ಈ ಫಲಿತಾಂಶವನ್ನು ಪ್ರಜಾತಂತ್ರದ ಸೌಂದರ್ಯ ಮತ್ತು ಶಕ್ತಿ ಎಂದು ಕರೆಯುವುದೇ ಸರಿಯಾದ್ದು. ಎರಡು ವರ್ಷಗಳ ಹಿಂದೆ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರನ್ನು ಅಧಿಕಾರದ ಹತ್ತಿರಕ್ಕೆ ತಂದು ನಿಲ್ಲಿಸಿದ್ದ ದೆಹಲಿ ಮತದಾರರು ಈ ಬಾರಿ ಪೂರ್ಣ ಅಧಿಕಾರ ನೀಡಿ ಅದೇನು ಮಾಡುತ್ತೀರೋ ಮಾಡಿ ನೋಡೋಣ ಎಂಬ ಸ್ಪಷ್ಟ ಜನಾದೇಶ ಕೊಟ್ಟಿದ್ದಾರೆ. ಒಂದು ಪ್ರಬುದ್ಧ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರರು ಇದಕ್ಕಿಂತ ಉತ್ತಮವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ನಿರೀಕ್ಷಿಸಲು ಅಸಾಧ್ಯ ಬಿಡಿ.
ದೆಹಲಿ ವಿಧಾನಸಭೆ ಚುನಾವಣೆಯ ಈ ಅಭೂತಪೂರ್ವ ಫಲಿತಾಂಶದ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸಹಜವಾಗಿ ಹತ್ತಾರು ರೀತಿಯ ಚರ್ಚೆ, ಹಲವಾರು ರೀತಿಯ ತರ್ಕಗಳು ನಡೆಯುತ್ತಿವೆ. ಬಹುಶ ಮುಂದೆ ಕೆಲವು ದಿನಗಳವರೆಗೆ ಇದು ಹೀಗೇ ಮುಂದುವರಿಯುತ್ತದೆ.
ಅದೆಲ್ಲ ಏನೇ ಇರಲಿ, ಮೂಲಭೂತ ಪ್ರಶ್ನೆ ಎಂದರೆ ಇದು ಮೋದಿ ಅಲೆ ಮಂಕಾಗುತ್ತಿರುವುದರ ಸೂಚನೆಯೇ ಎಂಬುದು. ಹೌದು ಎನ್ನಲು ಬಲವಾದ ಕಾರಣಗಳು ನಮಗೆ ಸಿಗುವುದಿಲ್ಲ. ಮೊದಲನೆಯದಾಗಿ ಇದು ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯೇ ಹೊರತೂ ದೇಶದ ಸಂಸತ್ತಿಗೆ ನಡೆದ ಚುನಾವಣೆಯಲ್ಲ. ಹೀಗಿರುವಾಗ ಮೋದಿ ಮತ್ತು ಕೇಜ್ರಿವಾಲ್ ನಡುವಿನ ಪೈಪೋಟಿ, ಸೋಲು ಗೆಲುವಿನ ಪ್ರಶ್ನೆ ಉದ್ಭವಿಸುವುದು ಹೇಗೆ? ಈಗ ನಡೆದ ಚುನಾವಣೆ ಕಾಲಕ್ಕೆ ಅಲ್ಲಿನ ಮತದಾರರ ಮನದಲ್ಲಿದ್ದದ್ದು ದೆಹಲಿಗೆ ಯಾರು ಉತ್ತಮ ಮುಖ್ಯಮಂತ್ರಿಯಾಗಬಲ್ಲರು ಎಂಬುದೇ ಹೊರತು ಬೇರೇನೂ ಆಗಿರಲಿಲ್ಲ. ಹೀಗಾಗಿ ಮೋದಿ ಪ್ರಭಾವ ಮಂಕಾಯಿತೇ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಷ್ಟಕ್ಕೂ ಕಳೆದ ಹತ್ತು ತಿಂಗಳಲ್ಲಿ ತಮ್ಮ ಪ್ರಭಾವ ಕಡಿಮೆ ಆಗುವಂಥ ಯಾವ ತಪ್ಪನ್ನು ಮೋದಿ ಮಾಡಿದ್ದಾರೆಂದು ಹೇಳಲು ಸಾಧ್ಯ?
ಹಾಗೆ ಲೆಕ್ಕ ಹಾಕುವ ಬದಲು, ಕಳೆದ ಹತ್ತು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಏಳಕ್ಕೆ ಏಳೂ ಲೋಕಸಭಾ ಸ್ಥಾನಗಳನ್ನು ಬಿಜೆಪಿಗೆ ಧಾರೆಯೆರೆದು, ಇದೀಗ ಆಮ್ ಆದ್ಮಿಗೆ ಜೈಕಾರ ಹಾಕಿದ ದೆಹಲಿ ಮತದಾರರು ನಿಜಕ್ಕೂ ಜಾಣರು ಎಂಬುದೇ ಹೆಚ್ಚು ಸರಿಯಾದೀತು. ಉದಾಹರಣೆಗೆ ಮತಗಳಿಕೆ ವಿಚಾರ. ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 33.07 ಮತಗಳಿಸಿತ್ತು. ಈ ಚುನಾವಣೆಯಲ್ಲಿ ಅದು ಶೇ. 32.1ರಷ್ಟು ಮತಗಳಿಸಿದೆ. ಅಂದರೆ ಬಿಜೆಪಿ ತನ್ನ ಮತಗಳನ್ನು ಹಿಡಿದಿಟ್ಟುಕೊಂಡಿದೆ ಎಂದು ಹೇಳಬಹುದಾದರೂ, ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲೂ ತನ್ನ ನೆಲೆ ವಿಸ್ತರಿಸಿಕೊಳ್ಳಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂಬುದನ್ನು ಮಾತ್ರ ಅಲ್ಲಗಳೆಯಲಾಗದು.
ಹಾಗಾದರೆ ಬಿಜೆಪಿ ಸೋಲಿನ ಮೂಲ ಎಲ್ಲಿ?
ಬಿಜೆಪಿ ಮಟ್ಟಿಗೆ ಹೇಳುವುದಾದರೆ ದೆಹಲಿ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಸ್ವಯಂಕೃತ ಅಪರಾಧ. ಅತಿ ಆತ್ಮವಿಶ್ವಾಸದ ಫಲ ಮತ್ತು ಸಂಘಟನಾತ್ಮಕ ದೌರ್ಬಲ್ಯದ ಪರಿಣಾಮ. ಬಿಜೆಪಿ ಸಂಘಟನಾತ್ಮಕವಾಗಿ ಎಷ್ಟು ದುರ್ಬಲ, ಏಕ ವ್ಯಕ್ತಿಯ ಅವಲಂಬನೆ ಮೇಲೆ ಎಷ್ಟು ಅಪಾಯದ ಅಂಚಿನಲ್ಲಿ ನಿಂತುಕೊಂಡಿದೆ ಎಂಬುದಕ್ಕೆ ದೆಹಲಿ ಚುನಾವಣಾ ಫಲಿತಾಂಶವೊಂದೇ ಸಾಕು. ಬಹುಶ ಬೇರೆ ರಾಜ್ಯಗಳಲ್ಲೂ ಒಬ್ಬೊಬ್ಬ ಕೇಜ್ರಿವಾಲ ಹುಟ್ಟಿಕೊಂಡರೆ ಆ ಪಕ್ಷಕ್ಕೆ ಇದಕ್ಕಿಂತ ಭಿನ್ನವಾದ ಫಲಿತಾಂಶದ ರುಚಿ ಸಿಗಲಾರದು. ಹಾಗಾದರೆ ಬೇರೆ ಪಕ್ಷಗಳ ದೌರ್ಬಲ್ಯವೇ ಬಿಜೆಪಿಯ ಬಲವೇ? ಅದನ್ನು ಆ ಪಕ್ಷದ ನಾಯಕರು ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ವಾಸ್ತವದಲ್ಲಿ ಬಿಜೆಪಿ ತಪ್ಪಿನ ಸರಮಾಲೆಯನ್ನೇ ಕೊರಳಿಗೆ ಕಟ್ಟಿಕೊಂಡು ದೆಹಲಿ ಚುನಾವಣೆಯ ಅಖಾಡಕ್ಕೆ ಧುಮುಕಿ ಭಯಂಕರ ಪ್ರಮಾದ ಮಾಡಿತು.
ಮೋದಿ ಅಲೆಯ ಗುಂಗಿನಲ್ಲೇ ತೇಲುತ್ತ, ಗೆಲುವಿನ ಕನಸು ಕಾಣುತ್ತ ಕೊನೇ ಕ್ಷಣದವರೆಗೆ ದೆಹಲಿ ಚುನಾವಣೆ ಸಿದ್ಧತೆಗೆ ತೊಡಗಿಸಿಕೊಳ್ಳದೇ ಹೋದದ್ದು ಬಿಜೆಪಿ ಮಾಡಿದ ಮೊದಲ ತಪ್ಪು. ದೆಹಲಿಯಂಥ ಮಹಾನಗರದ ಕೊಳೆಗೇರಿಗಳಲ್ಲಿ ವಾಸಿಸುವ ಬಡವರನ್ನು, ಮಧ್ಯಮವರ್ಗದವರ ವಿಶ್ವಾಸವನ್ನು ಕೇಜ್ರಿವಾಲ್ ಯಶಸ್ವಿಯಾಗಿ ಗಳಿಸುತ್ತ ಹೋಗುತ್ತಿರುವುದನ್ನೂ ಕಂಡೂ ಬಿಜೆಪಿ ನಾಯಕರು ಎಚ್ಚೆತ್ತುಕೊಳ್ಳುವ ಯತ್ನ ಮಾಡದೇ ಹೋದದ್ದು ಎರಡನೇ ಪ್ರಮಾದ. ಡಾ: ಹರ್ಷವರ್ಧನರಂಥ ಜನಪ್ರಿಯ, ಸಜ್ಜನ ನಾಯಕರನ್ನು ಮೂಲೆಗೆ ಸರಿಸಿದ್ದು ಬಿಜೆಪಿ ಮಾಡಿದ ಮಹಾಪ್ರಮಾದ. ಈ ಹಿಂದೆ ಆಪ್‍ನ ಅಂಥಾ ಅಲೆಯಲ್ಲೇ ಬಿಜೆಪಿಯನ್ನು ಗೆಲುವಿನ ದಡದಂಚಿಗೆ ತಂದು ನಿಲ್ಲಿಸಿದ್ದ ಹರ್ಷವರ್ಧನ್‍ರನ್ನು ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಮಾಡದೇ ಬಿಜೆಪಿ ಬಹುದೊಡ್ಡ ತಪ್ಪು ಮಾಡಿತು. ಅಷ್ಟೇ ಅಲ್ಲ, ಕೇಂದ್ರದ ಆರೋಗ್ಯ ಮಂತ್ರಿಯಾಗಿ ಸಿಗರೇಟು ನಿಷೇಧ ಮಾಡಲು ಮುಂದಾದ ಹರ್ಷವರ್ಧನರನ್ನು ತಂಬಾಕು ಲಾಬಿಗೆ ಮಣಿದು ಆರೋಗ್ಯ ಖಾತೆಯಿಂದಲೇ ಎತ್ತಂಗಡಿ ಮಾಡಿ, ಕೆಲಸಕ್ಕೆ ಬಾರದ ಖಾತೆ ನೀಡಿ ಬದಿಗೆ ಕುಳ್ಳಿರಿಸಿದ ತಪ್ಪಿಗೆ ದೆಹಲಿ ಮತದಾರ ತಕ್ಕ ಶಿಕ್ಷೆಯನ್ನೇ ನೀಡಿದ್ದಾನೆಂದು ಹೇಳಬೇಕು.
ಚುನಾವಣೆಗೆ ಇಪ್ಪತ್ತು ದಿನ ಬಾಕಿ ಇರುವಾಗ ಕಿರಣ್ ಬೇಡಿಯನ್ನು ಪಕ್ಷಕ್ಕೆ ಆಮದು ಮಾಡಿಕೊಂಡು ಅವರನ್ನು ಸಿಎಂ ಅಭ್ಯರ್ಥಿಯೆಂದು ಘೋಷಣೆ ಮಾಡಿ ಬಿಜೆಪಿ ಪ್ರಮಾದಗಳ ಸಾಲಿಗೆ ಮತ್ತೊಂದನ್ನು ಸೇರ್ಪಡೆ ಮಾಡಿತು. ಯಾವುದೇ ಪಕ್ಷ ಗೆಲ್ಲಬೇಕಾದರೆ ಕಾರ್ಯಕರ್ತರ ಪಡೆ ಮತ್ತು ಅವರಲ್ಲಿರುವ ಉತ್ಸಾಹದ ಮಟ್ಟ ಬಹಳ ಮುಖ್ಯ. ಒಂದು ಪಕ್ಷದ ಬೆಳವಣಿಗೆಯ ಹಿಂದೆ ಸಾವಿರಾರು ಕಾರ್ಯಕರ್ತರು ಮನೆಮಠ, ಸಂಸಾರದ ಸುಖ ತ್ಯಾಗ ಮಾಡಿರುತ್ತಾರೆ. ಅಂಥದ್ದರಲ್ಲಿ ಕೊನೇ ಕ್ಷಣದಲ್ಲಿ ರೆಡಿಮೇಡ್ ನಾಯಕರನ್ನು ತಂದು ಹೇರಿದರೆ ಯಾರು ತಾನೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯ. ಮೂಲ ಕಾರ್ಯಕರ್ತರನ್ನು ಕಡೆಗಣಿಸಿ, ಆಮದು ನಾಯಕರನ್ನು ಹೇರಿ ಬಿಜೆಪಿ ಮಾಡಿದ ತಪ್ಪಿಗೆ ತೆತ್ತ ಈ ದುಬಾರಿ ಬೆಲೆ ಬಿಜೆಪಿ ಸೇರಿ ಎಲ್ಲ ಪಕ್ಷಗಳಿಗೆ ಪಾಠವಾಗತ್ತಾ? ಕಾದು ನೋಡಬೇಕು.
ಕೇಜ್ರಿವಾಲ್ ಗೆಲುವಿನ ಗುಟ್ಟೇನು?
ಮೊದಲನೆಯದು 49 ದಿನ ಆಡಳಿತ ನಡೆಸಿ, ಅಧಿಕಾರದಿಂದ ಕೆಳಗಿಳಿದ ದಿನದಿಂದ ಮುಂದಿನ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿದ್ದು ಆಮ್ ಆದ್ಮಿಯ ಇಂದಿನ ಖುಷಿಗೆ ಮೂಲ ಕಾರಣ. ಸಿಕ್ಕಿದ ಒಂದೊಂದೂ ಸಂದರ್ಭವನ್ನು ತನ್ನ ಪರ ಅನುಕಂಪದ ಅಲೆಯಾಗಿ ಕೇಜ್ರಿವಾಲ್ ಪರಿವರ್ತಿಸುತ್ತ ಹೋದದ್ದು ಮತ್ತೊಂದು ಕಾರಣ. ಪ್ರಯಾಸಪಟ್ಟು ಗಳಿಸಿದ ಅಧಿಕಾರವನ್ನು ಕೇವಲ 49 ದಿನಗಳಲ್ಲಿ, ಯಾವುದೇ ಬಲವಾದ ಕಾರಣವಿಲ್ಲದೇ ಬಿಟ್ಟು ಪಲಾಯನ ಮಾಡಿದ ಪ್ರಮಾದಕ್ಕೆ ಹೋದಲ್ಲಿ ಬಂದಲ್ಲಿ ಕ್ಷಮೆ ಕೋರಿದ್ದನ್ನು ದೆಹಲಿ ಮತದಾರರು ಮನ್ನಿಸಿದರು ಎಂತಲೇ ಹೇಳಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ದೆಹಲಿಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದ್ದು ಎಎಪಿಗೆ ದೊಡ್ಡ ವರದಾನವಾಯಿತು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ.25ರಷ್ಟು ಮತಗಳಿಸಿತ್ತು. ಆದರೆ ಕಾಂಗ್ರೆಸ್ ಈ ಸಲ ಯಾವ ಕಾರಣಕ್ಕೂ ಗೆಲ್ಲದು ಎಂಬುದನ್ನು ಖಾತ್ರಿ ಮಾಡಿಕೊಂಡ ಶೇ.15ರಷ್ಟು ಮುಸ್ಲಿಂ ಮತ್ತು ಇತರ ಬಿಜೆಪಿ ವಿರೋಧಿ ಮತಗಳು ಸಾರಾಸಗಟಾಗಿ ಎಎಪಿಗೆ ವರ್ಗಾವಣೆಗೊಂಡದ್ದು ಕೇಜ್ರಿವಾಲ್ ಪಕ್ಷಕ್ಕೆ ನಿರೀಕ್ಷೆಯನ್ನೂ ಮೀರಿ ಗೆಲವು ತಂದುಕೊಟ್ಟಿತು.
ಹಾಗಾದರೆ ದೇಶಾದ್ಯಂತ ಕಮಾಲ್ ಮಾಡ್ತಾರಾ ಕೇಜ್ರಿವಾಲ್: ಬಿಲ್‍ಕುಲ್ ಹಾಗೆ ಹೇಳಲು ಸಾಧ್ಯವಿಲ್ಲ. ಕಾರಣ ಸ್ಪಷ್ಟ. ಆಮ್ ಆದ್ಮಿ ಪಕ್ಷ ಕೂಡ ಬಿಜೆಪಿ ಮಾದರಿಯಲ್ಲೇ ಅಪಾಯವನ್ನು ಹೊದ್ದುಕೊಂಡಿದೆ. ಬಿಜೆಪಿಗಾದರೆ ಒಂದಿಷ್ಟು ಸಂಘಟನಾ ನೆಲೆ ಮತ್ತು ಮೋದಿಯಂಥ ನಾಯಕತ್ವದ ಜತೆಗೆ ಹೇಳಿಕೊಳ್ಳುವುದಕ್ಕಾದರೂ ಸ್ಥಳೀಯ ನಾಯಕರಿದ್ದಾರೆ. ಈ ಕಾಂಬಿನೇಶನ್‍ನಿಂದಾಗಿ ಬಿಜೆಪಿ ಇಲ್ಲಿಯವರೆಗೆ ಮೇಲಿಂದ ಮೇಲೆ ಗೆಲುವಿನ ಮೆಟ್ಟಿಲುಗಳನ್ನು ಏರುತ್ತಲೇ ಬಂದದ್ದು. ಆದರೆ ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ಹೊರತುಪಡಿಸಿ ದೇಶದ ಬೇರಾವುದೇ ಭಾಗದಲ್ಲಿ ಸಂಘಟನಾ ನೆಲೆ ಇಲ್ಲವೇ ಇಲ್ಲ. ಕೇಜ್ರಿವಾಲ್ ಬಿಟ್ಟರೆ ಅವರ ಸಮೀಪಕ್ಕೂ ಬಂದು ನಿಲ್ಲುವ ಬೇರೊಬ್ಬ ನಾಯಕನಿಲ್ಲ. ಹೀಗಾಗಿ ದೆಹಲಿ ಗೆಲುವಿನ ಅಲೆ ಆ ಪಕ್ಷಕ್ಕೆ ಬೇರೆ ಇನ್ನೆಲ್ಲೋ ಗೆಲುವು ತಂದುಕೊಡುತ್ತದೆ, ದೇಶಾದ್ಯಂತ ಆಮ್ ಆದ್ಮಿ ಪಕ್ಷದ ಗಾಳಿ ಬೀಸುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ.
