ಪ್ರಾಣಿ ಪ್ರೀತಿಯಲ್ಲಿ ನಿರಾಳವಾಗುವ ಸಿಎಂ

ಶಶಿಧರ ಹೆಗಡೆ ಬೆಂಗಳೂರು.

ಮುಖ್ಯಮಂತ್ರಿ ಹುದ್ದೆಯಲ್ಲಿ ಒಂದು ವರ್ಷ ಕಳೆದಿರುವ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಸಾಕಷ್ಟು ಒತ್ತಡಗಳ ನಡುವೆಯೂ ನಿರಾಳವಾಗಿರುವುದರ ಹಿಂದೆ ಗೋ ಪ್ರೀತಿಯೂ ಮಿಳಿತವಾಗಿದೆ.

ಬಿಎಸ್‌ವೈ ಅವರು ಮುಂಜಾನೆ ಅಂಬಾ ಎನ್ನುವ ಕರೆ ಕೇಳುತ್ತಲೇ ತಮ್ಮ ನಿವಾಸದ ಬಲ ಪಾರ್ಶ್ವದಲ್ಲಿರುವ ಪುಟ್ಟ ಗೋಶಾಲೆಯತ್ತ ಧಾವಿಸುತ್ತಾರೆ. ಅಲ್ಲಿರುವ ಗೋವುಗಳು ಇವರನ್ನು ಕಂಡ ಕೂಡಲೇ ಪ್ರೀತಿಯ ನೋಟ ಬೀರುತ್ತವೆ. ಕರುಗಳು ಚಂಗನೆ ಜಿಗಿಯುತ್ತವೆ. ಮುಖ್ಯಮಂತ್ರಿಯವರು ಕೆಲ ಸಮಯ ಅಲ್ಲಿಯೇ ಕಳೆದು ಗೋವುಗಳ ಮೈದಡವುತ್ತಾರೆ. ಕರುಗಳನ್ನು ಮುದ್ದಾಡುತ್ತಾರೆ. ಜತೆಗೆ ಈ ಕಾಮಧೇನುಗಳಿಗೆ ನಮಸ್ಕರಿಸುತ್ತಾರೆ. ಬೆಳಗ್ಗೆ ಮಾತ್ರವಲ್ಲ ಸಂಜೆ ಹೊತ್ತಿಗೂ ಸಿಎಂ ಗೋಶಾಲೆಗೆ ಹೋಗಿ ಪ್ರೀತಿ ತೋರುತ್ತಾರೆ. ಈ ಮೂಲಕ ತಾವೂ ನಿರಾಳರಾಗುತ್ತಾರೆ. ಅಂದ ಹಾಗೆ ಅವರ ವಾಕಿಂಗ್‌ಗೆ ಬೆಕ್ಕುಗಳೂ ಸಾಥ್‌ ಕೊಡುತ್ತವೆ. ಮರಗಳಿಂದ ಹಕ್ಕಿಗಳ ಇಂಚರ!

ಸಿಎಂ ನಿವಾಸ ಕಾವೇರಿ ಆವರಣದಲ್ಲಿ ವಿಶಾಲ ಉದ್ಯಾನ ಇರುವುದರಿಂದ ಶುಕಪಿಕಗಳ ಇಂಚರಕ್ಕೇನೂ ಕೊರತೆಯಿಲ್ಲ. ಸಾಕಷ್ಟು ಹಣ್ಣಿನ ಮರಗಳೂ ಇವೆ. ಈ ಪೈಕಿ ಸೀಬೆ ಸೇರಿದಂತೆ ಇನ್ನಿತರ ಕೆಲ ಮರಗಳಲ್ಲಿನ ಹಣ್ಣುಗಳನ್ನು ಯಾರೂ ಕೀಳದಂತೆ ಸಿಎಂ ಆದೇಶಿಸಿದ್ದಾರೆ. ಈ ಹಣ್ಣುಗಳನ್ನು ಪಕ್ಷಿಗಳು, ಅಳಿಲುಗಳಿಗೆ ಮೀಸಲಿಡಲು ಸೂಚಿಸಿದ್ದಾರೆ.

ಮುದ್ದಾದ ಲವ-ಕುಶರು: ಸಿಎಂ ಬಿಎಸ್‌ವೈ ಅವರು ಕಾವೇರಿ ನಿವಾಸಕ್ಕೆ ಬಂದ ಬಳಿಕ ಗಿರ್‌ ತಳಿಯ ಎರಡು ಹಸುಗಳನ್ನು ತಂದುಕೊಂಡಿದ್ದಾರೆ. ಈ ಹಸುಗಳೊಂದಿಗೆ ಪುಟ್ಟ ಕರುವೂ ಇತ್ತು. ಇತ್ತೀಚೆಗೆ ಮತ್ತೊಂದು ಹಸುವೂ ಕರು ಹಾಕಿದೆ. ಹಾಗಾಗಿ ಸಿಎಂ ಮನೆಯ ಅಂಗಳದಲ್ಲಿ ಎರಡು ಮುದ್ದಾದ ಕರುಗಳು ಆಡಿಕೊಂಡಿರಲು ಸಾಧ್ಯವಾಗಿದೆ.

