– ದಕ್ಷಿಣ ಕನ್ನಡ 2, ಕೊಡಗು ಜಿಲ್ಲೆಗೆ 3ನೇ ಸ್ಥಾನ
– 88 ಕಾಲೇಜುಗಳು ಝೀರೋ, 92 ಕಾಲೇಜು ಶತಕ ಸಾಧನೆ
– ಕೊರೊನಾ ಭಯದ ಮಧ್ಯೆಯೇ ಇಂಗ್ಲಿಷ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು
ವಿಕ ಸುದ್ದಿಲೋಕ ಬೆಂಗಳೂರು
ಪಿಯು ದ್ವಿತೀಯ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲಾವಾರು ಫಲಿತಾಂಶದಲ್ಲಿ ಈ ಬಾರಿಯೂ ಉಡುಪಿ ಶೇ.90.71 ರಿಸಲ್ಟ್ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ವಿಜಯಪುರ(ಶೇ.54.22) ಕೊನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ(ಶೇ.90.71) ಇದ್ದರೆ ಮೂರನೇ ಸ್ಥಾನದಲ್ಲಿ ಕೊಡಗು ಜಿಲ್ಲೆ(ಶೇ.81.53) ಇದೆ.
ವಿಶೇಷ ಎಂದರೆ, ವಿಜ್ಞಾನ ವಿಭಾಗದಲ್ಲಿ ಮೊದಲ ಐದು ರಾಂಕ್‌ಗಳನ್ನು 16 ವಿದ್ಯಾರ್ಥಿನಿಯರು ಹಂಚಿಕೊಂಡಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 3,39,833 ವಿದ್ಯಾರ್ಥಿನಿಯರ ಪೈಕಿ 2,33,572 (ಶೇ.68.73) ಮಂದಿ ತೇರ್ಗಡೆ ಹೊಂದಿದ್ದಾರೆ. ಈ ಬಾರಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೋಲಿಸಿದರೆ ನಗರ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳು ಶೇ.62.60ರಷ್ಟು ಮತ್ತು ಶೇ.58.99ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ವಿಜ್ಞಾನ ಉತ್ತಮ ಸಾಧನೆ
ಈ ಬಾರಿ ಶೇ.9.44ರಷ್ಟು ಹೆಚ್ಚುವರಿ ಫಲಿತಾಂಶ ಪಡೆಯುವ ಮೂಲಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಳೆದ ಬಾರಿ ಶೇ.66.58ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದರು. ಅದೇ ರೀತಿ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ವಾಣಿಜ್ಯ ವಿಭಾಗದ ಫಲಿತಾಂಶ ಶೇ.0.87ರಷ್ಟು ಫಲಿತಾಂಶ ಕಡಿಮೆ ಬಂದಿದೆ. ಮತ್ತೊಂದೆಡೆ ಈ ವರ್ಷ ಕಲಾ ವಿಭಾಗದ ಫಲಿತಾಂಶವು ಶೇ.9.26ರಷ್ಟು ಕುಸಿತಗೊಂಡಿದೆ. ಶೇ.4.1.27ರಷ್ಟು ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ಕಳೆದ ಬಾರಿ ಈ ಪ್ರಮಾಣ ಶೇ.50.53ರಷ್ಟಿತ್ತು.
ಶೂನ್ಯ ಸಾಧನೆ
5 ಸರಕಾರಿ, 5 ಅನುದಾನಿತ ಹಾಗೂ 78 ಖಾಸಗಿ ಪದವಿ ಪೂರ್ವ ಕಾಲೇಜುಗಳೂ ಸೇರಿದಂತೆ ಒಟ್ಟು 88 ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿವೆ.
ಶತಕ ಸಂಭ್ರಮ
3 ಸರಕಾರಿ ಪದವಿ ಪೂರ್ವ ಕಾಲೇಜುಗಳು, 1 ಅನುದಾನಿತ ಹಾಗೂ 88 ಖಾಸಗಿ ಕಾಲೇಜುಗಳೂ ಸೇರಿದಂತೆ ಒಟ್ಟು 92 ಕಾಲೇಜುಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿವೆ.
2,57,980 – ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಸಂಖ್ಯೆ
ಕರ್ನಾಟಕವೇ ಮೊದಲು ಎಂದ ಶಿಕ್ಷಣ ಸಚಿವ
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್, ‘‘ಕೊರೊನಾ ಕಾಲಘಟ್ಟದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಪ್ರಥಮವಾಗಿ ಫಲಿತಾಂಶವನ್ನು ಪ್ರಕಟಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಲು ಹೆಮ್ಮೆಯಾಗುತ್ತದೆ’’ ಎಂದರು.
