ಯುವನಿಧಿ ಜಾರಿಗೆ ತೋರುವ ಕಾಳಜಿ ಎನ್ಇಪಿ ಜಾರಿಗೆ ಏಕಿಲ್ಲ? : ವಿಸ್ತಾರ ಅಂಕಣ

ಕೃತಕ ಬುದ್ಧಿಮತ್ತೆಗಿಂತಲೂ ಉನ್ನತವಾದ ಕೆಲಸ ಮಾಡುವ ಕೌಶಲ ಕಲಿಸುವ ಕೇಂದ್ರಗಳಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ರೂಪುಗೊಳ್ಳಬೇಕು. ಅದಕ್ಕೆ ಎನ್ಇಪಿ ಸ್ಪಷ್ಟ ಮಾರ್ಗದರ್ಶನ ಮಾಡುತ್ತದೆ. ಇಂತಹ ಕೌಶಲ ಕಲಿಸುವ ಎನ್ಇಪಿಗಿಂತಲೂ ಕರ್ನಾಟಕ ಸರ್ಕಾರಕ್ಕೆ ಯುವ ನಿಧಿಯದ್ದೇ ಹೆಚ್ಚು ಚಿಂತೆಯಾಗಿದೆ
***************************
ಒಂದು ಪತ್ರಿಕೆ, ಮಾಧ್ಯಮ ಸಂಸ್ಥೆಯ ಸಂಪಾದಕ ಎಂದ ಕೂಡಲೆ ಮುಖ್ಯವಾಗಿ ಅಗತ್ಯವಿರುವುದು ಭಾಷೆಯ ಕಲೆ. ಭಾಷೆಯ ಮೂಲಕ ಜನರಿಗೆ ವಿವಿಧ ಸಾಮಾಜಿಕ, ಆರ್ಥಿಕ, ಇನ್ನಿತರೆ ವಿಚಾರಗಳನ್ನು ಹೇಗೆ ಮುಟ್ಟಿಸಬೇಕು ಎಂಬ ಅರಿವು. ಹಾಗಾದರೆ ಅದಷ್ಟೇ ಸಾಕೆ? ಏಕೆ ಒಬ್ಬ ಶ್ರೇಷ್ಠ ಬುದ್ಧಿಜೀವಿ ಸಂಪಾದಕನಾಗಿ ಸಫಲವಾಗುವುದಿಲ್ಲ? (ಇಂತಹ ಅನೇಕ ಉದಾಹರಣೆಗಳಿವೆ) ಏಕೆಂದರೆ ಸಂಪಾದಕನಾಗಲು ಕೇವಲ ಭಾಷಾ ಕೌಶಲವಷ್ಟೆ ಅಲ್ಲ, ಆರ್ಥಿಕ ದೃಷ್ಟಿಕೋನವಿರಬೇಕಾಗುತ್ತದೆ. ಸಮಾಜದ ಜತೆಗೆ ಬೆರೆಯುವ ಗುಣವಿರಬೇಕಾಗುತ್ತದೆ. ಸಂಸ್ಥೆಯಲ್ಲಿನ ಮಾನವ ಸಂಪನ್ಮೂಲಗಳನ್ನು ದುಡಿಸಿಕೊಳ್ಳುವ ಚಾಕಚಕ್ಯತೆ ಇರಬೇಕಾಗುತ್ತದೆ. ದಿನಕ್ಕೊಂದು ಮಾತನ್ನು ಹೇಳುತ್ತ ಜನರಲ್ಲಿ ಗೊಂದಲ ಸೃಷ್ಟಿಸುವ ಬದಲಿಗೆ, ನಿರಂತರ ಕೆಲವು ವಿಚಾರಗಳನ್ನು ಪ್ರತಿಪಾದಿಸುತ್ತ ನರೇಟಿವ್ ಸೃಷ್ಟಿಸುವ ಹೊಣೆಗಾರಿಕೆಯೂ ಇರಬೇಕಾಗುತ್ತದೆ. ಇದಕ್ಕಾಗಿ ಸಮಾಜದಲ್ಲಿರುವ ಅನೇಕ ಸಂಪನ್ಮೂಲ ವ್ಯಕ್ತಿಗಳನ್ನು ಜೋಡಿಸುವ ಕುಶಲತೆಯೂ ಬೇಕಾಗುತ್ತದೆ.
