ಆಯ್ದ ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧಾರ ಮಾಡಿದ್ದು, ಈ ಕುರಿತ ಕರಡು ಪ್ರಸ್ತಾವನೆಯನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟಿದೆ. ಸರಕಾರದ ಒಲವು ಇವುಗಳ ನಿಷೇಧದತ್ತಲೇ ಇರುವಂತಿದೆ. ಇಲ್ಲಿ ಆತಂಕಕ್ಕೆ ಕಾರಣವಾಗಿರುವುದು, ಪ್ರಸ್ತಾವಿತ 27 ಕೀಟನಾಶಕಗಳು ಹಲವು ದಶಕಗಳಿಂದ ರೈತರು ಹೆಚ್ಚಾಗಿ ಬಳಸುತ್ತಿರುವ, ಕಡಿಮೆ ಅಪಾಯಕಾರಿಯಾಗಿರುವ, ಪರಿಣಾಮಕಾರಿ ಫಲಿತಾಂಶ ನೀಡುತ್ತಿರುವ ಹಾಗೂ ಅಗ್ಗದ ಜನರಿಕ್ ಕೀಟನಾಶಕಗಳಾಗಿವೆ. ಒಂದೆಡೆ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ, ಕೊರೊನಾ ಕಾಲದ ಲಾಕ್ಡೌನ್ ಮತ್ತು ‘ಕೃಷಿ ಒಳಸುರಿ’ಗಳ ಬೆಲೆಯೇರಿಕೆಗಳಿಂದ ಹೈರಾಣಾಗಿರುವ ರೈತರು ಪರ್ಯಾಯ ಕೀಟನಾಶಕಗಳ ಹುಡುಕಾಟ ನಡೆಸಬೇಕಾಗಿದೆ ಹಾಗೂ ದುಬಾರಿ ದರ ತೆತ್ತು ಹೊಸದನ್ನು ಖರೀದಿಸಬೇಕಾಗಲಿದೆ.
‘ಈ 27 ಕೀಟನಾಶಕಗಳು ಮಾನವ ಹಾಗೂ ಪ್ರಾಣಿಗಳಿಗೆ ಅಪಾಯಕಾರಿಯಾಗಿದೆ; ಇವುಗಳ ಆಮದು, ಉತ್ಪಾದನೆ, ಮಾರಾಟ, ಸಾಗಾಟ, ವಿತರಣೆ ಹಾಗೂ ಬಳಕೆ ನಿಷೇಧಿಸಲು ನಿರ್ಧರಿಸಲಾಗಿದೆ. ಇವುಗಳ ಬದಲಿಗೆ ಹೊಸ ಕೀಟನಾಶಕಗಳ ಬಳಕೆಗೆ ಅವಕಾಶವಿದೆ’ ಎಂದು ಸರಕಾರ ತಿಳಿಸಿದೆ. ಆದರೆ ಹೊಸ ಕೀಟನಾಶಕಗಳು ಯಾವುವು, ಅವು ಇವುಗಳಿಗಿಂತ ಹೇಗೆ ಕಡಿಮೆ ಅಪಾಯಕಾರಿ ಎಂಬುದನ್ನು ತಿಳಿಸಿಲ್ಲ. ಈ ಕೀಟನಾಶಕಗಳು ಮಧ್ಯಮ ಅಪಾಯಕಾರಿ ಹಾಗೂ ಕಡಿಮೆ ಅಪಾಯಕಾರಿ ವಲಯಕ್ಕೆ ಸೇರಿವೆ; ತರಕಾರಿ, ಹೂವು, ಭತ್ತ, ರಾಗಿ, ಗೋಧಿ, ಜೋಳ, ದವಸ ಧಾನ್ಯಗಳು, ಕಬ್ಬು, ಹತ್ತಿ, ಕಾಫಿ, ಕಾಳುಮೆಣಸು, ಅಡಕೆ, ಮಾವು, ದ್ರಾಕ್ಷಿ, ದಾಳಿಂಬೆ ಹೀಗೆ ಬಹುತೇಕ ಎಲ್ಲ ಮಾದರಿಯ ಬೆಳೆಗಳಿಗೆ ಇವುಗಳನ್ನು ಬಳಸಲಾಗುತ್ತಿದೆ. ಅಪಾಯಕಾರಿ ಕೀಟನಾಶಕಗಳನ್ನು ಕಾಲಕಾಲಕ್ಕೆ ನಿಷೇಧ ಮಾಡಲಾಗುತ್ತದೆ. ಅದು ಸರಿ. ಆದರೆ ಈ ಬಾರಿ ನಿಷೇಧಕ್ಕೊಳಗಾಗುತ್ತಿರುವುದು ಕಡಿಮೆ ದರದವು ಹಾಗೂ ಕಡಿಮೆ ಅಪಾಯಕಾರಿಯಾಗಿವೆ. ಇವುಗಳ ಜಾಗದಲ್ಲಿ ಹೊಸ ದುಬಾರಿ ಕೀಟನಾಶಕಗಳಿಗೆ ಜಾಗ ಮಾಡಿಕೊಡುವ ಕ್ರಮ ಇದಾಗಿರಬಹುದೇ ಎಂಬ ಅನುಮಾನ ಇದರಿಂದ ಮೂಡುತ್ತಿದೆ.
