ಚೀನಾದಲ್ಲಿ ಕಾಣಿಸಿಕೊಂಡಿರುವ ಇನ್ನೊಂದು ವೈರಸ್ ಈಗಾಗಲೇ 7 ಜನರ ಬಲಿ ಪಡೆದಿದೆ. ಯಾವುದೀ ಹೊಸ ವೈರಸ್? ಚೀನಾ ಏಕೆ ಕೊರೊನಾ ಸೇರಿದಂತೆ ಅನೇಕ ಮಾರಕ ವೈರಾಣುಗಳ ಆಡುಂಬೊಲವಾಗಿದೆ?
ಉಣ್ಣಿಯಿಂದ ಹರಡುವ ಜ್ವರ
ಕೊರೊನಾವನ್ನು ಹುಟ್ಟಿಸಿ ನಿರ್ಲಕ್ಷ್ಯದಿಂದ ಜಗತ್ತಿನಾದ್ಯಂತ ಹರಿಬಿಟ್ಟು ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿರುವ ಚೀನಾದಲ್ಲಿ ಇನ್ನೊಂದು ಮಾರಕ ವೈರಸ್ ಹರಡಲು ಆರಂಭವಾಗಿದೆ. ಇದರ ಮರಣ ಪ್ರಮಾಣ ಶೇ.30. ಅಂದರೆ ನೂರು ಮಂದಿಗೆ ಸೋಂಕು ತಾಕಿದರೆ ಮೂವತ್ತು ಮಂದಿ ಸಾಯುತ್ತಾರೆ. ವೈರಸ್ಸನ್ನು ಸಿವಿಯರ್ ಫಿವರ್ ವಿದ್ ತ್ರೋಂಬೋಸೈಟೋಪೇನಿಯಾ ಸಿಂಡ್ರೋಮ್ (ಎಸ್ಎಫ್ಟಿಎಸ್) ಎಂದು ಕರೆಯಲಾಗಿದೆ. ಇದು ಉಣ್ಣೆ(ಚಿಗಟ)ಯಿಂದ ಮನುಷ್ಯರಿಗೆ ಹರಡುವ ರೋಗ. ಚೀನಾದಲ್ಲಿ ಈಗಾಗಲೇ ಕನಿಷ್ಠ ಮಂದಿಯನ್ನು ಬಾಧಿಸಿದ್ದು, 7 ಮಂದಿ ಸತ್ತಿದ್ದಾರೆ. ಪೂರ್ವ ಚೀನಾದ ಜಿಯಾಂಗ್ಸು, ಅನ್ಹುಯಿ ಪ್ರಾಂತ್ಯಗಳಲ್ಲಿ ಹೆಚ್ಚು ಕಂಡುಬಂದಿದೆ.
ಹತ್ತು ವರ್ಷ ಹಿಂದಿನ ವೈರಾಣು
ಎಸ್ಎಫ್ಟಿಎಸ್ ಉಣ್ಣೆಯಿಂದ ಮನುಷ್ಯರಿಗೆ ಹರಡುವುದಾದರೂ, ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆಯನ್ನು ಚೀನಾದ ತಜ್ಞರು ತಳ್ಳಿಹಾಕಿಲ್ಲ. ಈ ವೈರಾಣು, ಬುನ್ಯಾವೈರಸ್ ಕುಟುಂಬಕ್ಕೆ ಸೇರಿದೆ. ನೊವೆಲ್ ಕೊರೊನಾ ವೈರಸ್ನಂತೆ ಇದೇನೂ ಮೊದಲ ಬಾರಿಗೆ ಕಂಡುಬಂದಿರುವ ವೈರಾಣುವಲ್ಲ. ಹತ್ತು ವರ್ಷಗಳ ಹಿಂದೆಯೇ ಚೀನಾದ ವಿಜ್ಞಾನಿಗಳು ಇದನ್ನು ಗುರುತಿಸಿದ್ದರು. 2009ರಲ್ಲಿ ಹುಬೆಯಿ ಪ್ರಾಂತ್ರದಲ್ಲಿ ಕೆಲವು ಪ್ರಕರಣಗಳು ವರದಿಯಾಗಿದ್ದವು. ಒಂದೇ ಥರದ ರೋಗಲಕ್ಷಣಗಳನ್ನು ಹೊಂದಿದ್ದ ವ್ಯಕ್ತಿಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಿ ತಜ್ಞರು ಈ ವೈರಾಣುವನ್ನು ಸಂಗ್ರಹಿಸಿದ್ದರು. ಇದು ಹರಡುವ ರೀತಿ ಹಾಗೂ ಮರಣ ಪ್ರಮಾಣದ ಕಾರಣದಿಂದ ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಟಾಪ್ 10 ಆದ್ಯತೆಯ ರೋಗಗಳಲ್ಲಿ ಸೇರಿಸಿದೆ.