ಒಂದು ಸಿನಿಮಾ ನಿರ್ದೇಶಕನಾಗಬೇಕೆಂದರೆ ಹಿಂದೆಲ್ಲ ಕೇವಲ ಕಥೆಗಾರರ ಜತೆಗೆ, ಸಂಗೀತಗಾರರ ಜತೆಗೆ ಸೇರಿದಂತೆ ಕೆಲವು ವಿಭಾಗಗಳೊಂದಿಗೆ ಒಡನಾಟ ಹೊಂದಿದ್ದರೆ ಸಾಕಿತ್ತು. ಆದರೆ ಈಗ ಸಿನಿಮಾ ನಿರ್ದೇಶಕ ಆಗಬೇಕೆಂದರೆ ತಂತ್ರಜ್ಞಾನದ ಬದಲಾವಣೆಯ ವೇಗಕ್ಕೆ ಹೊಂದಿಕೊಳ್ಳುವ ಗುಣ ಬೇಕಾಗುತ್ತದೆ. ಈಗಿನ ಯುವಜನರ ಅಥವಾ ಸಿನಿಮಾ ಪ್ರೇಕ್ಷಕರ ಅಭಿರುಚಿಗಳು, ಅವರ ಹಾವಭಾವಗಳು, ಅವರ ಭಾವನೆಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಒಟ್ಟಾರೆ ಒಂದು ತಂಡವನ್ನು ಮುನ್ನಡೆಸುವ ʼಕೌಶಲʼ ಬೇಕಾಗುತ್ತದೆ.
ಈ ವಾರ ಹೇಳಬೇಕೆಂದಿರುವುದು ಇದೇ ವಿಚಾರ. ಕೌಶಲವನ್ನು ಮೈಗೂಡಿಸಿಕೊಳ್ಳುವುದು ಹೇಗೆ? ಕೌಶಲ ಏಕೆ ಬೇಕು? ಸರ್ಕಾರದ ವತಿಯಿಂದ ಕೌಶಲಾಭಿವೃದ್ಧಿ ಇಲಾಖೆಗಳು, ಅದರಿಂದ ಪ್ರತಿ ವರ್ಷ ತರಬೇತಿಗಳನ್ನು ನೀಡಿದ್ದೇ ನೀಡಿದ್ದು. ಅಲ್ಲಿನ ಅಂಕಿ ಅಂಶಗಳ ಆಧಾರದಲ್ಲಿ ನೋಡಿದರೆ ಇಷ್ಟರ ವೇಳೆಗೆ ನಮ್ಮ ರಾಜ್ಯದ, ದೇಶದ ಎಲ್ಲ ಯುವಕ, ಯುವತಿಯರೂ ಕೌಶಲಗಳನ್ನು ರೂಢಿಸಿಕೊಂಡು ಗುಣಮಟ್ಟದ ಕೆಲಸಗಳನ್ನು ಮಾಡಬೇಕಾಗಿತ್ತು. ಕಾಂಗ್ರೆಸ್ ಪಕ್ಷವು ಚುನಾವಣೆ ಸಮಯದಲ್ಲಿ ಒಟ್ಟು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತು. ಅದರಲ್ಲಿ ಒಂದು, ಯುವನಿಧಿ. ನಿರುದ್ಯೋಗಿ ಯುವಕರಿಗೆ ಮಾಸಿಕ 3000 ಹಾಗೂ 1500 ರೂ. ಹಣ ನೀಡುವುದು ಈ ಯೋಜನೆ. ಹಾಗೊಂದು ವೇಲೆ ಯುವಕರು ಕೌಶಲ ರೂಢಿಸಿಕೊಂಡು ಒಳ್ಳೆಯ ಕೆಲಸ ಗಿಟ್ಟಿಸುವಂತಾಗಿದ್ದರೆ ಯುವನಿಧಿಗೆ ಯಾರೂ ಅರ್ಜಿಯನ್ನೇ ಹಾಕಬಾರದಿತ್ತು.
