-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಶಾಲೆ, ಹೋಟೆಲ್‌ಗಳಿಂದ ಡಿಮಾಂಡಿಲ್ಲ.
ಸಂತೋಷ್ ಕಾಚಿನಕಟ್ಟೆ ಶಿವಮೊಗ್ಗ.
ರಾಜ್ಯದೆಲ್ಲೆಡೆ ಜನತೆಗೆ ಕ್ಷೀರಾಮೃತ ಉಣಿಸುವ, ರೈತರು ಮತ್ತು ಹೈನುಗಾರಿಕೆ ಪಾಲಿನ ಜೀವಾಳ ಎನಿಸಿದ ರಾಜ್ಯ ಸಹಕಾರ ಹಾಲು ಉತ್ಪಾದಕರ ಒಕ್ಕೂಟ(ಕೆಎಂಎಫ್)ಕ್ಕೂ ಕೊರೊನಾ ಸಂಕಷ್ಟ ತಂದಿಟ್ಟಿದೆ. ರೈತರಿಂದ ಹಾಲನ್ನು ಸಂಗ್ರಹಿಸಿ ಪೇಟೆ, ಪಟ್ಟಣಗಳಲ್ಲಿನ ಗ್ರಾಹಕರಿಗೆ ತಲುಪಿಸುವ ಸೇತುವೆಯಾಗಿ ಕೆಲಸ ಮಾಡುವ ಹಾಲು ಒಕ್ಕೂಟಕ್ಕೆ ಕೊರೊನಾ ಆರ್ಥಿಕ ಪೆಟ್ಟು ನೀಡಿದೆ. ಒಂದೆಡೆ ಹಾಲಿನ ಉತ್ಪಾದನೆ ಹೆಚ್ಚಾದ ಸಂತಸ ಮೂಡಿಸಿದರೆ, ಮತ್ತೊಂದು ಕಡೆ ಉತ್ಪಾದನೆಯಾದ ಹಾಲು ಮಾರಾಟವಾಗದಿರುವ ಬೇಸರ ಆವರಿಸಿದೆ.ರಾಜ್ಯದ ಎಲ್ಲಹಾಲು ಒಕ್ಕೂಟಗಳಿಂದ ಪ್ರತಿದಿನ 85ರಿಂದ 86 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ 50ರಿಂದ 55 ಲಕ್ಷ ಲೀಟರ್ ಹಾಲು, ಮೊಸರು, ಮಜ್ಜಿಗೆ ರೂಪದಲ್ಲಿ ಮಾರಾಟವಾದರೆ, ಸುಮಾರು 30ರಿಂದ 35 ಲಕ್ಷ ಲೀಟರ್ ಹಾಲು ಉಳಿಯುತ್ತಿದೆ. ಉಳಿದ ಹಾಲನ್ನು ಕೆನೆ ರಹಿತ ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಮಾರಾಟವಾಗದೆ ಉಳಿದ ಹಾಲನ್ನು ಪುಡಿಯಾಗಿ ಪರಿವರ್ತಿಸುವುದು ಕೆಎಂಎಫ್ ಪಾಲಿಗೆ ಹೊರೆಯಾಗಿ ಪರಿಣಮಿಸಿದೆ. ಮೂರು ತಿಂಗಳಿಂದ ಈಚೆಗೆ ಕೆಎಂಎಫ್ ಬಳಿ 14 ಸಾವಿರ ಟನ್ ಹಾಲಿನ ಪುಡಿ ಮತ್ತು 7 ಸಾವಿರ ಮೆಟ್ರಿಕ್ ಟನ್ ಬೆಣ್ಣೆ ದಾಸ್ತಾನು ಇದೆ. ಇದು ಎಷ್ಟೊಂದು ಹಾಲು ಉಳಿಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಂಕಷ್ಟಕ್ಕೆ ಕಾರಣವೇನು? ಚಳಿಗಾಲ ಮುಗಿಯುತ್ತಿದ್ದಂತೆ ಎಲ್ಲಡೆ ಹಾಲಿನ ಮಾರಾಟ ಉತ್ತುಂಗ ತಲುಪುತ್ತದೆ. ಮದುವೆ, ಶುಭ ಸಮಾರಂಭಗಳ ಜತೆಗೆ ಬೇಸಿಗೆಯಲ್ಲಿ ಅತಿಹೆಚ್ಚು ಐಸ್‌ಕ್ರೀಮ್ ಮತ್ತು ಬಿಸ್ಕೆಟ್ ಮಾರಾಟವಾಗುವುದರಿಂದ ಭಾರಿ ಪ್ರಮಾಣದಲ್ಲಿ ಹಾಲು ಮತ್ತು ಹಾಲಿನ ಪುಡಿ ಮಾರಾಟವಾಗು ತ್ತದೆ. ಆದರೆ ಲಾಕ್‌ಡೌನ್‌ನಿಂದಾಗಿ ಶುಭ ಸಮಾರಂಭ, ಸಮಾವೇಶಗಳು ನಡೆಯಲಿಲ್ಲ. ಹೋಟೆಲ್, ಕ್ಯಾಂಟೀನ್, ಕಾಲೇಜು, ಹಾಸ್ಟೆಲ್‌ಗಳು ಬಂದ್ ಆಗಿ ಹಾಲಿನ ಮಾರಾಟ ಶೇ.25ರಷ್ಟು ಕುಸಿತ ಕಂಡಿದೆ.
