– ಮಯೂರಲಕ್ಷ್ಮೀ.
1897, ಜೂನ್ 11ರಂದು ಬ್ರಿಟಿಷರ ಆಡಳಿತದ ವಾಯುವ್ಯ ಪ್ರಾಂತದ ಶಹಜಹಾನ್ಪುರದಲ್ಲಿ ಜನ್ಮ ತಳೆದ ಪಂಡಿತ್ ರಾಮ್‌ಪ್ರಸಾದ್ ಬಿಸ್ಮಿಲ್ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಬಲಿದಾನಿ. ತಂದೆಯವರಿಂದ ಮನೆಯಲ್ಲೇ ಶಿಕ್ಷಣ ಪಡೆದ ರಾಮ್‌ಪ್ರಸಾದ್ ಬಿಸ್ಮಿಲ್ ಬಾಲ್ಯದಿಂದಲೇ ಸಾಹಿತ್ಯ ರಚನೆ ಮತ್ತು ಭಾಷಾ ನೈಪುಣ್ಯ ಹೊಂದಿದ್ದರು. ಮೌಲ್ವಿಯೊಬ್ಬರಿಂದ ಉರ್ದು ಭಾಷೆಯಲ್ಲೂ ಪಾಂಡಿತ್ಯ ಪಡೆದಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ‘ಬಿಸ್ಮಿಲ್’ ಎಂದೇ ಜನಪ್ರಿಯರಾಗಿದ್ದು ರಾಮ್, ಅಗ್ಯತ್ ಎನ್ನುವ ಕಾವ್ಯನಾಮಗಳಲ್ಲಿ ಅಸಂಖ್ಯಾತ ದೇಶಭಕ್ತಿಯ ಕವನಗಳನ್ನು ರಚಿಸಿದರು.
ಲಾಲಾ ಹರದಯಾಳ್ ಅವರೊಡಗೂಡಿ ಆರ್ಯ ಸಮಾಜದಲ್ಲಿ ಸಕ್ರಿಯರಾದರು. ಭಾಯಿ ಪರಮಾನಂದ್ ಎಂಬ ವಿದ್ವಾಂಸ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟಿಷರು ಮರಣದಂಡನೆ ವಿಧಿಸಿದ ಘಟನೆಯಿಂದ ಕುಪಿತರಾಗಿ ಬ್ರಿಟಿಷರ ವಿರುದ್ಧ ಹೋರಾಡುವ ನಿರ್ಧಾರ ಮಾಡಿದರು. ಪಂಡಿತ್ ಗೆಂಡಾಲಾಲ್ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ‘ಮಾತೃವೇದಿ’ ಎನ್ನುವ ಕ್ರಾಂತಿಕಾರಿ ಸಂಘಟನೆಯನ್ನು ಆರಂಭಿಸಿದ ಬಿಸ್ಮಿಲ್ ಮಣಿಪುರಿ, ಆಗ್ರಾ ಮುಂತಾದ ಅನೇಕ ಪ್ರಾಂತಗಳಿಂದ ಕಾರ್ಯಕರ್ತರನ್ನು ಸೇರಿಸಿದರು. ಮಣಿಪುರದಲ್ಲಿದ್ದ ಬ್ರಿಟಿಷರ ಖಜಾನೆಗೆ ಗುರಿಯಿಟ್ಟು ಹಣ ಲೂಟಿ ಮಾಡಿದರು.
ಪೋಲಿಸರು ಘಟನೆಯನ್ನು ‘ಮಣಿಪುರ ಪಿತೂರಿ’ ಎಂದು ದಾಖಲಿಸಿದರು. ದಿಲ್ಲಿ- ಆಗ್ರಾ ನಡುವೆ ಮತ್ತೊಂದು ಲೂಟಿಗೆ ತಯಾರಾಗುತ್ತಿದ್ದಾಗ ಪೋಲಿಸರ ಫೈರಿಂಗ್‌ನಿಂದಾಗಿ ಬಿಸ್ಮಿಲ್ ಯಮುನಾ ನದಿಗೆ ಧುಮುಕಿ ಈಜಿ ಭೂಗತರಾದರು. ಉತ್ತರ ಪ್ರದೇಶದಲ್ಲೇ ಮರೆಯಾಗಿದ್ದು ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಂದುವರೆಸಿದರು. ಗಯಾ ಅಧಿವೇಶನದಲ್ಲಿ ಕ್ರಾಂತಿಕಾರಿಗಳನ್ನು