‘‘ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಬಾಕಿ ಉಳಿದಿದ್ದ ಇಂಗ್ಲಿಷ್ ಪರೀಕ್ಷೆ ನಡೆದ ಕೇವಲ 26 ದಿನಗಳಲ್ಲಿ ತ್ವರಿತವಾಗಿ ಫಲಿತಾಂಶ ಪ್ರಕಟಣೆಯಾಗುತ್ತಿದ್ದು, ಇಂತಹ ಸಾಮಾಜಿಕ ಪರಿಸ್ಥಿತಿಯಲ್ಲೂ ಎದೆಗುಂದದೇ ಪರೀಕ್ಷೆಗೆ ಹಾಜರಾದ ಮಕ್ಕಳು ಮತ್ತು ಇದಕ್ಕೆಲ್ಲಾ ಕಾರಣರಾದ ಪಿಯು ಉಪನ್ಯಾಸಕರು ಮತ್ತು ಪಿಯು ಮಂಡಳಿ ಅಧಿಕಾರಿಗಳ ಕಾರ್ಯಕ್ಷಮತೆ ಮತ್ತು ದಕ್ಷತೆ ಕಾರಣವಾಗಿದೆ’’ ಎಂದು ಶ್ಲಾಘಿಸಿದರು.
ಮಕ್ಕಳು ಮತ್ತು ಪೋಷಕರಲ್ಲಿ ಮನವಿ
‘‘ನಪಾಸಾದ ವಿದ್ಯಾರ್ಥಿಗಳು ಅಧೀರರಾಗಬಾರದು. ಪರೀಕ್ಷೆಯು ಜೀವನದ ಅಂತಿಮ ಗುರಿಯಲ್ಲ. ಪರೀಕ್ಷೆಯಲ್ಲಿ ನಪಾಸಾಗಿ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದವರ ಉದಾಹಣೆಗಳು ನಮ್ಮ ಮುಂದಿವೆ. ಆದ್ದರಿಂದ ಫೇಲಾದ ಮಕ್ಕಳು ವೇದನೆ ಇಲ್ಲವೇ ಖೇದ ಅನುಭವಿಸಬಾರದು. ಹಾಗೆಯೇ ಪೋಷಕರು ಕೂಡ ಮನಸ್ಸಿಗೆ ಬೇಸರ ಮಾಡಿಕೊಂಡು ಮಕ್ಕಳನ್ನು ಅವಹೇಳನ ಮಾಡದೇ ಮುಂದಿನ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಮಾಧಾನದಿಂದಲೇ ಸಲಹೆ ನೀಡಬೇಕು’’ ಎಂದು ಸಚಿವ ಸುರೇಶ್ ಕುಮಾರ್ ಮನವಿ ಮಾಡಿದರು.
ಜುಲೈ ಕೊನೆ ವಾರ ಪೂರಕ ಪರೀಕ್ಷೆ
ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜು.31ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಜುಲೈ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಆನ್‌ಲೈನ್ ಪೋರ್ಟಲ್‌ನಲ್ಲಿ ಪರೀಕ್ಷಾ ಶುಲ್ಕ ಪಾವತಿ ಮಾಡಬಹುದು.
ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ-1 ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ಒಂದು ವಿಷಯಕ್ಕೆ 140 ರೂ., 2 ವಿಷಯಕ್ಕೆ 270 ರೂ., 3ಕ್ಕಿಂತ ಹೆಚ್ಚಿನ ವಿಷಯಗಳಿಗೆ ಒಟ್ಟು 400 ರೂ. ಶುಲ್ಕ ನಿಗದಿ ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು 50 ರೂ. ಅಂಕಪಟ್ಟಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು ಎಂದು ಮಂಡಳಿ ತಿಳಿಸಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದೂ: 080-23083900 ಸಹಾಯವಾಣಿ ಆರಂಭಿಸಲಾಗಿದೆ.
ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಗೆ ಅರ್ಜಿ ಸಲ್ಲಿಸಲು ಜು.30 ಕಡೆ ದಿನ: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸಲು ಜು.16ರಿಂದ 30ರವರೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ. ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ ಒಟ್ಟು 530 ರೂ. ಶುಲ್ಕ ನಿಗದಿ ಮಾಡಿದ್ದು, ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಆ.3ರಿಂದ 7ರವರೆಗೆ ಅವಕಾಶ ನೀಡಿದೆ. ಮರು ಮೌಲ್ಯಮಾಪನಕ್ಕೆ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು (ಸ್ಕ್ಯಾನಿಂಗ್ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶವಿರುತ್ತದೆ) ಆ.4ರಿಂದ 10ರವರೆಗೆ ಸಮಯ ನೀಡಲಾಗಿದೆ. ಪ್ರತಿ ವಿಷಯಕ್ಕೆ ಒಟ್ಟು 1,670 ರೂ. ಮರು ಮೌಲ್ಯಮಾಪನ ಶುಲ್ಕ ವಿಧಿಸಲಾಗಿದೆ. ಅಂಕಗಳ ಮರು ಎಣಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.
