ಮನಮೋಹನ್‌ ಸಿಂಗ್‌ ಮಾದರಿ ಅಥವಾ ನರೇಂದ್ರ ಮೋದಿ ಮಾದರಿ: ಮುಸ್ಲಿಂ ಕಲ್ಯಾಣಕ್ಕೆ ಯಾವುದು ಸರಿ? : ವಿಸ್ತಾರ ಅಂಕಣ

ಎಷ್ಟೇ ಕಾಲವಾಗಲಿ, ಎಷ್ಟೇ ಚುನಾವಣೆ ಬರಲಿ, ಮುಸ್ಲಿಮರ ಕುರಿತು ಕಾಂಗ್ರೆಸ್ ಆಲೋಚನೆ ಬದಲಾಗಿಲ್ಲ. ಮುಸ್ಲಿಮರನ್ನು ಓಲೈಸುತ್ತ, ಅವರಿಗೆ ಸಣ್ಣಪುಟ್ಟ ಅನುದಾನ, ಸವಲತ್ತುಗಳನ್ನು ನೀಡುತ್ತ ಮುಖ್ಯವಾಹಿನಿಯಿಂದ ದೂರ ಇಡುವುದೇ ಕಾಂಗ್ರೆಸ್ ಆಲೋಚನೆ.

********************************

“ದೇಶದಲ್ಲಿ ಯಾರ್ಯಾರ ಜನಸಂಖ್ಯೆ ಎಷ್ಟೆಷ್ಟಿದೆಯೋ ಅಷ್ಟೇ ಸವಲತ್ತುಗಳನ್ನು ನೀಡಬೇಕು. ದೇಶದಲ್ಲಿ ಹಿಂದುಗಳ ಸಂಖ್ಯೆಯೇ ಹೆಚ್ಚಿರುವ ಕಾರಣ ಅವರಿಗೆ ಹೆಚ್ಚು ಸವಲತ್ತು ಸಿಗಬೇಕು, ಮುಸ್ಲಿಮರು ಕಡಿಮೆ ಇರುವುದರಿಂದ ಕಡಿಮೆ ಸವಲತ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕು.” ಹೀಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರೆ ಏನಾಗುತ್ತದೆ? ಹೀಗೆ ಹೇಳಲು ಸಾಧ್ಯವಿದೆಯೇ? ಖಂಡಿತ ಇಲ್ಲ. ಅಲ್ಪಸಂಖ್ಯಾತರ ವಿಚಾರದಲ್ಲಿ, ಅದರಲ್ಲೂ ಮುಸ್ಲಿಂ ವಿಚಾರದಲ್ಲಿ ಕಾಂಗ್ರೆಸ್‌ ಹೀಗೆ ಹೇಳಲು ಸಾಧ್ಯವೇ ಇಲ್ಲ.

