ಸೇನೆ ಸ್ವಾವಲಂಬನೆ

-ಸ್ವದೇಶಿ ರಕ್ಷಣಾ ಸಾಧನ ಉತ್ಪಾದನೆಗೆ ಬಲ-

ಸಂದರ್ಶನ: ಹರೀಶ್ ಕೇರ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಮೇಕ್‌ ಇನ್‌ ಇಂಡಿಯಾ’.

2014 ಸೆ.25ರಂದು ಘೋಷಿಸಲಾದ ಈ ಯೋಜನೆಯ ಮುಖ್ಯ ಉದ್ದೇಶ ದೇಶದಲ್ಲಿ ಕೈಗಾರಿಕೆ ಉತ್ಪಾದನೆ ಹೆಚ್ಚಳ ಮಾಡುವುದು. 2025ರ ಹೊತ್ತಿಗೆ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲನ್ನು ಶೇ.25ಕ್ಕೆ ಹೆಚ್ಚಿಸುವುದು. ಅದಕ್ಕೆ ಅನುಗುಣವಾಗಿ ಹೂಡಿಕೆ ಮತ್ತು ಕೈಗಾರಿಕೆ ಅನುಮತಿಗೆ ಸಂಬಂಧಿಸಿದ ಹಲವು ನೀತಿಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.

ಕೊರೊನಾ ಕಾಲಘಟ್ಟದಲ್ಲಿ ಪ್ರಧಾನಿ ಘೋಷಿಸಿರುವ ‘ಆತ್ಮ ನಿರ್ಭರ ಭಾರತ’ (ಸ್ವಾವಲಂಬಿ ಭಾರತ) ಪರಿಕಲ್ಪನೆಯು ‘ಮೇಕ್‌ ಇನ್‌ ಇಂಡಿಯಾ’ದ ಮುಂದುವರಿದ ಭಾಗವೇ ಆಗಿದೆ.

ದೇಶದ ರಕ್ಷಣಾ ನೀತಿಯಲ್ಲಿಯೂ ‘ಸ್ವದೇಶಿ ಉತ್ಪಾದನೆ’ಗೆ ಒತ್ತು ನೀಡಿ ಸ್ವಾವಲಂಬನೆ ಸಾಧಿಸುವುದು ಸಹ ಸರಕಾರದ ಉದ್ದೇಶವಾಗಿದ್ದ ಕಾರಣ, ‘ಮೇಕ್‌ ಇನ್‌ ಇಂಡಿಯಾ’ಗೆ ರಕ್ಷಣಾ ವಲಯ ಆರಂಭದಿಂದಲೂ ಸಕಾರಾತ್ಮಕವಾಗಿಯೇ ಸ್ಪಂದಿಸುತ್ತ ಬಂದಿದೆ.

ರಷ್ಯಾ ಸಹಭಾಗಿತ್ವದ ಸುಖೋಯ್‌ ಯುದ್ಧವಿಮಾನ, ಬ್ರಹ್ಮೋಸ್‌ ಕ್ಷಿಪಣಿ, ಬಹು ಸಾಮರ್ಥ್ಯ‌ದ ಕಮೋವ್‌ ಕಾಪ್ಟರ್‌ ಮತ್ತು ಅವಳಿ ಎಂಜಿನ್‌ ಹೆಲಿಕಾಪ್ಟರ್‌ ತಯಾರಿಕೆ; ಅಮೆರಿಕದ ಲಾಕ್‌ಹೀಡ್‌ ಮಾರ್ಟಿನ್‌ ಮತ್ತು ಬೋಯಿಂಗ್‌ ಸಂಸ್ಥೆಗಳು ಯುದ್ಧ ವಿಮಾನ, ‘ಚಿನೂಕ್‌’ನಂತಹ ಹೆಲಿಕಾಪ್ಟರ್‌ಗಳನ್ನು ಭಾರತದಲ್ಲಿಯೇ ನಿರ್ಮಿಸಲು ಮುಂದಾಗಿರುವುದು ‘ಮೇಕ್‌ ಇನ್‌ ಇಂಡಿಯಾ’ದ ಫಲವೇ ಆಗಿದೆ.

