ಒಂದು ವೇಳೆ ಮುಂಬಯಿಗೆ ‘ನಿಸರ್ಗ’ ಚಂಡಮಾರುತವೇನಾದರೂ ಅಪ್ಪಳಿಸಿದರೆ ಇತಿಹಾಸ ಸೃಷ್ಟಿಯಾಗಲಿದೆ. ಯಾಕೆಂದರೆ, 138 ವರ್ಷದ ಬಳಿಕ ಮುಂಬಯಿ ಮಹಾನಗರ ಚಂಡಮಾರುತವನ್ನು ಎದುರಿಸಲಿದೆ! ಕೊರೊನಾ ಸಂಕಟ ಅನುಭವಿಸುತ್ತಿರುವ ಮುಂಬಯಿಗೆ ‘ನಿಸರ್ಗ’ ಮತ್ತೊಂದು ಹೊಡೆತ ನೀಡುವಂತಿದೆ.
ಈಗಾಗಲೇ ಮುಂಬಯಿ ನಗರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಚಂಡಮಾರುತವು ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿದ್ದು, ಅಂಫಾನ್ ಬಳಿಕ ದೇಶ ಎದುರಿಸುತ್ತಿರುವ ಎರಡನೇ ಚಂಡಮಾರುತವಾಗಿದೆ. ಆದರೆ, ಅದರಷ್ಟು ಪ್ರಭಾವಶಾಲಿಯಾಗಿಲ್ಲ. ಈ ಚಂಡಮಾರುತವು ಜೂನ್ 3ರಂದು ಉತ್ತರ ಮುಂಬಯಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರ ಕರಾವಳಿಯಲ್ಲಿ ದಿಢೀರ್ ಪ್ರವಾಹಕ್ಕೂ ಕಾರಣವಾಗಬಹುದು. ಚಂಡಮಾರುತದ ವೇಗ ಪ್ರತಿ ಗಂಟೆಗೆ 115 ಕಿ.ಮೀ. ಇರಲಿದ್ದು, ಗರಿಷ್ಠ 125 ಕಿ.ಮೀ.ವರೆಗೂ ತಲುಪಲಿದೆ.
1882ರ ಬಳಿಕ ಪ್ರಬಲ ಚಂಡಮಾರುತ!
ಮುಂಬಯಿ ಯಾವತ್ತೂ ಚಂಡಮಾರುತವನ್ನು ಎದುರಿಸಿಲ್ಲ. ಅಂದರೆ, ಸಿಕ್ಕಾಪಟ್ಟೆ ಅಪಾಯವನ್ನುಂಟು ಮಾಡುವ ಚಂಡಮಾರುತಗಳ ಮುಂಬಯಿ ಮಹಾನಗರವನ್ನು ಕಾಡಿಲ್ಲ. ಆದರೆ, 1882ರಲ್ಲಿ ಬೀಸಿದ ಚಂಡಮಾರುತಕ್ಕೆ ಒಂದು ಲಕ್ಷ ಜನರು ಸತ್ತಿದ್ದರು ಎಂದು ಹೇಳುತ್ತಾರೆ. ಅಂದರೆ, ನಿಸರ್ಗ ಸೈಕ್ಲೋನ್ ಏನಾದರೂ ಗುರುವಾರ ಅಪ್ಪಳಿಸಿದರೆ 138 ವರ್ಷದ ಬಳಿಕ ಮುಂಬಯಿ ಚಂಡಮಾರುತಕ್ಕೆ ಸಾಕ್ಷಿಯಾಗಲಿದೆ!
