ಇಡೀ ಮಾನವ ಕುಲಕ್ಕೆ ಕಂಟಕವಾಗುತ್ತಿರುವ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಬಹಳಷ್ಟು ವೈದ್ಯರು ತಮ್ಮ ಕುಟುಂಬ, ಪ್ರೀತಿ ಪಾತ್ರರನ್ನು ತೊರೆದು ನಾಲ್ಕು ತಿಂಗಳಿಂದ ರೋಗಿಗಳ ಆರೈಕೆಯಲ್ಲಿ ಟೊಂಕ ಕಟ್ಟಿ ನಿಂತಿದ್ದಾರೆ. ಭಯಗ್ರಸ್ಥ ಸೋಂಕಿತರಲ್ಲಿ ಧೈರ್ಯ ತುಂಬಿ, ಆತ್ಮಸ್ಥೈರ್ಯವನ್ನೇ ಮದ್ದಾಗಿಸುತ್ತಿದ್ದಾರೆ. ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಕಾಲಿಟ್ಟಿರೆ ಇವರ ಮನದಲ್ಲಿ ಸಾರ್ಥಕ್ಯದ ಭಾವ. ಸ್ವತಃ ಸೋಂಕಿಗೆ ತೆರೆದುಕೊಳ್ಳುವ ಅಪಾಯವಿದ್ದರೂ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಸೇವಾ ಮನೋಭಾವ, ಕಾರ್ಯತತ್ವರತೆ ನಾಡಿನ ಎಲ್ಲವೈದ್ಯ ಸಮೂಹಕ್ಕೆ ಸ್ಫೂರ್ತಿಯಾಗಲಿ…
ಟೆಲಿ ಮೆಡಿಸಿನ್ ಮಾರ್ಗದರ್ಶನ
ವೈದ್ಯರಿಗೂ ಸ್ವಲ್ಪ ಆತಂಕ ಇರುವುದು ನಿಜ. ಮನೆಯಲ್ಲಿ ವೃದ್ಧ ತಂದೆ- ತಾಯಿ ಇದ್ದರೆ ಪ್ರತ್ಯೇಕವಾಗಿರುವುದು, ಮನೆಗೆ ಹೋಗದೆ ಆಸ್ಪತ್ರೆಯಲ್ಲೇ ಪ್ರತ್ಯೇಕ ಕೋಣೆಯಲ್ಲಿ ಇರುವುದು ಮೊದಲಾದ ಕ್ರಮಗಳನ್ನು ವೈದ್ಯರು ಅನುಸರಿಸಬಹುದು. ವೈದ್ಯರಿಗೆ ಪಿಪಿಇ ಕಿಟ್, ಎನ್-95 ಮಾಸ್ಕ್ ನೀಡುವುದೂ ಸೇರಿದಂತೆ ಸುರಕ್ಷತೆ ಒದಗಿಸುವಲ್ಲಿ ಆಸ್ಪತ್ರೆಗಳು ಚೌಕಾಶಿ ಮಾಡಬಾರದು. ಜತೆಗೆ ಪ್ರೋತ್ಸಾಹ ನೀಡಬೇಕು. ಇನ್ನೂ ಕೆಲ ವೈದ್ಯರಿಗೆ ಟೆಲಿ ಮೆಡಿಸಿನ್ ಮೂಲಕ ಮಾರ್ಗದರ್ಶನ ಮಾಡುವ ಸೌಲಭ್ಯ ಕಲ್ಪಿಸಬಹುದು. ಈಗ ರೋಗಿಗಳಿಗೆ ಸೋಂಕಿಗಿಂತ ಭಯ, ಗಾಬರಿಯಿಂದಲೇ ಮಾನಸಿಕ ಒತ್ತಡ ಹೆಚ್ಚಾಗಿ ಹೃದಯ, ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
– ಡಾ. ಸಿ.ಎನ್.ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ, ಬೆಂಗಳೂರು
ಗುಣಮುಖರಾದಾಗ ಮನಸ್ಸಿಗೆ ನೆಮ್ಮದಿ
ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುವುದು ವೈದ್ಯ ವೃತ್ತಿಯ ವಿಶೇಷ ಅವಕಾಶ. ನಾನು ಇಂಥ ಸೇವೆಯಲ್ಲಿ ಭಾಗಿಯಾಗಿದ್ದೇನೆ ಎನ್ನುವ ತೃಪ್ತಿಯೇ ನನಗೆ ಆತ್ಮವಿಶ್ವಾಸ ನೀಡುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಘಟಕ ಆರಂಭಿಸಿದಾಗ ಬೆರಳೆಣಿಕೆಯಷ್ಟು ರೋಗಿಗಳಿದ್ದರು. ರೋಗಿಗಳ ಸಂಖ್ಯೆ ಹೆಚ್ಚಾದಂತೆ ಹೊಸ ಸವಾಲುಗಳು ಎದುರಾದವು. ಸದಾ ಪಿಪಿಇ ಕಿಟ್ ಧರಿಸಿ ಚಿಕಿತ್ಸೆ ನೀಡುವುದು ಹೊಸ ಅನುಭವ. ಈವರೆಗೆ 310 ಜನರಿಗೆ ಚಿಕಿತ್ಸೆ ನೀಡಿದ್ದೇನೆ. ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳು ಆರೋಗ್ಯವಂತರಾಗಿ ಮನೆಗೆ ಮರಳುವಾಗ ನಮಸ್ಕಾರ ಮಾಡಿದಾಗ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳಲು ಪತ್ನಿ, ಮಕ್ಕಳ ಪ್ರೋತ್ಸಾಹವೇ ಕಾರಣ.
-ಡಾ.ಚಂದ್ರಕಾಂತ ಜವಳಿ, ಕೋವಿಡ್ ಚಿಕಿತ್ಸಾ ತಂಡದ ಮುಖ್ಯಸ್ಥ, ಜಿಲ್ಲಾಸ್ಪತ್ರೆ, ಬಾಗಲಕೋಟೆ
ಒಂದು ದಿನವೂ ಮನೆಗೆ ಹೋಗಿಲ್ಲ
ಕೋವಿಡ್ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಅತಿಥಿಗೃಹದಲ್ಲೇ ನನ್ನ ವಾಸ. ಮನೆ, ಮಗು, ಪತ್ನಿ, ತಂದೆ, ತಾಯಿ ಎಲ್ಲರಿಂದ ದೂರವಿದ್ದೇನೆ. 5 ವರ್ಷದ ಮಗುವಿದ್ದು, 3 ತಿಂಗಳಿನಿಂದ ಮಗು ಜತೆ ಫೋನ್ನಲ್ಲೇ ಸಂಭಾಷಣೆ, ಎತ್ತಿ ಮುದ್ದಾಡುವುದಕ್ಕೂ ಆಗುತ್ತಿಲ್ಲ. ಪತ್ನಿಯೂ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆ. ಮನೆಯವರೊಂದಿಗೆ ನೇರ ಸಂಪರ್ಕವನ್ನೇ ಕಳೆದುಕೊಂಡಿದ್ದೇನೆ. ನಿತ್ಯ ಕುಟುಂಬ ಜತೆ ಇರಬೇಕೆಂದು ಬಯಸಿದರೆ ಕೋವಿಡ್ಗೆ ಟ್ರೀಟ್ಮೆಂಟ್ ನೀಡಲು ಸಾಧ್ಯವಿಲ್ಲ. 2 ತಿಂಗಳಿಂದ ಐಸಿಯು ವಾರ್ಡ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. 3 ತಿಂಗಳಲ್ಲಿ 800 ಮಂದಿಗೆ ಚಿಕಿತ್ಸೆ ನೀಡಿದ್ದೇನೆ. ರೋಗಿಗಳ ಸೇವೆ ಮಾಡುವುದು ನಮ್ಮ ಧರ್ಮ, ಕರ್ತವ್ಯ.
