ಕೊರೊನೋತ್ತರ ಸುರಕ್ಷಿತ ಬದುಕಿಗೆ 16 ಸೂತ್ರಗಳು

– ಭವಿಷ್ಯದ ದಿನಗಳಲ್ಲಿ ನಮ್ಮ ಜೀವನ, ಚಿಂತನೆಗಳಲ್ಲೇ ಬಹುದೊಡ್ಡ ಬದಲಾವಣೆ ಆಗಬೇಕಿದೆ

– ಹರಿಪ್ರಕಾಶ್ ಕೋಣೆಮನೆ.
ಮಹಾಯುದ್ಧ ನಡೆದರೆ ಇಲ್ಲವೇ ಪ್ರಕೃತಿ ವಿಕೋಪದಿಂದ ರಾಷ್ಟ್ರದ ಭೌತಿಕ ಬದುಕು ಧ್ವಂಸವಾದರೆ ಮತ್ತೆ ಅಂಥ ರಾಷ್ಟ್ರಗಳು ಮರುನಿರ್ಮಾಣವಾಗಿರುವ ಕಥೆಗಳು ಇತಿಹಾಸದಲ್ಲಿ ಸಿಗುತ್ತವೆ. ಹಿರೋಷಿಮಾ, ನಾಗಸಾಕಿ ದುರಂತದಿಂದ ನಾಶವಾದ ಜಪಾನ್‌ನಿಂದ ಹಿಡಿದು, ತೀರಾ ಇತ್ತೀಚಿಗೆ ಭೂಕಂಪದಿಂದ ಸಂಪೂರ್ಣ ನೆಲಕಚ್ಚಿ ಹೋಗಿದ್ದ ನೇಪಾಳದಂಥ ರಾಷ್ಟ್ರಗಳು ಮತ್ತೆ ಎಲೆ ಎತ್ತಿ ನಿಂತಿರುವ ಬಗೆಯನ್ನು ಓದಿದ್ದೀರಿ, ಕಂಡಿದ್ದೀರಿ. ಆದರೆ, ಕೊರೊನಾ ಎಂಬ ಅಣುಗಾತ್ರದ ಅಗೋಚರ ಶತ್ರುವೊಬ್ಬ ಮನುಕುಲದ ಮೇಲೆ ನಡೆಸಿರುವ ದಾಳಿ, ಯಾವುದೇ ರಾಷ್ಟ್ರ ಜೀವನದ ಭೌತಿಕ ಬದುಕನ್ನು ಧ್ವಂಸಗೊಳಿಸಿಲ್ಲ. ಬದಲಿಗೆ ಆ ಶತ್ರು ನಮ್ಮ ವೇಗದ, ಅಶಿಸ್ತಿನ ಬದುಕನ್ನೇ ಸ್ತಬ್ಧಗೊಳಿಸಿದ್ದಾನೆ. ಈ ಸ್ತಬ್ಧತೆ ಎಂಬುದು ಬಾಂಬ್ ಇಲ್ಲವೇ ಭೂಕಂಪಕ್ಕಿಂತಲೂ ಅಧಿಕ ಹಾನಿಯನ್ನೇ ಉಂಟು ಮಾಡಿದೆ. ಇಂಥಾ ರಾಷ್ಟ್ರದ ಮರುನಿರ್ಮಾಣಕ್ಕೆ ಹಣ ಹಾಗೂ ಭೌತಿಕ ಪರಿಕರಗಳಿಗಿಂತಲೂ ಮಿಗಿಲಾದ ಸಂಗತಿಗಳು ಬೇಕಿವೆ. ನಮ್ಮ ದೈನಂದಿನ ಜೀವನ, ಕೆಲಸ ಕಾರ್ಯ, ಅದರ ರೀತಿ ನೀತಿಯಲ್ಲಿ ಹೊಸ ಆಲೋಚನೆಗಳು ಬೇಕಿವೆ. ಅಗತ್ಯವೆನಿಸಿದರೆ ಎಲ್ಲವನ್ನೂ ಮುರಿದು ಕಟ್ಟುವಂತಹ ಸನ್ನಿವೇಶ ಎದುರಾಗಿದೆ. ಒಂದೇ ದಿನದ ಭಾರತ ಬಂದ್‌ನಿಂದ ಎಷ್ಟೊಂದು ಕಷ್ಟ ನಷ್ಟ ಎಂದು ಲೆಕ್ಕ ಹಾಕುತ್ತಿದ್ದ ನಮ್ಮ ಬುದ್ಧಿ ಭಾವಕ್ಕೆ, ತಿಂಗಳಾನುಗಟ್ಟಲೆ ದೇಶ ಬಂದ್ ಆದರೂ ಬದುಕು ಇಲ್ಲಿ ಸಾಧ್ಯ ಎಂಬುದನ್ನು ಕೊರೊನಾ ವೈರಸ್ ಮನವರಿಕೆ ಮಾಡಿಕೊಟ್ಟಿದೆ. ಯಾವುದೂ ಇಲ್ಲಿ ಅಸಾಧ್ಯವಿಲ್ಲ. ಮನಸ್ಸು ಮಾಡಿದರೆ, ಹೊಸ ಯೋಜಿತ ಶಿಸ್ತಿನ ನಾಗರಿಕ ಬದುಕನ್ನೇ ಕಟ್ಟಬಹುದು ಎಂಬುದನ್ನೂ ಕೋವಿಡ್ ಕಲಿಸಿದೆ. ಇಂಥಾ ಹೊತ್ತಲ್ಲಿ ಕೊರೊನೋತ್ತರ ಬದುಕನ್ನು ಒಂದು ಸಮಾಜ ಹೇಗೆ ಎದುರಿಸಬೇಕು? ಕೇಂದ್ರ ಹಾಗೂ ರಾಜ್ಯ ಸರಕಾರದ ಮುಂದಿರುವ ಆಯ್ಕೆಗಳೇನು? ಎಂಬುದರ ಕುರಿತು ಒಂದಿಷ್ಟು ಆಲೋಚನೆಗಳು ಇಲ್ಲಿವೆ.

