ಸಾಂಸ್ಕೃತಿಕ ಅರಿವಿನಿಂದಲೇ ಪಕ್ಷ ಗಳ ಸಮಸ್ಯೆಗೆ ಪರಿಹಾರ

ಸಂಸ್ಕೃತಿಯ ಬೇರುಗಳಿಂದ ದೂರವಾದ ಕಾಂಗ್ರೆಸ್‌; ವೈಚಾರಿಕ ಹಿನ್ನೆಲೆಯ ಗೈರುಹಾಜರಿಯ ಬಿಜೆಪಿ

ಇತ್ತೀಚಿನ ವರ್ಷದಲ್ಲಿ ಆಗಿರುವ ರಾಜಕೀಯ ಪಲ್ಲಟಗಳ ಅವಲೋಕನ ಆಸಕ್ತಿಕರವಾಗಿದೆ. ಹಾಗೆ ನೋಡಿದರೆ ಭಾರತದ ಮಟ್ಟಿಗಂತೂ ಚುನಾವಣಾ ರಾಜಕಾರಣ ಎನ್ನುವುದು ಕಳೆದ 75 ವರ್ಷದಿಂದಲೂ ತುಸು ರೋಚಕ ಹಾಗೂ ಅಧ್ಯಯನ ಯೋಗ್ಯ,
ಪ್ರತಿ ಬಾರಿ ಚುನಾವಣೆಗಳು ಎದುರಾದಾಗಲೂ ಹೊಸ ಭರವಸೆಗಳು ಎದ್ದು ನಿಲ್ಲುತ್ತವೆ. ಅಲ್ಲಿಯವರೆಗೆ, ದೇಶದ ಭವಿಷ್ಯ ಎಂದುಕೊಂಡಿದ್ದವರು, ಫಲಿತಾಂಶ ಹೊರಬಂದ ಮರುದಿನದಿಂದ ಯಾರಿಗೂ ಬೇಡದವರಾಗುತ್ತಾರೆ. ಹಿಂದಿನ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸದೇ, ಮತ್ತೆ ಅದೇ ಭರವಸೆಯನ್ನು ಹೊಸ ಭಾಷೆಯಲ್ಲಿ ಸಿಂಗರಿಸಿ ತರುವ ನಾಯಕರೂ ಇಲ್ಲಿರುತ್ತಾರೆ. ಈ ನಾಯಕರೆಲ್ಲರೂ ನೀಡುತ್ತಿರುವುದು ಹುಸಿ ಭರವಸೆ ಎಂದು ಗೊತ್ತಿದ್ದೂ, ಅವರ ಬಗ್ಗೆ ಭರವಸೆ ಕಳೆದುಕೊಳ್ಳದ ಮತದಾರರೂ ಇಲ್ಲಿದ್ದಾರೆ. ಇತರೆ ದೇಶಗಳ ಜನರಂತೆ, ಭಾರತದ ಮತದಾರರು ಇಂದಿಗೂ ಅವರ ಬಗ್ಗೆ ಸಿನಿಕರಾಗಿಲ್ಲ. ಬದಲಾಗಬಹುದು ಎಂಬ ಭರವಸೆ ಅವರದು. ತಾವು ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಪರಿಹಾರ ಸಿಗುವುದಿಲ್ಲ ಹಾಗಾಗಿ, ಅದನ್ನು ಬದಲಿಸಿ ರಾಜಾಡಳಿತವನ್ನೊ, ಮಿಲಿಟರಿ ಆಡಳಿತವನ್ನೋ ತಂದುಬಿಡೋಣ ಎಂದು ಯಾವತ್ತೂ ಇಲ್ಲಿನ ಶ್ರೀಸಾಮಾನ್ಯರು ಆಲೋಚಿಸಿಲ್ಲ.
ಹಾಗೆ ನೋಡಿದರೆ, ಭಾರತ ಒಪ್ಪಿಕೊಂಡಿರುವ ಸಂಸದೀಯ ಪ್ರಜಾಪ್ರಭುತ್ವ ಕುರಿತು ಅಪನಂಬಿಕೆ, ಅವಿಶ್ವಾಸದ ಕುರುಹುಗಳೇ ಇಲ್ಲ ಎಂದಲ್ಲ. ಮತದಾನ ಪದ್ಧತಿಯಲ್ಲಿ ನನ್ನ ಆಯ್ಕೆ ಯಾರೊಬ್ಬರೂ ಇಲ್ಲ(ನೋಟಾ) ಎಂಬ ಕಾಲಂ ಅನ್ನು ಬ್ಯಾಲೆಟ್‌ ಪೇಪರ್‌ನಲ್ಲಿ, ಇವಿಎಂನಲ್ಲಿ ಸೇರಿಸಲು ಶ್ರಮಿಸಿದ ಸಂಘ ಸಂಸ್ಥೆಗಳ ಇತಿಹಾಸ ನೋಡಿದರೆ, ಅಲ್ಲೆಲ್ಲಾ ಅವಿಶ್ವಾಸದ ಛಾಯೆ ಇದೆ. ಆಂತರ್ಯದಲ್ಲಿ ನೋಟಾ ಎಂಬುದು ಕೇವಲ ಅಭ್ಯರ್ಥಿಗಳ ಮೇಲಿನ ವಿಶ್ವಾಸ ಕಳೆಯುವುದಲ್ಲ, ಬದಲಿಗೆ ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ವಿಶ್ವಾಸವನ್ನೇ ಹಾಳುಗೆಡವುವ ಪ್ರಯತ್ನವೂ ಇರಬಹುದು. ನೋಟಾ ಎಂಬುದು ಆಧುನಿಕ ಮತದಾನ ಪದ್ಧತಿಯ ರೀತಿನೀತಿ ಎಂಬುದನ್ನು ಒಪ್ಪಿಕೊಂಡ ಬಳಿಕವೂ, ಇಂಥದ್ದೊಂದು ಅನುಮಾನ ಇದ್ದೇ ಇದೆ. ಇದಕ್ಕೆ ಪೂರಕವಾಗಿ, ಇತ್ತೀಚಿನ ದಶಕದಲ್ಲಿ ನಕ್ಸಲ್‌ ಚಟುವಟಿಕೆಗಳು ತೀವ್ರವಾಗಿದ್ದ, ಈಗಲೂ ಭೂಗತವಾಗಿ ನಕ್ಸಲ್‌ ಪ್ರಭಾವ ಹೊಂದಿರುವ ಪ್ರದೇಶಗಳಲ್ಲೇ ನೋಟಾಕ್ಕೆ ಹೆಚ್ಚು ಮತಗಳು ಲಭಿಸುತ್ತವೆ. ಇದೆಲ್ಲವೂ ಏನೇ ಇರಲಿ, ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಭಾರತೀಯರು ನಂಬಿಕೆ ಕಳೆದುಕೊಂಡಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವ ಮತದಾನ ಪ್ರಮಾಣ ಕೈಗನ್ನಡಿಯಾಗಿದೆ. ಐದಾರು ದಶಕದಲ್ಲಿ ಮತದಾನದ ಪ್ರಮಾಣದ ನಿರಂತರವಾಗಿ ಹೆಚ್ಚಿದೆ.
