– ಟಿಕ್-ಟಾಕ್, ಶೇರ್‌ಇಟ್, ಹೆಲೋ ಸಹಿತ 59 ಅಪ್ಲಿಕೇಷನ್ ಸ್ಟಾಪ್
– ಡ್ರ್ಯಾಗನ್ ದರ್ಪಕ್ಕೆ ಭಾರತದ ಪೆಟ್ಟು | ಬಾಯ್ಕಾಟ್ ಚೀನಾ ಆಂದೋಲನಕ್ಕೆ ಬಲ
ಹೊಸದಿಲ್ಲಿ: ಪೂರ್ವ ಲಡಾಖ್ ಗಡಿಯಲ್ಲಿ ಚೀನಿ ಸೇನೆಗೆ ದಿಟ್ಟ ಉತ್ತರ ಕೊಟ್ಟಿದ್ದ ಭಾರತ, ಈಗ ಡ್ರ್ಯಾಗನ್ ರಾಷ್ಟ್ರಕ್ಕೆ ಮತ್ತೊಂದು ಪೆಟ್ಟು ನೀಡಿದೆ. ಅತ್ಯಂತ ಜನಪ್ರಿಯ ‘ಟಿಕ್-ಟಾಕ್’, ‘ಶೇರ್‌ಇಟ್’ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಕೇಂದ್ರ ಸರಕಾರ ಸೋಮವಾರ ನಿಷೇಧಿಸಿದೆ.
ಚೀನಾದ ಸರಕು-ಸೇವೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ‘ಬಾಯ್ಕಾಟ್ ಚೀನಾ’ ಜನಾಂದೋಲನಕ್ಕೆ ಇದರಿಂದ ಹೊಸ ಹುರುಪು ಸಿಕ್ಕಂತಾಗಿದೆ. ಅಲ್ಲದೆ, ಚೀನಾಕ್ಕೆ ಆರ್ಥಿಕ ಕ್ರಮಗಳ ಮೂಲಕ ಪಾಠ ಕಲಿಸಬೇಕೆಂಬ ಒತ್ತಾಯದ ನಡುವೆ ಸರಕಾರದ ಈ ತೀರ್ಮಾನ ಗಮನ ಸೆಳೆದಿದೆ.
ಪ್ರಮುಖ ವಿಡಿಯೊ ಶೇರಿಂಗ್ ಆ್ಯಪ್‌ಗಳು, ವೆಬ್ ಬ್ರೌಸರ್‌ಗಳು, ವಿಡಿಯೋ ಗೇಮ್‌ಗಳು, ಚಾಟಿಂಗ್ ಆ್ಯಪ್‌ಗಳು, ಕ್ಯಾಮೆರಾ ಆ್ಯಪ್‌ಗಳು, ವೈರಸ್ ಕ್ಲೀನರ್‌ಗಳು, ನ್ಯೂಸ್ ಆ್ಯಪ್‌ಗಳು ನಿಷೇಧಿತ ಪಟ್ಟಿಯಲ್ಲಿವೆ.
ಈಗಾಗಲೇ ಜತೆಗೆ ಚೀನಿ ಉತ್ಪನ್ನಗಳ ಮೇಲೆ ದುಬಾರಿ ಸುಂಕ ಹೇರಲು ಮತ್ತು ಬೃಹತ್ ಯೋಜನೆಗಳಿಂದ ಚೀನಾದ ಕಂಪನಿಗಳನ್ನು ದೂರವಿಡುವ ಬಗ್ಗೆ ಈಗಾಗಲೇ ಕೇಂದ್ರ ಸರಕಾರ ಕಾರ್ಯಪ್ರವೃತ್ತವಾಗಿದೆ.
ನಿಷೇಧಿತ ಪ್ರಮುಖ ಆ್ಯಪ್‌ಗಳು
ಟಿಕ್-ಟಾಕ್, ಶೇರ್‌ಇಟ್, ಕ್ಯಾಮ್ ಸ್ಕ್ಯಾನರ್, ಯು.ಸಿ ಬ್ರೌಸರ್, ಯು.ಸಿ. ನ್ಯೂಸ್, ನ್ಯೂಸ್‌ಡಾಗ್, ವಿಚಾಟ್, ವಿಮೇಟ್, ಎಂಐ ಕಮ್ಯುನಿಟಿ, ಎಂಐ ವಿಡಿಯೊ ಕಾಲ್, ಕ್ಲೀನ್ ಮಾಸ್ಟರ್.
ಕಾರಣವೇನು?
ಚೀನಾದ ಹಲವು ಆ್ಯಪ್‌ಗಳು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಅಪಾಯ ಇದೆ. ಭಾರತದ ಸಾರ್ವಭೌಮತೆ, ಸಮಗ್ರತೆ, ರಾಷ್ಟ್ರೀಯ ಭದ್ರತೆ, ಸಾಮಾಜಿಕ ಶಾಂತಿ ವಿಚಾರದಲ್ಲಿಈ ಆ್ಯಪ್‌ಗಳು ಪೂರ್ವಗ್ರಹ ಪೀಡಿತ ಚಟುವಟಿಕೆಯಲ್ಲಿನಿರತವಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಹೀಗಾಗಿ ಅವುಗಳನ್ನು ನಿಷೇಧಿಸಲಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.
ಮೊಬೈಲ್ ಕಂಪನಿಗಳಿಗೆ ಸೂಚನೆ
ಚೀನಾದ ನಿರ್ದಿಷ್ಟ ಆ್ಯಪ್‌ಗಳನ್ನು ಬ್ಲಾಕ್ ಮಾಡುವಂತೆ ಮೊಬೈಲ್ ಕಂಪನಿಗಳಿಗೆ ಸೂಚಿಸಿ ಕೇಂದ್ರ ಸರಕಾರ ಅಧಿಕೃತ ಆದೇಶ ಹೊರಡಿಸಿದೆ. ಹಲವು ದಿನಗಳ ಹಿಂದೆಯೇ ಈ ಬಗ್ಗೆ ಗೃಹ ಸಚಿವಾಲಯ ಪರಿಶೀಲನೆ ನಡೆಸುತಿತ್ತು. ಗೃಹ ಸಚಿವ ಅಮಿತ್ ಶಾ ಅವರು ಈ ನಡೆಗೆ ಭಾರಿ ಬೆಂಬಲ ಸೂಚಿಸಿದ್ದರು. ಗಲ್ವಾನ್ ಸಂಘರ್ಷದ ಬಳಿಕ ಕೊನೆಗೂ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾಅವರ ಶಿಫಾರಸಿಗೆ ಅಮಿತ್ ಶಾ ಸಹಿ ಹಾಕಿದ್ದಾರೆ.
ಚೀನಾ ಕಂಪನಿಗಳಿಗೆ ಆಮದು ಅಡಚಣೆ
ಹೊಸದಿಲ್ಲಿ: ಬದಲಾದ ಆಮದು ನೀತಿಯಿಂದಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾ ಮೂಲದ ಕಂಪನಿಗಳಿಗೆ ಚೀನಾದಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಚೀನಾ ಮೂಲದ ಆಮದುಗಳನ್ನು ಬಂದರುಗಳಲ್ಲಿ ನಿಲ್ಲಿಸಲಾಗಿದ್ದು, ಸಮಗ್ರ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿ ಚೀನಾ ವಸ್ತುಗಳ ಆಮದು ಕ್ಲಿಯರೆನ್ಸ್ ವಿಳಂಬವಾಗುತ್ತಿದೆ. ಇದು ಚೀನಾ ಕಂಪನಿಗಳ ಉತ್ಪಾದನೆಗೆ ಹೊಡೆತ ನೀಡಿದೆ ಎಂದು ಮೂಲಗಳು ತಿಳಿಸಿವೆ.