1.ಲಾಕ್‌ಡೌನ್‌ ಸಡಿಲಗೊಳಿಸದೇ ವಿಧಿಯಿಲ್ಲ
ಲಾಕ್‌ಡೌನ್ ಹೀಗೆಯೇ ಮುಂದುವರಿದರೆ, ಕೊರೊನಾ ಕಾರಣದಿಂದ ಸಾಯುವವರಿಗಿಂತ ಲಾಕ್‌ಡೌನ್ ಉಂಟು ಮಾಡುವ ಅಪಾಯದಿಂದ ಸಾಯುವವರ ಸಂಖ್ಯೆ ಹೆಚ್ಚಾಗಬಹುದು ಎಂದು ಇನ್ಫೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ಎನ್.ಆರ್. ನಾರಾಯಣ ಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಕೊರೊನಾ ಸಾವಿನ ಪ್ರಮಾಣ ಮತ್ತು ಸಹಜ ಸಾವಿನ ಪ್ರಮಾಣದ ಅಂಕಿ ಅಂಶಗಳನ್ನು ತುಲನಾತ್ಮಕವಾಗಿ ಮುಂದಿಟ್ಟಿರುವ ಅವರು, ಲಾಕ್‌ಡೌನ್ ಮುಂದುವರಿಕೆ ಬೇಡ ಎಂದಿದ್ದಾರೆ. ಅನೇಕ ಕೈಗಾರಿಕೋದ್ಯಮಿಗಳ ಅಭಿಪ್ರಾಯವೂ ಇದೇ ಇರಬಹುದು. ಹಾಗಾಗಿ ಸರಕಾರ ಲಾಕ್‌ಡೌನ್ ಅನ್ನು ಸಡಿಲಗೊಳಿಸಲೇಬೇಕು. ಬೇರೆ ವಿಧಿಯಿಲ್ಲ.