– ಡಾ.ಶರತ್ ಬಾಬು, ಶ್ವಾಸಕೋಶ ತಜ್ಞ, ವೆನ್ಲಾಕ್ ಕೋವಿಡ್ ಆಸ್ಪತ್ರೆ, ಮಂಗಳೂರು
ಮನೋಸ್ಥೈರ್ಯ ಬೆಳೆಸಿಕೊಳ್ಳಿ
ಕೊರೊನಾಗೆ ಯಾರೂ ಹೆದರುವ, ಭಯ ಪಡುವ ಅವಶ್ಯಕತೆ ಇಲ್ಲ. ಯಾರೇ ಇರಲಿ ಮೊದಲು ನಮ್ಮ ಮನೋಸ್ಥೈರ್ಯ ಹೆಚ್ಚಿಸಿಕೊಂಡರೆ ಸಾಕು. ಈ ಮೊದಲು ಎಲ್ಲ ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ನೀಡುತ್ತಿದ್ದೆವೋ ಅದೇ ರೀತಿ ಟ್ರೀಟ್ಮೆಂಟ್ ಕೊಡುತ್ತಿದ್ದೇವೆ. ಕೊರೊನಾ ವೈರಸ್ ಪೀಡಿತ, ಕೊರೊನೇತರ ರೋಗಿ ಎಂಬುದಿಲ್ಲ. ಆದರೆ, ನಾವು ಮತ್ತು ರೋಗಿ ಒಂದಿಷ್ಟು ವೈಯಕ್ತಿಕ ಕಾಳಜಿ ತೆಗೆದುಕೊಳ್ಳಬೇಕು. ಕೆಲವು ಆಕಸ್ಮಿಕ ತಪ್ಪುಗಳಾಗುವುದು ಸಹಜ. ಅದಕ್ಕೆ ಹೆದರಿಕೆ, ಭಯ ಇಟ್ಟುಕೊಳ್ಳಬಾರದು. ಆತ್ಮವಿಶ್ವಾಸ, ಆತ್ಮಸ್ಥೈೖರ್ಯ ಹೆಚ್ಚಿಸಿಕೊಂಡರೆ ಶೇ.60-70 ರೋಗ ವಾಸಿಯಾದಂತೆ. ಕಿಮ್ಸ್ನಲ್ಲಿ ಸುಮಾರು 400 ಸೋಂಕಿತರಿಗೆ ಚಿಕಿತ್ಸೆ ನೀಡಿದ್ದೇವೆ. ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಗಳನ್ನು ಬದುಕಿಸಿದ ಖುಷಿ, ನೆಮ್ಮದಿ ಇದೆ.
– ಡಾ. ಶೈಲೇಂದ್ರ ಡಿ.ಎಸ್., ಕೋವಿಡ್ ಚಿಕಿತ್ಸಾ ವಿಭಾಗದ ವೈದ್ಯರು, ಕಿಮ್ಸ್, ಹುಬ್ಬಳ್ಳಿ
ಹೊಸ ಹುಮ್ಮಸ್ಸು ತುಂಬಿದೆ ಕೊರೊನಾ
ಕೊರೊನಾ ನಮ್ಮಲ್ಲಿ ಹೊಸ ಹುಮ್ಮಸ್ಸು, ಆಲೋಚನೆಗೆ ಕಾರಣವಾಗಿದೆ. ಕೊರೊನಾ ಸೋಂಕು ಪೀಡಿತ ವ್ಯಕ್ತಿಯ ಜತೆ ಖುಷಿಯಾಗಿ ನಿತ್ಯ ಒಡನಾಟ ಇಟ್ಟುಕೊಂಡು ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದ ಕಾರಣಕ್ಕೆ ಇಂದು 100 ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದಾರೆ. ಸಾರ್ವಜನಿಕರು ಆರೋಗ್ಯ ಸೇತು ಆ್ಯಪ್ನ ನಿಯಮ ಅಳವಡಿಸಿಕೊಂಡಲ್ಲಿ ನೆಮ್ಮದಿಯಾಗಿ ಇರಬಹುದು.
-ಡಾ.ವಿಶ್ವನಾಥ ಸಾಲಿಮಠ, ಕೋವಿಡ್ ಆಸ್ಪತ್ರೆ, ಹಾವೇರಿ
ಧೈರ್ಯದಿಂದ ನಿಭಾಯಿಸೋಣ
ಮಾ.15 ರಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ವೈದ್ಯರಿಗೆ ಪಿಪಿಇ ಕಿಟ್ ನೀಡಲಾಗಿದೆ. ಇದರೊಂದಿಗೆ ಆಗಾಗೆ ಕೈ ತೊಳೆಯುವ, ಸದಾ ಮಾಸ್ಕ್ ಧರಿಸುವ ಮುನ್ನೆಚ್ಚರಿಕೆ ವಹಿಸಿರಬೇಕು. ಕೆಲ ಸಂದರ್ಭಗಳಲ್ಲಿ ವೈದ್ಯರೊಬ್ಬರೇ ಹಲವಾರು ರೋಗಿಗಳನ್ನು ನಿರ್ವಹಿಸಬೇಕಾಗುತ್ತದೆ. ಪೀಡಿಯಾಟ್ರಿಶಿಯನ್ ಆಗಿ ಸೋಂಕಿಗೊಳಗಾದ ಮಕ್ಕಳ ಆರೈಕೆ ಮಾಡುತ್ತಿದ್ದೇನೆ. ಕ್ವಾರ್ಟಸ್ನಲ್ಲಿ ಕುಟುಂಬದೊಂದಿಗೆ ಇದ್ದೇನೆ. ಪ್ರತಿ ದಿನ ಮನೆಗೆ ಹೋದ ಕೂಡಲೇ ಬಟ್ಟೆ ತೊಳೆಯಲು ಹಾಕುತ್ತೇನೆ. ಸ್ನಾನ ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳುತ್ತೇನೆ. ಎಲ್ಲ ವೈದ್ಯರು ಹೀಗೆಯೇ ಎಚ್ಚರಿಕೆ ತೆಗೆದುಕೊಳ್ಳಬೇಕು. ಈ ಸಂದರ್ಭದಲ್ಲಿ ಸೇವೆ ಮಾಡುವುದು ವೈದ್ಯರ ಕರ್ತವ್ಯ.
