ಗ್ಯಾಜೆಟ್ಗಳ ಟೆಕ್ಸ್ಟ್ ಸಂಸ್ಕೃತಿಯಿಂದ ಬರೆಯುವ ಕೌಶಲಕ್ಕೆ ಆಪತ್ತು | ಕ್ಲಾಸ್ರೂಮ್ಗೆ ಪರ್ಯಾಯವಲ್ಲ ಆನ್ಲೈನ್ ತರಗತಿ.
ಚೀ.ಜ.ರಾಜೀವ ಮೈಸೂರು.
ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್ಲೈನ್ ಕಲಿಕೆ ಅನಿವಾರ್ಯವಾದರೆ, ಕೈ ಬರಹದ ಭವಿಷ್ಯವೇನು? ಆನ್ಲೈನ್ ಶಿಕ್ಷಣ ಪದ್ಧತಿಯಲ್ಲಿ ಬರಹ ಕೌಶಲವನ್ನು ಉಳಿಸಿ-ಬೆಳೆಸುವುದು ಹೇಗೆ ಎಂಬ ಸವಾಲು ಎದ್ದಿದೆ.
ಪ್ರಾಥಮಿಕ ಹಂತದಿಂದಲೇ ಆನ್ಲೈನ್ ಶಿಕ್ಷಣಕ್ಕೆ ಹೈಕೋರ್ಟ್ ಮತ್ತು ರಾಜ್ಯ ಸರಕಾರದಿಂದ ಹಸಿರು ನಿಶಾನೆ ದೊರಕಿದ ಬೆನ್ನಲ್ಲಿಯೇ ಹೊಸ ಪ್ರಶ್ನೆ ಎದ್ದಿದೆ.
ಸದ್ಯ ಲಭ್ಯವಿರುವ ಹೈಟೆಕ್ ಗ್ಯಾಜೆಟ್ಗಳ ಮೂಲಕ ಆನ್ಲೈನ್ನಲ್ಲಿ ಕಲಿಯುವುದೆಂದರೆ-ನೋಡುವುದು, ಆಲಿಸುಧಿವುದು, ಓದುವುದು. ಇಲ್ಲಿಬರವಣಿಗೆಗೆ ಅವಕಾಶವೇ ಕಡಿಮೆ. ಕಂಪ್ಯೂಟರ್, ಟ್ಯಾಬ್, ಸ್ಮಾರ್ಟ್ಫೋನ್, ವಾಟ್ಸ್ಆ್ಯಪ್ ಸೇರಿದಂತೆ ನಾನಾ ರೀತಿಯ ಶೈಕ್ಷಣಿಕ ಆ್ಯಪ್ಗಳಲ್ಲಿ, ರೇಡಿಯೊ-ವಾಹಿನಿಗಳಲ್ಲಿ ವ್ಯಾಕರಣ ಬದ್ಧ ವಿವರಣಾತ್ಮಕ ಬರಹ ಕಡಿಮೆ. ಇಲ್ಲೆಲ್ಲಾ ಬರಹ ಎಂದರೆ, ವ್ಯಾಕರಣ ರಹಿತ ಲಘು ಪದಪುಂಜವಷ್ಟೆ(ಟೆಕ್ಸ್ಟ್).
