ರಾಜ್ಯದಲ್ಲಿ ಶಿಕ್ಷಣ ನೀಡುವ ಎಲ್ಲ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂಬ ಒಂದು ಕನಸು ಈಗಾಗಲೇ ಕುಸಿದುಬಿದ್ದಿದೆ. ಸುಪ್ರೀಂ ಕೋರ್ಟ್ ಕೂಡ, ಶಿಕ್ಷಣ ಮಾಧ್ಯಮದ ಆಯ್ಕೆ ಹೆತ್ತವರಿಗೆ ಬಿಟ್ಟದ್ದು ಎಂದು ಹೇಳುವ ಮೂಲಕ ಇದಕ್ಕೆ ತೆರೆ ಎಳೆದಿತ್ತು. ಆದರೆ, ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಂದು ಶಾಲೆಯೂ ಸ್ಥಳೀಯ ಭಾಷೆಯಾದ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು ಎಂಬುದನ್ನಾದರೂ ಆಗ್ರಹಪೂರ್ವಕವಾಗಿ ಸ್ಥಾಪಿಸುವ ಹಕ್ಕು ಕನ್ನಡಿಗರಿಗೆ ಇದೆ. ಇದೇ ಹಿನ್ನೆಲೆಯಲ್ಲಿ, 2026-27ನೇ ಸಾಲಿನ ಹೊತ್ತಿಗೆ ರಾಜ್ಯದ ಎಲ್ಲಾ ಶಾಲೆಗಳು 1ರಿಂದ 10ನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯ ಎಂಬ ನಿಯಮ ಜಾರಿಗೆ ಸರಕಾರ ಮುಂದಾಗಿದೆ. ಈ ಕುರಿತು ಪರಿಶೀಲನೆಗೆ ಸರಕಾರ ಉನ್ನತಮಟ್ಟದ ಸಮಿತಿ ರಚಿಸಿದೆ.
ಕನ್ನಡ ಕಲಿಕೆಯ ಬಗ್ಗೆ ಕರ್ನಾಟಕ ವಿಚಿತ್ರ ಅಡಕತ್ತರಿಯಲ್ಲಿ ಸಿಕ್ಕಿಬಿದ್ದಿದೆ. ಒಂದು ಕಡೆ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಲಾಗದು ಎಂಬ ಸ್ಥಿತಿ. ಇನ್ನೊಂದೆಡೆ, ಕನ್ನಡವನ್ನೇ ಮಾಧ್ಯಮವಾಗಿ ಕಲಿಸುವ ಸಾವಿರಾರು ಸರಕಾರಿ ಪ್ರಾಥಮಿಕ ಶಾಲೆಗಳ ಮುಚ್ಚುಗಡೆ; ಮತ್ತೊಂದೆಡೆ ಸರಕಾರವೇ ನಡೆಸುವ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಆರಂಭ. ಇದರ ನಡುವೆ, ಕನ್ನಡ ಒಂದು ಭಾಷೆಯಾಗಿ ಕೂಡ ನಮಗೆ ಬೇಡ ಎಂದು ಮೊಂಡು ಹಠ ಹಿಡಿಯುವ ಖಾಸಗಿ ಹಾಗೂ ಅನುದಾನಿತ ಶಾಲೆಗಳು. ಹೆತ್ತವರು ಕೂಡ, ಕನ್ನಡ ಕಲಿತು ಏನಾಗಬೇಕಿದೆ ಎಂದು ಕೇಳುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಕನ್ನಡ ಕಲಿಸಿ ಎಂದು ಹಕ್ಕೊತ್ತಾಯ ಸಾಧಿಸುವವರೇ ಖಳನಾಯಕರಾಗಿ ಗೋಚರಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಾವಲು ಸಮಿತಿಯಂಥ ಸಂಸ್ಥೆಗಳು ಈ ನಿಟ್ಟಿನಲ್ಲಿ ಸದಾ ಎಚ್ಚರವಾಗಿದ್ದು ಕಾರ್ಯನಿರವಾಗಿರುವುದೊಂದು ಒಳ್ಳೆಯ ಬೆಳವಣಿಗೆ.
2015ರಲ್ಲಿ ‘ಕನ್ನಡ ಭಾಷಾ ಕಲಿಕಾ ಅಧಿನಿಯಮ’ವನ್ನು ಜಾರಿಗೆ ತರಲಾಗಿದ್ದು, ಅದರಂತೆ 2017ರಲ್ಲಿ ‘ಕನ್ನಡ ಭಾಷಾ ಕಲಿಕಾ ನಿಯಮ’ಗಳನ್ನು ರೂಪಿಸಿ ಪ್ರಕಟಿಸಲಾಗಿದೆ. ಈ ನಿಯಮಗಳ ಪ್ರಕಾರ, ರಾಜ್ಯದ ಎಲ್ಲ ಶಾಲೆಗಳಲ್ಲಿ 2017-18ನೇ ಶೈಕ್ಷಣಿಕ ವರ್ಷದಿಂದ 1ನೇ ತರಗತಿಯಿಂದ ಕ್ರಮವಾಗಿ ಪ್ರತಿ ವರ್ಷ ಒಂದೊಂದು ತರಗತಿಯಂತೆ 2026-27ರ ವೇಳೆಗೆ 10ನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಐಸಿಎಸ್ಇ, ಸಿಬಿಎಸ್ಇ ಹಾಗೂ ಅಂತಾರಾಷ್ಟ್ರೀಯ ಪಠ್ಯಕ್ರಮದ ಬಹುತೇಕ ಶಾಲೆಗಳು ಈ ನಿಯಮ ಪಾಲಿಸುತ್ತಿಲ್ಲ. ಸ್ಕೂಲ್ ಆವರಣದಲ್ಲಿ ಕನ್ನಡದಲ್ಲಿ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸುವ ಕೆಲವು ಶಾಲೆಗಳೂ ನಮ್ಮಲ್ಲಿವೆ ಎನ್ನುವುದೊಂದು ವಿಚಿತ್ರ.
ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಇದನ್ನು ನಾವು ಮತ್ತೆ ಮತ್ತೆ ಹೇಳಬೇಕಿದೆ. ಮಗುವಿನ ಭಾವಲೋಕದ ಸಂಪೂರ್ಣ ಬೆಳವಣಿಗೆ ಹಾಗೂ ಸೃಜನಶೀಲತೆಯ ವಿನ್ಯಾಸ ಉಂಟಾಗುವುದು ಮಾತೃಭಾಷೆಯಲ್ಲಿ ಎಂಬುದನ್ನು ಶಿಕ್ಷಣ ತಜ್ಞರು ಸಾರಿ ಸಾರಿ ಹೇಳಿದ್ದಾರೆ. ಆದರೆ ಅನ್ಯಭಾಷಿಕರು ಹಾಗಿರಲಿ, ಕನ್ನಡಿಗರ ಮಕ್ಕಳೇ ಕನ್ನಡಕ್ಕೆ ಪರಕೀಯರಾಗುವ ಪರಿಸ್ಥಿತಿಯನ್ನು ನಮ್ಮ ಖಾಸಗಿ ಶಾಲೆಗಳ ಶಿಕ್ಷಣ ಪದ್ಧತಿ ಸೃಷ್ಟಿಸುತ್ತಿದೆ. ಇಂಗ್ಲಿಷನ್ನು ಕಲಿತರೆ ಅದು ಅನ್ನು ನೀಡುತ್ತದೆ ಎಂಬ ತಪ್ಪು ಕಲ್ಪನೆಯೊಂದು ಹೇಗೋ ಬೇರೂರಿಬಿಟ್ಟಿದೆ. ಆದರೆ, ಕರ್ನಾಟಕದಲ್ಲಿ ಕನ್ನಡ ಕಲಿಯದಿದ್ದರೆ ಅನ್ನ ಸಿಗದು ಎಂಬ ಪರಿಸ್ಥಿತಿ ಉಂಟಾಗಬೇಕು. ಅದನ್ನು ಕನ್ನಡಿಗರೇ ಸೇರಿ ಸೃಷ್ಟಿಸಬೇಕು. ಕನ್ನಡ ಕಲಿಕೆ ಕಡ್ಡಾಯ ಎಂದೆ ಅದು ಇಂಗ್ಲಿಷ್ ವಿರೋಧಿ ಎಂಬ ಅಪಕಲ್ಪನೆಯನ್ನೂ ನಿವಾರಿಸಬೇಕು. ಪ್ರಸ್ತಾವಿತ ನಿಯಮವನ್ನೇ ಕನ್ನಡದ ಅನುಷ್ಠಾನಕ್ಕೆ ಪೂರಕವಾದ ವಜ್ರಾಯುಧವಾಗಿ ಉಪಯೋಗಿಸಬಹುದು. ಅದಕ್ಕೆ ತಕ್ಕ ಇಚ್ಛಾಶಕ್ತಿ ಬೇಕು ಅಷ್ಟೆ.