ಭಾರತದ ಮೂರು ರಾಜ್ಯಗಳಲ್ಲಿ ಮಿಡತೆಗಳ ದಾಳಿ ಭಾರಿ ಹಾವಳಿ ಎಬ್ಬಿಸಿದೆ. ಚಂಡಮಾರುತದಂತೆ ಬೀಸಿ ಬರುವ ಮಿಡತೆಗಳು ಕ್ಷಣಾರ್ಧದಲ್ಲಿ ಬೆಳೆದು ನಿಂತ ಬೆಳೆಯನ್ನು ಖಾಲಿ ಮಾಡುತ್ತಿವೆ. ಇವು ಎಲ್ಲಿಂದ ಬಂದವು? ಇವುಗಳಿಂದ ಏನು ನಷ್ಟ? ಒಂದು ಚಿತ್ರಣ ಇಲ್ಲಿದೆ.
ರಾಜಸ್ಥಾನದಲ್ಲಿ ಮಿಡತೆಗಳು ಬಿರುಗಾಳಿಯಂತೆ ದಾಳಿ ಮಾಡಿವೆ. ಈ ಬಾರಿ ಗ್ರಾಮೀಣ ಪ್ರದೇಶದ ಹೊಲಗಳನ್ನೆಲ್ಲ ಮುಕ್ಕಿ ಮುಗಿಸಿ, ರಾಜಧಾನಿ ಜೈಪುರಕ್ಕೂ ದಾಳಿ ಮಾಡಿದ್ದು, ವಸತಿ ಪ್ರದೇಶಗಳಲ್ಲಿ ದೂಳಿನ ಮೋಡಗಳಂತೆ ಗುಂಪಾಗಿ ನೆರೆದಿರುವ ಚಿತ್ರಗಳು, ವಿಡಿಯೋಗಳನ್ನು ಅಲ್ಲಿನ ನಿವಾಸಿಗಳು ಹಂಚಿಕೊಳ್ಳುತ್ತಿದ್ದಾರೆ. ಅಕ್ಕಪಕ್ಕದ ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶಗಳು ಕೂಡ ಮಿಡತೆ ದಾಳಿಗೆ ತುತ್ತಾಗಿವೆ. ಪಂಜಾಬ್ ಮತ್ತು ಗುಜರಾತ್‌ಗಳ ರೈತರಿಗೆ ಕೂಡ ಈ ಮಿಡತೆ ದಾಳಿ ಎಚ್ಚರಿಕೆ ನೀಡಲಾಗಿದೆ. ಅಲೆ ಅಲೆಯಾಗಿ ಬರುವ ಈ ಮಿಡತೆಗಳು ಒಂದು ದಿನದಲ್ಲಿ 150 ಕಿಲೋಮೀಟರ್ ದೂರ ಹಾರಬಲ್ಲವು. ಒಂದು ಮಿಡತೆ ಒಂದು ದಿನದಲ್ಲಿ ತನ್ನಷ್ಟೇ ತೂಕದ ಆಹಾರ ನುಂಗಬಲ್ಲದು. ಒಂದು ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡ ಈ ಮಿಡತೆಗಳ ಸೈನ್ಯ ಒಂದು ದಿನದಲ್ಲಿ ಸುಮಾರು 35,000 ಮಂದಿ ತಿನ್ನುವಷ್ಟು ಆಹಾರಧಾನ್ಯವನ್ನು ಮುಕ್ಕಿ ಮುಗಿಸಬಲ್ಲವು ಎಂದು ತಜ್ಞರು ಹೇಳಿದ್ದಾರೆ. ಕೊರೊನಾ ವೈರಸ್‌ನಿಂದ ಉಂಟಾಗಿರುವ ಲಾಕ್‌ಡೌನ್ ಸನ್ನಿವೇಶದಿಂದ ನಷ್ಟ ಅನುಭವಿಸಿರುವ ರೈತರು, ಈಗ ಮಿಡತೆಗಳ ದಾಳಿಯ ಬವಣೆಯನ್ನು ಕಾಣಬೇಕಾಗಿ ಬಂದಿದೆ.
ಏನಿದು ಮಿಡತೆ ದಾಳಿ?
