ಯುವ ಜನರಿಗೆ ಕೌಶಲ್ಯ ಕಲಿಸುವ, ಉದ್ಯಮಶೀಲತೆ ಬೆಳೆಸುವ, ಹೆಚ್ಚೆಚ್ಚು ಜನರಿಗೆ ಕೆಲಸ ಕೊಡುವ ಸಾಮರ್ಥ್ಯವನ್ನು ಬೆಳೆಸಿದರೆ ಕರ್ನಾಟಕದ ಆರ್ಥಿಕತೆ ಸಬಲವಾಗುತ್ತದೆಯೇ ವಿನಃ ಕೆಲಸ ಕೊಡದೆ ಮನೆಯಲ್ಲಿ ಕೂರಿಸಿ ತಿಂಗಳಿಗೆ ಮೂರು ಸಾವಿರ ರೂ. ನೀಡುವುದರಿಂದಲ್ಲ.
…………,……
“ಭಾರತದ ವಿಕಾಸ ಯಾತ್ರೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಆಡಳಿತ ಆರಂಭಿಸಿದಾಗ 2014ರಲ್ಲಿ 10ನೇ ಪ್ರಬಲ ಆರ್ಥಿಕತೆಯಾಗಿತ್ತು ಭಾರತ. ನಮ್ಮ ಮೊದಲ ಅವಧಿಯಲ್ಲಿ ಐದನೇ ಅತಿ ದೊಡ್ಡ ಆರ್ಥಿಕತೆ ಆಯಿತು. ನಮ್ಮ ಮೂರನೇ ಅವಧಿಯಲ್ಲಿ ಮೂರನೇ ಅತಿ ದೊಡ್ಡ ಆರ್ಥಿಕತೆ ಆಗುತ್ತದೆ”. ಇದು ಜುಲೈ 26ರಂದು ನವದೆಹಲಿಯಲ್ಲಿ ಬೃಹತ್ ಗಾತ್ರದ “ಭಾರತ ಮಂಟಪಂ” ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತಿದು.
ಮೋದಿಯವರಷ್ಟೆ ಅಲ್ಲ, 2027ರ ವೇಳೆಗೆ ಭಾರತ ಮೂರನೆ ಅತಿ ದೊಡ್ಡ ಆರ್ಥಿಕತೆ ಆಗುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. 2028ಕ್ಕೆ ಭಾರತದ ಮೂರನೇ ಅತಿ ದೊಡ್ಡ ಆರ್ಥಿಕತೆ ಆಗುತ್ತದೆ ಎಂದು ಕಳೆದ ವರ್ಷವೇ ಎಸ್ಬಿಐ ಸಮೀಕ್ಷೆಯೂ ಹೇಳಿದೆ. ಅಷ್ಟೆಅಲ್ಲ, 2075ರ ವೇಳೆಗೆ ಭಾರತವು ಅಮೆರಿಕವನ್ನೂ ಹಿಂದಿಕ್ಕಿ ಎರಡನೆಯ ಅತಿ ದೊಡ್ಡ ಆರ್ಥಿಕತೆ ಆಗುತ್ತದೆ ಎಂದೂ ವರದಿಗಳು ಹೇಳುತ್ತಿವೆ. ಈ ಮಾರ್ಗದಲ್ಲಿ ಜಪಾನ್ ಹಾಗೂ ಜರ್ಮನಿಯನ್ನೂ ಭಾರತ ಹಿಂದಿಕ್ಕುತ್ತದೆ. 2014ರಿಂದೀಚೆಗೆ ಮೋದಿ ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣೆಗಳ ಪರಿಣಾಮ ಈ ಬೆಳವಣಿಗೆ ಸಾಧ್ಯ ಎಂದು ವರದಿಗಳು ಹೇಳುತ್ತವೆ. ಹಿಂದಿನ ಸರ್ಕಾರಗಳು ಹೇಗೆ ನಿರ್ಧಾರ ಕೈಗೊಂಡವು, ವಿದೇಶಿ ಹೂಡಿಕೆಯನ್ನು ಹೇಗೆ ಆಕರ್ಷಿಸಿದವು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವ ನಿರ್ಧಾರ ಕೈಗೊಂಡಿತು ಎಂಬ ಇತ್ಯಾದಿ ವಿಚಾರಗಳನ್ನು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ನಾವು ಆರ್ಥಿಕ ದೃಷ್ಟಿಕೋನದ ಬದಲಿಗೆ ಸಾಮಾನ್ಯ ಸಾಮಾಜಿಕ ಸನ್ನಿವೇಶದಲ್ಲಿ ವಿಚಾರ ನೋಡೋಣ.