ಉಡುಪಿ ಜಿಲ್ಲೆ ಪ್ರಥಮ ಆಗಿದ್ದು ಹೇಗೆ?
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಒಂದೇ ಪ್ರಮಾಣದ (ಶೇ.90.71ರಷ್ಟು) ಫಲಿತಾಂಶ ಪಡೆದಿದ್ದರೂ, ಕಳೆದ ಬಾರಿಯ ಫಲಿತಾಂಶ ಹಾಗೂ ಉತ್ತೀರ್ಣರಾದ ವಿದ್ಯಾರ್ಥಿಗಳು ಪಡೆದಿರುವ ಅಂಕಗಳ ಆಧಾರದ ಮೇಲೆ ಜಿಲ್ಲಾವಾರು ಫಲಿತಾಂಶದಲ್ಲಿ ಈ ಬಾರಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ನೀಡಲಾಗಿದೆ. ‘‘ಕಳೆದ ವರ್ಷ ಉಡುಪಿ ಜಿಲ್ಲೆಶೇ.92.2ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಶೇ.90.91ರಷ್ಟು ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನದಲ್ಲಿತ್ತು. ಆದರೆ, ಈ ಬಾರಿ ಎರಡೂ ಜಿಲ್ಲೆಗಳು ಶೇ.90.71ರಷ್ಟು ಫಲಿತಾಂಶವನ್ನು ಪಡೆದಿವೆ. ಆದರೆ, ದ.ಕ. ಜಿಲ್ಲೆಗೆ ಹೋಲಿಸಿದರೆ, ಉಡುಪಿ ಜಿಲ್ಲೆಯಲ್ಲಿ ಡಿಸ್ಟಿಂಕ್ಷನ್ ಹಾಗೂ ಪ್ರಥಮ ದರ್ಜೆಯಲ್ಲಿ ಪಾಸಾದವರ ಸಂಖ್ಯೆ ಹೆಚ್ಚಿದೆ. ಕಳೆದ ಬಾರಿ ಸಹ ಉಡುಪಿ ಜಿಲ್ಲೆ ಉತ್ತಮ ಸಾಧನೆ ತೋರಿದ್ದ ಹಿನ್ನೆಲೆಯಲ್ಲಿ ಈ ಎಲ್ಲಾಅಂಶಗಳನ್ನು ಒಟ್ಟುಗೂಡಿಸಿ ಈ ವರ್ಷವೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ನೀಡಲಾಗಿದೆ,’’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಎಂ.ಕನಗವಲ್ಲಿ ತಿಳಿಸಿದರು.
ಇಂಗ್ಲಿಷ್ಗೆ ಕೃಪಾಂಕ ನೀಡಿಲ್ಲ
‘‘ಈ ಬಾರಿಯ ಇಂಗ್ಲಿಷ್ ಭಾಷಾ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ 8 ಮತ್ತು 21ನೇ ಪ್ರಶ್ನೆಗಳನ್ನು ತಪ್ಪಾಗಿ ಕೇಳಲಾಗಿದ್ದು, ಕೃಪಾಂಕ ನೀಡುವಂತೆ ಒಟ್ಟು 350ಕ್ಕೂ ಹೆಚ್ಚು ಅರ್ಜಿಗಳು ಮಂಡಳಿಗೆ ಸಲ್ಲಿಕೆಯಾಗಿದ್ದವು. ಆದರೆ, ಈ ಪ್ರಶ್ನೆಗಳಲ್ಲಿ ಕೆಲವು ಅಕ್ಷರ ದೋಷ (ಸ್ಪೆಲಿಂಗ್) ದೋಷ ಇತ್ತೇ ಹೊರತು, ಪ್ರಶ್ನೆಗಳನ್ನು ತಪ್ಪಾಗಿ ಕೇಳಿರಲಿಲ್ಲ. ಇಂತಹ ತಪ್ಪುಗಳ ವಿಜ್ಞಾನ ಹಾಗೂ ಇತರೆ ವಿಷಯಗಳಲ್ಲೂ ಆಗಿವೆ. ಆದ್ದರಿಂದ ಮೌಲ್ಯಮಾಪನದ ವೇಳೆ ಇಂಗ್ಲಿಷ್ ವಿಷಯಕ್ಕೆ ಕೃಪಾಂಕ ನೀಡಿಲ್ಲ,’’ ಎಂದು ಕನಗವಲ್ಲಿ ಸ್ಪಷ್ಟಪಡಿಸಿದರು.