ಯಾರಿಗೆ ಅಪಾಯ?
ಏಷ್ಯದ ಮೂಲದ ಹಿಮಾಫೈಸೇಲಿಸ್ ಲಾಂಗಿಕಾರ್ನಿಸ್ ಎಂಬ ಉಣ್ಣೆ ಈ ವೈರಾಣುವಿನ ಪ್ರಾಥಮಿಕ ವಾಹಕ ಆಗಿದೆ. ಮಾರ್ಚ್ನಿಂದ ನವಂಬರ್ನ ಅವಧಿಯಲ್ಲಿ ಇದು ಹರಡುತ್ತಿದ್ದು, ಏಫ್ರಿಲ್- ಜುಲೈ ಅವಧಿಯಲ್ಲಿ ಹೆಚ್ಚಾಗುತ್ತದೆ. ಪ್ರಾಣಿಗಳ ಸಂಪರ್ಕಕ್ಕೆ ನಿರಂತರವಾಗಿ ಬರುವ ಸಾಕುಪ್ರಾಣಿ ಮಾಲಿಕರು, ಪಶುಪಾಲಕರು, ಬೇಟೆಗಾರರು ಈ ಉಣ್ಣಿಗಳ ಕಡಿತಕ್ಕೆ ಒಳಗಾಗಬಹುದು. ಆಡು, ಆಕಳು, ಜಿಂಕೆ, ಕುರಿಗಳಿಂದ ಇವು ಮನುಷ್ಯನ ಮೈಗೆ ದಾಟಿವೆ. ಮನುಷ್ಯನಲ್ಲಿ ಇದರಿಂದ ರೋಗ ಉಲ್ಬಣಗೊಳ್ಳುತ್ತಾದರೂ ಪ್ರಾಣಿಗಳಿಗೆ ಮಾರಕವಾದ ನಿದರ್ಶನ ಕಂಡುಬಂದಿಲ್ಲ.
ಇವು ಎಸ್ಎಫ್ಟಿಎಸ್ ರೋಗಲಕ್ಷಣಗಳು
2011ರಲ್ಲಿ ಚೀನದ ತಜ್ಞರು ನಡೆಸಿರುವ ಸಂಶೋಧನೆಗಳಲ್ಲಿ ಕಂಡುಬಂದಿರುವಂತೆ, ಉಣ್ಣೆಯಿಂದ ಕಡಿಸಿಕೊಂಡ 7ರಿಂದ 13 ದಿನಗಳವರೆಗೆ ಇನ್ಕ್ಯುಬೇಶನ್ ಅವಧಿ ಇರುತ್ತದೆ. ರೋಗಿಯಲ್ಲಿ ಜ್ವರ, ಬಳಲಿಕೆ, ಚಳಿ ನಡುಕ, ತಲೆನೋವು, ವಾಕರಿಕೆ, ವಾಂತಿ, ಉರಿಯೂತ, ಹಸಿವೆ ಇಲ್ಲದಿರುವಿಕೆ, ಸ್ನಾಯು ನೋವು, ಹೊಟ್ಟೆನೋವು, ಭೇದಿ, ವಸಡಿನ ರಕ್ತಸ್ರಾವ, ಕಣ್ಣಿನ ಉರಿ- ಇವೇ ಮುಂತಾಗಿ ರೋಗಲಕ್ಷಣಗಳು ಕಾಣಿಸಬಹುದು. ತೀವ್ರ ಜ್ವರವೇ ಆರಂಭಿಕ ಲಕ್ಷಣ. ಇದರ ಜೊತೆಗೆ ಪ್ಲೇಟ್ಲೆಟ್ ಕೌಂಟ್ ಹಾಗೂ ಬಿಳಿ ರಕ್ತ ಕಣಗಳ ಸಂಖ್ಯೆಯೂ ಇಳಿಯಬಹುದು. ರೋಗ ಗಂಭೀರವಾದರೆ ಬಹು ಅಂಗವೈಫಲ್ಯ, ಮೆದುಳಿನ ರಕ್ತಸ್ರಾವ, ಕೇಂದ್ರ ನರವ್ಯೂಹ ವೈಫಲ್ಯ ಉಂಟಾಗಬಹುದು.
