ವಿಜಯವಾಣಿ ಸ್ಥಾಪಕ ಸಂಪಾದಕ ತಿಮ್ಮಪ್ಪ ಭಟ್ ನಿವೃತ್ತಿ

* ಪತ್ರಿಕೋದ್ಯಮದಲ್ಲಿ 35 ವರ್ಷಗಳ ಸಾರ್ಥಕ ಸೇವೆ * ಆತ್ಮೀಯ ಬೀಳ್ಕೊಡುಗೆ

   

ಅತ್ಯಲ್ಪ ಅವಧಿಯಲ್ಲಿ ಕನ್ನಡಿಗರ ಧ್ವನಿಯಾಗಿ ರೂಪುಗೊಂಡಿರುವ ವಿಜಯವಾಣಿ ದಿನಪತ್ರಿಕೆಯ ಸ್ಥಾಪಕ ಸಂಪಾದಕ ತಿಮ್ಮಪ್ಪ ಭಟ್ ಶುಕ್ರವಾರ ನಿವೃತ್ತರಾದರು.

35 ವರ್ಷಗಳ ಹಿಂದೆ ಕನ್ನಡಪ್ರಭ ಪತ್ರಿಕೆ ಮೂಲಕ ವೃತ್ತಿಜೀವನ ಪ್ರಾರಂಭಿಸಿದ್ದ ತಿಮ್ಮಪ್ಪ ಭಟ್ ಅವರು ಮುಂದೆ ಅದೇ ಪತ್ರಿಕೆಯ ಬೆಳಗಾವಿ ಆವೃತ್ತಿ ಮುಖ್ಯಸ್ಥರಾಗಿ, ಬಳಿಕ ಉಷಾಕಿರಣ ಪತ್ರಿಕೆಯ ಸುದ್ದಿಸಂಪಾದಕರಾಗಿ, ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿ, ಉದಯವಾಣಿ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.
ವಿಆರ್‍ಎಲ್ ಸಮೂಹ ಸಂಸ್ಥೆಗಳ ಛೇರ್‍ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆನಂದ ಸಂಕೇಶ್ವರ ಅವರು 2012ರಲ್ಲಿ ಆರಂಭಿಸಿದ `ವಿಜಯವಾಣಿ’ ಸಂಪಾದಕರಾಗಿ ಪತ್ರಿಕೆಯನ್ನು ರೂಪಿಸುವಲ್ಲಿ ಮುತುವರ್ಜಿಯಿಂದ ಕೆಲಸ ಮಾಡಿದ್ದರು.
ಛಲದಿಂದ ಗೆದ್ದ ವಿಜಯವಾಣಿ:
ತಿಮ್ಮಪ್ಪ ಭಟ್ ಅವರನ್ನು ಶುಕ್ರವಾರ ವಿಜಯವಾಣಿ ಕಚೇರಿಯಲ್ಲಿ ವಿಆರ್‍ಎಲ್ ಸಮೂಹ ಸಂಸ್ಥೆಗಳ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ತಮ್ಮ ವೃತ್ತಿಜೀವನವನ್ನು ಸ್ಮರಿಸಿದ ಅವರು, ವಿಜಯ ಸಂಕೇಶ್ವರ ಹಾಗೂ ಆನಂದ ಸಂಕೇಶ್ವರ ಅವರ ಮಾದರಿಯಲ್ಲಿ ಸಾಧಿಸಬೇಕೆಂಬ ಛಲವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂಬುದು ವಿಜಯವಾಣಿಯ ಯಶಸ್ಸಿನಿಂದ ಸಾಬೀತಾಗಿದೆ ಎಂದರು. ಪ್ರಾಮಾಣಿಕ ಹಾಗೂ ಪರಿಶುದ್ಧ ವೃತ್ತಿಜೀವನ ನಡೆಸಬೇಕೆನ್ನುವವರಿಗೆ ವಿಜಯವಾಣಿಗಿಂತ ಉತ್ತಮ ಆಯ್ಕೆ ಬೇರೊಂದಿರಲಾರದು. ಆ ರೀತಿಯ ವಾತಾವರಣವನ್ನು ಪತ್ರಿಕೆಯ ಆರಂಭದಿಂದಲೂ ರೂಢಿಸಿಕೊಂಡು ಬಂದಿದೆ ಎಂದರು.

ವಿಜಯ ಸಂಕೇಶ್ವರ ಶುಭ ಹಾರೈಕೆ
ಮೂರು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಪರಿಶುದ್ಧ ಹಾಗೂ ಪರಿಶ್ರಮದ ವೃತ್ತಿಜೀವನ ನಡೆಸಿ ನಿವೃತ್ತರಾದ ತಿಮ್ಮಪ್ಪ ಭಟ್ ಅವರ ಮುಂದಿನ ಜೀವನದಲ್ಲೂ ಶ್ರೇಯಸ್ಸು, ಸುಖ, ನೆಮ್ಮದಿ ಸಿಗಲಿ ಎಂದು ವಿಆರ್‍ಎಲ್ ಸಮೂಹ ಸಂಸ್ಥೆಗಳ ಛೇರ್‍ಮನ್ ಡಾ. ವಿಜಯ ಸಂಕೇಶ್ವರ, ಹಾಗೂ ಎಂ.ಡಿ. ಆನಂದ ಸಂಕೇಶ್ವರ ಶುಭ ಹಾರೈಸಿದ್ದಾರೆ.

ಹರಿಪ್ರಕಾಶ್ ಕೋಣೆಮನೆ ನೂತನ ಸಂಪಾದಕ
ಇದುವರೆಗೆ ವಿಜಯವಾಣಿಯ ಪತ್ರಿಕೆಯ ಡೆಪ್ಯುಟಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರಿಪ್ರಕಾಶ್ ಕೋಣೆಮನೆ ಅವರು ಪತ್ರಿಕೆಯ ನೂತನ ಸಂಪಾದಕರಾಗಿ ಶುಕ್ರವಾರ ತಿಮ್ಮಪ್ಪ ಭಟ್ ಅವರಿಂದ ಅಧಿಕಾರ ವಹಿಸಿಕೊಂಡರು. 2002ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿಜೀವನ ಆರಂಭಿಸಿರುವ ಹರಿಪ್ರಕಾಶ್, ಉಷಾಕಿರಣ, ಟೈಮ್ಸ್ ಆಫ್ ಇಂಡಿಯಾ ಕನ್ನಡ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top