ಈಗ್ಗೆ 20-25 ವರ್ಷದ ಹಿಂದಿನ ಸಿನಿಮಾಗಳನ್ನು ನೋಡಿದವರಿಗೆ ಗೊತ್ತಿರುತ್ತದೆ.ಆಗತಾನೆ ಪದವಿ ಮುಗಿಸಿ ಹೊರಬಂದ ಯುವಕರು ಕೈಯಲ್ಲಿ ತಮ್ಮ ಮಾರ್ಕ್ಸ್ಕಾರ್ಡು, ಪದವಿ ಪ್ರಮಾಣಪತ್ರಗಳನ್ನು ಹಿಡಿದು ಕಂಪನಿಗಳು, ಕಚೇರಿಗಳ ಬಾಗಿಲು ಅಲೆಯುತ್ತಿರುತ್ತಾರೆ. ಬಹುತೇಕ ಸ್ಥಳಗಳಲ್ಲಿ ʼNo Vacancy’ ಬೋರ್ಡ್ ಇರುತ್ತದೆ. ಎಲ್ಲಾದರೂ ಒಂದು ಕಡೆ ಸಂದರ್ಶನಕ್ಕೆ ಕರೆದರೂ ಅದು ಕೇವಲ ನಾಮ್ ಕೆ ವಾಸ್ತೆ ಸಂದರ್ಶನವಾಗಿರುತ್ತದೆ. ಅದಾಗಲೇ ಮಿನಿಸ್ಟರ್ ಕಡೆಯವನೊಬ್ಬನಿಗೆ ಕೆಲಸ ಕೊಡಬೇಕು ಎಂದು ಮ್ಯಾನೇಜರ್ ಫಿಕ್ಸ್ ಆಗಿರುತ್ತಾನೆ, ಉಳಿದ ಉದ್ಯೋಕಾಕಾಂಕ್ಷಿಗಳಿಗೆ ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಕೇಳಿ ಫೇಲ್ ಮಾಡಿ ಕಳಿಸುತ್ತಾನೆ. ಅಲ್ಲಿಂದ ಹೊರಬಂದ ನಿರುದ್ಯೋಗಿ ಪದವೀಧರರು ಫೈಲ್‌ಗಳನ್ನು ಗಾಳಿಗೆ ಎಸೆದು ಹಾಡು ಹೇಳಿಕೊಂಡು ಹೋಗುತ್ತಾರೆ.