ಇದರಿಂದ ಪ್ರಾಥಮಿಕ ಶಾಲಾ ಹಂತದ ಕಲಿಕೆಯ ಜೀವಾಳವೇ ಆಗಿರುವ ಪುನರಪಿ ಬರವಣಿಗೆ(ಕಾಪಿ ರೈಟಿಂಗ್) ಹಾಗೂ ಹೋಂ ವರ್ಕ್ಗೆ(ಮನೆಯಲ್ಲಿ ಬರೆಯಲು ಹಚ್ಚುವುದು) ಆನ್ಲೈನ್ ಕಲಿಕಾ ಮಾದರಿಯಲ್ಲಿ ಹೆಚ್ಚು ಆದ್ಯತೆಯೇ ಇರುವುದಿಲ್ಲ. ಆಧುನಿಕ ಗ್ಯಾಜೆಟ್ಗಳ ಕೀ ಬೋರ್ಡ್ನಲ್ಲಿ ಟೈಪಿಸಲು ಆರಂಭಿಸಿದರೆ, ಅದೇ ವಾಕ್ಯದ ಮುಂದಿನ ಪದ, ಅದರ ವ್ಯಾಕರಣ, ಸಾರ-ಸಂದರ್ಭ ಎಲ್ಲವನ್ನೂ ಊಹಿಸಿಕೊಂಡು ವಾಕ್ಯವಾಗಿ ಮೈದಾಳುತ್ತದೆ. ಇಂಥ ಗ್ಯಾಜೆಟ್ಗಳು ಮಕ್ಕಳ ಕಲಿಕಾ ಪರಿಕರಗಳಾದರೆ, ಬರಹ ಸಂಸ್ಕೃತಿಯೇ ಕಲಿಕಾ ಪದ್ಧತಿಯಿಂದ ನಶಿಸಿ ಹೋಗುತ್ತದೆ ಎಂಬುದು ಶಿಕ್ಷಕರ ಆತಂಕ. ಆನ್ಲೈನ್ ಕಲಿಕಾ ಮಾದರಿ ಕುರಿತು ಅಧ್ಯಯನ ಮಾಡಿ ಸರಕಾರಕ್ಕೆ ಮಾರ್ಗಸೂಚಿ ರಚಿಸಿ ಕೊಟ್ಟಿರುವ ತಜ್ಞರ ಸಮಿತಿ ಸದಸ್ಯ ಪ್ರೊ.ಪಿ.ವಿ.ನಿರಂಜನ ಆರಾಧ್ಯ ಅವರು, ‘‘ಆನ್ಲೈನ್ ಕಲಿಕಾ ಮಾದರಿ ಎಂಬುದು ಪೂರಕ ಚಟುವಟಿಕೆ. ಇದು ಯಾವತ್ತೂ ಕ್ಲಾಸ್ ರೂಂ ಕಲಿಕೆಗೆ ಪರ್ಯಾಯವಲ್ಲ. ಜತೆಗೆ, ಆನ್ಲೈನ್ ಶಿಕ್ಷಣದಲ್ಲಿಕೈ ಬರಹ ಕಲೆಗೆ ಅವಕಾಶ ಕಡಿಮೆ ಎಂಬುದು ನಿರ್ವಿವಾದ. ಹಾಗಾಗಿ, ನಾವು ನೀಡಿರುವ ಆನ್ಲೈನ್ ಕಲಿಕಾ ಮಾದರಿಯ ವರದಿಯಲ್ಲಿ ಶೇ.10ರಷ್ಟು ಗ್ಯಾಜೆಟ್ಗಳ ಮೂಲಕ, ಉಳಿದ ಶೇ.90ರಷ್ಟು ಕಲಿಕೆ ಆಫ್ಲೈನ್ ಮೂಲಕವೇ ಇರಬೇಕು ಎಂದಿದೆ,’’ ಎನ್ನುತ್ತಾರೆ.
ಬಹಳ ವರ್ಷಗಳ ಕಾಲ ಶಿಕ್ಷಕರಾಗಿ ಪಾಠ ಮಾಡಿ ಅನುಭವ ಹೊಂದಿ, ಸದ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿ. ಉದಯಕುಮಾರ್, ‘‘ಬರಹ ಎಂಬುದೇ ಕಲಿಕೆಯ ಪ್ರಾಥಮಿಕ ಬಿಂದು. ಅಲ್ಲಿ ಕಣ್ಣು, ಕಿವಿ ಮತ್ತು ಚರ್ಮ ಎಂಬ ಇಂದ್ರಿಯಗಳು ಕೆಲಸ ಮಾಡುತ್ತವೆ. ಬರಹ ಎಂಬುದು ಏಕಾಗ್ರತೆಯ ನೆಂಟ. ನೆನಪಿನ ಶಕ್ತಿ ಉದ್ದೀಪಿಸುವ ಕಲೆ. ಹಾಗಾಗಿ, ಮಕ್ಕಳಿಗೆ ಕಾಪಿ ರೈಟಿಂಗ್ ಬರೆಸುತ್ತೇವೆ. ಹಾಗಾಗಿ, ಆನ್ಲೈನ್ ಕಲಿಕಾ ಮಾದರಿಯಲ್ಲಿ ಇದಕ್ಕೆ ಬಲ ತುಂಬಬೇಕಿದೆ,’’ ಎನ್ನುತ್ತಾರೆ.