2. ನಗರಗಳು 24/7 ತೆರೆದುಕೊಳ್ಳಲು ಸಕಾಲ
ಬೆಂಗಳೂರನ್ನು 24/7 ಅಂದರೆ, ದಿನಪೂರ್ತಿ ಜಾಗೃತವಾಗಿರುವ, ಲವಲವಿಕೆಯಿಂದಿರುವ ನಗರವನ್ನಾಗಿ ಮಾಡಬೇಕೆಂಬುದು ಬಹಳ ಹಿಂದಿನಿಂದ ನಡೆಯುತ್ತಿರುವ ಚರ್ಚೆ. ಈ ವಿಷಯ ಮುನ್ನೆಲೆಗೆ ಬಂದಾಗ ಸಾಕಷ್ಟು ಜನರು ಮೂಗು ಮುರಿಯುವುದಿದೆ. 24/7 ಎಂದಾಕ್ಷ ಣ ಅಂಥವರ ಕಣ್ಣಮುಂದೆ ಮೋಜು ಮಸ್ತಿ, ನೈಟ್ ಪಾರ್ಟಿ, ಕ್ಲಬ್ಬು-ಪಬ್ಬು, ಬಾರ್ ಆ್ಯಂಡ್ ರೆಸ್ಟೋರೆಂಟುಗಳು, ಅಲ್ಲಿನ ಕುಡಿತ, ಕುಡುಕರು, ಅವರು ಸೃಷ್ಟಿಸುವ ಅವಾಂತರಗಳು, ಕಾನೂನು ಸುವ್ಯವಸ್ಥೆ ಸಮಸ್ಯೆಗಳಷ್ಟೇ ಕಣ್ಮುಂದೆ ಬರುತ್ತಿದ್ದವು. 24/7 ನಗರದ ಕಲ್ಪನೆಯಲ್ಲಿ ಮೋಜು ಮಸ್ತಿ, ಕುಡಿತ ಕುಣಿತದ ಪಾತ್ರ ಬಹಳ ಚಿಕ್ಕದು. ಬೆಂಗಳೂರಿನಂತಹ ಕಾಸ್ಮೋಪಾಲಿಟನ್ ನಗರಗಳು ಔದ್ಯಮಿಕ ದುಡಿಮೆಗೋಸ್ಕರ ಇಡೀ ಜಗತ್ತಿನೊಂದಿಗೆ ಬೆಸೆದುಕೊಳ್ಳಬೇಕಾಗಿದೆ. ಹಾಗಾಗಬೇಕೆಂದರೆ 24 ಗಂಟೆಯ ನಗರದ ಕಲ್ಪನೆ ನಿರ್ಣಾಯಕ. ಅಂತಹ ಒಂದು ಐತಿಹಾಸಿಕ ನಿರ್ಧಾರಕ್ಕೆ ಕೊರೊನಾ ಸಂಕಷ್ಟ ಕಾರಣ ಆಗುವುದಾದರೆ ಕೊರೊನಾ ಒಳ್ಳೆಯದು ಅಂತಲೇ ಹೇಳೋಣ. 24/7 ನಗರ ವ್ಯವಸ್ಥೆ ಕೇವಲ ಐಟಿ, ಬಿಟಿ ಇತ್ಯಾದಿ ಕೈಗಾರಿಕೆಗಳಿಗೆ ಮಾತ್ರವಲ್ಲ, ಹತ್ತಾರು ಮಾಲ್‌ಗಳಿಂದ ಹಿಡಿದು ಬಡಾವಣೆಗಳಲ್ಲಿರುವ ದಿನಸಿ ಅಂಗಡಿ, ತರಕಾರಿ ಅಂಗಡಿ, ಹಾಲಿನ ಅಂಗಡಿಗಳಿಗೂ ಅನ್ವಯವಾಗಲಿ. ಮಧ್ಯರಾತ್ರಿಯಲ್ಲಿ, ಬೆಳಗಿನ ಜಾವ ಶಿಫ್ಟ್ ಮುಗಿಸಿ ಮನೆಗೆ ಹೋಗುವ ನೌಕರರೂ ಕೂಡ ತಮ್ಮ ಅನುಕೂಲದ ವೇಳೆಯಲ್ಲಿ ತರಕಾರಿ, ಹಣ್ಣುಹಾಲು, ಅಗತ್ಯ ವಸ್ತುಗಳನ್ನು ಮನೆಗೆ ಕೊಂಡೊಯ್ಯುವಂತಾದರೆ ಕೊರೊನಾ ಹರಡುವಿಕೆಗೆ ಇರುವ ಏಕೈಕ ಅಸ್ತ್ರ ಸೋಷಿಯಲ್ ಡಿಸ್ಟನ್ಸಿಂಗ್ ಪರಿಣಾಮಕಾರಿ ಜಾರಿ ಸಾಧ್ಯ. ಈ ವ್ಯವಸ್ಥೆ ಬೆಂಗಳೂರಿಂದ ಆರಂಭವಾಗಿ ಎಡರನೇ ಸ್ತರದ ನಗರಗಳಾದ ಮಂಗಳೂರು, ಹುಬ್ಬಳ್ಳಿ ಅಂತ ಕಡೆಯೂ ಜಾರಿಗೆ ಮುಂದೆ ಯೋಚನೆ ಮಾಡಬಹುದು.