ಇದಲ್ಲದೇ 2018ರಲ್ಲಿ50,000 ಕೋಟಿ ರೂ. ಮೊತ್ತದ ರಕ್ಷಣಾ ಪರಿಕರಗಳನ್ನು 10 ವರ್ಷಗಳಲ್ಲಿ ದೇಸೀಯವಾಗಿ ಉತ್ಪಾದಿಸುವ ಕಾರ್ಯಾದೇಶವನ್ನು ಭಾರತೀಯ ಕಂಪನಿಗಳಿಗೆ ನೀಡಿದೆ.

ಪ್ರಧಾನಿಯವರಿಂದ ‘ಆತ್ಮ ನಿರ್ಭರ ಭಾರತ’ ಘೋಷಣೆ ಹೊರಬೀಳುತ್ತಿದ್ದಂತೆಯೇ ತಕ್ಷಣ ಸ್ಪಂದಿಸಿದ್ದು ಕೂಡ ರಕ್ಷಣಾ ಸಚಿವಾಲಯವೇ. ಕಳೆದ ಮೇ 21ರಂದು ಒಟ್ಟು 26 ರಕ್ಷಣಾ ಉತ್ಪನ್ನಗಳನ್ನು ದೇಸೀಯ ಪೂರೈಕೆದಾರರಿಂದ ಖರೀದಿಸಬೇಕು ಎಂಬ ನಿಯಮ ರೂಪಿಸಲಾಯಿತು.

ಬ್ಯಾಟರಿ, ಬಾಗಿಲು-ಕಿಟಕಿ, ಟ್ರಾಲಿ, ಅಧಿಕ ಉಷ್ಣತೆ ತಾಳಿಕೊಳ್ಳುವ ಗ್ಯಾಸ್ಕೆಟ್‌ಗಳು ಮೊದಲಾದವು ಈ ಪಟ್ಟಿಯಲ್ಲಿವೆ. ಇವೆಲ್ಲ ಸೇನೆಯ ದೈನಂದಿನ ಬಳಕೆಗೆ ಅಗತ್ಯವಿರುವ ವಸ್ತುಗಳು. ಇಂತಹ ವಸ್ತಗಳನ್ನು ಸ್ಥಳೀಯ ಉತ್ಪಾದಕರು, ಪೂರೈಕೆದಾರರಿಂದಲೇ ಖರೀದಿಸುವುದರಿಂದ ಸಹಜವಾಗಿಯೇ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಇದೂ ಸಹ ‘ಆತ್ಮ ನಿರ್ಭರ ಭಾರತ’ದ ಭಾಗವೇ ಆಗಿದೆ.

ಆಗಸ್ಟ್‌ 7ರಂದು ಘೋಷಿಸಿರುವ ‘ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನಾ ನೀತಿ-2020’ರಲ್ಲಿ ಪ್ರಮುಖ ಗುರಿಯೂ ಸ್ವಯಂ ಸ್ವಾವಲಂಬನೆ ಮತ್ತು ರಕ್ಷಣಾ ಉತ್ಪನ್ನಗಳ ರಫ್ತು ಹೆಚ್ಚಳವೇ ಆಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಿಂದ ಈ ಗುರಿ ತಲುಪುವ ವಿಶ್ವಾಸವನ್ನು ರಕ್ಷಣಾ ಸಚಿವಾಲಯ ಹೊಂದಿದೆ. ದೇಶದ ರಕ್ಷಣಾ ವಲಯದ ವಹಿವಾಟು ಅಂದಾಜು 80,000 ಕೋಟಿ ರೂ.ಗಳಾಗಿದ್ದು, ಅದರಲ್ಲಿ ಐದನೇ ಒಂದು ಭಾಗ ಅಂದರೆ 17,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಅದೆಲ್ಲದಕ್ಕಿಂತ ಮುಖ್ಯ ತೀರ್ಮಾನ ಎಂದರೆ ಭಾನುವಾರ ಘೋಷಿಸಿರುವ 101 ಉತ್ಪನ್ನಗಳ ಆಮದು ನಿರ್ಬಂಧ. ಎರಡು ಆಶಯಗಳು ಇದರ ಹಿಂದೆ ಇರುವುದನ್ನು ಗಮನಿಸಬೇಕು.

ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕೆ ವಲಯಕ್ಕೆ ಉತ್ತೇಜನ ನೀಡುವುದು ಮತ್ತು ಕ್ಷಿಪಣಿ, ಆರ್ಟಿಲರಿ ಗನ್‌ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು. ಈ ಆಮದು ನಿರ್ಬಂಧ 2020ರ ಡಿಸೆಂಬರ್‌ನಿಂದಲೇ ಜಾರಿಗೆ ಬರುತ್ತದೆ. ‘‘ಸೇನಾ ಸ್ವಾವಲಂಬನೆಯಲ್ಲಿ ಇದು ಅತ್ಯಂತ ದೊಡ್ಡ ನಡೆ. ಮಾತ್ರವಲ್ಲ, ಸೂಕ್ಷ್ಮ ವ್ಯೂಹಾತ್ಮಕ ನಡೆಯೂ ಹೌದು,’’ ಎಂದು ರಕ್ಷಣಾ ಕ್ಷೇತ್ರದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ಆಮದು ನಿರ್ಬಂಧ ಇಲ್ಲಿಗೇ ನಿಲ್ಲುವುದಿಲ್ಲ. ಪ್ರತಿವರ್ಷವೂ ಪಟ್ಟಿಯನ್ನು ಪರಿಶೀಲಿಸಲಾಗುತ್ತದೆ. ದೇಶದ ರಕ್ಷಣಾ ಉತ್ಪಾದನಾ ಸಾಮರ್ಥ್ಯ‌ ಹೆಚ್ಚಿದಂತೆಲ್ಲ ಹಂತಹಂತವಾಗಿ ಆಮದು ನಿರ್ಬಂಧಗಳ ಪಟ್ಟಿಯೂ ಬೆಳೆಯುತ್ತಾ ಹೋಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ದೇಸಿ ಕಂಪನಿಗಳು ನಿಗದಿತ ಕಾಲಮಿತಿಯೊಳಗೆ ರಕ್ಷಣಾ ಪರಿಕರಗಳನ್ನು ಉತ್ಪಾದಿಸುವಂತೆ ನೋಡಿಕೊಳ್ಳಲಾಗುತ್ತದೆ. ಭಾರತದ ಬಜೆಟ್‌ನಲ್ಲಿ ಬಹುದೊಡ್ಡ ಪಾಲು ರಕ್ಷಣಾ ಕ್ಷೇತ್ರಕ್ಕೆ (ಶೇ.15.5) ಮೀಸಲು. ಅದರಲ್ಲಿ ಹೆಚ್ಚಿನ ಮೊತ್ತ ಶಸ್ತ್ರಾಸ್ತ್ರ ಖರೀದಿಗೆ ವ್ಯಯವಾಗುತ್ತದೆ. ಕಾಲಕ್ರಮೇಣ ರಕ್ಷಣಾ ಆಮದು ತಗ್ಗಿದರೆ ಕೇವಲ ವಿದೇಶಿ ವಿನಿಮಯದ ಉಳಿತಾಯದಿಂದಲೇ ದೇಶಕ್ಕೆ ಬಹುದೊಡ್ಡ ಲಾಭವಾಗುತ್ತದೆ. ಮಾತ್ರವಲ್ಲ, ಸೇನೆಯ ಆಧುನೀಕರಣಕ್ಕೂ ಬಲ ಸಿಗುತ್ತದೆ. ಬದಲಾಗುತ್ತಿರುವ ಭಾರತದ ರಕ್ಷಣಾ ನೀತಿಯು ಪದೇಪದೆ ಕ್ಯಾತೆ ತೆಗೆಯುವ ಚೀನಾ, ಪಾಕಿಸ್ತಾನಗಳಿಗೆ ಎಚ್ಚರಿಕೆಯೂ ಹೌದು.
+++++++++++++++++++