————————
ಅಪರಿಮಿತ ಸಾಧಕ ಅರವಿಂದ
ಬೆಂಗಳೂರು: ‘‘ನಾನು ಟ್ಯೂಷನ್‌ಗೆ ಹೋಗದೆ ಮನೆಯಲ್ಲೇ ಕುಳಿತು ಓದುತ್ತಿದ್ದೆ. ಓದುವುದಕ್ಕಾಗಿಯೇ ಸಮಯ ನಿಗದಿಪಡಿಸಿಕೊಂಡಿರಲಿಲ್ಲ. ಆಸಕ್ತಿ ಮೂಡಿದಾಗ ಆಸಕ್ತಿಯಿಂದ ಓದುತ್ತಿದ್ದೆ. ಆನಂತರ ಓದಿದ ವಿಷಯಗಳನ್ನು ಚೆನ್ನಾಗಿ ಪುನರ್ಮನನ ಮಾಡಿಕೊಳ್ಳುತ್ತಿದ್ದೆ. ಇದರಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು’’.
– ಇದು ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 598 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿರುವ ಬೆಂಗಳೂರಿನ ಮಲ್ಲೇಶ್ವರ ವಿದ್ಯಾಮಂದಿರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಟಿ.ಸಿ.ಎಸ್.ಅರವಿಂದ್ ಶ್ರೀವತ್ಸ ಪ್ರತಿಕ್ರಿಯೆ.
ಖಾಸಗಿ ಕಂಪನಿಯ ಉದ್ಯೋಗಿ ಎಸ್.ಶ್ರೀನಿವಾಸ್ ಹಾಗೂ ಆರ್.ಚಿತ್ರಾ ಅವರ ಪುತ್ರ. ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅರವಿಂದ್ ಶ್ರೀವತ್ಸ, ‘‘ಮನೆಯಲ್ಲಿ ನನ್ನ ತಂದೆ-ತಾಯಿ ಇಬ್ಬರು ಓದಲು ಸದಾ ಪ್ರೋತ್ಸಾಹಿಸುತ್ತಿದ್ದರು. ಹಾಗಾಗಿ, ಯಾವುದೇ ಟ್ಯೂಷನ್‌ಗೆ ಹೋಗದೆ ಮನೆಯಲ್ಲೇ ಕುಳಿತು ಓದುತ್ತಿದ್ದೆ. ನಮ್ಮ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಬೆನ್ನಹಿಂದೆ ನಿಂತು ಪ್ರೋತ್ಸಾಹಿಸಿದ್ದಾರೆ.
ನಾನು ಓದುವ ವಿಷಯದ ಬಗ್ಗೆ ಯಾವುದೇ ಅನುಮಾನ ಬಂದರೂ ಕೂಡಲೇ ಪರಿಹರಿಸುತ್ತಿದ್ದರು. ಅವರ ಸಹಕಾರದಿಂದ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು.
– ಟಿ ಸಿ ಎಸ್ ಅರವಿಂದ ಶ್ರೀವತ್ಸ ಫಸ್ಟ್ ರಾಂಕ್, ಬೆಂಗಳೂರು.
“ಬೃಂದಾ’ಳ ಬೃಹತ್ ಸಾಧನೆ
ಚನ್ನಪಟ್ಟಣ: ತಾಲೂಕಿನ ವಿರುಪಾಕ್ಷಿಪುರ ಹೋಬಳಿಯ ಜಗದಾಪುರ ಗ್ರಾಮದ ಜೆ.ಎನ್. ಬೃಂದಾ ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 596 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾಳೆ.
ಜಗದಾಪುರ ಗ್ರಾಮದ ರೈತ ನಾಗೇಶ್ ಮತ್ತು ಕಮಲ ದಂಪತಿ ಮಗಳಾದ ಬೃಂದಾ, ಮೈಸೂರಿನ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕನ್ನಡದಲ್ಲಿ 100, ಇಂಗ್ಲಿಷ್ 96, ಅರ್ಥಶಾಸ್ತ್ರ 100, ಬಿಸೆನೆಸ್ ಸ್ಟಡಿ 100, ಅಂಕೌಟೆನ್ಸಿ 100, ಕಂಪ್ಯೂಟರ್ ಸೈನ್ಸ್ 100 ಅಂಕ ಪಡೆದಿದ್ದಾಳೆ. ತಂದೆ, ತಾಯಿ ಮತ್ತು ಗುರುಗಳ ಪ್ರೋತ್ಸಾಹದ ಜತೆಗೆ ಕಠಿಣ ಪರಿಶ್ರಮದ ಅಭ್ಯಾಸದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆ ಸಿಎ ಮಾಡಬೇಕೆಂಬ ಅಭಿಲಾಷೆ ಇದೆ ಎಂದು ಬೃಂದಾ ತಿಳಿಸಿದ್ದಾರೆ.
‘ಅಭಿಜ್ಞಾ ರಾವ್’ ಅದ್ವಿತೀಯ
ಉಡುಪಿ: ‘‘ಸ್ಪರ್ಧಾತ್ಮಕ ಪರೀಕ್ಷೆಯ ಹೊರತು ಟ್ಯೂಶನ್ ಪಡೆದಿಲ್ಲ, ಮನರಂಜನೆಗಷ್ಟೇ ದಿನಕ್ಕೊಂದು ಗಂಟೆ ಟಿವಿ ವೀಕ್ಷಣೆ, ನಿತ್ಯ ಯೋಗ ಪ್ರಾಣಾಯಾಮದ ನಡುವೆ ಕೊರೊನಾ ಲಾಕ್ ಡೌನ್ ಹೆಚ್ಚು ಅಂಕ ಗಳಿಕೆಗೆ ವರವಾಗಿದೆ,’’ ಎಂದು ತಮ್ಮ ಯಶಸ್ಸಿನ ಗುಟ್ಟು ಹೇಳುತ್ತಾರೆ ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಉಡುಪಿ ವಿದ್ಯೋದಯ ಪ ಪೂ ಕಾಲೇಜಿನ ವಿದ್ಯಾರ್ಥಿ ಅಭಿಜ್ಞಾ ರಾವ್.
ಅಭಿಜ್ಞಾ ರಾವ್ ಒಟ್ಟು 596(ಶೇ.99.33) ಅಂಕ ಗಳಿಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಪೂರೈಸಿದ ಅಭಿಜ್ಞಾರ ಅಪ್ಪ ನಿವೃತ್ತ ಪ್ರಾಂಶುಪಾಲ ದಿ. ವಿಠಲ ರಾವ್. ತಾಯಿ ಆಶಾ ರಾವ್ ಸ್ನಾತಕೋತ್ತರ ಪದವೀಧರೆ. ಇಂಗ್ಲೀಷಿನಲ್ಲಿ ಸಿಕ್ಕ 96 ಅಂಕಕ್ಕೆ ತೃಪ್ತಿಯಿದ್ದು ಉಳಿದ ಐದು ವಿಷಯಗಳಲ್ಲೂ ತಲಾ 100 ಅಂಕ ಗಳಿಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ. 99.8 ಅಂಕ ಗಳಿಸಿದ್ದರು (ರಾಜ್ಯಕ್ಕೆ ಎರಡನೇ ಸ್ಥಾನ). ಜೆಇಇ ಮೊದಲ ಪರೀಕ್ಷೆ ಉತ್ತೀರ್ಣರಾಗಿದ್ದು ಸೆಪ್ಟೆಂಬರ್‌ನಲ್ಲಿ ಎರಡನೇ ಪರೀಕ್ಷೆ ಬರೆಯಬೇಕಿದೆ. ಸಿಇಟಿ ಬರೆಯಲಿದ್ದಾರೆ. ಸುರತ್ಕಲ್ ಎನ್ಐಟಿಕೆಯಲ್ಲಿ ಕಲಿತ ಅಕ್ಕ ರಕ್ಷಾ ರಾವ್ ಅವರೇ ಅಭಿಜ್ಞಾ ರಾವ್ ಮಾದರಿ.
ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ, ಭಯದ ನಡುವೆಯೂ ಫಲಿತಾಂಶ ಖುಷಿ ಕೊಟ್ಟಿದೆ. ಕಂಪ್ಯೂಟರ್ ಎಂಜಿನಿಯರ್ ಆಗಬೇಕೆನ್ನುವ ಗುರಿಯಿದೆ.
-ಅಭಿಜ್ಞಾ ರಾವ್, ಮೊದಲ ರಾಂಕ್, ಉಡುಪಿ.
