-ಲಕ್ಷಣರಹಿತರು ಆಸ್ಪತ್ರೆ ಸೇರಬೇಕಿಲ್ಲ
-ಗಂಭೀರ ರೋಗಿಗಳ ಜೀವ ರಕ್ಷಣೆಗೆ ಆದ್ಯತೆ
-ತಜ್ಞರ ಸಲಹೆಗೆ ಸರಕಾರದ ಒಪ್ಪಿಗೆ
-ಹೋಮ್ ಐಸೊಲೇಶನ್ ಬಗ್ಗೆ ಶೀಘ್ರ ಮಾರ್ಗಸೂಚಿ
ವಿಕ ಸುದ್ದಿಲೋಕ ಬೆಂಗಳೂರು.
ಬೆಂಗಳೂರಿನಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಇನ್ನು ಮುಂದೆ ಮನೆಯಲ್ಲೇ ಚಿಕಿತ್ಸೆ ನೀಡಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಗಂಭೀರ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಜೀವ ರಕ್ಷಣೆ ಮಾಡುವ ನಿಟ್ಟಿನಲ್ಲಿಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದ್ದು, ಆಸ್ಪತ್ರೆಗಳು ತುಂಬಿಕೊಳ್ಳುತ್ತಿವೆ. ಆದರೆ, ಹೆಚ್ಚಿನ ಕಡೆ ಯಾವುದೇ ತೀವ್ರ ನಿಗಾದ ಅಗತ್ಯವಿಲ್ಲದ, ಲಕ್ಷಣರಹಿತ ಸೋಂಕಿತರೇ ತುಂಬಿಕೊಂಡಿದ್ದು, ಗಂಭೀರ ಸ್ವರೂಪದ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗುತ್ತಿರುವುದನ್ನು ಸರಕಾರ ಮನಗಂಡು ಈ ತೀರ್ಮಾನಕ್ಕೆ ಬಂದಿದೆ. ಕೋವಿಡ್ 19 ನಿರ್ವಹಣೆ ಕುರಿತು ಬುಧವಾರ ವಿಧಾನಸೌಧದಲ್ಲಿ ತಜ್ಞ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ಈ ವಿಷಯ ಪ್ರಕಟಿಸಿದರು.
ವಯಸ್ಸಾದವರು ಹಾಗೂ ಗಂಭೀರ ಸ್ವರೂಪದ ಕಾಯಿಲೆ ಜತೆಗೂಡಿರುವ ಸೋಂಕಿತರನ್ನು ಹೊರತುಪಡಿಸಿ ಉಳಿದವರಿಗೆ ಮನೆಗಳಲ್ಲೇ ಚಿಕಿತ್ಸೆ ನೀಡಿದರೆ ಆಸ್ಪತ್ರೆಗಳ ಮೇಲೆ ಒತ್ತಡ ತಡೆಯಬಹುದಾಗಿದೆ ಎಂಬ ತಜ್ಞರ ಸಲಹೆಗೆ ಸಿಎಂ ಸಹಮತ ಸೂಚಿಸಿದ್ದು, ಹೊಸ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಸರಕಾರ ಪ್ರಕಟಿಸಲಿದೆ.
‘‘ಸೋಂಕು ಪ್ರಕರಣ ದ್ವಿಗುಣಗೊಳ್ಳುವ ವೇಗ ತಗ್ಗಿಸಬೇಕು. ಅದಕ್ಕಾಗಿ ಜನಸಂದಣಿ ಸ್ಥಳಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಟೆಲಿ ಮೆಡಿಸಿನ್ ವ್ಯವಸ್ಥೆಯ ಮೂಲಕ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಸೋಂಕು ನಿರ್ವಹಣೆ ಪ್ರಯತ್ನಗಳಿಗೆ ಇನ್ನಷ್ಟು ಇಲಾಖೆಗಳ ಸಿಬ್ಬಂದಿ ಬಳಸಿಕೊಳ್ಳಬೇಕು,’’ ಎಂಬ ಅಭಿಪ್ರಾಯ ಮೂಡಿತು.
‘‘ಟೆಲಿ ಐಸಿಯು ಹಾಗೂ ಚಿಕಿತ್ಸೆಗೆ ನಿಗದಿತ ಮಾನದಂಡಗಳ ಕುರಿತು ಹೆಚ್ಚಿನ ತರಬೇತಿ ಅಗತ್ಯವಿದೆ. ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಸರಪಣಿ ಹಾಗೂ ಹೊಸ ಔಷಧಿಗಳ ಪೂರೈಕೆ ಅಬಾಧಿತವಾಗಿರಬೇಕು. ರಾಜ್ಯದಲ್ಲಿ ಕೋವಿಡ್ ಕುರಿತು ಭೀತಿಯ ವಾತಾವರಣ ಸೃಷ್ಟಿಯಾಗಿದ್ದು, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕು ಎಂಬ ಸಲಹೆಗಳು ತಜ್ಞ ವೈದ್ಯರಿಂದ ಬಂದಿವೆ. ಈ ಅಭಿಪ್ರಾಯ ಗಳನ್ನು ಆಧರಿಸಿ ಸರಕಾರ ಸೂಕ್ತ ಕ್ರಮ ಜರುಗಿಸಲಿದೆ,’’ ಎಂದು ವೈದ್ಯಕೀಯ ಶಿಕ್ಷ ಣ ಸಚಿವ ಡಾ.ಕೆ. ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು.
‘‘ಬೆಂಗಳೂರಿನಲ್ಲಿ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತಜ್ಞ ವೈದ್ಯರ ಸಲಹೆಯಂತೆ ಶೀಘ್ರ ಹೊಸ ಮಾರ್ಗಸೂಚಿ ಪ್ರಕಟಿಸಲಾಗುವುದು,’’ ಎಂದು ಡಾ. ಸುಧಾಕರ್ ತಿಳಿಸಿದರು.
ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಭಾರತದ ಪ್ರತಿನಿಧಿ ಆಶಿಶ್ ಸತ್ಪತಿ, ಕಿಮ್ಸ್‌ನ ಡಾ.ಲೋಕೇಶ್, ಮಣಿಪಾಲ ಆಸ್ಪತ್ರೆಯ ಮುಖ್ಯಸ್ಥ ಡಾ.ಸುದರ್ಶನ್ ಬಲ್ಲಾಳ್, ಡಾ.ಅಂಜನಪ್ಪ, ಡಾ.ಶರಣ್ ಪಾಟೀಲ್, ಡಾ.ಪ್ರಭುದೇವ್, ಡಾ.ಪ್ರದೀಪ್ ರಂಗಪ್ಪ, ಡಾ.ಪ್ರಕಾಶ್, ಡಾ.ಕುಮಾರ್, ಡಾ.ಗಿರಿಧರ್ ಬಾಬು, ಡಾ.ಷರೀಫ್, ಡಾ.ರಂಗನಾಥ, ಡಾ.ಸತೀಶ್, ಡಾ.ಭುಜಂಗ ಶೆಟ್ಟಿ ಸೇರಿದಂತೆ ಅನೇಕ ತಜ್ಞರು ಸಭೆಯಲ್ಲಿ ಭಾಗವಹಿಸಿದ್ದರು.
ಯಾರಿಗೆ ಮನೆ ಚಿಕಿತ್ಸೆ?
ಯುವಕರು, ಯಾವುದೇ ರೋಗ ಲಕ್ಷಣ ಇಲ್ಲದವರು, ಕಡಿಮೆ ಜ್ವರದ ಲಕ್ಷಣ ಇರುವವರು.
===========
ಮನೆ ಚಿಕಿತ್ಸೆ ಹೇಗೆ?
ಆರೋಗ್ಯವಾಗಿರುವವರಿಗೆ ಮನೆಯಲ್ಲೇ ಉಳಿಯಲು ಅವಕಾಶ.
ಆದರೆ, ಮನೆಯ ಇತರರ ಸಂಪರ್ಕದಿಂದ ದೂರವಿರಬೇಕು.
ಸರಕಾರ ಅವರಿಗೆ ಸೂಕ್ತ ಚಿಕಿತ್ಸಾ ಮಾರ್ಗಸೂಚಿ ತಿಳಿಸಲಿದೆ.
ಹೋಮ್ ಐಸೋಲೇಷನ್ ಅವಧಿಯಲ್ಲಿ ಹೊರಗೆ ಹೋಗುವಂತಿಲ್ಲ.
===========
ಅನುಕೂಲ ಏನು?
80% ಪ್ರಕರಣಗಳು ಅಸಿಮ್ಟಮ್ಯಾಟಿಕ್ ಆಗಿರುವುದರಿಂದ ಆಸ್ಪತ್ರೆ ಮೇಲಿನ ಒತ್ತಡ ತಗ್ಗಲಿದೆ.
ಆಸ್ಪತ್ರೆಯಲ್ಲಿ ಸಿಬ್ಬಂದಿಗಳು, ಊಟ ಮತ್ತಿತರ ವ್ಯವಸ್ಥೆಯ ಕಷ್ಟ ಕಡಿಮೆಯಾಗಲಿದೆ.
ಪಾಸಿಟೀವ್ ಬಂದವರಿಗೆ ಆತಂಕ ಕಡಿಮೆಯಾಗಿ, ಮನೆಯಲ್ಲೇ ನಿರಾಳವಾಗಿರಬಹುದು.
ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಬೆಡ್‌ಗಳ ಕೊರತೆ ಎದುರಾಗದು.
=======
ಮತ್ತೆ ಸಾವಿರ ಸೋಂಕು
ರಾಜ್ಯದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಸಾವಿರ ಮೀರಿದೆ. ಬುಧವಾರ 1272 ಕೇಸುಗಳು ದಾಖಲಾಗಿದ್ದು, ಇದರಲ್ಲಿ735 ಬೆಂಗಳೂರಿನವು. ಒಟ್ಟು 9 ಸಾವುಗಳು ಸಂಭವಿಸಿವೆ.
==========
ಕಳೆದೊಂದು ವಾರದಲ್ಲಿ ಸೋಂಕು ಸ್ಫೋಟವಾಗಿದೆ. ರಕ್ತದ ಕೊರತೆ, ಬೆಡ್ ಸಮಸ್ಯೆ ಹೆಚ್ಚಿದೆ. ವಯಸ್ಸಾದ ಹಾಗೂ ಅನ್ಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವರಿಗೆ ತುರ್ತು ಚಿಕಿತ್ಸೆ ಸಿಗಬೇಕು.
-ಡಾ. ಭುಜಂಗ ಶೆಟ್ಟಿ
±+++++++++++++++
ರೋಗ ಲಕ್ಷಣ ಇಲ್ಲದ ಪಾಸಿಟಿವ್ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇಲ್ಲ. ಉಸಿರಾಟದ ತೊಂದರೆ ಇದ್ದರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು.
-ಡಾ. ಶರಣ್ ಪಾಟೀಲ್
+++++++++++++++++
ರೋಗ ಲಕ್ಷ ಣ ಇಲ್ಲದವರು ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಬೇಕಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಆಗುವುದಿಲ್ಲ ಖಾಸಗಿ ಆಸ್ಪತ್ರೆಗಳು ಸರಕಾರದ ಜೊತೆ ಸೇರಿ ಕೆಲಸ ಮಾಡುತ್ತಿವೆ.
– ಡಾ. ಸುದರ್ಶನ್ ಬಲ್ಲಾಳ್ ಮಣಿಪಾಲ್ ಆಸ್ಪತ್ರೆ
====================