3. ವರ್ಕ್ ಫ್ರಂ ಹೋಂ ಕಾಯಕ ಸಂಸ್ಕೃತಿಯಾಗಲಿ
ಬೆಂಗಳೂರು ನಗರವೊಂದರಲ್ಲೇ ವಿಪ್ರೊ, ಟಿಸಿಎಸ್, ಇನ್ಫೋಸಿಸ್, ಕಾಗ್ನಿಜೆಂಟ್ ಸೇರಿದಂತೆ ನೂರಾರು ಐಟಿ ಕಂಪೆನಿಗಳಿದ್ದು, ಐವತ್ತು ಲಕ್ಷ ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಇವರಲ್ಲಿ ಬಹುತೇಕರು ಕಂಪ್ಯೂಟರ್ ಮತ್ತು ಇಂಟರ್ನೆಟ್ ಆಧರಿಸಿ ಕೆಲಸ ಮಾಡುವವರು. ಹಾಗಾಗಿ ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ಗರಿಷ್ಠ ಮಟ್ಟದಲ್ಲಿ ಜಾರಿಗೆ ತರಲು ಅವಕಾಶ ಮತ್ತು ಅನುಕೂಲ ಇರುವ ದೊಡ್ಡ ವಲಯವೂ ಈ ಐಟಿ ಕ್ಷೇತ್ರವೇ ಆಗಿದೆ. ಕನಿಷ್ಠ ಮುಂದಿನ ಆರು ತಿಂಗಳ ಅವಧಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಶೇ.85ರಷ್ಟು ಕೆಲಸಗಾರರು ಮನೆಯಿಂದಲೇ ಕೆಲಸ ಮಾಡಬೇಕೆಂಬುದನ್ನು ಕಡ್ಡಾಯ ಮಾಡಬೇಕು. ಈ ಕ್ರಮ ಜಾರಿಗೆ ತರಲು ಇರಬಹುದಾದ ಸಣ್ಣಪುಟ್ಟ ತಾಂತ್ರಿಕ ಅಡೆತಡೆಗಳನ್ನು ಸರಕಾರ ಆದ್ಯತೆಯ ಮೇಲೆ ದೂರ ಮಾಡಲಿ. ಈ ಕ್ರಮದಿಂದ ದಿನಂಪ್ರತಿ 40ರಿಂದ 45 ಲಕ್ಷ ಜನರು ರಸ್ತೆಗಿಳಿಯುವುದನ್ನು ತಡೆಗಟ್ಟಲು ಸಾಧ್ಯ. ಐಟಿ ಹೊರತುಪಡಿಸಿ ಇತರ ಕೈಗಾರಿಕಾ ವಲಯಗಳಲ್ಲಿ, ಯಾವ ಯಾವ ಕಚೇರಿಯಲ್ಲಿ ಎಷ್ಟು ಪರ್ಸೆಂಟ್ ವರ್ಕ್ ಫ್ರಂ ಹೋಂ ಮಾಡಲು ಸಾಧ್ಯ ಎಂಬುದನ್ನು ಆಯಾ ಕಂಪೆನಿ, ಕಚೇರಿಗಳಿಂದ ಮಾಹಿತಿ ಪಡೆದು ಮುಚ್ಚಳಿಕೆ ಬರೆಸಿಕೊಂಡು ಕ್ರಮ ಜಾರಿಗೆ ನಿರ್ದೇಶನ ನೀಡಲಿ. ಲಾಕ್‌ಡೌನ್ ತೆರವು ಮಾಡಿದರೂ ಕೊರೊನಾ ಬಾಧಿಸದು.

4. ಪಾಳಿ ವ್ಯವಸ್ಥೆ ಕಡ್ಡಾಯವಾಗಲಿ
ಕೆಲವು ಕೈಗಾರಿಕಾ ವಲಯಗಳಲ್ಲಿ ವರ್ಕ್ ಫ್ರಂ ಹೋಂ ಪ್ರಾಯೋಗಿಕವಾಗಿ ಅಸಾಧ್ಯದ ಮಾತು. ಅಂತಹ ವಲಯದ ಕೈಗಾರಿಕೆಗಳನ್ನು ಸರಕಾರ ವೈಜ್ಞಾನಿಕವಾಗಿ ಪಟ್ಟಿ ಮಾಡಲಿ. ಅಲ್ಲೆಲ್ಲಾ ಶಿಫ್ಟ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿ. ಒಂದು ಶಿಫ್ಟ್ ಇರುವ ಕಡೆ ಎರಡು, ಎರಡು ಶಿಫ್ಟ್ ಇರುವ ಕಡೆ ಮೂರು ಮಾಡಲಿ. ಸಾಧ್ಯವಾದರೆ ಆರು ತಾಸಿನ ನಾಲ್ಕು ಪಾಳಿಗಳನ್ನೂ ಮಾಡಲು ಸಾಧ್ಯ. ಇದರಿಂದ ಪರಿಣಾಮಕಾರಿ ಸೋಷಿಯಲ್ ಡಿಸ್ಟೆನ್ಸಿಂಗ್ ಸಾಧ್ಯ. ವರ್ಕ್ ಫ್ರಂ ಹೋಮ್ ಮತ್ತು ಬಹು ಹಂತಗಳ ಶಿಫ್ಟ್ ಜಾರಿಯಿಂದ ಬೆಂಗಳೂರಿನಂತಹ ನಗರಗಳಲ್ಲಿ ಟ್ರಾಫಿಕ್ ಕಿರಿಕಿರಿ ಏಕ್‌ದಮ್‌ ಕಡಿಮೆ ಆಗಲಿದೆ. ಕಚೇರಿ ಸ್ಥಳದ ಗರಿಷ್ಠ ಸದ್ಬಳಕೆ ಹೆಚ್ಚಾಗಿ ಕಂಪೆನಿಗಳ ನಷ್ಟದ ಪ್ರಮಾಣ ಕಡಿಮೆ ಆಗಲಿದೆ. ಅಪಾರ ಪ್ರಮಾಣದ ಇಂಧನ ಉಳಿತಾಯ ಆಗಲಿದೆ.