ಇಡೀ ಮುಂಬಯಿ ನಗರವೇ ಕರಾವಳಿ ತೀರದ ಮೇಲೆ ನಿಂತಿದೆ. ಹಾಗಿದ್ಯೂ, ಚಂಡಮಾರುತಗಳೇಕೆ ಈ ನಗರವನ್ನು ಬಾಧಿಸಿಲ್ಲಎಂಬ ಪ್ರಶ್ನೆ ಸಹಜ. ಅರಬ್ಬೀ ಸಮುದ್ರದ ವಾತಾವರಣದ ಡೈನಾಮಿಕ್ಸ್ಗಳೇ ಮುಂಬಯಿ ನಗರದ ಮೇಲೆ ಚಂಡಮಾರುತಗಳ ವಕ್ರದೃಷ್ಟಿ ಬೀಳದಿರಲು ಕಾರಣ ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ವರ್ಷಕ್ಕೆ ಒಂದೆರೆಡು ಚಂಡಮಾರುತಗಳನ್ನು ಪ್ರತಿ ಸಮುದ್ರವೂ ಅನುಭವಿಸುತ್ತದೆ. ಬಂಗಾಳಕೊಲ್ಲಿಯಲ್ಲಂತೂ ತುಸು ಹೆಚ್ಚೇ ಎಂದು ಹೇಳಬಹುದು.
ಮುಂಬಯಿಯತ್ತ ಬರಲಾರವು
ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗುವ ಚಂಡಮಾರುತಗಳು ಪಶ್ಚಿಮದತ್ತ ಬೀಸುತ್ತ ಒಮನ್ ಮತ್ತು ಅಡೇನ್ ಕೊಲ್ಲಿಯತ್ತ ಚಲಿಸುತ್ತವೆ. ಅಥವಾ ಉತ್ತರದ ಗುಜರಾತ್ನತ್ತ ಬೀಸಲಾರಂಭಿಸುತ್ತವೆ. 1998ರ ಚಂಡಮಾರುತಕ್ಕೆ ಗುಜರಾತ್ನಲ್ಲಿಸಾವಿರಾರು ಜನರು ಪ್ರಾಣಕಳೆದುಕೊಂಡಿದ್ದರು. 2017ರಲ್ಲಿ ಸೃಷ್ಟಿಯಾಗಿದ್ದ ವಾಯು ಚಂಡಮಾರುತ ಗುಜರಾತ್ನತ್ತ ಸಾಗಿತ್ತು. ಆದರೆ, ಪೂರ್ವದತ್ತ ಚಲಿಸಿ ಮುಂಬಯ ಕರಾವಳಿ ತೀರಕ್ಕೆ ಅಪ್ಪಳಿಸುವುದು ತೀರಾ ಅಪರೂಪ. ಆದರೂ, ಎರಡು ವರ್ಷದ ಹಿಂದೆ ಮುಂಬಯಿನತ್ತ ಓಖೀ ಸೈಕ್ಲೋನ್ ಬಂದಿತ್ತಾದರೂ, ತೀರಕ್ಕೆ ಅಪ್ಪಳಿಸುವ ಹೊತ್ತಿಗೆ ಅದು ತನ್ನ ಶಕ್ತಿಯನ್ನು ಕಳೆದುಕೊಂಡಿತ್ತು.