ಸೋಮಾರಿತನ ಬೆಳೆಸುತ್ತದೆ
‘‘ಪಠ್ಯೇತರ ಚಟುವಟಿಕೆಗಳಿಗಾಗಿ ತಮ್ಮ ಪಾಲಕರ ಸ್ಮಾರ್ಟ್ಫೋನ್ಗಳನ್ನು ಬಳಸುವ ಶಾಲಾ ಮಕ್ಕಳು ಗೂಗಲ್ನಲ್ಲಿ ಟೈಪಿಸುವ ಗೊಡವೆಗೂ ಹೋಗುವುದಿಲ್ಲ. ಗೂಗಲ್ ಮೈಕ್ ಆನ್ ಮಾಡಿ, ತಮಗೆ ಬೇಕಾದ್ದನ್ನು ಕೇಳುತ್ತಾರೆ. ಮಾತನ್ನೇ ಬರಹವಾಗಿಸುತ್ತಾರೆ. ಇನ್ನು ಮುಂದೆ ಆನ್ಲೈನ್ ಕಲಿಕೆಯೇ ಪಠ್ಯವಾದರೆ, ಪಠ್ಯಕ್ಕೂ ಅವರೂ ಗೂಗಲ್ ಅನ್ನೇ ಆಶ್ರಯಿಸುತ್ತಾರೆ. ಇದು ಸೋಮಾರಿತನಕ್ಕೆ ದಾರಿಯಾಗುತ್ತದೆ,’’ ಎಂಬುದು ಗುಂಡ್ಲುಪೇಟೆ ಕಾಲೇಜಿನ ಇಂಗ್ಲಿಷ್ ಸಹ ಪ್ರಾಧ್ಯಾಪಕ ಗೋವಿಂದರಾಜು ಲಕ್ಷ್ಮೇಪುರ ಅವರ ಆತಂಕ.
ಪಾಲಕರು ಏನು ಮಾಡಬೇಕು?
– ಆನ್ಲೈನ್ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಈ ಕಲಿಕಾ ಪದ್ಧತಿಯನ್ನು ಸದ್ಯಕ್ಕೆ ಅಳವಡಿಸಿಕೊಂಡೇ ಮಕ್ಕಳಲ್ಲಿ ಬರಹದ ಕಲೆಯನ್ನು ಮೈಗೂಡಿಸುವ ಪ್ರಯತ್ನ ಪಾಲಕರಿಂದಲೇ ಆಗಬೇಕು ಎನ್ನುತ್ತಾರೆ ಶಿಕ್ಷಣ ತಜ್ಞರು.
– ಆನ್ಲೈನ್ ಶಿಕ್ಷಣ ಪದ್ಧತಿಯಡಿ ನೀಡಲಾಗುವ ಹೋಂ ವರ್ಕ್ ಅನ್ನು ಪಾಲಕರೇ ಮುತುವರ್ಜಿ ವಹಿಸಿ ಮಾಡಬೇಕು.
– ಹೋಂ ವರ್ಕ್ ಎಂಬುದು ಕ್ರಿಯಾಶೀಲತೆ ತುಂಬಿದ ಚಟುವಟಿಕೆ ಆಗಿರಬೇಕು ಹಾಗೂ ಅಲ್ಲಿ ಬರಹಕ್ಕೂ ಆದ್ಯತೆ ಇರಬೇಕು. ಪಾಲಕರು ಮಕ್ಕಳ ಕೈ ಹಿಡಿದು ಬರೆಸಬೇಕು.
– ಬರಹ ಎಂಬುದು ವ್ಯಾಕರಣದ ಕಲಿಕೆ. ಮಕ್ಕಳು ಈ ಹಂತದಲ್ಲಿ ಬರಹವನ್ನು ಕಲಿಯದಿದ್ದರೆ ಮುಂದೆ ಬಹಳ ಕಷ್ಟವಾಗುತ್ತದೆ.