ಕೋವಿಡ್ ಸಂದರ್ಭದಲ್ಲಿ ಒಂದು ವೇಳೆ ನಮ್ಮ ದೇಶದಲ್ಲಿ ಯುಪಿಐ ವಹಿವಾಟು ವಿಕಸಿತ ಆಗಿಲ್ಲದಿದ್ದರೆ ಏನಾಗುತ್ತಿತ್ತು? ಇಷ್ಟು ಹೊತ್ತಿಗೆ ಮೊಬೈಲ್ ಇಂಟರ್ನೆಟ್ ಹಳ್ಳಿ ಹಳ್ಳಿಗೆ ತಲುಪಿಲ್ಲದಿದ್ದರೆ ಏನಾಗುತ್ತಿತ್ತು? ಈ ಸಮಯದಲ್ಲಿ ದೇಶದ ಜನರಿಗೆ ನೀಡಲು ಅಗತ್ಯವಾದ ಆಹಾರ ಧಾನ್ಯದ ಸಂಗ್ರಹ ಇಲ್ಲದಿದ್ದರೆ ಏನಾಗುತ್ತಿತ್ತು? ಫೋನ್ ಮೂಲಕ ಬುಕ್ ಮಾಡಿದ ಉತ್ಪನ್ನಗಳು ಮನೆಬಾಗಿಲಿಗೆ ಬರುವ ಇ ಕಾಮರ್ಸ್ ವ್ಯಾಪಕತೆ ಪಡೆಯದೇ ಇದ್ದಿದ್ದರೆ ಏನಾಗುತ್ತಿತ್ತು? ಇಂತಹ ಪ್ರಶ್ನೆಗಳನ್ನು ನಾವು ಕೇಳಿಕೊಂಡಿದ್ದೇವೆಯೇ? ಇವೆಲ್ಲವೂ ಆಗಿಹೋಗಿವೆಯಲ್ಲ? ಈಗೇಕೆ ಪ್ರಶ್ನಾರ್ಥಕ, ಊಹಾತ್ಮಕ ಮಾತುಗಳು ಎಂದು ಯಾರಾದರೂ ಕೇಳಬಹುದು.
ಇಂತಹ ಪ್ರಶ್ನೆಗಳನ್ನು ಕೇಳಿಕೊಂಡರೆ ನಾವು ಹೇಗೆ ಕೋವಿಡ್ ಸಮಯದಲ್ಲಿ ಅದನ್ನು ಎದುರಿಸಿ ಹೊರಬಂದೆವು ಎನ್ನುವುದು ತಿಳಿಯುತ್ತದೆ. ಒಬ್ಬರ ಕೈಯಿಂದ ಇನ್ನೊಬ್ಬರು ಏನನ್ನೂ ಪಡೆದುಕೊಳ್ಳುವುದೇ ಅಪಾಯ ಎಂದಿದ್ದ ಸಮಯದಲ್ಲಿ ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಅನುಕೂಲ ಜನರಿಗೆ ಒದಗಿತ್ತು. ಪ್ರಧಾನಿ ನರೇಂದ್ರ ಮೋದಿಯವರಿಗೆ ತಂತ್ರಜ್ಞಾನದ ಕುರಿತು ಅಪಾರ ಆಸಕ್ತಿ. ಹೀಗಾಗಿಯೇ ದೇಶದಲ್ಲಿ ಮೊಬೈಲ್ ಬ್ಯಾಂಕಿಂಗ್, ಯುಪಿಐನಂತಹ ಉಪಕ್ರಮಗಳಿಂದಾಗಿ ಡಿಜಿಟಲ್ ಆರ್ಥಿಕತೆಯತ್ತ ದೇಶ ದಾಪುಗಾಲು ಹಾಕಿತು. ಡಿಮಾನೆಟೈಸೇಷನ್ ಕಾರಣದಿಂದಲೂ ಅನಿವಾರ್ಯವಾಗಿ ಆರ್ಥಿಕ ಚಟುವಟಿಕೆ ವೇಗವಾಗಿ ಡಿಜಿಟಲ್ ಆಯಿತು. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹಾಗೆಯೇ ಕಾಂಗ್ರೆಸ್ ಸಮಯದಲ್ಲಿ ಇಂಟರ್ನೆಟ್ ವ್ಯವಸ್ಥೆಗೆ ಸಿಕ್ಕ ಪ್ರೋತ್ಸಾಹವನ್ನೂ ಯಾರೂ ಮರೆಯುವಂತಿಲ್ಲ. ವಿಶೇಷವಾಗಿ ರಾಜೀವ್ ಗಾಂಧಿ ಈ ಕುರಿತು ಬಹು ಮುಖ್ಯ ನಿರ್ಧಾರ ಕೈಗೊಂಡಿದ್ದರು. ಕೋವಿಡ್ ಸಮಯದಲ್ಲಿ ಅಷ್ಟು ಪ್ರಮಾಣದ ಆಹಾರ ಧಾನ್ಯ ಸಂಗ್ರಹಣೆಯನ್ನು ಮೋದಿ ಸರ್ಕಾರದ ಅವಧಿಯಲ್ಲೇ ಮಾಡಲಾಗಿತ್ತು. ಆದರೆ ಒಟ್ಟಾರೆ ಆಹಾರ ಸಂಗ್ರಹದ ವ್ಯವಸ್ಥೆ, ಆಹಾರ ಧಾನ್ಯದಲ್ಲಿ ಸ್ವಾವಲಂಬಿಯಾಗುವ ಹಸಿರು ಕ್ರಾಂತಿ ನಡೆದಿದ್ದು