– ಡಾ. ಲಕ್ಷ್ಮಿಪತಿ, ನೋಡಲ್ ಅಧಿಕಾರಿ, ಕೆ.ಸಿ.ಜನರಲ್ ಆಸ್ಪತ್ರೆ, ಬೆಂಗಳೂರು
ಹೋರಾಡಲೇಬೇಕು
ಯುದ್ಧ ಎದುರಾದಾಗ ಯೋಧರು ಹೋರಾಡುತ್ತಾರೆಯೇ ಹೊರತು ಮನೆಗೆ ವಾಪಸ್ಸಾಗುವುದಿಲ್ಲ. ಹಾಗೆಯೇ, ವೈದ್ಯರೂ ರೋಗ ನಿವಾರಣೆಗೆ ಶ್ರಮಿಸಬೇಕು. ದಿನಕ್ಕೆ 500 ರೋಗಿಗಳ ತಪಾಸಣೆ ಮಾಡಲಾಗುತ್ತದೆ. ಅಪ್ಪ, ಅಮ್ಮ ಹಾಗೂ ಅಣ್ಣ ಮೊದಲು ಭಯಪಟ್ಟಿದ್ದರು. ಆದರೆ, ನಂತರ ಅವರಿಗೆ ಮನವರಿಕೆ ಮಾಡಿದೆ. ವೃತ್ತಿಯಲ್ಲಿ ಸವಾಲು ಸ್ವೀಕರಿಸಬೇಕು.
– ಡಾ. ಐಶ್ವರ್ಯ, ಹೌಸ್ ಸರ್ಜನ್, ಇಎಸ್ಐ ಆಸ್ಪತ್ರೆ, ಬೆಂಗಳೂರು
ಎಚ್ಚರಿಕೆಯಿಂದಿರಬೇಕು
ಸೋಂಕಿತರು ಮೃತಪಟ್ಟರೆ ಅಂತ್ಯಕ್ರಿಯೆ ನಡೆಸುವ ಕುರಿತು ತಿಳಿಹೇಳುವ ಕೆಲಸವನ್ನು 4 ತಿಂಗಳಿಂದ ಒಂದು ದಿನವೂ ರಜೆ ಇಲ್ಲದೆ ಮಾಡಿಕೊಂಡು ಬರುತ್ತಿದ್ದೇವೆ. ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ವೈದ್ಯ ವೃತ್ತಿಗೆ ಕುಟುಂಬಸ್ಥರೂ ಸಾಥ್ ನೀಡಿದ್ದಾರೆ. ಸ್ಮಾರ್ಟ್ ವೇ ಆಫ್ ವರ್ಕಿಂಗ್ ಇರಬೇಕು. ಎಚ್ಚರಿಕೆಯಿಂದಿರಬೇಕು. ಕೋವಿಡ್ ಕುರಿತು ಮುಂಜಾಗೃತೆ ಇರಲಿ, ಭಯ, ನಿರ್ಲಕ್ಷ ಬೇಡ.
– ಡಾ.ಮಹೇಶ್ ತೊಂಡಾರೆ, ನೋಡಲ್ ಅಧಿಕಾರಿ, ಬೀದರ್
ಸೇವೆಯ ಆತ್ಮತೃಪ್ತಿ
ಕಾಯಿಲೆಗಳ ವಿರುದ್ಧ ಹೋರಾಡಬೇಕಿರುವುದು ವೈದ್ಯರ ಕರ್ತವ್ಯ. ಕೋವಿಡ್ ಸೋಂಕಿತರು ಗುಣಮುಖರಾದಾಗ ಕೆಲಸ ಮಾಡಿದ ತೃಪ್ತಿ ದೊರೆಯುತ್ತದೆ. ಚಿಕಿತ್ಸೆ ನೀಡುವ ಸಂದರ್ಭ ಸರಕಾರದ ಎಲ್ಲ ಸೂಚನೆ ಪಾಲಿಸುವುದು ಕಡ್ಡಾಯ. ವೈದ್ಯರಿಗೆ ತುಸು ಹೆಚ್ಚೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದರೆ ಧೈರ್ಯದಿಂದ ಈ ಸೋಂಕಿನ ವಿರುದ್ಧ ಹೋರಾಡಬೇಕು.
– ಡಾ.ಅಜೀಜ್ ವೈದ್ಯ, ಕೊಡಗು ಜಿಲ್ಲಾಸ್ಪತ್ರೆ
ನರ್ಸ್, ಡಿ ದರ್ಜೆ ನೌಕರರು ಬೆನ್ನೆಲುಬು
ಇದು ಮಾನವೀಯತೆ ತೋರಿ ವೃತ್ತಿ ಸಾರ್ಥಕತೆ ಕಂಡುಕೊಳ್ಳುವ ಸಮಯ. ಎಲ್ಲ ಸುರಕ್ಷತಾ ಕ್ರಮ ತೆಗೆದುಕೊಂಡು ಇದುವರೆಗೂ 130 ಸೋಂಕಿತರಿಗೆ ಚಿಕಿತ್ಸೆ ನೀಡಿದ್ದೇನೆ. ತೀಕ್ಷ್ಣವಾದ ಮಾನಿಟರಿಂಗ್, ಎಲ್ಲ ವೈದ್ಯರ ಒಗ್ಗಟ್ಟಿನ ಶ್ರಮ ಯಶಸ್ಸಿನ ಗುಟ್ಟು. ಸ್ಟ್ಯಾಂಡರ್ಡ್ ಆಪರೇಟಿಂಗ್ ಸಿಸ್ಟಮ್ ಅನುಸರಿಸಿದ್ದು, ಆ್ಯಪ್ ಮೂಲಕ ಕೊಲಂಬಿಯಾ ಆಸ್ಪತ್ರೆ ತಜ್ಞರ ಸಹಕಾರ ಪಡೆದುಕೊಳ್ಳುತ್ತಿರುವುದು ಹೆಚ್ಚು ಅನುಕೂಲವಾಗಿದೆ. ಪ್ರತಿದಿನ ಎಲ್ಲ ವೈದ್ಯರು ಸಂವಾದ ನಡೆಸುವುದಲ್ಲದೆ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ತಜ್ಞ ವೈದ್ಯರಿಂದ ಮಧ್ಯರಾತ್ರಿಯಲ್ಲೂ ಸಮಯಕ್ಕೆ ತಕ್ಕಂತೆ ಸಲಹೆ ತೆಗೆದುಕೊಳ್ಳುತ್ತಿದ್ದೇವೆ. ಸ್ಟಾಫ್ ನರ್ಸ್ಗಳು, ಡಿ ದರ್ಜೆ ನೌಕರರು ನಮ್ಮ ಬೆನ್ನೆಲುಬು. ಕುಟುಂಬದವರ ಪ್ರೋತ್ಸಾಹ, ಸಹಕಾರದಿಂದ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ.
