ಕಳೆದ ವಾರ ಉತ್ತರ ಪ್ರದೇಶದಲ್ಲಿ ಎಂಟು ಪೊಲೀಸರನ್ನು ಹತ್ಯೆಗೈದಿದ್ದ ಕುಖ್ಯಾತ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಶುಕ್ರವಾರ ಬೆಳಗ್ಗೆ ಹೊಡೆದುರುಳಿಸಲಾಗಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸಿಕ್ಕಿಬಿದ್ದ ದುಬೆಯನ್ನು ಕಾನ್ಪುರಕ್ಕೆ ಕರೆತರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರಿನಿಂದ ತಪ್ಪಿಸಿಕೊಂಡು ಪೊಲೀಸರ ಗನ್ ಸೆಳೆದು ಅವರ ಮೇಲೆ ಗುಂಡಿಕ್ಕಿ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಗುಂಡಿಕ್ಕಿ ಕೊಂದುಹಾಕಿದ್ದಾರೆ. ಪೊಲೀಸರ ಈ ನಡೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದೊಂದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್ ನಿಗಾದಲ್ಲಿ ತನಿಖೆ ನಡೆಯಬೇಕೆಂದು ಆಗ್ರಹಿಸಿವೆ.
ಪ್ರತಿಯೊಂದು ಎನ್‌ಕೌಂಟರ್ ನಡೆದಾಗಲೂ ಇದರಲ್ಲಿ ಆಕಸ್ಮಿಕ ಎಷ್ಟು, ಉದ್ದೇಶಪೂರ್ವಕ ಎಷ್ಟು ಎಂಬ ಪ್ರಶ್ನೆ ಮೂಡುವುದು ಸಹಜವೇ. ಸುಪ್ರೀಂ ಕೋರ್ಟ್ ಕೂಡ ಈ ಹಿಂದೆ, ‘ಎನ್‌ಕೌಂಟರ್‌ಗಳು ಸೇಡಿನ ಹತ್ಯೆಗೆ ಕಾರಣ ಆಗಬಾರದು’ ಎಂದು ಅಭಿಪ್ರಾಯಪಟ್ಟಿತ್ತು. ಎಂಟು ಪೊಲೀಸರನ್ನು ಹತ್ಯೆಗೈದ ದುಬೆಯ ಬಗ್ಗೆ ಪೊಲೀಸರಿಗೆ ಸಿಟ್ಟಿದ್ದರೆ, ಆತನನ್ನು ಕೊಂದು ಸಿಟ್ಟು ತೀರಿಸಿಕೊಂಡಿದ್ದರೆ ಅದರಲ್ಲೇನೂ ಆಶ್ಚರ್ಯವಿಲ್ಲ. ಎನ್‌ಕೌಂಟರ್ ಮಾಡಿದ ಪೊಲೀಸರೂ ವಿಚಾರಣೆಗೆ ಒಳಗಾಗಬೇಕಾಗುತ್ತದೆ; ಆಗುತ್ತಾರೆ. ಆದರೆ ಕಾನೂನು ಸುವ್ಯವಸ್ಥೆ ಪಾಲನೆಯ ಹೆಸರಿನಲ್ಲಿ ನಡೆಯುವುದೆಲ್ಲವೂ ಕೆಲವೊಮ್ಮೆ ಕಾನೂನುಬದ್ಧ ಆಗಿರುವುದಿಲ್ಲ. ಇಲ್ಲಿ ಮೃತ ಪೊಲೀಸರ ಕುಟುಂಬಗಳಿಗೆ ನ್ಯಾಯ ಸಂದಿದೆಯೇ ಎಂಬುದಷ್ಟೇ ಪ್ರಶ್ನೆ.