ಕೇರಳಕ್ಕೂ ಹತ್ತಿರ
ಇತ್ತೀಚೆಗೆ ಬಿರುಗಾಳಿಗಳು ಕೇರಳಕ್ಕೆ ಹೊಂದಿಕೊಂಡ ಸಮುದ್ರದಲ್ಲಿ ಸೃಷ್ಟಿಯಾಗುತ್ತಿವೆ. ಮೇಲ್ಮೈ ಘರ್ಷಣೆಗಳಿಂದಾಗಿ ಈ ಬಿರುಗಾಳಿಗಳು ಸೃಷ್ಟಿಯಾಗುತ್ತಿದ್ದು, ಅಷ್ಟೇನೂ ಅಪಾಯಕಾರಿಯಲ್ಲ. ಈಗಿನ ಮಾರುತಗಳು ಕೇರಳದ ಹತ್ತಿರದ ಸಮುದ್ರದ ಮೇಲ್ಮೈಯನ ಅತಿಯಾದ ತಾಪಮಾನದಿಂದಲೇ ಸೃಷ್ಟಿಯಾಗಿದ್ದು, ಪಶ್ಚಿಮದಿಂದ ಬೀಸುವ ಮಳೆಮಾರುತಗಳು ತೇವಾಂಶ ಒದಗಿಸಿಕೊಟ್ಟಿವೆ. ಆದರೆ, ಅವು ತಮ್ಮ ತೀವ್ರತೆಯನ್ನು ಕಾಪಾಡಿಕೊಂಡು ಭೂ ಮೇಲ್ಮೈಗೆ ಅಪ್ಪಳಿಸುವ ಹೊತ್ತಿಗೆ ಶಕ್ತಿಹೀನವಾಗಲಿವೆಯೇ ಎಂಬುದನ್ನು ಕಾದುನೋಡಬೇಕು. ‘‘ಸಾಮಾನ್ಯವಾಗಿ ಮುಂಬಯಿ ಸಮೀಪದ ಸಮುದ್ರ ವಾತಾವರಣದಲ್ಲಾಗುವ ಬದಲಾವಣೆಗಳು ಸೈಕ್ಲೋನ್ಗಳಾಗಿ ಬದಲಾಗುವುದಿಲ್ಲ,’’ ಎನ್ನುತ್ತಾರೆ ಐಐಟಿ ಬಾಂಬೆಯ ಮೆಕ್ಯಾನಿಕಲ್ ಎಂಜನಿಯರಿಂಗ್ ಪ್ರೊಫೆಸರ್ ಶ್ರೀಧರ್ ಬಾಲುಸುಬ್ರಮಣಿಯನ್ ಅವರು.
ಬಿರುಸಾಗುತ್ತಿವೆ ಸೈಕ್ಲೋನ್ಗಳು
20015ರ ಅಧ್ಯಯನದ ಪ್ರಕಾರ, ಹೆಚ್ಚು ತಾಪಮಾನಕ್ಕೊಳಗಾಗುತ್ತಿರುವ ಅರಬ್ಬೀ ಸಮುದ್ರದಲ್ಲಿ ಸೈಕ್ಲೋನ್ ಚಟುವಟಿಕೆಗಳು ಬಿರುಸಾಗುತ್ತಿವೆ. ಕಳೆದ ವರ್ಷ ಹಿಂದೂ ಮಹಾಸಾಗರದಲ್ಲಿ ಕಂಡು ಬಂದ ಎಂಟು ಸೈಕ್ಲೋನ್ಗಳ ಪೈಕಿ ಐದು ಸ್ಕೆಕ್ಲೋನ್ಗಳು ಅರಬ್ಬೀ ಸಮುದ್ರದಲ್ಲಿಯೇ ಸೃಷ್ಟಿಯಾಗಿರುವಂಥವು. 1902ರ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಸೈಕ್ಲೋನ್ ಸೃಷ್ಟಿಯಾಗಿದ್ದು ಇದೇ ಮೊದಲು.