ಚೀನಾದಿಂದಾಚೆಗೆ ಹರಡಿದೆಯೇ?
ಕಳೆದ ಹತ್ತು ವರ್ಷಗಳಲ್ಲಿ ಚೀನಾದಿಂದ ಆಚೆಗೆ ಜಪಾನ್, ದಕ್ಷಿಣ ಕೊರಿಯ, ಸಿಂಗಾಪುರಗಳಿಗೆ ಈ ರೋಗ ಹರಡಿದೆ. ಚೀನಾದಲ್ಲಿ 2010ರಲ್ಲಿ 71 ಹಾಗೂ 2016ರಲ್ಲಿ 2600 ಪ್ರಕರಣಗಳು ವರದಿಯಾಗಿವೆ. ಈ ಮೂರು ದೇಶಗಳಲ್ಲಿ ರೋಗ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡ ವೈದ್ಯಕೀಯ ಸಮುದಾಯ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಘೋಷಿಸಿತು. ಎಚ್ಚರಿಕೆ ಕ್ರಮಗಳ ಬಳಿಕ ಇದು ತಹಬಂದಿಗೆ ಬಂದಿದೆ.
ಎಸ್ಎಫ್ಟಿಎಸ್ಗೆ ಮದ್ದೇನು?
ಈ ವೈರಾಣುವನ್ನು ಪರಿಣಾಮಕಾರಿಯಾಗಿ ತಡೆಯುವ ಲಸಿಕೆ ಇನ್ನೂ ಅಭಿವೃದ್ಧಿಯಾಗಿಲ್ಲ. ಯಾಕೆಂದರೆ ಇದರಲ್ಲಿ ಕೋಟಿಗಟ್ಟಲೆ ಹಣ ತೊಡಗಿಸುವವರು ಇಲ್ಲ. ಆದರೆ, ರಿಬಾವೈರಿನ್ ಎಂಬ ಹೆಸರಿನ ಆ್ಯಂಟಿವೈರಲ್ ಔಷಧ ಇದರ ಚಿಕಿತ್ಸೆಗೆ ಪರಿಣಾಮಕಾರಿ ಎಂಬುದು ರುಜುವಾತಾಗಿದೆ. ಕಾಡು, ಹುಲ್ಲುಗಾವಲಲ್ಲಿ ಓಡಾಡುವಾಗ ಕಾಲು ಪೂರ್ತಿ ಮುಚ್ಚಿಕೊಳ್ಳುವಂತ ಬಟ್ಟೆ ಧರಿಸುವುದು, ಸಾಕುಪ್ರಾಣಿಗಳನ್ನು ಉಣ್ಣೆ ಇಲ್ಲದಂತೆ ಕ್ಲೀನಾಗಿಡುವುದು- ಇದನ್ನು ತಡೆಯುವ ಎಚ್ಚರಿಕೆ ಕ್ರಮಗಳು.
ಇನ್ನೊಂದು ಹಂದಿ ಜ್ವರ?
