ಪ್ರತ್ಯೇಕ ಕಾಶ್ಮೀರದ ಮೇಲೆ ಕಣ್ಣಿಟ್ಟಿದ್ದ ಶೇಕ್ ಅಬ್ದುಲ್ಲಾ ಆರಂಭದಲ್ಲೇ ಬ್ರಿಟಿಷರ ಬೆಂಬಲ ಪಡೆದುಕೊಂಡಿದ್ದು ಮಾತ್ರವಲ್ಲ, ನೆಹರು ಮತ್ತು ಕಾಂಗ್ರೆಸ್ಸಿನ ದೌರ್ಬಲ್ಯವನ್ನು ಬಳಸಿಕೊಂಡರು. ಪ್ರತ್ಯೇಕ ಪಾಕಿಸ್ತಾನ ಬೇಡಿಕೆ ಮುಂದಿಟ್ಟಿದ್ದ ಜಿನ್ನಾಗಿಂತಲೂ ತಾನು ನೆಹರುಗೆ ಹೆಚ್ಚು ಆಪ್ತನೆಂಬಂತೆ ನಡೆದುಕೊಂಡರು.
ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ವಿಚಾರ ಬಂದರೆ ನಮಗೆ ಈಗ ಮೊದಲು ನೆನಪಾಗುವುದು ಕಾಶ್ಮೀರ. ಅದಕ್ಕೂ ಹೆಚ್ಚಾಗಿ ಕಾಶ್ಮೀರದ ವಿಷಯದಲ್ಲಿ ನ್ಯಾಷನಲ್ ಕಾನ್ಫರೆನ್ಸ್‍ನ ಉಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ ಮುಂತಾದವರೆಲ್ಲ ಈಗಲೂ ಮುಂದಿಡುತ್ತಿರುವ ವಿತಂಡವಾದವನ್ನು ನೋಡಿದರೆ ಬೇಸರವಾಗುತ್ತದೆ. ಇದೇ ಕಾಶ್ಮೀರಿ ನಾಯಕರ ವಂಶಸ್ಥರು ಆ ರಾಜ್ಯದಲ್ಲಿ ಮುಸ್ಲಿಂ ಪ್ರತ್ಯೇಕತಾವಾದದ ರಾಜಕಾರಣವನ್ನು 1930ರ ಹೊತ್ತಿಗೇ ಬಿತ್ತಿ ಬೆಳೆಸಿದರು ಎಂದರೆ ಬಹಳಷ್ಟು ಮಂದಿ ನಂಬಲಿಕ್ಕಿಲ್ಲ. ಆದರೆ ಅದೇ ವಾಸ್ತವ. ಆ ವರ್ಷದ ಜನವರಿ 26ರಂದು ಭಾರತದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪೂರ್ಣ ಸ್ವರಾಜ್ಯದ ಸಂಕಲ್ಪ ಘೋಷಣೆ ಮಾಡುವುದರೊಂದಿಗೆ ಸ್ವಾತಂತ್ರೃ ಸಂಘರ್ಷ ನಿರ್ಣಾಯಕ ಘಟ್ಟ ತಲುಪಿತ್ತು. ಮುಖ್ಯವಾಗಿ ಕ್ರಾಂತಿಕಾರಿ ಸ್ವಾತಂತ್ರೃ ಹೋರಾಟಗಾರರಾದ ಭಗತ್ ಸಿಂಗ್ ಮತ್ತು ಚಂದ್ರಶೇಖರ ಆಜಾದ್ ಮುಂತಾದವರು ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ್ದರು. ಈ ಇಕ್ಕಟ್ಟಿನಿಂದ ಪಾರಾಗಲು ಉಪಾಯ ಹುಡುಕಿದ ಬ್ರಿಟಿಷರು ಭಾರತವನ್ನು ಧರ್ಮಾಧಾರಿತವಾಗಿ ತುಂಡರಿಸಲು ಮುಂದಾಗಿದ್ದ ಮುಸ್ಲಿಂ ಲೀಗನ್ನು ಗೌಪ್ಯವಾಗಿ ಬೆಂಬಲಿಸಲು ತೀರ್ಮಾನಿಸಿದರು.ಆ ಹೊತ್ತಿಗೆ ಸರಿಯಾಗಿ ಭಾರತದ ಆಡಳಿತಾತ್ಮಕ ಮತ್ತು ಆಂತರಿಕ ಪರಿಸ್ಥಿತಿ ನಿಭಾಯಿಸುವ ನೆಪದಲ್ಲಿ ಬ್ರಿಟಿಷ್ ಸರ್ಕಾರ ಲಂಡನ್‍ನಲ್ಲಿ ದುಂಡುಮೇಜಿನ ಸರಣಿ ಸಭೆಗಳನ್ನು ನಡೆಸಿತು. 