ಮುಖ್ಯಮಂತ್ರಿಯವರ ನಿವಾಸದಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚು ಇರುತ್ತದೆ. ಪ್ರತಿಯೊಂದಕ್ಕೂ ರೀತಿ ರಿವಾಜಿನ ಕಟ್ಟಳೆಯಿರುತ್ತದೆ. ಶಿಷ್ಟಾಚಾರ ಪಾಲಿಸಬೇಕಾಗುತ್ತದೆ. ಆದರೆ, ಲವ-ಕುಶರಂತೆ ಭಾಸವಾಗುವ ಈ ಎರಡು ಕರುಗಳಿಗೆ ಇಲ್ಲಿ ಯಾವ ಕಟ್ಟು ಕಟ್ಟಳೆಯೂ ಇಲ್ಲ. ಅವುಗಳಿಗೆ ಪೂರ್ಣ ಸ್ವಾತಂತ್ರ್ಯ ಕೊಡಲಾಗಿದ್ದು, ಸಿಎಂ ಮನೆಯ ಆವರಣ ಸೇರಿದಂತೆ ಉದ್ಯಾನವನದಲ್ಲೂ ತಿರುಗಾಡಲು ಅಡ್ಡಿಯಿಲ್ಲ. ಕರುಗಳಿಗೆ ಹಾಲು ಕುಡಿಸಿದಿರಾ? ಹಸುಗಳಿಗೆ ಮೇವು ನೀಡಿದಿರಾ? ಎಂದು ಸಿಎಂ ಅವರೇ ಸಿಬ್ಬಂದಿ ಬಳಿ ವಿಚಾರಿಸಿಕೊಳ್ಳುತ್ತ ಇರುತ್ತಾರೆ. ಈ ಮೂಲಕ ಅವರು ಗೋಪಾಲಕರೂ ಆಗಿರುವುದು ವೈಶಿಷ್ಟ್ಯ. ಇದು ಸದಾ ಮೀಟಿಂಗ್‌ ಇನ್ನಿತರ ಆಡಳಿತದ ಚಟುವಟಿಕೆಯಲ್ಲಿ ವ್ಯಸ್ತರಾಗಿರುವ ಸಿಎಂ ಅವರ ಮತ್ತೊಂದು ಮುಖ.

ಸಿಎಂ ಅವರು ಬೆಳಗ್ಗೆ ಗೋಶಾಲೆಗೆ ಭೇಟಿ ನೀಡದ ಬಳಿಕ ವಾಕಿಂಗ್‌ ಆರಂಭಿಸುತ್ತಿದ್ದಂತೆ ಅವರ ಅಕ್ಕಪಕ್ಕ ‘ಮಾರ್ಜಾಲ ನಡಿಗೆ’ಯೂ ಆರಂಭವಾಗುತ್ತದೆ. ಅಂದರೆ ಹತ್ತಾರು ಬೆಕ್ಕುಗಳು ಮುಖ್ಯಮಂತ್ರಿಯವರಿಗೆ ಜತೆಯಾಗುತ್ತವೆ. ಈ ಬೆಕ್ಕುಗಳಿಗೆ ಸಿಎಂ ದಿನಾಲೂ ಹಾಲು ಕೊಡುತ್ತಾರೆ. ಹಾಗಾಗಿ ಬೆಕ್ಕುಗಳೂ ಸಿಎಂ ವಾಕಿಂಗ್‌ ಮಾಡುವ ಸಮಯಕ್ಕೆ ಸರಿಯಾಗಿ ಹಾಜರಾಗುತ್ತವೆ ಎಂದು ಅಲ್ಲಿನ ಸಿಬ್ಬಂದಿಗಳು ಹೇಳುತ್ತಾರೆ.

‘‘ಕೊಟ್ಟಿಗೆಯನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಹೊತ್ತು ಹೊತ್ತಿಗೆ ಸರಿಯಾಗಿ ಮೇವು, ನೀರು ನೀಡುವಂತೆ ಸಾಹೇಬರು ಹೇಳುತ್ತಿರುತ್ತಾರೆ,’’ ಎಂದು ಹಸುಗಳನ್ನು ನೋಡಿಕೊಳ್ಳುವ ಸಿಬ್ಬಂದಿ ತಿಳಿಸಿದರು.

++++++++++++++++
ಬೆಳಗ್ಗೆ ಎದ್ದು ಗೋಶಾಲೆಗೆ ತೆರಳಿ ಕರುಗಳ ಮೈಸವರಿ ಗೋವುಗಳಿಗೆ ನಮಸ್ಕರಿಸಿದ ಬಳಿಕವೇ ವಾಕಿಂಗ್‌ಗೆ ಹೊರಡುತ್ತೇನೆ. ಬೆಳಗ್ಗೆ ಮೊದಲು ಮಾಡುವ ಕೆಲಸವೇ ಗೋವುಗಳನ್ನು ಮಾತನಾಡಿಸುವುದಾಗಿದೆ. ಅಲ್ಲಿಂದಲೇ ನನ್ನ ದಿನಚರಿ ಆರಂಭವಾಗುತ್ತದೆ. ಇದು ನನಗೆ ಬಹಳ ಖುಷಿ ಕೊಡುವ ಕೆಲಸವಾಗಿದೆ. ಸಂಜೆಯೂ ವಾಕಿಂಗ್‌ ಹೊರಟಾಗ ಮತ್ತೆ ಭೇಟಿ ನೀಡುತ್ತೇನೆ.
– ಬಿ.ಎಸ್‌.ಯಡಿಯೂರಪ್ಪ, ಸಿಎಂ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top