ಸರಕಾರಿ ಸಿಬ್ಬಂದಿಗೆ ಕರ್ತವ್ಯದ ಕರೆ – ಕಡೆಗಣಿಸದಿರಿ ಸೂಕ್ತ ಸುರಕ್ಷತೆಗೆ ಮೊರೆ

ಕರ್ತವ್ಯಕ್ಕೆ ಹಾಜರಾಗುವಂತೆ ಎಲ್ಲ ಸರಕಾರಿ ಇಲಾಖೆಗಳ ಕೆಳ ಹಂತದ ಸಿಬ್ಬಂದಿಗೆ ರಾಜ್ಯ ಸರಕಾರ ಸೂಚಿಸಿದೆ. ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಒಂದೊಂದೇ ವಲಯಗಳು ಕಾರ್ಯಾರಂಭ ಮಾಡುವುದು ಅಗತ್ಯವಾಗಿದೆ. ಅದರಲ್ಲೂ ಅಗತ್ಯ ಸೇವೆಗೆ ಸಂಬಂಧಿಸಿದ 18 ಇಲಾಖೆಗಳ ಎಲ್ಲ ವೃಂದದ ನೌಕರರು ಕೆಲಸ ಆರಂಭಿಸುವುದು, ಮುಂದಿನ ದಿನಗಳ ಜನಜೀವನ ಸುಗಮವಾಗಿರಲು ಅನಿವಾರ‍್ಯವಾಗಿದೆ. ಯಾರ್ಯಾರು ಬಂದು ಕೆಲಸ ನಿರ್ವಹಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಈಗಾಗಲೇ ಆದೇಶ ನೀಡಿದ್ದಾರೆ. ಆದರೆ ಇದಕ್ಕೆ ಪೂರಕವಾದ ವ್ಯವಸ್ಥೆ ಮಾಡುವುದನ್ನು ಸರಕಾರ ಮರೆತಿದೆ. ಉದಾಹರಣೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ; ವಾಹನಗಳಿಲ್ಲದ ಸಿಬ್ಬಂದಿ ಕಚೇರಿಗೆ ಬರಲು ವಾಹನ ಸೌಕರ್ಯ; ಸಿಬ್ಬಂದಿಗೆ ಥರ್ಮೋ ಸ್ಕ್ರೀನಿಂಗ್‌, ಮಾಸ್ಕ್‌, ಸ್ಯಾನಿಟೈಸರ್‌ ಇನ್ನಿತರ ರಕ್ಷಣಾ ವ್ಯವಸ್ಥೆಗಳು.

ಕೆಲವೊಮ್ಮೆ ಸರಕಾರಿ ಆದೇಶಗಳನ್ನು ಮೊದಲು ಹೊರಡಿಸಲಾಗುತ್ತದೆ. ಅದನ್ನು ಜಾರಿಗೊಳಿಸುವುದು ಹೇಗೆ ಎಂಬುದನ್ನು ನಂತರವೇ ಯೋಚಿಸಲಾಗುತ್ತದೆ. ನಮ್ಮ ದೇಶದಲ್ಲಿ ಲಾಕ್‌ಡೌನ್‌ ಘೋಷಣೆ ಆದದ್ದೂ ಹೀಗೆಯೇ. ಅದು ಅನಿವಾರ‍್ಯವಾಗಿತ್ತೇನೋ ನಿಜ; ಆದರೆ ಅದಕ್ಕೆ ಮುನ್ನ ಯಾವ ಪೂರ್ವಭಾವಿ ಸಿದ್ಧತೆಗಳೂ ಇರಲಿಲ್ಲ. ಇದರಿಂದ ವಲಸಿಗ ಕಾರ್ಮಿಕರ ದೊಡ್ಡದೊಂದು ಮರುವಲಸೆಯೇ ಆರಂಭವಾಯಿತು. ಆದೇಶ ಎಷ್ಟೇ ಉತ್ತಮ ಆಶಯದ್ದಾಗಿರಲಿ, ಅದನ್ನು ಜಾರಿಗೊಳಿಸಲು ಸೂಕ್ತ ಯೋಜನಾಬದ್ಧತೆ ಇಲ್ಲದೆ ಹೋದರೆ ಇನ್ನೊಂದು ಸಮಸ್ಯೆ ಸೃಷ್ಟಿಯಾಗುತ್ತದೆ. ಸರಕಾರಿ ನೌಕರರ ಕರ್ತವ್ಯಕ್ಕೆ ಹಾಜರಾಗದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳುವ ಸೂಚನೆಯನ್ನೂ ಮೇಲಧಿಕಾರಿಗಳು ಆಡಿದ್ದಾರೆ. ಆದರೆ ಇಂಥ ಸನ್ನಿವೇಶದಲ್ಲಿ ಕರ್ತವ್ಯದ ಕರೆಯ ಜೊತೆಗೆ ಸ್ವಲ್ಪ ಮಾನವೀಯತೆಯನ್ನೂ ಅಳವಡಿಸಿಕೊಂಡು ಸರಕಾರಿ ಸಿಬ್ಬಂದಿಯ ಬವಣೆಯನ್ನು ಗುರುತಿಸಿ ಅದನ್ನು ನಿವಾರಿಸಿ, ಅವರನ್ನು ಕ್ರಿಯಾಶೀಲಗೊಳಿಸುವ ಕೆಲಸ ಮಾಡಬೇಕಿದೆ.

ಸಿದ್ಧತೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವಾಗಲೂ ಎರಡನೇ ಆದ್ಯತೆ. ಉದಾಹರಣೆಗೆ, ಲಾಕ್‌ಡೌನ್‌ನ ಜೊತೆಗೆ ಆರೋಗ್ಯ ಸೇವೆಯನ್ನೂ ಬಲಿಷ್ಠಗೊಳಿಸದಿದ್ದರೆ, ಲಾಕ್‌ಡೌನ್‌ನಿಂದ ಏನೂ ಪ್ರಯೋಜನವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಸಿತ್ತು. ಆದರೆ ನಮ್ಮಲ್ಲಿ ಸಿದ್ಧತೆಗಳು, ಸುರಕ್ಷತಾ ಸಾಧನಗಳು ವೈದ್ಯರನ್ನು ತಲುಪುವಾಗ ಮತ್ತಷ್ಟು ತಡವಾಗಿತ್ತು. ವೆಂಟಿಲೇಟರ್‌ಗಳ ಕೊರತೆಯಿತ್ತು, ವೈಯಕ್ತಿಕ ಸುರಕ್ಷತಾ ಸಾಧನಗಳ ಕೊರತೆಯಿತ್ತು. ಕೊರೊನಾ ಯುದ್ಧದ ಮುಂಚೂಣಿ ಯೋಧರಾದ ವೈದ್ಯರನ್ನೇ ನಾವು ಸೂಕ್ತ ಉಪಕರಣಗಳೊಂದಿಗೆ ಸಜ್ಜುಗೊಳಿಸಿರಲಿಲ್ಲ. ಈಗಲೂ ಪಿಪಿಇ ಕಿಟ್‌ಗಳ ಕೊರತೆಯಿದೆ. ವೈದ್ಯರು, ಆರೋಗ್ಯ ಕಾರ್ಯಕರ್ತರು ಕೆಲವೊಮ್ಮೆ ಜೀವಭಯದಿಂದ ಕೆಲಸ ಮಾಡಬೇಕಾಗಿದೆ. ಕೊರೊನಾ ಸೋಂಕಿನಿಂದ ಪೀಡಿತರಾದ ವೈದ್ಯರು ಪ್ರಾಣ ಬಿಟ್ಟ ಪ್ರಸಂಗಗಳೂ ಆಗಿವೆ. ಇಂಥ ಸನ್ನಿವೇಶಗಳು ಹೆಚ್ಚಿನ ಪ್ಲಾನಿಂಗ್‌, ಮುನ್ನೆಚ್ಚರಿಕೆಗಳನ್ನು ಬೇಡುತ್ತವೆ. ಸರಕಾರಿ ಕಚೇರಿಗಳು ಮಾರುಕಟ್ಟೆಯಂತೆಯೇ ನೂರಾರು ಮಂದಿ ಬಂದು ಹೋಗುವ ತಾಣಗಳು. ಇಲ್ಲಿ ಸಿಬ್ಬಂದಿ ಮಟ್ಟದಲ್ಲಿ ಹಾಗೂ ಫಲಾನುಭವಿಗಳ ಮಟ್ಟದಲ್ಲೂ ಜಾಗೃತಿ ಇರಬೇಕಾದುದು ಅಗತ್ಯ.

ಆದರೆ ಇಂದಲ್ಲ ನಾಳೆ ಎಲ್ಲ ಕಚೇರಿಗಳೂ ತೆರೆದು ಕೆಲಸ ಮಾಡಲಾರಂಭಿಸುವುದು ಅಗತ್ಯ. ಹಾಗೇ ಎಲ್ಲ ಸರಕಾರಿ ಸಾರಿಗೆಯೂ ಮುಕ್ತವಾಗಬೇಕಿದೆ. ಎಲ್ಲ ವಲಯಗಳೂ ನಿಧಾನವಾಗಿಯಾದರೂ ಚಟುವಟಿಕೆ ಆರಂಭಿಸದೆ ಹೋದರೆ, ನಮ್ಮನ್ನು ಕಾಡುತ್ತಿರುವ ಆರ್ಥಿಕ ದುಃಸ್ಥಿತಿ ಇನ್ನಷ್ಟು ಆಳವಾಗುತ್ತದೆ. ಪ್ರತಿಯೊಂದು ವಲಯವೂ ಒಂದಕ್ಕೊಂದು ಸಂಬಂಧಿಸಿದ್ದು, ಒಂದನ್ನೊಂದು ಪ್ರಭಾವಿಸುತ್ತವೆ. ತೆರಿಗೆ ಸಂಗ್ರಹವೂ ಇಲ್ಲದೆ ಸರಕಾರದ ಆದಾಯವೂ ನೆಲಕಚ್ಚುತ್ತದೆ. ಹೀಗಾಗಿ ಸರಕಾರಿ ಸಿಬ್ಬಂದಿ ಕೂಡ ಇದನ್ನು ಅರ್ಥ ಮಾಡಿಕೊಂಡು, ಸೂಕ್ತ ಎಚ್ಚರ ವಹಿಸಿ ಕರ್ತವ್ಯಕ್ಕೆ ಹಾಜರಾಗುವುದು ಸೂಕ್ತ. ಪ್ರಸ್ತುತ ಬ್ಯಾಂಕ್‌ಗಳು ಪರಿಣಾಮಕಾರಿಯಾಗಿ ಗ್ರಾಹಕರನ್ನು ಎಷ್ಟು ಬೇಕೋ ಅಷ್ಟೇ ಪ್ರಮಾಣದಲ್ಲಿ ಶಾಖೆಗಳಿಗೆ ಬರಮಾಡಿಕೊಂಡು, ಉಳಿದಂತೆ ದೂರನಿರ್ವಹಣೆ ವ್ಯವಸ್ಥೆ ಅಳವಡಿಸಿಕೊಂಡಿವೆ. ಸರಕಾರಿ ಕಚೇರಿ ನಿರ್ವಹಣೆಗೆ ಇದೊಂದು ಮಾದರಿಯಾಗಿ ಸದ್ಯಕ್ಕೆ ಕಾಣಿಸುತ್ತಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top