ವಿಕಾಸ್ ದುಬೆ ಹಲವು ದಶಕಗಳಿಂದ ಉತ್ತರ ಪ್ರದೇಶದಲ್ಲಿ ಹಾವಳಿ ಎಬ್ಬಿಸಿದ್ದ ಪಾತಕಿ. ರಾಜಕಾರಣಿಗಳ ಜೊತೆಗೂ ನಂಟು ಹೊಂದಿದ್ದ ಈತನನ್ನು ಹಲವು ಪಕ್ಷಗಳು ಇದುವರೆಗೂ ಸಾಕಿ ಬೆಳೆಸಿವೆ. ಈಗ ಎನ್‌ಕೌಂಟರ್‌ನ ಪ್ರಾಮಾಣಿಕತೆ ಬಗ್ಗೆ ಮಾತಾಡುತ್ತಿರುವವರಲ್ಲಿ ಎಷ್ಟು ಮಂದಿ ಈ ಪಾತಕಿಯಿಂದ ಲಾಭ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಯನ್ನೂ ನಾವು ಕೇಳಬಹುದು. ಉತ್ತರಪ್ರದೇಶ ಒಂದು ರೀತಿಯಿಂದ ಪಾತಕಿಗಳ ನೆಲೆಯಾಗಿತ್ತು. ಇವರು ಅಧಿಕಾರದಲ್ಲಿದ್ದ ಪಕ್ಷಗಳೊಂದಿಗೆ ಮಾಡಿಕೊಂಡಿದ್ದ ಅಪವಿತ್ರ ಮೈತ್ರಿಯ ಪರಿಣಾಮ, ಇಂಥವರು ಯಾವ ಅಪರಾಧ ಮಾಡಿದರೂ ಇವರಿಗೆ ಶಿಕ್ಷೆಯೇ ಆಗದ ಸನ್ನಿವೇಶ ನಿರ್ಮಾಣವಾಗಿತ್ತು. ನೂರಾರು ಮಂದಿಯನ್ನು ಕೊಂದವರು ಕೂಡ ಯಾವುದಾದರೊಂದು ಪಕ್ಷದ ಟಿಕೆಟ್ ಪಡೆದು ಶಾಸನಸಭೆಗೆ ಆರಿಸಿ ಬರುತ್ತಿದ್ದರು. ಅವರೇ ಕಾನೂನುಗಳನ್ನೂ ಜಾರಿ ಮಾಡುವ ಸ್ಥಿತಿ ಉಂಟಾಗಿತ್ತು. ಹೀಗಿರುವಾಗ, ಇವರಿಂದ ಕಗ್ಗೊಲೆ, ಅಪಹರಣ, ದರೋಡೆಗೆ ತುತ್ತಾದ ಕುಟುಂಬಗಳು ನ್ಯಾಯ ಅಪೇಕ್ಷಿಸಿದರೆ ಸಿಗುವುದಾದರೂ ಹೇಗೆ? ಇಂಥ ನಾಡಿನಲ್ಲಿ ಈಗ ಅಪರಾಧಿಗಳನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ರಾಜ್ಯ ಸರಕಾರ ಉಗ್ರವಾಗಿ ಮಾಡುತ್ತಿದೆ. ಇಲ್ಲಿನ ‘ಅಪರಾಧ ಮತ್ತು ಶಿಕ್ಷೆ’ಯ ವ್ಯವಸ್ಥೆಯ ಬಗ್ಗೆ ನಾವು ಮಾತಾಡಬೇಕಾದ ರೀತಿಯೇ ಬೇರೆ ಇರಬೇಕೇನೋ. ಮಾನವ ಹಕ್ಕು ಅಪರಾಧಿಗಳಿಗೆ ಮಾತ್ರ ಇರುವುದಲ್ಲ; ಸಂತ್ರಸ್ತರಿಗೂ ಇರುತ್ತದಲ್ಲವೇ.
ನಮ್ಮ ನ್ಯಾಯಾಂಗ ವ್ಯವಸ್ಥೆಯಾದರೂ ಸಮರ್ಪಕವಾಗಿ, ಕಾಲಬದ್ಧವಾಗಿ ಕಾರ್ಯ ನಿರ್ವಹಿಸಿರುತ್ತಿದ್ದರೆ ಈ ಪ್ರಶ್ನೆಗಳು ಮೂಡುತ್ತಿರಲಿಲ್ಲ. ನೊಂದವರಿಗೆ ನ್ಯಾಯ, ಅಪರಾಧಿಗಳಿಗೆ ಶಿಕ್ಷೆ ಇವೆಲ್ಲ ಶೀಘ್ರವಾಗಿ ನಡೆದುದೇ ಇಲ್ಲ. ನ್ಯಾಯಾಲಯಗಳಿಗೆ ಅಲೆದೇ ಸಂತ್ರಸ್ತರ ಜೀವನ ಮುಗಿದುಹೋಗುತ್ತದೆ. ‘ನೂರು ಅಪರಾಧಿಗಳಿಗೆ ಶಿಕ್ಷೆ ತಪ್ಪಿದರೂ ಒಬ್ಬ ನಿರಪರಾಗೆ ಶಿಕ್ಷೆಯಾಗಬಾರದು’ ‘ನ್ಯಾಯದಾನ ವಿಳಂಬವಾದರೆ ನ್ಯಾಯವನ್ನೇ ನಿರಾಕರಿಸಿದಂತೆ’ ಎಂಬ ಮಾತುಗಳೆಲ್ಲ ಇಂಥ ಪರಿಸ್ಥಿತಿಯಲ್ಲಿ ವ್ಯಂಗ್ಯದಂತೆ ಕೇಳಿಸುತ್ತವೆ. ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ಗಳನ್ನು ಅಷ್ಟೊಂದು ಸಂಖ್ಯೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗುತ್ತಿದೆ; ಆದರೂ ಇನ್ನೂ ಸಾಕಷ್ಟು ಸಂಖ್ಯೆಯ ಕ್ರಿಮಿನಲ್‌ಗಳು ಉಳಿದೇ ಇದ್ದಾರೆ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ವೈಫಲ್ಯವನ್ನೂ ಸಾರುತ್ತಿದೆ ಅಲ್ಲವೆ? ತ್ವರಿತ ವಿಚಾರಣೆ, ಶೀಘ್ರ ನ್ಯಾಯದಾನ ಸಾಧ್ಯವಾಗುವವರೆಗೂ ಇಂಥ ಎನ್‌ಕೌಂಟರ್ ಶಿಕ್ಷೆಗಳ ಪರ ಸಾರ್ವಜನಿಕರ ಒಲವು ಇದ್ದೇ ಇರುತ್ತದೆ.