ಇದೇ ರಾಹುಲ್‌ ಗಾಂಧಿ 2023ರ ಮೇ ತಿಂಗಳಲ್ಲಿ, ʼಎಷ್ಟು ಜನಸಂಖ್ಯೆಯೋ ಅಷ್ಟು ಹಕ್ಕುʼ ಎಂದಿದ್ದರು. ಗಮನಿಸಿ, ರಾಹುಲ್ ಅವರು ಈ ಮಾತು ಹೇಳಿದ್ದು ಸಮಗ್ರ ದೃಷ್ಟಿಕೋನದಲ್ಲಿ ಅಲ್ಲ. ಆ ರೀತಿ ಗ್ರಹಿಸಿದರೆ, ಅಲ್ಪಸಂಖ್ಯಾತರಿಗೆ ಸ್ವಲ್ಪವೇ ಹಕ್ಕುಗಳು ಲಭಿಸಬೇಕಾಗುತ್ತದೆ. ಹಾಗಾದರೆ, ರಾಹುಲ್ ಈ ಮಾತು ಹೇಳಿದ್ದೇಕೆ ಗೊತ್ತೆ ? ಅದು, ಹಿಂದೂಗಳೊಳಗೆ ಮೀಸಲು ನಿಗದಿಗೆ ಹಾಗೂ ಜಾತಿಗಣತಿ ನಡೆಸುವ ವಿಷಯವನ್ನು ಪ್ರತಿಪಾದಿಸಲು ಈ ಹಕ್ಕಿನ ಮಾತನಾಡಿದ್ದರು. ಕಾಂಗ್ರೆಸ್‌ ಹಿಂದಿನಿಂದಲೂ ಈ ದ್ವಂದ್ವ ನೀತಿಯನ್ನು ಅನುಸರಿಸಿಕೊಂಡೇ ಬರುತ್ತಿದೆ. 2006ರಲ್ಲಿ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡ, ಅಲ್ಪಸಂಖ್ಯಾತರಿಗೆ ದೇಶದ ಸಂಪನ್ಮೂಲ ಬಳಕೆಯಲ್ಲಿ ಮೊದಲ ಸ್ಥಾನ ಸಿಗಬೇಕು ಎಂದಿದ್ದರು. ಆದರೆ ಸಮಗ್ರ ಹಿಂದುಗಳ ವಿಚಾರ ಬಂದಾಗ ಈ ಮಾತು ಹೇಳುವುದಿಲ್ಲ. ಅದರೆ, ಹಿಂದೂ ಜಾತಿಯೊಳಗಿನ ಬಹುಸಂಖ್ಯಾತರಿಗೆ ಹೆಚ್ಚು ಸವಲತ್ತು ಸಿಗಬೇಕು ಎಂಬುದನ್ನು ಪ್ರತಿಪಾದಿಸಲು ಜಾತಿಗಣತಿಯ ಮೊರೆ ಹೋಗುತ್ತಾರೆ. ಹಿಂದುಗಳನ್ನು ಜಾತಿಗಳಾಗಿ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ನೇತಾರರು ಇನ್ನೂ ಬಿಟ್ಟಿಲ್ಲ.

ಇತ್ತೀಚೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಇದೇ ಧಾಟಿಯ ಮಾತನಾಡಿದ್ದಾರೆ. ಮುಸ್ಲಿಮರಿಗೆ ಹೆಚ್ಚು ಹಕ್ಕುಗಳು ಸಿಗಬೇಕು, ಅವರಿಗೆ ಲಭಿಸುತ್ತಿರುವ ಅನುದಾನವನ್ನು 4 ಸಾವಿರ ಕೋಟಿ ರೂ. ನಿಂದ 10 ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗುತ್ತದೆ ಎಂದಿದ್ದಾರೆ. ಅಲ್ಪಸಂಖ್ಯಾತರಿಗೆ ಹಕ್ಕುಗಳ ಕಡೆಗಣನೆ ಆಗಬಾರದು ಎನ್ನುತ್ತಾರೆ ಸಿದ್ದರಾಮಯ್ಯ. ಹಾಗಾದರೆ ಭಾರತದಲ್ಲಿ ಮುಸ್ಲಿಂ ಹಕ್ಕುಗಳು ದಮನವಾಗಿವೆಯೇ?

ಸ್ವತಂತ್ರ್ಯ ದೇಶದ ಮೊದಲ ಶಿಕ್ಷಣ ಸಚಿವ(ಮೌಲಾನಾ ಅಬುಲ್‌ ಕಲಾಂ ಆಜಾದ್‌) ಸ್ಥಾನದಿಂದ ಆರಂಭವಾಗಿ ರಾಷ್ಟ್ರಪತಿವರೆಗೆ (ಎ.ಪಿ.ಜೆ. ಅಬ್ದುಲ್‌ ಕಲಾಂ) ಮುಸ್ಲಿಮರಿಗೆ ಈ ದೇಶ ಸ್ಥಾನ ಕಲ್ಪಿಸಿದೆ. ದೇಶದ ಬಹುತೇಕ ರಾಜ್ಯಗಳ ಮಂತ್ರಿಗಳಾಗಿ ಮುಸ್ಲಿಂ ಸಮುದಾಯದವರು ಕಾರ್ಯನಿರ್ವಹಿಸಿದ್ದಾರೆ. ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಇನ್ನೂ ಮುಸ್ಲಿಂ ಹಕ್ಕುಗಳು ಎಂದು ಕಣ್ಣೀರು ಸುರಿಸುತ್ತಿರುವುದೇಕೇ?

