ದೃಢಚಿತ್ತದ ಕರ್ಮಯೋಗಿ ಸಾವರ್ಕರ್

– ಡಾ.ವಿ.ಬಿ.ಆರತೀ.  
ಜೀವನವು ಎಲ್ಲ ಮನುಷ್ಯರಿಗೂ ಸುಖದುಃಖಗಳನ್ನು ಒಡ್ಡುತ್ತದೆ. ಈ ಅನುಭವಗಳಿಗೆ ಮನುಷ್ಯರು ಬಗೆಬಗೆಯಾಗಿ ಪ್ರತಿಕ್ರಿಯಿಸುತ್ತಾರೆ! ಕಷ್ಟನಷ್ಟಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಮುಂದುವರಿಯುವ ಸಕಾರಾತ್ಮಕ ಮನೋಭಾವದವರು ಕೆಲವರಾದರೆ, ಚಿಕ್ಕಪುಟ್ಟ ಕಷ್ಟಗಳಿಗೂ ಅತಿಯಾಗಿ ದುಃಖಿಸಿ ಖಿನ್ನರಾಗುವವರು ಕೆಲವರು. ಜೀವನದ ಸುಖದುಃಖಗಳನ್ನು ಸಮಭಾವದಿಂದ ನೋಡುತ್ತ ಪಕ್ವರಾಗುವವರು ವಿರಳ. ಜೀವನದ ಎಲ್ಲಸಂದರ್ಭಗಳಲ್ಲೂ ಸ್ಥಿತಪ್ರಜ್ಞರಾಗಿರುತ್ತ, ದೇಶಧರ್ಮಗಳಲ್ಲಿ ನಿಷ್ಠರಾಗಿರುವವರು, ತಮ್ಮ ಸುತ್ತಲಿನ ಜನರಲ್ಲೂ ಜಾಗೃತಿ ಮೂಡಿಸುವ ವ್ರತ ತೊಡುವವರು ವಿರಳಾತಿ ವಿರಳರು. ಇಂತಹ ಪುರುಷಸಿಂಹರು ಎಷ್ಟೋ ಮಂದಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಮಡಿದಿದ್ದಾರೆ. ಇಂಥ ಅಪ್ರತಿಮ ಸ್ವಾತಂತ್ರ್ಯವೀರರ ಪೈಕಿ ಎದ್ದು ಕಾಣುವ ಅದ್ಭುತ ರಾಷ್ಟ್ರವಾದಿ ಜನನಾಯಕ ಹಾಗೂ ಸ್ಥಿತಪ್ರಜ್ಞ ವೀರ ಸಾವರ್ಕರ್.
ಬ್ರಿಟಿಷರಿಗೆ ದೊಡ್ಡ ಸವಾಲಾದರು ಈ ಸಾವರ್ಕರ್! ಜನರನ್ನು ಜಾತಿ- ಪ್ರಾಂತ ಭೇದಗಳಿಂದ ಒಡೆಯುವ ಬ್ರಿಟಿಷರ ತಂತ್ರಗಳು ಸಾವರ್ಕರ್‌ರ ರಾಷ್ಟ್ರವಾದದ ಮುಂದೆ ನಿಲ್ಲಲಾಗಲಿಲ್ಲ. ಇವರ ರಾಷ್ಟ್ರವಾದವು ಯಾವ ಆಮಿಷಕ್ಕೂ ಸೋಲುತ್ತಿರಲಿಲ್ಲ, ಯಾವ ಬಣ್ಣದ ಮಾತುಗಳಿಗೂ ಕರಗುತ್ತಿರಲಿಲ್ಲ, ಯಾವ ಬೆದರಿಕೆಗೂ ಅಳುಕುತ್ತಿರಲಿಲ್ಲ. ವಾಜಪೇಯಿಯವರು ಹೇಳುವಂತೆ, ‘‘ಸಾವರ್ಕರ್ ಎಂದರೆ ತೇಜಸ್ಸು, ಸಾವರ್ಕರ್ ಎಂದರೆ ತ್ಯಾಗ! ಸಾವರ್ಕರ್ ಎಂದರೆ ತಪಸ್ಸು! ತತ್ವ! ತರ್ಕ! ತಿತಿಕ್ಷೆ, ತೀಕ್ಷ್ಣತೆ ! ಹರಿತ ಖಡ್ಗ! ಮಾಸದ ತಾರುಣ್ಯ! ಪ್ರಖರ ರಾಷ್ಟ್ರವಾದ! ಎಂದೂ ರಾಜಿ ಮಾಡಿಕೊಳ್ಳದ ರಾಷ್ಟ್ರವಾದ! ತನುಮನ ಸರ್ವಸ್ವವನ್ನೂ ಸಮರ್ಪಣೆ ಮಾಡಿಕೊಂಡ ಅಸಾಧಾರಣ ರಾಷ್ಟ್ರಪ್ರೇಮ! ಸಾವರ್ಕರರಲ್ಲಿ ಎತ್ತರವೂ ಇತ್ತು, ಆಳವೂ ಇತ್ತು!’’ ಈ ಮಾತುಗಳೆಲ್ಲ ಉತ್ಪ್ರೇಕ್ಷೆಗಳಲ್ಲ! ಸಾವರ್ಕರ್‌ರ ವ್ಯಕ್ತಿತ್ವವು ಹಾಗಿತ್ತು! ಬ್ರಿಟಿಷರು ಅವರಿಗೆ ಒಡ್ಡಿದ ಅಮಾನುಷ ಕಿರುಕುಳದ ವೃತ್ತಾಂತಗಳನ್ನೂ, ಅದನ್ನೆಲ್ಲ ಅವರು ಶಾಂತವಾಗಿ ಸಹಿಸಿ, ದೃಢವಾಗಿ ನಿಂತ ವೃತ್ತಾಂತಗಳನ್ನು ತಿಳಿದರೆ ನಿಜಕ್ಕೂ ಮೈನವಿರೇಳುತ್ತದೆ.
ಸುಮಾರು ಎಪ್ಪತ್ತು ವರ್ಷಗಳಿಂದ ಈಚೆಗೆ ನಮ್ಮ ಶಿಕ್ಷಣ, ಇತಿಹಾಸ, ಕಥನಗಳನ್ನೆಲ್ಲ ವ್ಯಾಪಿಸಿರುವ ವಾಮಚಿಂತನೆಯು ನಮ್ಮಲ್ಲಿ ಆದರ್ಶ- ತ್ಯಾಗ- ಸೇವೆಗಳೆಲ್ಲ ಬರೀ ಕಲ್ಪನೆ ಎಂಬ ಅಭಿಪ್ರಾಯ ಬಿತ್ತುತ್ತಿವೆ. ಸಾವರ್ಕರರ ಧೀಮಂತ ವ್ಯಕ್ತಿತ್ವದ ವರ್ಚಸ್ಸನ್ನು ಹಾಳುಗೆಡವಲು ಕೆಲವು ಸ್ವಾರ್ಥೀ ರಾಜಕಾರಣಿಗಳು ಹೆಣಗಿದ್ದಾರೆ. ಬ್ರಿಟಿಷರ ನೆಚ್ಚಿನ ಗೆಳೆತನದಲ್ಲಿರುತ್ತ, ವಿಲಾಸೀ ಜೀವನ ನಡೆಸುತ್ತ, ಬ್ರಿಟಿಷರಿಗೇ ಅಸಮಾಧಾನವಾಗದಂತೆ ಶ್ರಮಿಸುತ್ತ, ಅದಕ್ಕಾಗಿ ಭಾರತೀಯರ ಭಾವನೆ- ವಿಚಾರಗಳನ್ನು ಬಲಿಗೊಡಲು ಹೇಸದ, ಹಣ- ಅಧಿಕಾರ- ಕೀರ್ತಿಗಳನ್ನೆಲ್ಲ ಹಿತ್ತಲ ಮಾರ್ಗದಲ್ಲಿ ಕಬಳಿಸಿದ ರಾಜಕಾರಣಿಗಳೂ ಅವರ ಚೇಲಾಗಳೂ, ಸಾವರ್ಕರರಂತಹ ಪ್ರಾಮಾಣಿಕ ರಾಷ್ಟ್ರಪ್ರೇಮಿಯ ವರ್ಚಸ್ಸಿಗೆ ಮಸಿ ಬಳಿಯಲು ಸಾಕಷ್ಟು ತಂತ್ರ ಹೂಡಿದ್ದಾರೆ. ಅದೇನೇ ಇರಲಿ, ಸಾವರ್ಕರರ ಜೀವನ- ಸಾಧನೆಗಳನ್ನೂ ಅವರ ಅಸಾಮಾನ್ಯ ಕಷ್ಟಗಳ ಕಥೆಗಳನ್ನೂ ಗಮನಿಸಿದರೆ ರೋಮಾಂಚನವಾಗುತ್ತದೆ.
