ಏಷ್ಯಾದ ‘ದೊಡ್ಡಣ್ಣ’ನಾಗುವ ಚಪಲಕ್ಕೆ ಬಿದ್ದಿರುವ ಚೀನಾ, ಭಾರತದ ಜೊತೆಗೆ ಗಡಿ ವಿಷಯದಲ್ಲಿ ಸದಾ ಜಗಳ ತೆಗೆಯುವ ತನ್ನ ಚಾಳಿಯನ್ನು ಮುಂದುವರೆಸಿದೆ. ಇಡೀ ಜಗತ್ತೇ ಕೊರೊನಾದಿಂದ ತತ್ತರಿಸಿರುವ ಹೊತ್ತಿನಲ್ಲಿ ಚೀನಾ ಮಾತ್ರ ಭಾರತದ ಜೊತೆಗೆ ಗಡಿ ಕ್ಯಾತೆಗೆ ಮುಂದಾಗಿದೆ ಎಂದರೆ ಆ ದೇಶದ ಅಂತರಾಳದ ಉದ್ದೇಶ ಎಲ್ಲರಿಗೂ ಅರ್ಥವಾಗುವಂಥದ್ದೇನೆ.
ಕೊರೊನಾ ವೈರಸ್ ಚೀನ ನಿರ್ಮಿತ ಎಂಬುದು ಅಮೆರಿಕ ಆದಿಯಾಗಿ ಹಲವು ರಾಷ್ಟ್ರಗಳ ಅನುಮಾನ. ಕೊರೊನಾ ವೈರಸ್ಸಿಗೆ ಸಂಬಂಧಿಸಿದ ಮಾಹಿತಿಯನ್ನು ಆ ದೇಶ ಮುಚ್ಚಿಟ್ಟಿದ್ದು ಅನುಮಾನಕ್ಕೆ ಇಂಬು ನೀಡುವಂತಿದೆ. ಆ ಕಾರಣಕ್ಕಾಗಿ ಇಡೀ ಜಗತ್ತೇ ಈಗ ಚೀನಾ ವಿರುದ್ಧ ತಿರುಗಿ ಬಿದ್ದಿದೆ. ಇತ್ತೀಚೆಗೆ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಅದು ಸ್ಪಷ್ಟವಾಗಿ ಬಹಿರಂಗಗೊಂಡಿದೆ. ಆ ಮೂಲಕ ಜಗತ್ತಿನೆದುರು ಚೀನಾಗೆ ದೊಡ್ಡ ಮುಖಭಂಗವಾಗಿದೆ. ಮತ್ತೊಂದೆಡೆ, ಚೀನಾದಿಂದ ಬಹಳಷ್ಟು ಬಹುರಾಷ್ಟ್ರೀಯ ಕಂಪನಿಗಳು ಕಾಲ್ಕಿತ್ತು, ಭಾರತದತ್ತ ಮುಖ ಮಾಡುತ್ತಿವೆ. ಇದೆಲ್ಲದರ ಒಟ್ಟು ಪರಿಣಾಮ ಎಂಬಂತೆ ಇದೀಗ ಚೀನಾ ಭಾರತದ ಜತೆಗೆ ಮತ್ತೊಂದು ಸುತ್ತಿನ ಗಡಿ ತಂಟೆಗೆ ಮುಂದಾಗಿದೆ ಎಂಬುದು ಒಂದು ವಿಶ್ಲೇಷಣೆ.
‘‘ನಾವು ನಮ್ಮ ಸ್ನೇಹಿತರನ್ನು ಬದಲಿಸಬಹುದೇ ಹೊರತು ನೆರೆಹೊರೆಯವರನ್ನಲ್ಲ’’ ಎಂದು ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ಅದರರ್ಥ ನೆರೆ ಹೊರೆ ರಾಷ್ಟ್ರಗಳು ಅನ್ಯೋನ್ಯವಾಗಿರಬೇಕು, ಯಾವುದೇ ತಂಟೆ, ತಕರಾರುಗಳಿಲ್ಲದೇ ಸೌಹಾರ್ದ ಸಂಬಂಧವನ್ನು ಕಾಯ್ದುಕೊಳ್ಳಬೇಕು. ಆದರೆ, ಇಂಥ ಮಾತುಗಳು ಚೀನಾಕ್ಕಾಗಲೀ, ಪಾಕಿಸ್ತಾನಕ್ಕಾಗಲೀ ಅರ್ಥವಾಗುವುದಿಲ್ಲ ಎಂಬುದು ಅವುಗಳ ವರ್ತನೆಯಿಂದ ಮೇಲಿಂದ ಮೇಲೆ ಸ್ಪಷ್ಟವಾಗುತ್ತದೆ.
