ನೀವು ಇತ್ತೀಚಿನ ದಿನಗಳಲ್ಲಿ ‘ಡೇಟಾ ಸೈನ್ಸ್’, ‘ಬಿಗ್ ಡೇಟಾ’, ‘ಡೇಟಾ ಅನಾಲಿಟಿಕ್ಸ್’, ‘ಡೇಟಾ ಮೈನಿಂಗ್’ ಮುಂತಾದ ಶಬ್ದಗಳನ್ನು ಕೇಳಿರುತ್ತೀರಿ. ಇವೆಲ್ಲವೂ ಬೃಹತ್ ಪ್ರಮಾಣದ ಅಂಕಿ-ಅಂಶಗಳ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಯಾವ ವಸ್ತುವಿಗೆ, ಯಾವ ಸಮಯದಲ್ಲಿ ಎಷ್ಟು ಬೇಡಿಕೆಯಿರುತ್ತದೆಂಬುದನ್ನು ಗಣಿತ ಮಾದರಿಗಳ ಮೂಲಕ ಕಂಡುಕೊಳ್ಳಲು ಬಳಸುತ್ತಿರುವ ಕಂಪ್ಯೂಟರ್ ಕ್ಷೇತ್ರದ ಸಲಕರಣೆಗಳು. ಸದ್ಯದ ಬಳಕೆ, ವರ್ಷದಿಂದ ವರ್ಷಕ್ಕೆ ಬಳಕೆಯಲ್ಲಿನ ಏರಿಕೆಗಳ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಹೇಗಿರುತ್ತದೆಂಬ ಅಂದಾಜು ನೀಡುವ ಲೆಕ್ಕಾಚಾರವೇ ‘ಪ್ರಿಡಿಕ್ಟಿವ್ ಅನಲಿಟಿಕ್ಸ್’. ಉದಾಹರಣೆಗೆ ಸಾರ್ವಜನಿಕ ಸಾರಿಗೆ ಬಳಸುವವರಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವುದರಿಂದ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರ ನಿಷೇಧದಿಂದ ಗುಟ್ಕಾಗೆ ಬೇಡಿಕೆ ಕಡಿಮೆಯಾಗುವ ಸಂಭವನೀಯತೆ- ಇಂಥ ಲೆಕ್ಕಗಳನ್ನು ಪಟಪಟನೆ ಕೊಡುವುದರ ಮೂಲಕ ಉತ್ಪಾದಕರಿಗೆ, ನಿಯಂತ್ರಕರಿಗೆ, ಜಾೕಹಿರಾತುದಾರರಿಗೆ ಮುನ್ಸೂಚನೆಗಳನ್ನು ನೀಡುವ ಕೆಲಸ ಕಾರ್ಯಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ.
ಈ ಬಗೆಯ ಸಂಭವನೀಯ ಲೆಕ್ಕಾಚಾರಗಳು ಕೆಲವೊಂದು ನಂಬಿಕೆಗಳ ಮೇಲೆ ಆಧರಿಸಿರುತ್ತವೆ. ಹಾಗಾಗಿ, ಸಂಭವನೀಯತೆಗಳು ಎಷ್ಟಿರಬಹುದು, ಅವುಗಳ ಅವುಗಳ ಅಡ್ಡ ಪರಿಣಾಮಗಳೇನು, ಮತ್ತೊಂದು ಮಾರುಕಟ್ಟೆಗೆ ಇದರಿಂದಾಗಬಹುದಾದ ಅನುಕೂಲ ಅಥವಾ ಅನನುಕೂಲಗಳೇನು – ಇವೆಲ್ಲವನ್ನು ಗಣನೆ ಮಾಡಲು ನವ ನವೀನ ಸಿದ್ಧಾಂತಗಳು, ಆಕರ ಸಾಮಗ್ರಿಗಳು, ಕೃತಕ ಬುದ್ಧಿಮತ್ತೆಯಾಧರಿತ ಲೆಕ್ಕಾಚಾರ ಸಲಕರಣೆಗಳು ಮಾರುಕಟ್ಟೆಯಲ್ಲಿವೆ. ಮೆಸಾಶ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ(ಎಂಐಟಿ), ಹಾರ್ವರ್ಡ್ ವಿವಿ, ಕೇಂಬ್ರಿಜ್ ವಿವಿ, ಆಕ್ಸ್ಫರ್ಡ್ ವಿವಿ ಮತ್ತಿತರ ಜಗದ್ವಿಖ್ಯಾತ ಸಂಸ್ಥೆಗಳ ತಜ್ಞರು ಹೊಸ ಸಂಭವನೀಯ ಲೆಕ್ಕಾಚಾರಗಳ ಅಂಕಿ-ಅಂಶಗಳನ್ನು ಆಗಾಗ ಬಿಡುಗಡೆ ಮಾಡುತ್ತಿರುತ್ತಾರೆ. ಈ ಬಗೆಯ ಕೆಲಸಗಳನ್ನು ನಡೆಸುವವರ ಮಾರುಕಟ್ಟೆ ಗಾತ್ರ ಎಷ್ಟಿದೆಂಬುದನ್ನು ಇವರ ಸಲಕರಣೆಗಳನ್ನೇ ಬಳಸಿಕೊಂಡು ಹೇಳುವುದಾದರೆ ಕ್ರಿಶ 2025ರ ಹೊತ್ತಿನ ಒಟ್ಟಾರೆ ವಾರ್ಷಿಕ ವಹಿವಾಟು 24 ಶತಕೋಟಿ ಡಾಲರ್ಗಳು (ಸುಮಾರು ಒಂದು ಲಕ್ಷ ಎಂಬತ್ತು ಸಾವಿರ ಕೋಟಿ ರೂ). ಇಂಥ ಸಂಭವನೀಯ ಲೆಕ್ಕಾಚಾರಗಳೊಂದಿಗೆ ಕೇವಲ ಬೆಂಗಳೂರಿನ ಸ್ಯಾನಿಟೈಜರ್ಗಳ ಮಾರುಕಟ್ಟೆಯನ್ನು ಅಂದಾಜು ಮಾಡಬಹುದು ಅಥವಾ ಬೆಂಗಳೂರಿನಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 2,23,000 ಆಗಿದೆಯೆಂದು ಅಥವಾ ಸೂಕ್ತ ಲಸಿಕೆಯೊಂದು ಲಭ್ಯವಾಗದಿದ್ದರೆ 2021ರ ಫೆಬ್ರವರಿಯ ಹೊತ್ತಿಗೆ ಭಾರತದಲ್ಲಿ ಪ್ರತಿದಿನ 2,87,000 ಸೋಂಕಿತರು ಪತ್ತೆಯಾಗುತ್ತಾರೆಂದು ರೋಚಕವಾದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಬಹುದು! ಇವೆಲ್ಲವೂ ಅಂದಾಜು ಲೆಕ್ಕಾಚಾರಗಳಷ್ಟೇ. ಜತೆಗೆ ಕೋವಿಡ್-19 ಸೋಂಕಿನ ಕುರಿತು ವಿವಿಧ ಕಾಲಘಟ್ಟಗಳಲ್ಲಿ ಬಿಡುಗಡೆಯಾದ ಈ ಬಗೆಯ ಸಂಭವನೀಯ ಭವಿಷ್ಯವಾಣಿಗಳು ನಿಜವಾಗಿಲ್ಲ.