ತಕ್ಷಣದ ದೃಷ್ಟಿ ಬಿಹಾರದ ಕಡೆಗೆ: ದೆಹಲಿ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಏನಾಗುತ್ತದೆ ಎಂಬುದು ಬಹುತೇಕರ ಪ್ರಶ್ನೆ. ರಾಜಕೀಯ ತರ್ಕದಿಂದ ನೋಡುವುದಾದರೆ ದೆಹಲಿ ಫಲಿತಾಂಶ ಬಿಹಾರ ಚುನಾವಣೆಯ ಮೇಲೆ ಏನೇನೂ ಆಗಲಾರದು. ಮುಖ್ಯವಾಗಿ ಬಿಹಾರದ ರಾಜಕಾರಣ ಜಾತಿ ಆಧಾರಿತವಾದದ್ದು. ಹೀಗಾಗಿ ಅಲ್ಲಿ ಸಾಂಪ್ರದಾಯಿಕ ಪಕ್ಷಗಳ ನೆಲೆಯೇ ಇನ್ನೂ ಗಟ್ಟಿ. ಒಂದು ವೇಳೆ ಬಿಹಾರದ ರಾಜಕೀಯ ಪಕ್ಷಗಳು ಆಪ್ ಜತೆ ಸೇರಿದರೆ ಒಂದಿಷ್ಟು ಮ್ಯಾಜಿಕ್ ನಡೆಯುವುದನ್ನು ತಳ್ಳಿಹಾಕಲಾಗದು. ಆದರೆ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಅಥವಾ ಇನ್ನಾವುದೇ ಪಕ್ಷದೊಂದಿಗೆ ಕೈ ಜೋಡಿಸಿದರೆ, ಭ್ರಷ್ಟಾಚಾರ ವಿರೋಧಿ ಟ್ರಂಪ್ ಕಾರ್ಡ್ ಇಟ್ಟುಕೊಂಡೇ ರಾಜಕೀಯ ನೆಲೆ ಕಂಡುಕೊಂಡಿರುವ ಆಮ್ ಆದ್ಮಿ ಪಕ್ಷದ ಭವಿಷ್ಯ ಗಂಡಾಂತರಕ್ಕೆ ಸಿಲುಕುವುದರಲ್ಲಿ ಯಾವ ಅನುಮಾನವೂ ಬೇಡ. ಕೇಜ್ರಿವಾಲ್ ಅಂಥ ದಡ್ಡತನ ಮೆರೆಯಲಾರರು.
ಕಾಂಗ್ರೆಸ್ ಸ್ಥಿತಿ ನಿಜಕ್ಕೂ ಶೋಚನೀಯ: ದೆಹಲಿಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿರುವುದು ನಿಜ. ಆದರೆ ಅದಕ್ಕಿಂತಲೂ ಸಂಕಟಕ್ಕೆ ಸಿಲುಕಿರುವುದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಮುಕ್ತ ಭಾರತದ ಘೋಷಣೆ ಮೊಳಗಿಸಿದ್ದು ಬಿಜೆಪಿ ನಾಯಕರು. ಆದರೆ ಬಿಜೆಪಿ ಸಂಕಲ್ಪವನ್ನು ನಿಜ ಮಾಡಿ ತೋರಿಸಿದ ಕೀರ್ತಿ ಆಮ್ ಆದ್ಮಿಗೆ ಸಲ್ಲುವಂತಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೇಳಿಕೊಳ್ಳುವುದಕ್ಕೂ ಒಬ್ಬನೇ ಒಬ್ಬ ಕಾಂಗ್ರೆಸ್ ಶಾಸಕ ಉಳಿದಿಲ್ಲ. ಹೀಗಾಗಿ ರಾಹುಲ್ ಮತ್ತು ಸೋನಿಯಾ ಗಾಂಧಿ ನಿಜವಾಗಿ ಆತ್ಮಾವಲೋಕ ಮಾಡಿಕೊಳ್ಳಬೇಕು. ಹೊಸ ತಲೆಮಾರಿನ ನಾಯಕರನ್ನು ಬೆಳೆಸುವುದು ಮತ್ತು ಹೊಸ ಚಿಂತನೆಯನ್ನು ಮೈಗೂಡಿಸಿಕೊಳ್ಳುವುದು ಈ ಎರಡೇ ಕಾಂಗ್ರೆಸ್ ಅನುಭವಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಕೊಡಬಹುದಷ್ಟೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಳ್ಳೆಯ ಬೆಳವಣಿಗೆ: ಮುಖ್ಯವಾಗಿ ನಾವಿಲ್ಲಿ ಗಮನಿಸಬೇಕಾದ್ದು, ಮೋದಿ ನಾಯಕತ್ವವೊಂದನ್ನೇ ನೆಚ್ಚಿಕೊಂಡು ಗೆಲುವಿನ ನಾಗಾಲೋಟದಲ್ಲಿದ್ದ ಬಿಜೆಪಿಗೆ ಒಂದು ಬಲವಾದ ಎದುರಾಳಿ ಬೇಕಿತ್ತು. ಅದು ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ ಮತ್ತು ಬಿಜೆಪಿ ಜಿಡ್ಡುಗಟ್ಟಿದ ಆಂತರಿಕ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕಾರಣಕ್ಕೆ ಇಂಥದ್ದೊಂದು ಒಂದು ಶಾಕ್ ಟ್ರೀಟ್‍ಮೆಂಟ್ ಬೇಕೇಬೇಕಿತ್ತು. ಅಷ್ಟೇ ಅಲ್ಲ, ಮೋದಿ, ಅಮಿತ್ ಷಾ ಏಕಚಕ್ರಾಧಿಪತ್ಯ ಮಾದರಿ ಕಾರ್ಯವೈಖರಿ ಬಗ್ಗೆ ಅತೃಪ್ತಿ ಹೊಂದಿದ್ದ ಪಕ್ಷನಿಷ್ಠರಿಗೂ ತಮ್ಮ ಅತೃಪ್ತಿ ಹೊರಹಾಕಲು ಈ ಫಲಿತಾಂಶ ಅವಕಾಶ ಮಾಡಿಕೊಟ್ಟಿದೆ ಎನ್ನಬಹುದು.
ಕೇಜ್ರಿವಾಲ್ ಮುಂದಿರುವ ಸವಾಲು ಸಣ್ಣದಲ್ಲ; ಈ ಹಿಂದೆ ಅಸ್ಪಷ್ಟ ಜನಾದೇಶ ಕೊಟ್ಟ ದೆಹಲಿ ಮತದಾರರು ಈ ಸಲ ಸ್ಪಷ್ಟ ತೀರ್ಪು ಕೊಟ್ಟಿದ್ದಾರೆ. ಅಂದರೆ ಕೇಜ್ರಿವಾಲ್ ಸಬೂಬು ಹೇಳುವುದಕ್ಕೆ ದೆಹಲಿ ಮತದಾರ ಅವಕಾಶ ಇಟ್ಟಿಲ್ಲ ಅಂತಲೇ ವ್ಯಾಖ್ಯಾನಿಸಬೇಕು. ಜವಾಬ್ದಾರಿಯಿಂದ, ಗಾಂಭೀರ್ಯ ಅರಿತು ಆಡಳಿತ ನಡೆಸಬೇಕು ಎಂಬುದು ಜನಾದೇಶದ ಮರ್ಮ. ದೆಹಲಿಯ ನಾಗರಿಕರ ಆಸೆ, ಆಕಾಂಕ್ಷೆ ನಿರೀಕ್ಷೆಗಳೆಲ್ಲವೂ ಅಗಾಧ. ಆದರೆ ಅದನ್ನು ಈಡೇರಿಸುವ ಅವಕಾಶ ಪರಿಮಿತ. ಏಕೆಂದರೆ ಸಂಪನ್ಮೂಲದ ಲಭ್ಯತೆ, ಅಭಿವೃದ್ಧಿಗೆ ಇರುವ ಅವಕಾಶ ಇವೆರಡರ ದೃಷ್ಟಿಯಿಂದಲೂ ದೆಹಲಿ ಒಂದು ಮಹಾನಗರ ಪಾಲಿಕೆಗಿಂತ ಯಾವ ರೀತಿಯಲ್ಲೂ ಭಿನ್ನವಾಗಿಲ್ಲ. ಇಂಥ ಸನ್ನಿವೇಶದಲ್ಲಿ ಕೇಜ್ರಿವಾಲ್ ತಾವೇ ಆಕಾಶದೆತ್ತರಕ್ಕೆ ನಿರ್ಮಿಸಿಕೊಂಡ ಆಶಾ ಗೋಪುರವನ್ನು ಹೇಗೆ ಧರೆಗಿಳಿಸುತ್ತಾರೆ ಎಂಬುದೇ ನಿಜಕ್ಕೂ ಕುತೂಹಲಕರವಾಗಿದೆ.
