ಕ್ಲಾಸಿಕ್‌ ಕೃತಿಗಳೆಂಬ ಜಗತ್ತಿನಲ್ಲಿ ಪಿಸುಗುಡುವ ಪ್ರತಿಧ್ವನಿಗಳು

– ಹರೀಶ್‌ ಕೇರ.

ಇಟೆಲಿಯ ಕಾದಂಬರಿಕಾರ ಇಟಾಲೊ ಕೆಲ್ವಿನೊ ಎಂಬಾತ ಮ್ಯಾಜಿಕ್‌ ರಿಯಲಿಸಂನ ಪ್ರಮುಖ ಬರಹಗಾರರಲ್ಲಿ ಒಬ್ಬ. ಈತ ‘ವೈ ರೀಡ್‌ ದಿ ಕ್ಲಾಸಿಕ್ಸ್‌?’ ಎಂಬ ಪ್ರಬಂಧವೊಂದನ್ನು ಬರೆದಿದ್ದಾನೆ. ಕ್ಲಾಸಿಕ್‌ ಎಂದು ಕರೆಯಬೇಕಾದ ಸಾಹಿತ್ಯ ಕೃತಿಗಳು ಯಾವುವು, ಅವುಗಳನ್ನು ಹೇಗೆ ಓದಬೇಕು, ಅವು ಯಾವಾಗಲೂ ಯಾಕೆ ಪ್ರಸ್ತುತ ಎಂದೆಲ್ಲ ಆತ ಈ ಪ್ರಬಂಧದಲ್ಲಿ ಪಟ್ಟಿ ಮಾಡುತ್ತಾನೆ. ನಮ್ಮ ಭಾರತೀಯ ನೆಲೆಯಲ್ಲಿ ಸರಳವಾಗಿ ಹೇಳಬಹುದಾದರೆ ರಾಮಾಯಣ, ಮಹಾಭಾರತ, ಕಾಳಿದಾಸನ ಕೃತಿಗಳು, ಕನ್ನಡದಲ್ಲಿ ಪಂಪಭಾರತ, ಗದುಗಿನ ಭಾರತ, ಮಲೆಗಳಲ್ಲಿ ಮದುಮಗಳು, ಮರಳಿ ಮಣ್ಣಿಗೆ, ಕುಸುಮಬಾಲೆ, ಗೃಹಭಂಗ- ಇಂಥ ಕೆಲವನ್ನು ಕ್ಲಾಸಿಕ್‌ಗಳೆಂದು ಹೆಸರಿಸಬಹುದು. ಇಂದು ವರ್ಲ್ಡ್‌ ಬುಕ್‌ ಲವರ್ಸ್‌ ಡೇ- ಹಾಗಾಗಿ ಕ್ಲಾಸಿಕ್‌ಗಳನ್ನು ನೆನಪಿಸಿಕೊಳ್ಳುವಲ್ಲಿ ಔಚಿತ್ಯವಿದೆ.
ಕೆಲ್ವಿನೋನ ಪ್ರಕಾರ, 1. ಕ್ಲಾಸಿಕ್‌ಗಳನ್ನು ಯಾರೂ ಮೊದಲ ಬಾರಿಗೆ ಓದುವುದಿಲ್ಲ; ‘ಮತ್ತೆ ಓದು’ತ್ತಾರೆ. ಅಂದರೆ ಈ ಕ್ಲಾಸಿಕ್‌ಗಳು ಜನರ ನೆನಪಿನಲ್ಲಿ ಅದು ಹೇಗೋ ಸೇರಿಕೊಂಡಿರುತ್ತವೆ. ನಮ್ಮಲ್ಲಿ ರಾಮಾಯಣ, ಮಹಾಭಾರತಗಳ ಕತೆ ಎಲ್ಲರಿಗೂ ಓದದೆಯೇ ಗೊತ್ತಿರುತ್ತದಲ್ಲವೇ. ಆದ್ದರಿಂದ ಯಾರಾದರೂ ಕ್ಲಾಸಿಕ್‌ಗಳನ್ನು ಓದಲಾರಂಭಿಸಿದರೆ, ಅದು ಮೊದಲ ಓದಾಗಿರದೆ, ಮರಳಿ ಓದಿದ್ದಷ್ಟೇ ಆಗಿರುತ್ತದೆ. 2. ಹಾಗೇ ಯವ್ವನದಲ್ಲಿ ಓದಿದ್ದಕ್ಕೂ ಪ್ರೌಢರಾಗಿ ಓದುವುದಕ್ಕೂ ಅನುಭವದಲ್ಲಿ ವ್ಯತ್ಯಾಸವಿರುತ್ತದೆ. 