5. ಸಾರ್ವಜನಿಕ ಸಾರಿಗೆ ಇನ್ನೂ ಮೂರು ತಿಂಗಳು ಬೇಡ
ಸರಕಾರಿ ಬಸ್, ಖಾಸಗಿ ಬಸ್, ರೈಲು, ಮೆಟ್ರೋ ಇತ್ಯಾದಿಗಳು ಕಾರ್ಯ ನಿರ್ವಹಿಸಲು ಇನ್ನೂ ಮೂರು ತಿಂಗಳು ಅಥವಾ ಕೊರೊನಾಕ್ಕೆ ಸೋಂಕಿಗೆ ಔಷಧ ಕಂಡು ಹಿಡಿಯುವವರೆಗೆ ಅವಕಾಶ ಕೊಡುವುದು ಬೇಡ. ಒಂದು ವೇಳೆ, ಸಾರ್ವಜನಿಕ ಸಾರಿಗೆ ಶುರು ಮಾಡುವುದೇ ಆದರೆ ಅದರಲ್ಲಿ ಪ್ರಯಾಣಿಸುವವರು ಸೋಷಿಯಲ್ ಡಿಸ್ಟೆನ್ಸಿಂಗ್ ಉಲ್ಲಂಘಿಸದಂತೆ ನೋಡಿಕೊಳ್ಳಲು ಗರಿಷ್ಠ ಕಠಿಣ ನಿಯಮ ರೂಪಿಸಬೇಕು. ಉಲ್ಲಂಘನೆಗೆ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕ ಮೂವರನ್ನೂ ಹೊಣೆ ಮಾಡಿ. ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆಯನ್ನು ಶುರು ಮಾಡುವುದಾದರೆ ಸೀಮಿತ ಅವಧಿಗೆ ಮಾಡಬೇಡಿ. ಅದು 24/7 ಸೇವೆ ನೀಡುವ ಹಾಗೆ ಆದೇಶ ಮಾಡಿ. ಆಗ ಅದರ ಸಂಪೂರ್ಣ, ಸುರಕ್ಷಿತ ಉಪಯೋಗ ಸಾಧ್ಯ. 24/7 ನಗರದ ಕಲ್ಪನೆಗೂ ಪೂರಕ.

6. ವೈಯಕ್ತಿಕ ಸಾರಿಗೆಗೆ ಪ್ರೋತ್ಸಾಹಿಸಿ
ಕಚೇರಿಗೆ, ಕಾರ್ಖಾನೆಗೆ ಬರುವವರು ಒಂದಲ್ಲ ಒಂದು ವಾಹನ ಅವಲಂಬಿಸಲೇಬೇಕು. ಹೀಗಾಗಿ ಯಾರೆಲ್ಲ ವೈಯಕ್ತಿಕ ವಾಹನ ಹೊಂದಿದ್ದಾರೋ ಅವರೆಲ್ಲರೂ ವೈಯಕ್ತಿಕ ವಾಹನವನ್ನೇ ಬಳಸಲು ಸೀಮಿತ ಅವಧಿಗೆ ಸರಕಾರ ಸ್ಪಷ್ಟ ನಿರ್ದೇಶನ ನೀಡಬೇಕು. ಅದಕ್ಕೆ ಪೂರಕವಾಗಿ ವೈಯಕ್ತಿಕ ವಾಹನ ಬಳಕೆದಾರರಿಗೆ ಆಕರ್ಷಕ ಪೋತ್ಸಾಹ ನೀಡಲು ಸರಕಾರಕ್ಕೆ ಸಾಧ್ಯವಾದರೆ ಅದಕ್ಕಿಂತ ಉತ್ತಮ ನಡೆ ಬೇರೊಂದಿಲ್ಲ. ಜಾಗತಿಕವಾಗಿ ತೈಲಬೆಲೆ ಪಾತಾಳಕ್ಕೆ ಕುಸಿದಿರುವುದರಿಂದ ತೈಲ ಬೆಲೆಯನ್ನು ತಗ್ಗಿಸಿದರೆ ಅದಕ್ಕಿಂತ ಉತ್ತಮ ಉಪಕ್ರಮ ಇನ್ನೊಂದಿರಲಾರದು.

7. ಬೆಂಗಳೂರು ಮೇಲಿನ ಒತ್ತಡ ಕಡಿಮೆಯಾಗಲಿ
ಮೈಸೂರು, ತುಮಕೂರು, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗದಂತಹ ಎರಡನೇ ಸ್ತರದ ನಗರಗಳ ಬೆಳವಣಿಗೆಗೆ ಸರಕಾರ ಅಗತ್ಯ ಪೋತ್ಸಾಹ ನೀಡದಿರುವುದೇ, ಮುಂದಾಲೋಚನೆ ಅಳವಡಿಸಿಕೊಳ್ಳದೇ ಇರುವುದೇ ಬೆಂಗಳೂರು ನಗರದ ಮೇಲೆ ವಿಪರೀತ ಒತ್ತಡ ಹೆಚ್ಚಾಗಲು ಕಾರಣ. ಹೀಗಾಗಿ ಇನ್ನು ಮುಂದೆ ಯಾವುದೇ ಯೋಜನೆ ರೂಪಿಸುವಾಗ ಎರಡನೇ ದರ್ಜೆಯ ನಗರಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನೀತಿ ರೂಪಿಸುವ ಸಂಕಲ್ಪ, ಘೋಷಣೆ ಮಾಡಲು ಸರಕಾರ ಮುಂದಾದರೆ ಒಳ್ಳೆಯದು. ಕೆಲ ಕಂಪೆನಿಗಳ ಕಾರ್ಯನಿರ್ವಹಣೆ, ಕಚೇರಿಗಳನ್ನು ಈ ನಗರಗಳಿಗೆ ಸ್ಥಳಾಂತರಿಸಬಹುದು.

8. ಸಡಿಲಿಕೆ ಕೈಗಾರಿಕೆ/ವ್ಯಾಪಾರ ವಹಿವಾಟಿಗೆ ಸೀಮಿತವಾಗಲಿ
ಸರಕಾರ ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆ ಮಾಡುತ್ತಿರುವುದು ವೈಜ್ಞಾನಿಕ ಕ್ರಮ ಎನ್ನಲೇಬೇಕು. ಇನ್ನೂ ಕನಿಷ್ಠ ಮೂರು ತಿಂಗಳು ಇದೇ ತೆರನಾದ ನಿಗಾ ಬೇಕು. ಈಗ ಸಡಿಲಿಸುವ ಲಾಕ್‌ಡೌನ್ ನಿರ್ಬಂಧ ವ್ಯಾಪಾರ ವಹಿವಾಟು, ಕೈಗಾರಿಕಾ ವಲಯದ ಚಟುವಟಿಕೆಗೆ ಸೀಮಿತವಾಗಲಿ.

9. ಖಾಸಗಿ ಸಭೆ ಸಮಾರಂಭ ಸಲ್ಲದು
ಮದುವೆ, ಮುಂಜಿ, ಹುಟ್ಟು ಹಬ್ಬ ಆಚರಣೆ, ನೈಟ್ ಪಾರ್ಟಿಗಳು, ಸಾರ್ವಜನಿಕ ಸಮಾರಂಭಗಳನ್ನು ಮುಂದಿನ ಆದೇಶದವರೆಗೆ ಕಡ್ಡಾಯವಾಗಿ ನಿರ್ಬಂಧಿಸುವುದು ಉತ್ತಮ.

10. ಹೊಟೇಲುಗಳಿಂದ ಕೇವಲ ಪಾರ್ಸೆಲ್ ಸೇವೆ
ಕನಿಷ್ಠ ಇನ್ನೊಂದು ತಿಂಗಳು ಹೋಟೆಲುಗಳಲ್ಲಿ ಕೌಂಟರ್ ಸೇಲ್ ಅಥವಾ ಸೆಲ್ಫ್‌ ಸರ್ವಿಸಿಗೆ ಮಾತ್ರ ಸೀಮಿತವಾಗಿ ಪರವಾನಗಿ ನೀಡುವುದು ಉತ್ತಮ.

11. ಮದ್ಯ ಮಾರಾಟಕ್ಕೆ ಏನು ಕ್ರಮ
ಕಳೆದ 40 ದಿನಗಳಿಂದ ಮದ್ಯ ಸರಬರಾಜು ನಿಂತಿರುವುದರಿಂದ ಸಂಪೂರ್ಣ ಮದ್ಯ ಮಾರಾಟ ನಿಷೇಧದ ಚರ್ಚೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಇನ್ನೂ ಸಾಕಷ್ಟು ಚರ್ಚೆ ಮತ್ತು ಸಿದ್ಧತೆಗಳು ಬೇಕೇ ಬೇಕು. ಈಗ ಕೊರೊನಾ ಸಂಕಷ್ಟದಿಂದ ಪಾರಾಗುವುದಕ್ಕೆ ಮಾತ್ರ ಯೋಚನೆ ಮಾಡುತ್ತಿರುವುದರಿಂದ ಮದ್ಯದಂಗಡಿ ಓಪನ್ ಮಾಡುವುದರ ಬಗ್ಗೆ ಕೂಲಂಕಷ ಚರ್ಚಿಸಿ ನಿರ್ಧರಿಸಿ ರೀಟೇಲ್ ಔಟ್‌ಲೆಟ್‌ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಬಹುದು.