ಕೃಷಿಯಲ್ಲಿ ಎಲ್ಲ ಬಗೆಯ ರಾಸಾಯನಿಕ, ಕೀಟನಾಶಕಗಳ ಬಳಕೆ ಕಡಿಮೆಯಾಗುವುದು ಉತ್ತಮ. ಆದರೆ ಹಸಿರು ಕ್ರಾಂತಿಯ ಆರಂಭ ಕಾಲದಿಂದಲೂ ನಮ್ಮ ಸಣ್ಣ ಹಿಡುವಳಿಗಳ ರೈತರಿಗೆ ಭೂಮಿಯ ಸಂಪೂರ್ಣ ಬಳಕೆ, ಹೆಚ್ಚು ಇಳುವರಿ ಪಡೆಯಲು ಇವು ನೆರವಾಗಿವೆ. ಕೀಟನಾಶಕಗಳ ಬಳಕೆ ಕಡಿಮೆಯಾಗಿ ಜೈವಿಕ, ಸಾವಯವ ಕೃಷಿ ಹೆಚ್ಚಬೇಕು ಎಂಬುದು ಆದರ್ಶ. ಆದರೆ ಈ ಆದರ್ಶದ ಪಾಲನೆಯಾಗಬೇಕಾದರೆ ಸೂಕ್ತ ಪರ್ಯಾಯ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗಿರಬೇಕು. ಅಂದರೆ ಜೈವಿಕ ಕೀಟನಾಶಕಗಳು ಲಭ್ಯವಿರಬೇಕು. ಲಭ್ಯವಿರುವ ಜೈವಿಕ ಉತ್ಪನ್ನಗಳು ಕೀಟನಿಯಂತ್ರಣ ಕಾಯಿದೆ ವ್ಯಾಪ್ತಿಗೆ ಒಳಪಡದೆ ಇರುವುದರಿಂದ ಇವುಗಳ ಮಾರಾಟ, ಬೆಲೆ ನಿಯಂತ್ರಣ ಕೃಷಿ ಇಲಾಖೆಗೆ ಸಾಧ್ಯವಿಲ್ಲ. ಅಥವಾ ಕಡಿಮೆ ಅಪಾಯಕಾರಿಯಾದ, ಈಗ ನಿಷೇಧಿಸುತ್ತಿರುವುದಕ್ಕೆ ಪರ್ಯಾಯವಾದ ಹಾಗೂ ಕಡಿಮೆ ಬೆಲೆಯ ಕೀಟನಾಶಕಗಳು ಲಭ್ಯವಿರಬೇಕು. ಆದರೆ ಅಂಥ ಯಾವ ವ್ಯವಸ್ಥೆಯೂ ಈಗ ಇದ್ದಂತಿಲ್ಲ. ಆದ್ದರಿಂದ ಈಗಿರುವ ಕೀಟನಾಶಕಗಳನ್ನು ಇದ್ದಕ್ಕಿದ್ದಂತೆ ನಿಷೇಧಿಸುವುದರಿಂದ ರೈತವಲಯ ಕಳವಳಗೊಳ್ಳುವ ಸಾಧ್ಯತೆಯೇ ಹೆಚ್ಚು. ಸದ್ಯ ನಿಷೇಧ ಎದುರಿಸುತ್ತಿರುವ ಎಲ್ಲ ಕೀಟನಾಶಕಗಳು ಭಾರತೀಯ ಕಂಪನಿಗಳ ಉತ್ಪನ್ನಗಳಾಗಿದ್ದು, ಇವುಗಳ ಬದಲಿಗೆ ಬರುವ ವಿದೇಶಿ ಕಂಪನಿಗಳ ದುಬಾರಿ ಉತ್ಪನ್ನಗಳನ್ನು ರೈತ ಬಳಸಬೇಕಿದ್ದು, ಭಾರತದ ಕೀಟನಾಶಕ ಕ್ಷೇತ್ರ ವಿದೇಶಿ ಸಂಸ್ಥೆಗಳ ಹಿಡಿತಕ್ಕೆ ಹೋಗಬಹುದು. ಇದರಿಂದ ಆತ್ಮನಿರ್ಭರ ಘೋಷಣೆ, ಮೇಕ್ ಇನ್ ಇಂಡಿಯಾ ಯೋಜನೆಗೂ ಧಕ್ಕೆ. ಹೊಸ ಕೀಟನಾಶಕಗಳು ಪರಿಣಾಮಕಾರಿಯೇ ಅಲ್ಲವೇ ಎಂಬುದನ್ನು ಪ್ರಯೋಗಿಸಿ ನೋಡುವುದರಲ್ಲಿ ಒಂದು ವರ್ಷ ಕಳೆದುಹೋಗುತ್ತದೆ. ಅಪಾಯಕಾರಿ ಕೀಟನಾಶಕಗಳ ನಿಷೇಧವನ್ನು ಸರಕಾರ ಹಂತ ಹಂತವಾಗಿ ಕೈಗೊಳ್ಳಬೇಕು ಹೊರತು ಏಕಾಏಕಿ ಸಲ್ಲದು.