3. ನಮ್ಮ ಹಿಂದಿನವರು ಅವುಗಳನ್ನು ಕ್ಲಾಸಿಕ್‌ ಎಂದು ಹೆಸರಿಸಿದ್ದರೂ, ಹೊಸ ಪೀಳಿಗೆಯವರು ಓದಿದಾಗಲೂ ಅದು ತನ್ನ ಕ್ಲಾಸಿಕ್‌ ಗುಣವನ್ನು ಬಿಟ್ಟುಕೊಡುವುದಿಲ್ಲ. 4. ಹೀಗಾಗಿ ನಮ್ಮ ಪ್ರಬುದ್ಧ ಬದುಕಿನಲ್ಲೂ ನಾವು ಯವ್ವನದಲ್ಲಿ ಓದಿದ ಶ್ರೇಷ್ಠ ಕೃತಿಗಳನ್ನು ಮರಳಿ ಓದುವುದಕ್ಕೆ ಸಮಯವಿರುತ್ತದೆ. 5. ಇನ್ನೊಂದು ವೈಚಿತ್ರ್ಯ ಎಂದರೆ, ಪ್ರತಿಯೊಂದು ಮರು ಓದು ಕೂಡ ಮೊದಲ ಓದಿನಷ್ಟೇ ರೋಮಾಂಚಕಾರಿ ಹಾಗೂ ಹೊಸ ಅರ್ಥಗಳನ್ನು ಬಿಟ್ಟುಕೊಳ್ಳುವಂಥದು. 6. ಹಾಗಾಗಿ ಪ್ರತಿ ಓದೂ ಮರು ಓದೇ. 7. ಕ್ಲಾಸಿಕ್‌ ಎಂದರೆ ತಾನು ಹೇಳಬೇಕಿರುವುದನ್ನು ಹೇಳಿ ಮುಗಿಸದೇ ಇರುವಂಥದ್ದು. 8. ನಮ್ಮ ಹಿಂದಿನವರು ಓದಿದ ಗುರುತುಗಳನ್ನೂ ಕ್ಲಾಸಿಕ್‌ಗಳು ನಮ್ಮೆಡೆಗೆ ದಾಟಿಸುತ್ತವೆ. 9. ಕ್ಲಾಸಿಕ್‌ಗಳು ನಮಗೆ ಗೊತ್ತಿಲ್ಲದ ಹೊಸ ವಿಚಾರವನ್ನು ಕಲಿಸಬೇಕೆಂದೇನೂ ಇಲ್ಲ. 10. ಕ್ಲಾಸಿಕ್‌ಗಳು ನಾವು ತಿಳಿದಿದ್ದೇವೆಂದು ಭಾವಿಸಿದ್ದನ್ನೂ ಮೀರಿ ಅನಿರೀಕ್ಷಿವಾದುದನ್ನೇನೋ ಪ್ರತಿಬಾರಿಯೂ ಕೊಡಬಲ್ಲವು. 11. ಕ್ಲಾಸಿಕ್‌ ಎಂದರೆ ಒಂದು ವಿಶ್ವ ಎಂದು ಭಾವಿಸಬಹುದು. 12. ಕ್ಲಾಸಿಕ್‌ನ ಲೇಖಕನಲ್ಲಿ ನಿಮಗೆ ಭಿನ್ನಾಭಿಪ್ರಾಯ ಇದ್ದರೂ, ಆತ ನಿಮ್ಮನ್ನೇ ಕಂಡುಕೊಳ್ಳಲು ನಿಮಗೆ ಸಹಾಯ ಮಾಡಬಲ್ಲ. 13. ಕ್ಲಾಸಿಕ್‌ಗಳಲ್ಲಿ ಯಾವುದು ಮೊದಲೆಂದು ನಿರ್ಣಯಿಸಲು ಸಾಧ್ಯವಿಲ್ಲ; ಎಲ್ಲವೂ ಒಂದೇ ಕುಟುಂಬಕ್ಕೆ ಸೇರಿದವು. 14. ಕ್ಲಾಸಿಕ್‌ಗಳು ಈ ಕ್ಷಣದ ಕಳವಳಗಳನ್ನು ಐತಿಹಾಸಿಕ, ವಿಶ್ವಾತ್ಮಕ ದೃಷ್ಟಿಕೋನದಲ್ಲಿ ನಿಮಗೆ ಕಾಣಿಸುತ್ತವೆ.
ಇವು ಕ್ಲಾಸಿಕ್‌ಗಳನ್ನು ಓದಲು ಕೆಲ್ವಿನೋ ನೀಡಿದ ಕಾರಣಗಳು. ಸ್ವತಃ ಕೆಲ್ವಿನೋ ಹಲವಾರು ಕಾದಂಬರಿಗಳನ್ನು ಬರೆದಿದ್ದಾನೆ. ‘ಬ್ಯಾರನ್‌ ಆನ್‌ ದಿ ಟ್ರೀಸ್‌’ ಅದರಲ್ಲೊಂದು. ಕೆ.ಪಿ.ಸುರೇಶ್‌ ಅದನ್ನು ‘ಕೊಸಿಮೊ’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಚಿಕ್ಕಂದಿನಲ್ಲೇ ಮರ ಏರಿ, ಮುಂದೆ ಜೀವನವಿಡೀ ಮರದ ಮೇಲೇ ಕಳೆಯುವ ಒಬ್ಬ ವ್ಯಕ್ತಿಯ ಬಗ್ಗೆ ಇರುವ ಕತೆಯದು. ‘ಮರ’ ಎಂದಿರುವಲ್ಲಿ ‘ಭ್ರಮೆ’ ‘ಸಿದ್ಧಾಂತ’ ‘ಚಿಂತೆ’ ಎಂದು ಪದ ಬದಲಾಯಿಸಿಕೊಂಡು ಓದಿದರೆ ನಾನಾರ್ಥಗಳು ಹೊಳೆಯುತ್ತವೆ. ಹಾಗೇ ಈತ ಬರೆದ ‘ಇನ್‌ವಿಸಿಬಲ್‌ ಸಿಟೀಸ್‌’ ಕೂಡ ವಿಶಿಷ್ಟ ಕೃತಿ. ಅಲ್ಲಿ ಆಕಾಶದಲ್ಲಿ ತೇಲುವ ನಗರ, ಯಾವಾಗಲೂ ಓಡುತ್ತಲೇ ಇರುವ ನಗರ, ಕಂಬಗಳ ಮೇಲೆ ನಿಂತ ನಗರ, ಬೇರೆಲ್ಲೂ ಇಲ್ಲದ ವಿಶಿಷ್ಟ ಲೋಹದಿಂದ ನಿರ್ಮಿಸಲ್ಪಟ್ಟ ನಗರ- ಇಂಥ ವಿಚಿತ್ರ ನಗರಗಳ ಚಿತ್ರಣವನ್ನು ಆತ ಕೊಡುತ್ತ ಹೋಗುತ್ತಾನೆ. ಇದನ್ನು ಓದಿದಾಗ ಲಿಲ್ಲಿಪುಟ್ಟರ ದ್ವೀಪ, ದೈತ್ಯರ ದೀಪಗಳಿಗೆಲ್ಲ ಹೋಗಿಬರುವ ಗಲಿವರನ ಪ್ರಯಾಣ(ಜೊನಾಥನ್‌ ಸ್ವಿಫ್ಟ್‌)ಗಳ ನೆನಪೂ ಆಗಬಹುದು. ಕ್ಲಾಸಿಕ್‌ಗಳನ್ನು ಓದುವುದು ಒಂದು ಅಂತರಂಗದ ಪ್ರಯಾಣ- ಹಾಗೇ ಕ್ಲಾಸಿಕ್‌ಗಳಲ್ಲಿ ಒಂದಲ್ಲ ಒಂದು ಪ್ರಯಾಣದ ಕತೆ ನಮಗೆ ಎದುರಾಗುವುದೂ ಸಹಜ. ರಾಮಾಯಣವೆಂದರೇ ರಾಮನ ಅಯನ ಅರ್ಥಾತ್‌ ಪ್ರಯಾಣ. ಮಹಾಭಾರತವೂ ಪಾಂಡವರ ಪ್ರಯಾಣ. ಮಲೆಗಳಲ್ಲಿ ಮದುಮಗಳೂ ನಾಯಿಗುತ್ತಿ, ತಿಮ್ಮಿ, ಮುಕುಂದಯ್ಯ, ಚೆನ್ನಿಯರ ಪ್ರಯಾಣದ ಕತೆಯೇ. ಹೀಗೆ ಮನಸ್ಸು ಒಂದು ಪುಸ್ತಕದಿಂದ ಇನ್ನೊಂದು ಪುಸ್ತಕಕ್ಕೆ ಜಿಗಿಯುತ್ತದೆ.