ಚೀನಾ ಮತ್ತು ಭಾರತ ಮಧ್ಯೆ ಒಟ್ಟು 4,056 ಕಿ.ಮೀ. ಗಡಿ ಇದೆ. ಅಂದರೆ ಪಶ್ಚಿಮ ಲಡಾಖ್‌ನಿಂದ ಪೂರ್ವದ ಅರುಣಾಚಲ ಪ್ರದೇಶದವರೆಗೂ ಬಹುತೇಕ ಕಡೆ ಗಡಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಮಧ್ಯೆ ಸಂಘರ್ಷವಿದೆ. ಈಗ ಲಡಾಖ್ ಪೂರ್ವ ಭಾಗದ ಗಡಿ ನಿಯಂತ್ರಣ ರೇಖೆಯ ಪಾಂಗೊಂಗ್ ತ್ಸೋ ಮತ್ತು ಗ್ಯಾಲ್ವಾನ್ ನದಿ ಕಣಿವೆ ವಲಯವು ಸದ್ಯ ಸೇನಾ ಸಂಘರ್ಷಕ್ಕೆ ಕೇಂದ್ರ ಬಿಂದು ಎನಿಸಿದೆ. ಈ ವಲಯದ ಗಡಿ ರೇಖೆಯ ಉಭಯ ಕಡೆಗಳಲ್ಲಿ ಎರಡೂ ದೇಶಗಳು ಪೈಪೋಟಿಯ ಮೇಲೆ ಸೇನೆ ಜಮಾವಣೆ ಮಾಡತೊಡಗಿವೆ. ಯುದ್ಧದ ಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಪ್ರತಿಯಾಗಿ ಸಾಮ ಮಾರ್ಗದ ಜತೆಗೆ ಸಂಘರ್ಷಕ್ಕೂ ಸಜ್ಜುಗೊಂಡಿರುವ ಭಾರತ ತನ್ನ ಸಶಸ್ತ್ರ ಪಡೆಗಳಿಗೆ ಸನ್ನದ್ಧತೆಯ ಸಂದೇಶ ರವಾನಿಸಿದೆ. ಈ ಬೆಳವಣಿಗೆಯೊಂದಿಗೆ ಭಾರತ-ಚೀನಾ ಗಡಿ ತಂಟೆ ಮತ್ತೊಮ್ಮೆ ತಾರಕ ತಲುಪಿದೆ.
ಗಡಿ ವಿವಾದವನ್ನು ನೆಪವಾಗಿಟ್ಟುಕೊಂಡು ಚೀನಾ 1962ರಲ್ಲಿ ಭಾರತದ ಮೇಲೆ ಯುದ್ಧ ಸಾರಿತು. ಆ ವೇಳೆ ಭಾರತಕ್ಕೆ ಹಿನ್ನಡೆಯಾಗಿತ್ತು ಎಂಬುದು ಸತ್ಯ. ಆದರೆ, ಇದೀಗ 1962ರ ಭಾರತವೂ ಇಲ್ಲ; ಜಗತ್ತೂ ಇಲ್ಲ; ಎಲ್ಲವೂ ಬದಲಾಗಿದೆ. ಏಟಿಗೆ ಎದಿರೇಟು ನೀಡುವ ಶಕ್ತಿ, ಸಾಮರ್ಥ್ಯ ಹೊಸ ಭಾರತಕ್ಕಿದೆ. ಹಾಗಾಗಿ ಪದೇ ಪದೇ ಗಡಿ ವಿಷಯವಾಗಿ ಕಾಲುಕೆರೆದು ಜಗಳಕ್ಕೆ ನಿಲ್ಲುವ ಚಾಳಿಯನ್ನು ಚೀನಾ ಕೈಬಿಡಬೇಕು.
ಅಂತಾರಾಷ್ಟ್ರೀಯವಾಗಿ ಅನೇಕ ಸಂಗತಿಗಳಲ್ಲಿ ಚೀನಾಗೆ ಪ್ರತ್ಯುತ್ತರವನ್ನು ನೀಡಿದ ಏಕೈಕ ರಾಷ್ಟ್ರ ಭಾರತ. ಚೀನಾದ ಮಹತ್ವಾಕಾಂಕ್ಷೆಯ ಒಬಿಆರ್‌ಒ, ಮುಕ್ತ ವ್ಯಾಪಾರ ಒಪ್ಪಂದ ಆರ್‌ಸಿಇಪಿಗೆ ವಿರೋಧ, ಅಮೆರಿಕದ ಪರ ನಿಲುವು ಸೇರಿದಂತೆ ಅನೇಕ ಬಾರಿ ಚೀನಾಗೆ ಭಾರತ ಠಕ್ಕರ್ ನೀಡಿದೆ. ಅದರ ಪರಿಣಾಮ 1962ರ ಯುದ್ಧ ಹೊರತುಪಡಿಸಿ ಬೇರೆಲ್ಲ ಸಂದರ್ಭಗಳಲ್ಲಿ ಭಾರತ ವ್ಯೂಹಾತ್ಮಕವಾಗಿ ಚೀನಾಗೆ ತಕ್ಕ ಉತ್ತರವನ್ನೇ ನೀಡುತ್ತ ಬಂದಿದೆ. ಜಗತ್ತು ಈಗ ಮತ್ತಷ್ಟು ಬದಲಾಗಿದೆ. ಇದನ್ನು ಅರಿತು ಚೀನಾ ಸಂಘರ್ಷಕ್ಕಿಂತ ಸ್ನೇಹ, ಪ್ರಜಾಸತ್ತಾತ್ಮಕ ತತ್ವವನ್ನು ಅರಿಯವುದು ಒಳ್ಳೆಯದು.