ಈ ಹಿನ್ನೆಲೆಯಲ್ಲಿ ಎಂಐಟಿಯ ಅಂದಾಜೆಂಬ ಹೆಗ್ಗಳಿಕೆಯೊಂದಿಗೆ ಚರ್ಚೆಯಾಗುತ್ತಿರುವ, ಜನರಲ್ಲಿ ಭೀತಿ ಹುಟ್ಟಿಸುತ್ತಿರುವ ಕೋವಿಡ್-19 ಸೋಂಕಿತರ ಸಂಖ್ಯೆಯನ್ನು ವಿಶ್ಲೇಷಿಸೋಣ.
ಮೊದಲ ಊಹಾತ್ಮಕ ನಂಬಿಕೆ: ಫೆಬ್ರವರಿ 2021ರ ತನಕ ಯಾವುದೇ ಲಸಿಕೆ ಮಾರುಕಟ್ಟೆಗೆ ಬರದಿರುವುದು. ರಷ್ಯಾ, ಚೀನಾ, ಅಮೆರಿಕ, ಇಸ್ರೇಲ್, ಬ್ರಿಟನ್, ಭಾರತದಲ್ಲಿ ಲಸಿಕೆಗಳು ಈಗಾಗಲೇ ವಿವಿಧ ಹಂತಗಳಲ್ಲಿ ಮನುಷ್ಯರ ಮೇಲೆ ಪ್ರಯೋಗವಾಗುತ್ತಿವೆ. ಆಗಸ್ಟ್- ಸೆಪ್ಟಂಬರ್ನಲ್ಲೇ ಒಂದು ಲಸಿಕೆ ಬಳಕೆಗೆ ಬರಬಹುದು. ತೀರಾ ತಡವೆಂದರೂ ಅಕ್ಟೋಬರ್ ಕೊನೆಯ ಹೊತ್ತಿಗೆ ಲಸಿಕೆ ಮಾರುಕಟ್ಟೆ ಪ್ರವೇಶಿಸಬಹುದು.
ಎರಡನೆಯ ಊಹಾತ್ಮಕ ನಂಬಿಕೆ: ಸದ್ಯದ ಪರೀಕ್ಷೆಗಳ ಸಂಖ್ಯೆ ಹಾಗೂ ಅದು ಪ್ರತಿದಿನವೂ ಸಾವಿರಕ್ಕೊಂದರಂತೆ ಹೆಚ್ಚಳವಾಗುವುದು. ಪರೀಕ್ಷೆಗಳ ಸಂಖ್ಯೆ ಖಂಡಿತವಾಗಿಯೂ ಈ ಪ್ರಮಾಣಕ್ಕಿಂತಲೂ ಹೆಚ್ಚಾಗಿ ನಡೆಯುತ್ತಿದೆ.
ಮೂರನೆಯ ಊಹಾತ್ಮಕ ನಂಬಿಕೆ: ಪ್ರತಿ ಸೋಂಕಿತ 8 ಜನರಿಗೆ ಸೋಂಕು ದಾಟಿಸಬಹುದು. ಇದು ಕೂಡಾ ಉತ್ಪ್ರೇಕ್ಷಿತ. ಈಗಾಗಲೇ ಜನರು ಹೆಚ್ಚು ಜಾಗರೂಕರಾಗಿದ್ದಾರೆ. ಈ ಸಾಧ್ಯತೆಯನ್ನು ಗರಿಷ್ಠ 3ರಿಂದ 5ರ ತನಕ ನಿರ್ಬಂಧಿಸಬಹುದು.
ಆದ್ದರಿಂದ ಈ ಲಕ್ಷಗಟ್ಟಲೆಯಲ್ಲಿ ಸೋಂಕಿತರ ಸಂಖ್ಯೆ ನಿತ್ಯವೂ ಹೆಚ್ಚಾಗುವುದರ ಕುರಿತು ಅನಗತ್ಯ ಭೀತಿ ಬೇಡ. ಇಂಥ ಚರ್ಚೆಗಳಿಗೆ ಕಿವಿಗೋಡಬೇಡಿ.