ಹಾಗೆ ನೋಡಿದರೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಹೊಸ ವ್ಯವಸ್ಥೆ ರೂಪಿಸಬೇಕು ಎಂಬ ಸಿದ್ಧಾಂತ ಹೊಂದಿರುವ ಕಮ್ಯುನಿಸ್ಟರೂ ಚುನಾವಣೆಯಲ್ಲಿ ಗೆದ್ದೇ ಅಧಿಕಾರ ಹಿಡಿಯಬೇಕು, ಬೇರೆ ದಾರಿಯಿಲ್ಲ ಎಂಬುದನ್ನು ತೋರಿಸಿಕೊಟ್ಟ ದೇಶ ಭಾರತ. ಕಮ್ಯುನಿಸ್ಟರು ಚುನಾವಣಾ ವ್ಯವಸ್ಥೆಯನ್ನು ಒಪ್ಪಿ, ಸ್ಪರ್ಧೆ ಮಾಡಿ, ಚುನಾಯಿತ ಸರಕಾರವನ್ನು ನಡೆಸಿದ್ದಾರೆ ಎಂದರೆ, ಅದು ಭಾರತದಲ್ಲಿ ಮಾತ್ರ. ಆದರೆ ಈಗ ಕಮ್ಯುನಿಸ್ಟ್‌ ಪಕ್ಷ ಗಳು ಭಾರತದ ರಾಜಕೀಯ ನಕ್ಷೆಯಿಂದ ಬಹುತೇಕ ಮರೆಯಾಗುವ ಹಂತದಲ್ಲಿವೆ. ಈ ಹಿಂದೆ ವಿಶ್ವವಿದ್ಯಾನಿಲಯದಂಥ ಉನ್ನತ ಶಿಕ್ಷ ಣ ಸಂಸ್ಥೆಗಳು, ಸಾಂಸ್ಕೃತಿಕ ವಲಯದಲ್ಲಿ ಬೌದ್ಧಿಕವಾಗಿ ಹೆಣೆದುಕೊಂಡಿರುವ ತನ್ನ ದೊಡ್ಡ ಜಾಲದ ಪರಿಣಾಮವಾಗಿ ಕಮ್ಯುನಿಸಂ ಇನ್ನೂ ಜೀವ ಉಳಿಸಿಕೊಂಡಿದೆಯಷ್ಟೆ. ತನ್ನ ಕಾರ್ಯಕ್ರಮ, ಸಿದ್ಧಾಂತ, ಅಭಿವೃದ್ಧಿಪರ ಆಲೋಚನೆಯ ಅಜೆಂಡಾವನ್ನು ಜನರ ಮುಂದಿಟ್ಟುಕೊಂಡು, ಅವರ ವಿಶ್ವಾಸವನ್ನು ಗಳಿಸಿ, ಅಧಿಕಾರ ಪಡೆಯುವ ಶಕ್ತಿ-ಸಾಮರ್ಥ್ಯ‌ ಕಮ್ಯುನಿಸ್ಟ್‌ ಪಕ್ಷ ಗಳಿಗೆ ಕಡಿಮೆಯಾಗಿದೆ.
ತನ್ನ ಪ್ರಣಾಳಿಕೆ, ಪ್ರತಿಪಾದಿಸುವ ಸಿದ್ಧಾಂತದಿಂದಾಗಿ, ತನ್ನನ್ನು ಆಯ್ಕೆ ಮಾಡಿದ ಮತದಾರರು ಬಹಳ ಸಂತಸದಿಂದ ಇದ್ದಾರೆ, ಕಲ್ಯಾಣ ರಾಜ್ಯ ನಿರ್ಮಾಣವಾಗಿದೆ ಎನ್ನುವಂಥ ಒಂದು ಜಿಲ್ಲೆ, ಒಂದು ತಾಲೂಕು, ಕಡೇ ಪಕ್ಷ ಒಂದು ಗ್ರಾಮವನ್ನೂ ತೋರಿಸಲು ಅದರಿಂದ ಸಾಧ್ಯವಾಗಿಲ್ಲ. ನಕ್ಸಲ್‌ ಚಳವಳಿ ಆರಂಭವಾದ ನಕ್ಸಲ್‌ಬಾರಿ ಎಂಬ ಗ್ರಾಮದ ಸ್ಥಿತಿಯನ್ನು ನೋಡಿದರೂ ಈ ವಿಚಾರ ಮನದಟ್ಟಾಗುತ್ತದೆ.
ಆದರೆ ಕಮ್ಯುನಿಸ್ಟರು ಹೇಳುವ ಜಾತ್ಯತೀತತೆ, ಸಮಾಜವಾದ, ಬಡತನ ನಿರ್ಮೂಲನೆ ಘೋಷಣೆಗಳನ್ನು ಹೆಚ್ಚಾಗಿ ಮೈಗೂಡಿಸಿಕೊಂಡಿದ್ದು ಕಾಂಗ್ರೆಸ್‌. ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಆ ಪಕ್ಷ ಹೊಂದಿದ್ದ ನಿಲುವುಗಳೇ ಬೇರೆ, ಸ್ವಾತಂತ್ರ್ಯಾನಂತರದಲ್ಲಿ ಅದರ ನೇತೃತ್ವ ವಹಿಸಿದ ಪಂಡಿತ್‌ ನೆಹರೂ ತುಳಿದ ಹಾದಿಯೇ ಬೇರೆ. ಮಹಾತ್ಮಾ ಗಾಂಧಿ ಆಲೋಚನೆಯ ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್‌ ಸಂಪೂರ್ಣ ಗ್ರಾಮ ಸ್ವರಾಜ್ಯಕ್ಕೆ ಒತ್ತು ನೀಡಿದರೆ, 1947ರ ನಂತರದ ನೆಹರು ಚಿಂತನೆಯ ಕಾಂಗ್ರೆಸ್‌ ಕೈಗಾರಿಕೀಕರಣವೇ ಅಭಿವೃದ್ಧಿಯ ಮೂಲ ಎಂದಿತು.
ಗ್ರಾಮ ಕೈಗಾರಿಕೆ, ಗುಡಿ ಕೈಗಾರಿಕೆ ಅಭಿವೃದ್ಧಿಯಾಗಬೇಕೆಂದು ಗಾಂಧೀಜಿ ಹೇಳಿದರೆ, ಬೃಹತ್‌ ಜಲಾಶಯಗಳೇ ಆಧುನಿಕ ದೇವಾಲಯಗಳು ಎಂದರು ನೆಹರೂ. ಇತ್ತ ಸ್ವರಾಜ್ಯವೂ ಅಲ್ಲದ, ಅತ್ತ ಸಮಾಜವಾದ, ಕಮ್ಯುನಿಸಂ ಸಹ ಅಲ್ಲದ, ಕಡೆಗೆ ಬಂಡವಾಳವಾದಿಗಳದ್ದೂ ಅಲ್ಲದ ವಿಚಿತ್ರ ಆರ್ಥಿಕ ವ್ಯವಸ್ಥೆಯನ್ನು ರೂಪುಗೊಳಿಸಲಾಯಿತು.
ಈ ವ್ಯವಸ್ಥೆ ನವಭಾರತ ನಿರ್ಮಾಣಕ್ಕೆ ಸಹಕಾರಿಯಾಗಿಲ್ಲ ಎಂಬ ಸಂಪೂರ್ಣ ನಿರಾಕರಣೆ ನನ್ನದಲ್ಲ. ಶೈಶವಾವಸ್ಥೆಯಲ್ಲಿದ್ದ ದೇಶಕ್ಕೆ ಒಂದಿಷ್ಟು ಅನುಕೂಲಗಳೂ ಆದವು. ಆದರೆ, ಅದು ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ. 1990ರ ಸುಮಾರಿಗೆ ವ್ಯವಸ್ಥೆ ಕೆಲಸ ಮಾಡುವುದಿಲ್ಲ ಎನ್ನುವುದು ಪಿವಿಎನ್‌ ಸರಕಾರದ ವೇಳೆಗೆ ಅರಿವಿಗೆ ಬಂದು, ಅನಿವಾರ್ಯವಾಗಿ ಜಾಗತೀಕರಣವನ್ನು ಅಪ್ಪಿಕೊಳ್ಳಬೇಕಾಯಿತು. (ರಾಜೀವ್‌ ಗಾಂಧಿ ಅಧಿಕಾರದಲ್ಲಿದ್ದಾಗಲೇ ಅದರ ಭೂಮಿಕೆ ಸಿದ್ದವಾಗುತ್ತಿತ್ತು.)
ಜಾಗತೀಕರಣದ ಪರಿಣಾಮ, ಜೋಡೆತ್ತುಗಳನ್ನು ಕಟ್ಟಿಕೊಂಡು ದಿನಪೂರ್ತಿ ಬೆವರು ಹರಿಸುತ್ತಿದ್ದ ನಮ್ಮ ರೈತ, ಅಮೆರಿಕದಂತಹ ದೇಶಗಳಲ್ಲಿ ಹೆಲಿಕಾಪ್ಟರ್‌ ಮೂಲಕ ಔಷಧ ಸಿಂಪಡಿಸುವ ಮಾಡ್ರನ್‌ ರೈತನ ಉತ್ಪನ್ನಗಳೊಂದಿಗೆ ಸ್ಪರ್ಧೆಗೆ ಇಳಿಯುವಂತಾಯಿತು. ಈಗಲೂ, ಸ್ವಾತಂತ್ರ್ಯ ಲಭಿಸಿ 75 ವರ್ಷದ ನಂತರವೂ ತನ್ನದೇ ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಪಥವನ್ನು ಕಂಡುಕೊಳ್ಳಲು ಭಾರತ ಹೆಣಗಾಡುತ್ತಿದೆ. ಇಷ್ಟೆಲ್ಲ ಸಮಸ್ಯೆ-ಸವಾಲಿನ ನಂತರವೂ ದೇಶ ಶಾಂತಿಯಿಂದ ಮುನ್ನಡೆಯುತ್ತಿರುವುದಕ್ಕೆ ಭಾರತೀಯರಲ್ಲಿರುವ ಸಹನಾ ಶಕ್ತಿ ಭವಿಷ್ಯದ ಕುರಿತು ಆಶಾಭಾವನೆ ಹಾಗೂ ಬಂದ ಪರಿಸ್ಥಿತಿಗೆ ಅನುಗುಣವಾಗಿ ಜೀವನವನ್ನು ರೂಪಿಸಕೊಳ್ಳಬಲ್ಲ ಸಾಮೂಹಿಕ ಅಧ್ಯಾತ್ಮ ಬಲ ಕಾರಣವಿರಬಹುದು. ಇದೆಲ್ಲವನ್ನೂ ನೀವು ಒಂದೇ ಪದದಲ್ಲಿ ಭಾರತೀಯತೆ ಅನ್ನಿ ಅಥವಾ ಭಾರತೀಯರ ಸಾಂಸ್ಕೃತಿಕ ಎಚ್ಚರ ಎಂದಾದರೂ ಕರೆಯಿರಿ. ಇಂಥದ್ದೊಂದು ಸಾಂಸ್ಕೃತಿಕ ಅರಿವು ಭಾರತವನ್ನು ಸಲಹುತ್ತಿದೆ!