ಕಡಿಮೆಯಾದ ಬಲ್ಕ್ ಮಿಲ್ಕ್ ಮಾರಾಟ
ಹೊರ ರಾಜ್ಯಗಳಿಗೆ ರವಾನೆಯಾಗುತ್ತಿದ್ದ ಬಲ್ಕ್ ಮಿಲ್ಕ್ ಮಾರಾಟ ಸಹ ಕುಸಿತವಾಗಿದೆ. ಶಾಲೆಗಳು ಮತ್ತು ಅಂಗನವಾಡಿಗಳು ಬಂದ್ ಆಗಿ ಕ್ಷೀರ ಭಾಗ್ಯ ಯೋಜನೆ ಸ್ಥಗಿತಗೊಂಡಿರುವುದು ಸಹ ಒಕ್ಕೂಟಕ್ಕೆ ದೊಡ್ಡ ಪೆಟ್ಟು ನೀಡಿದೆ. ಹೋಟೆಲ್‌ಗಳು ಆರಂಭವಾದರೂ ಅವುಗಳ ಖರೀದಿ ಪ್ರಮಾಣ ಶೇ.50 ಸಹ ತಲುಪಿಲ್ಲ. ಗಾಯದ ಮೇಲೆ ಬರೆ ಎಳೆಯುವಂತೆ ಹಾಲಿನ ಪುಡಿ ಬಲ್ಕ್ ಮಾರಾಟ ಸಹ ಕುಸಿತಕಂಡಿದೆ. ವಿದೇಶಗಳಲ್ಲಿ ನಂದಿನಿ ಹಾಲಿನ ಪುಡಿಗೆ ಭಾರಿ ಬೇಡಿಕೆ ಇದೆಯಾದರೂ ಆ ದೇಶಗಳು ಸಹ ಕೊರೊನಾದ ಕರಿನೆರಳಲ್ಲಿ ಇರುವುದರಿಂದ ಅಲ್ಲಿಂದಲೂ ಬೇಡಿಕೆ ಇಲ್ಲ.
++++++++++++++++
ಹಾಲಿನ ಉತ್ಪಾದನೆ ಅಧಿಕವಾದ ಬೆನ್ನಲ್ಲೆ ಕೊರೊನಾ ಬಂದಿದ್ದು ಹಾಲಿನ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಇದು ರಾಜ್ಯದ ಎಲ್ಲ ಹಾಲು ಒಕ್ಕೂಟಗಳ ಮೇಲೆ ಆಗಿದೆ.- ಡಿ. ಆನಂದ್ ಅಧ್ಯಕ್ಷರು, ಶಿವಮೊಗ್ಗ ಹಾಲು ಒಕ್ಕೂಟ
+++++++++++++++++
ನಿತ್ಯ 87.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಾಲು, ಮೊಸರು ಮಾರಾಟ ಸಹಿತ ನಂದಿನಿ ಉತ್ಪನ್ನಗಳಿಗೆ ಬಳಸಿಕೊಂಡ ನಂತರ ಶೇ.30ರಷ್ಟು ಹಾಲನ್ನು ಪೌಡರ್ ಆಗಿ ಪರಿವರ್ತಿಸಲಾಗುತ್ತಿದೆ. ಕಳೆದೆರಡು ತಿಂಗಳಿನಿಂದ ಹಾಲು ಹೆಚ್ಚಿಗೆ ಉಳಿಯುತ್ತಿದ್ದು, ಸದ್ಯ 14 ಸಾವಿರ ಟನ್ ಹಾಲಿನ ಪೌಡರ್ ದಾಸ್ತಾನು ಇದೆ. -ಡಾ. ಬಿ.ಸಿ.ಸತೀಶ್ ಕೆಎಂಎಫ್ ಎಂಡಿ.