ಕಾಂಗ್ರೆಸ್ ವಿರೋಧಿಸಿದಾಗ ಬಿಸ್ಮಿಲ್ ಸ್ವರಾಜ್ ಪಕ್ಷ ಆರಂಭಿಸಿದರು. ನಂತರ ಅದು ಬಿಸ್ಮಿಲ್ ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಶನ್ ಎಂದು ಬದಲಾಯಿತು. ಸಂಘಟನೆಗೆ ಹಣಕ್ಕಾಗಿ ಸರಕಾರಿ ಖಜಾನೆಯನ್ನು ಹೊತ್ತೊಯ್ಯುತ್ತಿದ್ದ ರೈಲಿನ ಲೂಟಿ ಮಾಡಲು ಮುಂದಾದರು. 1925, ಆಗಸ್ಟ್ 9, ಲಖನೌ ಬಳಿ ಸಹಾರನ್ಪುರದ ರೈಲ್ವೇ ಲೈನಿನ ಬಳಿಯ ಕಾಕೋರಿ ಎನ್ನುವ ನಿಲ್ದಾಣದಲ್ಲಿ ಚಂದ್ರಶೇಖರ್ ಆಜಾದ್ ಮತ್ತು ಅಷಾಕುಲ್ಲಾಖಾನ್ ಮುಂತಾದ ಒಂಬತ್ತು ಜನರ ತಂಡ ಕಾಯುತ್ತಿತ್ತು. ರೈಲು ಕಾಕೋರಿ ನಿಲ್ದಾಣ ಬಿಡುತ್ತಿದ್ದಂತೆಯೇ ದ್ವಿತೀಯ ದರ್ಜೆಯ ಬೋಗಿಯಲ್ಲಿದ್ದ ಕ್ರಾಂತಿಕಾರಿಗಳು ಖಜಾನೆಯ ಬೋಗಿಯನ್ನು ಪ್ರವೇಶಿಸಿದರು. ಕಾವಲುಗಾರರನ್ನು ಬೆದರಿಸಿ, ಐದು ಸಾವಿರ ರೂಪಾಯಿಗಳನ್ನು ತಮ್ಮ ಸುಪರ್ದಿಗೆ ಪಡೆದು ಯಾರಿಗೂ ಹಾನಿ ಮಾಡದೆ ಪರಾರಿಯಾದರು.
ಪೊಲೀಸರು ಸತ್ಯೇಂದ್ರನಾಥ್, ಯೋಗೇಶ್ ಚಟರ್ಜಿ, ಅಷಾಕುಲ್ಲಾಖಾನ್ ಮತ್ತು ಬಿಸ್ಮಿಲ್‌ರನ್ನು ಬಂಧಿಸಿದರು. ಕೊಲೆ ಮತ್ತು ದರೋಡೆಗಳ ಆಪಾದನೆಗಳನ್ನು ಹೇರಿದರು. ಲಖನೌ ಕಾರಾಗೃಹದಲ್ಲಿ ರಾಜಕೀಯ ಕೈದಿಗಳನ್ನಾಗಿಸಿದರು. ಅಷಾಕುಲ್ಲಾ, ರೋಶನ್ ಸಿಂಗ್ ಮತ್ತು ಸತ್ಯೇಂದ್ರನಾಥ್ ಅವರೊಂದಿಗೆ ಬಿಸ್ಮಿಲ್‌ರಿಗೆ ಮರಣದಂಡನೆ ತೀರ್ಪು ಹೊರಬಿತ್ತು. ಕಾರಾಗೃಹದಲ್ಲಿದ್ದ ಬಿಸ್ಮಿಲರನ್ನು ಭೇಟಿಯಾದವರಿಗೆ ಅವರು, ತನ್ನ ದೇಶವನ್ನು ಸ್ವತಂತ್ರಗೊಳಿಸುವ ಧ್ಯೇಯ ಹೊಂದಿರುವವರು ದುಃಖಿಸಬಾರದೆಂದರು. ಸ್ವಾತಂತ್ರ್ಯ ಸಂಗ್ರಾಮವನ್ನು ಕುರಿತು ಅವರ ಆಲೋಚನೆಗಳೆಲ್ಲಾ ಕವನಗಳ ರೂಪದಲ್ಲಿರಚಿತವಾದವು. ‘ಕಾಕೋರಿ ಕೇ ಶಹೀದ್’ ಎನ್ನುವ ಅವರ ಆತ್ಮಕಥನ 1928ರಲ್ಲಿ ಮುದ್ರಿತವಾಯಿತು. 1927, 19 ಡಿಸೆಂಬರ್‌ನಲ್ಲಿ ಬಿಸ್ಮಿಲ್‌ರನ್ನು ಗೋರಾಖ್ಪುರದ ಸೆರೆಮನೆಯಲ್ಲಿ ಗಲ್ಲಿಗೇರಿಸಲಾಯಿತು. ಬಿಸ್ಮಿಲ್ ಜನ್ಮಶತಾಬ್ದಿ ಸ್ಮರಣಾರ್ಥ ಭಾರತ ಸರಕಾರ 1997ರಲ್ಲಿ ಅಂಚೆ ಚೀಟಿ ಹೊರತಂದಿತು.