ದೇಶವನ್ನು ಅತಿ ಹೆಚ್ಚು ಕಾಲ ಆಳಿರುವುದು ಕಾಂಗ್ರೆಸ್‌ ಪಕ್ಷ. ಹಾಗಾದರೆ ಮುಸ್ಲಿಂ ಸಮುದಾಯದ ಈಗಿನ ಸ್ಥಿತಿ ಹೇಗಿದೆ ಮತ್ತು ಅದಕ್ಕೆ ಯಾರು ಕಾರಣ ? ಮುಸ್ಲಿಂ ಸಮುದಾಯದಲ್ಲಿ ಶಿಕ್ಷಿತರ ಸಂಖ್ಯೆ ಕೇವಲ 50% ಆಸುಪಾಸಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಕೆಳಗಿದೆ. ಇತರೆ ಸಮುದಾಯಗಳ ಹೋಲಿಕೆಯಲ್ಲಿ ಮುಸ್ಲಿಂ ಮಹಿಳೆಯರು ಸಬಲೀಕರಣ ಹಿಂದಿದೆ. ಮುಸ್ಲಿಂ ಜನಸಂಖ್ಯೆಯು ಉದ್ಯೋಗದಲ್ಲಿರುವ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ನವಜಾತ ಶಿಶು ಮರಣ ಸಂಖ್ಯೆ, ಮಕ್ಕಳಲ್ಲಿ ಅಪೌಷ್ಠಿಕತೆ, ಅನಾರೋಗ್ಯ ಸಮಸ್ಯೆಗಳು ಮುಸ್ಲಿಂ ಸಮುದಾಯದಲ್ಲಿ ಹೆಚ್ಚಿವೆ. 1-5ನೇ ತರಗತಿಗೆ ಬರುವ ವೇಳೆಗ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಈ ಅಂಕಿ ಅಂಶಗಳನ್ನು ವಿವಿಧ ಸಮೀಕ್ಷೆಗಳು, ಸಂಶೋಧನೆಗಳು ಹೊರಗೆಡಹಿವೆ.

ಸ್ವಾತಂತ್ರ್ಯದ ಇಷ್ಟು ವರ್ಷದ ನಂತರವೂ ಮುಸ್ಲಿಂ ಸಮುದಾಯ ಎಲ್ಲ ಸಾಮಾಜಿಕ ಮಾನದಂಡಗಳಲ್ಲೂ ಹಿಂದುಳಿದಿದೆ ಎಂದರೆ ಅದಕ್ಕೆ ಕಾಂಗ್ರೆಸ್‌ ಪಕ್ಷವೇ ಕಾರಣ ? ದೇಶ ಆಳಿದ ಹೊತ್ತಲ್ಲಿ ಮುಸ್ಲಿಮರಿಗಾಗಿ ಕಾಂಗ್ರೆಸ್ ಏನು ಮಾಡಿತು? ಸತ್ಯ ಹೇಳಬೇಕೆಂದರೆ, ಅವರ ಪ್ರಗತಿಗೆ ಏನೂ ಮಾಡಿಲ್ಲ. ಬದಲಿಗೆ, ೭೫ ವರ್ಷಗಳಿಂದಲೂ ಮುಸ್ಲಿಮರನ್ನು ಓಲೈಸುತ್ತಲೇ ಬಂದಿದೆ. ಬಡವರನ್ನು ಬಡವರನ್ನಾಗಿಯೇ ಇಟ್ಟುಕೊಂಡು, ಹಗಲು ಮೂರು ಹೊತ್ತು ಬಡವರ ಪರವಾಗಿ ಮಾತನಾಡುತ್ತಾ, ಬಡವರ ಪಾಲಿಗೆ ಕರುಣಾಳಾಗಿ ಉಳಿಯುವ ಉಸಾಬರಿಯನ್ನೂ ತುಷ್ಟೀಕರಣ ನೀತಿ ಎನ್ನಬಹುದು. ಬಡವರು ಉದ್ಧಾರವಾದರೆ, ಇವರ ಕರುಣಾಳು ಪಟ್ಟವೇ ಕದಲುತ್ತದೆಯಲ್ಲ ?

ಹಾಗಾಗಿ, ಬಡತನವನ್ನು ಇಲ್ಲವಾಗಿಸದೇ ಬಡವರ ಪರವಾಗಿ ಮಾತನಾಡಿದರೆ ಲಾಭ ಹೆಚ್ಚು ! ಕಾಂಗ್ರೆಸ್ ಮುಸ್ಲಿಮರ ವಿಷಯದಲ್ಲಿ ಇಂಥದ್ದೇ ತುಷ್ಟೀಕರಣ ನೀತಿ ಅನುಸರಿಸಿಕೊಂಡು ಬಂದಿದೆ. ಮುಸ್ಲಿಮರಿಗೆ ಮಸೀದಿ ಕಟ್ಟಿಕೊಡುವುದು, ಸಮುದಾಯದ ಕೆಲವರು ಸರ್ಕಾರದ ಜಮೀನು ಅತಿಕ್ರಮಣಕ್ಕೆ ಅವಕಾಶ ಮಾಡಿಕೊಡುವುದು, ಹಿಂದೂಗಳಲ್ಲಿರುವ ಮೌಢ್ಯಗಳನ್ನು ಮಾತ್ರ ತೆಗಳುತ್ತಾ, ಮುಸ್ಲಿಂ ಮೌಢ್ಯದ ಕುರಿತು ತುಟಿ ಬಿಚ್ಚದಿರುವುದು, ಸದಾ ಆರ್‌ಎಸ್‌ಎಸ್‌ ವಿರುದ್ಧ ಸುಳ್ಳು ಆರೋಪ ಮಾಡುತ್ತಲೇ ಇರುವುದು- ಇದೆಲ್ಲವೂ ಆಳದಲ್ಲಿ ಮುಸ್ಲಿಮರ ಬಡತನವನ್ನು ಪೋಷಿಸುವುದೇ ಆಗಿದೆ !ಹೀಗಾಗಿಯೇ ಮುಸ್ಲಿಂ ಸಮುದಾಯ ಇನ್ನೂ ಹಿಂದುಳಿದಿದೆ !

ದೇಶದಲ್ಲಿ ಮುಸ್ಲಿಂ ಸಮುದಾಯದ ಸ್ಥಿತಿಗತಿಯನ್ನು ಅಳೆಯಲು 2005ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಮುಂದಾಯಿತು. ನ್ಯಾಯಮೂರ್ತಿ ರಾಜಿಂದರ್‌ ಸಾಚಾರ್‌ ನೇತೃತ್ವದಲ್ಲಿ ಸಮಿತಿ ರಚಿಸಿ, ವರದಿ ನೀಡಲು ತಿಳಿಸಿತು. ವಿವಿಧ ಇಲಾಖೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಎಷ್ಟಿದೆ ಎನ್ನುವುದನ್ನು ಸಮಿತಿ ತಿಳಿಯಬೇಕಿತ್ತು. ಅದೇ ರೀತಿ ಸರ್ಕಾರದ ಎಲ್ಲ ಇಲಾಖೆಗಳಿಗೂ ಸಮಿತಿ ಮನವಿಪತ್ರ ತಲುಪಿಸಿತು. ಇದೇ ಮನವಿ ಪತ್ರವನ್ನು ಭಾರತೀಯ ಸೇನೆಗೂ ಕಳಿಸಿತು. ಸೇನೆಯಲ್ಲಿ ಎಷ್ಟು ಮುಸಲ್ಮಾನರಿದ್ದಾರೆ? ಎಂದು ಕೇಳಿತು. ಕೂಡಲೆ ಈ ಮನವಿಯನ್ನು ಅಂದಿನ ಸೇನಾ ಮುಖ್ಯಸ್ಥ ಜೆ.ಕೆ. ಸಿಂಗ್‌ ತಿರಸ್ಕರಿಸಿ, ಸರ್ಕಾರ ಹಾಗೂ ಅದರ ಸಮಿತಿಗೆ ಕಪಾಳಮೋಕ್ಷ ಮಾಡಿದರು. ಸೇನೆಯಲ್ಲಿ ಭಾರತ ಎನ್ನುವ ಧರ್ಮ, ಮತ ಬಿಟ್ಟರೆ ಯಾವುದೂ ಲೆಕ್ಕವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು.

