನದ 343ರಿಂದ 351ನೇ ವಿಧಿಯವರೆಗೆ ಇರುವ ಭಾಷಾಸಂಬಂಧಿ ಅಂಶಗಳಲ್ಲಿಯೇ ರಾಷ್ಟ್ರದಾದ್ಯಂತ ಪ್ರಾಥಮಿಕ ಶಿಕ್ಷಣವು ರಾಜ್ಯಭಾಷೆ ಅಥವಾ ಮಾತೃಭಾಷೆಯಲ್ಲಿರಬೇಕೆಂಬ ವಿಷಯವನ್ನು ಅಳವಡಿಸುವುದು.
ಎರಡು- ಯುಪಿಎ ಸರ್ಕಾರದ ಅವಧಿಯಲ್ಲಿ ತಂದ ಕಡ್ಡಾಯ ಶಿಕ್ಷಣ ಕಾಯ್ದೆಯ 29ನೇ ವಿಧಿಯಲ್ಲಿ `ಸಾಧ್ಯವಾದಷ್ಟು ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡಬೇಕು’ ಎಂಬ ವಿಷಯವಿದ್ದು, ಇದರಲ್ಲಿ `ಸಾಧ್ಯವಾದಷ್ಟು’ ಎಂಬ ಪದವನ್ನು ಕೈಬಿಟ್ಟು ರಾಜ್ಯಭಾಷೆ ಅಥವಾ ಮಾತೃಭಾಷೆ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂದು ತಿದ್ದುಪಡಿ ಮಾಡುವುದು. ಸಂವಿಧಾನ ತಿದ್ದುಪಡಿಗೆ ಪಾರ್ಲಿಮೆಂಟಿನ ಜತೆಗೆ ರಾಜ್ಯಗಳ ವಿಧಾನಸಭೆಗಳ ತಾಂತ್ರಿಕ ಒಪ್ಪಿಗೆ ಬೇಕಾಗಬಹುದು. ಆದರೆ ಕಡ್ಡಾಯ ಶಿಕ್ಷಣ ಕಾಯ್ದೆ ತಿದ್ದುಪಡಿಗೆ ಪಾರ್ಲಿಮೆಂಟಿನ ಒಪ್ಪಿಗೆ ಸಾಕು. ಆದ್ದರಿಂದ ಎರಡನೆಯದನ್ನೇ ಒತ್ತಾಯಿಸುವುದು ಉಚಿತ. ಈ ಬಗ್ಗೆ ಕರ್ನಾಟಕ ಸರ್ಕಾರವು ಬೇರೆ ರಾಜ್ಯದ ಸರ್ಕಾರಗಳನ್ನು ಸಂಪರ್ಕಿಸಿ ಸಂಘಟಿಸಿ, ಕೇಂದ್ರದ ಮೇಲೆ ಒತ್ತಡ ತರಬೇಕು. ಸರ್ಕಾರವನ್ನು ಹೊರತುಪಡಿಸಿ ವಿವಿಧ ರಾಜ್ಯಗಳ ಸಮಾನ ಮನಸ್ಕರು ಒಗ್ಗೂಡಿ ಆಂದೋಲನ ನಡೆಸಬೇಕು.
(ಲೇಖಕರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಹಿರಿಯ ಸಾಹಿತಿ)