-ಡಾ.ಮೋಹನ್ಕುಮಾರ್, ಜಿಲ್ಲಾಸರ್ಜನ್, ಚಿಕ್ಕಮಗಳೂರು
ಮಾನವೀಯತೆ ಮರೆಯಬೇಡಿ
ರೋಗಿಗಳ ಸೇವೆ ಮಾಡುವುದು ವೈದ್ಯರ ಕರ್ತವ್ಯ. ವೈದ್ಯರು ಕೆಲಸ ಆರಂಭಿಸುವಾಗ ಮಾನವೀಯತೆ ಕಾಪಾಡುವ ಪ್ರತಿಜ್ಞೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಮಾನವೀಯತೆ ಮರೆಯಬಾರದು. 4 ತಿಂಗಳಿಂದ ಕೋವಿಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಸರಿಯಾದ ಮುಂಜಾಗ್ರತೆ ವಹಿಸಿಕೊಂಡು ಕಾರ್ಯನಿರ್ವಹಿಸಿದರೆ ಏನೂ ಆಗುವುದಿಲ್ಲ. ನನ್ನೊಂದಿಗೆ ಅನೇಕ ವೈದ್ಯರು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಲಕ್ಷ ಣ ರಹಿತ ರೋಗಿಗಳಿಗೆ ಮನೆಯಲ್ಲೇ ಆರೈಕೆ ಮಾಡಬಹುದು. ಟೆಲಿ ಕನ್ಸಲ್ಟೇಷನ್ ಮೂಲಕ ಸಾಮಾನ್ಯ ರೋಗಿಗಳಿಗೆ ಮಾರ್ಗದರ್ಶನ ಮಾಡಬಹುದು. ನಾನು ಅನೇಕರಿಗೆ ಈ ರೀತಿ ಮೊಬೈಲ್ನಲ್ಲೇ ಮಾರ್ಗದರ್ಶನ ಮಾಡುತ್ತಿದ್ದೇನೆ.
– ಡಾ. ಅನ್ಸಾರಿ ಅಹ್ಮದ್, ವೈದ್ಯಕೀಯ ಅಧೀಕ್ಷಕ, ಇಂದಿರಾನಗರ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಬೆಂಗಳೂರು
ಕಿಟ್ ತೆಗೆಯುವಾಗ ಇರಲಿ ಎಚ್ಚರಿಕೆ
ಕೊರೊನಾ ವೈರಸ್ ಸೋಂಕು ಹೇಗೆ ಹರಡುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಏನೂ ಆಗುವುದಿಲ್ಲ ಎಂದು ವೈದ್ಯರಿಗೆ ಗೊತ್ತಿರುತ್ತದೆ. ಹೀಗಾಗಿ, ಆತಂಕಪಡಬೇಕಿಲ್ಲ. ಜನವರಿಯಿಂದಲೇ ಕೋವಿಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಪತ್ನಿ ಕೂಡ ವೈದ್ಯೆಯಾಗಿದ್ದು, ನಾನೂ ಬರುತ್ತೇನೆ ಎಂದು ಹೇಳುತ್ತಿದ್ದಾಳೆ. ಪ್ರತಿ ದಿನ ಪಿಪಿಇ ಕಿಟ್ ಹಾಕಿಕೊಂಡು ಕೆಲಸ ಮಾಡುವುದರಿಂದ ಸೋಂಕು ತಗಲುವುದಿಲ್ಲ. ಆದರೆ, ಕಿಟ್ ತೆಗೆಯುವಾಗ ಬಹಳ ಎಚ್ಚರ ವಹಿಸಬೇಕು. ಮನೆಗೆ ಹೋದ ಕೂಡಲೇ ಶರೀರವನ್ನು ಸ್ವಚ್ಛ ಮಾಡಿಕೊಂಡರೆ ಸಾಕು. ನಾವು 15 ದಿನ ಕೆಲಸ ಮಾಡಿ ನಂತರ ಐದು ದಿನ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತೇವೆ.
– ಡಾ. ಯ.ಜಿ.ದೀಪಕ್, ನೋಡಲ್ ಅಧಿಕಾರಿ, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ಬೆಂಗಳೂರು
ಕೊರೊನಾ ವಿರುದ್ಧ ಗೆಲ್ಲೋಣ
ನಿಮ್ಮೊಂದಿಗೆ ನಾವು ವೈದ್ಯರಿದ್ದೇವೆ ಎಂಬ ಭಾವನೆಯನ್ನು ಜನರಿಗೆ ಮೂಡಿಸಬೇಕು. ಇದೊಂದು ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಕಾಯಿಲೆ ಎಂಬಂತೆ ಅವರಿಗೆ ತಿಳಿವಳಿಕೆ ನೀಡಿ ಚಿಕಿತ್ಸೆ ಕೊಡಿಸಬೇಕು. ಅದು ಬಿಟ್ಟು ನಾವೇ ಬಹಳಷ್ಟು ಹೆದರಿಕೊಂಡರೆ ಜನರೂ ಹೆದರುತ್ತಾರೆ. ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಿದರೆ ಅರ್ಧ ರೋಗ ಗೆದ್ದಂತೆ. ಮಂಡ್ಯ ಕೋವಿಡ್ ಆಸ್ಪತ್ರೆಯಲ್ಲಿ ನಮ್ಮ ಸೇವಾಪರತೆ ನೋಡಿ ಇತರ ವೈದ್ಯರು, ನರ್ಸ್ಗಳು, ಸ್ಟಾಪ್ಗಳು, ಸೆಕ್ಯೂರಿಟಿ ಗಾರ್ಡ್ಗಳು, ಪೌರಕಾರ್ಮಿಕರು, ಡಾಟಾ ಎಂಟ್ರಿ ಆಪರೇಟರ್ಸ್ ತುಂಬಾ ಪ್ರೇರೇಪಿತರಾಗಿದ್ದಾರೆ ಎಂದು ಹೇಳುತ್ತಾರೆ. ನನ್ನ ಕುಟುಂಬವನ್ನು ಊರಿಗೆ ಕಳುಹಿಸಿದ್ದೇನೆ.
– ಡಾ. ಜಿ.ಶಿವಕುಮಾರ್, ಪ್ರಭಾರ ವೈದ್ಯ ಅಧೀಕ್ಷಕ, ಮಿಮ್ಸ್, ಮಂಡ್ಯ
ನಮಗೆ ದಣಿವೆಂಬ ಮಾತೇ ಇಲ್ಲ
ನಾಲ್ಕು ತಿಂಗಳಿಂದ ರಜೆ ಪಡೆಯದೇ ಸೇವೆ ಸಲ್ಲಿಸುತ್ತಿರುವೆ. ವೈದ್ಯರಲ್ಲಿಯೂ ಸೋಂಕು ತಗಲುವ ಆತಂಕ ಇದ್ದೇ ಇದೆ. ಆದರೆ, ಹಾಗೆಂದು ವಿಧಿಜ್ಞಾನವನ್ನು ಅರಿತಿರುವ ನಾವು ಆತಂಕಪಟ್ಟು ಕೈ ಚೆಲ್ಲುವುದು ಸರಿಯಲ್ಲ. ದಣಿವಾಯಿತೆಂದು ಕೂಡುವ ಕಾಲವೇ ಅಲ್ಲ. ನಮ್ಮ ತಾಯಿ 67 ವರ್ಷದವದ್ದು, ಅವರನ್ನು ನಾಲ್ಕು ತಿಂಗಳಿಂದ ಖುದ್ದಾಗಿ ಭೇಟಿಯಾಗಿಲ್ಲ. ಕುಟುಂಬದವರನ್ನೂ ದೂರದಿಂದಲೇ ಮಾತಾಡಿಸಿದ್ದೇನೆ.