ಇಂಥ ಸಾಂಸ್ಕೃತಿಕ ಅರಿವನ್ನು ನಮ್ಮ ಪ್ರಮುಖ ರಾಜಕೀಯ ಪಕ್ಷ ಗಳು, ಅದರಲ್ಲಿಯೂ ವಿಶೇಷವಾಗಿ, ರಾಜೀವ್‌ ಗಾಂಧಿ ನಂತರದ ಕಾಂಗ್ರೆಸ್‌ ಹೇಗೆ ಎದುರಿಸಿತು ಎಂಬುದನ್ನು ತುಸು ಅವಲೋಕಿಸೋಣ.
2014ರ ನಂತರದಲ್ಲಿ ಕಾಂಗ್ರೆಸ್‌ ಪಕ್ಷ ದ ಸ್ಥಿತಿ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಧಿಕೃತ ಪ್ರತಿಪಕ್ಷ ವೂ ಆಗಲು ಸಾಧ್ಯವಲ್ಲದ ಸ್ಥಿತಿ ಮೊದಲ ಬಾರಿಗೆ ಆ ಪಕ್ಷ ಕ್ಕೆ ಬಂದಿತು. ಇದಕ್ಕೆ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ಭರಾಟೆ, ಕಾಂಗ್ರೆಸ್‌ ನೇತೃತ್ವದ ಯುಪಿಎ-2 ಅವಧಿಯಲ್ಲಿ ಹೊರಬಂದ ಹಗರಣಗಳ ಆರೋಪಗಳು ಕಾರಣ ಎಂದು ಸಾಮಾನ್ಯವಾಗಿ ವಿಶ್ಲೇಷಿಸಲಾಗುತ್ತದೆ. ಆದರೆ ಇದು ಅರ್ಧ ಸತ್ಯ. ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವುಳ್ಳ ಒಂದು ಪಕ್ಷ ವು ಏಳೆಂಟು ವರ್ಷಗಳಲ್ಲಿ ಇಂತಹ ಕುಸಿತ ಕಾಣಲು ಸಾಧ್ಯವೇ ಇಲ್ಲ. ಇದು ಒಂದು ದಿನದಲ್ಲಿ, ಒಂದು ವರ್ಷದಲ್ಲಿ, ಒಬ್ಬ ವ್ಯಕ್ತಿಯಿಂದ ಆದ ಪರಿಣಾಮವಂತೂ ಅಲ್ಲ. ಈ ಕುಸಿತದ ಆರಂಭ 2014ಕ್ಕೂ ಬಹು ಮುಂಚೆಯೇ ಆಗಿರಲೇ ಬೇಕು. ಹಾಗಾದರೆ ಯಾವುದು ಆ ಆರಂಭ?
ಪ್ರಾಕೃತಿಕ ವಿಕೋಪಗಳು ಒಂದೆರಡು ದಿನದಲ್ಲಿ ಘಟಿಸುವುದಿಲ್ಲ. ಸಣ್ಣಪುಟ್ಟ ಭೂಕಂಪನ, ಮಳೆಯಲ್ಲಿ ಏರುಪೇರು, ತಾಪಮಾನದಲ್ಲಿ ಸ್ವಲ್ಪವೇ ಏರಿಕೆಯಂತಹ ಘಟನಾವಳಿಗಳು ಹತ್ತಾರು ವರ್ಷ ನಡೆಯುತ್ತದೆ. ಆದರೆ ಅದು ತನ್ನ ಚರಮ ಸ್ಥಿತಿ ತಲುಪಿದ ಕೂಡಲೆ, ಯಾರ ನಿಯಂತ್ರಣಕ್ಕೂ ಬಾರದಂತೆ ಒಮ್ಮೆಲೇ ತನ್ನ ರೌದ್ರಾವತಾರ ತೋರಿಸುತ್ತದೆ. ಈಗ ಕಾಂಗ್ರೆಸ್‌ಗೆ ಉಂಟಾಗಿರುವ ಸ್ಥಿತಿಯೂ ಅದೇ.