ಮಿಡತೆಗಳು ಸಹಜ ಸ್ಥಿತಿಯಲ್ಲಿ ನಿರುಪದ್ರವಿ ಕೀಟಗಳು. ಕಡಿಮೆ ಸಂಖ್ಯೆಯಲ್ಲಿದ್ದಾಗ ಇವುಗಳಿಂದ ಏನೇನೂ ಹಾನಿಯಿಲ್ಲ. ಆದರೆ ಕೆಲವು ನಿರ್ದಿಷ್ಟ ಹವಾಮಾನ ಸಂದರ್ಭದಲ್ಲಿ ಇವುಗಳು ಅಪರಿಮಿತ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತವೆ. ಅಂಥ ಸಂದರ್ಭದಲ್ಲಿ ಇವು ತಾವು ಹುಟ್ಟಿಕೊಂಡ ಪ್ರದೇಶದಿಂದ ಕೋಟ್ಯಂತರ ಸಂಖ್ಯೆಯಲ್ಲಿ ಚಕ್ರಾಕಾರವಾಗಿ ಹರಡುತ್ತ, ಕೆಳಗಿಳಿದು ಹೊಲಗಳಲ್ಲಿರುವ ಬೆಳೆಗಳನ್ನು ಕ್ಷಣಾರ್ಧದಲ್ಲಿ ತಿಂದು ಧ್ವಂಸ ಮಾಡುತ್ತ, ಅಲ್ಲೇ ಸಂತಾನೋತ್ಪತ್ತಿ ಮಾಡುತ್ತ ಮತ್ತಷ್ಟು ಬೆಳೆಯುತ್ತ ಹೋಗುತ್ತವೆ. ಕೆಲವೊಮ್ಮೆ ಇವು ಒಂದು ಪ್ರದೇಶದ ಆರ್ಥಿಕತೆಯನ್ನೇ ಬದಲಾಯಿಸುವಷ್ಟು ಪ್ರಚಂಡವಾದ ಸುಂಟರಗಾಳಿಯಂತೆ ವರ್ತಿಸುತ್ತವೆ. ಆಗ ಇದನ್ನು ‘ಲೋಕಸ್ಟ್ ಪ್ಲೇಗ್’ ಎನ್ನಲಾಗುತ್ತದೆ. ಸದ್ಯ ಪಾಕಿಸ್ತಾನ, ಭಾರತ ಮತ್ತು ಇರಾನ್ ಈ ಪ್ಲೇಗ್‌ನ ಭೀತಿಯಲ್ಲಿವೆ.
ರೂಪುಗೊಳ್ಳಲು ಕಾರಣವೇನು?
ಸಾಮಾನ್ಯವಾಗಿ ಈ ಮಿಡತೆಗಳಲ್ಲಿ ನಾಲ್ಕು ವಿಧ- ಮರುಭೂಮಿ ಮಿಡತೆ, ವಲಸೆ ಮಿಡತೆ, ಬಾಂಬೇ ಮಿಡತೆ ಹಾಗೂ ಮರ ಮಿಡತೆ. ಈಗ ಹಾವಳಿ ಎಬ್ಬಿಸುತ್ತಿರುವುದು ಮರುಭೂಮಿ ಮಿಡತೆ. ಇದು ಹುಟ್ಟಿಕೊಂಡಿರುವುದು ಮರುಭೂಮಿ ಪ್ರದೇಶದಲ್ಲಿ. ಹವಾಮಾನ ಇವುಗಳಿಗೆ ಪೂರಕವಾಗಿ ಒದಗಿದಾಗ ಈ ಮಿಡತೆಗಳು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸಂತಾನೋತ್ಪತ್ತಿ ಮಾಡುವುದಲ್ಲದೆ ಹೊಟ್ಟೆ ಹೊರೆಯುವುದಕ್ಕಾಗಿ ಸುತ್ತಮುತ್ತ ಹರಡಲು ಆರಂಭಿಸುತ್ತವೆ. ಬೇಸಿಗೆಯ ನಡುವೆ ಸರಣಿ ಮಳೆಗಳು ಬಂದಾಗ, ಒದ್ದೆ ಪರಿಸರ ಇವುಗಳಿಗೆ ಹುಟ್ಟಿಕೊಳ್ಳಲು ಪೂರಕ ಸ್ಥಿತಿಯೆನಿಸುತ್ತದೆ. ಪ್ರಸ್ತುತ ಬಂಗಾಳ ಕೊಲ್ಲಿ ಮತ್ತು ಅರಬೀ ಸಮುದ್ರದಲ್ಲಿ ಉಂಟಾಗಿರುವ ನಾನಾ ಬಗೆಯ ಚಂಡಮಾರುತಗಳು, ಈ ಮಿಡತೆಗಳ ಹುಟ್ಟಿಗೆ ಪೂರಕವಾದ ವಾತಾವರಣ ಸೃಷ್ಟಿಸಿವೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ
ಪಾಕಿಸ್ತಾನದಲ್ಲಿ ಅತ್ಯಂತ ಹೆಚ್ಚಿನ ಹಾವಳಿಯನ್ನು ಇವು ಸೃಷ್ಟಿಸಿವೆ; ಇವುಗಳಿಂದಾಗುತ್ತಿರುವ ಹಾನಿಯನ್ನು ತಡೆಯಲು ಪ್ರಧಾನಿ ಇಮ್ರಾನ್ ಖಾನ್ ದೇಶದಲ್ಲಿ ಫೆಬ್ರವರಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈಗ ಪಾಕಿಸ್ತಾನದ ಬೆಳೆಯನ್ನು ಒಂದು ಮಟ್ಟಕ್ಕೆ ನೆಕ್ಕಿ ಮುಗಿಸಿದ ಬಳಿಕ, ಬಲೂಚಿಸ್ತಾನ, ಪಂಜಾಬ್ ಹಾಗೂ ಖೈಬರ್ ಪಖ್ತೂಂಖ್ವಾ ಮೂಲಕ ಭಾರತದೊಳಗೆ ಇವು ಪ್ರವೇಶಿಸಿವೆ. ಈ ಸನ್ನಿವೇಶವನ್ನು ಮೊದಲೇ ಊಹಿಸಿದ್ದ ಭಾರತ, ಪಾಕಿಸ್ತಾನ ಹಾಗೂ ಇರಾನ್‌ಗೆ ಮಿಡತೆಗಳನ್ನು ನಾಶ ಮಾಡುವ ಮಲಾತಿಯಾನ್ ಹಾಗೂ ಇನ್ನಿತರ ಕ್ರಿಮಿನಾಶಕಗಳನ್ನು ಉಭಯ ದೇಶಗಳಿಗೆ ಕಳುಹಿಸುವ ಪ್ರಸ್ತಾಪ ಮಾಡಿತ್ತು. ಇರಾನ್ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದರೆ, ಪಾಕಿಸ್ತಾನ ಪ್ರತಿಕ್ರಿಯಿಸಿಲ್ಲ. ಅಲ್ಲಿ ಈಗಾಗಲೇ 2 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜು.
ತಡೆಗೊಂದು ವ್ಯವಸ್ಥೆ
ಮಿಡತೆ ಹಾವಳಿಯನ್ನು ತಡೆಯುವುದಕ್ಕೆಂದೇ ಪ್ರತ್ಯೇಕವಾದ ಒಂದು ಸಂಸ್ಥೆಯೇ ಭಾರತ ಸರಕಾರದ ಅಡಿಯಲ್ಲಿದೆ- ಮಿಡತೆ ಎಚ್ಚರಿಕೆ ಸಂಸ್ಥೆ (ಎಲ್‌ಡಬ್ಲ್ಯುಒ). ಸಾಕಷ್ಟು ಸುಸಜ್ಜಿತವಾದ ಮುನ್ನೆಚ್ಚರಿಕೆ ವ್ಯವಸ್ಥೆಗಳು, ಕ್ರಿಮಿನಾಶಕಗಳ ಪೂರೈಕೆ ವ್ಯವಸ್ಥೆ ಇತ್ಯಾದಿಗಳಿವೆ. ಅಧಿಕಾರಿಗಳಿದ್ದಾರೆ. ಈ ಅಧಿಕಾರಿಗಳು ಪಾಕಿಸ್ತಾನದ ಕಡೆಯ ಅಧಿಕಾರಿಗಳೊಂದಿಗೆ ಪ್ರತಿವರ್ಷ ಆರು ಗಡಿ ಭೇಟಿಗಳನ್ನು ಏರ್ಪಡಿಸಿಕೊಂಡು, ಸನ್ನಿವೇಶದ ವಿಶ್ಲೇಷಣೆ ನಡೆಸುತ್ತಾರೆ. ಭಾರತದ ಜೋಧ್‌ಪುರ ಹಾಗೂ ಪಾಕಿಸ್ತಾನದ ಕರಾಚಿಗಳ ನಡುವೆ ಈ ಕುರಿತು ನಿರಂತರ ನಿಸ್ತಂತು ಸಂಪರ್ಕವಿರುತ್ತದೆ. 2011ರ ಬಳಿಕ ಭಾರತದಲ್ಲಿ ದೊಡ್ಡ ಪ್ರಮಾಣದ ಮಿಡತೆ ದಾಳಿಯಾಗಿಲ್ಲ. ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನಗಳು ಹಾಗೂ ಕ್ರಿಮಿನಾಶಕಗಳು ಕಾರಣವಾಗಿವೆ. 1812 ಹಾಗೂ 1997ರ ನಡುವೆ ದೊಡ್ಡ ಪ್ರಮಾಣದ ಮಿಡತೆ ಪ್ಲೇಗ್‌ಗಳು ಉಭಯ ದೇಶಗಳಲ್ಲಿ ಸಂಭವಿಸಿದ್ದವು.