– ಡಾ. ಅರುಣ್ ಮಸ್ಕಿ, ನೋಡಲ್ ವೈದ್ಯಾಧಿಕಾರಿ, ರಾಯಚೂರು
ಭಯ ಬಿಟ್ಹಾಕಿ, ಚಿಕಿತ್ಸೆ ನೀಡಿ
ವೈದ್ಯೋ ನಾರಾಯಣೋ ಹರಿ ಎಂಬ ಮಾತು ಜನಜನಿತ. ಸಮಾಜವು ವೈದ್ಯರ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಇದು ಧ್ಯೋತಕ. ಈ ಕೊರೊನಾ ಸೋಂಕಿನ ಕ್ಲಿಷ್ಟಕರ ಸನ್ನಿವೇಶದಲ್ಲಿ ವೈದ್ಯರು ಸಲ್ಲಿಸುವ ಸೇವೆ ಮಾತ್ರ ಚಿರಸ್ಥಾಯಿಯಾಗುತ್ತದೆ. ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡುವಂತೆ ನಡೆದುಕೊಳ್ಳಬೇಕಾದ ಹೊಣೆಗಾರಿಕೆ ವೈದ್ಯರದ್ದಾಗಿದೆ. ವಿಶ್ವಾಸ ಮೂಡಿಸುವ ಮಾರ್ಗ ಅನುಸರಿಸಿದ್ದರಿಂದಲೇ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಶೇ.99ರಷ್ಟು ಸೋಂಕಿತರು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಂಡಿದ್ದಾರೆ. ಸೋಂಕಿತರ ಚಿಕಿತ್ಸೆಗೆ ಸ್ವಯಂ ಪ್ರೇರಿತರಾಗಿ ಮುಂದೆ ಬರುವ ವೈದ್ಯರಿಗೆ ನಮ್ಮಲ್ಲಿ ಮುಕ್ತ ಅವಕಾಶವಿದೆ.
– ಡಾ. ಗಜಾನನ ನಾಯಕ, ನಿರ್ದೇಶಕರು, ಮೆಡಿಕಲ್ ಕಾಲೇಜು, ಕಾರವಾರ
ರೋಗಿಗಳ ಸೇವೆ ಪವಿತ್ರ ಕಾಯಕ
ಸಮಾನ ಮನಸ್ಕ ತಜ್ಞ ವೈದ್ಯರ ತಂಡದೊಂದಿಗೆ ಬಹುತೇಕ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಕಲಬುರಗಿಯ ಜಿಮ್ಸ್ ಹಾಗೂ ಇಎಸ್ಐಸಿ ಆಸ್ಪತ್ರೆಯಲ್ಲಿ ಆರಂಭಿಸಿರುವ ಕೋವಿಡ್ ಆಸ್ಪತ್ರೆಗೆ ಜಿಲ್ಲಾಡಳಿತದ ತಜ್ಞ ವೈದ್ಯರ ಸಮಿತಿಯ ಕೋರಿಕೆ ಮೇರೆಗೆ ಭೇಟಿ ಕೊಟ್ಟು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಹಾಗೂ ಅಗತ್ಯ ಸಮಯೋಚಿತ ಸಲಹೆ ನೀಡುತ್ತೇವೆ. ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸವಾಗಿದ್ದೇನೆ. ಸೋಂಕು ತಗಲುವ ಅಪಾಯ ಹೆಚ್ಚಿದ್ದರೂ ನಾವು ಪವಿತ್ರ ಕಾಯಕವನ್ನು ಮಾಡಲೇಬೇಕು.
– ಡಾ. ಮಂಜುನಾಥ ದೋಶೆಟ್ಟಿ, ಚಿರಾಯು ಆಸ್ಪತ್ರೆ ನಿರ್ದೇಶಕ, ಕಲಬುರಗಿ
‘ಪಾಸಿಟಿವ್’ ಆಗಿರಬೇಕು
ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಟ್ಟ ದಿನದಿಂದಲೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಖುದ್ದು ಕ್ವಾರಂಟೈನ್ ಸೆಂಟರ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜತೆಗೆ ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ. ‘ಸಕಾರಾತ್ಮಕ’ ಆಲೋಚನೆ ಮಾಡುವುದರಿಂದ ನಮ್ಮಲ್ಲಿ ಪಾಸಿಟಿವ್ ಎನರ್ಜಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಮನೋ ಸ್ಥೈರ್ಯ ಇದ್ದರೆ ಏನನ್ನು ಬೇಕಾದರೂ ಜಯಿಸಬಹುದು ಎಂಬುದು ನಮ್ಮೆಲ್ಲರ ನಂಬಿಕೆ.
-ಡಾ. ಮಂಜುಳಾದೇವಿ, ಜಿಲ್ಲಾ ಆರೋಗ್ಯಾಧಿಕಾರಿ, ಬೆಂಗಳೂರು ಗ್ರಾ.
ಧೈರ್ಯವೇ ರೋಗ ನಿರೋಧಕ
ಪಿಪಿಇ ಕಿಟ್ ಧರಿಸಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಎಷ್ಟೋ ಸಲ ದೇಹ ಸುಸ್ತಾಗಿ ಹೋಗುತ್ತದೆ. ಹಿರಿಯ, ಕಿರಿಯ ವೈದ್ಯರು ಪಾಳಿ ಪ್ರಕಾರ ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಮನೆಗೆ ಹೋದರೂ ಪ್ರತ್ಯೇಕ ಕೋಣೆಯಲ್ಲಿ ಇರುತ್ತೇವೆ. ತಿಂಗಳುಗಳ ಕಾಲ ಸ್ನೇಹಿತರು, ಬಂಧುಗಳನ್ನು ಬಿಟ್ಟು ಇರುವುದು ಬಹಳ ಕಷ್ಟ. ಸೋಂಕಿತರಿಗೆ ನಿಮ್ಮ ಜತೆ ನಾವಿದ್ದೇವೆ, ಧೈರ್ಯವಾಗಿರಿ ಎನ್ನುವ ಒಂದು ಮಾತು ಸಾಕು. ಅದುವೇ ಅವರ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಸುಮಾರು 440ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ. ಪ್ರತಿ ವೈದ್ಯರು 15 ದಿನ ಕೆಲಸ ಮಾಡಿ 15 ದಿನ ಕ್ವಾರಂಟೈನ್ ಆಗುತ್ತಾರೆ.
– ಡಾ. ಸಿದ್ದು ದಡೂತಿ, ಬಿಮ್ಸ್, ಬೆಳಗಾವಿ
ಆಸ್ಪತ್ರೆಯೇ ಸುರಕ್ಷಿತ ವಲಯ
ಪ್ರಸ್ತುತ ಸನ್ನಿವೇಶದಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಕೋವಿಡ್-19 ಆಸ್ಪತ್ರೆಯೇ ಸುರಕ್ಷಿತ ವಲಯ. ಆರೋಗ್ಯ ಸುರಕ್ಷತೆ, ಮನಃಶಾಂತಿ, ವ್ಯಾಯಾಮ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸುವುದು ಕೊರೊನಾ ವಾರಿಯರ್ಸ್ಗಳಾದ ಪ್ರತಿಯೊಬ್ಬರ ಜವಾಬ್ದಾರಿ. ಕೋವಿಡ್ ಆಸ್ಪತ್ರೆಯ 10 ವೈದ್ಯರು, ನರ್ಸ್ಗಳಿಗೂ ಸೋಂಕು ತಗುಲಿದ್ದರೂ, ಯಾರು ವಿಚಲಿತರಾಗದಂತೆ ಸಿಬ್ಬಂದಿಗೆ ಧೈರ್ಯ ತುಂಬಲೆಂದೇ ಇರುವ ಪ್ರತ್ಯೇಕ ವಿಭಾಗದ ವೈದ್ಯಾಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡುತ್ತಿರುವ ಕಾರಣ ಪಾಳಿ ಅನ್ವಯ 8ರಿಂದ 13 ಗಂಟೆ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾದೊಂದಿಗೆ ಹೊಂದಿಕೊಂಡು ಬದುಕುವುದು ಅನಿವಾರ್ಯ.
– ಡಾ. ಲಕ್ಷ್ಮೀಶ್ ವಿಶೇಷ ಅಧಿಕಾರಿ, ಜಿಲ್ಲಾಕೋವಿಡ್ ಆಸ್ಪತ್ರೆ, ಹಾಸನ
ಬಲ ನೀಡುವ ಆತ್ಮೀಯತೆ
ಇಡೀ ಜಗತ್ತಿಗೆ ಹರಡಿರುವ ಈ ಸೋಂಕಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ ಚಿಕಿತ್ಸೆ ನೀಡಬೇಕಿದೆ. ವೈದ್ಯರು ಯಾವುದೇ ರೀತಿಯಲ್ಲಿ ಭಯ ಪಡದೇ ಸೋಂಕಿತರನ್ನು ಆತ್ಮೀಯವಾಗಿ ನೋಡಿಕೊಂಡು, ಚಿಕಿತ್ಸೆ ನೀಡಿದರೆ ಬೇಗನೆ ಗುಣಮುಖರಾಗುತ್ತಾರೆ. ಆದ್ದರಿಂದ, ವೈದ್ಯರಿಗೆ ಹೆಚ್ಚಿನ ಜಾಗೃತಿ ಮೂಡಿಸಿ, ನಿಗಾವಹಿಸಲಾಗುತ್ತಿದೆ. ವೈದ್ಯರಿಗೆ ಸೇರಿ ಇತರರಿಗೂ ಯಾವುದೇ ಸಮಸ್ಯೆ ಆಗಬಾರದೆಂದು ಪಿಪಿಇ ಕಟ್, ಮಾಸ್ಕ್, ಸ್ಯಾನಿಟೈಸರ್ ಸೇರಿ ಚಿಕಿತ್ಸೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ. ತಂಡದಲ್ಲಿ ನುರಿತ ವೈದ್ಯರಿದ್ದಾರೆ. ಆಸ್ಪತ್ರೆಯ ಮುಖ್ಯಸ್ಥನಾಗಿ ಚಿಕಿತ್ಸೆ ನೀಡಲ್ಲ. ಕೆಲ ತುರ್ತು ಸಮಯದಲ್ಲಿ ಭಾಗವಹಿಸುತ್ತೇನೆ.
-ಡಾ. ಬಸರೆಡ್ಡಿ, ಕೋವಿಡ್ ಜಿಲ್ಲಾಸ್ಪತ್ರೆ, ಜಿಲ್ಲಾಚಿಕಿತ್ಸಕ, ಬಳ್ಳಾರಿ
ಸೋಂಕಿತರಿಗೆ ಅಭಯ
ನಾನೊಬ್ಬ ವೈದ್ಯನಾಗಿ ಕರ್ತವ್ಯನಿರ್ವಹಿಸಿದ್ದೇನೆ. ಇದು ನನ್ನ ವೃತ್ತಿ ಧರ್ಮವೂ ಆಗಿದ್ದು, ರೋಗಿಗಳನ್ನು ಗುಣಪಡಿಸುವುದು ಮೊದಲ ಆದ್ಯತೆ ಆಗಿದೆ. ಐಸೋಲೇಷನ್ ವಾರ್ಡ್, ಸ್ಯಾರಿ ಕೇಸ್ಗಳನ್ನು ಕೂಡ ಅಟೆಂಡ್ ಮಾಡುತ್ತಾ ಇದ್ದೇನೆ. ನನ್ನ ಟೀಮ್ನಲ್ಲಿ ಡಾ.ಗಿರೀಶ್ ಸೇರಿದಂತೆ ನಾಲ್ಕು ಜನ ಇದ್ದು, ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಈ ತಂಡದಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿ ಮನೆಗೂ ಹೋಗದೇ ಲಾಡ್ಜ್ ನಲ್ಲೇ ಉಳಿದುಕೊಂಡಿದ್ದಾರೆ. ಇದುವರೆಗೆ 200ಕ್ಕೂ ಅಧಿಕ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ. ಮನೆ ಮಂದಿ ಜತೆಗೆ ಫೋನ್ನಲ್ಲೇ ಮಾತನಾಡಿಸುತ್ತಿದ್ದಾರೆ.
– ಡಾ. ಎಸ್. ಸುಭಾಸ್ ಚಂದ್ರ, ಹಿರಿಯ ತಜ್ಞ. ದಾವಣಗೆರೆ
ಇಷ್ಟು ಸಮಯ ಏನೂ ಆಗಿಲ್ಲ, ಇನ್ಯಾಕೆ ಭಯ?
ನಾಲ್ಕು ತಿಂಗಳಿನಿಂದ ಯಾವುದೇ ಭಯವಿಲ್ಲದೇ ಐಸಿಯುನಲ್ಲಿ ಕೊರೊನಾ ಸೋಂಕಿತರನ್ನು ನೋಡಿಕೊಳ್ಳುತ್ತಿದ್ದೇವೆ. ನಾವು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರೂ ಆರೋಗ್ಯದಿಂದ ಇದ್ದೇವೆ ಮತ್ತು ನಮ್ಮ ಮನೆಯವರನ್ನೂ ಸುರಕ್ಷಿತವಾಗಿಟ್ಟಿದ್ದೇವೆ. ಬೇರೆ ಯಾವುದೇ ವೈದ್ಯರಿಗೆ ಪ್ರಾರಂಭದಲ್ಲಿ ಇದ್ದ ಭಯ ಈಗ ಇಲ್ಲ. ಎಲ್ಲರಿಗೂ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಹಾಗಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಕೊರೊನಾ ಬಗ್ಗೆ ಈಗ ಅರಿವು ಮೂಡಿದೆ. ಭಯ ಪಡಬೇಕಾದ ಅಗತ್ಯವಿಲ್ಲ.
-ಡಾ.ಚಂದ್ರಶೇಖರ್ , ತುಮಕೂರು ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು
ಹುರುಪಿನಿಂದ ಎದುರಿಸಬೇಕು
ನಾಲ್ಕು ತಿಂಗಳಿಂದ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ನನ್ನನ್ನು ನಾನು ಬಹಳ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡಿದ್ದೇನೆ. ಪತ್ನಿ ಕೂಡ ವೈದ್ಯೆಯಾದ ಕಾರಣಕ್ಕೆ ಮನೆಯವರನ್ನು ಒಪ್ಪಿಸುವುದು ಕಷ್ಟವಾಗಲಿಲ್ಲ. ನಮ್ಮ ಕೋವಿಡ್ ವಾರ್ಡ್ನಲ್ಲಿ ನಾನು ಸೇರಿದಂತೆ ಐದು ವೈದ್ಯರು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಇದುವರೆಗೆ ಸುಮಾರು 80ಕ್ಕೂ ಹೆಚ್ಚು ಮಂದಿಗೆ ಕೊರೊನಾ ಚಿಕಿತ್ಸೆ ನೀಡಿದ್ದೇನೆ. ವೈದ್ಯರ ತಂಡವೂ ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಸವಾಲನ್ನು ಮತ್ತಷ್ಟು ಹುರುಪಿನಿಂದ ಎದುರಿಸಬೇಕು.
-ಡಾ.ವಿಶ್ವನಾಥರೆಡ್ಡಿ, ಜಿಲ್ಲಾಸ್ಪತ್ರೆ ವೈದ್ಯರು, ಚಿಕ್ಕಬಳ್ಳಾಪುರ
ಕುಟುಂಬದವರಂತೆ ಕಾಣಬೇಕು
ಕೊರೊನಾ ಸೋಂಕಿತರು ಮನುಷ್ಯರೇ. ನಾವು ಮನುಷ್ಯರಾಗಿ ಅವರನ್ನು ಮಾನವೀಯತೆಯಿಂದ ಕಂಡು ಉಪಚರಿಸಿದಾಗಲೇ ನಾವು ವಾಸ್ತವದಲ್ಲಿ ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಸಾರ್ಥಕಪಡಿಸುತ್ತೇವೆ. ನಾನು ಕಳೆದ ನಾಲ್ಕು ತಿಂಗಳಿಂದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ನಮ್ಮದು ಅವಿಭಕ್ತ ಕುಟುಂಬ. ಮನೆ ತುಂಬ ಜನ. ಯಾರಿಂದಲೂ ನನ್ನ ಸೇವೆಗೆ ಅಡ್ಡಿಯಿಲ್ಲ. ಎಲ್ಲರೂ ಪ್ರೋತ್ಸಾಹ ನೀಡುವ ಚಿಲುಮೆಗಳಾಗಿದ್ದಾರೆ. ಹೀಗಾಗಿ ರೋಗಿಗಳನ್ನು ಕುಟುಂಬ ಸದಸ್ಯರಂತೆ ಕಂಡು ಶ್ರದ್ಧೆಯಿಂದ ಕರ್ತವ್ಯ ನಿಭಾಯಿಸುತ್ತಿದ್ದೇನೆ. ನಾವು ಸರಕಾರಿ ವೈದ್ಯರು. ಸರಕಾರದ ಅನ್ನ ಊಟ ಮಾಡುತ್ತಿದ್ದೇವೆ. ಈ ಕಾರಣಕ್ಕೆ ನಾವು ಸರಕಾರ ನಿಯೋಜಿಸಿದ ಕರ್ತವ್ಯವನ್ನು ತ್ರಿಕರಣಪೂರಕವಾಗಿ ನಿಭಾಯಿಸಬೇಕು.
– ಡಾ. ಜಿನತ್ ಮುಶ್ರೀಫ್, ವೈದ್ಯಾಧಿಕಾರಿ, ವಿಜಯಪುರ ನಗರ ಪಿಎಚ್ಸಿ
ಕಷ್ಟ ಎಂದು ಸುಮ್ಮನಿರಲಾದೀತೆ?
ಮಾ.9ರಂದು ಬೆಂಗಳೂರಿನಲ್ಲಿ ಕೋವಿಡ್ ಸಂಬಂಧ ಸಭೆ ನಡೆದಾಗಿನಿಂದ ಶಿವಮೊಗ್ಗದ ಕೋವಿಡ್ ವಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೆ, ಶಿವಮೊಗ್ಗದಲ್ಲಿ ಮೇ 10ರಂದು ಮೊದಲ ಪ್ರಕರಣ ಪತ್ತೆಯಾದಾಗಿನಿಂದ ಕೋವಿಡ್ಗೆ ತುತ್ತಾದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಸೋಂಕು ನಮಗೆ ತಗುಲಿದರೂ ಪರ್ವಾಗಿಲ್ಲ; ಕುಟುಂಬ ಸುರಕ್ಷಿತವಾಗಿರಬೇಕು. ಯಾವುದೇ ಕಾರಣಕ್ಕೂ ಕುಟುಂಬದ ಸದಸ್ಯರಿಗೆ ಇದರಿಂದ ತೊಂದರೆ ಆಗಬಾರದು. ವೈದ್ಯರಿಗೆ ಕ್ವಾರಂಟೈನ್ ಸೌಲಭ್ಯ ಕಲ್ಪಿಸಿದೆ. ಅದಕ್ಕೆ ಆಭಾರಿಯಾಗಿದ್ದೇನೆ. ಸೋಂಕಿತರಿಗೆ ಚಿಕಿತ್ಸೆ ನೀಡುವುದೆಂದರೆ ಕಷ್ಟ ಇದ್ದೇ ಇದೆ. ಹಾಗಂತ ಸುಮ್ಮನಿರಲಾದೀತೆ?
– ಡಾ. ಶೂನ್ಯ ಸಂಪದ, ಫಿಜಿಷಿಯನ್, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ
ನಾವೇ ಮಾದರಿಯಾಗಬೇಕು
ಎಲ್ಲೆಡೆ ಕೊರೊನಾ ವೈರಸ್ ಆವರಿಸಿಕೊಂಡಿದೆ. ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲವರು ಹಿಂಜರಿಯುವಂತಾಗಿದೆ. ಇದರಿಂದ ಹೊರ ಬಂದು ಚಿಕಿತ್ಸೆ ನೀಡಬೇಕಿದೆ. ನಾನು ಕೂಡ ನಿತ್ಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೇನೆ. ನಾವು ಮಾದರಿ ಆಗಬೇಕು. ಕೊರೊನಾ ವೈರಸ್ಗೆ ಎದೆಗೊಟ್ಟು ನಿಂತಿದ್ದೇನೆ. ಇತರೆ ರೋಗಿಗಳಿಗೆ ಯಾವುದೇ ರೀತಿಯಿಂದ ತೊಂದರೆ ಆಗಬಾರದು. ಹೀಗಾಗಿ ನಾವು ಸದಾ ಜೀವ ಉಳಿಸುವಂತಹ ಕೆಲಸ ಮಾಡಬೇಕು. ಇದನ್ನು ಎಲ್ಲರೂ ಮಾಡಲಿ. ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಕರೆಯುವ ಮೀಟಿಂಗ್ಗೆ ಕಡ್ಡಾಯವಾಗಿ ಭಾಗವಹಿಸಿ ಸಲಹೆ ನೀಡುತ್ತೇನೆ.
– ಡಾ.ವೀರೇಶ್ ಜಾಕಾ, ಸಿದ್ದೇಶ್ವರ ಆಶ್ಪತ್ರೆಯ ವೈದ್ಯ
ಕೆಟ್ಟ ಸಂದೇಶ ರವಾನೆ ಬೇಡ
ಕೊರೊನಾ ಸೋಂಕಿತರನ್ನು ಯಾವ ವೈದ್ಯರೂ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಹಾಗೂ ಅಸ್ಪೃಶ್ಯತೆಯಿಂದ ನೋಡಬಾರದು. ಸೋಂಕಿತರನ್ನು ನಮ್ಮಲ್ಲೇ ಒಬ್ಬರಂತೆ, ನಮ್ಮ ಕುಟುಂಬದವರಂತೆ ಕಾಣುವ ಮೂಲಕ ಚಿಕಿತ್ಸೆ ನೀಡಬೇಕು. ಪಿಪಿಇ ಕಿಟ್ ಧರಿಸಿ, ನಮಗೆ ಸಮಾಧಾನ ತರುವಷ್ಟು ಸುರಕ್ಷತೆಯನ್ನೂ ಮಾಡಿಕೊಳ್ಳಬೇಕಾಗಿದೆ. ಚಿಕಿತ್ಸೆಗೆ ಬಂದವರನ್ನು ನಿರ್ಲಕ್ಷ್ಯ ಮಾಡುವುದು, ಅಸ್ಪೃಶ್ಯತೆಯಿಂದ ಕಾಣುವುದು ಮಾಡುವುದರಿಂದಾಗಿ ಎಲ್ಲ ವೈದ್ಯರ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ನಾನು ಈವರೆಗೆ 95 ಮಂದಿಗೆ ಚಿಕಿತ್ಸೆ ನೀಡಿದ್ದೇನೆ.
-ಡಾ.ರಾಧಿಕಾ ವೈದ್ಯೆ, ಎಸ್ಎನ್ಆರ್ ಜಿಲ್ಲಾಸ್ಪತ್ರೆ, ಕೋಲಾರ
ನಾವು ಕೂಡ ಯೋಧರೇ…
ನಾವು ಒಂದು ರೀತಿಯಲ್ಲಿ ಯೋಧರಂತೆ. ಯುದ್ಧ ಸಮಯದಲ್ಲಿ ನಮ್ಮ ಹಿತ, ಕುಟುಂಬದ ಕುರಿತು ಚಿಂತಿಸಲು ಸಮಯ ಇರುವುದಿಲ್ಲ. ಅದೇ ರೀತಿ ಕೋವಿಡ್-19 ವಿರುದ್ಧ ನಾವು ಸಮರ ಸಾರಿರುವಾಗ ವೈದ್ಯರ ಸೇವಾ ಮನೋಭಾವನೆಯೊಂದೇ ಸೋಂಕಿತರನ್ನು ಕಾಪಾಡಬಲ್ಲದು. ನನಗೆ ಕೊರೊನಾದ ಯಾವುದೇ ಹೆದರಿಕೆ ಇಲ್ಲ. ಯಾವ ವೈದ್ಯರಿಗೂ ಯಾವ ರೋಗದ ಹೆದರಿಕೆ ಇರಬಾರದು. ಆದರೆ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಇಲಾಖೆ ಹಾಗೂ ಸರಕಾರ ನೀಡುತ್ತಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವೈದ್ಯರಿಗೆ ಇಂತಹ ಸಂದರ್ಭ ಒಂದು ಸವಾಲಾಗಿದ್ದು, ತಮ್ಮ ವೃತ್ತಿಯ ಸಾರ್ಥಕತೆಯ ಕ್ಷಣವಾಗಿದೆ.
– ಡಾ.ಎಚ್.ಆರ್.ರಾಜೇಶ್ವರಿ ಜಿಲ್ಲಾಸರ್ಜನ್, ಮೈಸೂರು
ಸುರಕ್ಷಿತ ವಿಧಾನ ಅನುಸರಿಸಿ
ಸೋಂಕು ದೃಢಪಟ್ಟರೆ ಖಂಡಿತ ಭಯ ಬೀಳುವ ಅಗತ್ಯವಿಲ್ಲ. ಆರೋಗ್ಯವಾಗಿರುವ ವ್ಯಕ್ತಿಗಳಲ್ಲಿ ಪಾಸಿಟಿವ್ ಕಾಣಿಸಿಕೊಂಡರಂತೂ ಯಾವುದೇ ಅಪಾಯವೂ ಇಲ್ಲ. ಚಾ.ನಗರ ಆಸ್ಪತ್ರೆಯಲ್ಲಿದ್ದ 120 ಪಾಸಿಟಿವ್ ಕೇಸ್ಗಳನ್ನು ನಮ್ಮ ವೈದ್ಯರ ತಂಡ ಪಾಳಿಯಲ್ಲಿ ಸುರಕ್ಷಿತ ವಿಧಾನಗಳನ್ನು ಅನುಸರಿಸಿಕೊಂಡು ತಪಾಸಣೆ, ಚಿಕಿತ್ಸೆ ನೀಡಿದ್ದೇವೆ. ನಾನು ಮನೆಯವರಿಂದಲೂ ದೂರ ಇದ್ದೇನೆ. ಇನ್ನು ಯಾರೇ ಆಗಲಿ ಪಾಸಿಟಿವ್ ಬಂದ ವ್ಯಕ್ತಿಗಳನ್ನು ಕೀಳಾಗಿ ಕಾಣಬಾರದು. ಅವರಿಂದ ಅಂತರ ಕಾಯ್ದುಕೊಂಡರೆ, ಸುರಕ್ಷಿತ ವಿಧಾನವನ್ನು ಅನುಸರಿಸಿಕೊಂಡಿದ್ದರೆ ಭಯ ಬೀಳುವ ಅಗತ್ಯವಿಲ್ಲ ಎನ್ನುತ್ತಾರೆ.
– ಡಾ.ಎಸ್.ಆರ್.ಚಂದ್ರಿಕ್ ಬಾಬು, ಚಾಮರಾಜನಗರ ಜಿಲ್ಲಾಸ್ಪತ್ರೆ