ಭಾರತಕ್ಕಾಗಿ ನನ್ನ ಹೃದಯ ಮಿಡಿಯುತ್ತಿದೆ ಎಂಬ ರಾಜೀವ್‌ ಗಾಂಧಿ ಅವರ ನಾಣ್ಣುಡಿ, ಇಡೀ ದೇಶವಾಸಿಗಳನ್ನೇ ತಟ್ಟಿತು. ಇದು ಘೋಷಣೆಯೇ ಆದರೂ ಸಾಂಸ್ಕೃತಿಕ ಕೊಂಡಿ ಎಂಬುದು ದಿಟ. ರಾಜೀವ್‌ ಗಾಂಧಿ ಹೋದಲ್ಲೆಲ್ಲಾ ತಮ್ಮ ವೇಷ-ಭೂಷಣದ ಮೂಲಕವೇ ಆ ನೆಲದ ಸೊಗಡಿಗೆ ಗೌರವ ಸಲ್ಲಿಸುತ್ತಿದ್ದರು. ಧಾರ್ಮಿಕ, ಆಧ್ಯಾತ್ಮಿಕ ಭಾವನೆಗಳ ಜತೆ ಬೆಸೆದುಕೊಳ್ಳುತ್ತಿದ್ದರು. (ಇಷ್ಟೆಲ್ಲಾ ಆದರೂ, ರಾಜೀವ್‌- ಸೋನಿಯಾ ವಿವಾಹವು ಭಾರತೀಯರ ಸಾಂಸ್ಕೃತಿಕ ಮನಸ್ಸನ್ನು ತಟ್ಟುವ ರೀತಿ ನಡೆಯಬೇಕಿತ್ತು. ಅದು, ಅವರ ಮನೆತನದ ರೀತಿ ರಿವಾಜು, ಸಂಸ್ಕೃತಿಗಳಿಗೆ ಅನುಗುಣವಾಗಿ ನಡೆಯಲಿಲ್ಲ. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಕುಟುಂಬವೊಂದು, ದೇಶದ ಭವಿಷ್ಯದ ಪೀಳಿಗೆಗೆ ತೋರಬೇಕಾದ ದಾರಿ ಇದಾಗಿರಲಿಲ್ಲ ಎಂದು ವಾದಿಸುವವರೂ ಇದ್ದಾರೆ.)
ರಾಜೀವ್‌ ನಡೆ ಜನರಿಗೆ ಇಷ್ಟವಾಯಿತು. ಆದರೆ, ರಾಜೀವ್‌ ನಂತರದ ಕಾಂಗ್ರೆಸ್‌ ಇದರಿಂದ ದೂರವಾಗಲಾರಂಭಿಸಿತು. ಎಲ್ಲ ಮತ ಧರ್ಮಗಳಿಗೂ ಅವಕಾಶ ನೀಡುವ ಜಾತ್ಯತೀತತೆಯನ್ನು ಮರೆತು, ಎಲ್ಲ ಮತ ಧರ್ಮಗಳನ್ನು ನಿರಾಕರಿಸುವ ಕಮ್ಯುನಿಸ್ಟರ ಜಾತ್ಯತೀತ ತತ್ವಕ್ಕೆ, ಆ ವೇಳೆಗಾಗಲೇ ವಿಶ್ವದ ಎಲ್ಲೆಡೆ ವಿಫಲವಾಗುತ್ತಿದ್ದ ಸಮಾಜವಾದದ ಘೋಷಣೆಗೆ ಜೋತುಬಿದ್ದಿತು. ಗಾಂಧೀಜಿಯವರ ಸ್ವದೇಶಿ, ಗ್ರಾಮ ಸ್ವರಾಜ್ಯದಂತಹ ಪರಿಕಲ್ಪನೆಗಳಿಂದ ದೂರ ಸರಿದಿದ್ದ ಕಾಂಗ್ರೆಸ್‌, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ಸಾಂಸ್ಕೃತಿಕ ಕೊಂಡಿಯಿಂದಲೂ ದೂರ ಸರಿಯುವ ಸೂಚನೆ ನೀಡಿತು.
ಭಾರತೀಯರಿಗೆ ಜಾತ್ಯತೀತತೆಯನ್ನು ಬೋಧಿಸುವ ಅವಶ್ಯಕತೆ ಇದೆಯೇ ಎಂಬುದನ್ನಾದರೂ ಆಲೋಚಿಸಬೇಕಿತ್ತು. ಭಾರತದಲ್ಲಿರುವಷ್ಟು ವಿವಿಧ ನಂಬಿಕೆಗಳ ಜನರು ಬೇರೆ ಯಾವ ದೇಶದಲ್ಲೂ ಇಲ್ಲ. ಹಿಂದೂ ಧರ್ಮದೊಳಗಿನ ಹತ್ತಾರು ಮತ ಸಂಪ್ರದಾಯಗಳನ್ನು ಬಿಡೋಣ, ಅನ್ಯ ದೇಶಗಳಿಂದ ಬಂದ ನಂಬಿಕೆಗಳೂ ಇಲ್ಲಿ ಬೇರೂರಿವೆ. ಆಕ್ರಮಣಕಾರರ ಮೂಲಕ ದೇಶಕ್ಕೆ ಆಗಮಿಸಿದ ಇಸ್ಲಾಂ, ಕ್ರೈಸ್ತ ಹಾಗೂ ಸಾಮರಸ್ಯದ ಮೂಲಕ ದೇಶ ಪ್ರವೇಶಿಸಿದ ಪಾರ್ಸಿ ಹಾಗೂ ಯಹೂದಿ ನಂಬಿಕೆಗಳಿವೆ. ಭಾರತದಲ್ಲೇ ಜನ್ಮತಳೆದ ಬೌದ್ಧ, ಸಿಖ್‌, ಜೈನ ಸಂಪ್ರದಾಯಗಳಿವೆ. ಈ ಎಲ್ಲ ನಂಬಿಕೆ, ಸಿದ್ಧಾಂತಗಳು ಭಾರತ ಅಳವಡಿಸಿಕೊಂಡಿರುವ ಜಾತ್ಯತೀತ ನಿಲುವಿನ ಕಾರಣದಿಂದಷ್ಟೇ ಒಂದಾಗಿಲ್ಲ. ಈ ಸಾಮರಸ್ಯವನ್ನು ಜಾತ್ಯತೀತ ನೀತಿಯನ್ನೂ ಮೀರಿದ ಸಿದ್ಧಾಂತ ಎನ್ನಬಹುದು.