1930ರ ನವೆಂಬರ್‍ನಿಂದ 1931ರ ಜನೆವರಿಯವರೆಗೆ ನಡೆದ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡ ಕಾಶ್ಮೀರದ ಆಗಿನ ರಾಜ ಹರಿಸಿಂಗ್, ಭಾರತದ ರಾಷ್ಟ್ರೀಯ ಕಾಂಗ್ರೆಸ್ ಘೋಷಿಸಿದ್ದ `ಸಂಪೂರ್ಣ ಸ್ವರಾಜ್ಯ’ ಘೋಷಣೆಯನ್ನು ಮನಃಪೂರ್ವಕವಾಗಿ ಬೆಂಬಲಿಸಿದರು. ಇದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅದೇ ಕಾರಣಕ್ಕಾಗಿ ಬ್ರಿಟಿಷರು ರಾಜ ಹರಿಸಿಂಗ್‍ರನ್ನು ದುರ್ಬಲಗೊಳಿಸುವ ಕೆಲಸಕ್ಕೆ ನೇರವಾಗಿ ಕೈಹಾಕಿದರು.
ಬ್ರಿಟಿಷರ ಆಲೋಚನೆಗೆ ಪೂರಕವಾಗಿ ಕಾಶ್ಮೀರದಲ್ಲಿ ಹರಿಸಿಂಗ್‍ರ ಆಳ್ವಿಕೆ ವಿರುದ್ಧ ಮುಸ್ಲಿಂ ಲೀಗ್ ಅದೇ ವೇಳೆಗೆ ಕಾಯ್ದೆಭಂಗ ಚಳವಳಿ ಆರಂಭಿಸಿತ್ತು. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಮುಸ್ಲಿಂ ಯುವಕರೂ ಈ ಚಳವಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಜೋಡಿಸಿದ್ದರು. ಹಾಗೆ ಕಾಶ್ಮೀರದಲ್ಲಿ ಆರಂಭವಾಗಿದ್ದ ಮತೀಯ ಹೋರಾಟವನ್ನು ಬೆಂಬಲಿಸುವ ಮೂಲಕ, ದುಂಡುಮೇಜಿನ ಸಭೆಯಲ್ಲಿ ತಮ್ಮ ಇಷ್ಟಕ್ಕೆ ವಿರುದ್ಧ ಖಡಾಖಂಡಿತ ನಿಲುವು ಮಂಡಿಸಿದ ರಾಜ ಹರಿಸಿಂಗ್‍ರನ್ನು ಅಡಿತಪ್ಪಿಸಲು ಬ್ರಿಟಿಷರು ಸಂಚು ರೂಪಿಸಿದರು.
ಬ್ರಿಟಿಷ್ ಸರ್ಕಾರದ ನೇರ ಬೆಂಬಲ ಪಡೆದ ಮುಸ್ಲಿಂ ಮುಖಂಡ ಶೇಖ್ ಅಬ್ದುಲ್ಲಾ ನೇತೃತ್ವದಲ್ಲಿ ಹರಿಸಿಂಗ್ ವಿರುದ್ಧ ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದ ಕೋಮುದಂಗೆಯೂ ಶುರುವಾಯಿತು. ಅಬ್ದುಲ್ಲಾ ಹೋರಾಟಕ್ಕೆ ಶಕ್ತಿ ತುಂಬುವ ಸಲುವಾಗಿಯೇ ಪಾಶ್ಚಿಮಾತ್ಯ ಪ್ರವಾಸಿಯ ಮಾರುವೇಷದಲ್ಲಿ ಕಾದೀರ್ ಎಂಬಾತನನ್ನು ಬ್ರಿಟಿಷ್ ಸರ್ಕಾರವೇ ಕಾಶ್ಮೀರದೊಳಕ್ಕೆ ತೂರಿಸಿತು. ಕೋಮುದ್ವೇಷ ಬಿತ್ತಿದ ಆರೋಪದಲ್ಲಿ ನಂತರ ಆತನನ್ನು ಆಗಿನ ಕಾಶ್ಮೀರಿ ಆಡಳಿತ ಬಂಧಿಸಿತು. ಏನೇ ಮಾಡಿದರೂ ಪ್ರತ್ಯೇಕತಾವಾದದ ಬೆಳವಣಿಗೆಯನ್ನು ತಡೆಯಲಾಗಲಿಲ್ಲ. ಅದರ ನೇರ ಮತ್ತು ಘೋರ ಪರಿಣಾಮವನ್ನು ಕಾಶ್ಮೀರದ ಹಿಂದುಗಳು ಈಗಲೂ ಅನುಭವಿಸುತ್ತಿದ್ದಾರೆ.
