ರಾತ್ರಿ 8ರಿಂದ ಬೆಳಗ್ಗೆ 4ರವರೆಗೆ ನಿದ್ದೆಗೆ ಅವಕಾಶ * ರಾತ್ರಿ ಟಿವಿ ಇರಬಾರದು * ಪುತ್ತಿಗೆ ಶ್ರೀ ಸಲಹೆ.
ವಿಕ ಸುದ್ದಿಲೋಕ ಉಡುಪಿ.
ಮನುಷ್ಯನ ಪ್ರತಿರೋಧ ಶಕ್ತಿ ವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ರಾತ್ರಿ 8ರಿಂದ ಬೆಳಗ್ಗೆ 4ರ ತನಕ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಲು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಸಲಹೆ ನೀಡಿದ್ದಾರೆ.
ಸೋಂಕಿನಿಂದ ಗುಣಮುಖರಾದ ಅವರು ಪ್ರಕಟಣೆಯಲ್ಲಿ ಸಂದೇಶ ನೀಡಿದ್ದು ಈ ಬಗ್ಗೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.
ಆರೋಗ್ಯ ವ್ಯವಸ್ಥೆಯನ್ನು ಪುನರ್ ನವೀಕರಿಸುವ ಯೋಗ, ಪ್ರಾಣಾಯಾಮ, ಆಯುರ್ವೇದ ಹಾಗೂ ಸಕಾಲತೆಗೆ ವಿಶೇಷ ಮಹತ್ವ ಕೊಡಬೇಕಿದೆ.
ಪ್ರತಿರೋಧ ಶಕ್ತಿಯ ಪುನರುತ್ಥಾನಕ್ಕೆ ಪ್ರಮುಖ ಕಾರಣಗಳಾದ ಸಕಾಲ ಆಹಾರ ಹಾಗೂ ಸಕಾಲ ನಿದ್ರೆ ಸೂರ್ಯಾಸ್ತಕ್ಕಿಂತ ಮೊದಲು ಆಹಾರ ಸೇವನೆಯ ಮುಕ್ತಾಯ ಹಾಗೂ ರಾತ್ರಿ 8ರಿಂದ ಬೆಳಗ್ಗೆ 4ರ ತನಕ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಬೇಕು. ಈ ನಿದ್ರಾ ಸಮಯದಲ್ಲಿ ಟಿವಿ ಪ್ರಸಾರ, ಮನೋರಂಜನಾ ಕಾರ್ಯಕ್ರಮಗಳನ್ನೆಲ್ಲ ನಿರ್ಬಂಧಿಸಿ ರಾತ್ರಿ ವಿಶ್ರಾಂತಿ ಸಮಯಕ್ಕೆ ತೊಂದರೆಯಾಗುವ ರಾತ್ರಿ ಪ್ರಯಾಣ ನಿಷೇಧಿಸಬೇಕು ಎಂದರು.
ನನಗೆ ಕೊರೊನಾ ಬಾಸಿರುವುದು ಕೆಮ್ಮು ಮೂಲಕ. ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಕೆಮ್ಮು ಆರಂಭವಾಗುತ್ತಿದ್ದು, ಈ ಬಗ್ಗೆ ತಜ್ಞರಲ್ಲಿ ವಿಚಾರಿಸಿದಾಗ ನಿದ್ರೆ ವಿಳಂಬವಾಗುತ್ತಿರುವುದರಿಂದ ಹಾಗಾಗುತ್ತದೆ ಎಂದಿದ್ದರು. ಅದರಂತೆ ಪ್ರಯತ್ನ ಪಟ್ಟು ರಾತ್ರಿ 9 ಗಂಟೆಯೊಳಗೆ ಮಲಗಿದಾಗ ಕೆಮ್ಮು ಪ್ರಮಾಣ ಇಳಿಮುಖವಾಗಿರುವುದನ್ನು ಅರ್ಥೈಸಿಕೊಂಡೆ.
ಈ ಬಗ್ಗೆ ನಾವು ಅಧ್ಯಯನ ನಡೆಸಿ ಮನುಷ್ಯನ ಪ್ರತಿರೋಧ ಶಕ್ತಿಗೂ, ನಿದ್ರಾ ಸಮಯಕ್ಕೂ ನೇರ ಸಂಬಂಧವಿರುವುದನ್ನು ಮನಗಂಡಿದ್ದೇವೆ ಎಂದಿದ್ದಾರೆ.
ಆಸ್ಪತ್ರೆಗೆ ಸೇರಿ, ಬೇಗ ನಿದ್ರೆ, ಬೇಗ ಉತ್ಥಾನದ ಬಗ್ಗೆ ಅಭ್ಯಾಸ ಮಾಡಿದೆ. ಈ ವೇಳೆ ದೇಹದಲ್ಲಿ ಪ್ರತಿರೋಧ ಶಕ್ತಿ ಜಾಗೃತವಾಗಿರುವುದನ್ನು ಅನುಭವಿಸಿದ್ದೇನೆ.
ಬಾಲ್ಯದಿಂದಲೂ ಆಹಾರ ಸಮಯ ಹಾಗೂ ನಿದ್ರಾ ಸಮಯಗಳ ಬಗ್ಗೆ ಮಹತ್ವ ಕೊಡದೇ ಯದ್ವಾತದ್ವಾ ದಿನಚರಿ ಅನುಸರಿಸುತ್ತಿದ್ದೆವು. ಹೀಗಾಗಿ ಪ್ರತಿರೋಧ ಶಕ್ತಿ ಕುಂಠಿತವಾಗಿ ಆರೋಗ್ಯ ಸಮಸ್ಯೆಗೆ ತುತ್ತಾಗಿರುವುದನ್ನು ಇದೀಗ ಮನಗಂಡಿದ್ದೇವೆ ಎಂದಿದ್ದಾರೆ.
ಪ್ರತಿರೋಧ ಶಕ್ತಿ ಬಲಗೊಳಿಸುವ ನಿಯಮಗಳನ್ನು ಪರಿಪಾಲನೆ ಮಾಡದಿದ್ದರೆ ಕೊರೊನಾ ನಿರ್ಮೂಲನೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.