ಕಾಂಗ್ರೆಸ್ ಸಮಯದಲ್ಲೆ ಅಲ್ಲವೇ? ನಾವೀಗ ಅಮೃತಕಾಲದಲ್ಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಆಗಿಂದಾಗ್ಗೆ ಹೇಳಿದ್ದಾರೆ. ಆದರೆ ಈ ಅಮೃತಕಾಲದಲ್ಲಿ ನಾವು ಒಬ್ಬರ ಮೇಲೊಬ್ಬರು ವಿನಾಕಾರಣ ಆರೋಪ ಪ್ರತ್ಯಾರೋಪ ಮಾಡುವುದರಿಂದ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿಸಲು ಸಾಧ್ಯವಿಲ್ಲ. ಎಲ್ಲ ಸರ್ಕಾರಗಳೂ ದೇಶದ ಏಳಿಗೆಗೆ ಒಂದಷ್ಟು ಕೊಡುಗೆಗಳನ್ನು ಕೊಟ್ಟೇ ಇವೆ ಎನ್ನುವುದು ಸತ್ಯ. ಹೌದು. ಕಾಂಗ್ರೆಸಿಗರು ಹೇಳುವಂತೆ ಆಧಾರ್ ಆರಂಭಿಸಿದ್ದು ಕಾಂಗ್ರೆಸ್. ಆದರೆ ಅದಕ್ಕೆ ಅತ್ಯಂತ ಹೆಚ್ಚಿನ ವೇಗ ನೀಡಿದ್ದು ನರೇಂದ್ರ ಮೋದಿ ಎನ್ನುವುದನ್ನೂ ಹೇಳಲೇಬೇಕು. ಇಲ್ಲದಿದ್ದರೆ ಮುಂದಿನ 5-10 ವರ್ಷದಲ್ಲಿ ಅದು ಸಾಕಾರವಾಗುತ್ತಿತ್ತು.
ಇತ್ತೀಚೆಗೆ ಕಾಂಗ್ರೆಸ್ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವರೂ ಆದ ಮಣಿ ಶಂಕರ್ ಅಯ್ಯರ್ ಅವರ ಲೇಖನವೊಂದನ್ನು ಓದುತ್ತಿದ್ದೆ. ಭಾರತ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತೇನೋ ಸರಿ, ಆದರೆ ಕಾಂಗ್ರೆಸ್ ಅವಧಿಗಿಂತ ಭಾರತ 100 ಅಂಶಗಳಷ್ಟು ಬೆಳವಣಿಗೆ ಕುಂಠಿತಗೊಂಡಿದೆ ಎನ್ನುವುದು ಅವರ ವಾದ. ಯುಪಿಎ ಅವಧಿಯಲ್ಲಿ ದೇಶದ ಬೆಳವಣಿಗೆ ದರ 183 ಶೇಕಡಾ ಅಂಶವಿದ್ದದ್ದು ಈಗ 2014ರಿಂದೀಚೆಗೆ 83 ಶೇಕಡಾ ಅಂಶಕ್ಕೆ ಕುಸಿದಿದೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ಕಾಂಗ್ರೆಸ್ ಸರ್ಕಾರದ ದರದಲ್ಲೇ ಸಾಗಿದ್ದರೆ ಇಷ್ಟು ಹೊತ್ತಿಗಾಗಲೇ ಭಾರತವು ಜಪಾನ್ ಹಾಗೂ ಜರ್ಮನಿಯನ್ನು ಹಿಂದಿಕ್ಕುತ್ತಿತ್ತಂತೆ. ನಾವು 2027ಕ್ಕೆ ಮೂರನೇ ಆರ್ಥಿಕತೆ ಆದರೂ ಮೊದಲ ಹಾಗೂ ಎರಡನೇ ಆರ್ಥಿಕತೆಯಾದ ಅಮೆರಿಕ ಹಾಗೂ ಚೀನಾ ಹೋಲಿಕೆಯಲ್ಲಿ ಸಾಕಷ್ಟು ಹಿಂದಿರುತ್ತದೆ. ಅಮೆರಿಕದ ಹೋಲಿಕೆಯಲ್ಲಿ 8 ಪಟ್ಟು ಹಾಗೂ ಚೀನಾ ಹೋಲಿಕೆಯಲ್ಲಿ 5 ಪಟ್ಟು ಕಡಿಮೆ ಗಾತ್ರ ಹೊಂದಿರುತ್ತದೆ, ಇತ್ಯಾದಿ ಇತ್ಯಾದಿ… ಹೀಗೆ ನಕಾರಾತ್ಮಕ ಅಂಶಗಳನ್ನು ಬಿತ್ತುವುದರಿಂದ ಇವರಿಗೆ ಯಾವ ಲಾಭವಿದೆಯೋ ಗೊತ್ತಿಲ್ಲ.
