ರಾಜ್ಯದಲ್ಲಿ ಕೋವಿಡ್ ಕಸದ ವಿಲೇವಾರಿ ಹೇಗಿದೆ?
– ರಾಮಸ್ವಾಮಿ ಹುಲಕೋಡು.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ಪರಿಣಾಮ ಜೈವಿಕ ವೈದ್ಯಕೀಯ ತ್ಯಾಜ್ಯದ ಪ್ರಮಾಣ ಕೂಡ ಹೆಚ್ಚುತ್ತಿದ್ದು, ಇದರ ವಿಲೇವಾರಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸವಾಲನ್ನು ರಾಜ್ಯ ಸರಕಾರ ಸಮರ್ಥವಾಗಿ ಎದುರಿಸಿ ಗಮನ ಸೆಳೆದಿದೆ. ಕೊರೊನಾ ಸೋಂಕಿನ ನಿರ್ವಹಣೆ ರಾಜ್ಯ ಸರಕಾರಕ್ಕೆ ಹೊಸ ಹೊಸ ಸವಾಲನ್ನೊಡ್ಡುತ್ತಿದೆ. ಇದರಲ್ಲಿ ಮುಖ್ಯವಾಗಿದ್ದು, ಜೈವಿಕ ವೈದ್ಯಕೀಯ ತ್ಯಾಜ್ಯದ ನಿರ್ವಹಣೆ. ಈ ವಿಷಯದಲ್ಲಿ ಸರಕಾರ ಚೂರು ಎಡವಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಸೋಂಕಿತರ ಚಿಕಿತ್ಸೆಗೆ ನೀಡಿದಷ್ಟೇ ಮಹತ್ವವನ್ನು ತ್ಯಾಜ್ಯದ ನಿರ್ವಹಣೆಗೂ ನೀಡಿದ ಪರಿಣಾಮ ಎಲ್ಲೂ ಬೊಟ್ಟುಮಾಡುವಂತಹ ಲೋಪವಾಗಿಲ್ಲ.
ಈ ವಿಷಯದಲ್ಲಿ ದಿಲ್ಲಿ, ಪಶ್ಚಿಮ ಬಂಗಾಳ ಸರಕಾರಗಳು ಎಡವಿವೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಆದರೆ ನಮ್ಮ ರಾಜ್ಯದಲ್ಲಿ ಸರಕಾರ ಇದರ ಉಸ್ತುವಾರಿಗೇ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ, ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿಯೂ ಮಾನಿಟರಿಂಗ್ ವ್ಯವಸ್ಥೆ ರೂಪಿಸಲಾಗಿದೆ. ಆದರೆ ಸೋಂಕಿನಿಂದ ರಕ್ಷಣೆಗೆ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರು, ವಿವಿಧ ಇಲಾಖೆಯ ಸಿಬ್ಬಂದಿ ಬಳಸುತ್ತಿರುವ ಪಿಪಿಇ ಕಿಟ್, ಮಾಸ್ಕ್‌ಗಳ ವಿಲೇವಾರಿ ಸ್ಥಳೀಯ ಆಡಳಿತಕ್ಕೆ ತಲೆನೋವನ್ನುಂಟುಮಾಡುತ್ತಿದೆ.
2.8 ಟನ್ ತ್ಯಾಜ್ಯ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಪ್ರಕಾರ ಜೂನ್ 8ರವರೆಗೆ ರಾಜ್ಯದಲ್ಲಿ ಕೋವಿಡ್-19ಗೆ ಸಂಬಂಧಿಸಿದ 297 ಟನ್ (2,69,756 ಕೆಜಿ) ಜೈವಿಕ ವೈದ್ಯಕೀಯ ತ್ಯಾಜ್ಯ ಸಂಗ್ರಹವಾಗಿದೆ. ಪ್ರತಿದಿನ ರಾಜ್ಯದಲ್ಲಿ 2.8 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇದರ ಸುರಕ್ಷಿತ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ವಿಜಯಕುಮಾರ್ ಗೋಗಿ ತಿಳಿಸಿದ್ದಾರೆ. ರಾಜ್ಯದಾದ್ಯಂತ ಒಟ್ಟು 26 ತ್ಯಾಜ್ಯ ಸಂಸ್ಕರಣ ಘಟಕಗಳಿದ್ದು, ಇಲ್ಲಿಯೇ ಕೊರೊನಾ ಪರೀಕ್ಷೆ, ಚಿಕಿತ್ಸೆ ಸಂದರ್ಭದಲ್ಲಿ ಸೃಷ್ಟಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ವಚ್ಛ ಭಾರತ್ ಆಂದೋಲನ ಮತ್ತು ರಾಜ್ಯ ಸರಕಾರ ಹೊರಡಿಸಿದ ಮಾರ್ಗಸೂಚಿಗಳ ಅನ್ವಯವೇ ಈ ತ್ಯಾಜ್ಯದ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ತ್ಯಾಜ್ಯದಿಂದ ಮತ್ತೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ಸವಾಲೇಕೆ?
ಕೊರೊನಾ ಸೋಂಕು ಹರಡುವಿಕೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿರುವುದರಿಂದ ಕೊರೊನಾದ ಚಿಕಿತ್ಸೆಯ ಸಂದರ್ಭದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯದ ಪ್ರಮಾಣವೂ ಅಧಿಕವಾಗಿದೆ. ಬೇರೆಲ್ಲಾ ರೋಗಗಳಿಗೆ ಹೋಲಿಸಿದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಕೆಲವೊಮ್ಮೆ 15 ಪಟ್ಟು ಹೆಚ್ಚು ಎನ್ನುತ್ತಿದ್ದಾರೆ ತಜ್ಞರು. ಚೀನಾದ ವುಹಾನ್‌ನಲ್ಲಿ ಸೋಂಕು ವ್ಯಾಪಕವಾಗಿ ಹರಡಿದ್ದಾಗ 6 ಪಟ್ಟು ಹೆಚ್ಚು ಜೈವಿಕ ತ್ಯಾಜ್ಯ ಉತ್ಪತ್ತಿಯಾಗಿತ್ತು. ಬೇರೆಲ್ಲೂ ಬೇಡ ನಮ್ಮ ಬೆಂಗಳೂರಿನ ನೆಲಮಂಗಲದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳೆದ ಏಪ್ರಿಲ್ 1ರಂದು 222 ಕೆಜಿ ಕೊರೊನಾಗೆ ಸಂಬಂಧಿಸಿದ ಜೈವಿಕ ತ್ಯಾಜ್ಯ ಬಂದಿತ್ತು. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಈ ಪ್ರಮಾಣ ಹೆಚ್ಚುತ್ತಾ ಬಂದಿದ್ದು, ಜೂನ್ 2ರಂದು ಈ ಪ್ರಮಾಣ 1,024 ಕೆಜಿ ತಲುಪಿತ್ತು.
ವಿಲೇವಾರಿ ಹೇಗೆ?
ಕೊರೊನಾಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸಂಗ್ರಹವಾಗುವ ತ್ಯಾಜ್ಯ ಮತ್ತು ಸುರಕ್ಷತೆಗಾಗಿ ಬಳಸುವ ಪರಿಕರ, ಸೋಂಕಿತರ ಬಟ್ಟೆ, ಟಿಶ್ಯೂ, ಬಳಸಿದ ವಸ್ತು ಇತ್ಯಾದಿಗಳ ವಿಲೇವಾರಿಗೆ ಸ್ಟಾಂಡರ್ಡ್ ಆಪರೇಟಿಂಗ್ ಪೊ›ಸೀಜರ್(ಎಸ್‌ಒಪಿ) ರೂಪಿಸಲಾಗಿದ್ದು, ಅದರಂತೆಯೇ ಫಿವರ್ ಕ್ಲಿನಿಕ್, ಕೋವಿಡ್ ಆಸ್ಪತ್ರೆ, ಐಸಿಯು, ಗಂಟಲ ದ್ರವ ಮಾದರಿ ಸಂಗ್ರಹ ಕೇಂದ್ರ, ಐಸೋಲೇಷನ್ ಆಸ್ಪತ್ರೆ, ಕ್ವಾರಂಟೈನ್ ಕೇಂದ್ರಗಳಿಂದ ಕೋವಿಡ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಪ್ರತ್ಯೇಕ ವಾಹನದ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನೂ ನಿಯೋಜಿಸಲಾಗಿದ್ದು, ಅವರ ಸುರಕ್ಷತೆಗೂ ಗಮನ ನೀಡಲಾಗಿರುತ್ತದೆ. ಕೋವಿಡ್ ತ್ಯಾಜ್ಯ ಸಂಗ್ರಹಿಸುವ ವಾಹನಗಳ ಮೇಲೆ ‘ಕೋವಿಡ್-19’ ಎಂದು ಬರೆದಿರಬೇಕೆಂದು ಸೂಚಿಸಲಾಗಿದೆ. ತ್ಯಾಜ್ಯದಲ್ಲಿರುವ ಬಳಸಿದ ಹತ್ತಿ, ಡ್ರೆಸ್ಸಿಂಗ್ ಬಟ್ಟೆಗಳು, ಮಾಸ್ಕ್, ಸ್ವಾಬ್ ಸ್ಟಿಕ್, ಮಾತ್ರೆ, ಮಲಿನಗೊಂಡ ಹಾಸಿಗೆ, ಹೊದಿಕೆ, ಬಳಸಿದ ಔಷಧಿಯ ಬಾಟಲಿ ಇತ್ಯಾದಿಗಳನ್ನು ಹಳದಿ ಬಣ್ಣದ ಕವರ್‌ನಲ್ಲಿ, ಫೇಸ್ ಶೀಲ್ಡ್, ಏಪ್ರನ್, ಪ್ಲಾಸ್ಟಿಕ್ ಪ್ಲೇಟ್, ಕನ್ನಡಕ, ಯೂರಿನ್ ಬ್ಯಾಗ್, ಗ್ಲೌಸ್‌ಗಳನ್ನು ಕೆಂಪು ಬಣ್ಣದ ಕವರ್‌ನಲ್ಲಿ, ಇನ್ಸುಲಿನ್ ಸಿರಿಂಜ್, ಸೂಜಿ, ಬ್ಲೇಡ್‌ಗಳನ್ನು ಬಿಳಿ ಬಣ್ಣದ ಕವರ್‌ನಲ್ಲಿ ಹಾಗೂ ಗಾಜಿನ ಕಸ, ಸಿರಿಂಜ್ ಇತ್ಯಾದಿಗಳನ್ನು ಬಿಳಿ ಬಣ್ಣದ ಚೀಲದಲ್ಲಿ ಹಾಕಿ ವಿಲೇವಾರಿ ಮಾಡಬೇಕಿರುತ್ತದೆ.
ಮಾಹಿತಿಗೆ ಆ್ಯಪ್
ರಾಜ್ಯದಾದ್ಯಂತ ಸಂಗ್ರಹವಾಗುತ್ತಿರುವ ಜೈವಿಕ ತ್ಯಾಜ್ಯ ಸೂಕ್ತವಾಗಿ ವಿಲೇವಾರಿಯಾಗುವಂತೆ ನೋಡಿಕೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಆ್ಯಪ್ ರೂಪಿಸಿದೆ. ಪ್ರತಿಯೊಂದು ವಿಲೇವಾರಿ ಘಟಕಕ್ಕೆ ಎಷ್ಟು ತಾಜ್ಯ ಬಂದಿದೆ, ಎಷ್ಟನ್ನು ವಿಲೇವಾರಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಇದರ ಮೂಲಕ ಸಂಗ್ರಹಿಸಲಾಗುತ್ತಿದ್ದು, ಇದನ್ನು ವಿಶ್ಲೇಷಿಸಿ, ಅಗತ್ಯ ಸೂಚನೆಗಳನ್ನು ನೀಡಲಾಗುತ್ತಿದೆ. ಈಗಾಗಲೇ ಜೈವಿಕ ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿಗೆ ಇರುವ ವ್ಯವಸ್ಥೆಯನ್ನೇ ಕೊರೊನಾ ತ್ಯಾಜ್ಯದ ವಿಲೇವಾರಿಗೂ ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ನೋಡಿಕೊಳ್ಳಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ವಿಜಯಕುಮಾರ್ ಗೋಗಿ ವಿವರಿಸಿದ್ದಾರೆ. ಬೆಂಗಳೂರಿನಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ ಐದು ಖಾಸಗಿ ಕಂಪನಿಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ಅನುಮತಿ ನೀಡಿದೆ.
ಸೋಂಕು ಹರಡಬೇಡಿ
ವಿವಿಧ ಅಧ್ಯಯನದ ಪ್ರಕಾರ ಕೋವಿಡ್-19 ವೈರಾಣು ಪ್ಲಾಸ್ಟಿಕ್ ಕವರ್‌ಗಳ ಮೇಲೆ 72 ಗಂಟೆ, ಕಾರ್ಡ್ ಬೋರ್ಡ್‌ಗಳ ಮೇಲೆ 24 ಗಂಟೆ ಜೀವಂತವಾಗಿ ಇರಬಲ್ಲದು. ಹೀಗಾಗಿ ಸೋಂಕಿತರ ತ್ಯಾಜ್ಯದ ವಿಲೇವಾರಿ ಮಾಡುವಾಗ ಅತಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಶಂಕಿತರು ತಾವು ಬಳಸಿದ ವಸ್ತುಗಳನ್ನು ಬಿಸಾಕುವುದಿದ್ದರೆ, ಅದನ್ನು ಒಂದೆರಡು ದಿನ ಮನೆಯಲ್ಲಿಯೇ ಸುರಕ್ಷಿತವಾಗಿ ಸಂಗ್ರಹಿಸಿಟ್ಟು ನಂತರ ವಿಲೇವಾರಿ ಮಾಡುವುದು ಉತ್ತಮ. ಇಲ್ಲದಿದ್ದರೆ, ಇದನ್ನು ಸಂಗ್ರಹಿಸುವ ಪೌರ ಕಾರ್ಮಿಕರು ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. ಸೋಂಕಿತರು ಬಳಸಿದ ಯಾವುದೇ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬೇರೆ ತ್ಯಾಜ್ಯಗಳೊಂದಿಗೆ ಸೇರಿಸಬೇಡಿ. ಇದರ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿರುತ್ತದೆ. ಇದಕ್ಕಾಗಿ ನೀವು ಸಹಾಯವಾಣಿ ಸಂಖ್ಯೆಗೆ ಕರೆ (1075) ಮಾಡಿ.
– ರಾಜ್ಯದಲ್ಲಿ ಪ್ರತಿನಿತ್ಯ 65ರಿಂದ 70 ಟನ್ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಗ್ರಹವಾಗುತ್ತಿದೆ.
– ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು 1998ರಲ್ಲಿಯೇ ಜೈವಿಕ ವೈದ್ಯಕೀಯ ತ್ಯಾಜ್ಯ (ನಿರ್ವಹಣೆ ಮತ್ತು ನಿಭಾವಣೆ)ಗೆ ಸಂಬಂಧಿಸಿದ ಕಾನೂನು ರೂಪಿಸಿತ್ತು. ಇದನ್ನು ದೇಶದಲ್ಲಿಯೇ ಮೊದಲು ಜಾರಿಗೆ ತಂದ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದು.
– ರಾಜ್ಯದಲ್ಲಿ 26, ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣ ಘಟಕಗಳಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು.
– ರಾಜ್ಯದಲ್ಲಿ 35,869ಆಸ್ಪತ್ರೆಗಳಿವೆ. 24 ಸಾವಿರ ಆಸ್ಪತ್ರೆಗಳು ಮಾತ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹೆಸರು ನೊಂದಾಯಿಸಿಕೊಂಡಿವೆ. 2018ರಲ್ಲಿ 4,066 ಆಸ್ಪತ್ರೆಗಳು, 2019ರಲ್ಲಿ 5,427ಆಸ್ಪತ್ರೆಗಳು ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸಿದ್ದು ಬೆಳಕಿಗೆ ಬಂದಿತ್ತು.
– 2019ರ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮದ ಪ್ರಕಾರ ತ್ಯಾಜ್ಯ ವಿಲೇವಾರಿಯ ನಿಯಮ ಉಲ್ಲಂಘಿಸಿದಲ್ಲಿ ಐದು ವರ್ಷ ಜೈಲು ಶಿಕ್ಷೆ ಅಥವಾ 1 ಲಕ್ಷ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
– 2018ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾದ ಸಿಎಜಿ ವರದಿ ಪ್ರಕಾರ ರಾಜ್ಯದ 36 ಜಿಲ್ಲಾ ಸರಕಾರಿ ಆಸ್ಪತ್ರೆಗಳ ಪೈಕಿ 21 ಆಸ್ಪತ್ರೆಗಳು, 34 ಸರಕಾರಿ ಪಶು ವೈದ್ಯಕೀಯ ಆಸ್ಪತ್ರೆಗಳ ಪೈಕಿ 19 ಆಸ್ಪತ್ರೆಗಳು ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿಯ ನಿಯಮಗಳನ್ನು ಪಾಲಿಸುತ್ತಿಲ್ಲ.
ಕೊರೊನಾದ ಈ ಸಂದರ್ಭದಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲೇಬೇಕಿದೆ. ಲೋಪವಾಗುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಜಿಲ್ಲಾ ಆಡಳಿತದ ಅಥವಾ ಮಂಡಳಿಯ ಗಮನಕ್ಕೆ ತರಬೇಕೆಂದು ಮನವಿ ಮಾಡುತ್ತೇನೆ.
– ವಿಜಯಕುಮಾರ್ ಗೋಗಿ, ಅಧ್ಯಕ್ಷರು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