ಕೊನೇ ಮಾತು; ಇದೊಂದು ಮೂಲಭೂತವಾದ ಪ್ರಶ್ನೆ. ನಿಜವಾಗಿ ಹೇಳುವುದಾದರೆ ರಾಷ್ಟ್ರ ರಾಜಧಾನಿ ದೆಹಲಿಗೆ ಒಂದು ರಾಜ್ಯದ ಸ್ಥಾನಮಾನ ಕೊಟ್ಟದ್ದೇ ಚರ್ಚಾರ್ಹ ಸಂಗತಿ. ಅದು ಬಹುಶಃ ಕಾಂಗ್ರೆಸ್ ಪಕ್ಷ ಮಾಡಿದ ತಪ್ಪುಗಳ ಸರಮಾಲೆಯಲ್ಲಿ ಇದು ಕೊನೆಯದು ಎನ್ನಬಹುದೇನೋ. ದೇಶದ ಸಂಸತ್ತು, ರಾಷ್ಟ್ರಪತಿ ಭವನ, ಪ್ರಧಾನಿ ನಿವಾಸ ಇರುವ, ದೇಶವಿದೇಶಗಳ ನಾಯಕರು, ರಾಜತಾಂತ್ರಿಕ ಮುಖ್ಯಸ್ಥರು ಮೇಲಿಂದ ಮೇಲೆ ಬಂದು ಹೋಗುವ ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸ್ ಮತ್ತು ರಕ್ಷಣೆಯಂಥ ಅತಿ ಮುಖ್ಯ ವ್ಯವಹಾರಗಳನ್ನು ಒಂದು ಪುಟ್ಟ, ದುರ್ಬಲ ಸರ್ಕಾರದ ಬಳಿ ಅಥವಾ ಚಂಚಲ ನಾಯಕರ ಕೈಗೆ ಕೊಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಇಂಥ ವ್ಯವಸ್ಥೆ ಅಮೆರಿಕದಿಂದ ಹಿಡಿದು ಪ್ರಪಂಚದ ಯಾವ ದೃಷ್ಟಿಯಿಂದ ಸರಿಯಾದದ್ದೋ ಗೊತ್ತಿಲ್ಲ. ಅಂಥದ್ದರಲ್ಲಿ ಕೇಂದ್ರಾಡಳಿತ ಪ್ರದೇಶವಾದ ದೆಹಲಿಗೆ ಪ್ರತ್ಯೇಕ ಸರ್ಕಾರ ಹುಟ್ಟು ಹಾಕಿದ್ದೇ ಪ್ರಮಾದವಲ್ಲವೇ? ಅದರ ಪರಿಣಾಮವನ್ನು ಎದುರಿಸುವ ದುರ್ದಿನಗಳು ಬರದಿರಲಿ ಎಂದು ಹಾರೈಸೋಣವೇ?