ಏಜೆನ್ಸೀಸ್ ಹೊಸದಿಲ್ಲಿ/ಬೆಂಗಳೂರು
ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೊದ ಶೇ.10ರಷ್ಟು ಷೇರುಗಳನ್ನು ಜುಕರ್ಬರ್ಗ್ ಒಡೆತನದ ಫೇಸ್ಬುಕ್ ಖರೀದಿಸುವುದು ಕೇವಲ 43,574 ಕೋಟಿ ರೂ.ಗಳ ಡೀಲ್ ಆಗಿ ಉಳಿದಿಲ್ಲ. ಷೇರುಗಳ ಮಾರಾಟ ಮಾತ್ರ ಇದಲ್ಲ, ಇದಕ್ಕೂ ಆಚೆ ಸಾರ್ವಜನಿಕರ ಅಮೂಲ್ಯ ಡೇಟಾದ ಸಂಗತಿ ಈಗ ಮುಂಚೂಣಿಗೆ ಬಂದಿದೆ.
ಉಭಯ ಕಂಪನಿಗಳು ಕೋಟ್ಯಂತರ ಗ್ರಾಹಕರು ಅಥವಾ ಬಳಕೆದಾರರ ಖಾಸಗಿ ವಿವರಗಳನ್ನು (ಡೇಟಾ) ಒಳಗೊಂಡಿವೆ. ಮುಂಬರುವ ದಿನಗಳಲ್ಲಿ ಇನ್ನೂ ಕೋಟ್ಯಂತರ ಗ್ರಾಹಕರ ಮಾಹಿತಿಗಳು ಉಭಯ ಕಂಪನಿಗಳ ಕೈಸೇರುವ ನಿರೀಕ್ಷೆ ಇದೆ. ವಿಶ್ವಾದ್ಯಂತ ನಾನಾ ರಾಷ್ಟ್ರಗಳಲ್ಲಿ ಡೇಟಾ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವುದರಿಂದ ಭಾರತದಲ್ಲೂ ಕೇಂದ್ರ ಸರಕಾರ ಈ ಸಂಬಂಧ ನಿಗಾ ವಹಿಸಲಿದೆ.
ರಿಲಯನ್ಸ್ ಜಿಯೊ, ಫೇಸ್ಬುಕ್ ಮತ್ತು ಅದರ ಅಧೀನದಲ್ಲಿರುವ ವಾಟ್ಸ್ಆ್ಯಪ್ ಒಟ್ಟುಗೂಡಿದರೆ ಮಾರುಕಟ್ಟೆಯಲ್ಲಿ ಅವುಗಳ ಪ್ರತಿಸ್ಪರ್ಧಿ ಕಂಪನಿಗಳಿಗೆ ಸಿಗದಂಥ ವಿಶೇಷ ಅನುಕೂಲವನ್ನು ಪಡೆಯಲಿವೆ. ಅಂದರೆ ನೂರಾರು ಕೋಟಿ ಬಳಕೆದಾರರ ಬೇಕು-ಬೇಡಗಳ ವಿವರಗಳು ಜಿಯೊ-ಎಫ್ಬಿಗೆ ಸಿಗಲಿವೆ. ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಬಯಸುವ ಕಂಪನಿಗಳಿಗೆ ಈ ಡೇಟಾ ನಿರ್ಣಾಯಕವಾಗುತ್ತದೆ. ಪ್ರತಿಸ್ಪರ್ಧಿ ತಂತ್ರಜ್ಞಾನ ದಿಗ್ಗಜ ಗೂಗಲ್, ಅಮೆಜಾನ್ ಮತ್ತು ಇತರ ಸ್ಟಾರ್ಟ್ಅಪ್ಗಳಿಗೂ ಇಂಥ ಅವಕಾಶ ಸಿಗದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಹೀಗಾಗಿ ಜಿಯೊ-ಫೇಸ್ಬುಕ್ ಸೇರಿ ಮಾರುಕಟ್ಟೆಯಲ್ಲಿ ಅನಾರೋಗ್ಯಕರ ಪಾರಮ್ಯ ಮೆರೆಯಬಹುದೇ ಎಂಬ ಚರ್ಚೆಗೆ ಕಾರಣವಾಗಿದೆ.
ಸಿಸಿಐ ಸಂಪರ್ಕಿಸಲಿರುವ ಜಿಯೊ: ರಿಲಯನ್ಸ್ ಜಿಯೊ ಶೀಘ್ರದಲ್ಲಿಯೇ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾವನ್ನು (ಸಿಸಿಐ) ಸಂಪರ್ಕಿಸಲಿದೆ. ಸಿಸಿಐ ಅನುಮತಿ ಮಾತ್ರ ಬಾಕಿ ಇದೆ ಎಂದು ರಿಲಯನ್ಸ್ ಜಿಯೊದ ಸ್ಟ್ರಾಟಜಿ ಮುಖ್ಯಸ್ಥ ಅಂಶುಮಾನ್ ಠಾಕೂರ್ ತಿಳಿಸಿದ್ದಾರೆ. ‘‘ಈ ಡೀಲ್ ಅನ್ನು ಕೇವಲ ಎರಡು ಕಂಪನಿಗಳ ನಡುವಿನ ಕೊಡು-ಕೊಳ್ಳುವಿಕೆಯಾಗಿ ಮಾತ್ರ ಪರಿಗಣಿಸಲಾಗುವುದಿಲ್ಲ. ಷೇರುಗಳ ವ್ಯವಹಾರವಾಗಿ ಮಾತ್ರ ನೋಡಿಕೊಳ್ಳುವುದಿಲ್ಲ, ಇದಕ್ಕಿಂತಲೂ ಮುಖ್ಯವಾಗಿ ಉಭಯ ಕಂಪನಿಧಿಗಳು ಭಾರಿ ಪ್ರಮಾಣದಲ್ಲಿ ಗ್ರಾಹಕರ ವಿವರಗಳನ್ನು ನಿಯಂತ್ರಿಸುತ್ತಿರುವುದರಿಂದ ಕಾನೂನುಗಳ ಚೌಕಟ್ಟಿನಡಿಯಲ್ಲೂ ಗಮನಿಸಲಾಗುತ್ತಿದೆ,’’ ಎಂದು ಹೆಸರು ಹೇಳಲಿಚ್ಛಿಸದ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಫೇಸ್ಬುಕ್ ಸೇರಿದಂತೆ ಹಲವು ಜಾಲತಾಣ ಕಂಪನಿಗಳು ಉಚಿತವಾಗಿ ತಮ್ಮ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದ್ದರೂ, ಮೇಲ್ನೋಟಕ್ಕೆ ಮಾತ್ರ ಉಚಿತವಾಗಿರುತ್ತದೆ. ವಾಸ್ತವವಾಗಿ ಅವುಗಳು ಕೋಟ್ಯಂತರ ಗ್ರಾಹಕರ ಡೇಟಾವನ್ನು ವ್ಯಾವಹಾರಿಕ ಉದ್ದೇಶಗಳಿಗೆ ಬಳಸುತ್ತವೆ. ಆದ್ದರಿಂದ ಭಾರತ ತನ್ನದೇ ದೇಶಿ ಜಾಲತಾಣ ಕಂಪನಿಗಳನ್ನು ಹೊಂದಲು ಇದು ಸಕಾಲ.
-ಸಂಪತ್ ರಾಮನ್, ಮಾಜಿ ಅಧ್ಯಕ್ಷ, ಅಸೊಚೆಮ್
—
ಫೇಸ್ಬುಕ್ನ ‘ಫ್ರೆಂಡ್ ರಿಕ್ವೆಸ್ಟ್’ ಅನ್ನು ರಿಲಯನ್ಸ್ ಜಿಯೊ ‘ಅಕ್ಸೆಪ್ಟ್ ’ ಮಾಡಿಕೊಂಡ ಬೆನ್ನಲ್ಲೇ ಅದರ ಹಿಂದಿರುವ ಉದ್ದೇಶಗಳು, ಲೆಕ್ಕಾಚಾರಗಳ ಬಗ್ಗೆ ಉದ್ಯಮದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಡೇಟಾ ಷೇರಿಂಗ್ ಅಪಾಯದಿಂದ ಹಿಡಿದು ಚಿಲ್ಲರೆ ವ್ಯಾಪಾರ ವಲಯದಲ್ಲಿನ ಏಕಸ್ವಾಮ್ಯದವರೆಗಿನ ಸಾಧ್ಯತೆಗಳು ತೆರೆದುಕೊಳ್ಳಬಹುದು. ಆ ಬಗ್ಗೆ ಇಲ್ಲಿದೆ ವಿಶ್ಲೇಷಣೆ.
ಫೇಸ್ಬುಕ್, ರಿಲಯನ್ಸ್ ದೋಸ್ತಿಯ ಸಾಧ್ಯತೆಗಳು
ತೈಲ ಮತ್ತು ಟೆಲಿಕಾಂ ವಲಯದ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಸಾಮಾಜಿಕ ಜಾಲತಾಣ ವಲಯದ ದೈತ್ಯ ಇಂಟರ್ನೆಟ್ ಕಂಪನಿ ಫೇಸ್ಬುಕ್ ಪರಸ್ಪರ ಸ್ನೇಹದ ಹಸ್ತ ಚಾಚಿರುವುದು ಅನೇಕ ಹೊಸ ಸಾಧ್ಯತೆಗಳಿಗೆ ಎಡೆ ಮಾಡಿಕೊಟ್ಟಿದೆ. ಬಹುದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಫೇಸ್ಬುಕ್ನ ಉದ್ದೇಶ ಮತ್ತು ಇ ಕಾಮರ್ಸ್, ಡಿಜಿಟಲ್ ಪೇಮೆಂಟ್, ರಿಟೇಲ್ನಲ್ಲಿ ತನ್ನ ಪಾರುಪತ್ಯ ಸ್ಥಾಪಿಸಲು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ಗೆ ಇದರಿಂದ ಸಾಧ್ಯವಾಗಲಿದೆ.
ಫೇಸ್ಬುಕ್ ಕಂಪನಿ ರಿಲಯನ್ಸ್ನ ಜಿಯೊದಲ್ಲಿ ಶೇ.10ರಷ್ಟು ಹೂಡಿಕೆ ಮಾಡುತ್ತಿದ್ದು, ಇದರಿಂದ 43,574 ಕೋಟಿ ರೂ.(507 ಕೋಟಿ ಡಾಲರ್) ಬಂಡವಾಳ ಹರಿದು ಬರಲಿದೆ. ಇದು ಸಹಜವಾಗಿಯೇ ಕಂಪನಿಯ ವಿಸ್ತರಣಾ ಪ್ರಾಜೆಕ್ಟ್ ಗಳಿಗೆ ಸಹಾಯವಾಗಲಿದೆ.
ಈ ಉಭಯ ಕಂಪನಿಗಳ ನಡುವಿನ ಒಪ್ಪಂದವು ಯಾವೆಲ್ಲ ಸಾಧ್ಯತೆಗಳನ್ನು ಹುಟ್ಟು ಹಾಕಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾದ ಚಿತ್ರಣಗಳಿಲ್ಲ. ಆದರೆ, ಈಗ ಲಭ್ಯ ಇರುವ ಮಾಹಿತಿಯಾಧಾರದ ಮೇಲೆ ಪರಸ್ಪರ ಕಂಪನಿಗಳು ಯಾವೆಲ್ಲ ಕ್ಷೇತ್ರಗಳಲ್ಲಿ ತಮ್ಮ ಹೂಡಿಕೆಯನ್ನು ವಿಸ್ತರಿಸಿಕೊಳ್ಳಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಫೇಸ್ಬುಕ್ ಕಂಪನಿಯೇಕೆ ರಿಲಯನ್ಸ್ನ ಜಿಯೊ ಪಾಲುದಾರನಾಗುತ್ತಿದೆ ಎಂಬ ಪ್ರಶ್ನೆಯೇ ಈಗ ಎಲ್ಲರಲ್ಲಿದೆ. ಇದಕ್ಕಿರುವ ಬಲವಾದ ಕಾರಣಗಳೇನು ಎಂಬ ಚರ್ಚೆಯೂ ಉದ್ಯಮದಲ್ಲಿ ನಡೆಯುತ್ತಿದೆ. ಕೊರೊನಾ ನಂತರದ ದಿನಗಳಲ್ಲಿ ಟೆಲಿಕಾಂ ವಲಯದಲ್ಲಿ ತನ್ನ ಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಇರಾದೆ ಜಿಯೊಗೆ ಇದ್ದಂತಿದೆ. ಜೊತೆಗೆ, ರಿಟೇಲ್, ಡಿಜಿಟಲ್ ಪೇಮೆಂಟ್ ವಲಯದಲ್ಲೂ ಉಭಯ ಕಂಪನಿಗಳು ತಮ್ಮ ಅಸ್ತಿತ್ವವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು. ಈಗಾಗಲೇ ಫೇಸ್ಬುಕ್ ವಾಟ್ಸ್ಆ್ಯಪ್ ಪೇ ಮೂಲಕ ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವಲಯಕ್ಕೆ ಕಾಲಿಡುವ ಪ್ರಯತ್ನ ಮಾಡುತ್ತಿದೆ. ಜಿಯೊ ಜೊತೆಗಿನ ಒಪ್ಪಂದವು ಫೇಸ್ಬುಕ್ನ ಈ ಪ್ರಯತ್ನಕ್ಕೆ ಇಂಬು ನೀಡಲಿದೆ. ಜೊತೆಗೆ, ಜಿಯೊ ಮಾರ್ಟ್ ಮೂಲಕ ಇ ಕಾಮರ್ಸ್ ಕ್ಷೇತ್ರದಲ್ಲೂ ರಿಲಯನ್ಸ್ ಫೇಸ್ಬುಕ್ನೊಂದಿಗೆ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಬಹುದು. ಈ ಎಲ್ಲ ಅಂಶಗಳ ಜೊತೆಗೆ ಇನ್ನೂ ಅನೇಕ ಸಂಗತಿಗಳು ಫೇಸ್ಬುಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಫ್ರೆಂಡ್ಶಿಫ್ ಮಧ್ಯೆ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ನಿಚ್ಚಳವಾಗಬಹುದು.
ರಿಲಯನ್ಸ್ ಸಾಲದ ಹೊರೆ ಇಳಿಕೆ?
ಟೆಲಿಕಾಂ ವಲಯದಲ್ಲಿ ಸಾರ್ವಭೌಮತ್ವ ಸಾಧಿಸುವ ಉದ್ದೇಶದಿಂದಲೇ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ 2016ರಲ್ಲಿ ಜಿಯೊ ಆರಂಭಿಸಿತು. ಅತ್ಯಂತ ಕಡಿಮೆ ಅವಧಿಯಲ್ಲೇ ಜಿಯೊ ಪ್ರಸಿದ್ಧಿ ಪಡೆಯಿತಲ್ಲದೇ, ಸದ್ಯ 38.8 ಕೋಟಿ ಗ್ರಾಹಕರನ್ನು ಹೊಂದಿದೆ. ದರ ಸಮರ ಸೇರಿದಂತೆ ಹೊಸ ಆಫರ್ಗಳ ಮೂಲಕ ಬೃಹತ್ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಹಾಗೆಯೇ, ಇದರ ಮೇಲಿನ ಹೂಡಿಕೆಯೂ ಕೂಡ ಹೆಚ್ಚಾಯಿತು. ಪರಿಣಾಮ ಸಾಲವೂ ಹೆಚ್ಚಿದೆ. ಇದೀಗ ಫೇಸ್ಬುಕ್ ಜೊತೆಗಿನ ಒಪ್ಪಂದದಿಂದ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಸಾಧ್ಯತೆಗಳೂ ಹೆಚ್ಚು. 2016ರಲ್ಲಿ ಅಂಬಾನಿ ಅವರು ಜಿಯೊ ಮೇಲೆ 400 ಕೋಟಿ ಡಾಲರ್ ಹೂಡಿಕೆ ಮಾಡಿದ್ದಾರೆ. ಆ ನಂತರದಲ್ಲೂ ಅದರ ವಿಸ್ತರಣೆ ನಡೆಯಿತು. ಜೊತೆಗೆ, ಚಿಲ್ಲರೆ ವ್ಯಾಪಾರ ವಲಯದಲ್ಲೂ ಸಾಕಷ್ಟು ಹೂಡಿಕೆ ಮಾಡಿದೆ. ಒಂದು ಅಂದಾಜಿನ ಪ್ರಕಾರ ರಿಲಯನ್ಸ್ ಕಂಪನಿಯು 2021ರ ಮಾರ್ಚ್ ಹೊತ್ತಿಗೆ ತನ್ನ ಸಾಲವನ್ನು ಶೂನ್ಯಕ್ಕಿಳಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಫೇಸ್ಬುಕ್ ಕೂಡ ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹೂಡಿಕೆ ಮಾಡಿದೆ. ಸೋಷಿಯಲ್ ಇ ಕಾಮರ್ಸ್ ವೇದಿಕೆಯಾದ ಮೀಶೋ ಮತ್ತು ಆನ್ಲೈನ್ ಎಜ್ಯುಕೇಷನ್ ಆ್ಯಪ್ ಅನ್ಅಕಾಡೆಮಿಯಲ್ಲಿ ಫೇಸ್ಬುಕ್ ಬಂಡವಾಳ ತೊಡಗಿಸಿದೆ.
ಡೇಟಾ ಷೇರಿಂಗ್ ಅಪಾಯ!
ಎರಡ್ಮೂರು ವರ್ಷಗಳ ಹಿಂದೆ ಫೇಸ್ಬುಕ್ ‘ಉಚಿತ ಇಂಟರ್ನೆಟ್’ ಸೇವೆ ಪೂರೈಸುವ ಯೋಜನೆಯೊಂದನ್ನು ಭಾರತದಲ್ಲಿ ಜಾರಿಗೆ ತರಲು ಮುಂದಾಗಿದ್ದು ನಿಮಗೆ ನೆನಪಿರಬಹುದು. ಆಯ್ದ ಇಂಟರ್ನೆಟ್ ಸೇವೆಗಳನ್ನು ಉಚಿತವಾಗಿ ಒದಗಿಸುವ ಫೇಸ್ಬುಕ್ ಇಂಟರ್ನೆಟ್. ಆರ್ಗ್(ಫ್ರೀ ಬೇಸಿಕ್ಸ್) ಪ್ರಾಜೆಕ್ಟ್ಗೆ ಭಾರತವೂ ಸೇರಿದಂತೆ ಜಗತ್ತಿನ ವಿವಿಧೆಡೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಉಚಿತವಾಗಿ ಇಂಟರ್ನೆಟ್ ಸೇವೆ ಪೂರೈಸುವ ನೆಪದಲ್ಲಿ ಬಳಕೆದಾರ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಆತಂಕವಿತ್ತು ಮತ್ತು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಫೇಸ್ಬುಕ್ ತನ್ನ ಯೋಜನೆಯನ್ನು ಕೈಬಿಟ್ಟಿತ್ತು. ಆದರೆ, ಅದೇ ಫೇಸ್ಬುಕ್ ಇದೀಗ ರಿಲಯನ್ಸ್ನ ಜಿಯೊದಲ್ಲಿ ಹೂಡಿಕೆ ಮಾಡುವುದರೊಂದಿಗೆ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಮುಂದಾಗಿದೆಯೇ? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಯಾಕೆಂದರೆ, ಫೇಸ್ಬುಕ್-ಜಿಯೊಗಳೆರಡೂ ಡೇಟಾ ಷೇರಿಂಗ್ ಸಂಬಂಧ ಯಾವುದೇ ಒಪ್ಪಂದಗಳಾಗಿಲ್ಲ ಎಂದು ಸ್ಪಷ್ಪಡಿಸುತ್ತಿವೆ. ಹೀಗಿದ್ದೂ, ಟೆಲಿಕಾಂ ವಲಯದ ಅನೇಕರಿಗೆ ಡೇಟಾ ಷೇರಿಂಗ್ ಸಾಧ್ಯತೆಯ ಬಗ್ಗೆ ಅನುಮಾನಗಳು ಎದ್ದಿವೆ.
‘ಎಕನಾಮಿಕ್ ಟೈಮ್ಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ನ ಸ್ಟ್ರ್ಯಾಟರ್ಜಿ ಹೆಡ್ ಅನ್ಷುಮನ್ ಠಾಕೂರ್ ಅವರು, ‘‘ಉಭಯ ಕಂಪನಿಗಳು ಗ್ರಾಹಕರ ಡೇಟಾ ಬಗ್ಗೆ ಕಾಳಜಿ ಹೊಂದಿವೆ ಮತ್ತು ಗ್ರಾಹಕರ ಮಾಹಿತಿಯನ್ನು ಗೌರವಿಸಲಾಗುತ್ತಿದೆ. ಫೇಸ್ಬುಕ್ ಮತ್ತು ಜಿಯೊಗಳೆರಡೂ ಪ್ರತ್ಯೇಕ ಸ್ವತಂತ್ರ ಕಂಪನಿಗಳಾಗಿದ್ದು, ನಿಶ್ಚಿತವಾಗಿಯೂ ತಮಗೆ ಸಂಬಂಧಿಸಿದ್ದಲ್ಲದ ವಿಷಯಗಳಲ್ಲಿ ಸಹಭಾಗಿತ್ವವನ್ನು ಹೊಂದುವುದಿಲ್ಲ’’ ಎಂದಿದ್ದಾರೆ. ಜೊತೆಗ ನೆಟ್ ನ್ಯೂಟ್ರಾಲಿಟಿಗೆ ಸಂಬಂಧಿಸಿದ ಕಾನೂನುಗಳು ಭಾರತದಲ್ಲಿ ತುಂಬ ಕಠಿಣವಾಗಿದ್ದು, ಈ ಹಿಂದೆಯೂ ನೆಟ್ ನ್ಯೂಟ್ರಾಲಿಟಿಯನ್ನು ತಮ್ಮ ಕಂಪನಿ ಬೆಂಬಲಿಸಿದೆ ಎಂದು ಅವರು ಹೇಳಿದ್ದಾರೆ. ಫೇಸ್ಬುಕ್ ಮತ್ತು ಜಿಯೊ ಕಂಪನಗಳೆರಡೂ ಈ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರ ಆದೇಶಗಳನ್ನು ಪಾಲಿಸುವುದಾಗಿಯೂ ಹೇಳಿಕೊಂಡಿವೆ.
ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಫೇಸ್ಬುಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್, ‘‘ಎರಡೂ ಕಂಪನಿಗಳ ಮಧ್ಯೆ ನಡೆದ ಈ ಒಪ್ಪಂದದಲ್ಲಿ ಯಾವುದೇ ಡೇಟಾ ಹಂಚಿಕೆ ಸೇರಿಲ್ಲ. ನಾವು ಎಲ್ಲದರ ಬಗ್ಗೆ ಒಪ್ಪಂದ ಅಥವಾ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಭಾವಿಸಿಕೊಳ್ಳುವುದಿಲ್ಲ. ಫೇಸ್ಬುಕ್ನ ಭಾಗವಾಗಿ ನಾವು ಡೇಟಾ ಹರವಿಗೆ ನಾವು ಮುಕ್ತ ವ್ಯವಸ್ಥೆಯನ್ನು ಹೊಂದಿದ್ದೇವೆ ಮತ್ತು ಅದು ನಮ್ಮ ದೃಷ್ಟಿಕೋನದ ಭಾಗವಾಗಿ ಮುಂದುವರಿಯಲಿದೆ,’’ ಎಂದು ಹೇಳಿದ್ದಾರೆ.
ಡಿಜಿಟಲ್ ಪೇಮೆಂಟ್ ಕಂಪನಿಗಳಿಗೂ ಸ್ಪರ್ಧೆ
ಇ ಕಾಮರ್ಸ್ ಕಂಪನಿಗಳಿಗೆ ಮಾತ್ರವಲ್ಲದೇ ಭಾರತದಲ್ಲಿ ಭಾರಿ ಪ್ರಸಿದ್ಧಿಯಾಗಿರುವ ವಾಲ್ಮಾರ್ಟ್ ಒಡೆತನದ ಫೋನ್ಪೇ, ಅಲಿಬಾಬಾ ಬೆಂಬಲದ ಪೇಟಿಮ್, ಗೂಗಲ್ ಪೇ ಹಾಗೂ ಅಮೆಜಾನ್ ಪೇ ವೇದಿಕೆಗಳಿಗೂ ಫೇಸ್ಬುಕ್-ರಿಲಯನ್ಸ್ ಒಪ್ಪಂದವು ಭಾರಿ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇಂಡಿಯನ್ ಡಿಜಿಟಲ್ ಪೇಮೆಂಟ್ ವಲಯ ಸಾಕಷ್ಟು ಅವಕಾಶಗಳನ್ನು ಹೊಂದಿವೆ. 2023ರ ಹೊತ್ತಿಗೆ 1 ಲಕ್ಷ ಕೋಟಿ ಡಾಲರ್ನಷ್ಟು ವಹಿವಾಟವನ್ನು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಫೇಸ್ಬುಕ್ ತಿಂಗಳಿಗೆ 32.8 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದ್ದರೆ, ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ಗೆ 40 ಕೋಟಿ ಬಳಕೆದಾರರಿದ್ದಾರೆ. ಈಗಾಗಲೇ ವಾಟ್ಸ್ಆಪ್ ತನ್ನ ವಾಟ್ಸ್ಆ್ಯಪ್ ಪೇ ಚಾಲನೆ ಮಾಡಲು ಕಾಯುತ್ತಿದೆ. ಆದರೆ, ಅದಕ್ಕೆ ಇನ್ನು ಭಾರತ ಸರಕಾರದಿಂದ ಒಪ್ಪಿಗೆ ದೊರೆತಿಲ್ಲ. ಒಂದೊಮ್ಮೆ ಒಪ್ಪಿಗೆ ದೊರೆತರೆ, ಜಿಯೊ ಬಳಕೆದಾರರಿಂದಲೂ ಅದಕ್ಕೆ ಬೆಂಬಲ ದೊರೆಯಬಹುದು. ಮತ್ತು ಉಭಯ ಕಂಪನಿ ಈ ವೇದಿಕೆಯನ್ನು ಎಲ್ಲಡೆ ವಿಸ್ತರಿಸಲು ಸಹಜವಾಗಿಯೇ ಪ್ರಯತ್ನಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಅಮೆಜಾನ್, ಫ್ಲಿಪ್ಕಾರ್ಟ್ಗೆ ಹೊಡೆತ?
ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಫೇಸ್ಬುಕ್ ಮಾಡುತ್ತಿರುವ ಹೂಡಿಕೆಯು, ಭಾರತೀಯ ಇ-ಕಾಮರ್ಸ್ ಒಟ್ಟು ಚಹರೆಯನ್ನು ಬದಲಿಸುವ ಎಲ್ಲ ಸಾಧ್ಯತೆಗಳಿವೆ. ರಿಲಯನ್ಸ್ನ ಇ ಕಾಮರ್ಸ್ನ ವೇದಿಕೆಯಾದ ‘ಜಿಯೊ ಮಾರ್ಟ್’ಗೆ ಫೇಸ್ಬುಕ್ನಿಂದಾಗಿ ಹೆಚ್ಚಿನ ಲಾಭವಾಗಲಿದೆ. ಉದ್ಯಮದ ವಿಶ್ಲೇಷಕರ ಪ್ರಕಾರ, ಭಾರತದಲ್ಲಿ ಆನ್ಲೈನ್ ಕಾಮರ್ಸ್ ವ್ಯಾಪಾರವು 2028ರ ಹೊತ್ತಿಗೆ 200 ಶತಕೋಟಿ ಡಾಲರ್ಗೆ ಏರಿಕೆಯಾಗಲಿದೆ! 2018ರಲ್ಲಿ ಇದು ಕೇವಲ 300 ಕೋಟಿ ಡಾಲರ್ ಮಾತ್ರವಿತ್ತು. ಫೇಸ್ಬುಕ್ ಹೂಡಿಕೆ ಮಾಡಿರುವ ಒಟ್ಟು ಮೊತ್ತದಲ್ಲಿ 15,000 ಕೋಟಿ ರೂಪಾಯಿ ಜಿಯೊ ಪಾಲಾಗಲಿದ್ದು, ಈ ಮೊತ್ತವನ್ನೇ ಜಿಯೊಮಾರ್ಟ್ ತನ್ನ ಜಾಲವನ್ನು ವಿಸ್ತರಿಸಿಕೊಳ್ಳಲು ಬಳಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಇದನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿದರೆ ಅಮೆಜಾನ್, ಮತ್ತು ಫ್ಲಿಪ್ಕಾರ್ಟ್ನಂಥ ಇ ಕಾಮರ್ಸ್ ವೇದಿಕೆಗಳಿಗೆ ಸಿಕ್ಕಾಪಟ್ಟೆ ಸಮಸ್ಯೆಯಾಗಲಿದೆ ಎಂಬುದು ಉದ್ಯಮದ ವಿಶ್ಲೇಷಕರ ಅಭಿಪ್ರಾಯವಾಗಿದೆ.
45 ಕೋಟಿ- ಭಾರತದಲ್ಲಿ ಬಳಕೆಯಾಗುತ್ತಿರುವ ಸ್ಮಾರ್ಟ್ ಫೋನ್ಗಳು
34.6 – ಭಾರತದಲ್ಲಿರುವ ಫೇಸ್ಬುಕ್ ಬಳಕೆದಾರರ ಸಂಖ್ಯೆ
30 ಕೋಟಿ – ಭಾರತದ 60 ಕೋಟಿ ಇಂಟರ್ನೆಟ್ ಬಳಕೆದಾರರು ಪೈಕಿ ಅರ್ಧದಷ್ಟು ಜನರು ಪ್ರತಿ ತಿಂಗಳು ಸೋಷಿಯಲ್ ಮೀಡಿಯಾ ಬಳಸುತ್ತಾರೆ.
38.8 ಕೋಟಿ – ಜಿಯೊ ಹೊಂದಿರುವ ಚಂದಾದಾರರು