ವಿಜ್ಞಾನಿ ಸೋಬೆಲ್ ಪ್ರಕಾರ, ಒಂದು ಸಣ್ಣ ಅಪಾಯವನ್ನು ದೊಡ್ಡ ಮಟ್ಟದಲ್ಲಿ ಎದುರಿಸಲು ಸಜ್ಜಾಗುವುದು ತಪ್ಪೇನಲ್ಲ. 2017ರಲ್ಲಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಕೊಲಂಬಿಯಾ ವಿವಿ ಫ್ರೊಫೆಸರ್, ‘‘ತಾವು ಸಿದ್ಧಪಡಿಸಿದ ಮಾದರಿಗಳು ಮುಂಬಯಿಗೆ ಚಂಡಮಾರುತ ಅಪಾಯವಿರುವುದನ್ನು ತೋರಿಸಿವೆ ಮತ್ತು ಈ ಚಂಡಮಾರುತಗಳು ವಿನಾಶವನ್ನು ಉಂಟುಮಾಡುವಷ್ಟು ಪ್ರಬಲವಾಗಿವೆ. ಆದರೆ, ಇದು ಹಲವು ವರ್ಷಗಳಲ್ಲಿ ಒಮ್ಮೆ ನಡೆಯುವಂಥವು. ಮುಂಬಯಿಯಂತೆ, ಅಟ್ಲಾಂಟಿಕ್ ಮಹಾಸಾಗರದ ಚಂಡಮಾರುತಗಳು ಎಂದಿಗೂ ನ್ಯೂಯಾರ್ಕ್ ಕಡೆಗೆ ಚಲಿಸಲೇ ಇಲ್ಲ. ಆದರೆ, 2012ರಲ್ಲಿ ಸ್ಯಾಂಡಿ ಚಂಡಮಾರುತವು ಮಾತ್ರ ನ್ಯೂಯಾರ್ಕ್ ನಗರಕ್ಕೆ ಅಪ್ಪಳಿಸಿ ಹೆಚ್ಚು ಹಾನಿಗೆ ಕಾರಣವಾಯಿತು,’’ ಎನ್ನುತ್ತಾರೆ ಅವರು. ಒಂದೊಮ್ಮೆ ಈಗಿನ ಚಂಡಮಾರುತ ಪ್ರಬಲವಾಗಿಯೇ ಅಪ್ಪಳಿಸಿದರೆ, ಈಗಾಗಲೇ ಕೊರೊನಾ ವೈರಸ್ನಿಂದ ಕಂಗೆಟ್ಟಿರುವ ಮುಂಬಯಿ ಮಹಾನಗರ ತತ್ತರಿಸಿ ಹೋಗಲಿದೆ.
ಅಪರೂಪದ ಘಟನೆ
ನಿಸರ್ಗ ಚಂಡಮಾರುತವು ಮಹಾರಾಷ್ಟ್ರದ ಜನರಲ್ಲಿ ಆತಂಕ ಸೃಷ್ಟಿಸಿದೆ. ಹಿರಿಯ ಹವಾಮಾನ ತಜ್ಞ ಜೇಸನ್ ನಿಕೋಲ್ಸ್ ಅವರು ಇದೊಂದು ಅಪರೂಪದ ನೈಸರ್ಗಿಕ ಘಟನೆ ಬಣ್ಣಿಸಿದ್ದಾರೆ. ‘‘1891ರಲ್ಲಿ ಮುಂಬಯಿ ಬಳಿ ಮೂರು ಚಂಡಮಾರುತಗಳು ಅಪ್ಪಳಿಸಿದ್ದವು. ಬಳಿಕ 2009ರಲ್ಲಿ ಫ್ಯಾನ್ ಅಪ್ಪಳಿಸಿದ್ದರೂ ತೀವ್ರತೆ ಇರಲಿಲ್ಲ. ಹೀಗಾಗಿ ನಿಸರ್ಗ ಶತಮಾನದ ಪ್ರಬಲ ಚಂಡಮಾರುತ,’’ ಎಂದು ಅವರು ವಿವರಿಸಿದ್ದಾರೆ. ‘‘ಮುಂಗಾರಿಗೂ ಮುನ್ನ ಮಹಾರಾಷ್ಟ್ರದಲ್ಲಿ ಅಪ್ಪಳಿಸಿರುವ ಎರಡನೇ ಚಂಡಮಾರುತವಿದು. 1961ರಲ್ಲಿ ಮೇನಲ್ಲಿಯೂ ಚಂಡಮಾರುತವೊಂದು ಅಪ್ಪಳಿಸಿತ್ತು,’’ ಎಂದು ಮತ್ತೊಬ್ಬ ತಜ್ಞ ವಿನೀತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಚಂಡಮಾರುತ ಎಂದರೇನು?
ಚಂಡಮಾರುತವು ಹವಾಮಾನಕ್ಕೆ ಸಂಬಂಧಿಸಿದ ಒಂದು ವಿದ್ಯಮಾನ. ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಗಾಳಿ ಜೋರಾಗಿ ಪ್ರದಕ್ಷಿಣೆ ಇಲ್ಲವೇ ಅಪ್ರದಕ್ಷಿಣಾ ಪಥದಲ್ಲಿ ಸುರುಳಿ ಸುತ್ತುತ್ತಾ ಕಡಿಮೆ ಒತ್ತಡ ಇರುವ ಪ್ರದೇಶದತ್ತ ಮುನ್ನುಗ್ಗುವುದೇ ಚಂಡಮಾರುತ.
ಸೈಕ್ಲೋನ್, ಹರಿಕೇನ್, ಟೈಫೂನ್ ಬೇರೆ ಬೇರೇನಾ?
ಎಲ್ಲವೂ ಒಂದೇ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಅದಕ್ಕೆ ಬೇರೆ ಬೇರೆ ಹೆಸರು.
ಅಟ್ಲಾಂಟಿಕ್ ಸಾಗರ: ಹರಿಕೇನ್
ಫೆಸಿಫಿಕ್ ಸಾಗರ: ಟೈಫೂನ್
ಹಿಂದೂ ಮಹಾಸಾಗರ: ಸೈಕ್ಲೋನ್
ನಾಮಕರಣ ಹೇಗೆ?
ಜಾಗತಿಕ ಪವನಶಾಸ್ತ್ರ ಸಂಘಟನೆ(ಡಬ್ಲ್ಯುಎಂಒ) ಯಡಿ ಬರುವ, ಜಗತ್ತಿನೆಲ್ಲೆಡೆ ಹರಡಿರುವ 11 ಮುನ್ನೆಚ್ಚರಿಕಾ ಕೇಂದ್ರಗಳಲ್ಲಿ ತಮ್ಮ ತಮ್ಮ ಭಾಗಕ್ಕೆ ಅನ್ವಯವಾಗುವಂತೆ ಹೆಸರನ್ನು ಸೂಚಿಸಲು ಅವಕಾಶವಿದೆ. ಅವೆಲ್ಲವನ್ನೂ ಜಾಗತಿಕ ಹವಾಮಾನ ಸಂಘಟನೆಯ ಪ್ರಾದೇಶಿಕ ಉಷ್ಣವಲಯ ಚಂಡಮಾರುತ ಸಮಿತಿಯ ಅಂತಿಮ ಒಪ್ಪಿಗೆಗೆ ಸಲ್ಲಿಸಬೇಕಾಗುತ್ತದೆ. ಈ ಸಮಿತಿಗೆ ಶಿಫಾರಸನ್ನು ಒಪ್ಪುವ, ತಿರಸ್ಕರಿಸುವ, ಬೇರೆಯದೇ ಹೆಸರು ಸೂಚಿಸುವ ಅಧಿಕಾರ ಹೊಂದಿದೆ. ಹೆಸರು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಆಯಾ ಭಾಗದ ಹಲವಾರು ರಾಷ್ಟ್ರಗಳು ಒಳಗೊಳ್ಳುತ್ತವೆ. ಅಂತಿಮವಾಗಿ ಜನಮತಗಣನೆಯ ಆಧಾರದಲ್ಲಿ ಹೆಸರು ಅಂತಿಮಗೊಳಿಸಲಾಗುತ್ತದೆ. ನಾಮಕರಣ ಪ್ರಕ್ರಿಯೆ ವ್ಯವಸ್ಥಿತವಾಗಿರಬೇಕು ಎಂಬ ಕಾರಣಕ್ಕೆ ಹವಾಮಾನ ವಿಜ್ಞಾನಿಗಳು ಇಂಗ್ಲಿಷ್ ಅಕ್ಷರ ಮಾಲೆಯ ಮೊದಲಾಕ್ಷರ ‘ಎ’ಯಿಂದ ಆರಂಭಿಸುತ್ತಾರೆ. ಅಂದರೆ ವರ್ಷದ ಆರಂಭದಲ್ಲಿ ಬರುವ ಚಂಡಮಾರುತದ ಹೆಸರು ಬಹುತೇಕ ‘ಎ’ಯಿಂದ ಆರಂಭವಾಗುತ್ತದೆ. ವರ್ಷದ ಕೊನೆಯಲ್ಲಿಬರುವುದು ಅಂತಿಮ ಅಕ್ಷರಗಳಿಂದ ಆರಂಭವಾಗುತ್ತದೆ.