ಈಗ ಅಂತಹ ʼNo Vacancy’ ಬೋರ್ಡ್ ಎಲ್ಲಿ ಸಿಗುತ್ತದೆ? ಈಗ ಕೆಲಸಕ್ಕೆ ಬೇಕು ಎನ್ನುವವರೇ ಹೆಚ್ಚು. ತಮ್ಮ ಅಪೇಕ್ಷೆಗೆ ತಕ್ಕಂತೆ ಕೌಶಲ ಹಾಗೂ ಬದ್ಧತೆ ಉಳ್ಳವರು ಇಲ್ಲ ಎನ್ನುವ ದೂರುಗಳೇ ಹೆಚ್ಚು. ಕೌಶಲ ಎಲ್ಲಿಂದ ಬರಬೇಕು? ಮೊದಲನೆಯದಾಗಿ ಶಿಕ್ಷಣದಿಂದಲೇ ಸಿಗಬೇಕು. 10 ವರ್ಷ ಶಾಲಾ ಶಿಕ್ಷಣ, 2 ವರ್ಷ ಪದವಿ ಪೂರ್ವ, 3-4 ವರ್ಷ ಪದವಿ, 2 ವರ್ಷ ಸ್ನಾತಕೋತ್ತರದ ನಂತರವೂ ಉದ್ಯೋಗಾರ್ಹತೆ ಇಲ್ಲದ ಲೆಕ್ಕವಿಲ್ಲದಷ್ಟು ಯುವಜನರಿದ್ದಾರೆ ಎಂದರೆ ನಂಬಲೇಬೇಕು. 2021ರ ಇಂಡಿಯಾ ಸ್ಕಿಲ್ ರಿಪೋರ್ಟ್ ಪ್ರಕಾರ, ಔಪಚಾರಿಕ ಶಿಕ್ಷಣ ಪಡೆದವರಲ್ಲಿ ಶೇ.50ಕ್ಕಿಂತ ಹೆಚ್ಚಿನವರು ಉದ್ಯೋಗಾರ್ಹತೆ ಹೊಂದಿಲ್ಲ. ಬಿ.ಟೆಕ್ ಪದವಿ ಪೂರ್ಣಗೊಳಿಸಿದ ಶೇ.47, ಎಂಬಿಎ ಶೇ.47, ಬಿಎ ಪೂರ್ಣಗೊಳಿಸಿದ ಶೇ.43, ಬಿ.ಕಾಂ ಶೇ.40 ಹಾಗೂ ಬಿಎಸ್ಸಿ ಪೂರ್ಣಗೊಳಿಸಿದ ಶೇ.30 ಯುವಜನರಷ್ಟೆ ಉದ್ಯೋಗಾರ್ಹತೆ ಹೊಂದಿದ್ದಾರೆ. ಕೌಶಲಾಭಿವೃದ್ಧಿ ಶಿಕ್ಷಣ ಎಂದೇ ಪರಿಗಣಿಸಲಾಗುವ ಐಟಿಐ ಪೂರ್ಣಗೊಳಿಸವರಲ್ಲಿ ಶೇ.75 ಯುವಜನರು ಕೆಲಸಕ್ಕೆ ಬೇಕಾದ ಕೌಶಲ ಹೊಂದಿಲ್ಲ ಎನ್ನುತ್ತದೆ ವರದಿ. ಪ್ರತಿ ವರ್ಷ ಶಿಕ್ಷಣ ಮುಗಿಸಿ ಕಾರ್ಮಿಕ ಮಾರುಕಟ್ಟೆ ಪ್ರವೇಶೀಸುವ ಸುಮಾರು 1.5 ಕೋಟಿ ಯುವಜನರಲ್ಲಿ ಶೇ.65-70 ಉದ್ಯೋಗ ಕೌಶಲ ಹೊಂದಿರುವುದಿಲ್ಲ. ಯುವಕರಲ್ಲಿ, ತಮ್ಮ ಉದ್ಯಮಕ್ಕೆ ಬೇಕಾದ ಕೌಶಲಗಳೇ ಸಿಗದಿರುವ ಕಾರಣಕ್ಕೆ 2019ರಲ್ಲಿ ಶೇ.53 ಭಾರತೀಯ ಕಂಪನಿಗಳು ಯಾರನ್ನೂ ನೇಮಕಾತಿಯನ್ನೇ ಮಾಡಿಕೊಂಡಿಲ್ಲ ಎಂಬ ಆಘಾತಕಾರಿ ಅಂಶವೂ ಇದೆ.