ಪ್ರೇರಣಾದಾಯಕ ರಿಸಲ್ಟ್
ಬೆಂಗಳೂರು: ‘‘ಅಂದಂದಿನ ಪಾಠವನ್ನು ಅಂದಂದೇ ಓದಿ ಮುಗಿಸುತ್ತಿದ್ದೆ. ಭಾನುವಾರ ಆ ವಾರದ ಪಾಠಗಳನ್ನು ಪುನರ್ಮನನ ಮಾಡಿಕೊಳ್ಳುತ್ತಿದ್ದೆ. ಇದರಿಂದ ಅಂತಿಮವಾಗಿ ಪರೀಕ್ಷೆಯನ್ನು ಅತ್ಯಂತ ಸುಲಭವಾಗಿ ಎದುರಿಸಲು ಸಾಧ್ಯವಾಯಿತು ಎಂದು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದ ಬೆಂಗಳೂರಿನ ಮಲ್ಲೇಶ್ವರ ವಿದ್ಯಾಮಂದಿರದ ಸ್ವತಂತ್ರ ಪಪೂ ಕಾಲೇಜಿನ ವಿದ್ಯಾರ್ಥಿ ಎಂ.ಎನ್.ಪ್ರೇರಣಾ ತಿಳಿಸಿದರು. ಪ್ರೇರಣಾ ತಾಯಿ ಉಪನ್ಯಾಸಕಿಯಾಗಿದ್ದರೆ, ತಂದೆ ಎಂಜಿನಿಯರ್ ಆಗಿದ್ದಾರೆ. ‘‘ನೀಟ್ಗಾಗಿ ಟ್ಯೂಷನ್ಗೆ ಹೋಗುತ್ತಿದ್ದೇನೆ. ಈ ಪರೀಕ್ಷೆ ಬರೆದು ಮೆಡಿಕಲ್ ಓದಬೇಕೆಂದುಕೊಂಡಿದ್ದೇನೆ. ವೈದ್ಯೆಯಾಗಿ ಬಡ ಜನರ ಸೇವೆ ಮಾಡಬೇಕೆಂಬ ಆಸೆ ನನ್ನದು’’ ಎಂದು ಪ್ರೇರಣಾ ಖುಷಿಯಿಂದ ಹೇಳಿದರು.
ರೈತನ ಮಗ ಕರೀಗೌಡಗೆ ಕಲಾ ಕಿರೀಟ
ಕೊಟ್ಟೂರು (ಬಳ್ಳಾರಿ): ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 594 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಕರೀಗೌಡ, ಬಡ ಕೃಷಿಕನ ಪುತ್ರ. ಪಟ್ಟಣದ ಇಂದು ಪಪೂ ಕಾಲೇಜಿನ ಈ ವಿದ್ಯಾರ್ಥಿ, ಹೂವಿನಹಡಗಲಿ ತಾಲೂಕು ಮಹಾಜನದಹಳ್ಳಿ ಗ್ರಾಮದ ನಿವಾಸಿ. ಕೊಟ್ರೇಶ ಮತ್ತು ಶಾಂತಮ್ಮ ದಂಪತಿಯ 2ನೇ ಮಗ. 3 ಎಕರೆ ಜಮೀನೇ ಕುಟುಂಬಕ್ಕೆ ಆಸರೆ. ಹಳ್ಳಿಯ ಸರಕಾರಿ ಶಾಲೆಯಲ್ಲಿ 10ರವರೆಗೆ ವಿದ್ಯಾಭ್ಯಾಸ ನಡೆಸಿದ ಈ ವಿದ್ಯಾರ್ಥಿ, ಪಿಯುಸಿಗೆ ಕೊಟ್ಟೂರು ಕಾಲೇಜು ಸೇರಿದ. ಅಕ್ಕ ಶ್ವೇತಾ ಅವಧಿರೊಂದಿಗೆ ಬಾಡಿಗೆ ಕೋಣೆಯಲ್ಲಿದ್ದು ವಿದ್ಯಾಭ್ಯಾಸ ಮಾಡಿದ. ರಜೆ ದಿನಗಳಲ್ಲಿ ಅಪ್ಪನೊಂದಿಗೆ ಹೊಲದ ಕೆಲಸ ಮಾಡುತ್ತಿದ್ದ ಕರೀಗೌಡ, ದಿನಕ್ಕೆ ನಾಲ್ಕೈದು ತಾಸು ಅಭ್ಯಾಸದಲ್ಲಿ ತಲ್ಲೀನನಾಗಿರುತ್ತಿದ್ದ. ನಿರಂತರ ಓದು ಈ ಸಾಧನೆ ತನಗೆ ದಕ್ಕಿದೆ ಎಂಬ ವಿನಮ್ರತೆ ಈ ವಿದ್ಯಾರ್ಥಿಯದ್ದಾಗಿದೆ. ಪಡೆದ ಅಂಕಗಳು: ಕನ್ನಡ-97, ಸಂಸ್ಕೃತ, ಇತಿಹಾಸ, ಶಿಕ್ಷ ಣದಲ್ಲಿ100, ರಾಜ್ಯಶಾಸ್ತ್ರ-98, ಐಚ್ಛಿಕ ಕನ್ನಡ-99.
ಹೆಗಲ ಮೇಲೆ ಹೊತ್ತರು
ಕರೀಗೌಡ, ಗ್ರಾಮದಿಂದ ಕಾಲೇಜಿಗೆ ತನ್ನ ತಂದೆಯೊಂದಿಗೆ ಬಂದಾಗ, ಗೇಟ್ ಬಳಿ ಮಹಿಳಾ ಸಿಬ್ಬಂದಿ ಆರತಿ ಬೆಳಗಿ ಸ್ವಾಗತಿಸಿದರು. ವಿದ್ಯಾರ್ಥಿ ಪರಿಶ್ರಮಕ್ಕೆ ಸಂಭ್ರಮಿಸಿದ ಪ್ರಾಚಾರ್ಯ ಎಚ್.ಎನ್.ವೀರಭದ್ರಪ್ಪ ಸ್ವತಃ ತಮ್ಮ ಹೆಗಲ ಮೇಲೆ ವಿದ್ಯಾರ್ಥಿಯನ್ನು ಹೊತ್ತು ಕುಣಿದಾಡಿದರು.
ಅಪ್ಪ ಅಮ್ಮನ ಸಹಾಯಕ್ಕಾಗಿ ಮೊದಲು ಉದ್ಯೋಗ ಪಡೆಯುವೆ. ಮುಂದೆ ಕೆಎಎಸ್ ಮತ್ತು ಐಎಎಸ್ ಪರೀಕ್ಷೆ ಬರೆಯುವ ಗುರಿ ಹೊಂದಿರುವೆ. ರಾಜ್ಯಶಾಸ್ತ್ರ ನನ್ನ ಅಚ್ಚುಮೆಚ್ಚಿನ ವಿಷಯ.
-ಕರೀಗೌಡ ಮೊದಲ ರಾಂಕ್, ಕೊಟ್ಟೂರು
ಅರ್ಚಕರ ಪುತ್ರನ ಅದ್ಭುತ ಗೆಲುವು
ಕೊಟ್ಟೂರು (ಬಳ್ಳಾರಿ): ಕಲಿಕೆಗೆ ಹಳ್ಳಿ ಅಥವಾ ಬಡತನ ಎಂಬುದು ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೇ ಎರಡನೇ ಸ್ಥಾನ ಪಡೆದ ಹೂವಿನಹಡಗಲಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ಅರ್ಚಕರ ಪುತ್ರ ಎಸ್.ಎಂ.ಸ್ವಾಮಿ ಸಾಕ್ಷಿ. ಕೊಟ್ಟೂರು ಇಂದು ಪಿಯು ಕಾಲೇಜಿನ ಈ ವಿದ್ಯಾರ್ಥಿ, 592 ಅಂಕ ಪಡೆದಿದ್ದಾನೆ. ಗ್ರಾಮದ ಬಸವೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ಜಾತಯ್ಯ, ಕೊಟ್ರಮ್ಮ ದಂಪತಿಯ ಮಗ. ದೇವಸ್ಥಾನದ 5 ಎಕರೆ ಒಣ ಭೂಮಿಯೇ ಕುಟುಂಬದ ಉಪಜೀವನಕ್ಕೆ ಆಸರೆ. ಹಿರಿಯ ನಾಲ್ವರು ಹೆಣ್ಣು ಮಕ್ಕಳಿಗೆ ಪ್ರೌಢ ಶಿಕ್ಷಣ ಕೊಡಿಸಿದ್ದ ತಂದೆ, ಮಗನ ಶಿಕ್ಷಣ ಮೊಟಕಾಗಬಾರದು ಎಂದು ಹಣಕಾಸಿನ ತೊಂದರೆಯಿದ್ದರೂ ಸಾಲಮಾಡಿ, ಕೊಟ್ಟೂರು ಪಿಯು ಕಾಲೇಜಿಗೆ ಸೇರಿಸಿದ್ದರು. ಕೊಟ್ಟೂರಿನಲ್ಲಿರುವ ಅಕ್ಕ ಮಾವನವರ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ನಡೆಸಿದ ಸ್ವಾಮಿ, ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗ ಪಡೆಯುವ ಗುರಿ ಹೊಂದಿದ್ದಾನೆ.
ಮೊದಲ ಸ್ಥಾನದ ನಿರೀಕ್ಷೆಯಿತ್ತು. ಈಗಲೂ ಸಮಾಧಾನವಿದೆ. ಅಪ್ಪ ಕಷ್ಟ ಪಟ್ಟು ಓದಿಸಿದ್ದಾರೆ. ಮುಂದೆಯೂ ಒಳ್ಳೆಯ ಶಿಕ್ಷ ಣ ಪಡೆದು ಉದ್ಯೋಗ ಪಡೆಯುವ ಗುರಿ ಹೊಂದಿರುವೆ.
-ಎಸ್.ಎಂ.ಸ್ವಾಮಿ, ಎರಡನೇ ರಾಂಕ್, ಕೊಟ್ಟೂರು.