ಭಾರತದ ಆರ್ಥಿಕತೆಯು ಮೂರನೇ ಸ್ಥಾನಕ್ಕೆ ಹೋಗುತ್ತದೆ ಎನ್ನುವುದು ಮೊದಲನೆಯದಾಗಿ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಬೇಕು. ಮೂರನೇ ಆರ್ಥಿಕತೆ ಎನ್ನುವುದು ತನ್ನಪಾಡಿಗೆ ತಾನೇ ಆಗಿಬಿಡುತ್ತದೆ ಎಂದಲ್ಲ. ಈ ಲೆಕ್ಕಾಚಾರಗಳನ್ನು ಮಾಡುವಾಗ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈಗಿನ ಆರ್ಥಿಕತೆಯ ಪ್ರಮಾಣ, ಅದರ ಬೆಳವಣಿಗೆ ದರ, ದೇಶದಲ್ಲಿರುವ ನೈಸರ್ಗಿಕ ಸಂಪನ್ಮೂಲ, ತಂತ್ರಜ್ಞಾನ ಬೆಳವಣಿಗೆ ಹಾಗೂ ಸಂಶೋಧನೆಯ ಸ್ಥಿತಿ ಮುಂತಾದ ಅನೇಕ ಅಂಶಗಳ ಆಧಾರದಲ್ಲಿ ಮುಂದಿನ ವರ್ಷಗಳಲ್ಲಿ ಯಾವ ಸ್ಥಿತಿಯಲ್ಲಿರಬಹುದು ಎಂದು ಅಂದಾಜಿಸಲಾಗುತ್ತದೆ. ಹಾಗಾಗಿ ಮುಂದಿನ ಭಾರತದ ಸ್ಥಿತಿ ಧನಾತ್ಮಕವಾಗಿರುತ್ತದೆ ಎಂದಾಯಿತು. ಆದರೆ ಮಣಿಶಂಕರ್ ಅಯ್ಯರ್ ಅಂಥವರ ಪ್ರಕಾರ ಭಾರತ ತನ್ನ ಸ್ಥಾನವನ್ನು ಎತ್ತರಿಸಿಕೊಳ್ಳುತ್ತಿರುವುದು ತನ್ನ ಶಕ್ತಿಯಿಂದಲ್ಲ, ಬದಲಿಗೆ 2008-09ರಲ್ಲಿ ಸಂಭವಿಸಿದ ಜಾಗತಿಕ ಆರ್ಥಿಕ ಮುಗ್ಗಟ್ಟಿನಿಂದಾಗಿ ಇತರೆ ಆರ್ಥಿಕತೆಗಳ ಬೆಳವಣಿಗೆ ಸ್ಥಗಿತವಾಗಿವೆ ಅಥವಾ ಕುಂಠಿತವಾಗಿವೆ. ಇದರಿಂದಾಗಿ ಭಾರತದ ಸ್ಥಾನ ಉತ್ತಮವಾಗುತ್ತ ಸಾಗಿದೆ ಎಂದು ಅಯ್ಯರ್ ನುಡಿಮುತ್ತು ಸುರಿಸುತ್ತಾರೆ. 2008-09ರ ಜಾಗತಿಕ ಆರ್ಥಿಕ ಮುಗ್ಗಟ್ಟಿನಿಂದ ಪ್ರಪಂಚ ತತ್ತರಿಸಿದರೆ ಭಾರತ ಏಕೆ ಅಷ್ಟೊಂದು ಹೊಡೆತ ತಿನ್ನಲಿಲ್ಲ? ಉಳಿದ ಆರ್ಥಿಕತೆಗಳು ಸ್ಥಗಿತ ಅಥವಾ ಕುಂಠಿತವಾದಾಗ ಭಾರತ ಮಾತ್ರ ಹೇಗೆ ಧನಾತ್ಮಕ ಬೆಳವಣಿಗೆಯನ್ನೇ , ನಿಧಾನವಾಗಿಯಾದರೂ, ಕಂಡಿತು? ಹಾಗಾದರೆ ಭಾರತವು ವಿಶ್ವದ ಆರ್ಥಿಕ ಕುಸಿತದಿಂದ ಪ್ರತಿರೋಧ ಬೆಳೆಸಿಕೊಂಡಿರುವುದು ಹೇಗೆ? ಈ ಬಗ್ಗೆ ಬಹುಶಃ ಮಣಿಶಂಕರ್ ಅಯ್ಯರ್ ಅಂಥವರಿಗೆ ಉತ್ತರ ತಿಳಿದಿಲ್ಲ ಅಥವಾ ತಿಳಿದಿದ್ದರೂ ಹೇಳುವುದಿಲ್ಲ.
ಭಾರತದ ಈಗಿನ ಸ್ಥಿತಿಗೆ ಇಲ್ಲಿನ ಜನಸಂಖ್ಯೆಯೇ ಆಧಾರ. ಈ ಜನಸಂಖ್ಯೆಗೆ ಇಲ್ಲಿನ ಸಂಸ್ಕೃತಿ, ಜೀವನ ದೃಷ್ಟಿಯೇ ಮಾರ್ಗಸೂಚಕ. ಹೆಚ್ಚೆಚ್ಚು ಹಣ ಗಳಿಸಬೇಕು ಎನ್ನುವುದಕ್ಕಿಂತಲೂ ಹೆಚ್ಚೆಚ್ಚು ಉತ್ತಮನಾಗುವತ್ತಲೇ ಭಾರತದ ಸಂಸ್ಕೃತಿ ನಮ್ಮನ್ನು ಪ್ರೇರೇಪಿಸುತ್ತದೆ. ಉತ್ತಮನಾಗುವ ಮಾರ್ಗದಲ್ಲಿ ಹೆಚ್ಚೆಚ್ಚು ಜನರಿಗೆ ಸಹಾಯ ಮಾಡುವ ಮೂಲಕ ಆರ್ಥಿಕ ಚಟುವಟಿಕೆಗೂ ಅನುವು ಮಾಡಿಕೊಡುತ್ತದೆ. ಇದು ಹಣಕಾಸು ಉನ್ನತಿಗೂ ಕಾರಣವಾಗುತ್ತದೆ. ನಾವೆಲ್ಲ ಶಾಲೆಯಲ್ಲಿ ಓದುತ್ತಿರುವ ಸಮಯದಲ್ಲಿ ಬಹುತೇಕ ಎಲ್ಲ ವರ್ಷವೂ ಕೇಳಿಬರುತ್ತಿದ್ದ ಮಾತು ʼಜನಸಂಖ್ಯಾ ಸ್ಫೋಟʼ ಎನ್ನುವುದು. ಭಾರತದಲ್ಲಿ ಜನಸಂಖ್ಯೆ ವಿಪರೀತವಾಗಿದೆ, ಇಲ್ಲಿ ಸಂಪನ್ಮೂಲ ಕೊರತೆಯಿದೆ, ಹೀಗೆಯೇ ಆದರೆ ಬಡತನ, ನಿರಾಶ್ರಿತರ ಸಂಖ್ಯೆ ಹೆಚ್ಚುತ್ತದೆ, ಆಹಾರದ ಕೊರತೆ ಆಗುತ್ತದೆ ಎಂಬ ಮಾತುಗಳು ಢಾಳಾಗಿ ಕೇಳಿಬರುತ್ತಿತ್ತು. ಅಯ್ಯೋ ನಾವು ಈ ಭೂಮಿಯಲ್ಲಿ ಹುಟ್ಟಿ ಪಾಪ ಮಾಡಿಬಿಟ್ಟೆವೋ ಎಂಬ ಪಾಪಪ್ರಜ್ಞೆ ಕಾಡುತ್ತಿತ್ತು. ಆದರೆ ಬಹುಶಃ ಯಾರಾದರೂ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳನ್ನು ಗಮನವಿಟ್ಟು ಕೇಳಿಸಿಕೊಂಡಿದ್ದರೆ, ಅವರು ಎಂದಿಗೂ ಜನಸಂಖ್ಯೆಯನ್ನು ಹೊಂದು ಸ್ಫೋಟ, ಹೊರೆಯಾಗಿ ನೋಡಿಯೇ ಇಲ್ಲ. ಡೆಮಾಗ್ರಫಿಕ್ ಡಿವಿಡೆಂಡ್ ಎಂದೇ ಮೋದಿ ಸಂಬೋಧಿಸುತ್ತಾರೆ. ಅಂದರೆ ಜನಸಂಖ್ಯೆ ಎನ್ನುವುದು ಒಂದು ಆಸ್ತಿಯೇ ಹೊರತು ಅನುತ್ಪಾದಕ ಸಾಲವಲ್ಲ ಎನ್ನುವುದು ಅವರ ಮಾತಿನ ಒಳಾರ್ಥ.
ಜನಸಂಖ್ಯೆ ಹೆಚ್ಚಾಯಿತು ಎಂದು ಈಗಾಗಲೆ ಸಾಕಷ್ಟು ನಿಯಂತ್ರಣ ಹೇರಲಾಗಿದೆ. ಇನ್ನೂ ನಿಯಂತ್ರಿಸಲು ಹೋದರೆ ಚೀನಾ ಸ್ಥಿತಿ ಎದುರಾಗುತ್ತದೆ. ಒಂದೇ ಮಗುವಿಗೆ ನಿರ್ಬಂಧ ಹೇರಿದ್ದರಿಂದ ಚೀನಾ ಸದ್ಯದ ಭವಿಷ್ಯದಲ್ಲೇ ಮುದುಕರ ದೇಶವಾಗುವ ಅಪಾಯ ಎದುರಿಸುತ್ತಿದೆ. ಹಾಗಾಗಿಯೇ ಈಗ ಒಂದೇ ಮಗು ನೀತಿಯನ್ನು ಕೈಬಿಟ್ಟಿದೆ. ಹಾಗಾಗಿ, ಜನಸಂಖ್ಯೆಯನ್ನು ಹೊರೆ ಎಂದು ತಿಳಿದು ಅದನ್ನು ನಿಯಂತ್ರಿಸಲು ಹರಸಾಹಸಪಟ್ಟರೆ ಅದು ನಕಾರಾತ್ಮಕ ಅಥವಾ ಕೌಂಟರ್ ಪ್ರೊಡಕ್ಟಿವ್ ಆಗುತ್ತದೆಯೇ ಹೊರತು ದೀರ್ಘಕಾಲಿಕ ಪರಿಹಾರ ನೀಡುವುದಿಲ್ಲ. ಭಾರತದ ಪ್ರತಿಯೊಬ್ಬರಲ್ಲೂ ಇದ್ದದ್ದು ಉದ್ಯಮಶೀಲತೆ.
ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ |
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ ||
ಈ ಸಂಸ್ಕೃತ ಶ್ಲೋಕದ ಅರ್ಥವೇನೆಂದರೆ, ಕಾರ್ಯ ಮಾಡುವುದರಿಂದಷ್ಟೇ ಫಲ ದೊರೆಯುತ್ತದೆ. ಕೇವಲ ಯೋಚಿಸುವುದರಿಂದಲ್ಲ. ಮಲಗಿದ್ದ ಸಿಂಹದ ಬಾಯಿಗೆ ಪ್ರಾಣಿಗಳು ಬಂದು ಬೀಳುವುದಿಲ್ಲ ಎಂದು. ಸಿಂಹ ತಾನು ಕಾಡಿನ ರಾಜ ಎಂದುಕೊಂಡು ಸುಮ್ಮನೆ ಮಲಗಿದ್ದರೆ ಪ್ರಾಣಿಗಳು ಬಂದು ಬೀಳುವುದಿಲ್ಲ. ತನ್ನ ಗಾಂಭೀರ್ಯ, ಬೇಟೆಯಾಡುವ ಗುಣದಿಂದಲೇ ಸಿಂಹ ಕಾಡಿನ ರಾಜನಾಗಿದೆ. ಬೇಟೆಯಾಡುವುದನ್ನು ಮುಂದುವರಿಸಿದರಷ್ಟೆ ಸಿಂಹದ ಹೊಟ್ಟೆ ತುಂಬುವುದು ಹಾಗೂ ಕಾಡಿನ ರಾಜ ಎಂಬ ಪಟ್ಟವೂ ಉಳಿಯುವುದು. ಭಾರತಕ್ಕೆ ಪ್ರಾಚೀನ ಸಂಸ್ಕೃತಿ ಇದೆ, ನಾಗರಿಕತೆಯಿದೆ, ಚಾಣಕ್ಯ, ಚಂದ್ರಗುಪ್, ಶಿವಾಜಿ ಮಹಾರಾಜರ ಇತಿಹಾಸವಿದೆ ಎಂದುಕೊಂಡು ಸುಮ್ಮನೆ ಕೂತರೆ ಭಾರತದ ಆರ್ಥಿಕತೆ ಮೂರನೇ ಸ್ಥಾನಕ್ಕೆ ಏರುವುದಿಲ್ಲ. ಇದರ ಬಗ್ಗೆ ಕನ್ನಡದ ಸುಂದರ ಸಾಲುಗಳು ಹೀಗಿವೆ.
ಮೂರು ಸಾಗರ ನೂರು ಮಂದಿರ ದೈವಸಾಸಿರವಿದ್ದರೆ
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ
ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ
ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತ್ತಿದರೆ!
ನಮ್ಮ ದೇಶದ ಪ್ರಾಚೀನ ಸಂಸ್ಕೃತಿಯು ನಮಗೆ ದುಡಿಮೆಯನ್ನು ಕಲಿಸಿದೆ. ಕಾಯಕವೇ ಕೈಲಾಸ ಎಂದು ಇದೇ ಮಾತನ್ನು ವಚನಕಾರರು ಅಚ್ಚ ಕನ್ನಡದಲ್ಲಿ ಹೇಳಿದರು. ಭಾರತವು ಮೂರನೇ ಆರ್ಥಿಕತೆ ಆಗಬೇಕೆಂದರೆ ಇಲ್ಲಿನ ಸಂಸ್ಕೃತಿ, ಸಂಪನ್ಮೂಲಗಳ ಆಧಾರದಲ್ಲಿ ಜನರು ದುಡಿಯುವ ಮಾನಸಿಕತೆಯನ್ನು ನಿರ್ಮಿಸಬೇಕು. ಏಕೆಂದರೆ ಕಳೆದ 75 ವರ್ಷಗಳಲ್ಲಿ ಸರ್ಕಾರಗಳ ನೀತಿಯ ಕಾರಣಕ್ಕೆ ಭಾರತೀಯರಲ್ಲಿ ಉದ್ಯಮಶೀಲತೆಯನ್ನು ನುಚ್ಚುನೂರು ಮಾಡಲಾಗಿದೆ. ಕಷ್ಟ ಪಟ್ಟು ಓದಿ ಅದರ ಪ್ರಮಾಣಪತ್ರದ ಆಧಾರದಲ್ಲಿ ಒಂದು ಕೆಲಸ ಗಿಟ್ಟಿಸಿಕೊಂಡು ಜೀವನದಲ್ಲಿ ಸೆಟಲ್ ಆಗಬೇಕು ಎಂಬ ಭಾವನೆ ಬಿತ್ತಲಾಗಿದೆ. ಒಂದು ಸರ್ಕಾರಿ ಉದ್ಯೋಗ ಇದ್ದುಬಿಟ್ಟರೆ ಸಾಕು ಮಗಳನ್ನು ಮದುವೆ ಮಾಡಿಕೊಡುತ್ತೇವೆ ಎಂಬ ವಧುವಿನ ಪೋಷಕರಿಗೆ ಕೊರತೆಯೇನಿಲ್ಲ. ಉದ್ಯಮ ಆರಂಭಿಸುವ, ಅದರಲ್ಲಿನ ಕಷ್ಟ ನಷ್ಟವನ್ನು ಅನುಭವಿಸುವ, ಮತ್ತೆ ಉದ್ಯಮ ಕಟ್ಟುವ ಮಾನಸಿಕತೆಯನ್ನು ಹಾಳುಗೆಡವಲಾಗಿದೆ. ದೊಡ್ಡ ಮನೆಯನ್ನೋ, ಐಷಾರಾಮಿ ಕಾರನ್ನೋ ನೋಡಿದ ತಕ್ಷಣ ಇವನು ಎಷ್ಟು ಜನರಿಗೆ ಮೋಸ ಮಾಡಿ ಈ ಮನೆ ಕಟ್ಟಿರಬೇಕು? ಯಾರ ತಲೆ ಒಡೆದು ಸಂಪಾದಿಸಿದನೋ? ಕಷ್ಟ ಪಟ್ಟು ದುಡಿದರೆ ಇಷ್ಟೆಲ್ಲ ಸಂಪಾದನೆ ಮಾಡೋಕೆ ಆಗುತ್ತ? ಎನ್ನುವ ಸಾಮಾನ್ಯ ಮಾನಸಿಕತೆಯನ್ನು ಬೆಳೆಸಲಾಗಿದೆ.