ಸಾವರ್ಕರರಲ್ಲಿ ಅಂತಹದ್ದೇನು ವಿಶೇಷ? : ಬಂಧುಮಿತ್ರರ ಒಡನಾಟವಿಲ್ಲದೆ ಕೆಲ ತಿಂಗಳಿದ್ದರೇ ಸಾಕು ಮನುಷ್ಯನು ಚಡಪಡಿಸುತ್ತಾನೆ. ಮನುಷ್ಯ ಮಾತ್ರರಾರೂ ಇಲ್ಲದ ಸ್ಥಳದಲ್ಲಿ ಒಂಟಿಯಾಗಿ ಕೆಲವರ್ಷಗಳು ಇರಬೇಕಾದರಂತೂ ಅವನ ಮಾನಸಿಕ ಸ್ವಾಸ್ಥ್ಯವೇ ಏರುಪೇರಾಗುತ್ತದಂತೆ. ಶತ್ರುಗಳ ಕೈಗೆ ಸಿಕ್ಕಿ, ವಿಪರೀತ ದೈಹಿಕ ಮಾನಸಿಕ ಶೊಷಣೆಗೆ ಗುರಿಪಟ್ಟರಂತೂ ಅಂತಹವರಲ್ಲಿ ಖಿನ್ನತೆ ಆತ್ಮಹತ್ಯಾ ಪ್ರವೃತ್ತಿ ಅಥವಾ ಸ್ಟಾಕ್ಹೋಮ್ ಸಿಂಡ್ರೋಮ್ ಮುಂತಾದವುಗಳು ಮೊದಲಾಗುತ್ತವಂತೆ. (ಸ್ಟಾಕ್ಹೋಮ್ ಸಿಂಡ್ರೋಮ್ ಎಂದರೆ, ಸಾಮಾನ್ಯ ವ್ಯಕ್ತಿಯು ಶತ್ರುವಿನ ವಶವಾದಾಗ, ಆ ಶತ್ರುವಿನ ಕ್ರೌರ್ಯಕ್ಕೆ ಹೆದಹೆದರಿ ಬಳಲಿ ಸೋತು, ಬರಬರುತ್ತ ಪ್ರತಿಭಟಿಸುವುದನ್ನೇ ನಿಲ್ಲಿಸುತ್ತಾನೆ. ಕೊನೆಗೆ ಆ ಶತ್ರುವನ್ನೇ ‘ತನ್ನ ಸ್ವಾಮಿ’ ‘ರಕ್ಷ ಕ’ ಎಂದು ಭ್ರಮಿಸಿ ಆರಾಧಿಸುತ್ತಾನೆ, ಆ ಸ್ಥಿತಿಯಲ್ಲಿ ಅವನ ಮತಿಗೆ ಶತ್ರುವಿನ ಕ್ರೌರ್ಯ- ಅನ್ಯಾಯಗಳೆಲ್ಲ ‘ನ್ಯಾಯಸಮ್ಮತ’, ‘ಕರುಣೆ’ ಎಂಬಂತೆ ಗೋಚರಿಸುತ್ತವೆ. ಅಲ್ಲಿಗೆ ಅವನು ಶತ್ರುವಿನ ಕೈಪುತ್ಥಳಿಯಾಗುತ್ತಾನೆ.)