ಚೀನಾದಲ್ಲಿ ಇನ್ನೊಂದು ಹಂದಿ ಜ್ವರದ ವೈರಾಣು ಹಾವಳಿ ಎಬ್ಬಿಸಲು ಆರಂಭಿಸಿದೆ. ಹಂದಿಗಳಲ್ಲಿ ಹೆಚ್ಚಾಗಿ ಇರುವ, ಮನುಷ್ಯರಿಗೆ ದಾಟುವ ಹಾಗೂ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲ ಈ ವೈರಾಣು, 2009ರಲ್ಲಿ ಜಗತ್ತಿನ ಹಲವು ದೇಶಗಳಿಗೆ ಹರಡಿದ್ದ ಹಂದಿ ಜ್ವರದ ಇನ್ನೊಂದು ಆವೃತ್ತಿಯಂತಿದೆ. ಎಚ್ಚರ ತಪ್ಪಿದರೆ ಇದು ಇನ್ನೊಂದು ಪ್ಯಾಂಡೆಮಿಕ್ ಆಗುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 2009ರ ವೈರಸ್, ಇನ್ಫ್ಲುಯೆಂಜಾ ವೈರಸ್ಗೆ ಸಮೀಪದಲ್ಲಿದ್ದುದರಿಂದ ಹಾಗೂ ಬಹುತೇಕ ಜನ ಅದಕ್ಕೆ ಪ್ರತಿರೋಧ ಶಕ್ತಿಯನ್ನು ಮೊದಲೇ ಹೊಂದಿದ್ದುದರಿಂದ ಹೆಚ್ಚಿನ ಅಪಾಯ ಆಗಿರಲಿಲ್ಲ. ಹೊಸ ವೈರಸ್ಗೆ ತಜ್ಞರು ಜಿ4 ಇಎ ಎಚ್1ಎನ್1 ಎಂದು ಹೆಸರಿಟ್ಟಿದ್ದಾರೆ. ತೀವ್ರ ವೇಗದಿಂದ ಮನುಷ್ಯರಲ್ಲಿ ಹರಡುವಂಥ ಮ್ಯುಟೇಶನ್ ಈ ವೈರಸ್ನಲ್ಲಿ ಸಂಭವಿಸಿದರೆ ಮಾತ್ರ ನಾವು ಇದರ ಬಗ್ಗೆ ಆತಂಕಿತರಾಗಬೇಕಿದೆ.
ಚೀನಾದಲ್ಲೇ ಯಾಕಿಷ್ಟು ವೈರಸ್?
ಚೀನಾದಲ್ಲೇ ಇಷ್ಟೊಂದು ಪ್ರಮಾಣದ ಮಾರಕ ವೈರಸ್ಗಳು ಕಂಡುಬರುತ್ತಿರುವುದು ಜಗತ್ತಿನ ವಿಜ್ಞಾನಿಗಳನ್ನೂ ಚಕಿತಗೊಳಿಸಿದೆ. ಕೊರೊನ ವೈರಸ್ನ ಹಿಂದಿನ ರೂಪವಾದ ಸಾರ್ಸ್ ಕೂಡ ಚೀನಾದ ವುಹಾಣ್ ನಗರದಲ್ಲೇ ಜನ್ಮ ತಾಳಿತ್ತು. ಇದರದೇ ಇನ್ನೊಂದು ಅವತಾರವಾದ ಮೆರ್ಸ್ ಕೂಡ ಇಲ್ಲಿಂದಲೇ ಮಧ್ಯಪ್ರಾಚ್ಯ ದೇಶಗಳಿಗೆ ಬಟವಾಡೆಯಾಗಿತ್ತು. ಇನ್ನೊಂದು ಮಾರಕ ಕಾಯಿಲೆಯನ್ನುಂಟುಮಾಡುವ ಆಂತ್ರಾಕ್ಸ್ ಎಂಬ ಬ್ಯಾಕ್ಟೀರಿಯಾದ ಸುಧಾರಿತ ಆವೃತ್ತಿ ಇತ್ತೀಚೆಗೆ ಪ್ರತಿವರ್ಷ ಎರಡು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದರ ಹಿಂದೆ ಕೂಡ ಚೀನಾ ಇದೆ ಎಂದು ಶಂಕಿಸಲಾಗಿದೆ. ವುಹಾನ್ನ ವೈರಾಣು ಲ್ಯಾಬೊರೇಟರಿ ಕೊರೊಣಾ ವೈರಾಣುವಿನ ಮೂಲ ಆಗಿರಬಹುದು ಎಂದು ಹಲವು ತಜ್ಞರು ಶಂಕಿಸಿದ್ದರೂ ಅದನ್ನು ಚೀನಾ ಅಲ್ಲಗಳೆದಿದೆ. ಚೀನಾ ಜಾಗತಿಕ ಅರ್ಥವ್ಯವಸ್ಥೆಯನ್ನು ಅಲ್ಲೋಲಕಲ್ಲೋಲಗೊಳಿಸಲೆಂದೇ ಅಘೋಷಿತ ಜೈವಿಕ ಯುದ್ಧದಲ್ಲಿ ನಿರತವಾಗಿದೆಯಾ? ಹಾಗೊಂದು ಅನುಮಾನ ಬೇಹುಗಾರಿಕೆ ಸಂಸ್ಥೆಗಳ ನಡುವೆ ಓಡಾಡುತ್ತಿದೆ.