ಶ್ರೀಮಂತರು ಎಂದರೆ ದುಷ್ಟರು, ಬಡವರು ಎಂದರೆ ಒಳ್ಳೆಯವರು ಎಂಬ ಬೈನರಿಯನ್ನು ನಮ್ಮ ತಲೆಯಲ್ಲಿ ಕಮ್ಯುನಿಸಂ ತುಂಬಿದೆ. ಶ್ರೀಮಂತರಲ್ಲೂ ಒಳ್ಳೆಯವರಿರುತ್ತಾರೆ, ಬಡವರಲ್ಲೂ ಕೆಟ್ಟವರಿರುತ್ತಾರೆ ಎನ್ನುವುದು ಸತ್ಯವಲ್ಲವೇ? ಒಬ್ಬ ಉದ್ಯಮಿ ತಾನು ಉದ್ಯಮ ಕಟ್ಟುವಾಗ ದಿನಕ್ಕೆ 8 ಗಂಟೆ ಕೆಲಸ ಮಾಡಿರುವುದಿಲ್ಲ. ಆತನ ಪ್ರಾರಂಭಿಕ ಹತ್ತಾರು ವರ್ಷಗಳು ಮನೆ ಮಠ ಬಿಟ್ಟು ಅಲೆದಿರುತ್ತಾನೆ. ತಾನು ಹಣ ಮಾಡುವುದರ ಜತೆಗೆ ಹತ್ತಾರು, ನೂರಾರು ಜನರಿಗೆ ಕೆಲಸ ಕೊಟ್ಟಿರುತ್ತಾನೆ. ಉದ್ಯಮ ನಷ್ಟವಾದರೆ, ಕೆಲಸಕ್ಕಿರುವವರು ಹೇಗೊ ಬೇರೆ ಕೆಲಸ ನೋಡಿಕೊಳ್ಳುತ್ತಾರೆ. ಆದರೆ ಉದ್ಯಮ ಆರಂಭಿಸಿದ ವ್ಯಕ್ತಿ ಮತ್ತೆ ಶೂನ್ಯದಿಂದ ಆರಂಭಿಸುತ್ತಾನೆ. ಬಡವ-ಶ್ರೀಮಂತ ಎಂಬ ಭೇದ ಬಿತ್ತಿದ ಕಮ್ಯುನಿಸ್ಟರು 30 ವರ್ಷದಲ್ಲಿ ಪಶ್ಚಿಮ ಬಂಗಾಳವನ್ನು ಮ್ಯಾಂಚೆಸ್ಟರ್ನಿಂದ ಬರಗಾಡು ಮಾಡಿದರು. ಸಾಂಸ್ಕೃತಿಕ ಸಂಪದ್ಭರಿತ ಕೇರಳದಲ್ಲಿ ಕೈಗಾರಿಕೆಗಳ, ಉದ್ಯಮ ಸ್ಥಾಪನೆ ಬದಲಿಗೆ ವಿದೇಶಗಳಿಗೆ ಮಾನವ ರಫ್ತು ಕಾರ್ಖಾನೆ ಮಾಡಿದ್ದಾರೆ. ತನ್ನನ್ನು ಕಮ್ಯುನಿಸ್ಟ್ ಎಂದು ಹೇಳಿಕೊಳ್ಳುವ ಚೀನಾದಲ್ಲಿ ಕಮ್ಯುನಿಸಂ ಎನ್ನುವುದು ಅಲ್ಲಿನ ಧ್ವಜದಲ್ಲಿ ಮಾತ್ರ ಉಳಿದುಕೊಂಡಿದೆ.
