ಬಹುಭಾಷಾ ಸಾಹಿತ್ಯ ಚಟುವಟಿಕೆಗಳಲ್ಲಿ ಪುಟ್ಟ ಭಾರತ – ದೇಶೀಯ ಭಾಷೆಗಳಲ್ಲಿ ಕಂಪು ಪಸರಿಸುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು

– ಡಾ.ರೋಹಿಣಾಕ್ಷ ಶಿರ್ಲಾಲು. 

ಸಾಹಿತ್ಯ ನಿಂತ ನೀರಲ್ಲ. ಕಾಲ ಉರುಳಿದಂತೆ ಸಾಹಿತ್ಯ ಕೃತಿಗಳ ಆಶಯ, ಅಭಿವ್ಯಕ್ತಿ, ಶೈಲಿ, ವಸ್ತು ಹೀಗೆ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಇದು ದೋಷವಲ್ಲ. ಜೀವಂತಿಕೆಯ ಲಕ್ಷಣ. ಹೀಗಾಗಿ ಯಾವುದೇ ಭಾಷೆಯ ಕಳೆದ ಒಂದು ನೂರು ವರ್ಷದ ಸಾಹಿತ್ಯಚರಿತ್ರೆಯನ್ನು ಅಭ್ಯಾಸ ಮಾಡಲು ಹೊರಟರೆ ನಮಗೆ ಈ ವೈವಿಧ್ಯಮಯ ಬೆಳವಣಿಗೆಯ ದರ್ಶನವಾಗುತ್ತದೆ. ಅಲ್ಲಿ ಸಾಹಿತ್ಯದ ಛಂದೋವಿನ್ಯಾಸ ಬದಲಾಗಿದೆ. ಭಾಷೆಯ ಶೈಲಿ ಬದಲಾಗಿದೆ. ಪ್ರಕಾರಗಳು ಬದಲಾಗಿದೆ. ವಸ್ತು ವಿನ್ಯಾಸಗಳಲ್ಲಿ ಬದಲಾಗಿದೆ ಎನ್ನುವುದು ಕೇವಲ ಬದಲಾವಣೆಗಾಗಿ ನಡೆದ ಬದಲಾವಣೆ ಅಲ್ಲ. ಅದು ಕಾಲ ಕಾಲಕ್ಕೆ ನಡೆದ ನಾವೀನ್ಯತೆಯ ಶೋಧದ ಫಲ. ಸಾಹಿತಿ(ಕವಿ)- ಕೇಳುಗ-ಓದುಗ ಎನ್ನುವ ಬೆಸುಗೆಯಲ್ಲೇ ಈ ಬೆಳವಣಿಗೆಗಳು ನಡೆದಿವೆ. ಕೆಲವೊಮ್ಮೆ ಕವಿಗಳಿಗೆ ರಾಜಾತಿಥ್ಯ ಒದಗಿ ಬಂದರೆ ಮತ್ತೆ ಕೆಲವೊಮ್ಮೆ ಜಂಗಮರಾಗಿ ಜನರ ನಡುವೆಯೇ ಬಾಳಿದರು. ಸಮಾಜವೇ ಸಾಹಿತ್ಯವನ್ನು ನಿಜಾರ್ಥದಲ್ಲಿ ಪೋಷಿಸಿದ್ದು. ಊರ ನಡುವಿನ ಅರಳಿಕಟ್ಟೆ, ದೇಗುಲಗಳ ಪ್ರಾಂಗಣಗಳೇ ನಮ್ಮ ಸಾಹಿತ್ಯ ಗೋಷ್ಠಿಯ ತಾಣಗಳಾಗಿತ್ತು. ಅಲ್ಲೇ ಕವಿಗಳ ಹೊಸ ರಚನೆಗಳು ವಾಚನಗೊಳ್ಳುತಿದ್ದವು. ಹಿಂದಿನ ಕವಿಗಳ ಕಾವ್ಯಗಳ ಗಾಯನ, ವ್ಯಾಖ್ಯಾನ, ಚರ್ಚೆ, ಜಿಜ್ಞಾಸೆ ಎಲ್ಲವೂ ನಡೆಯುತ್ತಿತ್ತು. ಆಸಕ್ತರು ಮಾತ್ರವೇ ಸೇರುತ್ತಿದ್ದರು. ಕೇಳಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದರು. ಈ ಬಗೆಯ ಸಾಂಸ್ಕೃತಿಕ ಜೀವಂತಿಕೆಯೇ ನಮ್ಮ ಬಹುದೊಡ್ಡ ಶಕ್ತಿಯಾಗಿತ್ತು.
ಕಾಲಕ್ರಮೇಣ ಸಾಹಿತ್ಯ ಪ್ರಸರಣಕ್ಕಾಗಿ ಹಲವು ಸಂಘ ಸಂಸ್ಥೆಗಳು ಹುಟ್ಟಿಕೊಂಡಿತು. ಸರಕಾರದ ಪ್ರಾಯೋಜಕತ್ವ ಸಿಗಬೇಕಾಯಿತು. ಇದೂ ನಮ್ಮ ಸಮಾಜದ ಸಾಹಿತ್ಯಾಸಕ್ತಿಯನ್ನು ಬೆಳೆಸಿತು. ಊರು – ಕೇರಿಗಳಿಗೊಂದು, ಪ್ರತಿ ಭಾಷೆಗೊಂದು ಎಂಬಂತೆ ಸಂಘಟನೆಗಳು ಹುಟ್ಟಿಕೊಂಡವು. ಎಲ್ಲವೂ ಸೇರಿ ಸಾಹಿತ್ಯದ ಸಂಭ್ರಮವನ್ನು ಹೆಚ್ಚಿಸಿದವು. ಹೀಗೆ ದೇಶದೊಳಗೆ ಪ್ರಾಂತಭಾಷೆಗಳಲ್ಲಿ ಆ ಭಾಷೆಯ ಸಾಹಿತ್ಯಕ್ಕೆ ಮಾತ್ರವೇ ಎನ್ನುವಂತೆ ಸಂಸ್ಥೆಗಳು ರೂಪು ಪಡೆಯುತ್ತಿದ್ದವು. ಇದರ ನಡುವೆ 1966ರಲ್ಲಿ ಈ ದೇಶದ ಎಲ್ಲಾ ಭಾಷೆಗಳನ್ನೂ ಒಳಗೊಳ್ಳುವಂತೆ ಸಮಸ್ತ ಭಾರತೀಯ ಭಾಷೆಗಳ ದೇಶವ್ಯಾಪಿ ಸಾಹಿತ್ಯಿಕ ಸಂಘಟನೆಯಾಗಿ ‘ಅಖಿಲ ಭಾರತೀಯ ಸಾಹಿತ್ಯ ಪರಿಷತ್’ ಹುಟ್ಟಿಕೊಂಡಿತು. ದೇಶಾದ್ಯಂತ ತನ್ನ ಘಟಕಗಳನ್ನು ಹೊಂದಿರುವ ಸಾಹಿತ್ಯ ಪರಿಷತ್ ಕರ್ನಾಟಕದಲ್ಲೂ ಕಳೆದ ಐದು ವರ್ಷಗಳಿಂದ ಸಕ್ರಿಯವಾದ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉಳಿದ ಅನೇಕ ಸಂಘಟನೆಗಳಿಗೆ ಹೋಲಿಸಿದರೆ ಅ.ಭಾ.ಸ.ಪದ ಕಾರ್ಯಶೈಲಿ ವಿಶಿಷ್ಟ. ಸಾಹಿತ್ಯ ಸಮ್ಮೇಳನಗಳನ್ನು, ವಿಚಾರಗೋಷ್ಠಿಗಳನ್ನು ನಿರಂತರವಾಗಿ ಬೇರೆ ಬೇರೆ ಸ್ತರಗಳಲ್ಲಿ ನಡೆಸಿಕೊಂಡು ಬರುತ್ತಿರುವ ಪರಿಷತ್ತು ಕೇವಲ ಕಾರ್ಯಕ್ರಮ ನಡೆಸುವುದನ್ನೇ ಸಾಹಿತ್ಯಿಕ ಚಟುವಟಿಕೆಗಳ ಜೀವಾಳವೆಂದು ಭಾವಿಸಿಲ್ಲ. ನಮ್ಮಲ್ಲಿ ಕೆಲವೊಮ್ಮೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುವ ಸಮ್ಮೇಳನಗಳಿಗೆ ವರ್ಷಗಳ ಸಿದ್ಧತೆ, ಸಮಿತಿ ರಚನೆ, ಸಂಪನ್ಮೂಲ ಸಂಗ್ರಹ ಎಲ್ಲಾ ನಡೆದರೂ ಪ್ರತ್ಯಕ್ಷ ವಾಗಿ ಸಮ್ಮೇಳನಗಳು ಅವ್ಯವಸ್ಥಿತವಾಗಿ, ಸಾಹಿತ್ಯಾಸಕ್ತನೊಬ್ಬ ಯಾವೊಂದು ಗೋಷ್ಠಿಯಲ್ಲೂ ಪ್ರಶಾಂತವಾಗಿ ಕುಳಿತು ಆಸ್ವಾದಿಸಲಾಗದ ಸ್ಥಿತಿಗೆ ತಂದಿಡುತ್ತೇವೆ. ಮಾತ್ರವಲ್ಲ ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸುವವರೇ ಬೇರೆ, ಸಾಹಿತಿಗಳೇ ಬೇರೆ, ಕುರ್ಚಿ ಹಾಕುವ, ಬ್ಯಾನರ್ ಕಟ್ಟುವ ಮಂದಿಯೆ ಬೇರೆ. ಇಷ್ಟೆಲ್ಲದರ ಆಚೆ ಬಹುತೇಕ ಸಂದರ್ಭಗಳಲ್ಲಿ ಇವರ್ಯಾರು ಗೋಷ್ಠಿಗಳ ಕೇಳುಗರೇ ಅಲ್ಲ. ಅ.ಭಾ.ಸಾ.ಪದ ಚಟುವಟಿಕೆಗಳನ್ನು ಗಮನಿಸಿದರೆ ಸಂಪೂರ್ಣ ಭಿನ್ನ ! ಇಲ್ಲಿ ಸಾಹಿತಿಗಳನ್ನು, ಬ್ಯಾನರ್ ಕಟ್ಟಿದವರನ್ನೂ ಒಳಗೊಂಡೇ ಸಾಹಿತ್ಯ ಕಾರ್ಯಕರ್ತರು ಎನ್ನಲಾಗುತ್ತದೆ. ಹೀಗಾಗಿ ಇದೊಂದು ಸಾಹಿತ್ಯಿಕ ಪರಿವಾರ. ಸಂದರ್ಭ ಬಂದಾಗ ಕಸವನ್ನೂ ಹೊಡೆಯುತ್ತಾರೆ. ಕಥೆಯನ್ನೂ ಬರೆಯುತ್ತಾರೆ. ಉಪನ್ಯಾಸವನ್ನೂ ನೀಡುತ್ತಾರೆ. ಊಟೋಪಚಾರದ ವ್ಯವಸ್ಥೆಯನ್ನೂ ಮಾಡುತ್ತಾರೆ. ವೇದಿಕೆಗಾಗಿ ಸಾಹಿತಿಗಳಲ್ಲ. ಸಾಹಿತಿಯೂ ಇಲ್ಲಿಯೇ ತಯಾರಾಗುತ್ತಾರೆ.
ಹೊಸ ಪೀಳಿಗೆಯ ಬರಹಗಾರರನ್ನು ರೂಪಿಸುವ ಜವಾಬ್ದಾರಿಯನ್ನು ತಾನೆ ಸ್ವೀಕರಿಸಿದ ಸಂಘಟನೆ ಅದಕ್ಕಾಗಿ ವ್ಯವಸ್ಥಿತವಾಗಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕವಿತೆ ರಚನೆ, ಕಥಾರಚನೆಯ ಕಮ್ಮಟಗಳನ್ನು ಆಯೋಜಿಸಿ ಆ ಕ್ಷೇತ್ರದಲ್ಲಿ ಆಸಕ್ತರಾಗಿರುವ ಹೊಸ ಪೀಳಿಗೆಯ ಬರಹಗಾರರಿಗೆ ಬೇಕಾದ ಪ್ರಾಯೋಗಿಕ ತರಬೇತಿಯನ್ನು ನೀಡುತ್ತಿದೆ. ಈ ಹಿಂದೆ ಎರಡು ರಾಜ್ಯ ಸಮ್ಮೇಳನಗಳನ್ನು ನಡೆಸಿದ ಅ.ಭಾ.ಸಾ.ಪ. ಸಮ್ಮೇಳನದ ಭಾಗವಾಗಿ ಪ್ರಕಟಿಸಿದ ಒತ್ತಾಯಗಳು ಸರಕಾರಕ್ಕಲ್ಲ. ಅದು ಸಮಾಜಕ್ಕೆ. ಇವುಗಳನ್ನು ಜಾರಿ ಮಾಡಬೇಕಾದುದು ಸರಕಾರವಲ್ಲ. ಅದು ಸಮಾಜದ ಜವಾಬ್ದಾರಿ ಎನ್ನುವ ನಿಲುವಿನಿಂದ ಕೆಲಸ ಮಾಡುತ್ತಿದೆ. ಪುಸ್ತಕ ಓದುವ ಆಸಕ್ತಿಯನ್ನು ಬೆಳೆಸಬೇಕು ಎನ್ನುವ ಒತ್ತಾಯವನ್ನು ಅಥವಾ ಮನವಿಯನ್ನು ಸರಕಾರಕ್ಕೆ ಮಾಡಿ ಪ್ರಯೋಜನವೇನು? ಅದರ ಬದಲು ಈ ಮನವಿಯನ್ನು ಸಮಾಜಕ್ಕೆ ಮಾಡುತ್ತದೆ. ಸಮಾಜ ಈ ಅಪೇಕ್ಷೆಯನ್ನು ಪೂರೈಸಲು ಅನುವಾಗುವಂತೆ ಮನೆಮನೆ ಗ್ರಂಥಾಲಯದ ಕಲ್ಪನೆಯನ್ನು ಮುಂದಿಡುತ್ತದೆ. ಪುಸ್ತಕದ ಕಿಡ್‌ಗಳನ್ನು ಸಿದ್ಧಗೊಳಿಸಿ ಘಟಕಗಳ ಮೂಲಕ ಆಸಕ್ತ ಓದುಗರಿಗೆ ತಲುಪಿಸುತ್ತಿದೆ.
ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರನ್ನು ಒಳಗೊಂಡ ಘಟಕಗಳನ್ನು ರಚಿಸಿ ಸಾಹಿತ್ಯಿಕ ಚಟುವಟಿಕೆಗಳನ್ನು ವಿಸ್ತಾರಗೊಳಿಸುವ ಕನಸಿನೊಂದಿಗೆ ರಾಜ್ಯಾದ್ಯಂತ 50 ಘಟಕಗಳನ್ನು ರಚಿಸಿ ಕ್ರಿಯಾಶೀಲಗೊಳಿಸಿದ್ದ ಪರಿಷತ್ ಚಟುವಟಿಕೆಗೆ ಕೊರೊನಾ ಕಾಲದ ಲಾಕ್‌ಡೌನ್‌ ಸಹಜವಾಗಿಯೇ ತಡೆಯಾಗಬೇಕಾಗಿತ್ತು. ಆದರೆ ಹಾಗಾಗಲಿಲ್ಲ ಎಂದರೆ ಅಚ್ಚರಿಯಾಗಬಹುದು! ಅದರ ಬದಲಿಗೆ ಲಾಕ್‌ಡೌನ್‌ ನಡುವೆ ಕರ್ನಾಟಕದಾದ್ಯಂತ 50 ಹೊಸ ಘಟಕಗಳು ಆನ್‌ಲೈನ್‌ ಮೂಲಕವೇ ಉದ್ಘಾಟನೆಗೊಂಡಿತು. ಉದ್ಘಾಟನೆ ಎಂದರೆ ಅದು ಕೇವಲ ಸಾಂಕೇತಿಕ ಕಾರ್ಯಕ್ರಮವಲ್ಲ. ಅರ್ಥಪೂರ್ಣ ಸಂಗೋಷ್ಠಿಗಳನ್ನು, ಕವಿಗೋಷ್ಠಿಗಳನ್ನು, ವೆಬಿನಾರ್‌ಗಳನ್ನು ಆಯೋಜಿಸಲಾಗಿತ್ತು. ಉದಾಹರಣೆಗೆ ಮೈಸೂರು ಘಟಕವೊಂದೇ ದಿನಕ್ಕೊಂದರಂತೆ ಐವತ್ತು ದಿನಗಳ ಕಾಲ ಐವತ್ತು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಈಗ ಅದನ್ನು ವಾರಕ್ಕೆ ಒಂದು ಕಾರ್ಯಕ್ರಮ ಎಂದು ಬದಲಾಯಿಸಿಕೊಂಡಿದೆ. ಇನ್ನು ಅನೇಕ ಘಟಕಗಳು ವಿದ್ಯಾರ್ಥಿಗಳಿಗಾಗಿ ಕಮ್ಮಟಗಳು, ಪುಸ್ತಕ ವಿಮರ್ಶೆ, ಕವಿಗೋಷ್ಠಿ, ಘಟಕಗಳಲ್ಲಿ ಕ್ರಿಯಾಶೀಲರಾದ ಲೇಖಕರು ತಾವೇ ರಚಿಸಿದ ಕೃತಿಗಳ ಪರಿಚಯ, ವಿಷಯ ಮಂಡನೆಗಳನ್ನು ನಡೆಸಿವೆ. ಮಾತ್ರವಲ್ಲ ಅ.ಭಾ.ಸಾ.ಪ.ವು ಪ್ರಕಟಿಸಿದದ ನಾಲ್ಕು ಪುಸ್ತಕಗಳನ್ನು ಏಕಕಾಲದಲ್ಲಿ ಆನ್‌ಲೈನ್ ಮೂಲಕವೇ ಬಿಡುಗಡೆಗೊಳಿಸಿ ಒಂದು ಹೊಸ ಪರಂಪರೆಯನ್ನು ಹುಟ್ಟುಹಾಕಿದೆ. ಈ ಎಲ್ಲಾ‌ ವೈವಿಧ್ಯಮಯ ಕಾರ್ಯಕ್ರಮಗಳು ಸಾಹಿತ್ಯಾಸಕ್ತರನ್ನು ಲಾಕ್‌ಡೌನ್‌ ಕಾಲದಲ್ಲಿ ಬೌದ್ಧಿಕ ಜಡತೆಗೆ ಜಾರದಂತೆ ಕ್ರಿಯಾಶೀಲವಾಗಿಟ್ಟಿತ್ತು. ಎರಡು ತಿಂಗಳುಗಳ ಕಾಲ ಪ್ರತಿ ಶನಿವಾರ ನಡೆಸಲುದ್ದೇಶಿಸಿದ ಕಥಾಕಮ್ಮಟದಲ್ಲಿ ನಾಡಿನ ಹೆಸರಾಂತ ಕಥೆಗಾರರು ಯುವ ಕಥೆಗಾರರಿಗೆ ಮಾರ್ಗದರ್ಶನ ಮಾಡುತ್ತಿದ್ದರೆ, ಕಥೆಯ ವಸ್ತುವಿನ ಆಯ್ಕೆ, ಸನ್ನಿವೇಶ ರಚನೆ, ಪಾತ್ರಸೃಷ್ಟಿ, ನಿರೂಪಣೆ ಹೀಗೆ ಒಂದೊಂದು ಮುಖಗಳನ್ನು ಪರಿಚಯಿಸುತ್ತಲೇ ಪ್ರತಿವಾರ ಕಮ್ಮಟದಲ್ಲಿ ಭಾಗವಹಿಸಿದವರು ಒಂದೊಂದು ಕಥೆಗಳನ್ನು ರಚಿಸುವ ಪ್ರಾಯೋಗಿಕ ಕೆಲಸವೂ ಇದೆ. ಈ ಕಥೆಗಳನ್ನು ಹಿರಿಯ ಕಥೆಗಾರರು ಮೌಲ್ಯಮಾಪನ ನಡೆಸಿ ಈ ಕುರಿತು ಚರ್ಚೆಗಳನ್ನು ನಡೆಸಿಕೊಡುತ್ತಿದ್ದಾರೆ.
ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಂಘಟನಾತ್ಮಕ ಕಾರ್ಯದ ಉದ್ದೇಶಕ್ಕಾಗಿ ರಚಿಸಿದ ಸಮಿತಿಗಳಿವೆ. ಸಮಿತಿ ಬಹಿರ್ಮುಖಿ ಕಾರ್ಯಗಳನ್ನು ನಡೆಸುವ, ಚಟುವಟಿಕೆಗಳಿಗೆ ಪೂರಕ ಮಾರ್ಗದರ್ಶನವನ್ನು ನೀಡುವ ಕೆಲಸ ಮಾಡಿದರೆ, ಘಟಕಗಳು ಯಾವುದೇ ಭೌಗೋಳಿಕ ಪರಿಧಿಗೆ ಒಳಪಡದೆ ಗರಿಷ್ಠ ಮೂವತ್ತು ಜನ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ನಡೆಸುವ ಅಂತರ್ಮುಖಿ ಚಟುವಟಿಕೆಗಳ, ಸೃಷ್ಟಿಶೀಲತೆಯ ತಾಣ. ಅಂದರೆ ಒಂದು ಊರಿನಲ್ಲಿ ಪ್ರತ್ಯಕ್ಷ ವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರ ಕೂಟ. ಒಂದು ಊರಿನಲ್ಲಿ ಒಂದೇ ಘಟಕವಿರಬೇಕೆಂದಿಲ್ಲ. ಸಾಹಿತ್ಯಾಸಕ್ತರು ಹೆಚ್ಚಿದ್ದರೆ ಮತ್ತೊಂದು ಘಟಕವನ್ನೂ ರೂಪಿಸಿಕೊಳ್ಳಬಹುದು. ಈ ಮೂಲಕ ಅ.ಭಾ.ಸಾ.ಪ ಸಾಹಿತ್ಯದ ಕೆಲಸದೊಳಗೆ ತನ್ನ ಸಾರ್ಥಕ್ಯವನ್ನು ಕಾಣುತ್ತಿದೆ. ಒಂದೊಂದು ಘಟಕವೂ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಕೇಂದ್ರಗಳಷ್ಟೇ ಆಗದೆ, ಸಾಹಿತಿಗಳನ್ನು ತಯಾರು ಮಾಡುವ ಶಕ್ತಿಕೇಂದ್ರಗಳಾಗಬೇಕೆನ್ನುವ ಚಿಂತನೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಆಡಂಬರ, ಗೌಜುಗದ್ದಲವಿಲ್ಲದೆ ವ್ಯವಸ್ಥಿತವಾಗಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದೇ ಇಲ್ಲಿನ ಯಶಸ್ಸಿಗೆ ಮುಖ್ಯ ಕಾರಣ. ಈಗಾಗಲೇ ರಾಜ್ಯಮಟ್ಟದಲ್ಲಿ ಹಿರಿಯ ಬರಹಗಾರರ ಜೀವಮಾನದ ಸಾಧನೆಯನ್ನು ಗೌರವಿಸಲು ‘ಆದಿಕವಿ ಪುರಸ್ಕಾರ’ವನ್ನು, ಯುವ ಬರಹಗಾರರನ್ನು ಪ್ರೋತ್ಸಾಹಿಸಲು ‘ವಾಗ್ದೇವಿ ಪುರಸ್ಕಾರ’ವನ್ನು ನೀಡಿ ಗೌರವಿಸಲಾರಂಭಿಸಿದ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಗುರುತಿಸಿ ದಾನಿಗಳು ಸಂಚಿತ ನಿಧಿಯೊಂದನ್ನು ಸ್ಥಾಪಿಸಿ ಈ ಕಾರ್ಯ ಭವಿಷ್ಯದಲ್ಲಿ ನಿರಂತರವಾಗಿ ನಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಅ.ಭಾ.ಸಾ.ಪ.ದ ಒಂದು ವೈಶಿಷ್ಟ್ಯವೆಂದರೆ ಅದು ಎಲ್ಲಾ ಭಾರತೀಯ ಭಾಷೆಗಳನ್ನು ಸಮಾನವಾಗಿ ಒಳಗೊಳ್ಳುತ್ತದೆ. ಪ್ರತಿನಿಧಿಸುತ್ತದೆ. ಆ ಮೂಲಕ ಎಲ್ಲಾ ಭಾಷೆಗಳನ್ನು ಒಗ್ಗೂಡಿಸುವ, ಬೆಸೆಯುವ ಕೆಲಸವನ್ನು ಸದ್ದಿಲ್ಲದೆ ನಡೆಸಿಕೊಂಡು ಬಂದಿದೆ. ಬೇರೆ ಬೇರೆ ಭಾಷೆಗಳ ನಡುವೆ ಸೌಹಾರ್ದತೆಯನ್ನು ಮೂಡಿಸುವಲ್ಲಿ ಎಷ್ಟು ಸಹಜವಾಗಿ ಕ್ರಿಯಾಶೀಲವಾಗಿದೆಯೆಂದರೆ ‘ಹಾದಿಗಲ್ಲು’ ಎನ್ನುವ ಊರಿನಲ್ಲಿ ಆಯೋಜಿಸಿದ ಬಹುಭಾಷಾ ಕವಿಗೋಷ್ಠಿಯಲ್ಲಿ 25 ಭಾಷೆಯ 49 ಕವಿಗಳು ಭಾಗವಹಿಸಿದ್ದರು. ಈ ಯಾವ ಕವಿಗಳೂ ಗೋಷ್ಠಿಗಾಗಿ ಹೊರರಾಜ್ಯದಿಂದ ಬಂದವರಲ್ಲ. ಅವರೆಲ್ಲರೂ ಕರ್ನಾಟಕದಲ್ಲೇ ಇರುವವರು. ಕರ್ನಾಟಕದವರೇ. ಅಂದರೆ ಇದೊಂದು ಪುಟ್ಟ ಭಾರತವೇ ನಮ್ಮೆದುರು ಬಂದಂತೆ. ಇದು ಸಾಧ್ಯವಾದುದು ಭಾರತೀಯ ಭಾಷೆಗಳು ಪರಸ್ಪರ ಸೋದರ ಭಾಷೆಗಳೆನ್ನುವ ನಿಲುವಿನಿಂದ. ಇಲ್ಲಿಸಂಘರ್ಷವಿಲ್ಲ. ಸೌಹಾರ್ದತೆಯೇ ಎಲ್ಲಾ.
ನಾಡಿನ ಜೀವಂತಿಕೆಯನ್ನು ಪೋಷಿಸುವ, ಸಂವೇದನಾಶೀಲತೆಯನ್ನು ಬೆಳೆಸುವ ಸಾಹಿತ್ಯಿಕ ಚಟುವಟಿಕೆಗಳು ಯೋಜನಾಬದ್ಧವಾಗಿ ನಡೆದಾಗ ಹೊಸ ತಲೆಮಾರು ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಸಾಹಿತ್ಯ ಕೂಟಗಳು ಜಗತ್ತಿನಾದ್ಯಂತ ಹೊಸ ಚಿಂತನೆಗಳನ್ನು ಹುಟ್ಟುಹಾಕಿ, ವಿಮರ್ಶೆಯ ಪರಂಪರೆಯನ್ನು ಬೆಳೆಸಿದ ನಿದರ್ಶನಗಳು ನಮ್ಮ ಕಣ್ಮುಂದಿದೆ. ಸಣ್ಣ ಸಣ್ಣ ಘಟಕಗಳಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಕೂಟಗಳು ಮುಂದೊಂದು ದಿನ ಚಿಂತನಾ ವಲಯಕ್ಕೆ ಮಹತ್ವದ ಕೊಡುಗೆಗಳನ್ನು ನೀಡಬಹುದೆನ್ನುವುದರಲ್ಲಿ ಸಂಶಯವಿಲ್ಲ.
ಲಾಕ್‌ಡೌನ್‌ ಕಾಲದ 51ನೇ ಘಟಕ ಇಂದು ಉದ್ಘಾಟನೆಗೆ ಸಿದ್ಧವಾಗಿದೆ. ಕನ್ನಡ ನಾಡಿನ ಹಿರಿಮೆಯನ್ನು ಎತ್ತರಕ್ಕೆ ತೆರೆದು ತೋರಿದ ನಾಡು ಹಲ್ಮಿಡಿಯಲ್ಲಿ. ಪ್ರಾಚೀನ ಶಾಸನವನ್ನು ನಾಡಿನ ಹಿರಿಮೆಯ ರೂಪದಲ್ಲಿ ನೀಡಿದ ಹಲ್ಮಿಡಿ, ಇಂದು ನವ ಮಾಧ್ಯಮವನ್ನು ಬಳಸಿಕೊಂಡೇ ಮತ್ತೆ ಸಾಹಿತ್ಯದ ಕಂಪನ್ನು ಪಸರಿಸಲು ಸಿದ್ಧವಾಗಿದೆ. ಈ ಮೂಲಕ ಕನ್ನಡ ನಾಡಿನೊಳಗೆ 101ನೇ ಘಟಕ ಆರಂಭಗೊಳ್ಳುತ್ತಿದೆ. ಸೃಷ್ಟಿಶೀಲತೆಗೆ ಲೋಕದಲ್ಲಿ ಯಾವುದೂ ತಡೆಯಲ್ಲ. ಲಾಕ್‌ಡೌನ್‌ ನಡುವೆಯೂ ಸಾಹಿತ್ಯ ಕಂಪನ್ನು ಪಸರಿಸುವ ಕಾಯಕವನ್ನು ನಿರಂತರ ಮುಂದುವರಿಸಿಕೊಂಡು ಬಂದ ಅ.ಭಾ.ಸಾ.ಪ. ಮುಂದಿನ ದಿನಗಳ ಎಲ್ಲಾ ಸಾಹಿತ್ಯ ಚಟುವಟಿಕೆಗಳಿಗೆ ಹೊಸದೊಂದು ದಿಕ್ಕನ್ನು ತೋರಿಸಿದೆ. ಕೊರೊನೋತ್ತರ ಕಾಲದ ಸಾಹಿತ್ಯ ಚಟುವಟಿಕೆಗಳಿಗೆ ಹೊಸಬಗೆಯ ದಾರಿಯನ್ನು ಹುಡುಕಿದೆ.
(ಲೇಖಕರು ಕರ್ನಾಟಕ ಕೇಂದ್ರೀಯ ವಿವಿ ಸಹಾಯಕ ಪ್ರಾದ್ಯಾಪಕರು ಹಾಗೂ ವಾಗ್ದೇವಿ ಪ್ರಶಸ್ತಿ ಪುರಸ್ಕೃತರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top