ಆಫ್ರಿಕಾದಲ್ಲೂ ಭಾರಿ ಹಾವಳಿ
ಆಫ್ರಿಕದ ಅನೇಕ ದೇಶಗಳಲ್ಲಿ ಈ ವರ್ಷ ಮಿಡತೆಗಳ ಸುಂಟರಗಾಳಿ ಬೆಳೆಗಳನ್ನು ಸರ್ವನಾಶ ಮಾಡಿದೆ. ಕೆನ್ಯಾ, ಉಗಾಂಡ, ಇಥಿಯೋಪಿಯಾ ಮೊದಲಾದ ದೇಶಗಳಲ್ಲಿ ಬೆಳೆದುನಿಂತ ಬೆಳೆ ಪೂರ್ತಿ ಕೀಟಗಳ ಪಾಲಾಗಿದೆ. ಆಫ್ರಿಕಕ್ಕೆ ಈ ವರ್ಷ ಹಸಿವು ಖಚಿತ ಎಂದು ಭಾವಿಸಲಾಗಿದೆ. ಈ ದೇಶಗಳಿಗೆ ವಿಶ್ವಸಂಸ್ಥೆ ಈ ವರ್ಷ 50 ಕೋಟಿ ಡಾಲರ್‌ಗಳನ್ನು ಪರಿಹಾರ ರೂಪದಲ್ಲಿ ನೀಡಿದೆ.
ನವೆಂಬರ್‌ನಲ್ಲೇ ಆರಂಭ
ಸಾಮಾನ್ಯವಾಗಿ ನವೆಂಬರ್‌ನಲ್ಲಿ ಭಾರತದಲ್ಲಿ ಒಂದು ಸುತ್ತಿನ ಮಿಡತೆ ದಾಳಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತದೆ. ಈ ಬಾರಿ ಡಿಸೆಂಬರ್‌ನಿಂದ ಫೆಬ್ರವರಿಯವರೆಗೆ ಸ್ವಲ್ಪ ಹೆಚ್ಚಾಗಿಯೇ ನಡೆದಿತ್ತು. ಕಳೆದ ಬಾರಿ ಮಾನ್ಸೂನ್ ಹೆಚ್ಚು ಕಾಲ ಇದ್ದದ್ದು ಇದಕ್ಕೆ ಕಾರಣ ಎಂದು ಅಂದಾಜಿಸಲಾಗಿತ್ತು. ಇದು ಎರಡನೇ ಸುತ್ತಿನ ದಾಳಿ.
ತಡೆಯದಿದ್ದರೆ ಏನಾಗುತ್ತದೆ?
ಇವುಗಳ ಜೀವಿತಾವಧಿ ಸುಮಾರು 3ರಿಂದ 5 ತಿಂಗಳು. ಎರಡು ತಿಂಗಳಲ್ಲಿ ಅವು ಮೊಟ್ಟೆಯಿಡಲು ಆರಂಭಿಸುತ್ತವೆ. ಪಾಕಿಸ್ತಾನದಿಂದ ಬರುವ ದಾರಿಯಲ್ಲಿ ಥಾರ್ ಮರುಭೂಮಿಯಲ್ಲಿ ಕೆಳಗಿಳಿದ ಮಿಡತೆಗಳು ಇನ್ನು ಕೆಲವೇ ದಿನಗಳಲ್ಲಿ ಮೊಟ್ಟೆಯಿಡಲಿದ್ದು, ಇನ್ನೊಂದು ಸುತ್ತಿನ ಮಿಡತೆ ದಾಳಿ ಇನ್ನೊಂದು ತಿಂಗಳ ನಂತರ ನಡೆಯಲಿದೆ.
ಮಿಡತೆ ನಾಶಕ ಕ್ರಮಗಳು
ಸದ್ಯ ಮಿಡತೆಗಳು ಹೆಚ್ಚಾಗಿರುವ ಹಾಗೂ ಕೃಷಿ ಬೆಳೆಯಿಲ್ಲದ ಹಾಗೂ ಮನುಷ್ಯರಿಲ್ಲದ ಪ್ರದೇಶದಲ್ಲಿ ಡ್ರೋನ್‌ಗಳ ಮೂಲಕ ಮಲಾತಿಯಾನ್ ಎಂಬ ಆರ್ಗಾನೋಫಾಸೆಧೀಟ್ ಕ್ರಿಮಿನಾಶಕವನ್ನು ಸಿಂಪಡಿಸಲಾಗುತ್ತದೆ. ಇದು ಹೆಚ್ಚು ವಿಷಕಾರಿ. ಕೃಷಿಬೆಳೆಯಿರುವ ಪ್ರದೇಶದಲ್ಲಿ ಕ್ಲೋರೋಪಿರಿಫಾಸ್ ಅನ್ನು ಸಿಂಪಡಿಸಲಾಗುತ್ತಿದೆ. ಅವು ಹಾದು ಬರುವ ಪ್ರದೇಶದ ರೈತರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ.