ಮೌಲ್ಯಗಳಿಗೆ ಬಿಜೆಪಿ ಮಣೆ ನಿಷ್ಠೆ, ಸೇವೆಯೇ ಆದರ್ಶ ಎಂದ ಹೈಕಮಾಂಡ್

ರಾಜ್ಯದಿಂದ ತೆರವಾಗಿರುವ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮಗೊಂಡಿದೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ನಿಂದ ಎಚ್‌.ಡಿ.ದೇವೇಗೌಡರು ಅಭ್ಯರ್ಥಿಗಳಾಗಿರುವುದರಲ್ಲಿ ಏನೂ ಅಚ್ಚರಿಯಿಲ್ಲ. ಈಗಾಗಲೇ ಇವರ ಪ್ರಾತಿನಿಧ್ಯವನ್ನು ಜನ ದಶಕಗಳಿಂದ ಕಂಡಿದ್ದಾರೆ. ಬಿಜೆಪಿಯಿಂದಲೂ ಬಲಾಢ್ಯರಾದ ಹಲವು ವ್ಯಕ್ತಿಗಳ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬಂದಿತ್ತು. ಆದರೆ ಅಚ್ಚರಿ ಎನ್ನುವಂತೆ ಅನಾಮಿಕರಾದ ಇಬ್ಬರ ಆಯ್ಕೆಯಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್‌ ಪ್ರಕಟಿಸಿ ಬಿಜೆಪಿ ಶಾಕ್‌ ನೀಡಿದೆ. ಸ್ಥಾನಗಳ ಸಂಖ್ಯೆ ಬಿಜೆಪಿಯ ಪರವಾಗಿರುವುದರಿಂದ ಇವರು ಆಯ್ಕೆಯಾಗುವುದರಲ್ಲೂ ಸಂದೇಹವಿಲ್ಲ.
ಹಲವು ದಶಕಗಳಿಂದ ವಂಶಾಡಳಿತ, ಬಲಾಢ್ಯರದೇ ಕಾರುಬಾರು, ಜಾತಿ- ಹಣಗಳ ವಿಲಕ್ಷಣ ಕುಣಿತಗಳನ್ನು ಕಂಡು ಬಸವಳಿದಿದ್ದ ಮತದಾರರಿಗೆ ಇದೊಂದು ಅಚ್ಚರಿದಾಯಕ ಸಂಗತಿಯೇ ಹೌದು. ಇವರಿಬ್ಬರೂ ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಹೆಸರು- ಹಣಕ್ಕಾಗಿ ದುಡಿದವರಲ್ಲ. ಇಂಥವರನ್ನು ಮೇಲೆತ್ತಿ ಹಿಡಿಯುವ ಪ್ರಕ್ರಿಯೆಯನ್ನು ಕಳೆದ ಲೋಕಸಭೆ ಸಂದರ್ಭದಲ್ಲಿಯೇ ಬಿಜೆಪಿ ಸ್ವಲ್ಪಮಟ್ಟಿಗೆ ಮಾಡಿತ್ತು. ಈ ಬಾರಿ ಅದನ್ನು ಮುಂದುವರಿಸಿದೆ. ತಳಮಟ್ಟದ ಕಾರ್ಯಕರ್ತರಲ್ಲಿ, ‘ನಮ್ಮ ದುಡಿಮೆಗೂ ಬೆಲೆಯಿದೆ’ ಎಂಬ ಭಾವನೆ ಮೂಡುವಂಥ ಕ್ಷಣವಿದು. ಮೂಲತಃ ಬಿಜೆಪಿ ತಳಮಟ್ಟದ ಕಾರ್ಯಕರ್ತ ಬಲದ ಪಕ್ಷ. ಅದೇ ಪಕ್ಷದ ಅಸ್ತಿವಾರ ಎನ್ನಬಹುದು. ಈ ಆಯ್ಕೆಯೊಂದಿಗೆ, ಜಾತಿ- ಮತ- ಹಣಬಲ- ಒತ್ತಡಕ್ಕೆ ತಾನು ಮಣೆ ಹಾಕುವುದಿಲ್ಲ ಎಂಬ ಸಂದೇಶವನ್ನೂ ಪಕ್ಷ ನೀಡಿದೆ. ಜೊತೆಗೆ ಭಿನ್ನಮತ- ಗುಂಪುಗಾರಿಕೆ- ಬ್ಲ್ಯಾಕ್‌ಮೇಲ್‌ ರಾಜಕಾರಣ ಇವುಗಳಿಗೂ ಬಗ್ಗುವುದಿಲ್ಲ ಎಂಬ ಸಂದೇಶವನ್ನೂ ರವಾನಿಸಿದೆ. ಹಾಗೆಯೇ ಇವರ ವಯಸ್ಸು ಕೂಡ ದುಡಿಯುವ ಹುಮ್ಮಸ್ಸಿನ ವಯಸ್ಸೇ ಆಗಿರುವುದು ಪ್ಲಸ್‌ ಪಾಯಿಂಟ್‌.
ಬಲಿಷ್ಠ ಜಾತಿಗೂ ಸೇರಿರದ ಇವರನ್ನು ಆಯ್ಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯದ ಚಿಂತನೆಯನ್ನೂ ಪಕ್ಷ ಎತ್ತಿ ಹಿಡಿದಿದೆ. ಇದೊಂದು ಬಗೆಯ ಮಾದರಿ ನಡೆ ಎಂದೇ ಹೇಳಬಹುದು. ಕೆಳಜಾತಿಯಿಂದ ಬಂದ, ಸಮಾಜಸೇವೆಯನ್ನೇ ನಿಷ್ಠೆಯಿಂದ ಮಾಡುತ್ತ ಬಂದವರಿಗೆ ಸ್ಥಾನಮಾನಗಳು ಅದರಷ್ಟಕ್ಕೇ ಅರಸಿ ಬರಬೇಕು. ಅಂಥ ಸನ್ನಿವೇಶ ಸೃಷ್ಟಿಯಾದಾಗ ಅದು ಮಾದರಿ ಪ್ರಜಾಪ್ರಭುತ್ವ ಎನಿಸಿಕೊಳ್ಳುತ್ತದೆ. ಬಿಜೆಪಿಯಲ್ಲಿ ಕೂಡ ಇತ್ತೀಚೆಗೆ ವಂಶಾಡಳಿತ ಹಾಗೂ ಜಾತಿಯಲ್ಲಿ ಬಲಿಷ್ಠರಿಗೆ ಮಣೆ ಮುಂತಾದವು ನಡೆದದ್ದು ಇದೆ. ‘ಪಾರ್ಟಿ ವಿದ್‌ ಡಿಫರೆನ್ಸ್‌’ ಎಂದು ಕರೆಸಿಕೊಳ್ಳುತ್ತಿದ್ದ ಬಿಜೆಪಿ ಇಂಥ ನಡೆಗಳಿಂದ ‘ಪಾರ್ಟಿ ವಿದ್‌ ನೋ ಡಿಫರೆನ್ಸ್‌’ ಎಂದಾಗುವತ್ತ ಹೆಜ್ಜೆಯಿಟ್ಟಿತ್ತು. ಆದರೆ ಸಕಾಲದಲ್ಲಿ ಬಿಜೆಪಿ ಹೈಕಮಾಂಡ್‌ ಇದನ್ನು ತಿದ್ದಿಕೊಂಡಿದೆ ಮಾತ್ರವಲ್ಲ, ಇತರರಿಗೂ ಒಂದು ಸಂದೇಶವನ್ನು ರವಾನಿಸಿದೆ. ಇಂದು ಮೀಸಲಾತಿ ಸೌಲಭ್ಯವನ್ನು ಕೂಡ ಒಮ್ಮೆ ಪಡೆದವರೇ ಮತ್ತೆ ಮತ್ತೆ ಪಡೆಯುವುದನ್ನು ನೋಡಬಹುದು. ಇದು ಇತರ ಹಿಂದುಳಿದವರಿಗೂ ಅನ್ಯಾಯ ಮಾಡಿದಂತೆ. ಕಡೆಗಣನೆಗೊಳಗಾದ, ಹೆಚ್ಚಿನ ಸಂಖ್ಯಾಬಲವಿಲ್ಲದ ಸಮುದಾಯವೊಂದಕ್ಕೆ ಪ್ರಾತಿನಿಧ್ಯ ನೀಡಿದ ಕ್ರಮದಿಂದ ಬಿಜೆಪಿ ಆ ವಿಚಾರದಲ್ಲೂ ಆದರ್ಶ ಎನಿಸಿದೆ.
ಬಿಜೆಪಿಯ ಈ ನಡೆಯನ್ನು ಇತರ ಪಕ್ಷಗಳೂ ಒಂದು ಆದರ್ಶವಾಗಿ ಪರಿಗಣಿಸಬಹುದು. ಹಾಗೆಯೇ ಅತ್ಯಪೂರ್ವ ರಾಜಕೀಯ ತಂತ್ರವಾಗಿಯೂ ನೋಡಬಹುದು. ಹೈಕಮಾಂಡ್‌ನ ಈ ಏಟಿನಿಂದ ಎಲ್ಲ ಗುಂಪುಗಾರಿಕೆ, ಲಾಬಿಗಳೂ ಇದ್ದಕ್ಕಿದ್ದಂತೆಯೇ ತಣ್ಣಗಾಗಿವೆ. ಜನತೆಯಲ್ಲಿ ಕೂಡ, ಈ ಆಯ್ಕೆಗಳ ಬಗೆಗೆ ಒಂದು ಬಗೆಯ ಕುತೂಹಲ, ವಿಸ್ಮಯ ಮೂಡಿದೆ. ಈ ಮೊದಲು ಸಂಭಾವ್ಯ ಅಭ್ಯರ್ಥಿಗಳ ಅರ್ಹತೆಯ ಬಗ್ಗೆ ಟೀಕೆ ಮಾಡುತ್ತಿದ್ದವರು ಕೂಡ ಈ ಅಭ್ಯರ್ಥಿಗಳ ಬಗ್ಗೆ ಸಮ್ಮತಿ ತಾಳಿರುವುದನ್ನು ನೋಡಿದರೆ, ಬಿಜೆಪಿ ಸರಿಯಾಗಿಯೇ ಟೀಕಾಕಾರರ ಬಾಯಿ ಮುಚ್ಚಿಸಿದೆ ಎನ್ನಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top