ಕೊರೊನಾ ವೈರಸ್ ಜಗತ್ತಿನಾದ್ಯಂತ ವಲಸಿಗ ಕಾರ್ಮಿಕರ ಸಂಕಷ್ಟಗಳನ್ನು ಹೆಚ್ಚಿಸಿದೆ. ಒಂದು ಕಡೆ ರೋಗವಾಹಕರಾಗುವ ಅಪಾಯ, ಮತ್ತೊಂದು ಕಡೆ ಸಾಮಾಜಿಕ ಭದ್ರತೆಯ ಅಭಾವಕ್ಕೀಡಾಗಿದ್ದಾರೆ.
ಜಗತ್ತಿನ ಎಲ್ಲ ರಾಷ್ಟ್ರಗಳು ವಲಸಿಗರ ಸೇವೆಯನ್ನು ಬಯಸುತ್ತವೆ. ಮಹಾ ನಗರಗಳ ನಿರ್ಮಾಣದಲ್ಲಿ ಅವರಿಲ್ಲದೆ ಆಗುವುದಿಲ್ಲ. ವಲಸಿಗರಿಗೂ ಜೀವನೋಪಾಯಕ್ಕೆ ಇದು ಅನಿವಾರ್ಯ. ಆದರೆ ಕೊರೊನಾ ವೈರಸ್ ವಿಶ್ವಾದ್ಯಂತ ಅಸಂಘಟಿತ ವಲಯದ ಕೋಟ್ಯಂತರ ಬಡ ವಲಸಿಗರನ್ನು ನಾನಾ ಸಂಕಟಕ್ಕೆ ತಳ್ಳಿದೆ. ಒಂದು ಕಡೆ ಕೆಲಸವಿಲ್ಲ, ಸಾಮಾಜಿಕ ಭದ್ರತೆಯಂತೂ ಮೊದಲೇ ಇಲ್ಲ. ಸರಕಾರದ ನೆರವಿನ ಪ್ಯಾಕೇಜ್ನ ಕೊರತೆ ಅವರನ್ನು ಹೈರಾಣಾಗಿಸಿದೆ. ಜತೆಗೆ ವಲಸಿಗರು ಕೊರೊನಾ ಸೋಂಕಿನ ವಾಹಕರಾಗಿ ಬಿಡುವ ಅಪಾಯವೂ ಇದೆ. ಇತಿಹಾಸದಲ್ಲಿ ವಲಸಿಗರಿಂದಲೇ ಸಾಂಕ್ರಾಮಿಕ ರೋಗಗಳು ಹಬ್ಬಿದ ನಿದರ್ಶನಗಳು ಇದೆ.
ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳದ್ದೂ ವಲಸಿಗ ಕಾರ್ಮಿಕರ ಬಿಕ್ಕಟ್ಟಿನಲ್ಲಿ ಸಾಮ್ಯತೆಗಳನ್ನು ಕಾಣಬಹುದು. ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಕಾರ್ಮಿಕರ ದಿಢೀರ್ ವಲಸೆಯಿಂದ ಸಂಕೀರ್ಣ ಸವಾಲುಗಳು ಸೃಷ್ಟಿಯಾಗಿವೆ. ಊರಿಗೆ ಮರಳಿರುವ ಜನತೆಯಲ್ಲಿ ಮತ್ತೆ ಎಷ್ಟು ಮಂದಿ ಭವಿಷ್ಯದಲ್ಲಿ ನಗರಗಳಿಗೆ ಹಿಂತಿರುಗಲಿದ್ದಾರೆ ಎಂಬುದು ಗೊತ್ತಿಲ್ಲ. ಶೇ.60-70ರಷ್ಟು ಮಂದಿ ಮತ್ತೆ ಬರಲಾರರು ಎನ್ನುತ್ತಾರೆ ಉದ್ಯಮ ವಲಯದ ತಜ್ಞರು. ಒಂದು ವೇಳೆ ಶೇ.40ರಷ್ಟು ಮಂದಿ ಬರದಿದ್ದರೆ ನಗರ, ಪಟ್ಟಣಗಳಲ್ಲಿ ಅನೇಕ ನಿರ್ಮಾಣ ಯೋಜನೆಗಳು ಮತ್ತಷ್ಟು ವಿಳಂಬವಾಗಲಿದೆ. ಸಣ್ಣ ಮತ್ತು ಮಧ್ಯಮ ಕಾರ್ಖಾನೆಗಳು ಮತ್ತಷ್ಟು ಯಾಂತ್ರೀಕರಣವಾಗದಿದ್ದರೆ ಉಳಿಗಾಲ ಇಲ್ಲವಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಜೀವನ ನಿರ್ವಹಣೆ ಕಷ್ಟವಾದರೆ ಮತ್ತೆ ನಗರ ಕರೆಯದಿದ್ದೀತೇ?
‘‘ ಕೇಂದ್ರ ಸರಕಾರ ಸ್ಥಳೀಯ, ಸಾಂಪ್ರದಾಯಿಕ ಉದ್ದಿಮೆಗಳ ಉತ್ತೇಜನಕ್ಕೆ ಮುದ್ರಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಸ್ಥಳೀಯ ವಿಶೇಷತೆಗಳನ್ನು ಗುರುತಿಸಲು ಜಿಐ ಟ್ಯಾಗ್ ಪರಿಚಯಿಸಿದೆ. ರಿವಾಂಪ್ಡ್ ಸ್ಕೀಮ್ ಆಫ್ ಫಂಡ್ ಫಾರ್ ರಿಜನರೇಷನ್ ಆಫ್ ಟ್ರೆಡೀಶನಲ್ ಇಂಡಸ್ಟ್ರೀಸ್ (ಎಸ್ಎಫ್ಯುಆರ್ಟಿಐ) ಯೋಜನೆ ಮೂಲಕ ಕ್ಲಸ್ಟರ್ಗಳನ್ನು ಸ್ಥಾಪಿಸಲು ನೆರವು ಒದಗಿಸುತ್ತಿದೆ. ಇವುಗಳ ಸದುಪಯೋಗ ಮಾಡಿಕೊಳ್ಳಬೇಕು. ಭಾರತದಲ್ಲಿ ಪ್ರಾದೇಶಿಕ ವೈವಿಧ್ಯತೆಯ ಉದ್ದಿಮೆಗಳಿವೆ. ಕರಕುಶಲ ಉತ್ಪನ್ನಗಳು, ಕೃಷಿ ವೈವಿಧ್ಯ ಇತ್ಯಾದಿಗಳಿಗೆ ಮಾರುಕಟ್ಟೆ ಒದಗಿಸಬೇಕು. ಆಗ ವಲಸಿಗರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಸಿಗಲಿದೆ’’ ಎನ್ನುತ್ತಾರೆ ಅಸೊಚೆಮ್ ಅಧ್ಯಕ್ಷ ಸಂಪತ್ರಾಮನ್.
ಭಾರತದಲ್ಲಿ ಸುಮಾರು 6 ಕೋಟಿಯಷ್ಟು ಮಂದಿ ಅಂತಾರಾಜ್ಯ ವಲಸಿಗ ಕಾರ್ಮಿಕರಿದ್ದಾರೆ. ಲಕ್ಷಾಂತರ ಮಂದಿ ವಿದೇಶಗಳಲ್ಲಿದ್ದಾರೆ. ಕೊಲ್ಲಿ ರಾಷ್ಟ್ರಗಳಿಂದ ಸಿಂಗಾಪುರದ ತನಕ ಹಲವೆಡೆ ಭಾರತೀಯ ಮೂಲದ ವಲಸಿಗ ಕಾರ್ಮಿಕರಿದ್ದು, ಕೊರೊನಾ ತಾಪತ್ರಯ ಎದುರಿಸುತ್ತಿದ್ದಾರೆ. ಪ್ರತಿ ರಾಜ್ಯದಲ್ಲೂ ನಾನಾ ಜಿಲ್ಲೆಗಳ ನಡುವೆ ವಲಸಿಗರಿದ್ದಾರೆ.
ಸಾಮಾಜಿಕ ಭದ್ರತೆಯ ನೆರವು ಇಲ್ಲದಿರುವುದು ಬಡ ವಲಸಿಗರ ಪ್ರಮುಖ ಸಮಸ್ಯೆ. ಬಹುತೇಕ ಸರಕಾರಗಳು ವಲಸಿಗ ಕಾರ್ಮಿಕರ ದಾಖಲಾತಿಗಳನ್ನು ಹೊಂದಿರುವುದಿಲ್ಲ. ಇದರ ಪರಿಣಾಮ ಶಾಸನದ ಬೆಂಬಲ ಇರುವ ಸಾಮಾಜಿಕ ಭದ್ರತೆ ಯೋಜನೆಗಳು ಇದ್ದರೂ ಸಿಗುವುದಿಲ್ಲ. ರಸ್ತೆ, ಕಟ್ಟಡ ನಿರ್ಮಾಣದಲ್ಲಿ ನಿರತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಯೋಜನೆಗಳಿದ್ದರೂ, ಬಹುಪಾಲು ಮಂದಿಗೆ ಅದು ಸಿಗುವುದೇ ಇಲ್ಲ ಎನ್ನುತ್ತಾರೆ ಲೇಬರ್ ನೆಟ್ನ ಸಿಇಒ ಗಾಯತ್ರಿ.