ಭಾರತದಲ್ಲೂ ಜನರನ್ನು ಸಬಲರಾಗಿಸುವ, ಉದ್ಯಮಶೀಲವಾಗಿಸುವ ಪ್ರಯತ್ನಗಳು ನಡೆದಿವೆ. ಗುಡ್ಡಗಾಡು ಪ್ರದೇಶ, ಅನಕ್ಷರತೆಯನ್ನೇ ಹಾಸು ಹೊದ್ದಿದ್ದ ಮಧ್ಯಪ್ರದೇಶ ಚೇತಿಸಿಕೊಂಡಿದೆ. ಬಿಹಾರ, ಛತ್ತೀಸ್ಗಢ, ಜಾರ್ಖಂಡ್ ಸಹ ಮುಖ್ಯವಾಹಿನಿಗೆ ಸೇರಿಕೊಳ್ಳುತ್ತಿವೆ. ಭಾರತದ ಇತಿಹಾಸದಲ್ಲೇ ಅಭಿವೃದ್ಧಿಯ ಫಲ ಕಾಣದ ಈಶಾನ್ಯ ರಾಜ್ಯಗಳೂ ಈಗ ಭಾರತದೊಂದಿಗೆ ಬೆಸೆದುಕೊಳ್ಳುತ್ತಿವೆ. ಇಡೀ ದೇಶಕ್ಕೆ ಭಾರ ಎನ್ನಲಾಗುತ್ತಿದ್ದ ಉತ್ತರ ಪ್ರದೇಶ ಬೆಳವಣಿಗೆಯತ್ತ ಸಾಗಿದೆ. ಆದರೆ ದೇಶದ ಆರ್ಥಿಕತೆಗೆ ಅತಿ ದೊಡ್ಡ ಕೊಡುಗೆ ನೀಡುತ್ತಿರುವ ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭ್ರಷ್ಟಾಚಾರವೇ ಮುಖ್ಯ ಉದ್ಯಮವಾಗಿದೆ ಎನ್ನುವುದು ಬೇಸರದ ಸಂಗತಿ. ಇಡೀ ದೇಶದಲ್ಲಿ ಚುನಾವಣೆಗೆ ಅತಿ ಹೆಚ್ಚು ಹಣ ಖರ್ಚಾಗುವುದು ಕರ್ನಾಟಕದಲ್ಲಿ ಎಂದರೆ ನಂಬಲೇಬೇಕು. ಇಂತಹ ರಾಜ್ಯದಲ್ಲಿ ಬೆಂಗಳೂರನ್ನು ಬಿಟ್ಟರೆ ಬೇರೆ ನಗರಗಳನ್ನು ಉದ್ಯಮಶೀಲವಾಗಿಸುವ ಪ್ರಯತ್ನಗಳು ಮಾತಾಗಿಯೇ ಉಳಿದವು. ಇನ್ನು ಈಗಿನ ಸರ್ಕಾರವಂತೂ ಬಡವರ ಹೆಸರಿನ ರಾಜಕಾರಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಹಣ ಹಂಚಿಕೆ ನಡೆಯುತ್ತಿದೆ. ಬಡತನ ನಿರ್ಮೂಲನೆಗೆ ಮುಖ್ಯವಾಗಿ ಆಹಾರ ಸಮಸ್ಯೆ ನೀಗಬೇಕು. ರಾಜ್ಯದ ಜನರನ್ನು ಹಸಿವೆಯಲ್ಲಿ ಕೂರಿಸಿ ಅಭಿವೃದ್ಧಿ ಸಾಧ್ಯವಿಲ್ಲ. ಹೊಟ್ಟೆ ತುಂಬಿದ ಮೇಲೆ ಏನು? ಖರ್ಚಿಗೆ ಹಣ ಕೊಡುವುದ ಅಥವಾ ಹಣ ದುಡಿಯುವ ಮಾರ್ಗ ತೋರಿಸುವುದ? ಜನರಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬೇಕೇ ಹೊರತು ಅನುತ್ಪಾದನೆಗೆ ಪ್ರೋತ್ಸಾಹ ನೀಡುವುದಲ್ಲ. ರಾಜಕೀಯ ಲೆಕ್ಕಾಚಾರಗಳು ಏನೇ ಇರಲಿ, ಕರ್ನಾಟಕದ ಆರ್ಥಿಕತೆಗೆ ದೂರಗಾಮಿಯಾಗಿ ಇದು ಅನುತ್ಪಾದಕತೆಯಾಗಿಯೇ ಪರಿಣಮಿಸುವ ಅಪಾಯವಿದೆ.
ಮೋದಿಯವರು ಹೇಳಿದಂತೆಯಾಗಲಿ, ಐಎಂಎಫ್ ಹೇಳಿದಂತೆಯಾಗಲಿ ದೇಶ ತನ್ನಪಾಡಿಗೆ ತಾನು ಮೂರನೇ ಆರ್ಥಿಕತೆ ಆಗುವುದಿಲ್ಲ. ಅದನ್ನು ಸಾಧಿಸಬೇಕಾಗುತ್ತದೆ. ಈ ಗುರಿ ಸಾಧನೆಯಲ್ಲಿ ಕರ್ನಾಟಕದ ಪಾತ್ರ ಅತ್ಯಂತ ಪ್ರಮುಖವಾದದ್ದು. ಯುವಜನರಿಗೆ ಕೌಶಲ್ಯ ಕಲಿಸುವ, ಉದ್ಯಮಶೀಲತೆ ಬೆಳೆಸುವ, ಹೆಚ್ಚೆಚ್ಚು ಜನರಿಗೆ ಕೆಲಸ ಕೊಡುವ ಸಾಮರ್ಥ್ಯವನ್ನು ಬೆಳೆಸಿದರೆ ಕರ್ನಾಟಕದ ಆರ್ಥಿಕತೆ ಸಬಲವಾಗುತ್ತದೆಯೇ ವಿನಃ ಕೆಲಸ ಕೊಡದೆ ಮನೆಯಲ್ಲಿ ಕೂರಿಸಿ ತಿಂಗಳಿಗೆ ಮೂರು ಸಾವಿರ ರೂ. ನೀಡುವುದರಿಂದಲ್ಲ.