ಕೆಲ್ವಿನೋ ಪ್ರಸ್ತಾಪಿಸಿದ ಒಂದೊಂದು ಅಂಶದ ಬಗೆಗೂ ವಿಸ್ತಾರವಾಗಿ ಬರೆಯಬಹುದು. ಇಲ್ಲಿ ಒಂದೇ ಒಂದು ವಿಚಾರವನ್ನು ಸದ್ಯಕ್ಕೆ ನೋಡಬಹುದು- ನಾವು ಒಮ್ಮೆ ಓದಿದ ಕ್ಲಾಸಿಕ್‌ ಕೃತಿಗಳನ್ನು ಮರಳಿ ವಿಸಿಟ್‌ ಮಾಡಿದಾಗ ಅದು ಹೊಸ ಧ್ವನಿಗಳನ್ನು ಹೊಮ್ಮಿಸುತ್ತದೆ ಎನ್ನುವುದು. ಹಾಗೆ ಮರಳಿ ಓದಲು ನಮಗೆ ಸಾಧ್ಯವಾಗುತ್ತದೆಯೇ ಎಂಬುದೇ ಪ್ರಶ್ನೆ. ಕೆಲವು ಕೃತಿಗಳನ್ನು ಓದಲು ನಮಗೆ ಒಂದಿಡೀ ಜನ್ಮ ಸಾಕಾಗುವುದಿಲ್ಲ. ಉದಾಹರಣೆಗೆ ಮೂಲ ಮಹಾಭಾರತವನ್ನು ಮಾತ್ರವೇ ಓದುತ್ತೇನೆ, ಬೇರಿನ್ನೇನೂ ಓದುವುದಿಲ್ಲ ಎಂದು ಈ ಕಾಲದಲ್ಲಿ ಯಾರೂ ನಿಶ್ಚಯ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅದರಲ್ಲಿ ಲಕ್ಷಾಂತರ ಶ್ಲೋಕಗಳೂ, ಅದಕ್ಕೆ ಅಷ್ಟೇ ವ್ಯಾಖ್ಯಾನಗಳೂ ಅಡಿಟಿಪ್ಪಣಿಗಳೂ ಇವೆ. ಹಾಗೆ ಬೇರೇನೂ ಓದದೆ ಒಂದೇ ಕೃತಿಯನ್ನು ಪಟ್ಟು ಹಿಡಿದು ಓದಲು, ವಾಟ್ಸಾಪ್‌ ಫಾರ್‌ವರ್ಡ್‌ಗಳ ಯುಗದಲ್ಲಿ, ಫೇಸ್‌ಬುಕ್‌ ಸ್ಟೇಟಸ್‌ಗಳ ಯುಗದಲ್ಲಿ ಸಾಧ್ಯವೆ? ಜೊತೆಗೆ ಹಾರ್ಡ್‌ಡಿಸ್ಕ್‌ನಲ್ಲಿ ಸಂಗ್ರಹಿಸಿಟ್ಟ ಸಾವಿರಾರು ಜಿಬಿ ಮ್ಯೂಸಿಕ್‌ ಕೇಳಬೇಕು; ನೆಟ್‌ಫ್ಲಿಕ್ಸ್‌ನಲ್ಲೂ ಅಮೆಜಾನ್‌ ಪ್ರೈಮ್‌ನಲ್ಲೂ ಆಗಾಗ ರಿಲೀಸ್‌ ಆಗುವ ‘ಮಸ್ಟ್‌ ವಾಚ್‌’ ಸಿನಿಮಾಗಳನ್ನೂ ನೋಡಬೇಕು. ಮನುಷ್ಯನಿಗೆ ದಿನಕ್ಕೆ ಇಪ್ಪತ್ನಾಲ್ಕೇ ಗಂಟೆ ದೇವರು ಯಾಕೆ ಕೊಟ್ಟನೋ ಅನಿಸುತ್ತದೆ. ಹೀಗಿರುವಾಗ, ಒಮ್ಮೆ ಓದಿದ ಕೃತಿಗಳನ್ನು ಮರಳಿ ಓದಲು ಸಮಯ ಮಾಡಿಕೊಳ್ಳುವುದು ಎಷ್ಟು ಕಷ್ಟ! ಇದು ಬಹುಶಃ ನಮ್ಮ ಕಾಲದವರಿಗೆ ಮಾತ್ರವೇ ತಲೆದೋರಿರುವ ಕಷ್ಟ. ನಮ್ಮ ಹಿಂದಿನವರು ಇಂಥ ಮರು ಓದುಗಳನ್ನು ನಡೆಸಬಲ್ಲ ಭಾಗ್ಯವಂತರಾಗಿದ್ದರು ಎನ್ನುವುದು ಹೊಟ್ಟೆಕಿಚ್ಚೇ ಮೂಡಿಸುತ್ತದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top