– ವಲಸೆ ತಡೆ ವಿಧೇಯಕ ಮಂಡನೆಗೆ ಕುವೈತ್ ಸಜ್ಜು
– ಭಾರತದ 15 ಲಕ್ಷ ಉದ್ಯೋಗಿಗಳಿಗೆ ಆತಂಕ.
– ಆರ್.ಸಿ.ಭಟ್.
ಮಂಗಳೂರು : ಕೊರೊನಾ ಸಂಕಷ್ಟದಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಉದ್ಯೋಗ ನಷ್ಟ ಅನುಭವಿಸುತ್ತಿರುವ ನಡುವೆಯೇ, ಕುವೈತ್ ಸರಕಾರ ವಿದೇಶೀಗರನ್ನು ಹೊರದಬ್ಬುವ ವಿಧೇಯಕವನ್ನು ಸಂಸತ್‌ನಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ. ಈ ಕಾಯಿದೆ ಜಾರಿಗೆ ಬಂದರೆ ಕುವೈತ್‌ನಲ್ಲಿ ಅತಿ ದೊಡ್ಡ ವಲಸಿಗರಾಗಿರುವ ಭಾರತೀಯರಿಗೆ ಸಂಕಷ್ಟ ಎದುರಾಗಲಿದೆ. ವಿದೇಶಿಗರ ಸಂಖ್ಯೆ ಹೆಚ್ಚಿ, ತನ್ನ ಪ್ರಜೆಗಳೇ ಅಲ್ಪಸಂಖ್ಯಾತರಾಗುತ್ತಿರುವುದನ್ನು ಗಮನಿಸಿದ ಅಲ್ಲಿನ ಸರಕಾರ ಸ್ಥಳೀಯರ ಸಂರಕ್ಷಣೆಗೆ ಮುಂದಾಗಿದೆ. ಕುವೈತ್‌ನಲ್ಲಿ 14.5 ಲಕ್ಷ ಭಾರತೀಯರಿದ್ದು, ಕರ್ನಾಟಕದವರೇ 50 ಸಾವಿರ ಜನರಿದ್ದಾರೆ. ಅಲ್ಲಿಯ ಒಟ್ಟು ಜನಸಂಖ್ಯೆ 43 ಲಕ್ಷ . ಈ ಪೈಕಿ ಹೊರಗಿನವರು 30 ಲಕ್ಷ ಮಂದಿ ಇದ್ದಾರೆ. ಈಜಿಪ್ತ್ ದೇಶದವರು ಕುವೈತ್‌ನ ಜನಸಂಖ್ಯೆಯ 10 ಪರ್ಸೆಂಟ್‌ನಷ್ಟಿದ್ದಾರೆ. ಭಾರತಕ್ಕೆ ಅತಿ ಹೆಚ್ಚು ಹಣ ರವಾನೆ ಮಾಡುವ ರಾಷ್ಟ್ರಗಳಲ್ಲಿ ಕುವೈತ್ ಮುಂಚೂಣಿಯಲ್ಲಿದೆ. 2018ರಲ್ಲಿ 4.8 ಶತಕೋಟಿ ಡಾಲರ್ ಹಣ ಹರಿದುಬಂದಿತ್ತು. ಹೊಸ ಕಾಯಿದೆ ಪ್ರಕಾರ ಭಾರತೀಯರು ಕುವೈತ್ ಜನಸಂಖ್ಯೆಯ ಶೇ.15ಕ್ಕಿಂತ ಹೆಚ್ಚು ಇರಬಾರದು. ಈ ಕಾನೂನು ಮಾನ್ಯವಾದರೆ ಸುಮಾರು 9 ಲಕ್ಷ ಭಾರತೀಯರು ಭಾರತಕ್ಕೆ ವಾಪಸ್ ಬರಬೇಕಾಗುತ್ತದೆ. ತೊಂಬತ್ತರ ದಶಕದಲ್ಲಿ ಇರಾಕ್ ಕುವೈತ್ ಅನ್ನು ಅತಿಕ್ರಮಿಸಿದ ಸಂದರ್ಭ ಅಲ್ಲಿಂದ ದೊಡ್ಡ ಸಂಖ್ಯೆಯ ಭಾರತೀಯರು ಸಂಕಷ್ಟಕ್ಕೆ ಒಳಗಾಗಿ ಮರಳಿ ತಾಯ್ನಾಡಿಗೆ ಬಂದಿದ್ದರು. ಆ ಬಳಿಕ ಭಾರಿ ಪ್ರಮಾಣದಲ್ಲಿ ಭಾರತೀಯರು, ಅದರಲ್ಲೂ ಕೇರಳ ಹಾಗೂ ಕರಾವಳಿ ಕರ್ನಾಟಕದ ಮಂದಿ ಕುವೈತ್‌ಗೆ ಉದ್ಯೋಗ ಅರಸಿ ಹೋಗಿದ್ದಾರೆ.
ಕೊರೊನಾ ಸಂಕಷ್ಟದಿಂದಾಗಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ನಷ್ಟ ಆಗುತ್ತಿದೆ. ಇನ್ನು ಹೊಸ ವಲಸೆ ಕಾನೂನು ಜಾರಿಗೆ ಬಂದರೆ ಇಡೀ ಕುವೈತ್ ಖಾಲಿ ಆಗಲಿದ್ದು, ಭಾರತೀಯರಿಗೆ ದೊಡ್ಡ ಸಂಕಷ್ಟ ಎದುರಾಗಲಿದೆ. -ಮೋಹನ್‌ದಾಸ್ ಕಾಮತ್, ಮಂಜೇಶ್ವರ, ಕುವೈತ್‌ನಲ್ಲಿ ಎಂಜಿನಿಯರ್.
ಹೊಸ ನೀತಿಗೆ ಏನು ಕಾರಣ? ಕುವೈತ್‌ನಲ್ಲಿ ಸ್ಥಳೀಯರೇ ಅಲ್ಪಸಂಖ್ಯಾತರಾಗಿದ್ದಾರೆ. ಇಲ್ಲಿಗೆ ವಲಸೆ ಹೆಚ್ಚಿದ್ದು, ವಿದೇಶಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಅಲ್ಲಿನ ಸರಕಾರ ನಿರ್ಧರಿಸಿದೆ. ಕೋವಿಡ್-19 ಬಿಕ್ಕಟ್ಟಿನ ಪರಿಣಾಮ ತೈಲ ದರ ಕುಸಿದಿದ್ದು, ಇದೂ ಕೂಡ ಕುವೈತ್ ಸರಕಾರದ ಈ ನಿರ್ಧಾರಕ್ಕೆ ಕಾರಣವಾಗಿದೆ. ಜನಸಂಖ್ಯೆಯಲ್ಲಿ ಹೊರಗಿನವರ ಸಂಖ್ಯೆಯನ್ನು ಶೇ.70ರಿಂದ 30ಕ್ಕೆ ಇಳಿಸಬೇಕಾಗಿದೆ ಎಂದು ಕುವೈತ್ ಪ್ರಧಾನಿ ಶೇಖ್ ಸಭಾ ಅಲಿ ಖಲೀದ್ ಹೇಳಿದ್ದಾರೆ.
ನೆರವಿಗೆ ಸಹಾಯವಾಣಿ : ಕುವೈತ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಯು ಭಾರತೀಯ ಕಾರ್ಮಿಕರ ಕಲ್ಯಾಣ ಕೇಂದ್ರವನ್ನು 2009ರಲ್ಲಿ ತೆರೆದಿದೆ. ಉಚಿತ ಸಹಾಯವಾಣಿ ಆರಂಭಿಸಿದ್ದು, ಭಾರತೀಯರು ಇದರ ನೆರವನ್ನು ಪಡೆಯಬಹುದು.
ಕುವೈತ್ ಉದ್ಯಮಿಗಳ ವಿರೋಧ : ಈ ಕಾನೂನು ಜಾರಿಗೆ ಬಂದರೆ ಕುವೈತ್‌ನಲ್ಲಿ ಮಾನವ ಸಂಪನ್ಮೂಲ ಕೊರತೆ ಎದುರಾಗಲಿದೆ. ನಿರ್ಮಾಣ ಕ್ಷೇತ್ರ, ಹೋಟೆಲ್, ಆಯಿಲ್ ಕಂಪನಿ ಸೇರಿದಂತೆ ಕುವೈತ್‌ಗೆ ಆದಾಯ ತಂದು ಕೊಡುವ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಭಾರತೀಯ ಮೂಲದವರೇ ಮಾಲೀಕರು, ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದಕ್ಕಾಗಿ ಹೊಸ ವಲಸೆ ಕಾನೂನಿಗೆ ಕುವೈತ್‌ನ ಬಹುತೇಕ ಉದ್ಯಮ ಕ್ಷೇತ್ರದಿಂದ ಭಾರಿ ವಿರೋಧ ಎದುರಾಗಿದೆ.