ಆಧುನಿಕ ಇತಿಹಾಸಕಾರರು ವ್ಯಾಖ್ಯಾನಿಸುವ, ಪರಸ್ಪರ ಸಹಿಸಿಕೊಳ್ಳುವ ‘ಜಾತ್ಯತೀತ’ ನೀತಿ ಎಲ್ಲರನ್ನೂ ಇಷ್ಟು ವರ್ಷ ಒಟ್ಟಿಗಿಡಲು ಸಾಧ್ಯವಿರಲಿಲ್ಲ. ಎಲ್ಲ ನಂಬಿಕೆಗಳನ್ನೂ ಗೌರವಿಸುವ, ಸ್ವೀಕರಿಸುವ ಗುಣ ಭಾರತೀಯರಿಗೆ ಯಾವತ್ತೂ ಇದೆ. ಇಂತಹ ದೇಶದ ಜನರಿಗೆ ಅನಗತ್ಯವಾಗಿ ಜಾತ್ಯತೀತತೆಯ ಬೋಧಿಸಲಾಯಿತು. ಬಹುತೇಕ ಜನರು ಒಂದಿಲ್ಲೊಂದು ದೇವರು, ಧರ್ಮ, ನಂಬಿಕೆಯನ್ನು ಹೊಂದಿರುವ ದೇಶದ ಸರಕಾರ ಅದು ಹೇಗೆ ಎಲ್ಲದರಿಂದ ಅಂತರ ಕಾಯ್ದುಕೊಳ್ಳಲು ಸಾಧ್ಯ? ಇಂತಹ ದೋಷಪೂರಿತ ದೃಷ್ಟಿಕೋನದಿಂದ ಕಾಂಗ್ರೆಸ್‌ ಕುಸಿತ ಹಂತಹಂತವಾಗಿ ನಡೆಯಿತು.
ಜತೆಗೆ, ಹೊಸ ನಾಯಕತ್ವ, ಕುಟುಂಬದ ಹೊರಗಿನ ನಾಗರಿಕರಿಗೆ ಬೆಳೆಯುವ ಅವಕಾಶ ಇಲ್ಲದ್ದರ ಪರಿಣಾಮ, ಹೊಸ ಆಲೋಚನೆಗಳಿಗೆ ಅಲ್ಲಿ ಅವಕಾಶ ಇಲ್ಲವಾಯಿತು. ಅದೇ ನಾಲ್ಕೈದು ವಂದಿಮಾಗಧರು ಹೇಳಿದ್ದೇ ದೇಶದ ಮಾನಸಿಕತೆ ಎಂದುಕೊಂಡು ಯಾಂತ್ರಿಕವಾಗಿ ಸರಕಾರಗಳು ನಡೆದವು. ಈ ಕುಸಿತಕ್ಕೆ ಅನುಗುಣವಾಗಿ ಕಳೆದ ಮೂರು ದಶಕದಿಂದ ಪ್ರಬಲವಾಗಿ ಬಿಜೆಪಿ ಬೆಳೆಯಿತು.
ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ಕಾರ್ಪೊರೇಟ್‌ ತಂತ್ರಗಾರಿಕೆಯಂತೆ ರೂಪುಗೊಂಡಿದೆ. ಕಳೆದ ಏಳು ವರ್ಷದಲ್ಲಿ, ಕೇಂದ್ರದಲ್ಲಿ ಮೋದಿ ಸರಕಾರವೂ ಸೇರಿ ಅನೇಕ ಸರಕಾರಗಳನ್ನು ಅಧಿಕಾರಕ್ಕೆ ತಂದ, ಅನೇಕ ಸರಕಾರಗಳನ್ನು ಚುನಾವಣೆಯಲ್ಲಿ ಸೋಲಿಸಿದ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಮನೆಮಾತಾಗಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ ಕುರಿತು ಅವರು ಮಾಡಿದ ಟ್ವೀಟ್‌ ಗಮನಾರ್ಹವಾಗಿದೆ. ಕಾಂಗ್ರೆಸ್‌ ಕುಸಿತವನ್ನು ಪರಿಹರಿಸಲು ತಕ್ಷ ಣದ ಯಾವ ಪರಿಹಾರಗಳೂ ಇಲ್ಲ. ಅದರ ಸಮಸ್ಯೆಗಳು ಅತ್ಯಂತ ಆಳವಾಗಿ ಬೇರೂರಿವೆ ಹಾಗೂ ಸಾಂಸ್ಥಿಕ ವ್ಯವಸ್ಥೆಯೇ ದುರ್ಬಲಗೊಂಡಿದೆ ಎಂದಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದ ಘಟನೆಯನ್ನು ಆಧಾರವಾಗಿಸಿಕೊಂಡು ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ. ಈ ಹೋರಾಟದಿಂದ ರಾಜಕೀಯ ಪುನರುಜ್ಜೀವನ ಸಿಕ್ಕೇಹೋಯಿತು ಎಂದುಕೊಂಡಿದ್ದಾರೆ. ಆದರೆ ಅವರೆಲ್ಲರೂ ಖಂಡಿತವಾಗಿ ನಿರಾಶರಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ ಪ್ರಶಾಂತ್‌ ಕಿಶೋರ್‌.
