ಹಿಮಾಲಯದ ದಳ್ಳುರಿ

ಕನ್ನಡದ ಖ್ಯಾತ ಕಾದಂಬರಿಕಾರ ನಿರಂಜನ ಅವರು ಬರೆದ ‘ಹಿಮಾಲಯದ ದಳ್ಳುರಿ’ ಕೃತಿ ಭಾರತ ಮತ್ತು ಚೀನಾ ಸಂಘರ್ಷದ ಇತಿಹಾಸವನ್ನು ದಾಖಲಿಸಿರುವ ಒಂದು ಆಕರಗ್ರಂಥ. ಚೀನಾ ದೇಶ ಭಾರತದ ಮೇಲೆ ದುರಾಕ್ರಮಣ ನಡೆಸುತ್ತಿದ್ದ ಸಂದರ್ಭದಲ್ಲಿಯೇ (1962ರ ನವೆಂಬರ್‌ 15) ಈ ಪುಸ್ತಕ ಪ್ರಕಟವಾಗಿತ್ತು. ವಿಜಯ ಕರ್ನಾಟಕಕ್ಕಾಗಿ ಇದರ ಸಂಗ್ರಹ ನಿರೂಪಣೆ ಸುಧೀಂದ್ರ ಹಾಲ್ದೊಡ್ಡೇರಿ.

– ನಿರಂಜನ

ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತವನ್ನು ಬ್ರಿಟಿಷರು ಆಕ್ರಮಿಸಿದಾಗ, ಕಾಶ್ಮೀರದಿಂದ ಬರ್ಮಾದವರೆಗೂ ತಮ್ಮ ಗಡಿಯನ್ನು ಅವರು ಭದ್ರಗೊಳಿಸಿದರು. ಲಡಾಖ್‌ ಪ್ರದೇಶದಲ್ಲಿ ಆ ಮೊದಲೇ ಗಡಿಯ ಬಗ್ಗೆ ಒಪ್ಪಂದವಾಗಿದ್ದುದರಿಂದ ಉಳಿದ ಸೀಮಾರೇಖೆಯನ್ನು ನಕಾಶೆಯ ಮೇಲೆ ನಿರ್ದಿಷ್ಟವಾಗಿ ಗುರುತಿಸುವ ಕೆಲಸವನ್ನು ಬ್ರಿಟಿಷ್‌ ಅಧಿಕಾರಿ ಸರ್‌ ಹೆನ್ರಿ ಮೆಕ್‌ಮಹೋನ್‌ ಕೈಗೊಂಡರು.
ಆದರೆ, ನೂತನ ಚೀನದ ಸ್ಥಾಪನೆಯಾದ ಮೇಲೆ ಪಶ್ಚಿಮದ ಲಡಾಕಿನಲ್ಲೂ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬುಗಳ ಉತ್ತರಕ್ಕಿರುವ ಮಧ್ಯ ವಲಯದಲ್ಲೂ ಈಶಾನ್ಯ ಗಡಿಯಲ್ಲೂ ಅವರು ತೋರಿಸುತ್ತಿದ್ದ ಸೀಮಾ ರೇಖೆಗೂ ಭಾರತಕ್ಕೂ ಮಹದಂತರವಿತ್ತು. 1955ರಲ್ಲಿ ಜವಾಹರಲಾಲರು ಪೀಕಿಂಗಿಗೆ ಹೋದಾಗ ಚೌ ಎನ್‌-ಲೇಯೊಡನೆ ನಕಾಶೆಯ ಬಗ್ಗೆ ಪ್ರಸ್ತಾಪಿಸಿದರು. ‘‘ಇವೆಲ್ಲಾ ಕೂಮಿಂಟಾಂಗ್‌ ನಕಾಶೆಯ ಪುನರ್ಮುದ್ರಣ. ಬದಲಾಯಿಸಲು ನಮಗೆ ಬಿಡುವೇ ದೊರೆತಿಲ್ಲ,’’ ಎಂದರು ಚೌ ಎನ್‌-ಲೇ.
ಇದು ಅಧಿಕೃತ- ಎಂದು ಚೀನಾ ಒಪ್ಪಿಕೊಂಡ ಮೊದಲ ನಕಾಶೆ 1956ರದ್ದು. ಅದರಲ್ಲಿ ನೇಫಾ (ಬ್ರಿಟಿಷರು ಭಾರತದ ಈಶಾನ್ಯ ಗಡಿಭಾಗದಲ್ಲಿ ಗುರುತಿಸಿದ ರಾಜಕೀಯ ಭಾಗ) ಪ್ರದೇಶದ 35,000 ಚದರ ಮೈಲು ವಿಸ್ತೀರ್ಣವನ್ನೂ ಲಡಾಖಿನ 14,000 ಚದರ ಮೈಲು ಭೂಭಾಗವನ್ನೂ ಚೀನದ್ದೆಂದು ತೋರಿಸಲಾಗಿತ್ತು. 1960ರಲ್ಲಿ ಇನ್ನೊಂದು ನಕಾಶೆಯನ್ನು ಚೀನಾ ಮುಂದಿಟ್ಟಿತು. ಪರಿಷ್ಕರಿಸಿದ ನಕಾಶೆ. ಅದರ ಪ್ರಕಾರ ಲಡಾಖ್‌ ಪ್ರದೇಶದ ಗಡಿ ಕೆಳಕ್ಕೆ ಉಬ್ಬಿತ್ತು. ಆಯಕಟ್ಟಿನ ಸ್ಥಳಗಳಿರುವ ಮತ್ತಷ್ಟು ಪ್ರದೇಶವನ್ನು- 800 ಚದರ ಮೈಲು ವಿಸ್ತಾರವನ್ನು ತನ್ನದೆಂದು ಚೀನಾ ಸೂಚಿಸಿತ್ತು. ನೇಫಾದಲ್ಲೂ ಹಿಂದಿನದಕ್ಕಿಂತಲೂ ಹೆಚ್ಚು ವಿಸ್ತಾರದ ಪ್ರದೇಶವನ್ನು ತನ್ನದಾಗಿ ತೋರಿಸಿತು.
ಆರಂಭದಿಂದಲೂ, ‘‘ಚೀನದ ಗಡಿಯನ್ನು ಭದ್ರಪಡಿಸಿಕೊಳ್ಳಲು ನಾವು ಆತುರರಾಗಿದ್ದೇವೆ,’’ ಎಂದು ಚೀನೀಯರು ಹೇಳುತ್ತಿದ್ದರೇ ಹೊರತು, ಮೆಕ್‌ಮಹೋನ್‌ ರೇಖೆಯ ವಿಷಯದಲ್ಲಾಗಲೀ ಲಡಾಖ್‌ ಗಡಿಗೆ ಸಂಬಂಧಿಸಿಯಾಗಲೀ ತಮಗೆ ಭಿನ್ನಾಭಿಪ್ರಾಯವಿದೆಯೆಂದು ಚೀನಾ ಎಂದೂ ಹೇಳಿರಲಿಲ್ಲ. ಪಂಚಶೀಲ ಸೂತ್ರಕ್ಕೆ ಸಹಿ ಹಾಕಿದ ಚೀನವನ್ನು ಸ್ನೇಹಿತ ರಾಷ್ಟ್ರವೆಂದೇ ಭಾರತ ಬಗೆಯಿತು. ಉತ್ತರ ದಿಕ್ಕಿನಲ್ಲಿ ಚೀನದಿಂದ ತನಗೆ ಯಾವ ತೊಂದರೆಯೂ ಉಂಟಾಗದೆಂದು ನಂಬಿ ನಿಶ್ಚಿಂತೆಯಾಗಿ ಕುಳಿತಿತು.
ಆದರೆ, ಟಿಬೆಟ್ಟನ್ನು ಯುದ್ಧ ನೆಲೆಯಾಗಿ ಮಾರ್ಪಡಿಸಿದ್ದ ಚೀನೀಯರು ಕೈಕಟ್ಟಿ ಸುಮ್ಮನಿದ್ದು ಕಾಲಯಾಪನೆ ಮಾಡಲಿಲ್ಲ. ಪೀಕಿಂಗಿನಿಂದ ಜವಾಹರರು ಮರಳಿದ ಸ್ವಲ್ಪ ಸಮಯದಲ್ಲೇ ಚೀನೀ ಸೈನಿಕರು ಉತ್ತರ ಪ್ರದೇಶದ ಬಾರಾಹೋತಿಗೂ ಶಿಪ್ಕಿ ಕಣಿವೆಗೂ ಇಳಿದರು. ಬಾರಾಹೋತಿಯ ನಮ್ಮ ಗಡಿಠಾಣ್ಯವನ್ನು ವಶಪಡಿಸಿಕೊಂಡರು. 1955ರ ಬಾಂಡುಂಗ್‌ ಸಮ್ಮೇಳನದಲ್ಲಿ ಶಾಂತಿಘೋಷಣೆಯನ್ನು ಚೌ ಎನ್‌-ಲೈ ಮಾಡುತ್ತಿದ್ದಂತೆಯೇ ಅವರ ಸೈನಿಕರು ಲಡಾಖ್‌ ಪ್ರದೇಶದಲ್ಲಿ ಸ್ವಲ್ಪ ಸ್ವಲ್ಪವಾಗಿ ಮುಂದುವರಿಯುತ್ತ ಪಾನ್‌ಗಾಂಗ್‌ ಸರೋವರದ ಪಶ್ಚಿಮಕ್ಕೆ ಬಂದರು. ಕಾವಲಿಗಿದ್ದ ಆರು ಜನ ಪೋಲೀಸರನ್ನು ಬಂಧಿಸಿ, ಸ್ಪಾಂಗ್ಗುರ್‌ ಎಂಬಲ್ಲಿ ಶಿಬಿರ ಸ್ಥಾಪಿಸಿದರು. ನೇಫಾ ಪ್ರದೇಶದಲ್ಲಿ ಲೊಂಗ್ಜು ಠಾಣ್ಯವನ್ನು ಆಕ್ರಮಿಸಿದರು.
ಮುಂದೆ ದಕ್ಷಿಣ ಲಡಾಖಿನಲ್ಲಿ ಚಾಂಗ್‌ಚೆನ್ಮೊ ಕಣಿವೆಯಲ್ಲಿ ಮುಂದುವರಿದರು. ಕೊಂಗಾ ಕಣಿವೆ ಮಾರ್ಗದಲ್ಲಿ ಕಾವಲಿದ್ದ ಭಾರತೀಯ ಪೊಲೀಸರ ಮೇಲೆ ದಾಳಿ ಮಾಡಿ ಒಂಬತ್ತು ಜನರನ್ನು ಕೊಂದು, ಉಳಿದವರನ್ನು ಚಿತ್ರಹಿಂಸೆಗೆ ಗುರಿಮಾಡಿದರು. ಭಾರತ ಸರಕಾರ, ಗಡಿಠಾಣ್ಯಗಳಲ್ಲಿ ಪೊಲೀಸರ ಬದಲಿಗೆ ಸೈನಿಕರನ್ನು ಕಳಿಸಿತು. ಗಡಿರಕ್ಷಣೆಯ ಭಾರವನ್ನು ಮಿಲಿಟರಿಗೆ ವಹಿಸಿಕೊಟ್ಟಿತು.
ಭಾರತದ ಸುಮಾರು 50,000 ಚದರ ಮೈಲು ವಿಸ್ತೀರ್ಣ ತನ್ನದೆಂದು ಚೀನಾ ಪ್ರಥಮ ಬಾರಿ ಹೇಳಿದ್ದು 1959ರ ಸೆಪ್ಟೆಂಬರ್‌ 8ರ ಪತ್ರದಲ್ಲಿ. ಪಂಚಶೀಲದ ಘೋಷಣೆಯಾದ ದಿನದಿಂದ ಆವರೆಗಿನ ಅವಧಿಯಲ್ಲಿ, ಮತ್ತೊಂದು ವಿಶೇಷ ಘಟನೆ ಹೊರಜಗತ್ತಿಗೆ ತಿಳಿಯದಂತೆ ಲಡಾಖಿನ ಅಕ್ಸಾಯಿಚಿನ್‌ ಭಾಗದಲ್ಲಿ ನಡೆಯಿತು. ಭಾರತದ್ದಾದ ಆ ನಿರ್ಜನ ಪ್ರದೇಶದಲ್ಲಿ 30,000 ಚೀನೀ ಸೈನಿಕರು ಟಿಬೆಟ್ಟನ್ನೂ ಸಿಂಕಿಯಾಂಗನ್ನೂ ಜೋಡಿಸುವಂಥ ನೂರು ಮೈಲುದ್ದದ ಹೆದ್ದಾರಿಯನ್ನು ನಿರ್ಮಿಸಿದರು. ಉಪದಾರಿಗಳನ್ನು ಕಡಿದರು. ಅಕ್ಸಾಯಿಚಿನ್‌ನಲ್ಲಿ ಮೂರು ಟನ್‌ ಭಾರದ ಟ್ರಕ್ಕುಗಳು ಸಾಗಲು ಅನುಕೂಲವಾಗುವಂತಹ ಇನ್ನೊಂದು ರಸ್ತೆಯನ್ನು ಚೀನೀಯರು ನಿರ್ಮಿಸಿದರು.
ಮಾತುಕತೆಗಾಗಿ ಭಾರತದ ಅಪೇಕ್ಷೆಯಂತೆ ದಿಲ್ಲಿಗೆ ಬಂದ ಚೀನೀ ಪ್ರಧಾನಿಯನ್ನು ಜವಾಹರರು ಅಕ್ಸಾಯಿಚಿನ್‌ನ ರಸ್ತೆಯ ಕುರಿತು ಕೇಳಿದಾಗ ಅವರು, ‘‘ನನಗೆ ತಿಳಿಯದು,’’ ಎಂದಿದ್ದರು. ಪರಿಣತ ಅಧಿಕಾರಿಗಳ ಸಭೆಗಳು ಪೀಕಿಂಗ್‌, ದಿಲ್ಲಿ, ರಂಗೂನುಗಳಲ್ಲಿ ನಡೆದುವು. 1960ರ ತಮ್ಮ ಹೊಸ ನಕಾಶೆಯನ್ನು ಮಂಡಿಸಿ ಚೀನೀಯರು ಮಾಡಿದ ವಾದಗಳು ದುರ್ಬಲವಾಗಿದ್ದುವು. ಎರಡೂ ರಾಷ್ಟ್ರಗಳಿಗೆ ಪರಿಣತರು ಒಪ್ಪಿಸಿದ ವರದಿಗಳನ್ನು ಭಾರತ 1961ರ ಫೆಬ್ರವರಿಯಲ್ಲಿ ಪ್ರಕಟಿಸಿತು. ಚೀನಾ ಮತ್ತೂ ಒಂದು ವರ್ಷ ಸುಮ್ಮನಿದ್ದು 1962ರ ಏಪ್ರಿಲ್‌ನಲ್ಲಿ ತನ್ನ ಪರಿಣತರ ವರದಿಯೊಂದನ್ನೇ- ಅದೂ ಮೂಲ ಬರವಣಿಗೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿ ಪ್ರಕಟಿಸಿತು.
ಗಡಿಯಲ್ಲಿ ಘರ್ಷಣೆಯಾಗದೆಂದು ತಾನು ಕೊಟ್ಟ ಮಾತನ್ನು ಚೀನಾ ಮುರಿಯಿತು. ಹಿಮಾಲಯದಾಚೆಗಿನ ಸಮತಟ್ಟು ನೆಲದ ಮೇಲೆ ಚೀನೀ ಸೇನೆಗಳ ಚಲನವಲನ, ಮುಂಚೂಣಿ ಪಡೆಗಳಿರುವ ರಂಗದವರೆಗೂ ಟ್ರಕ್ಕು, ಟ್ಯಾಂಕುಗಳು ಸಾಗಿಬರುವ ಸೌಕರ್ಯ, ಶಸ್ತ್ರಾಸ್ತ್ರಗಳ ಆಹಾರ ಸಾಮಗ್ರಿಗಳ ಪೂರೈಕೆಗೆ ಯಾವ ಆತಂಕವೂ ಇಲ್ಲ.
ಇವರಿಗಿದಿರಾಗಿ ಗಡಿಗಳನ್ನು ಭದ್ರಪಡಿಸಲು ಬಯಲು ಪ್ರದೇಶದಿಂದ ಪರ್ವತಗಳ ಕಡೆಗೆ ಏರಿ ಹೋದ ಭಾರತೀಯ ಸೈನಿಕರ ಸ್ಥಿತಿಗತಿಗಳೇನು? ಇವರ ರಕ್ಷ ಣೆಯ ಕೆಲಸ 15,000ದಿಂದ 18,000 ಅಡಿಗಳ ಎತ್ತರದಲ್ಲಿ ನಡೆಯಬೇಕು. ಆ ಸ್ಥಳವನ್ನು ತಲುಪಲು ವಾಹನಗಳು ಸಾಗಬಲ್ಲ ಮಾರ್ಗಗಳಿಲ್ಲ. ಕಲ್ಲು, ಹುಲ್ಲು, ಹಿಮಗಳ ಹೊರತು ಅಲ್ಲಿ ಬೇರೇನೂ ಇಲ್ಲ. ವರ್ಷದಲ್ಲಿ ಆರು ತಿಂಗಳ ಕಾಲ ಅಲ್ಲಿ ಸಾಧಾರಣವಾಗಿ ಪ್ರತಿಯೊಂದೂ ಸ್ತಬ್ಧ. ಸೈನಿಕರಿಗಾಗಿ ಆಹಾರ ಸಾಮಗ್ರಿಗಳನ್ನು ವಿಮಾನದ ಮೂಲಕವೇ ಒಯ್ದು ಕೆಳಕ್ಕೆ ಎಸೆಯಬೇಕು. ಸಂಚಾರಕ್ಕೆ ಹೆಲಿಕಾಪ್ಟರ್‌ಗಳನ್ನೇ ಬಳಸಬೇಕು. ಹಾರಾಟಕ್ಕೆ ಬಹಳ ಎತ್ತರ ಹೋಗಬಲ್ಲ ಹಾಗೂ ಇಂಧನ ಮುಗಿಯುವುದಕ್ಕೆ ಮುಂಚೆಯೇ ನಿಲ್ದಾಣಕ್ಕೆ ಹಿಂತಿರುಗಬಲ್ಲ ಜೆಟ್‌ ವಿಮಾನಗಳೇ ಬೇಕು.
ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಚೀನೀಯರನ್ನು ಇದಿರಿಸಲು, ಪರಂಪರಾಗತ ಸೀಮಾರೇಖೆಯವರೆಗೂ ಠಾಣ್ಯಗಳನ್ನು ನಿರ್ಮಿಸಲು, ನಮ್ಮ ಸೈನಿಕರು ಮುಂದಾದರು. 1954ರಲ್ಲಾದ ವಾಣಿಜ್ಯ ಒಪ್ಪಂದದ ಅವಧಿ ಮುಗಿದುದರಿಂದ ಹೊಸತೊಂದು ಒಪ್ಪಂದ ಮಾಡಿಕೊಳ್ಳೋಣವೆಂದು ಚೀನಾ ಭಾರತಕ್ಕೆ ಸೂಚಿಸಿತು. 1962ರ ಆಗಸ್ಟ್‌ನಲ್ಲಿ, ಪೂರ್ವಭಾವಿ ಮಾತುಕತೆಗಾಗಿ ಪ್ರತಿನಿಧಿಯೊಬ್ಬರನ್ನು ಕಳುಹಿಸಬೇಕೆಂದು ಭಾರತ ಸೂಚಿಸಿತು. ಸೆಪ್ಟೆಂಬರ್‌ನಲ್ಲಿ ಮತ್ತೊಮ್ಮೆ ಅದೇ ಸೂಚನೆಯನ್ನು ಮಾಡಿತು. ಅದಕ್ಕೆ ಉತ್ತರವಾಗಿ ಪೀಕಿಂಗ್‌ನಲ್ಲಿ ಅಕ್ಟೋಬರ್‌ 15ರಂದು ಪ್ರತಿನಿಧಿಗಳ ನಡುವೆ ಮಾತುಕತೆ ಆರಂಭವಾಗಲಿ ಎಂದಿತು ಚೀನಾ.
ಸೆಪ್ಟೆಂಬರ್‌ 8ರಂದೇ ಪೀಕಿಂಗಿನ ಪ್ರಭುಗಳು ಗುಂಡಿಯೊತ್ತಿದ್ದರು. ಮಾನವ ಯಂತ್ರಗಳೂ ಟ್ಯಾಂಕು ಫಿರಂಗಿಗಳಂಥ ಮಾರಣಾಸ್ತ್ರಗಳೂ ಆ ದಿನ ಭಾರತದ ಗಡಿಯಲ್ಲಿ ಮುನ್ನಡೆಯತೊಡಗಿದುವು. ಭಾರತೀಯ ಸೈನಿಕರ ಗುಂಡುಗಳಿಗೆ ಆಹುತಿಯಾದರೂ ಸಾಯಲೆಂದೇ ಬಂದವರಂತೆ ಅಲೆಯಲೆಯಾಗಿ ಚೀನೀ ಸೈನಿಕರು ಮುನ್ನುಗ್ಗಿದರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top