ಆದರೂ ಅಂದಿನ ಪ್ರಧಾನಮಂತ್ರಿ ಮನಮೋಹನ್‌ ಸಿಂಗರಿಗೆ ಇದು ಮನವರಿಕೆ ಆಗಲಿಲ್ಲ. ಸಾಚಾರ್‌ ಸಮಿತಿ ತನ್ನ ವರದಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ್ದ ಮನಮೋಹನ್‌ ಸಿಂಗ್‌, ದೇಶದ ಸಂಪನ್ಮೂಲದಲ್ಲಿ ಮೊದಲ ಹಕ್ಕು ಅಲ್ಪಸಂಖ್ಯಾತರಿಗಿದೆ ಎಂದರು. ಈಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿರುವುದೂ ಇದೇ ಮಾತನ್ನು. ಅಂದರೆ ಎಷ್ಟೇ ಕಾಲವಾಗಲಿ, ಎಷ್ಟೇ ಚುನಾವಣೆ ಬರಲಿ, ಮುಸ್ಲಿಮರ ಕುರಿತು ಕಾಂಗ್ರೆಸ್‌ ಆಲೋಚನೆ ಬದಲಾಗಲಿಲ್ಲ. ಮುಸ್ಲಿಮರನ್ನು ಓಲೈಸುತ್ತ, ಅವರಿಗೆ ಸಣ್ಣಪುಟ್ಟ ಅನುದಾನ, ಸವಲತ್ತುಗಳನ್ನು ನೀಡುತ್ತ ಮುಖ್ಯವಾಹಿನಿಯಿಂದ ಅವರನ್ನು ದೂರ ಇಡುವುದೇ ಕಾಂಗ್ರೆಸ್ ಆಲೋಚನೆ.

ಹಾಗಾದರೆ, ಮುಸ್ಲಿಂ ವಿರೋಧಿ ಎಂದು ಕಾಂಗ್ರೆಸ್‌ ಆರೋಪಿಸುವ ಬಿಜೆಪಿ ಅಥವಾ ನರೇಂದ್ರ ಮೋದಿ ಸರ್ಕಾರ ಮುಸ್ಲಿಮರಿಗೆ ಏನು ಮಾಡಿದೆ? ಹಾಗೆ ನೋಡಿದರೆ, ಯಾವುದೇ ಕಾಂಗ್ರೆಸ್‌ ಸರ್ಕಾರಕ್ಕಿಂತಲೂ ಮುಸ್ಲಿಮರ ಪರವಾದ ಯೋಜನೆಗಳನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ.