ಒಬ್ಬ ವಿದ್ಯಾರ್ಥಿಯನ್ನು ಒಂದೇ ವಿಷಯಕ್ಕೆ ಸೀಮಿತ ಮಾಡುವುದು ಈಗ ದೇಶಾದ್ಯಂತ ಚಾಲ್ತಿಯಲ್ಲಿರುವ ಶಿಕ್ಷಣ ವ್ಯವಸ್ಥೆ. ಕುದುರೆಯ ಕಣ್ಣಿಗೆ ಕಟ್ಟುವ ಪಟ್ಟಿಯಂತೆ ಇದು. ಬಿಎ ವಿದ್ಯಾರ್ಥಿಗೆ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆ ಗೊತ್ತೇ ಆಗುವುದಿಲ್ಲ. ಆತನೇ ಆಸಕ್ತಿ ತೋರಿ ಬೇರೆ ಕೋರ್ಸ್ ಮಾಡಬೇಕೆ ವಿನಃ ಈಗಾಗಲೆ ಸೇರಿಕೊಂಡಿರುವ ಶಿಕ್ಷಣದಲ್ಲಿ ಅದರ ಗಂಧ ಗಾಳಿಯೂ ಸಿಗುವುದಿಲ್ಲ. ಆಸಕ್ತಿ ಇದೆ ಎಂದುಕೊಂಡರೂ ಈಗಿನ ಶಿಕ್ಷಣದಲ್ಲಿ ಅನವಶ್ಯಕವಾಗಿ ಸೇರಿಸಿರುವ ಕೆಲವು ಪಠ್ಯಗಳನ್ನು ಓದುವುದರಲ್ಲಿ, ಪರೀಕ್ಷೆಗೆ ಸಿದ್ಧವಾಗುವುದರಲ್ಲೇ ಸಮಯ ಕಳೆದಿರುತ್ತದೆ. ಶಿಕ್ಷಣದಲ್ಲಿ ಈ ಕೊರತೆ ಇದೆ ಎಂದು ಯಾರಿಗೆಲ್ಲ ಅನ್ನಿಸುತ್ತದೆಯೋ ಅವರೆಲ್ಲರೂ ನಾಮ್ ಕೆ ವಾಸ್ತೆ ಕಾಲೇಜಿಗೆ ಹೋಗುತ್ತಾರೆ, ಹೊರಗೆ ಲಕ್ಷಾಂತರ ರೂ. ವೆಚ್ಚ ಮಾಡಿ ಹೊಸ ಕೌಶಲ ಕಲಿತುಕೊಂಡು ಉತ್ತಮ ಉದ್ಯೋಗ ಪಡೆಯುತ್ತಾರೆ. ಆದರೆ ನಮ್ಮಲ್ಲಿರುವ ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಖಾಸಗಿ ಕಾಲೇಜಿನ ಶುಲ್ಕ ತುಂಬುವುದರಲ್ಲೇ ಸುಸ್ತಾಗುವ ಕುಟುಂಬದ ವಿದ್ಯಾರ್ಥಿಗಳು ಹೊಸ ಕೋರ್ಸ್ ಹೇಗೆ ಸೇರುತ್ತಾರೆ?
ಈಗ ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಇಂಥದ್ದಕ್ಕೆ ಮುಕ್ತ ಅವಕಾಶವಿದೆ. ಬಿಎ ವಿದ್ಯಾರ್ಥಿ ತನಗೆ ಜೀವವಿಜ್ಞಾನದಲ್ಲೂ ಆಸಕ್ತಿ ಇದೆ ಎಂದೆನಿಸಿದರೆ ಅದನ್ನೂ ಆಯ್ಕೆ ಮಾಡಿಕೊಳ್ಳಬಹುದು. ಆತ ಮುಂದೆ ತನ್ನ ಬರವಣಿಗೆ, ಸೃಜನಶೀಲ ಕೆಲಸದಲ್ಲಿ ಜೀವವಿಜ್ಞಾನದ ಜ್ಞಾನವನ್ನೂ ಬಳಸಿಕೊಳ್ಳಬಹುದು. ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗೆ ಇಂಜಿನಿಯರಿಂಗ್ ಆಸಕ್ತಿ ಇದ್ದರೆ ಅದನ್ನೇ ಪಠ್ಯವಾಗಿ ಸ್ವೀಕರಿಸಬಹುದು. ಹೀಗೆ, ಅಂತರ್ ಶಿಸ್ತೀಯ ಶಿಕ್ಷಣಕ್ಕೆ ಅವಕಾಶವನ್ನು ಎನ್ಇಪಿ ನೀಡುತ್ತದೆ.
ಈಗ ನಮ್ಮ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಮೂಲಸೌಕರ್ಯವೇ ಇಲ್ಲದಿರುವಾಗ ಇಂಥದ್ದೆಲ್ಲ ಆಲೋಚನೆಗಳೂ ಕೇವಲ ಕಲ್ಪನೆಗಳಷ್ಟೇ ಎಂದು ಅನೇಕರು ಟೀಕಿಸುತ್ತಾರೆ. ಈಗ ಮೂಲಸೌಕರ್ಯ ಕಡಿಮೆ ಇದೆ, ಅದು ಉತ್ತಮವಾಗಬೇಕು ಎನ್ನುವುದೇನೋ ಸರಿ. ಆದರೆ ಈಗಿರುವ ಮೂಲಸೌಕರ್ಯದಲ್ಲೇ ಎಷ್ಟು ಅನುಷ್ಠಾನ ಮಾಡಬಹುದು ಎನ್ನುವ ಮಾರ್ಗಸೂಚಿಯನ್ನೂ ಎನ್ಇಪಿ ನೀಡಿದೆ. ಕರ್ನಾಟಕದಲ್ಲಿ ಎನ್ಇಪಿ ಜಾರಿ ಮಾಡುವ ಸಂದರ್ಭದಲ್ಲಿ ಇಂತಹ ವಿಚಾರಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಶಾಲೆಗೆ ಸಮೀಪದ ಖಾಸಗಿ ಶಾಲೆ ಅಥವಾ ಕಾಲೇಜಿನಲ್ಲಿರುವ ಲ್ಯಾಬ್ ಅನ್ನು ಬಳಸಿಕೊಳ್ಳಬಹುದು. ಅಲ್ಲಿನ ಇಂಜಿನಿಯರಿಂಗ್ ಅಧ್ಯಾಪಕರು ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡಬಹುದು. ಖಾಸಗಿ ಸಂಸ್ಥೆಗೂ ಇದರಿಂದ ಒಂದಷ್ಟು ಆರ್ಥಿಕ ಸಹಾಯ ಆಗುತ್ತದೆ.
ಈಗಂತೂ ಕೃತಕ ಬುದ್ಧಿಮತ್ತೆಯ ದೊಡ್ಡ ಅಲೆ ಎದುರಾಗುತ್ತಿದೆ. ಈ ಕುರಿತು ಇನ್ಫೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ಎನ್. ಆರ್. ನಾರಾಯಣಮೂರ್ತಿ ಅವರು, ʼಈ ಹಿಂದೆ ಮಾನವನೇ ಚಕ್ರವನ್ನು ಕಂಡುಹಿಡಿದ. ನಂತರ ಯಂತ್ರವನ್ನು ಕಂಡುಹಿಡಿದ. ಈಗ ಕೃತಕ ಬುದ್ಧಮತ್ತೆಯನ್ನೂ ಕಂಡು ಹಿಡಿದ. ಇವ್ಯಾವುವೂ ಮಾನವನಿಗಿಂತ ಮಿಗಿಲಲ್ಲ. ಹಾಗಾಗಿ ಹೆದರುವ ಅವಶ್ಯಕತೆ ಇಲ್ಲʼ ಎಂದಿದ್ದಾರೆ. ಅವರು ಹೇಳಿರುವುದು ಶೇ.100 ಸತ್ಯ. ಆದರೆ ಕೃತಕ ಬುದ್ಧಿಮತ್ತೆಗಿಂತಲೂ ಉನ್ನತವಾದ ಕೆಲಸವನ್ನು