ಲಡಾಖಿನಲ್ಲಿ ನಕಾಶೆ ನೂಕುವ ಯತ್ನ

– ನಿರಂಜನ
ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ

ಉತ್ತರದಲ್ಲಿ ಹಿಮಾಲಯ ಪರ್ವತಶ್ರೇಣಿ ಆವೃತವಾಗಿರುವ ದೇಶ, ಭಾರತ. ಆ ದಿಕ್ಕಿನಲ್ಲಿ ನಮ್ಮ ಸೀಮಾರೇಖೆ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಎಂದೂ ಬದಲಾದುದಿಲ್ಲ. ಇದು, ಉತ್ತರದ ಕ್ಯುವೆನ್‌ಲುನ್‌ ಪರ್ವತಗಳಿಂದ ಪೂರ್ವದಿಕ್ಕಿನಲ್ಲಿ ಬರ್ಮವನ್ನು ಸಂಧಿಸುವವರೆಗೆ ಈ ಗಡಿಯು 2500 ಮೈಲುಗಳ ಉದ್ದವಿದೆ. ಪ್ರಾಚೀನಗ್ರಂಥವಾದ ವಿಷ್ಣು ಪುರಾಣದಲ್ಲಿ ಹಿಮಾಲಯವೇ ಭಾರತದ ಉತ್ತರ ಸೀಮೆ ಎಂಬ ಉಲ್ಲೇಖವಿದೆ. ‘‘ಹಿಮಾಲಯದ ದಕ್ಷಿಣಕ್ಕೆ ಹಿಂದೂ ಮಹಾಸಾಗರದ ಉತ್ತರಕ್ಕೆ ಇರುವ ಭೂಭಾಗವೆಲ್ಲ ಭಾರತ’’ ಎನ್ನುತ್ತದೆ ಆ ಪುರಾಣ. ಕ್ರಿಸ್ತಪೂರ್ವ 1500ರ ಸುಮಾರಿಗೆ ಸೃಷ್ಟಿಯಾದ ಋುಗ್ವೇದದಲ್ಲಿ ಹಿಮಾಲಯದ ಪರ್ವತಾವಳಿಯ ಪ್ರಸ್ತಾಪವಿದೆ. ಕ್ರಿಸ್ತಪೂರ್ವ ಸುಮಾರು 400ರ ಅನಂತರ ರಚಿತವಾದ ‘ಮಹಾಭಾರತ’ದಲ್ಲಿ ಹಿಮಾಲಯದ ದಕ್ಷಿಣಕ್ಕಿರುವ ಅನೇಕ ಭಾರತೀಯ ರಾಜ್ಯಗಳ ನಾಮಾವಳಿಯಿದೆ. ಇನ್ನು ಪ್ರಸ್ತುತ ಇತಿಹಾಸದ ಕಾಲಾವಧಿಗೆ ಬರೋಣ. ಬುದ್ಧನೂ ಮಹಾವೀರನೂ ಹಿಮಾಲಯದ ಬುಡಕಟ್ಟಿಗೆ ಸೇರಿದವರು. ಅವರ ಇತಿಹಾಸಗಳಲ್ಲೂ ಹಿಮಾಲಯ ಗಡಿಗಳ ಉಲ್ಲೇಖವಿದೆ.
ಚೀನೀ ಬೌದ್ಧಯಾತ್ರಿಕ ಹ್ಯುಅನ್‌ತ್ಯಾಂಗ್‌ ತಾನು ಹಾದುಧಿಹೋದ ಭಾರತೀಯ ರಾಜ್ಯಗಳ ಹೆಸರನ್ನೆಲ್ಲಾ ಬರೆದಿಟ್ಟಿದ್ದಾನೆ. ಹಿಂದೂಕುಶ್‌ ಬೆಟ್ಟಗಳ ದಕ್ಷಿಣದಲ್ಲಿ ಕಪಿಸ, ಸಿಂಧೂನದಿಯ ಪೂರ್ವಕ್ಕೆ ಕಾಶ್ಮೀರ, ಯಮುನಾ ನದಿಯ ಪೂರ್ವಕ್ಕೆ ಮಾರ್ಪೊ (ಲಡಾಕಿನ ನಿಜವಾದ ಹೆಸರು), ಸುವರ್ಣಗೋತ್ರ, ನೇಪಾಳ ಮತ್ತು ಕಾಮರೂಪ (ಕ್ಷ ತ್ರಿಯ ವಂಶದ ರಾಜನೊಬ್ಬ ಆಳುತ್ತಿದ್ದ ಕಾಮರೂಪದ ಬಹ್ವಂಶ ಪ್ರದೇಶವೇ ಈಗಿನ ನೀಫಾ-ಈಶಾನ್ಯ ಸರಹದ್ದು ಆಡಳಿತ ಪ್ರದೇಶ). ಮಹಾಚಕ್ರವರ್ತಿ ಅಕ್ಬರ್‌, 1566ರ ಹಿಮಾಲಯದ ಪ್ರದೇಶಗಳಲ್ಲಿ ರಾಜ್ಯಾಡಳಿತವನ್ನು ಭದ್ರಗೊಳಿಸಿದ. ತನ ‘ಐನ್‌-ಇ-ಅಕ್ಬರಿ’ಯಲ್ಲಿ ಹೇಳಿರುವಂತೆ, ಪರ್ವತಗಳೇ ಅವುಧ್‌ ಪ್ರಾಂತದ ಉತ್ತರ ಗಡಿಯಾಗಿದ್ದುವು. ಹಿಮಾಲಯದ ಗಡಿಧಿಯುಧಿದ್ದಕ್ಕೂ ಫೌಜದಾರರ ಠಾಣ್ಯಗಳಿದ್ದುವು.
ಲಡಾಕ್‌(ಮಾರ್ಪೊ) ಸ್ವಲ್ಪ ಕಾಲ ಸ್ವತಂತ್ರವಾಗಿತ್ತು. ಮುಂದೆ ಟಿಬೆಟ್‌ ಅದನ್ನು ಆಕ್ರಮಿಸಿತು. ಮೊಘಲರ ನೆರವಿನಿಂದ 1664ರಲ್ಲಿ ಅದು ತನ್ನ ಸ್ವಾತಂತ್ರ್ಯವನ್ನು ಮರಳಿ ಪಡೆಯಿತು. ಸ್ವಲ್ಪ ಕಾಲಾನಂತರ ಕಾಶ್ಮೀರದೊಡನೆ ಸೇರ್ಪಡೆ ಹೊಂದಿತ್ತು. 1842ರಲ್ಲಿ ಕಾಶ್ಮೀರದ ಗುಲಾಬ್‌ಸಿಂಗನಿಗೂ ಟಿಬೆಟನ್ನರು ಹಾಗೂ ಚೀನೀಯರಿಗೂ ಯುದ್ಧವಾಗಿ, ಶಾಂತಿ ಒಪ್ಪಂದವಾಯಿತು. ಅದರಲ್ಲಿ ಲಡಾಕ್‌ ಒಳಗೊಂಡ ಕಾಶ್ಮೀರ ಹಾಗೂ ಟಿಬೆಟ್‌ ಚೀನಾ ಗಡಿ ನಿರ್ಧರಿಸಲ್ಪಟ್ಟಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತವನ್ನು ಬ್ರಿಟಿಷರು ಆಕ್ರಮಿಸಿದಾಗ, ಕಾಶ್ಮೀರದಿಂದ ಬರ್ಮಾದವರೆಗೂ ತಮ್ಮ ಗಡಿಯನ್ನು ಅವರು ಭದ್ರಗೊಳಿಸಿದರು. ಲಡಾಕ್‌ ಪ್ರದೇಶದಲ್ಲಿ ಆ ಮೊದಲೇ ಗಡಿಯ ಬಗ್ಗೆ ಒಪ್ಪಂದವಾಗಿದ್ದುದರಿಂದ ಉಳಿದ ಸೀಮಾರೇಖೆಯನ್ನು ನಕಾಶೆಯ ಮೇಲೆ ನಿರ್ದಿಷ್ಟವಾಗಿ ಗುರುತಿಸುವ ಕೆಲಸವನ್ನು ಬ್ರಿಟಿಷ್‌ ಅಧಿಕಾರಿ ಸರ್‌ ಹೆನ್ರಿ ಮೆಕ್‌ಮಹೋನ್‌ ಕೈಗೊಂಡರು. ಆ ರೇಖೆಯ ಬಗ್ಗೆ ಬ್ರಿಟನ್‌, ಟಿಬೆಟ್‌ ಹಾಗೂ ಚೀನಗಳಿಗೆ ಒಪ್ಪಿಗೆಯೂ ಆಯಿತು. ಮೆಕ್‌ಮಹೋನ್‌ ಮಾಡಿದ್ದು ಯಾವುದೇ ಅನ್ಯಾಯದ ವಿಭಜನೆಯನ್ನಲ್ಲ: ಪರಂಪರಾಗತವಾದ ಗಡಿಯನ್ನು ಆತ ನಕಾಶೆಯ ಮೇಲೆ ಗುರುತಿಸಿದ್ದು ಅಷ್ಟೆ. ಆರಂಭದಿಂದಲೂ ‘‘ಚೀನದ ಗಡಿಯನ್ನು ಭದ್ರಪಡಿಸಿಕೊಳ್ಳಲು ನಾವು ಆತುರರಾಗಿದ್ದೇವೆ,’’ ಎಂದು ಚೀನೀಯರು ಹೇಳುತ್ತಿದ್ದರೇ ಹೊರತು, ಮೆಕ್‌ಮಹೋನ್‌ ರೇಖೆಯ ವಿಷಯದಲ್ಲಾಗಲೀ ಲಡಾಕ್‌ ಗಡಿಗೆ ಸಂಬಂಧಿಸಿಯಾಗಲೀ ತಮಗೆ ಭಿನ್ನಾಭಿಪ್ರಾಯವಿದೆಯೆಂದು ಚೀನಾ ಎಂದೂ ಹೇಳಿರಲಿಲ್ಲ. ಇಂಥ ನಕಾಶೆಗಳಿಂದ ಉಂಟಾಗುವ ತಪ್ಪು ಗ್ರಹಿಕೆಯು ಕೊನೆಗಾಣಬೇಕೆಂದು ಪದೇ ಪದೆ ಚೀನಾವನ್ನು ನೆನಪಿಸಿದ್ದು ಭಾರತವೇ. ಭಾರತದ ಉತ್ತರಗಡಿಯು ಇತಿಹಾಸವು ತನಗೆ ಉಳಿಸಿಹೋಗಿರುವ ಸಮಸ್ಯೆಯೆಂದು ಚೀನಾ ಭಾವಿಸಿತ್ತು. ಆದರೆ ಅದು ತನ್ನದೆಂದು ತೋರ್ಪಡಿಸುತ್ತಿದ್ದ ಪ್ರದೇಶದ ಮೇಲೆ ಅಧಿಕಾರವಿದೆಯೆಂದು ರುಜುವಾತುಪಡಿಸಲು ಯಾವ ಐತಿಹಾಸಿಕ ಆಧಾರವೂ ಅದಕ್ಕೆ ಇರಲಿಲ್ಲ. ಎಲ್ಲಿ ಮೆದುವಾಗಿದೆಯೋ ಅಲ್ಲಿ ಅಗೆಯುವುದು, ಚೀನೀಯರ ರಾಜನೀತಿ. ಮೆದುವಾಗಿ ಕಂಡ ಹಿಮಾಲಯದುದ್ದಕ್ಕೂ ಅವರು ಅಗೆಯತೊಡಗಿದರು.
ದಲಾಯಿ ಲಾಮರಿಗೆ ಈ ದೇಶದಲ್ಲಿ ಆಶ್ರಯ ಕೊಟ್ಟಂದಿನಿಂದ ಚೀನಾ-ಭಾರತ ಸಂಬಂಧ ಕೆಟ್ಟಿತೆಂಬ ಅಭಿಪ್ರಾಯವೊಂದಿದೆ. ಆದರೆ ವಾಸ್ತವಾಂಶವೇನು? ದಲಾಯಿ ಲಾಮಾ ಇಲ್ಲಿಗೆ ಬಂದುದು 1959ರ ಬೇಸಗೆಯಲ್ಲಿ. ಚೀನೀ ಸೈನಿಕರು ಭಾರತದ ಭೂಭಾಗವನ್ನು ಮೊದಲ ಬಾರಿಗೆ ಪ್ರವೇಶಿಸಿದ್ದು 1955-56ರಲ್ಲೇ. ಭಾರತದ ಮೇಲೆ ಚೀನೀಯರ ದುರಾಕ್ರಮಣ, ದಲಾಯಿ ಲಾಮಾ ತಪ್ಪಿಸಿಕೊಳ್ಳುವುದರ ಬದಲು ಚೀನೀಯರಿಗೆ ಸೆರೆ ಸಿಕ್ಕಿದ್ದರೂ ಸಂಭವಿಸುತ್ತಿತ್ತು. ಅಂಥ ಆಕ್ರಮಣದ ಸಾಮ್ರಾಜ್ಯವಾದೀ ವಿಸ್ತರಣದ ಯೋಜನೆ ಚೀನೀ ಗಣರಾಜ್ಯದ ಸ್ಥಾಪನೆಯಾದೊಡನೆಯೇ, ಪ್ರಾಯಶಃ ಅದಕ್ಕಿಂತಲೂ ಮುಂಚೆ ಯೆನಾನ್‌ ಗವಿಗಳಲ್ಲೇ ಸಿದ್ಧವಾಗಿತ್ತು. ಯಾಕೆಂದರೆ, ಗವಿಮಾನವನ ಪ್ರವೃತ್ತಿಯೇ ಅವರ ಯೋಜನೆಯ ಹಂತ ಹಂತದಲ್ಲೂ ಒಡೆದು ತೋರುತ್ತಿದೆ.
ಟಿಬೆಟ್‌ ಬಂಧವಿಮೋಚನೆಯ ಮಾತನ್ನು ಆಗಿಂದಾಗ್ಗೆ ಚೀನಾ ಆಡುತ್ತಿದ್ದಾಗ, ‘‘ಟಿಬೆಟ್ಟಿನ ಪ್ರಶ್ನೆಯನ್ನು ಶಾಂತಿಯುತ ಹಾಗೂ ಸ್ನೇಹಪರ ಕ್ರಮಗಳಿಂದ ತಾನು ಬಗೆಹರಿಸುತ್ತೇನೆ, ಹಾಗೆಯೇ ಭಾರತ-ಚೀನಾ ಗಡಿಯನ್ನು ಭದ್ರಗೊಳಿಸುತ್ತೇನೆ,’’ ಎಂದು ಒಮ್ಮೆ ಘೋಷಿಸಿತು. ಮೊದಲನೆಯ ವಾಕ್ಯ ಭಾರತಕ್ಕೆ ಸಮಾಧಾನಕರವಾಗಿತ್ತು. ಎರಡನೆಯ ವಾಕ್ಯಕ್ಕೆ ವಿಶೇಷ ಅರ್ಥವೇನಾದರೂ ಇತ್ತೆಂದು ಭಾರತ ಸರಕಾರ ಆಗ ಭಾವಿಸಲೇ ಇಲ್ಲ. ಇತ್ತ ಗಡಿಚರ್ಚೆ ಬಂದಾಗಲೆಲ್ಲಾ ತಮಗೆ ಲಡಾಕ್‌ ಮಾತ್ರ ಮಹತ್ವದ್ದು ಎಂಬ ಭ್ರಮೆಯನ್ನು ಚೀನೀಯರು ಹುಟ್ಟಿಸಿದ್ದರು. ನೀಫಾದಲ್ಲಿ ಬೇಕಿದ್ದರೆ ಮೆಕ್‌ಮಹೋನ್‌ ರೇಖೆಯನ್ನೇ ಒಪ್ಪಬಹುದು ಎಂದು ಒಮ್ಮೆ ಚೌ ಎನ್‌-ಲೇ ನುಡಿದೂ ಇದ್ದರು. ಚೀನಾ ತಾನು ನೀಡಿದ್ದ ಎಲ್ಲ ಆಶ್ವಾಸನೆಗಳಿಗೆ ವ್ಯತಿರಿಕ್ತವಾಗಿ ತನ್ನ ಜನತಾ ಬಂಧವಿಮೋಚನಾ ಪಡೆಗಳ ಮೂಲಕ 1950ರ ಅಕ್ಟೋಬರ್‌ 24ರಂದು ಟಿಬೆಟ್ಟಿನ ಕಡೆಗೆ ನುಗ್ಗಿತು. ಭಾರತ ಸರಕಾರ ತನ್ನ ರಾಯಭಾರಿಯ ಮೂಲಕ, ಬಲಪ್ರಯೋಗ ಮಾಡದೆಯೇ ಶಾಂತಿಯುತ ವಿಧಾನಗಳ ಮೂಲಕ ಟಿಬೆಟ್‌ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಚೀನಾವನ್ನು ಕೋರಿತು. ಇದಕ್ಕೆ ಚೀನಾ, ‘‘ಟಿಬೆಟ್‌ ಚೀನೀ ಭೂಭಾಗದ ಅವಿಭಾಜ್ಯ ಅಂಶವಾಗಿದೆ. ಈ ಸಮಸ್ಯೆಯು ಸಂಪೂರ್ಣವಾಗಿ ಚೀನೀಯರ ಆಂತರಿಕ ವಿಷಯವಾಗಿದೆ. ಯಾವುದೇ ರೀತಿಯ ವಿದೇಶೀಯ ಮಧ್ಯ ಪ್ರವೇಶವನ್ನು ಚೀನಾ ಸಹಿಸದು. ಪಾಶ್ಚಾತ್ಯ ಪ್ರಭಾವಕ್ಕೊಳಗಾಗಿ ನೀವು ಹೀಗೆ ಮಾಡುತ್ತಿದ್ದೇರೆಂದು ನಮಗೆ ಅನಿಸುತ್ತಿದೆ,’’ ಎಂದು ಪ್ರತಿಭಟಿಸಿತು. ಹಾಗೆಯೇ ಟಿಬೆಟ್ಟಿನಲ್ಲಿನ ಶಾಂತಿಯುತ ಪರಿಹಾರಕ್ಕೆ ಭಾರತ ಅಡ್ಡಿಮಾಡುತ್ತಿದೆಯೆಂದು ಆಕ್ರೋಶ ವ್ಯಕ್ತಪಡಿಸಿತು. ಇತ್ತ ಚೀನೀ ಸೈನ್ಯ ಪಶ್ಚಿಮದ ಲಡಾಕ್‌ನಲ್ಲಿ ಗದ್ದಲ ಮಾಡುತ್ತ ಪೂರ್ವರಂಗದಲ್ಲಿ ಭಾರಿ ಪ್ರಮಾಣದ ದಾಳಿಯನ್ನೆ ನಡೆಸಿತು. ಬಳಿಕ ಪಶ್ಚಿಮದಲ್ಲೂ ಮುಂದೆ ಸಾಗಿ ಭಾರತದ ಗಡಿಯತ್ತ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿತು. ಚೀನೀ ಕೆಂಪು ಪಡೆಗಳು ಟಿಬೆಟ್ಟಿನ ರಾಜಧಾನಿ ಲ್ಹಾಸಾದ ಹೊರವಲಯದಲ್ಲಿ ಬೀಡುಬಿಟ್ಟ ಬಳಿಕ, ಟಿಬೆಟ್ಟಿನ ಪ್ರಮುಖರನ್ನು ಮಾತುಕತೆಗೆ ಬರಲು ಆಹ್ವಾನಿಸಿತು. ಶಾಂತಿ ನೆಲೆಸಬಹುದೆಂಬ ಆಶಯದಲ್ಲಿ ಭಾರತ ನಿಟ್ಟುಸಿರುಬಿಟ್ಟಿತು.
ನಾಳೆ: ಚೀನೀ ಪಡೆಗಳ ದಕ್ಷಿಣಾಭಿಮುಖ ಚಲನೆ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top