ಇನ್ನು, ಮನುಷ್ಯನು ಕತ್ತಲೆಯಲ್ಲಿ ದೀರ್ಘಕಾಲ ಒಂಟಿಯಾಗಿ ಬಂದಿಯಾಗಿದ್ದರೆ ಅಂತಹ ಮನುಷ್ಯನ ದೇಹ ಮನಸ್ಸು ಬುದ್ಧಿಗಳಲ್ಲಿ ಆಗುವ ಘೋರ ಪರಿಣಾಮಗಳ ವಿವರ ಎದೆ ಝಲ್ ಎನ್ನಿಸುವಂತಹವು. ದೀರ್ಘಕಾಲ ಒಂಟಿಯಾಗಿ ಕತ್ತಲೆಯಲ್ಲಿರುವ ವ್ಯಕ್ತಿಯಲ್ಲಿ ಒಂಟಿತನ, ನೀರಸತೆ, ಅಸುರಕ್ಷೆ, ಭೀತಿಗಳು ಕಾಡಿದರೆ, ಬರಬರುತ್ತ ಅವನ ದಿಕ್ಕು- ಸಮಯಗಳ ಪರಿಜ್ಞಾನವೂ, ನೆನಪಿನ ಶಕ್ತಿಯೂ, ಮಾತು ಹಾಗೂ ಚಲನವಲಗಳ ಸೌಷ್ಟವವೂ ಕ್ಷೀಣಿಸುತ್ತದಂತೆ. ಹಸಿವೆ- ಬಾಯಾರಿಕೆ- ನಿದ್ರೆಗಳ ಪ್ರಕ್ರಿಯೆ ಏರುಪೇರಾಗುತ್ತವಂತೆ. ತೀವ್ರ ಖಿನ್ನತೆ ಮೂಡಿ, ಮಂಕು ಬಡಿದು ಆಲೋಚಿಸುವ ತರ್ಕಿಸುವ ಶಕ್ತಿಯು ಕ್ಷೀಣಿಸುತ್ತದಂತೆ. ತಾನು ಹಿಡಿದ ಸಿದ್ಧಾಂತ ಆದರ್ಶಗಳೆಲ್ಲ ಮತಿಯಿಂದ ಮಾಸಿಯೇ ಹೋಗುವುದೂ ಉಂಟಂತೆ. ಅಂತೂ ದೀರ್ಘಕಾಲ ಕತ್ತಲವಾಸದಿಂದ ಹೊರಬಂದರೆ ಆ ವ್ಯಕ್ತಿಯ ತನುಮನಗಳು ಮತ್ತೆಂದೂ ಹಿಂದಿನಂತೆ ಸ್ವಸ್ಥವಾಗಲಾರವು, ದೃಢವಾಗಲಾರವು. ಅಸಾಧಾರಣ ಮನಃಸ್ಥೈರ್ಯ ಹಾಗೂ ಇಚ್ಛಾಶಕ್ತಿಗಳಿದ್ದವರಲ್ಲಿ ಅಥವಾ ಅಂತರ್ಮುಖತೆಯ ಪ್ರವೃತ್ತಿಯಿರುವವರಲ್ಲಿ ಮಾತ್ರ ಈ ದುಷ್ಪರಿಣಾಮಗಳು ಕಡಿಮೆ ಪ್ರಮಾಣದಲ್ಲಿ ಆದಾವು ಎನ್ನುವುದು ಮನಶ್ಶಾಸ್ತ್ರಜ್ಞರ ದರ್ಶನ.
ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮಟ್ಟ ಹಾಕಲು ಬ್ರಿಟಿಷರು ಸಾವರ್ಕರ್ ಹಾಗೂ ಇತರ ಜನನಾಯಕರ ಮೇಲೆ ಈ ಬಗೆಯ ಕ್ರೌರ್ಯಗಳನ್ನೇ ಬಳಸಿದ್ದರು. ಸಾವರ್ಕರರ ಮೇಲಂತೂ ಈ ಎಲ್ಲ ತಂತ್ರಗಳನ್ನೂ ಇನ್ನೂತೀವ್ರವಾಗಿ ಬಳಸಿದರು. ಅವರ ದೇಹ ಮನಸ್ಸುಗಳನ್ನು ನಿಷ್ಕರುಣೆಯಿಂದ ಬಳಲಿಸಿ ಅವರನ್ನು ‘ಪಳಗಿಸಲು’ ಬ್ರಿಟಿಷರು ತೋರಿದ ಕ್ರೌರ್ಯ ಹೇಳತೀರದು. ಸಾಮಾನ್ಯ ಕೈದಿಗಳಿಗೆ ಕೊಡುವ ಕಿರುಕುಳ ಮತ್ತು ದೈಹಿಕ ಶ್ರಮವು ಒಂದು ಬಗೆಯದಾದರೆ, ಸಾವರ್ಕರರಿಗೆ ಅದರ ದುಪ್ಪಟ್ಟು ಶಿಕ್ಷೆ. 