ವಿಶ್ವದಲ್ಲೇ 2ನೇ ದೊಡ್ಡ ಸೇನೆ

ಭಾರತೀಯ ಸೇನೆಯು ಸಂಖ್ಯಾಬಲದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಸೇನೆಯಾಗಿದೆ. ಸುಮಾರು 15 ಲಕ್ಷ ಯೋಧರು ಭಾರತೀಯ ಸೇನಾಪಡೆಯಲ್ಲಿದ್ದಾರೆ. ಅಷ್ಟೇ ಅಲ್ಲ, ರಕ್ಷಣೆಗೆ ಹೆಚ್ಚು ವೆಚ್ಚ ಮಾಡುವ ಐದು ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದೆ. ಆದರೆ ಈ ಬಲಿಷ್ಠ ಸೇನಾಪಡೆಯು ಶಸ್ತ್ರಾಸ್ತ್ರಗಳ ವಿಚಾರದಲ್ಲಿ ನೆಚ್ಚಿಕೊಂಡಿರುವುದು ಮಾತ್ರ ಆಮದನ್ನೇ. ಹಲವು ದಶಕಗಳಿಂದಲೂ ಅತ್ಯಧಿಕ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿದ್ದ ಭಾರತವು 2014-2019ರ ನಡುವಿನ ಅವಧಿಯಲ್ಲಿ ಆಮದು ಹೆಚ್ಚಳದ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ. ಮೊದಲ ಸ್ಥಾನದಲ್ಲಿ ಸೌದಿ ಅರೇಬಿಯಾ ಇದೆ. ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತದ ಪಾಲು ಶೇ.9.2ರಷ್ಟಿದೆ.
+++++++++++++++++++

ಏನಿದು ನೆಗೆಟಿವ್‌ ಆರ್ಮ್ಸ್‌ ಲಿಸ್ಟ್‌?

ಭಾರತದಲ್ಲಿ ಯಾವ ರಕ್ಷಣಾ ಸಾಮಗ್ರಿಯ ಆಮದನ್ನು ನಿಷೇಧಿಸಲಾಗಿದೆ ಎಂಬುದರ ಸಮಗ್ರ ಪಟ್ಟಿ. 2020ರಿಂದ 2024ರವರೆಗೆ ಹಂತಹಂತವಾಗಿ ಜಾರಿಯಾಗಲಿರುವ ಆಮದು ನಿಷೇಧವು ಯಾವ ಉತ್ಪನ್ನಕ್ಕೆ ಯಾವಾಗ ಅನ್ವಯವಾಗಲಿದೆ ಎಂಬ ಸಮಯ ಸೂಚಿಯನ್ನೂ ಇದು ಒಳಗೊಂಡಿರುತ್ತದೆ. ಈಗ ಘೋಷಿಸಲಾಗಿರುವ 101 ಉತ್ಪನ್ನಗಳ ಅಂದಾಜು ವೆಚ್ಚ ಸುಮಾರು 4 ಲಕ್ಷ ಕೋಟಿ ರೂ. ಇದರಲ್ಲಿ ಭೂಸೇನೆ ಮತ್ತು ವಾಯುಪಡೆಗೆ 1.30 ಲಕ್ಷ ಕೋಟಿ ರೂ. ಮತ್ತ ನೌಕಾಪಡೆಗೆ 1.40 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಯಾ ಪಡೆಗಳು ಪ್ರತ್ಯೇಕ ಆಯವ್ಯಯ ಸಿದ್ಧಪಡಿಸಿವೆ.

ಎಫ್‌ಡಿಐ ಮಿತಿ ಹೆಚ್ಚಳ

‘ಆತ್ಮ ನಿರ್ಭರ ಭಾರತ’ ಯೋಜನೆ ಭಾಗವಾಗಿ ನೇರ ವಿದೇಶಿ ಹೂಡಿಕೆ ಬಂಡವಾಳ ಮಿತಿಯನ್ನು ಈಗಿರುವ ಶೇ.49ರಿಂದ ಶೇ.74ಕ್ಕೆ ಹೆಚ್ಚಳ ಮಾಡುವ ಉದ್ದೇಶವನ್ನೂ ರಕ್ಷಣಾ ಸಚಿವಾಲಯ ಹೊಂದಿದೆ. ಇದಕ್ಕೆ ಸಂಬಂಧಿಸಿದ ನಿಯಮಗಳ ಸರಳೀಕರಣಕ್ಕೂ ಉದ್ದೇಶಿಸಲಾಗಿದೆ.
+++++++++++++++

42 ದೇಶಗಳಿಗೆ ರಫ್ತು

ಕಳೆದ ವರ್ಷಗಳಲ್ಲಿ ಭಾರತದ ರಫ್ತು ಪ್ರಮಾಣವೂ ಹೆಚ್ಚಿದ್ದು, 42 ದೇಶಗಳಿಗೆ ರಕ್ಷಣಾ ಸಾಮಗ್ರಿ ರಫ್ತು ಮಾಡುತ್ತಿದೆ. 2016-17, 2018-19ನೇ ಸಾಲಿನಲ್ಲಿ ಭಾರತದ ರಕ್ಷಣಾ ಸಾಮಗ್ರಿ ರಫ್ತು 700% ಏರಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top