ಕೈ ಹಿಡಿದ ಸೆಕೆಂಡ್ ಹ್ಯಾಂಡ್ ಪುಸ್ತಕಗಳು
ಬೆಳಗಾವಿ/ ಶಿಡ್ಲಘಟ್ಟ: ಓದಿಗಾಗಿ ಸಾಲ ಮಾಡಿ ಸೆಕೆಂಡ್ ಹ್ಯಾಂಡ್ ಪುಸ್ತಕ, 10 ರೂ. ಬೆಲೆಯ ಕಚ್ಚಾ ಪಟ್ಟಿಯಲ್ಲಿ ಎರಡು ವರ್ಷ ಪಿಯುಸಿ ವ್ಯಾಸಂಗ ಮಾಡಿದ ಹುಡುಗ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ. 91.6 ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಬೆಳಗಾವಿಯ ಶಿವಾಜಿ ನಗರದ ರೋಹಿತ ಖಂಡೇಕರ ಇಂಥ ಸಾಧನೆ ಮಾಡಿದ್ದಾರೆ. ಮನೆಯಲ್ಲಿರುವ ಕಡು ಬಡತನದ ನಡುವೆಯೂ ಅತ್ಯಂತ ಕನಿಷ್ಠ ಸಲಕರಣೆ ಬಳಸಿ ದ್ವಿತೀಯ ಪಿಯುಸಿ ಓದಿದ್ದಾರೆ. ಎಂಜಿನಿಯರಿಂಗ್ ಓದುವ ಆಸೆ ಇದೆ. ಆದರೆ, ಆರ್ಥಿಕ ಸಮಸ್ಯೆ ಎದುರಾಗಿದೆ. ಯಾರಾದರು ನೆರವು ನೀಡಿದರೆ ಶಿಕ್ಷ ಣ ಮುಂದುವರಿಸಲು ಅನುಕೂಲ ಆಗಲಿದೆ ಎಂದು ರೋಹಿತ್ ಬಯಕೆ ಹಂಚಿಕೊಂಡಿದ್ದಾರೆ.
ಜಿಪಂ ಸದಸ್ಯೆ ಪಾಸ್: ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಜಿಲ್ಲಾಪಂಚಾಯಿತಿ ಸದಸ್ಯೆ ಬಿ.ಸಿ.ತನುಜಾರಘು ಅವರು ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿದ್ದಾರೆ.
ರಾಜ್ಯದಲ್ಲಿ ಎಂಟು ವಿದ್ಯಾರ್ಥಿಗಳ ಆತ್ಮಹತ್ಯೆ
ಬೆಂಗಳೂರು: ಪಿಯು ದ್ವಿತೀಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ರಾಜ್ಯದಲ್ಲಿ ಮಂಗಳವಾರ ಒಟ್ಟು ಎಂಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರಿಹರ ನಗರದ ಜಯರಾಂ ನೇಕಾರ, ಚಿಂತಾಮಣಿ ತಾಲೂಕಿನ ಏನಿದಲೆ ಗ್ರಾಮದ ಶ್ವೇತಾ, ಬಂಗಾರಪೇಟೆ ತಾಲೂಕಿನ ಕಂತೇಪುರದ ವಿ.ಕಾಂತಾ ಅವರು ನೇಣಿಗೆ ಶರಣಾದರೆ, ಕೋಲಾರ ತಾಲೂಕಿನ ಬೆಳ್ಳೂರು ಗ್ರಾಮದ ಆದಿತ್ಯ ಚಕ್ರವರ್ತಿ ಕೆರೆಗೆ ಹಾರಿ ಪ್ರಾಣಕಳೆದುಕೊಂಡಿದ್ದಾನೆ. ಬೆಂಗಳೂರಿನ ವಿನಾಯಕನಗರ ನಿವಾಸಿ ರಾಹುಲ್ರೆಡ್ಡಿ (21) ಹಾಗೂ ಬಾಬಾನಗರ ನಿವಾಸಿ ಪ್ರವೀಣ್ (19), ಶಿವಮೊಗ್ಗ ತಾಲೂಕಿನ ಚಿಕ್ಕಮರಸಾ ಗ್ರಾಮದ ಚಿತ್ರಾ(18), ದಾವಣಗೆರೆ ನಗರದ ಗಣೇಶ್ ಆತ್ಮಹತ್ಯೆ ಮಾಡಿಕೊಂಡವರು. ಇದೇ ವೇಳೆ, ರೂಪಾ ಹಾಗೂ ಶ್ರೇಯಾ ಎಂಬ ಇಬ್ಬರು ವಿದ್ಯಾರ್ಥಿನಿಯರು ಹೊಸಪೇಟೆ ನಗರದ ಅಂತಶನಗುಡಿಯ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದಾರೆ.