ಸೇವೆಗಳನ್ನು ಎಲ್ಲರೂ ಡಿಜಿಟಲೀಕರಣ ಮಾಡುತ್ತ ಕಾಲದಲ್ಲಿ ಮುಂದೆ ಹೋಗುತ್ತಿದ್ದರೆ, ಕರ್ನಾಟಕ ರಾಜ್ಯ ಸರಕಾರ ಮಾತ್ರ ಹಿಂದಕ್ಕೆ ಹೋಗಲು ಹೊರಟಿದೆ! ಕಂದಾಯ ದಾಖಲೆಗಳನ್ನು ಆನ್‌ಲೈನ್ ಮೂಲಕ ನೀಡುತ್ತಿದ್ದ ‘ಕಾವೇರಿ’ ಸೇವೆಯನ್ನು ಸ್ಥಗಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಋುಣಭಾರ ಪ್ರಮಾಣ ಪತ್ರ (ಇಸಿ) ಹಾಗೂ ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು(ಆರ್‌ಟಿಸಿ)ಗಳನ್ನು ಈ ಕಾವೇರಿ ಸೇವೆಯ ಮೂಲಕವೇ ಹೆಚ್ಚಿನ ಗ್ರಾಹಕರು ಸುಲಭವಾಗಿ ಪಡೆಯುತ್ತಿದ್ದರು. ಹಲವೊಮ್ಮೆ ಇದು ಸರ್ವರ್ ಡೌನ್ ಸಮಸ್ಯೆಯಿಂದ ಬಳಲುತ್ತಿತ್ತು. ನೆಗಡಿಯಾದರೆ ಮೂಗು ಕೊಯ್ದರು ಎಂಬಂತೆ, ಆನ್‌ಲೈನ್ ಸೇವೆಯನ್ನೇ ನಿಲ್ಲಿಸುವುದು ಸರಿಯಲ್ಲ.
ಕಾವೇರಿ ಆನ್‌ಲೈನ್ ಸೇವೆಯಲ್ಲಿನ ಸರ್ವರ್ ಡೌನ್ ಸಮಸ್ಯೆ ಬಹು ಕಾಲದಿಂದಲೂ ಇದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದರು. ಇದೊಂದು ತಾಂತ್ರಿಕ ಸಮಸ್ಯೆ. ಇಂಥ ಹೊತ್ತಿನಲ್ಲಿ ಹೆಚ್ಚಿನ ಸಾಮರ್ಥ್ಯವುಳ್ಳ ಇಂಟರ್‌ನೆಟ್ ಸೇವೆಯನ್ನು ಒದಗಿಸಿಕೊಳ್ಳುವುದು, ಆನ್‌ಲೈನ್ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡುವುದು ಅಥವಾ ಸೇವೆ ಒದಗಿಸುವ ಸಂಸ್ಥೆಯನ್ನು ಬದಲಾಯಿಸುವುದು ಮುಂತಾದ ಆಯ್ಕೆಗಳಿವೆ. ಇಲಾಖೆ ಇಂಥ ಯಾವ ಸುಧಾರಣಾ ಕ್ರಮಕ್ಕೂ ಮುಂದಾದಂತಿಲ್ಲ. ಬದಲಾಗಿ ಆನ್‌ಲೈನ್ ಸೇವೆಯನ್ನೇ ನಿಲ್ಲಿಸಲು ಮುಂದಾಗಿದೆ. ತಾತ್ಕಾಲಿಕವಾಗಿ ಆಫ್‌ಲೈನ್ ಸೇವೆಯನ್ನೂ ಒದಗಿಸಲಿ; ಯಾರೂ ಬೇಡವೆನ್ನುವುದಿಲ್ಲ. ಆದರೆ ಆನ್‌ಲೈನ್ ಸೇವೆಯನ್ನೇ ನಿಲ್ಲಿಸುವುದು ಹತ್ತಾರು ಹೆಜ್ಜೆ ಹಿಂದಿಟ್ಟಂತೆ ಆಗಲಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವ ಕಾಲದಲ್ಲಿ ಸರಕಾರಿ ಸೇವೆಗಳೂ ಡಿಜಿಟಲ್ ಆಗುವುದು ಅವಶ್ಯ. ಇನ್ನಷ್ಟು ಸೇವೆಗಳನ್ನು ಆನ್‌ಲೈನ್‌ಗೆ ಅಳವಡಿಸುವ ಬಗ್ಗೆ ಚಿಂತನೆ ನಡೆಯಬೇಕು.
ಹೊಸ ನಿರ್ಧಾರದಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಲಿವೆ. ಇದರಿಂದ ಉಪನೋಂದಣಿ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚುವ ಅಪಾಯವಿದೆ. ಕೊರೊನಾ ಅಪಾಯಕಾರಿಯಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವ್ಯವಹರಿಸಬೇಕಾದ ಹೊತ್ತಿನಲ್ಲಿ ಆನ್‌ಲೈನ್ ಸೇವೆಯನ್ನು ನಿಲ್ಲಿಸುವುದು ಅಪಾಯ. ಕಂದಾಯ ವಲಯಕ್ಕೆ ಸಂಬಂಧಿಸಿದ ಯಾವುದೇ ಕೆಲಸಕಾರ್ಯಗಳಿಗೂ ಈ ಎರಡು ದಾಖಲಾತಿಗಳು ಬೇಕೇ ಬೇಕು. ಹೆಚ್ಚಾಗಿ ಗ್ರಾಮೀಣ ಪ್ರದೇಶದವರು ತಮ್ಮ ಕೆಲಸಕಾರ‍್ಯಗಳಿಗಾಗಿ ಈ ಎರಡು ದಾಖಲೆಗಳನ್ನು ಪಡೆಯುತ್ತಾರೆ. ಆನ್‌ಲೈನ್‌ನಂತೆ ಇವುಗಳನ್ನು ಸುಲಭವಾಗಿ ಪಡೆಯುವ ವಿಧಾನ ಮತ್ತೊಂದಿಲ್ಲ. ಇಲ್ಲಿ ಗ್ರಾಹಕ ಅನಗತ್ಯವಾಗಿ ಸರಕಾರಿ ಕಚೇರಿಗೆ ಚಪ್ಪಲಿ ಸವೆಸಬೇಕಿಲ್ಲ. ಆಫ್‌ಲೈನ್ ಆದರೆ ಹಳ್ಳಿಯವರು ನಗರಕ್ಕೆ ಬರಬೇಕು, ಸರಕಾರಿ ಕಚೇರಿಯಲ್ಲಿ ಸಾಲುಗಟ್ಟಬೇಕು.
ಆಫ್‌ಲೈನ್ ಮಾಡುವುದರಲ್ಲಿ ಇನ್ನೂ ಯಾರ್ಯಾರ ಹಿತಾಸಕ್ತಿಗಳು ಅಡಗಿವೆ ಎಂದೂ ಪರಿಶೀಲಿಸಬೇಕು. ಫಲಾನುಭವಿಯನ್ನು ಸರಕಾರಿ ಕಚೇರಿಗೆ ಪದೇಪದೆ ಬರುವಂತೆ ಮಾಡಲಾಗುತ್ತಿದೆ ಎಂದರೆ ಅಲ್ಲಿ ಆತನಿಂದ ಲಾಭ ಪಡೆಯಲು ಹಲವರು ಕಾಯುತ್ತಿದ್ದಾರೆ ಎಂದೇ ಅರ್ಥ. ಇದು ಲಂಚಕೋರತನಕ್ಕೆ ದಾರಿ. ಆನ್‌ಲೈನ್ ವ್ಯವಸ್ಥೆ ಇಂಥ ಭ್ರಷ್ಟಾಚಾರವನ್ನೂ ತಡೆಗಟ್ಟುವಲ್ಲಿ ಸಹಕಾರಿ ಆಗಿರುತ್ತಿತ್ತು. ಆನ್‌ಲೈನ್ ಸರ್ವರ್ ಯಾವಾಗಲೂ ಡೌನ್ ಆಗಿರುವಲ್ಲಿಯೂ ಈ ಹಿತಾಸಕ್ತಿ ಅಡಗಿದ್ದರೆ ಆಶ್ಚರ‍್ಯವಿಲ್ಲ. ಬೀದಿ ಬದಿಯಲ್ಲಿ ತರಕಾರಿ ಮಾರಾಟ ಮಾಡುವವನು ಕೂಡ ಡಿಜಿಟಲ್ ಪಾವತಿಯನ್ನು ಸುಲಭವಾಗಿ ಪಡೆಯುವ ವ್ಯವಸ್ಥೆ ರೂಢಿಸಿಕೊಂಡಿದ್ದಾನೆ. ಇಂಥ ಹೊತ್ತಿನಲ್ಲಿ ಬಲಿಷ್ಠ ಸರಕಾರಿ ವ್ಯವಸ್ಥೆ ಒಂದು ಆರ್‌ಟಿಸಿ ಮುದ್ರಿಸಿ ಕೊಡುವುದಕ್ಕೂ ಪೇಚಾಡುತ್ತದೆ ಎಂದರೇನು?
ಕಾವೇರಿ ಒಂದೇ ಅಲ್ಲ; ಇನ್ನು ಮುಂದಿನ ದಿನಗಳಲ್ಲಿ ನಾವು ಎಲ್ಲ ಕಡೆಯೂ ಎಲ್ಲ ಸೇವೆಗಳಲ್ಲೂ ಹೆಚ್ಚು ಹೆಚ್ಚು ಡಿಜಿಟಲ್ ಆಗಬೇಕಾದ ಜರೂರು ಇದೆ. ಆಗ ಸರಕಾರಿ ಸೇವೆಗೆ ಒಂದು ವೇಗ, ದಕ್ಷತೆ, ಪಾರದರ್ಶಕತೆ ಪ್ರಾಪ್ತವಾಗುತ್ತದೆ. ಹಸಿವಾದಾಗ ಮಾತ್ರ ಚುರುಕಾಗುವ ಹೆಬ್ಬಾವಿನಂಥ ಭಾರತೀಯ ಸರಕಾರಿ ಸೇವೆ ಪಾದರಸದಂತೆ ಚುರುಕಾಗಿರಲು ಆನ್‌ಲೈನ್ ವ್ಯವಸ್ಥೆಯೇ ಇನ್ನಷ್ಟು ಸುಧಾರಿಸಬೇಕು.