12. ಕಂಟೈನ್ಮೆಂಟ್ ಮನೆಗೆ ಸೀಮಿತಗೊಳಿಸಿ
ಈಗ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದ ತಕ್ಷ ಣ ಇಡೀ ಏರಿಯಾವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಇದು ಸರಿಯಲ್ಲ. ಒಬ್ಬರ ಕಾರಣಕ್ಕೆ ಒಂದಿಡೀ ಏರಿಯಾದ ಜನರು ಯಾಕಾಗಿ ಕಷ್ಟಪಡಬೇಕು. ಅದರ ಬದಲಾಗಿ ಯಾವೊಂದು ಮನೆಯಲ್ಲಿ ಪಾಸಿಟಿವ್ ಕೇಸ್ ಕಂಡು ಬರುತ್ತದೋ ಆ ಮನೆಯನ್ನು ಮಾತ್ರ ಕಂಟೈನ್ಮೆಂಟ್ ಮಾಡಿದರೆ ಸಾಕು. ಮುನ್ನೆಚ್ಚರಿಕೆ ಕ್ರಮವಾಗಿ ಬೇಕಾದರೆ ಆ ಏರಿಯಾದಲ್ಲಿ ಆ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿ.

13. ಬೇಜವಾಬ್ದಾರಿ ಜನರನ್ನು ವಿಂಗಡಿಸಿ
ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಇದು ಬಹಳ ಮುಖ್ಯ ಕ್ರಮ. ವಿನಾಕಾರಣ ರೋಗಕ್ಕೆ ತುತ್ತಾಗುವವರು ಮತ್ತು ಬೇಜವಾಬ್ದಾರಿಯಿಂದ ತಾವೂ ರೋಗಕ್ಕೆ ತುತ್ತಾಗಿ ಇತರರನ್ನೂ ಸಂಕಷ್ಟಕ್ಕೆ ದೂಡುವ ಎರಡು ತೆರನಾದ ಜನರಿರುತ್ತಾರೆ. ಹೀಗಾಗಿ ರೋಗಿಯ ಹಿಸ್ಟರಿಯನ್ನು ಕೂಲಕಂಷವಾಗಿ ಅವಲೋಕನ ಮಾಡಿ, ಬೇಜವಾಬ್ದಾರಿಯಿಂದ ಸೋಂಕು ಪಡೆಯುವವರನ್ನು ಮತ್ತು ಹರಡಿಸುವವರನ್ನು ಕಪ್ಪು ಪಟ್ಟಿಗೆ ಸೇರಿಸಿ. ಬೇಜವಾಬ್ದಾರಿಯಿಂದ ರೋಗ ಹರಡಲು ಕಾರಣರಾದವರ ಹೆಸರನ್ನು ಬಹಿರಂಗವಾಗಿ ಪ್ರಕಟಿಸಿ. ಅಂಥವರನ್ನು ಕಠಿಣ ದಂಡನೆಗೆ ಗುರಿಪಡಿಸಿ.

14. ಮಕ್ಕಳು/ವೃದ್ಧರಿಗೆ ವಿಶೇಷ ನಿಗಾ ಬೇಕು
ಮಕ್ಕಳು/ವೃದ್ಧರಿಗೆ ಕೊರೊನಾಘಾತದ ಅಪಾಯ ಹೆಚ್ಚಿರುವುದರಿಂದ ಈ ಎರಡು ಗುಂಪಿನವರ ಮೇಲೆ ನಿಗಾ ಇಡಲು ವಿಶೇಷ ಡ್ರೈವ್ ನಡೆಸಲು ಸರಕಾರ ಚಿಂತಿಸಬೇಕು.

15. ಶೈಕ್ಷಣಿಕ ಯೋಜನೆ ಹೀಗಿರಲಿ
ಇನ್ನೆನು ಶೈಕ್ಷ ಣಿಕ ವರ್ಷ ಆರಂಭವಾಗುತ್ತದೆ. ಶಾಲಾ ಕಾಲೇಜುಗಳು ಸೋಂಕು ಹರಡುವಿಕೆಯ ತಾಣಗಳಾಗುವ ಅಪಾಯವಿರುವುದರಿಂದ, ಮಕ್ಕಳಿಗೆ ಕೊರೊನಾ ಅಪಾಯ ಹೆಚ್ಚಿರುವುದರಿಂದ ಮುಂದಿನ ಮೂರು ತಿಂಗಳು ಶಾಲಾ ಕಾಲೇಜು ಆರಂಭವನ್ನು ಮುಂದೂಡುವುದು ಸೂಕ್ತ. ಅದಕ್ಕೆ ಪರ್ಯಾಯವಾಗಿ ತಂತ್ರಜ್ಞಾನ ಬಳಸಿ ಕಲಿಕೆಗೆ ಪೋತ್ಸಾಹ ಕೊಡಬಹುದು. ಮೂರು ತಿಂಗಳು ಕಲಿಕಾ ಅವಧಿ ಕಡಿಮೆ ಆಗುವುದರಿಂದ ಸಿಲಬಸ್ ಕಡಿಮೆ ಮಾಡುವ ಬದಲು ಟೆಸ್ಟು ಪರೀಕ್ಷೆಗಳನ್ನು ಕಡಿತಗೊಳಿಸಿ ಆ ಅವಧಿಯನ್ನು ಕಲಿಕೆಗೆ ಬಳಸಬಹುದು. ಶಾಲೆ ಆರಂಭವಾದ ಮೇಲೆ ದಿನವೂ ಒಂದು ತಾಸು ಹೆಚ್ಚುವರಿ ಪಾಠ ಮಾಡಿಯೂ ಸರಿದೂಗಿಸಬಹುದು. ಈ ಬಗ್ಗೆ ಗಂಭೀರ ಗಮನ ಬೇಕು.

16. ಬೆಂಗಳೂರಿಗೆ ಬೇಕಿದೆ ವಿಶೇಷ ಮುತುವರ್ಜಿ
ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳನ್ನು ಸರಕಾರ ಪ್ರತ್ಯೇಕವಾಗಿ ನೋಡಬೇಕು. ಸದ್ಯಕ್ಕೆ ಬೆಂಗಳೂರು ರೆಡ್ ಝೋನ್‌ನಲ್ಲಿದೆ. ರಾಜ್ಯದ ಅನೇಕ ಜಿಲ್ಲೆಗಳು ಗ್ರೀನ್ ಝೋನ್‌ನಲ್ಲಿವೆ. ಆ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಸಬಹುದು. ಆದರೆ ಇಡೀ ರಾಜ್ಯದ ನರಮಂಡಲದ ಕೇಂದ್ರವಾಗಿರುವ ಬೆಂಗಳೂರು ಸುರಕ್ಷಿತವಾಗಿ ಮತ್ತು ಮೊದಲಿನ ಹಾಗೆ ಲವಲವಿಕೆಗೆ ಬರದೇ ಹೋದರೆ ಇಡೀ ರಾಜ್ಯ ಸುಲಭದಲ್ಲಿ ಅಷ್ಟು ಬೇಗ ಆರ್ಥಿಕವಾಗಿ ಮತ್ತು ಔದ್ಯಮಿಕವಾಗಿ ಚೇತರಿಸಿಕೊಳ್ಳಲಾರದು.

ಓದುಗರ ಒಡಲಾಳ
ರೈಟ್ ಆಫ್ ಎಂಬುದು ಬ್ಯಾಂಕಿಂಗ್ ಆಡಿಟ್‌ನ ಪ್ರಮುಖ ಭಾಗ. ಬ್ಯಾಂಕ್‌ಗಳು ತಮ್ಮ ಕಾರ್ಯಕ್ಷಮತೆ ಕಾಪಾಡುವ ದೃಷ್ಟಿಯಿಂದ ವಸೂಲಾಗದ ಸಾಲ, ಅದರ ಬಡ್ಡಿ ಇತ್ಯಾದಿ ಅನುತ್ಪಾದಕ ಹೊರೆಯನ್ನು ವಾರ್ಷಿಕ ಬ್ಯಾಲೆನ್ಸ್ ಶೀಟ್‌ನಿಂದ ಹೊರಗಿಡುವುದು ಸಾಮಾನ್ಯ ಕ್ರಮ. ಅದು ಗೊತ್ತಿದ್ದವರು, ಗೊತ್ತಿಲ್ಲದವರಿಬ್ಬರೂ ಶ್ರೀಮಂತ ಮೋಸಗಾರರ ಸಾಲಮನ್ನಾ ಎಂದು ಗುಲ್ಲೆಬ್ಬಿಸುತ್ತಿದ್ದಾರೆ. ಆ ಬಗ್ಗೆ ಬೆಳಕು ಚೆಲ್ಲಿ.
– ಆನಂದ ಕಾಮತ್ ಹೊನ್ನಾವರ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top