ಕೊರೊನಾ ಲಾಕ್ಡೌನ್ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗ ಮತ್ತು ವೃತ್ತಿಪರರ ನೆರವಿಗೆ ರಾಜ್ಯ ಸರಕಾರ ಧಾವಿಸಿದ್ದು, 1610 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದೆ. ಕರ್ನಾಟಕ ಸರಕಾರದ ಈ ಕ್ರಮ ಇತರ ರಾಜ್ಯಗಳಿಗೆ ಮತ್ತು ಕೇಂದ್ರ ಸರಕಾರಕ್ಕೆ ಮಾದರಿ. ಅಗಸರು, ಕ್ಷೌರಿಕರು, ಆಟೋ- ಟ್ಯಾಕ್ಸಿ ಚಾಲಕರು, ಹೂವು ಬೆಳೆಗಾರರು, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಈ ನೆರವು ಘೋಷಿಸಲಾಗಿದ್ದು, ಫಲಾನುಭವಿಗಳ ಖಾತೆಗೆ ಹಣ ನೇರವಾಗಿ ಜಮೆಯಾಗಲಿದೆ. ಅದರಂತೆ ಹೂ ಬೆಳೆಗಾರರು ಹೆಕ್ಟೇರ್ಗೆ 25 ಸಾವಿರ ಪರಿಹಾರ, ಅಗಸರಿಗೆ ತಲಾ 5 ಸಾವಿರ, ಕ್ಷೌರಿಕರಿಗೆ ತಲಾ 5 ಸಾವಿರ, ಆಟೊ- ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ, ಕಟ್ಟಡ ಕಾರ್ಮಿಕರಿಗೆ 2 ಸಾವಿರದೊಂದಿಗೆ ಹೆಚ್ಚುವರಿ 3 ಸಾವಿರ ದೊರೆಯಲಿದೆ. ಕೊರೊನಾ ವಿಪತ್ತು ಎದುರಿಸುತ್ತಿರುವ ಶ್ರಮಿಕ ವರ್ಗದ ಸಂಕಷ್ಟ ಕಳೆಯಲು ಇಂತಹದೊಂದು ಕ್ರಮ ಕೈಗೊಂಡ ಮೊದಲ ರಾಜ್ಯವೆನಿಸಿದೆ ಕರ್ನಾಟಕ. ಸರಕಾರದ ಈ ನಡೆ ಅಭಿನಂದನೀಯ.
ಹಣ್ಣು- ತರಕಾರಿ ಬೆಳೆದ ರೈತರಿಗೂ ಶೀಘ್ರದಲ್ಲೇ ಪ್ಯಾಕೇಜ್ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ನಡುವೆ, ಹಲವು ಶ್ರಮಿಕ ವರ್ಗದವರು ಮುಖ್ಯಮಂತ್ರಿಗಳು ಹಾಗೂ ವಿವಿಧ ರಾಜಕೀಯ ಮುಖಂಡರನ್ನು ಭೇಟಿ ಮಾಡಿದ್ದು, ತಮ್ಮ ಸಮುದಾಯ ಎದುರಿಸುತ್ತಿರುವ ಸಂಕಷ್ಟವನ್ನು ಅವರ ಗಮನಕ್ಕೆ ತಂದಿದ್ದಾರೆ. ಪ್ಯಾಕೇಜ್ ಘೋಷಿಸುವ ಮೊದಲು ಚರ್ಚೆಗೊಳಗಾದ ಹಲವು ವರ್ಗಗಳನ್ನು ಪ್ಯಾಕೇಜ್ ಘೋಷಣೆ ವೇಳೆ ಕೈಬಿಡಲಾಗಿದೆ ಎಂದು ಪ್ರತಿಪಕ್ಷ ನಾಯಕರು ಆಕ್ಷೇಪಿಸಿದ್ದು, ಮುಂದಿನ ಘೋಷಣೆಯಲ್ಲಿ ಅವರನ್ನು ಸೇರಿಸಿಕೊಳ್ಳಬಹುದು ಎಂದುಕೊಳ್ಳೋಣ. ಪ್ರತಿಯೊಂದು ವಲಯವೂ ಆರ್ಥಿಕ ಸಂಕಷ್ಟದಲ್ಲೇ ಇದ್ದು, ತಮಗೆ ನೆರವು ನೀಡುವಂತೆ ಮುಖ್ಯಮಂತ್ರಿಗಳನ್ನು ಕೇಳಿಕೊಳ್ಳಬಹುದು. ಇವರಲ್ಲಿತೀರಾ ಸಂಕಷ್ಟಕ್ಕೊಳಗಾದವರನ್ನು ಗುರುತಿಸಿ ನೆರವು ನೀಡುವುದು ನಿಜವಾದ ಸವಾಲು.
ಈ ನಡುವೆ, ನೆರವಿನ ಪ್ಯಾಕೇಜ್ ಲಭ್ಯವಾಗುತ್ತಿರುವುದು ನೋಂದಾಯಿತ ಶ್ರಮಿಕರಿಗೆ, ಕಾರ್ಮಿಕರಿಗೆ. ನೋಂದಣಿ ಮಾಡಿಕೊಳ್ಳದ ಬೆಳೆಗಾರರು, ಕಟ್ಟಡ ನಿರ್ಮಾಣ ಕಾರ್ಮಿಕರು, ಚಾಲಕರು, ಸಾಕಷ್ಟು ಸಂಖ್ಯೆಯಲ್ಲಿಇರಬಹುದು. ಇವರೂ ಸಂಕಷ್ಟ ಅನುಭವಿಸಿರುವವರೇ. ಇವರನ್ನು ಕೂಡ ಕುಸಿತದಿಂದ ಪಾರು ಮಾಡಲು ಸರಕಾರ ಏನಾದರೂ ಯೋಜನೆ ಹಾಕಿಕೊಳ್ಳಬೇಕಾಗುತ್ತದೆ. ರಾಜ್ಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಎಷ್ಟಿದ್ದಾರೆಂಬ ಬಗ್ಗೆ ಸೂಕ್ತ ದಾಖಲೆ ಇಲ್ಲ. ಹೀಗಾಗಿ ಕೇಂದ್ರ ಸರಕಾರದ 2000 ಹಾಗೂ ಈ ಪ್ಯಾಕೇಜ್ನ 3000 ರೂ.ಗಳನ್ನು ಕಾರ್ಮಿಕರ ಖಾತೆಗೆ ಹಾಕುವುದು ಸವಾಲಾಗಲಿದೆ. ರೈತರು, ಮನೆಗೆಲಸದವರು, ಚಾಲಕರು, ಕಟ್ಟಡ ನಿರ್ಮಾಣದಲ್ಲಿ ದುಡಿಯುವವರು ಎಷ್ಟಿದ್ದಾರೆ ಎಂಬ ಬಗ್ಗೆ ನಿಖರ ದಾಖಲೆ ಇಲ್ಲದಿರುವುದು, ಇಂಥ ಪ್ಯಾಕೇಜ್ಗಳನ್ನು ಘೋಷಿಸುವಾಗ ಹಾಗೂ ಅನುಷ್ಠಾನಕ್ಕೆ ತರುವಾಗ ಉಂಟಾಗುವ ದೊಡ್ಡ ಸವಾಲು.
ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ಒಟ್ಟು 137 ವೃತ್ತಿಪರರನ್ನು ಪಟ್ಟಿ ಮಾಡಿದೆ. ಸಣ್ಣಪುಟ್ಟ ವೃತ್ತಿ, ಸಾಂಪ್ರದಾಯಿಕ ಕೆಲಸ ಮಾಡುವ ಈ ಎಲ್ಲರನ್ನೂ ಲಾಕ್ಡೌನ್ ಸಂಕಷ್ಟ ತೀವ್ರವಾಗಿ ತಟ್ಟಿದೆ. ಈ ಪೈಕಿ ನೋಂದಾಯಿತರಾದವರಿಗೂ ಸರಕಾರ ಇನ್ನಷ್ಟೇ ಸ್ಪಂದಿಸಬೇಕಿದೆ. ನೇಕಾರರು, ಬಿಸಿಯೂಟ ತಯಾರಕರು, ದೇವಾಲಯಗಳನ್ನು ನಂಬಿದ್ದ ಅರ್ಚಕರು ಮತ್ತಿತರರು, ಗಾರ್ಮೆಂಟ್ಸ್ಗಳ ನೌಕರರು, ಗಾಣಿಗ, ಚಮ್ಮಾರ, ಕಮ್ಮಾರ, ದರ್ಜಿ, ಕುಂಬಾರ, ಅಕ್ಕಸಾಲಿಗರು, ಬಡಗಿ, ಅಡುಗೆ ಕೆಲಸದವರು, ಮನೆ ಕೆಲಸದವರು, ಬೀದಿ ಬದಿ ವ್ಯಾಪಾರಿಗಳು- ಮುಂತಾದ ಕುಶಲಿ ಹಾಗೂ ಅಕುಶಲಿ ಶ್ರಮಿಕರು ಕೂಡ ಎರಡು ತಿಂಗಳ ದುಡಿಮೆ ಕಳೆದುಕೊಂಡಿದ್ದಾರೆ. ಇವರನ್ನೂ ನೆರವಿನ ವ್ಯಾಪ್ತಿಯೊಳಗೆ ಸೇರಿಸಬೇಕು. ಇದೊಂದು ಸಾಮೂಹಿಕ ಸಂಕಷ್ಟ ಕಾಲ. ಹೀಗಾಗಿ ಸರಕಾರ ಕೆಲವು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲೇಬೇಕಾದೀತು. ಸೀಮಿತ ಪ್ಯಾಕೇಜ್ನಿಂದ ಹೊರಗುಳಿದವರಿಗೆ ಅನ್ಯಾಯವಾಗಿದೆ ಎಂಬ ಭಾವನೆಯನ್ನು ಕೂಡ ಸರಕಾರ ಹೋಗಲಾಡಿಸಬೇಕು.