ಸಿಎಂ ಚಾಟಿಗೆ ಸಾವಿರ ಹಾಸಿಗೆ, 50 ಆ್ಯಂಬುಲೆನ್ಸ್ – ಬಿಬಿಎಂಪಿ ವೈಫಲ್ಯದ ವಿಕ ವಿಸ್ತೃತ ವರದಿಗೆ ಎಚ್ಚೆತ್ತ ರಾಜ್ಯ ಸರಕಾರ

ವಿಕ ಸುದ್ದಿಲೋಕ ಬೆಂಗಳೂರು.
ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದಿರುವುದು ಮತ್ತು ಆ್ಯಂಬುಲೆನ್ಸ್‌ಗಳಿಲ್ಲದೆ ರೋಗಿಗಳು ಪರದಾಡುತ್ತಿರುವ ದೂರುಗಳು ಕೇಳಿಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಕೋವಿಡ್ ನಿರ್ವಹಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ.
ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಟಿ ಬೀಸಿದ್ದರು. ಹೀಗಾಗಿ, ಸೋಂಕಿತರ ಚಿಕಿತ್ಸೆಗೆ ಹಾಸಿಗೆ ವ್ಯವಸ್ಥೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲು ಅಗತ್ಯವಿರುವ ಆ್ಯಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ಮೃತಪಟ್ಟ ಸೋಂಕಿತರನ್ನು ಚಿತಾಗಾರಗಳಿಗೆ ಸಾಗಿಸಲು ವಾಹನಗಳನ್ನು ನಿಯೋಜಿಸಲಾಗಿದೆ.
ನಗರದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್ ಮತ್ತು ಹಾಸಿಗೆಗಳ ಸಮಸ್ಯೆ ಉಂಟಾಗಿತ್ತು. ಆಸ್ಪತ್ರೆಗೆ ದಾಖಲಿಸುವಂತೆ ಬೇಡುವ ಸ್ಥಿತಿ ನಿರ್ಮಾಣವಾಗಿತ್ತು. ರೋಗಿಗಳೊಂದಿಗೆ ಸಂಪರ್ಕ ಹೊಂದಿದ್ದವರ ಪತ್ತೆ ಕಾರ್ಯ ಕೈಬಿಟ್ಟಿದ್ದರಿಂದ ಸಮುದಾಯಕ್ಕೆ ಸೋಂಕು ಹರಡಿರುವ ಕುರಿತು ‘ವಿಜಯ ಕರ್ನಾಟಕ’ ಜೂ. 23 ರಂದು ವಿಸ್ತೃತ ವರದಿ ಪ್ರಕಟಿಸಿತ್ತು.
ಸೋಂಕಿತರನ್ನು ನಿಗದಿತ ಅವಧಿಯೊಳಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವೊಂದನ್ನು ಸರಕಾರ ರಚಿಸಿದೆ. ಪಾಲಿಕೆಯ ವಿಶೇಷ ಆಯುಕ್ತ ಡಿ.ರಂದೀಪ್ ಅವರು ಈ ತಂಡದ ಸದಸ್ಯರಾಗಿದ್ದಾರೆ. ಅದೇ ರೀತಿ, ಕೋವಿಡ್ ಆರೈಕೆ ಕೇಂದ್ರಗಳ ನಿರ್ವಹಣೆಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರನ್ನು ನೇಮಕ ಮಾಡಲಾಗಿದೆ.

ಒಂದು ಸಾವಿರ ಹಾಸಿಗೆ ವ್ಯವಸ್ಥೆ
ಯಲಹಂಕ ಸಮೀಪ ಇರುವ ಹಜ್‌ ಭವನದಲ್ಲಿ 500 ಹಾಸಿಗೆ, ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್‌ನ ಆರ್ಯುವೇದ ಆಸ್ಪತ್ರೆಯಲ್ಲಿ 400 ಹಾಸಿಗೆ ಹಾಗೂ ಕೆಂಗೇರಿಯಲ್ಲಿ ಮಿಡ್ಸೋಲ್ ಆಸ್ಪತ್ರೆಯಲ್ಲಿ ನೂರು ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.

ನಿಯಂತ್ರಣ ಕೊಠಡಿ ಸ್ಥಾಪನೆ
ಸೋಂಕಿತರನ್ನು ಶೀಘ್ರವಾಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಪಾಸಿಟಿವ್ ಪ್ರಕರಣಗಳ ಕುರಿತು ವಲಯ ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ತಕ್ಷಣ ಅವರು ನಿಯಂತ್ರಣ ಕೊಠಡಿಗೆ ಕರೆ ಮಾಡಿ ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಮಾಡುತ್ತಾರೆ.

17 ಟೆಂಪೋ ಟ್ರಾವೆಲರ್ ವಾಹನಗಳು
ಸೋಂಕಿತರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರ ಗಂಟಲು ದ್ರವ ಸಂಗ್ರಹಕ್ಕೆ ಪಾಲಿಕೆಯ ಎಂಟು ವಲಯಗಳಿಗೆ ತಲಾ ಒಂದೊಂದು ಟೆಂಪೋ ಟ್ರಾವೆಲರ್ ವಾಹನವನ್ನು ಒದಗಿಸಲಾಗಿದೆ. ಬೆಂಗಳೂರು ನಗರಕ್ಕೆ 5 ಮತ್ತು ಗ್ರಾಮಾಂತರಕ್ಕೆ 4 ಸೇರಿ ಒಟ್ಟು 17 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಶೀತ ಮಾದರಿ ಜ್ವರ (ಐಎಲ್ಐ) ಮತ್ತು ತೀವ್ರ ಉಸಿರಾಟದ ಸಮಸ್ಯೆಯಿಂದ (ಸಾರಿ) ಬಳಲುತ್ತಿರುವವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲು ಪ್ರತ್ಯೇಕವಾಗಿ 5 ವಾಹನಗಳನ್ನು ನಿಯೋಜಿಸಲಾಗುತ್ತಿದೆ.

ವಲಯಕ್ಕೊಂದು ಶ್ರದ್ಧಾಂಜಲಿ ವಾಹನ: ಸೋಂಕಿನಿಂದ ಮೃತಪಟ್ಟವರನ್ನು ವಿದ್ಯುತ್ ಚಿತಾಗಾರ ಅಥವಾ ರುದ್ರಭೂಮಿಗೆ ಸಾಗಿಸಲು ಪಾಲಿಕೆಯ ಎಂಟು ವಲಯಗಳಿಗೆ ತಲಾ ಒಂದೊಂದು ಶ್ರದ್ಧಾಂಜಲಿ ವಾಹನಗಳನ್ನು ಒದಗಿಸಲಾಗುತ್ತಿದೆ.

ಸೋಂಕು ಶಾಸ್ತ್ರಜ್ಞರ ನೇಮಕ
ಹೊರಗುತ್ತಿಗೆ ಆಧಾರದ ಮೇಲೆ ಎಂಟು ಮಂದಿ ಸೋಂಕು ಶಾಸ್ತ್ರಜ್ಞರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಮೊಬೈಲ್ ಸ್ಯಾಂಪಲ್ ಸಂಗ್ರಹ ವಾಹನ: ಬಿಬಿಎಂಪಿ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪೊಲೀಸರು, ಕೆಎಸ್ಆರ್‌ಟಿಸಿ, ಬಿಎಂಟಿಸಿ ಸಿಬ್ಬಂದಿ, ತರಕಾರಿ ವ್ಯಾಪಾರಿಗಳು, ಹೋಟೆಲ್ ಸಿಬ್ಬಂದಿ, ಸ್ವಿಗ್ಗಿ ಯುವಕರೂ ಸೇರಿದಂತೆ ಇನ್ನಿತರರ ಗಂಟಲು ದ್ರವ ಸಂಗ್ರಹಕ್ಕಾಗಿ ಒಂದು ಮೊಬೈಲ್ ಸ್ಯಾಂಪಲ್ ವಾಹನವನ್ನು ನಿಯೋಜಿಸಲಾಗುತ್ತಿದೆ.

ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಗಳು: ಸೋಂಕಿತರ ಚಿಕಿತ್ಸೆಗಾಗಿ ವಿಕ್ಟೋರಿಯಾ, ಬೌರಿಂಗ್, ರಾಜೀವ್‌ ಗಾಂಧಿ, ಕಮಾಂಡ್ ಆಸ್ಪತ್ರೆ, ಕುಷ್ಠ ರೋಗಿಗಳ ಆಸ್ಪತ್ರೆ, ಇಂದಿರಾನಗರ, ರಾಜಾಜಿನಗರ, ಪೀಣ್ಯದ ಇಎಸ್ಐ, ಸಿ.ವಿ.ರಾಮನ್‌ನಗರ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆಗಳನ್ನು ನಿಗದಿಪಡಿಸಲಾಗಿದೆ.

ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್
ಸೋಂಕಿತರನ್ನು ತ್ವರಿತವಾಗಿ ಆಸ್ಪತ್ರೆಗಳಿಗೆ ಕರೆದೊಯ್ಯಲು ಬೆಂಗಳೂರು ನಗರಕ್ಕೆ 6, ಗ್ರಾಮಾಂತರಕ್ಕೆ 4 ಮತ್ತು ಪಾಲಿಕೆಯ 8 ವಲಯಗಳಿಗೆ 38 ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, ಹೆಚ್ಚುವರಿಯಾಗಿ 2 ಆ್ಯಂಬುಲೆನ್ಸ್‌ಗಳನ್ನು ಪಾಲಿಕೆ ಕೇಂದ್ರ ಕಚೇರಿಗೆ ನೀಡಲಾಗಿದೆ. ಪಾಲಿಕೆಗೆ ನೀಡಿರುವ 38 ಆ್ಯಂಬುಲೆನ್ಸ್‌ಗಳು ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳ ಅಧೀನದಲ್ಲಿರುತ್ತವೆ. ಇವುಗಳ ಮೇಲೆ ನಿಗಾ ವಹಿಸಲು ಜಿಪಿಎಸ್ ಅಳವಡಿಸಲಾಗಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top