ಚೀನಾ- ಪಾಕ್ ಒಪ್ಪಂದ?
ಈ ನಡುವೆ, ಚೀನಾದ ವುಹಾನ್ ವೈರಾಣು ಲ್ಯಾಬ್ ಹಾಗೂ ಪಾಕಿಸ್ತಾನದ ನಡುವೆ ಜೈವಿಕ ಶಸ್ತ್ರಾಸ್ತ್ರಗಳ ವಿನಿಮಯದ ಕುರಿತು ಒಪ್ಪಂದ ನಡೆದಿದೆ ಎಂದು ಬೇಹುಗಾರಿಕೆ ವರದಿಯೊಂದು ಹೇಳಿದೆ. ಮಾರಕ ಆಂತ್ರಾಕ್ಸ್ನ ಬ್ಯಾಕ್ಟೀರಿಯಾಗಳನ್ನು ಬೆಳೆಸುವ, ಸಂಗ್ರಹಿಸುವ ಹಾಗೂ ಪ್ರಯೋಗಿಸುವ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಚೀನಾ ನೀಡಲಿದೆ ಎಂಬ ಶಂಕೆ ವ್ಯಕ್ತವಾಗಿದೆ. ವುಹಾನ್ ಸೇರಿದಂತೆ ಚೀನಾದಲ್ಲಿ ಹಲವು ಕಡೆ ವೈರಾಣು ಹಾಗೂ ಬ್ಯಾಕ್ಟೀರಿಯಾಗಳನ್ನು ಬೆಳೆಸುವ, ಅಧ್ಯಯನ ಮಾಡುವ ಅತ್ಯಾಧುನಿಕ ಲ್ಯಾಬ್ಗಳಿವೆ.
ಜನಾಂಗ ನಾಶದ ಸಾಧನ?
ಚೀನಾದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಉಯಿಘುರ್ ಮುಸ್ಲಿಮರನ್ನು ನಾಶ ಮಾಡಲು ಚೀನಾದ ಆಡಳಿತ ಕೊರೊನಾ ವೈರಸ್ಸನ್ನು ಸೃಷ್ಟಿಸಿತ್ತು. ಇದನ್ನು ಉಯಿಘುರ್ ಸಮುದಾಯದ ನಡುವೆ ಹರಡುವ ಮುನ್ನವೇ ವೈರಾಣು ಕೈತಪ್ಪಿ ವುಹಾನ್ನಲ್ಲೇ ಹರಡಿ ಅನಾಹುತ ಸೃಷ್ಟಿಸಿತು. ದಿನಕ್ಕೊಂದು ಬಗೆಯಲ್ಲಿ ಮ್ಯುಟೇಟ್ ಆಗುವ ಸಾಮರ್ಥ್ಯ ಹೊಂದಿರುವ ಈ ವೈರಸ್ ಸಹಜ ಸೃಷ್ಟಿಯಂತೂ ಆಗಿರಲಾರದು ಎಂಬ ಥಿಯರಿಯೂ ಓಡಾಡುತ್ತಿದೆ.