25 ವರ್ಷ ನಿರಂತರವಾಗಿ ಅಂಡಮಾನ್ನ ಕಾಲಾಪಾನಿ ಕಾರಾಗೃಹದಲ್ಲಿ ಒಂಟಿಯಾಗಿ ಬಂಧಿಯಾಗಿದ್ದರು ಸಾವರ್ಕರ್. ಇತರ ಕೈದಿಗಳಿಗೆ ಕಾಲಿಕ ವಿಶ್ರಾಂತಿ, ಪರಸ್ಪರ ಒಡನಾಟ, ಓದಲು ಪುಸ್ತಕ, ಆಗೊಮ್ಮೆ ಈಗೊಮ್ಮೆ ಪರಿವಾರದವರ ಭೇಟಿ ಸಿಗುತ್ತಿದ್ದವು. ಆದರೆ ಸಾವರ್ಕರ್‌ಗೆ ಇದಾವುದೂ ವರ್ಷಗಟ್ಟಲೆ ಸಿಗಲಿಲ್ಲ! ಇತರರ ಮಲಮೂತ್ರಗಳ ದೊಡ್ಡ ತೊಟ್ಟಿಗಳ ಮಧ್ಯದಲ್ಲಿ ದಿನವಿಡೀ ಕೂರಿಸಲಾಗುತ್ತಿತ್ತು. ಅತ್ಯಂತ ಕುತ್ಸಿತ ಆಹಾರವನ್ನು ನೀಡಲಾಗುತ್ತಿತ್ತು. ನಿಂದೆ ಅಪಮಾನ ಹೊಡೆತಗಳಿಗಂತೂ ಕೊನೆಯೇ ಇಲ್ಲ. ಎತ್ತುಗಳನ್ನು ಬಿಡಿಸಿ ಗಾಣದ ಯಂತ್ರಕ್ಕೆ ಇವರನ್ನು ಕಟ್ಟಿ ಸುತ್ತಿಸಲಾಗುತ್ತಿತ್ತು. ಸಾವರ್ಕರ್ ಎತ್ತುಗಳಿಗಿಂತ ವೇಗದಲ್ಲಿ ಸುತ್ತಿ, ಎತ್ತುಗಳು ತೆಗೆಯುವುದಕ್ಕಿಂತ ಅಧಿಕತರ ಎಣ್ಣೆಯನ್ನು ತೆಗೆಯುತ್ತಿದ್ದರಂತೆ! ‘ಹೀಗೇಕೆ?!’ ಎಂದು ಜೈಲರ್ ಬೆರಗಾದಾಗ ‘‘ಬ್ರಿಟಿಷ್ ಸರಕಾರವನ್ನು ಮುಳುಗಿಸಲು ಇಷ್ಟು ಎಣ್ಣೆ ಸಾಲದು!’’ ಎಂದು ಕೆಚ್ಚೆದೆಯ ಉತ್ತರವನ್ನು ಕೊಟ್ಟರಂತೆ! ಇಷ್ಟು ಸಾಲದೆಂಬಂತೆ ಕತ್ತಲ ಕೋಣೆಯ ಶಿಕ್ಷೆಗೂ ಅವರನ್ನು ತಳ್ಳಲಾಯಿತು. ಮಿಕ್ಕವರಿಗೆ 4-5 ವರ್ಷಗಳ ಕತ್ತಲ ಕೋಣೆಯ ಶಿಕ್ಷೆಯಾದರೆ, ಸಾವರ್ಕರರಿಗೆ ಸತತ ಎಂಟು ವರ್ಷಗಳ ಕತ್ತಲವಾಸ! ಕೈಕಾಲುಗಳನ್ನು ಎಳೆದು ಕಟ್ಟಿ, ಗೋಡೆಗೆ ಮುಖ ಮಾಡಿ ಘಂಟೆಗಟ್ಟಲೆ ದಿವಸಗಳ ಕಾಲ ದಟ್ಟ ಕತ್ತಲೆಯಲ್ಲಿ ನಿಲ್ಲಿಸಲಾಗುತ್ತಿತ್ತು. ಮಲಮೂತ್ರ ವಿಸರ್ಜನೆಗೂ ಅವಕಾಶಗೊಡದೆ ನಿಲ್ಲಿಸಲಾಗುತ್ತಿತ್ತು. ಮೈಯೆಲ್ಲ ಮಲ ಹರಡಿ ಬಳಲಬೇಕಾಗುತ್ತಿತ್ತು. ಇಷ್ಟೆಲ್ಲ ಆದರೂ ಸಾವರ್ಕರ್ ಗೋಳಾಡದೆ ಜಗ್ಗದೆ ಶಾಂತವಾಗಿರುತ್ತಿದ್ದರು. ಅವರ ಮನೋಬಲವನ್ನು ಕಂಡು ಬ್ರಿಟಿಷರೇ ಕಂಗಾಲಾದರು. ಸಾವರ್ಕರ್‌ರ ಈ ಸ್ಥಿತಪ್ರಜ್ಞ ಭಾವವು ವೇದಾಂತಿಗಳಾದ ಭಾರತೀಯರಿಗೆ ಸ್ವಲ್ಪ ಅರ್ಥವಾದೀತೇನೋ, ಆದರೆ ದುರುಳ ಬ್ರಿಟಿಷರ ಪಾಲಿಗಂತೂ ದೊಡ್ಡ ಪ್ರಶ್ನೆಯೇ ಆಯಿತು! ಇಂತಹ ಪರಿಸ್ಥಿತಿಯಲ್ಲಿ ವರ್ಷಗಳೇ ಕಳೆದ ಮೇಲೂ ವ್ಯಕ್ತಿಯೊಬ್ಬನ ಮನಸ್ಸು ಇಷ್ಟು ದೃಢವಾಗಿರಲು ಹೇಗೆ ಸಾಧ್ಯ ಎನ್ನುವುದು ಮನೋವಿಜ್ಞಾನಕ್ಕೂ ಬೆರಗು ಮೂಡಿಸುವ ವಿಷಯವೇ ಸರಿ. ಅಸಹನೀಯ ಯಾತನೆಯಲ್ಲಿ ಸಾವರ್ಕರರು ಬ್ರಿಟಿಷರಿಗೆ ಮನವಿಪತ್ರಗಳನ್ನು ಕೊಟ್ಟದ್ದನ್ನೇ ಎತ್ತಿ ಆಡಿಕೊಳ್ಳುವ ನೀಚರಿಗೆ ಅವರಿದ್ದ ಪರಿಸ್ಥಿತಿಯ ಕಲ್ಪನೆಯೂ ಆಗಲಾರದು. ಮುಂದೆ ಸಾವರ್ಕರರು ಸೆರೆಯಿಂದ ಆಚೆ ಬಂದಾದ ಮೇಲೂ, ಅವರ ದೇಹದಲ್ಲಿ ಅಪರಿಹಾರ್ಯ ಯಾತನೆಗಳು ಮುಂದುವರೆದವಾದರೂ, ಅವರ ಆಲೋಚನೆ ಮಾತು ಬರಹಗಳಲ್ಲಿ ಹಾಗೂ ಸಂಘಟನಾ ಸಾಮರ್ಥ್ಯದಲ್ಲಿ ಯಾವ ಕುಂದೂ ಅಗಿರಲಿಲ್ಲ!
‘‘ನಾನು ದೇಹವಲ್ಲ, ದೇಹಿಯಾದ ಆತ್ಮ’’ ಎನ್ನುವ ವೇದಾಂತದ ದರ್ಶನವಿಲ್ಲದಿದ್ದರೆ ಈ ಮಟ್ಟದ ಮನೋಬಲವು ವ್ಯಕ್ತಿಯಲ್ಲಿ ಮೂಡಲು ಸಾಧ್ಯವೇ ಇಲ್ಲ. ಹೊರಗಡೆಯ ಜೀವನದ ಸುಖದುಃಖಗಳಿಗೆ ಧೃತಿಗೆಡದೆ, ಆಂತರಿಕ ಬದುಕಿನ ಶಾಂತಿ ಕ್ಷಾಂತಿಗಳನ್ನು ಸಿದ್ಧಿಸಿಕೊಳ್ಳುವತ್ತ ಗಮನ ಹರಿಯಿಸುವ ಯೋಗಿಗೆ ಮಾತ್ರವೇ ಈ ಬಗೆಯ ನಿರ್ಲಿಪ್ತಿ ಹಾಗೂ ಮನಶ್ಶಕ್ತಿಗಳು ಸಿದ್ಧಿಸಲು ಸಾಧ್ಯ. ಶ್ರೀಕೃಷ್ಣನು ಸಾರುವ ‘ನಿರ್ಲಿಪ್ತ ಹಾಗೂ ದೃಢಚಿತ್ತದ ಕರ್ಮಯೋಗ ಹಾಗೂ ಸಮತ್ವ ಭಾವ’ಕ್ಕೆ ಅರ್ವಾಚೀನ ಉದಾಹರಣೆಯೊಂದನ್ನು ನಾವು ಕಾಣುವುದು ವೀರ ಸಾವರ್ಕರರಲ್ಲೇ!
(ಲೇಖಕರು ಆಧ್ಯಾತ್ಮ ಚಿಂತಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top