ಮಾಡುವ ಕೌಶಲವನ್ನು ರೂಢಿಸಿಕೊಂಡಾಗ ಮಾತ್ರ ಅಪಾಯವಿಲ್ಲ. ಅಂತಹ ಕೌಶಲಗಳನ್ನು ಕಲಿಸುವ ಕೇಂದ್ರಗಳಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ರೂಪುಗೊಳ್ಳಬೇಕು. ಅದಕ್ಕೆ ಎನ್ಇಪಿ ಬಹುದೊಡ್ಡ ಪ್ರೋತ್ಸಾಹ, ಸ್ಪಷ್ಟ ಮಾರ್ಗದರ್ಶನವನ್ನು ಮಾಡುತ್ತದೆ. ಇಂತಹ ಕೌಶಲ ಕಲಿಸುವ ಎನ್ಇಪಿ ಜಾರಿಗಿಂತಲೂ ಕರ್ನಾಟಕ ಸರ್ಕಾರಕ್ಕೆ, ಯುವ ನಿಧಿಯದ್ದೇ ಹೆಚ್ಚು ಚಿಂತೆಯಾಗಿದೆ. ಯುವನಿಧಿ ಈಗಿನ ಯುವಕರಲ್ಲಿ ಕೆಲವರಿಗೆ ಅವಶ್ಯಕತೆ ಇರಬಹುದು. ಆದರೆ ಅವರನ್ನು ಈಗಿನ ಸ್ಥಿತಿಗೆ ತಂದಿರುವುದೂ ಸರ್ಕಾರಗಳೇ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಎನ್ಇಪಿ ಬದಲಿಗೆ ಎಸ್ಇಪಿ ಮಾಡುತ್ತೇವೆ ಎನ್ನುವ ರಾಜಕೀಯ ಆಲೋಚನೆಯನ್ನು ಬದಿಗೆ ಸರಿಸಿ, ಅತ್ಯಂತ ಅಚ್ಚುಕಟ್ಟಾಗಿ ಎನ್ಇಪಿಯನ್ನು ಜಾರಿ ಮಾಡುತ್ತೇವೆ ಎಂಬ ಆಲೋಚನೆಯನ್ನು ಕರ್ನಾಟಕ ಸರ್ಕಾರ ಹೊಂದುವುದು ಸರಿ ಅಲ್ಲವೇ?
ಹಾಂ, ತಿನ್ನಲು ಮೀನು ಕೊಡಿಸುವವನು ಯಾವತ್ತೂ ದೊಡ್ಡವನಾಗುವುದಿಲ್ಲ.ಮೇಲ್ನೋಟಕ್ಕೆ ಇದು ಚಾರಿಟಿ ಎನಿಸಿದರೂ, ಆಳದಲ್ಲಿ ಈ ಪ್ರಕ್ರಿಯೆಯಲ್ಲಿ ನೀಡುವವನಿಗೆ ದಾನಿ ಎನಿಸಿಕೊಳ್ಳುವ, ಪಡೆಯುವವನನ್ನು ಭಿಕ್ಷುಕ ಎನ್ನುವ ಧೋರಣೆ ಸೂಕ್ಷ್ಮವಾಗಿ ಇಣುಕಿರುತ್ತದೆ. ಆದರೆ, ಬದುಕಲು ಮೀನು ಹಿಡಿಸುವುದನ್ನು ಕಲಿಸುವವ ದೊಡ್ಡವ. ಏಕೆಂದರೆ, ಇಲ್ಲಿ ಢಾಳಾಗಿ ಕಾಣುವುದು ಕಲಿಕಾರ್ಥಿಯನ್ನು ಸ್ವಾವಲಂಬಿ ಮಾಡುವ ಕಾಳಜಿ !
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top