2014ರವರೆಗೆ ಸರ್ಕಾರಿ ಕೆಲಸದಲ್ಲಿ ಕೇವಲ ಶೇ.4.5 ಮುಸ್ಲಿಮರಿದ್ದರು. ಮೋದಿ ಆಡಳಿತದಲ್ಲಿ ಈ ಸಂಖ್ಯೆ ಶೇ.10.5ಕ್ಕೆ ಏರಿದೆ. 2022ರಲ್ಲಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತರಿಗಾಗಿ 15 ಅಂಶಗಳ ಕಾರ್ಯಕ್ರಮವನ್ನು ಘೋಷಿಸಿದರು. 1. ಶಿಕ್ಷಣದಲ್ಲಿ ಅವಕಾಶ ಹೆಚ್ಚಿಸುವುದು, 2. ಉದ್ಯೋಗ, ಆರ್ಥಿಕ ಚಟುವಟಿಕೆಯಲ್ಲಿ ಸಮಾನ ಸಹಭಾಗಿತ್ವ ಒದಗಿಸುವುದು, 3. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಸಮಾನತೆ ನೀಡುವ ಮೂಲಕ ಅಲ್ಪಸಂಖ್ಯಾತರ ಜೀವನಮಟ್ಟ ಸುಧಾರಿಸುವುದು, 4. ಕೋಮು ಗಲಭೆಗಳು ಹಾಗೂ ಅಶಾಂತಿಯನ್ನು ನಿಯಂತ್ರಿಸುವುದು ಎಂಬ ವಿಚಾರಗಳನ್ನಿಟ್ಟುಕೊಂಡು ವಿವಧ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಇವುಗಳಲ್ಲಿ ವಿದ್ಯಾರ್ಥಿವೇತನ, ಕೌಶಲ ತರಬೇತಿ, ಸುಲಭ ಸಾಲ ಸೇರಿ ಎಷ್ಟೊಂದು ಅನುಕೂಲಗಳು ಈಗಾಗಲೆ ಜಾರಿಯಲ್ಲಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಮುಸ್ಲಿಂ ಮಹಿಳೆಯರನ್ನು ಅತಿಯಾಗಿ ಬಾಧಿಸುತ್ತಿದ್ದ ತ್ರಿವಳಿ ತಲಾಖ್‌ ಅನ್ನು ನಿಷೇಧಿಸಿದ್ದು ಸ್ವತಂತ್ರ ಭಾರತದ ಮಹತ್ವದ ತೀರ್ಮಾನಗಳಲ್ಲೊಂದು.

ನರೇಂದ್ರ ಮೋದಿಯವರಿಗೆ ಅನೇಕ ದೇಶಗಳು ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ಅತಿ ಹೆಚ್ಚು ಗೌರವಗಳು ಮುಸ್ಲಿಂ ದೇಶಗಳಿಂದ ಲಭಿಸಿವೆ. ಸಂಪೂರ್ಣ ಮುಸ್ಲಿಂ ದೇಶಗಳೇ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿಕೊಳ್ಳುತ್ತಿವೆ. ಆದರೆ ದೇಶದೊಳಗೆ ಮಾತ್ರ ಕೆಲವರು ಮುಸ್ಲಿಮರ ಎದುರು ʼನರೇಂದ್ರ ಮೋದಿ ಬೆದರು ಬೊಂಬೆʼ ಮಾಡಿ ನಿಲ್ಲಿಸಿದ್ದಾರೆ. ಯಾವಾಗ ತಮಗೆ ಮತ ಕಡಿಮೆ ಆಗುತ್ತದೆ ಎನ್ನಿಸುತ್ತದೆಯೋ ಆಗ ನರೇಂದ್ರ ಮೋದಿಯವರ ಫೋಟೊ ತೋರಿಸಿ ಬೆದರಿಸುತ್ತಾರೆ.