ಕಾಶ್ಮೀರ ಪ್ರತ್ಯೇಕತೆಯ ಹೋರಾಟದ ಮುಂದಿನ ಹಂತವಾಗಿ 1931ರ ಜೂನ್‍ನಲ್ಲಿ ಮೀರ್‍ವಾಜ್ ಯೂಸುಫ್ ಷಾ, ಶೇಖ್ ಅಬ್ದುಲ್ಲಾ ಮತ್ತು ಚೌಧರಿ ಗುಲಾಮ್ ಅಬ್ಬಾಸ್ ನೇತೃತ್ವದಲ್ಲಿ ಮುಸ್ಲಿಂ ಕಾನ್ಫರೆನ್ಸ್ ಜನ್ಮ ತಾಳಿತು. ಮುಂದೆ ಅದೇ ಸಂಘಟನೆ ರಾಜ ಹರಿಸಿಂಗ್ ವಿರುದ್ಧ ಹೋರಾಡುವ ಸಲುವಾಗಿ ರಾಜಕೀಯ ಪಕ್ಷದ ಸ್ವರೂಪವನ್ನೂ ಪಡೆದುಕೊಂಡಿತು. ಶೇಖ್ ಅಬ್ದುಲ್ಲಾರ ಮುಸ್ಲಿಂ ಕಾನ್ಫರೆನ್ಸನ್ನು ಮುಂದೆ ಲಾಹೋರದ ಮುಸ್ಲಿಂ ಪ್ರೆಸ್ ಹಾಗೂ ಮತೀಯ ಸಂಘಟನೆಗಳಾದ ಅಹಮದೀಯ ಜಮಾತ್ ಮತ್ತು ಮಜಿಲೀಸ್ ಅಹ್ರರಾರ್ ಸಂಘಟನೆಗಳು ಬೆಂಬಲಿಸಿದವು. ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲು ಪಣತೊಟ್ಟಿದ್ದ ಶೇಖ್ ಅಬ್ದುಲ್ಲಾ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕಾಗಿ 1939ರ ಜೂನ್ 10ರಂದು ಮುಸ್ಲಿಂ ಕಾನ್ಫರೆನ್ಸನ್ನು ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಎಂದು ಮರುನಾಮಕರಣ ಮಾಡಿದರು. ಭಾರತದ ಮಾಧ್ಯಮಗಳು ಮತ್ತು ಕಾಶ್ಮೀರದ ಎಲ್ಲ ಪ್ರತ್ಯೇಕತಾವಾದಿ ಹೋರಾಟಗಾರರ ಬೆಂಬಲ ಪಡೆಯುವ ಏಕೈಕ ಉದ್ದೇಶದಿಂದ ಶೇಖ್ ಅಬ್ದುಲ್ಲಾ ಸಂಘಟನೆಗೆ ಮರುನಾಮಕರಣದ ಯೋಜನೆ ರೂಪಿಸಿದ್ದರು. ಅವರಿಗೆ ಈ ಉಪಾಯ ಹೇಳಿಕೊಟ್ಟಿದ್ದು ಗಡಿನಾಡ ಗಾಂಧಿ ಎಂದೇ ಖ್ಯಾತರಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನ್ ಎಂದು ಹೇಳಲಾಗುತ್ತದೆ.
ಎರಡನೇ ವಿಶ್ವಯುದ್ಧ ಆರಂಭದ ವೇಳೆಗೆ ಸರಿಯಾಗಿ 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಎಲ್ಲ ಕಾಂಗ್ರೆಸ್ ನಾಯಕರನ್ನು ಬಂಧಿಸಿದ ನಂತರ ಕಾಶ್ಮೀರ ಪ್ರತ್ಯೇಕತಾ ಚಳವಳಿ ಹೊಸ ಗತಿಯನ್ನು ಪಡೆದುಕೊಂಡಿತು. ಜರ್ಮನಿಯು ಸೋವಿಯತ್ ರಷ್ಯಾದ ಮೇಲೆ ದಾಳಿ ಮಾಡಿದ ಕಾರಣ ಮತ್ತು ರಷ್ಯಾ ಆಂಗ್ಲೋ-ಅಮೆರಿಕ ಬಣ ಸೇರಿಕೊಂಡಿದ್ದರಿಂದ ಭಾರತದ ಕಮ್ಯುನಿಸ್ಟ್ ಪಕ್ಷ ಬ್ರಿಟಿಷರಿಗೆ ನೇರ ಬೆಂಬಲ ನೀಡಿತು. ಅಷ್ಟೇ ಅಲ್ಲ, ಪಂಜಾಬಿನ ಬಹಳಷ್ಟು ಕಮ್ಯುನಿಸ್ಟ್ ನಾಯಕರು ನ್ಯಾಷನಲ್ ಕಾನ್ಫರೆನ್ಸ್‍ನ ಕಾಶ್ಮೀರದ ಮತೀಯ ಅಜೆಂಡಾವನ್ನು ಮುಕ್ತವಾಗಿ ಬೆಂಬಲಿಸಿದರು. ಕಮ್ಯುನಿಸ್ಟರ ಬೆಂಬಲ ಪಡೆದ ಶೇಖ್ ಅಬ್ದುಲ್ಲಾರ ನ್ಯಾಷನಲ್ ಕಾನ್ಫರೆನ್ಸ್ `ನಯಾ ಕಾಶ್ಮೀರ’ ಚಳವಳಿಯನ್ನು ಆರಂಭಿಸಿತು. ಕಾಶ್ಮೀರದಲ್ಲಿ ರಾಜ ಹರಿಸಿಂಗ್ ಆಳ್ವಿಕೆ ಕೊನೆಗೊಳಿಸುವುದೇ ಈ ಚಳವಳಿಯ ಒಂದಂಶದ ಕಾರ್ಯಸೂಚಿಯಾಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಂಪೂರ್ಣ ಮತೀಯ ಹೋರಾಟದ ಸ್ವರೂಪ ಪಡೆದುಕೊಂಡಿದ್ದ ನ್ಯಾಷನಲ್ ಕಾನ್ಫರೆನ್ಸ್ 1946 ಮೇ 10ರಂದು `ಕ್ವಿಟ್ ಕಾಶ್ಮೀರ’ ಚಳವಳಿ ಘೋಷಿಸಿತು.
ಇಷ್ಟಾದರೂ ನೆಹರು ಮತ್ತು ಕಾಂಗ್ರೆಸ್ ಪಕ್ಷದ ಕೃಪೆಯಿಂದ ಶೇಖ್ ಅಬ್ದುಲ್ಲಾರಿಗೆ ಕಾಶ್ಮೀರದಲ್ಲಿ ಆಡಳಿತದ ಚುಕ್ಕಾಣಿ ಸಿಕ್ಕಿತು. 1947ರಿಂದ 1953ರ ಅವಧಿಯಲ್ಲಿ ಕಾಶ್ಮೀರದಲ್ಲಿ ಅಲ್ಪಾವಧಿಗೆ ಅಧಿಕಾರದಲ್ಲಿದ್ದ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ಸಿಕ್ಕಿದ ಎಲ್ಲ ಅವಕಾಶಗಳನ್ನೂ ರಾಜ್ಯವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ರೂಪಿಸುವುದಕ್ಕೋಸ್ಕರವೇ ಬಳಸಿಕೊಂಡಿತು. ಪಕ್ಷದ ಕೇಂದ್ರ ಕಚೇರಿಯನ್ನು ಕಾಶ್ಮೀರಿ ಉಗ್ರರ ಧ್ಯೇಯಘೋಷವಾದ `ಮುಜಾಹಿದ್ ಮಂಜಿಲ್’ ಎಂದು ಶೇಖ್ ಅಬ್ದುಲ್ಲಾ ನಾಮಕರಣ ಮಾಡಿದ್ದರು ಅಂದರೆ ಬೇರೆಲ್ಲಾ ಸಂಗತಿಯನ್ನು ಯಾರಾದರೂ ಅರ್ಥಮಾಡಿಕೊಳ್ಳಬಹುದು.
ಪ್ರತ್ಯೇಕ ಕಾಶ್ಮೀರದ ಮೇಲೆ ಕಣ್ಣಿಟ್ಟಿದ್ದ ಶೇಕ್ ಅಬ್ದುಲ್ಲಾ ಜಾಣತನದಿಂದ ಆರಂಭದಲ್ಲೇ ಬ್ರಿಟಿಷರ ಸಂಪೂರ್ಣ ಬೆಂಬಲ ಪಡೆದುಕೊಂಡಿದ್ದು ಮಾತ್ರವಲ್ಲ, ರಾಜ ಹರಿಸಿಂಗ್ ಜೊತೆ ನೆಹರು ವೈಮನಸ್ಯ ಹೊಂದಿರುವುದನ್ನು ಅರಿತುಕೊಂಡು ಅವರ ಪ್ರೀತಿ ಗಳಿಸುವಲ್ಲೂ ಯಶಸ್ವಿಯಾದರು. ನೆಹರು ಮತ್ತು ಕಾಂಗ್ರೆಸ್ಸಿನ ದೌರ್ಬಲ್ಯವನ್ನು ಸರಿಯಾಗಿ ಬಳಸಿಕೊಳ್ಳುತ್ತ ಹೋದ ಅಬ್ದುಲ್ಲಾ ಪ್ರತ್ಯೇಕ ಪಾಕಿಸ್ತಾನ ಬೇಡಿಕೆ ಮುಂದಿಟ್ಟಿದ್ದ ಮಹಮ್ಮದ್ ಅಲಿ ಜಿನ್ನಾಗಿಂತಲೂ ತಾನು ನೆಹರೂಗೆ ಹೆಚ್ಚು ಆಪ್ತನಂತೆ, ಹಿತೈಷಿಯಂತೆ ನಡೆದುಕೊಂಡರು. ಅದಕ್ಕೋಸ್ಕರವೇ ಶೇಖ್ ಅಬ್ದುಲ್ಲಾ ಮುಸ್ಲಿಂ ಕಾನ್ಫರೆನ್ಸನ್ನು ನ್ಯಾಷನಲ್ ಕಾನ್ಫರೆನ್ಸ್ ಎಂದು ಮರುನಾಮಕರಣ ಮಾಡಿದ್ದೂ ಕೂಡ. ಇಲ್ಲೊಂದು ಸಂಗತಿ ಗಮನಿಸಬೇಕು. ರಾಷ್ಟ್ರ (ನ್ಯಾಷನಲ್) ಎಂದರೆ ಭಾರತವಲ್ಲ, ಅವರ ಲೆಕ್ಕದಲ್ಲಿ ಪ್ರತ್ಯೇಕ ಕಾಶ್ಮೀರ ರಾಷ್ಟ್ರ. ಅದು ಗೊತ್ತಿದ್ದೂ ಶೇಖ್ ಅಬ್ದುಲ್ಲಾರನ್ನು ಕಾಶ್ಮೀರದ ಪ್ರಧಾನಿಯೆಂದು ಪಟ್ಟಾಭಿಷೇಕ ಮಾಡಿದರು ಪಂಡಿತ್ ನೆಹರು. ಹೀಗಾಗಿ ಕೋಮುವಾದಿ ಧೋರಣೆ ಮೂಲಕವೇ ಕಾಶ್ಮೀರದಲ್ಲಿ ಅಧಿಕೃತ ರಾಜಕೀಯ ಅಧಿಕಾರ ಗಳಿಸಿದ ಅಬ್ದುಲ್ಲಾ ರಾತ್ರಿ ಬೆಳಗಾಗುವುದರೊಳಗೆ ಆ ರಾಜ್ಯದ ಆಡಳಿತಗಾರರಾಗಿ ಬದಲಾಗಿಬಿಟ್ಟರು. ಮುಂದೆ ಕೇಳಬೇಕೇ? ಕಾಶ್ಮೀರ ಸರ್ಕಾರದ ಮುಖ್ಯಸ್ಥರಾಗಿ ನೇಮಕಗೊಂಡ ಅವರು, ಮರುಕ್ಷಣದಿಂದಲೇ ಕಣಿವೆ ರಾಜ್ಯದಲ್ಲಿ ಹಿಂದು ಅಲ್ಪಸಂಖ್ಯಾತರ ಅಸ್ತಿತ್ವವನ್ನು ಅಳಿಸಿಹಾಕುವ ಯೋಜಿತ ಕಾರ್ಯಕ್ರಮಗಳನ್ನು ಒಂದೊಂದಾಗಿ ಜಾರಿ ಮಾಡುತ್ತ ಹೋದರು.
ಅಂತಹ ಕಾರ್ಯಕ್ರಮಗಳ ಪೈಕಿ `ಉಳುವವನಿಗೇ ಭೂಮಿ’ ಕಾಯ್ದೆ ಮೊದಲನೆಯದ್ದು. ಕೃಷಿ ಭೂಮಿಯನ್ನು ಹಿಂದುಗಳ ಕೈಯಿಂದ ಕಿತ್ತುಕೊಳ್ಳುವ ನ್ಯಾಷನಲ್ ಕಾನ್ಫರೆನ್ಸ್ ಅಜೆಂಡಾ ಜಾರಿಗೆ ಈ ಕಾಯ್ದೆ ದೊಡ್ಡ ಪ್ರಮಾಣದಲ್ಲಿ ನೆರವಾಯಿತು. ಸರ್ಕಾರಿ ನೇಮಕಾತಿಯಲ್ಲೂ ಅಷ್ಟೇ, ಕಾಶ್ಮೀರದ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವೆ ಭಾರಿ ತಾರತಮ್ಯ ಮಾಡಲಾಯಿತು. ಆಯಕಟ್ಟಿನ ಜಾಗಗಳಿಂದ ಹಿಂದುಗಳನ್ನು ಬದಿಗೆ ಸರಿಸುವ ಕೆಲಸ ಸರ್ಕಾರದಿಂದಲೇ ವ್ಯವಸ್ಥಿತವಾಗಿ ನಡೆಯುತ್ತ ಹೋಯಿತು. ಕಾಶ್ಮೀರಿ ಬದಲು ಉರ್ದುವನ್ನು ಅಧಿಕೃತ ಸರ್ಕಾರಿ ಭಾಷೆಯೆಂದು ಕಾಶ್ಮೀರ ಸರ್ಕಾರ ಸ್ವೀಕರಿಸಿತು. ಕಾಶ್ಮೀರಿ ಭಾಷೆ ಸಂಸ್ಕøತಕ್ಕೆ ಸಾಮೀಪ್ಯ ಹೊಂದಿದೆ ಎಂಬುದೊಂದೇ ಇದಕ್ಕೆ ಕಾರಣ. ಹಿಂದು ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳನ್ನು ಮತ್ತು ನಂಬಿಕೆಯನ್ನು ಅಮಾನ್ಯ ಮಾಡುವ ಕೆಲಸಕ್ಕೆ ಸರ್ಕಾರವೇ ಕುಮ್ಮಕ್ಕು ನೀಡುತ್ತ ಹೋಯಿತು. ಹಿಂದು ಧಾರ್ಮಿಕ ಕೇಂದ್ರಗಳಿಗೆ ಸೇರಿದ ಭೂಮಿಯನ್ನು ವ್ಯವಸ್ಥಿತವಾಗಿ ಅತಿಕ್ರಮಿಸಿಕೊಳ್ಳಲಾಯಿತು. ಮೇಲಿಂದ ಮೇಲೆ ಕೋಮದಂಗೆಗಳು ನಡೆದವು. ಹಿಂದುಗಳ ಮನೆಮಠಗಳು ಸಂಪೂರ್ಣ ನಾಶವಾದವು. ಹಿಂದುಗಳು ತಮ್ಮ ಆಸ್ತಿಪಾಸ್ತಿಯನ್ನು ಮಾರಾಟ ಮಾಡುವಂತೆ ಬಲವಂತ ಮಾಡಲಾಯಿತು. ಅದನ್ನು ಖರೀದಿಸುವ ಬಹುಸಂಖ್ಯಾತರಿಗೆ ಅದೇ ಸಮುದಾಯದ ಸಂಘಸಂಸ್ಥೆಗಳು ಯಥೇಚ್ಛ ದುಡ್ಡುಕಾಸಿನ ನೆರವನ್ನು ನೀಡತೊಡಗಿದವು. ಹಿಂದು ವ್ಯಾಪಾರಿ ಸಮುದಾಯ ತಮ್ಮ ವ್ಯಾಪಾರ ವಹಿವಾಟನ್ನು ಮುಚ್ಚಲು ಯೋಜನಾಬದ್ಧವಾಗಿ ಒತ್ತಡ ಹೇರಲಾಯಿತು.
ಅದಕ್ಕಿಂತ ದುರಂತ ಎಂದರೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಕಾಶ್ಮೀರದ ಪ್ರತ್ಯೇಕತೆಗೆ ಹಿಂಸಾತ್ಮಕ ಹಾದಿ ಹಿಡಿದ ಅಲ್ ಫತಾ ಗೆರಿಲ್ಲಾ ಸಂಘಟನೆಗೆ ನೇರ ಬೆಂಬಲ ನೀಡಿದ್ದು. 1965ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಯುದ್ಧ ಸಾರುವುದಕ್ಕ್ಕೆ ಕಾರಣವಾದದ್ದು ಅದೇ ಅಲ್ ಫತಾ. ಆದರೆ ಯುದ್ಧದಲ್ಲಿ ಪಾಕಿಸ್ತಾನ ಹೀನಾಯ ಸೋಲುಂಡಿತು. ಸಾಲದ್ದಕ್ಕೆ ಮುಂದೆ ಬಾಂಗ್ಲಾದೇಶ ಪಾಕಿಸ್ತಾನದಿಂದ ಬೇರ್ಪಡೆಗೊಂಡಿತು. ಹೀಗೆ ನಾನಾ ಕಾರಣಗಳಿಗಾಗಿ ಹಿನ್ನಡೆ ಅನುಭವಿಸಿದ ಶೇಖ್ ಅಬ್ದುಲ್ಲಾ ಮತ್ತೆ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಕಾಂಗ್ರೆಸ್ ಪಕ್ಷ ಅಬ್ದುಲ್ಲಾಗೆ ಪುನರಪಿ ಕಾಶ್ಮೀರದಲ್ಲಿ ರಾಜಕೀಯ ಅಧಿಕಾರ ಧಾರೆ ಎರೆಯಿತು. ಅಧಿಕಾರಕ್ಕೇರಿದ ಶೇಖ್ ಅಬ್ದುಲ್ಲಾ ಮಾಡಿದ ಮೊದಲ ಕೆಲಸ ಅಂದರೆ 30ಕ್ಕೂ ಹೆಚ್ಚು ಅಲ್ ಫತಾ ಉಗ್ರರನ್ನು ಕಾಶ್ಮೀರದ ಜೈಲುಗಳಿಂದ ಬಿಡುಗಡೆ ಮಾಡಿದ್ದು. ನಂತರ ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದ ಫರೂಕ್ ಅಬ್ದುಲ್ಲಾ ಕೂಡ ತಮ್ಮ ತಂದೆಯ ಕಾರ್ಯಶೈಲಿಯನ್ನೇ ಮುಂದುವರೆಸಿದರು. ಪಾಕಿಸ್ತಾನದಿಂದ ಕಾಶ್ಮೀರದೊಳಕ್ಕೆ ಅಡೆತಡೆಯಿಲ್ಲದೆ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ನಡೆಯಿತು. ಸರ್ಕಾರದ ಬೆಂಬಲ ಪಡೆದ ಜಮಾತ್-ಇ-ಇಸ್ಲಾಮಿ ಹಿಂದ್ ಸಂಘಟನೆ ಉಗ್ರರು ಅದೇ ಶಸ್ತ್ರಾಸ್ತ್ರ ಹಿಡಿದು ಭಾರತದ ವಿರುದ್ಧ ಯುದ್ಧ ಸಾರಿದರು. ಅಷ್ಟೇ ಅಲ್ಲ, ಇಸ್ಲಾಮಿಕ್ ಸ್ಟೂಡೆಂಟ್ ಲೀಗ್, ಅಹಲೇ ಹದೀಸ್, ಉಮಾ ಇಸ್ಲಾಮಿ ಮತ್ತು ಜಮಾತ್- ಇಸ್ಲಾಮಿ ಮುಂತಾದ ಉಗ್ರಗಾಮಿ ಸಂಘಟನೆಗಳೂ ಕಣಿವೆಯಲ್ಲಿ ಬಲಗೊಳ್ಳುತ್ತ ಹೋದವು. ಅದಕ್ಕಿಂತ ಹೆಚ್ಚಾಗಿ ಭಾರತೀಯ ಯೋಧರು ರಕ್ತಚೆಲ್ಲಿ ಸೆರೆಹಿಡಿದಿದ್ದ 70ಕ್ಕೂ ಹೆಚ್ಚು ಕಟ್ಟಾ ಉಗ್ರರನ್ನು ಫರೂಕ್ ಸರ್ಕಾರ 1989ರಲ್ಲಿ ಬಿಡುಗಡೆ ಮಾಡಿತು. ಅಷ್ಟೇ ಸಾಲದೆಂಬಂತೆ, ಕಾಶ್ಮೀರದಲ್ಲಿ ಉಗ್ರರ ಸದ್ದಡಗುವಂತೆ ಮಾಡಿದ್ದ ಧೈರ್ಯಶಾಲಿ ರಾಜ್ಯಪಾಲ ಜಗಮೋಹನರನ್ನು ಫರೂಕ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ರಾಜೀವ್ ಗಾಂಧಿ ಸರ್ಕಾರದ ನೆರವು ಪಡೆದು ಬದಿಗೆ ಸರಿಸಿತು. ರಾಜಕೀಯ ಅಧಿಕಾರದ ಸ್ವಾರ್ಥಕ್ಕಾಗಿ ಕಾಶ್ಮೀರದ ಹಿತವನ್ನು ಬಲಿಕೊಡುವ ಕೆಲಸ ಫರೂಖ್ ಅಬ್ದುಲ್ಲಾರ ಪುತ್ರ ಉಮರ್ ಅಬ್ದುಲ್ಲಾರ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಜಂಟಿ ಸರ್ಕಾರದ ಆಡಳಿತದಲ್ಲೂ ಮುಂದುವರೆಯಿತು.
ಇಷ್ಟೆಲ್ಲಾ ಮಾಡಿದರೂ ಉಮರ್ ಅಬ್ದುಲ್ಲಾರ ಜನಪ್ರಿಯತೆ ಕುಸಿತವನ್ನು ತಡೆಯಲಾಗಲಿಲ್ಲ. ಆದರೆ ಅವರ ಸರ್ಕಾರದ ವಿರುದ್ಧದ ಜನಾಕ್ರೋಶದ ಲಾಭ ಪಡೆಯಲು ಗೊತ್ತುಗುರಿ, ರಾಷ್ಟ್ರೀಯತೆಯ ಪ್ರಜ್ಞೆಯೇ ಇಲ್ಲದ ಮುಫ್ತಿ ಮೊಹಮ್ಮದ್ ಸಯೀದರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಸಾಧ್ಯವಿರುವ ಎಲ್ಲಾ ರೀತಿಯ ಕಸರತ್ತುಗಳನ್ನೂ ಮಾಡುತ್ತಿದೆ. ಹಾಗಾದರೆ ಕಾಶ್ಮೀರದ ನೈಜ ಹಿತ ಕಾಯುವ ಮಾರ್ಗ ಯಾವುದು? ಸದ್ಯಕ್ಕೆ ಎಲ್ಲವೂ ಗೊಂದಲ ಗೋಜಲು…
***ಆಧಾರ: ಹೋದ ವಾರ ಪ್ರಕಟಿಸಿದ ದಾಖಲೆಗಳ ಜತೆಗೆ Jammu-Kashmir- Facts,Problems Ans Solutions by Kashmir Study Centre