ನಾಮಕರಣ ವಿಶೇಷಗಳು
60 ಕಿ.ಮೀ.ಗಿಂತ ಹೆಚ್ಚು ವೇಗದ ಗಾಳಿಯೊಂದಿಗೆ ಬರುವ ಚಂಡಮಾರುತಕ್ಕೆ ಹೆಸರಿಡುವ ಪದ್ಧತಿ ಅಟ್ಲಾಂಟಿಕ್ ಸಾಗರದಿಂದ ಆರಂಭವಾಯಿತು. ಆರಂಭದಲ್ಲಿ ಕೆರೆಬಿಯನ್ ದ್ವೀಪವಾಸಿಗಳು ಯಾವ ದಿನ ಚಂಡಮಾರುತ ಅಪ್ಪಳಿಸಿತು ಎನ್ನುವುದರ ಆಧಾರದ ಮೇಲೆ ರೋಮನ್ ಕ್ಯಾಥೊಲಿಕ್ ಕ್ಯಾಲೆಂಡರ್ನಲ್ಲಿ ಆ ದಿನಕ್ಕೆ ಸೂಕ್ತವಾಗಿ ಯಾವ ಸಂತರ ಹೆಸರಿದೆಯೋ ಅವರ ಹೆಸರನ್ನು ಇಡಲಾಗುತ್ತಿತ್ತು.
ಹೆಣ್ಮಕ್ಕಳ ಹೆಸರಲ್ಲಿಚಂಡಮಾರುತ
1940ರ ಅವಧಿಯಲ್ಲಿ ಹವಾಮಾನ ತಜ್ಞರು ಚಂಡಮಾರುತಗಳನ್ನು ಹೆಣ್ಮಕ್ಕಳ ಹೆಸರಿನಿಂದ ಗುರುತಿಸಲು ಆರಂಭಿಸಿದ್ದರು. ಇಂಗ್ಲಿಷ್ ಅಕ್ಷರಗಳ ಆಧಾರದಲ್ಲಿ ಚಂಡಮಾರುತಗಳನ್ನು ಹೆಸರಿಸುವ ಪದ್ಧತಿ ಮೊದಲ ಬಾರಿಗೆ ಆರಂಭವಾಗಿದ್ದು 1953ರಲ್ಲಿ, ಅಮೆರಿಕದಲ್ಲಿ. ಆಗ ‘ಎ’ಯಿಂದ ಆರಂಭಿಸಿ ‘ಡಬ್ಲ್ಯೂ’ವರೆಗೆ ಹೆಣ್ಮಕ್ಕಳ ಹೆಸರನ್ನೇ ಇಡಲಾಗುತ್ತಿತ್ತು. ಕ್ಯು, ಯು, ಎಕ್ಸ್, ವೈ, ಝಡ್ ಆಲ್ಫಬೆಟ್ಗಳು ಬಳಕೆಯಾಗುತ್ತಿರಲಿಲ್ಲ.
1978ರಿಂದ ಪುರುಷ ನಾಮಕರಣ
60 ಮತ್ತು 70ರ ದಶಕದಲ್ಲಿ ಹಲವಾರು ಮಹಿಳಾ ಹಕ್ಕುಗಳ ಸಂಘಟನೆಗಳು ಪ್ರತಿಭಟನೆ ನಡೆಸಿದ ಫಲವಾಗಿ 1978ರಲ್ಲಿ ಪುರುಷರ ಹೆಸರನ್ನೂ ಸೇರಿಸಲು ನಿರ್ಧರಿಸಲಾಯಿತು.