ನರೇಂದ್ರ ಮೋದಿ ಸರ್ಕಾರ ಮುಸ್ಲಿಮರಿಗೂ ಅನೇಕ ಉತ್ತಮ ಯೋಜನೆಗಳನ್ನು ಜಾರಿ ಮಾಡುತ್ತಿದ್ದರೂ ಅದೇಕೆ ಹೊರಜಗತ್ತಿನಲ್ಲಿ ಈ ಅಂಶ ಚರ್ಚೆ ಆಗುವುದಿಲ್ಲ? ದೇಶದ ಹಿಂದುಗಳು, ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಅಭಿವೃದ್ಧಿ ಆದರೆ ಮಾತ್ರವೇ ದೇಶ ಆತ್ಮನಿರ್ಭರ ಆಗಲು ಸಾಧ್ಯ. ಮುಸ್ಲಿಮರಷ್ಟೆ ಅಲ್ಲ, ಮಹಿಳೆಯರ ಲೆಕ್ಕವೂ ಇದರಲ್ಲಿ ಬರುತ್ತದೆ. ದೇಶದ ಜನಸಂಖ್ಯೆಯ ಅರ್ಧದಷ್ಟು ಅಂದರೆ 60 ಕೋಟಿಯಷ್ಟು ಮಹಿಳೆಯರಿದ್ದಾರೆ. ಅವರಲ್ಲಿ ಕೇವಲ ಅಂದಾಜು 20% ಮಾತ್ರ ಔದ್ಯೋಗಿಕ ಕ್ಷೇತ್ರದಲ್ಲಿದ್ದಾರೆ. ಇಷ್ಟು ದೊಡ್ಡ ಮಹಿಳಾ ಶಕ್ತಿಯನ್ನು ಹೊರಗಿಟ್ಟು ದೇಶ ಅಭಿವೃದ್ಧಿ ಆಗುವುದು ಸಾಧ್ಯವಿಲ್ಲ. ಅದೇ ರೀತಿ ದೇಶದ ಸುಮಾರು 15-20 ಕೋಟಿಯಷ್ಟಿರುವ ಮುಸ್ಲಿಂ ಜನಸಂಖ್ಯೆಯನ್ನು ಕತ್ತಲಲ್ಲಿಟ್ಟು ಅಭಿವೃದ್ಧಿ ಆಗುವುದು ಸಾಧ್ಯವಿಲ್ಲ. ಆದರೆ ಮುಸ್ಲಿಂ ಕಡೆ ಹಾಗೂ ಹಿಂದುಗಳ ಕಡೆಯೂ ಕೆಲವರಿಗೆ ಈ ಅಂಶಗಳು ಹೊರಗೆ ಚರ್ಚೆ ಆಗುವುದು ಬೇಕಿಲ್ಲ. ಮೋದಿ ಮುಸ್ಲಿಂ ವಿರೋಧಿ ಎಂಬ ನರೇಟಿವ್‌ನಿಂದಾಗಿ ಅನೇಕರಿಗೆ ಅನುಕೂಲ ಆಗುತ್ತದೆ. ಹಾಗಾಗಿ ಇದೀಗ ಜನರು ಅರ್ಥ ಮಾಡಿಕೊಳ್ಳಬೇಕು. ದೇಶದ ಎಲ್ಲ ಜನರಿಗೂ ಸಿಗುವಂತೆಯೇ ಮುಸ್ಲಿಮರಿಗೂ ಸಮಾನ ಹಕ್ಕು, ಸೌಲಭ್ಯ, ಅವಕಾಶಗಳು ಸಿಗಬೇಕು. ಆದರೆ ಅವರನ್ನು ಓಲೈಸುವಂತಹ ಲಾಲಿಪಪ್‌ ನೀಡುತ್ತ ಹಿಂದುಳಿದವರಾಗಿಯೇ ಇಟ್ಟವರಾರು ಎನ್ನುವುದನ್ನೂ ಸ್ವತಃ ಮುಸ್ಲಿಮರೂ ಅರಿಯಬೇಕು. ಮುಸ್ಲಿಂ ಕಲ್ಯಾಣ ಆಗಬೇಕೆಂದರೆ ಮನಮೋಹನ್‌ ಸಿಂಗ್‌ ಮಾದರಿ ಬೇಕೊ, ನರೇಂದ್ರ ಮೋದಿ ಮಾದರಿ ಬೇಕೊ ಎನ್ನುವುದನ್ನು ತೀರ್ಮಾನಿಸಿಕೊಳ್ಳಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top