ಪ್ರಶಾಂತ್‌ ಕಿಶೋರ್‌ ಹೇಳಿದ್ದರಲ್ಲಿ ಸತ್ಯವಿದೆ. ಮೂರ್ನಾಲ್ಕು ದಶಕದಿಂದ ಕಾಂಗ್ರೆಸ್‌ನ ಸಾಂಸ್ಥಿಕ ವ್ಯವಸ್ಥೆಯಲ್ಲಿ ಉಂಟಾಗಿರುವ ಲೋಪವನ್ನು ಯಾವುದೋ ಒಂದು ಹೋರಾಟ ಸರಿಪಡಿಸಲು ಸಾಧ್ಯವಿಲ್ಲ. ಅದಕ್ಕೆ ಸಮಸ್ಯೆಯ ಮೂಲಕ್ಕೆ ಹೋಗುವ ಅವಶ್ಯಕತೆಯಿದೆ. ಎಲ್ಲಿಂದ ಭಾರತೀಯ ಸಂಸ್ಕೃತಿಯ ಬೇರುಗಳಿಂದ ಪಕ್ಷ ದೂರವಾಯಿತು, ಎಲ್ಲಿಂದ ಕುಟುಂಬ ರಾಜಕಾರಣದ ಅಂಟು ಅಂಟಿಕೊಂಡಿತು ಎಂದು ಗುರುತಿಸಬೇಕಿದೆ. ಆ ಸ್ಥಳದಿಂದ ತಪ್ಪುಗಳನ್ನು ಸರಿಪಡಿಸಿಕೊಂಡು ಬಂದರೆ ಮಾತ್ರವೇ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅತ್ತ ಸಾಂಸ್ಕೃತಿಕ ಅಸ್ಮಿತೆಯೊಂದಿಗೂ ಗುರುತಿಸಿಕೊಳ್ಳದೆ, ಇತ್ತ ಅಭಿವೃದ್ಧಿ ಅಜೆಂಡಾದಲ್ಲೂ ಸ್ಪಷ್ಟತೆಯಿಲ್ಲದೆ ಒಂದು ಘಟನೆಯಿಂದ ಪುನರುಜ್ಜೀವನ ಪಡೆಯಬಹುದು ಎಂಬುದು ಸುಳ್ಳು.
ಉದಾಹರಣೆಗೆ ಇತ್ತೀಚಿನ ವರ್ಷಗಳಲ್ಲಿ ಆಮ್‌ ಆದ್ಮಿ ಪಕ್ಷ ಸೇರಿ ಅನೇಕರು ಸಾಂಸ್ಕೃತಿಕ ಬೇರುಗಳನ್ನು ಹುಡುಕುತ್ತಿದ್ದಾರೆ. ದೇಶದ ಸಂಸ್ಕೃತಿ, ಆಚರಣೆಗಳು ಅಭಿವೃದ್ಧಿಗೆ ವಿರುದ್ಧವಾದವಲ್ಲ, ಅವುಗಳೇ ನಿಜವಾದ ಅಭಿವೃದ್ಧಿ ಮಾದರಿ ಎನ್ನುವುದನ್ನು ಕಂಡುಕೊಳ್ಳುತ್ತಿವೆ. ದಿಲ್ಲಿಯ ಜನ ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿಲ್ಲ. ಆಮ್‌ ಆದ್ಮಿ ಪಕ್ಷ ಕ್ಕೆ ಬೆಂಬಲ ನೀಡಿದ್ದಾರೆ. ಸಾಂಸ್ಕೃತಿಕ, ಧಾರ್ಮಿಕ ಅಸ್ಮಿತೆ-ಅರಿವನ್ನೇ ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುವ ಪಕ್ಷ ಎಂದು ಕಾಂಗ್ರೆಸ್‌ನಿಂದ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ, ದಿಲ್ಲಿಯಲ್ಲಿ ಸೋಲು ಕಾಣುತ್ತಿದೆ. ಯಾಕೆ ಹೀಗೆ ಎಂದು ಕಾಂಗ್ರೆಸ್‌ ಯೋಚಿಸಲಿ.
ಇನ್ನು, ದೇಶದ ಸಾಂಸ್ಕೃತಿಕ ವೈಭವವನ್ನೇ ಆಧಾರವಾಗಿಸಿಕೊಂಡ ರಾಜಕಾರಣ ಮಾಡುತ್ತಿರುವ ಬಿಜೆಪಿ ಕುರಿತು ಒಂದೆರಡು ಮಾತು. ಬಿಜೆಪಿ ಕಳೆದ 2-3 ದಶಕದಲ್ಲಿ ಬೆಳೆದ ಪರಿ ಅಚ್ಚರಿದಾಯಕ. ಒಬ್ಬಿಬ್ಬರು ಸಂಸದರು, ಶಾಸಕರನ್ನು ಹೊಂದಿದ್ದ ಪಕ್ಷ ಈಗ ಸಂಪೂರ್ಣ ಬಹುಮತದೊಂದಿಗೆ ಸರಕಾರ ರಚಿಸುವಷ್ಟು ಬೆಳೆದಿದೆ. ಇಲ್ಲಿಯವರೆಗೆ ದೇಶದ ಬೆಳೆದು ಬಂದ ಆರ್ಥಿಕ ಹಾಗೂ ಸಾಮಾಜಿಕ ನೀತಿಗಳಲ್ಲಿ ಲೋಪವಿದೆ, ಅದನ್ನು ಸರಿಪಡಿಸಿ ಹೊಸ ವ್ಯವಸ್ಥೆಯನ್ನು ನೀಡುತ್ತೇವೆ ಎಂದು ಭರವಸೆ ನೀಡುತ್ತಲೇ ಇದೆ. ನಿರಾಶೆಯ ವಿಚಾರವೆಂದರೆ, ಅವ್ಯಾವುವೂ ಕಾಣಲು ಸಿಕ್ಕಿಲ್ಲ. ಇಲ್ಲಿಯವರೆಗೆ ದೇಶ ನಡೆದುಕೊಂಡು ಬಂದ ಮಾರ್ಗದಲ್ಲೇ ಸಣ್ಣಪುಟ್ಟ ತೇಪೆ ಹಚ್ಚುತ್ತಾ ಮುನ್ನಡೆಯುತ್ತಿದೆ. ವೈಚಾರಿಕ ಹಿನ್ನೆಲೆಯಲ್ಲಿ ರಾಜಕಾರಣ ಮಾಡುತ್ತೇವೆ ಎನ್ನುವ ಬಿಜೆಪಿಯ ಮಾತುಗಳು ವಾಸ್ತವದಲ್ಲಿ ಚುನಾವಣೆ ಎದುರಿಸುವಾಗ ಕಾಣುವುದಿಲ್ಲ. ಅನೇಕ ವರ್ಷಗಳಿಂದ ನಡೆದುಕೊಂಡು ಬಂದ, ಕಾಂಗ್ರೆಸ್‌ನ ಹೆಗ್ಗುರುತಾಗಿರುವ ಜಾತಿ ಆಧಾರಿತ ರಾಜಕಾರಣ, ಕುಟುಂಬ ಆಧರಿತ ರಾಜಕಾರಣವೇ ಅಲ್ಲಿಯೂ ಮೇಲೆದ್ದು ಕಾಣುತ್ತದೆ. ಅಭಿವೃದ್ಧಿ ಅಜೆಂಡಾದಲ್ಲೂ ಹೊಸತನದ, ಕ್ರಾಂತಿಕಾರಿ ಎನ್ನಬಹುದಾದ ಯಾವ ಅನುಷ್ಠಾನಗಳೂ ಕಾಣುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ತಾನು ಪ್ರತಿಪಾದಿಸುವ ವಿಚಾರಗಳಿಗೆ ಸಂಪೂರ್ಣ ಬದ್ಧತೆ ನಾಯಕರಲ್ಲಿ ಕಂಡು ಬರುತ್ತಿಲ್ಲ. ಒಂದರ್ಥದಲ್ಲಿ ಬಿಜೆಪಿಯೂ ಒಳಗಿಂದಲೇ ಟೊಳ್ಳಾಗುವತ್ತ ಸಾಗುವ ಎಲ್ಲ ಲಕ್ಷ ಣಗಳೂ ಇವೆ. ಈಗ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸುತ್ತಿದ್ದರೂ ಭವಿಷ್ಯದ ಮಹಾ ಕುಸಿತದ ಲಕ್ಷ ಣಗಳು ಅಲ್ಲಲ್ಲಿ ಬಿಡಿಬಿಡಿಯಾಗಿ ಕಾಣಿಸುತ್ತಿವೆ.
ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷ ಗಳೂ ಒಂದೇ ರೀತಿಯ ದೋಣಿಗಳಲ್ಲಿವೆ. ಭಾರತದ ನಿಜವಾದ ಅಸ್ಮಿತೆಯನ್ನು ಅರಿತು, ಜನರ ಆಶೋತ್ತರಗಳನ್ನು ಈಡೇರಿಸುತ್ತಲೇ ಜನರ ಆಲೋಚನಾ ಮಟ್ಟವನ್ನೂ ಹೆಚ್ಚಿಸುವ ಹೊಣೆಗಾರಿಕೆ ಇವರ ಮೇಲಿದೆ. ಇಲ್ಲದಿದ್ದರೆ, ಹಳ್ಳದೆಡೆಗೇ ನೀರು ಹರಿಯುವಂತೆ, ಅಧೋಮುಖ ಸಮಾಜಕ್ಕೆ ಅನುಗುಣವಾಗಿ ನಡೆದರೆ ಕಡೆಗೆ ದೋಣಿಯೂ, ನಾವಿಕನೂ, ಅದರಲ್ಲಿರುವ ಪ್ರಯಾಣಿಕರೂ ನೀರು ಪಾಲಾಗುವುದು ಖಂಡಿತ. ತಮ್ಮದೇ ಆದ ವಿಚಾರ, ಸಿದ್ಧಾಂತಗಳನ್ನು ಹೊಂದಿರುವ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷ ಗಳು ಬಲಗೊಳ್ಳಬೇಕಿದೆ. ಆದರೆ, ಆ ವಿಚಾರಗಳು ಯಾವ ರೀತಿಯ ಅರಿವು ಹೊಂದಿರಬೇಕು ಎಂಬುದು ಮುಖ್ಯ.
ರಾಮ ಮನೋಹರ ಲೋಹಿಯಾ ಅವರು ದೇವರ ಕುರಿತು ಹೇಳಿರುವ ಮಾತೊಂದಿದೆ. ದೇವರು ಜಾಗದಲ್ಲಿ ಭಾರತೀಯ ಸಾಂಸ್ಕೃತಿಕ ಎಂಬ ಪದವನ್ನು ಇಟ್ಟುಕೊಂಡು ಓದಿದರೂ, ಅದರ ಅರ್ಥ ವ್ಯತ್ಯಾಸ ಆಗದು:
ನಾನು ದೇವರನ್ನು ನಂಬುವವನಲ್ಲ. ದೇವರನ್ನು ನಂಬುವವರಿಗಿಂತ ನಾನು ಶ್ರೇಷ್ಠನೆಂದು ತಿಳಿದುಕೊಳ್ಳುವ ಭ್ರಮೆಯೂ ನನಗಿಲ್ಲ. ಪ್ರತಿಯೊಬ್ಬರದೂ ಒಂದೊಂದು ವಿಧಾನ. ದೇವರನ್ನು ನಂಬಿರುವ ಸಾಧಾರಣ ಜನರನ್ನು ನಾನು ನೋಡಿದ್ದೇನೆ. ಅಂಥವರು ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಹೋಗಿ ಪಡೆಯುವುದುಂಟು. ಅವರಿಗೆ ನಾನೆಂದು ಅಡ್ಡಿಮಾಡುವವನೂ ಅಲ್ಲ. ಏಕೆಂದರೆ ಹಾಗೆ ಮಾಡುವುದರಿಂದ ಅವರ ಮುಖಗಳ ಮೇಲೆ ಮೂಡುವ ಶಾಂತಿಯನ್ನು ಪ್ರಾಯಶಃ ಬೇರಾವ ರೀತಿಯಿಂದಲೂ ನಾನು ಅವರಿಗೆ ಕೊಡಲಾರೆ. ಪರಿಸ್ಥಿತಿ ಹೀಗಿರುವಾಗ ಅವರನ್ನು ತಡೆಯಲು ನಾನಾರು…?

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top